Homeಮುಖಪುಟನಟ್ಚತಿರಮ್ ನಗರ್ಗಿರದು: ಸೋಕಾಲ್ಡ್ ಮೇಲ್ವರ್ಗದವರಿಗೆ ಪ.ರಂಜಿತ್ ಕರುಣಿಸಿದ ಹೊಸ ಅರಿವು

ನಟ್ಚತಿರಮ್ ನಗರ್ಗಿರದು: ಸೋಕಾಲ್ಡ್ ಮೇಲ್ವರ್ಗದವರಿಗೆ ಪ.ರಂಜಿತ್ ಕರುಣಿಸಿದ ಹೊಸ ಅರಿವು

- Advertisement -
- Advertisement -

ಟಾಪ್ ಆಂಗಲ್ ಷಾಟ್: ಮಂದ ಬೆಳಕಿನ ಆ ಕೊಠಡಿಯಲ್ಲಿ ಸಣ್ಣದಾಗಿ ಇಳಯರಾಜ ಸಂಗೀತ ಕೇಳುತ್ತಿದೆ. ಪಕ್ಕದಲ್ಲಿ ನಿದ್ರೆ ಮಾಡುತ್ತಿರುವ ಇನಿಯನ್‌ಗೆ ರೆನೆ ’ನಾವು ಯಾಕೆ ಜೀವನ ಪೂರ್ಣ ಹೀಗೆ ಸ್ವಚ್ಛೆಂದವಾಗಿ ಪ್ರೀತಿ ಮಾಡಿಕೊಂಡು ಇರಬಾರದು’ ಎಂದು ಮಾತು ಪ್ರಾರಂಭಿಸುತ್ತಾಳೆ. ನಿದ್ರೆಯಲ್ಲಿರುವ ಇನಿಯನ್ ಕೊಸರಾಡಿಕೊಂಡು ಮ್ಯೂಸಿಕ್ ಆಫ್ ಮಾಡಲು ಹೇಳುತ್ತಾನೆ. ರೆನೆ ಅವನ ಮಾತಿಗೆ ಲಕ್ಷ್ಯ ಕೊಡದೆ ವಾಲ್ಯೂಂ ಹೆಚ್ಚಿಸಿ ಮಾತು ಮುಂದುವರಿಸುವುದರ ಜೊತೆಗೆ ಇಳಯರಾಜ ಹಾಡನ್ನು ತಾನೂ ಗುನುಗಲು ಪ್ರಾರಂಭಿಸುತ್ತಾಳೆ. ಇದು ಇನಿಯನ್‌ನನ್ನು ರೊಚ್ಚಿಗೇಳಿಸುತ್ತದೆ. ’ಇಳಯರಾಜ ಹಾಡು ಏಕೆ ನಿನಗೆ ಹಿಡಿಸುವುದಿಲ್ಲ ಎಂದು ನನಗೆ ಚನ್ನಾಗಿ ಗೊತ್ತಿದೆ’ ಎಂದು ರೆನೆ ಮತ್ತೂ ಛೇಡಿಸುತ್ತಾಳೆ. ಮತ್ತಷ್ಟು ಕ್ರುದ್ಧನಾಗುವ ಇನಿಯನ್ ವಾದಕ್ಕಿಳಿಯುತ್ತಾನೆ. ಸಾಮಾನ್ಯವಾಗಿ ಎಲ್ಲ ಸಿನಿಮಾಗಳಲ್ಲಿ ಬರುವ ಪ್ರೇಮಿಗಳಿಬ್ಬರ ನಡುವಿನ ರೊಮ್ಯಾನ್ಸ್, ಜಗಳದ ರೀತಿ ಕಾಣಿಸಿಕೊಳ್ಳುತ್ತಿದ್ದ ಈ ದೃಶ್ಯ ನೋಡಿ, ನಿರ್ದೇಶಕ ಪ.ರಂಜಿತ್ ಕೂಡ ಯಾಕೆ ಕ್ಲೀಷೆಗೆ ಮೊರೆ ಹೋಗುತ್ತಿದ್ದಾರೆ ಅಂದುಕೊಳ್ಳುತ್ತಿದ್ದಾಗ, ರೆನೆ ’ಇಳಿಯರಾಜನ ಸಂಗೀತ ಮತ್ತವನ ಪ್ರಸಿದ್ಧಿ ಕೂಡ ಒಂದು ಪೊಲಿಟಿಕಲ್ ಸ್ಟೇಟ್ಮೆಂಟ್’ ಎನ್ನುತ್ತಾಳೆ. ಇಬ್ಬರ ನಡುವಿನ ವಾದ ತಾರಕಕ್ಕೇರುತ್ತದೆ. ಇನಿಯನ್ ’ತೋರಿಸಿಬಿಟ್ಟಲ್ಲ ನಿನ್ನ ಬುದ್ಧಿ’ (ಜಾತಿಯಿಂದ ಬಂದ ಬುದ್ಧಿ) ಎಂದು ಮೂದಲಿಸಿದಾಗ, ರೆನೆ ಊಟ ಮಾಡುವ ತಣಿಗೆಯಲ್ಲಿ ಇನಿಯನ್ ಅವನ ತಲೆಗೆ ಸರಿಯಾಗಿ ಬಾರಿಸುತ್ತಾಳೆ. ಇದು ಸಿನಿಮಾದ ಮೊದಲ ದೃಶ್ಯ.

ಸಿನಿಮಾದಲ್ಲಿ ಒಂದು ನಾಟಕ ತಂಡ ಇದೆ. ಈ ತಂಡದಲ್ಲಿ ಭಿನ್ನ ಜಾತಿ, ಪ್ರದೇಶ, ವಯೋಮಾನದವರು, ಗೇ-ಲೆಸ್ಬಿಯನ್ ಪ್ರೇಮಿಗಳು ಎಲ್ಲರೂ ಇದ್ದಾರೆ. ಅವರೆಲ್ಲರೂ ಒಂದು ನಾಟಕ ಮಾಡಲು ನಿರ್ಧರಿಸುತ್ತಾರೆ. ನಾಟಕದ ವಸ್ತು ಏನೆಂದು ಚರ್ಚಿಸಿದಾಗ ಅದು ’ಪ್ರೀತಿ’ ಕುರಿತದ್ದಾಗಿರಬೇಕು ಎಂಬ ಒಮ್ಮತಕ್ಕೆ ಬರುತ್ತಾರೆ. ಯಾವ ತರದ ಪ್ರೀತಿಯನ್ನು ನಾಟಕದಲ್ಲಿ ಕಟ್ಟಿಕೊಡಬೇಕೆಂಬುದರ ಬಗ್ಗೆ ಗುಂಪಿನಲ್ಲೆ ಸಾಕಷ್ಟು ಸಂಘರ್ಷದ ಚರ್ಚೆ ನಡೆಯುತ್ತದೆ. ಪ್ರೀತಿ ಅಂದರೆ ಗಂಡು ಹೆಣ್ಣು ನಡುವಿನ ಪ್ರೀತಿ ಮಾತ್ರವೇ? ಗಂಡು-ಗಂಡು, ಹೆಣ್ಣು-ಹೆಣ್ಣಿನ ನಡುವಿನ ಪ್ರೀತಿ? ವಯಸ್ಸಿನ ಮತ್ತು ಅಂತಸ್ತಿನ ಅಂತರದವರ ನಡುವೆ ಇರುವ ಪ್ರೀತಿ? ಪ್ರೀತಿಯಲ್ಲಿ ಮೋಸ ಮಾಡುವವರು ಯಾರು? ಹೆಣ್ಣೆ ಅಥವಾ ಗಂಡೆ? ನಿಜವಾದ ಪ್ರೀತಿ ಯಾವುದು? ಮೋಸದ ಪ್ರೀತಿ ಯಾವುದು? ಪ್ರೀತಿ ಕಾರಣಕ್ಕೆ ನಡೆಯುವ ಆತ್ಮಹತ್ಯೆ ಅಥವಾ ಕೊಲೆ, ಪ್ರೀತಿಸಿದವರಿಗೆ ಅಥವಾ ಕೊಲೆ ಮಾಡಿದವರಿಗೆ ಸಂಬಂಧಿಸಿದ್ದೇ? ಅದು ವ್ಯವಸ್ಥೆಯ ಕ್ರೈಂ ಅಲ್ಲವಾ? ಇವುಗಳನ್ನು ಚರ್ಚಿಸುವ-ಪ್ರತಿಪಾದಿಸುವ ನಾಟಕ ತಂಡದ ಸದಸ್ಯರ ಗ್ರಹಿಕೆ, ಮನಸ್ಥಿತಿ ಮತ್ತು ಅವರು ಯಾವ ಪರಿಸರದ ಹಿನ್ನಲೆಯಲ್ಲಿ ಬಂದಿದ್ದಾರೆ ಎಂಬದು ಅವರವರ ವಾದದಿಂದಲೇ ಸೂಚ್ಯವಾಗಿ ತಿಳಿದುಬಿಡುತ್ತದೆ.

ಪ.ರಂಜಿತ್

ನಮ್ಮ ಸಮಾಜದಲ್ಲಿನ ಭಿನ್ನ ಜಾತಿಗಳ ಗಂಡು-ಹೆಣ್ಣಿನ ಪ್ರೀತಿ, ಆ ಕಾರಣವಾಗಿ ನಡೆಯುವ ಹತ್ಯೆ, ಇದರ ಹಿಂದೆ ಇರುವ ಜಾತಿ ಮತ್ತು ಸಂಸ್ಕೃತಿ ರಾಜಕಾರಣಗಳನ್ನ ಮುಖ್ಯವಾಗಿ ಇಟ್ಟುಕೊಂಡು ನಾಟಕ ಮಾಡುವ ನಿರ್ದೇಶಕನ ಸಲಹೆಗೆ ಎಲ್ಲರೂ ಸಮ್ಮತಿಸುತ್ತಾರೆ. ವಿಷಯವನ್ನು ನೇರವಾಗಿ ಹೇಳಿದರೆ ಸಮಸ್ಯೆ ಆಗಬಹುದೆಂಬ ಮುಂಜಾಗ್ರತೆಯಿಂದ ಬೆಕ್ಕನ್ನು ರೂಪಕವಾಗಿಟ್ಟುಕೊಂಡು ನಾಟಕವನ್ನು ಪ್ರಸ್ತುತಪಡಿಸಲು ಮುಂದಾಗುತ್ತಾರೆ. ಇದಿಷ್ಟು ಸಿನಿಮಾದ ಮೊದಲ ಆಕ್ಟ್. ಮುಂದಿನ ಎರಡೂವರೆ ತಾಸು ನಿರಂತರವಾಗಿ ರಂಜಿತ್‌ರ ಅರಿವಿನ ಅಲೆಗಳು ಒಂದರ ನಂತರ ಒಂದು ಪ್ರೇಕ್ಷಕನ ಸ್ಮೃತಿಗೆ ಬಂದು ಬಡಿಯುತ್ತಿರುತ್ತವೆ. ಪ್ರೀತಿ ಬಗೆಗೆ ನಮ್ಮಲ್ಲಿರುವ ಸಂಕುಚಿತ ಭಾವನೆ ಅದಕ್ಕೆ ಅಂಟಿಕೊಂಡಿರು ಶೀಲ, ನೈತಿಕತೆ, ಲಿಂಗಭೇದ, ಜಾತಿಭೇದ, ಪುರುಷಾಧಿಪತ್ಯ, ಹೀಗೆ ಅಪಸವ್ಯಗಳ ಪೂರ್ವಗ್ರಹಗಳನ್ನು ಒಡೆಯುತ್ತಾ ಹೋಗುತ್ತಾರೆ. ಸಿನಿಮಾದೊಳಗೆ ಬರುವ ನಾಟಕ ಮತ್ತದರ ತಾಲಿಮು, ಕಲಾವಿದರ ಭಿನ್ನ ಹಿನ್ನಲೆ ಮತ್ತವರ ಅಲೋಚನೆಗಳು, ನಾಟಕದ ಸಲುವಾಗಿ ನೈಜ್ಯ ಘಟನೆಗಳ ಸಂತ್ರಸ್ತರ ಭೇಟಿ, ನಾಟಕ ತಾಲೀಮಿನಲ್ಲೆ ಸೃಷ್ಟಿಯಾಗುವ ಸಂಶಯಗಳು, ಅದಕ್ಕೆ ಕಲಾವಿದರೆ ಸೂಚಿಸುವ ಸಲಹೆಗಳು-ಪರಿಹಾರಗಳು, ಹಲವು ಸಂದರ್ಭಗಳಲ್ಲಿ ಕಲಾವಿದರ ನಡುವೆ ನಡೆಯುವ ಘರ್ಷಣೆಗಳು ಈ ಎಲ್ಲಾ ಸಂಗತಿಗಳನ್ನು ಒಂದಕ್ಕೊಂದು ಪೂರಕವಾಗಿ ಅದ್ಭುತವಾಗಿ ಹೆಣಯಲಾಗಿದೆ.

ಇಡೀ ಸಿನಿಮಾ ಮತ್ತು ಸಿನಿಮಾದಲ್ಲಿ ನಡೆಯುವ ನಾಟಕದ ವಸ್ತುವಿಗೆ ತಂಡದಲ್ಲಿ ಇಬ್ಬರು ಸದಸ್ಯರ ಅಲೋಚನೆಗಳು ಎದರುಬದುರಾಗಿ ನಿಲ್ಲುತ್ತವೆ. ದಲಿತ ಸಮುದಾಯವನ್ನು ಪ್ರತಿನಿಧಿಸುವ ಅಂಬೇಡ್ಕರ್ ಮತ್ತು ಬುದ್ಧನ ತಾತ್ವಿಕತೆಯಲ್ಲಿ ಅರಳಿದ ರೆನೆ ಮತ್ತು ಫ್ಯೂಡಲ್ ಸಮುದಾಯವನ್ನು ಪ್ರತಿನಿಧಿಸುವ, ಪುರುಷಪ್ರಧಾನ ಪರಿಸರ ಪ್ರಭಾವದ ಅರ್ಜುನ್. ಮುಂದೆ ಸಿನಿಮಾದಲ್ಲಿ ಈ ಎರಡು ಪಾತ್ರಗಳ ಅಲೋಚನೆಯ ಸಂಘರ್ಷವನ್ನೆ ಪ್ರಧಾನವಾಗಿ ಕಟ್ಟಿಕೊಡಲಾಗಿದೆ.

’ರೆನೆ’ ಇದುವರೆಗೂ ಭಾರತೀಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಒಂದು ಅಪರೂಪದ ಪಾತ್ರವೆನ್ನಬಹುದು. ತನ್ನ ಪರಿಸರದ ಹೆಸರನ್ನೇ ನಿರಾಕರಿಸಿ ಗೇಬ್ರಿಯಲ್ ಮಾರ್ಕೆಸ್‌ನ ಸುಪ್ರಸಿದ್ಧ ’ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿಯಲ್ಲಿ ಬರುವ ರೆನೆಟಾ ಪಾತ್ರದ ಹೆಸರನ್ನು ರೆನೆ ಇಟ್ಟುಕೊಂಡಿದ್ದಾಳೆ. ರೆನೆಯ ಪ್ರತಿಯೊಂದು ಮಾತು, ಆಲೋಚನೆ, ದೇಹಭಾಷೆ, ತಿಳಿವು ಎಲ್ಲವೂ ಬಂಡುಕೋರತನದ್ದು. ಜಾತಿ ಅಸಮಾನತೆ, ಪುರುಷಾಧಿಕಾರಗಳನ್ನು ಮುಲಾಜಿಲ್ಲದೆ ಪ್ರಶ್ನೆ ಮಾಡುವ, ಸಮಾಜದಲ್ಲಿರುವ ಬೂಟಾಟಿಕೆಯನ್ನು ಪ್ರತಿ ಹಂತದಲ್ಲೂ ಒಡೆಯುವ ಪಾತ್ರವದು.

ರೆನೆ ಪಾತ್ರವನ್ನು ಅರ್ಥಮಾಡಿಕೊಳ್ಳಲು ಸಿನಿಮಾದ ಕೆಲವು ಸನ್ನಿವೇಶಗಳನ್ನು ಗಮನಿಸಬಹುದು; 1. ಇನಿಯನ್ ಜಾತಿ ಹಿನ್ನೆಲೆಯ ಕಮೆಂಟ್ ಕಾರಣವಾಗಿ ರೆನೆ ಅವನಿಂದ ಬೇರೆ ಆಗಿದ್ದಾಳೆ. ಆದರೆ ಆಳದಲ್ಲಿ ಇನಿಯನ್ ಮೇಲೆ ಆಗಾಧವಾದ ಪ್ರೀತಿಯಿದೆ. ತಾವಾಡುತ್ತಿರುವ ನಾಟಕದಲ್ಲಿ ಇಬ್ಬರೂ ಪ್ರೇಮಿಗಳು; ಒಮ್ಮೆ ನಾಟಕದ ರಿಹರ್ಸಲ್ ಭಾಗವಾಗಿ ಇನಿಯನ್ ಕೊಡುವ ಮುತ್ತು ರೆನೆಗೆ ಅಸಹ್ಯವೆನಿಸಿಬಿಡುತ್ತದೆ. ಅವನ ಮೇಲೆ ಅಗಾಧ ಪ್ರೀತಿಯಿದ್ದರೂ, ಆತನ ಜಾತಿ ಧೋರಣೆಯ ಬಗ್ಗೆ ಅಸಹ್ಯವುಳಿದಿದೆ. 2. ಅರ್ಜುನ್ ಒಮ್ಮೆ ಕುಡಿದ ಮತ್ತಿನಲ್ಲಿ ಅವಳೊಂದಿಗೆ ಅಸಭ್ಯವಾಗಿ ವರ್ತಿಸಿದಾಗ, ಅವನನ್ನು ನಾಟಕದಿಂದ ಹೊರಹಾಕಬೇಕೆಂದು ನಿರ್ಧರಿಸಲಾಗುತ್ತದೆ. ಆಗ ರೆನೆ ಯಾರು ಕೂಡ ಒಂದೇ ದಿನದಲ್ಲಿ ಬದಲಾಗಲು ಸಾಧ್ಯವಿಲ್ಲ. ಅವನಿಗೆ ಬದಲಾಗುವುದಕ್ಕೆ ಅವಕಾಶ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎನ್ನುತ್ತಾಳೆ. 3. ಒಮ್ಮೆ ಇನಿಯನ್ ವಿಶಾಲವಾದ ಟೀ ಎಸ್ಟೇಟ್ ತೋರಿಸಿ ನೋಡು ಎಷ್ಟು ಸುಂದರವಾಗಿದೆ ಎಂದಾಗ, ರೆನೆ, ಆ ಸೌಂದರ್ಯದ ಹಿಂದೆ ದಾರುಣವಾದ ಇತಿಹಾಸವಿದೆ, ’Red Tea’ ಪುಸ್ತಕ ಓದಿದ್ದೀಯಾ ಎಂದು ಕೇಳುತ್ತಾಳೆ. 4. ಒಂದು ಸಂದರ್ಭದಲ್ಲಿ ಅರ್ಜುನ್ ರೆನೆಗೆ ನೀನು ಯಾವ ಉಡುಪು ಧರಿಸಿದರೂ ನನ್ನ ಅಭ್ಯಂತರವಿಲ್ಲ ಎಂಬ ಮುಲಾಜಿನ ಅರ್ಥದ ಮಾತನಾಡಿದಾಗ, ನಿನ್ನ ಅಭ್ಯಂತರ ಕಟ್ಟಿಕೊಂಡು ನನಗೇನಾಗಬೇಕು? ಅದು ನಿನ್ನ ಸಮಸ್ಯೆ, ನಾನು ಧರಿಸುವ ಬಟ್ಟೆ ನನ್ನ ಸ್ವಾತಂತ್ರ್ಯ ಮತ್ತು ಕಂಫರ್ಟ್ ಎನ್ನುತ್ತಾಳೆ. 5. ಅರ್ಜುನ್‌ಗೆ ತನ್ನ ಪ್ರತಿಯೊಂದು ಅಲೋಚನೆಗೂ ವಿರುದ್ಧವಾದ ರೆನೆಯ ನಡವಳಿಕೆಯ ಬಗ್ಗೆ ಆಶ್ಚರ್ಯವಾಗಿ, ರೆನೆಗೆ ನೀನು ಮಾರ್ಕ್ಸಿಸ್ಟಾ ಎಂದು ಕೇಳುತ್ತಾನೆ. ಅದಕ್ಕೆ ರೆನೆ ನಾನು ’ಅಂಬೇಡ್ಕರೈಟ್’ ಎಂದು ಹೇಳುತ್ತಾಳೆ.

ನಾಟಕದ ಸಿದ್ಧತೆಯ ಭಾಗವಾಗಿ ಇಡೀ ತಂಡ ಮರ್ಯಾದೆ ಹತ್ಯೆಗಳಾದ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನ ಸಂದರ್ಶಿಸುವುದು ಮತ್ತು ಮರ್ಯಾದೆ ಹತ್ಯೆಯ ನೈಜ್ಯ ಘಟನೆಗಳ ಫುಟೇಜ್‌ಗಳನ್ನು ತೋರಿಸುವುದು ಸಿನಿಮಾದ ಅದ್ಭುತ ದೃಶ್ಯಗಳಲ್ಲಿ ಒಂದು. ಅದರಲ್ಲೂ ಈ ದೃಶ್ಯದ ಹಿನ್ನೆಲೆಯಲ್ಲಿ ಅಜ್ಜಿಯೊಂದು ಹಾಡುವ ಜನಪದೀಯ ಮಾದರಿಯ ಹಾಡು ಮನಕಲಕುವಂತದ್ದು. ಇದು ಅರ್ಜುನ್ ಪಾತ್ರದ ಅಲೋಚನೆಯ ದಿಕ್ಕನ್ನು ಬದಲಿಸುವ ಸಂದರ್ಭದಂತೆ ಭಾಸವಾಗುತ್ತದೆ. ನಾಟಕದಲ್ಲಿ ಮರ್ಯಾದೆ ಹತ್ಯೆಯ ಸನ್ನಿವೇಶ ಕಟ್ಟುವ ಸಂದರ್ಭ ಎದುರಾದಾಗ, ಇದುವರೆಗೂ ನಮ್ಮ ಸಮಾಜ ನಡೆದುಕೊಂಡ ಅಮಾನವೀಯತೆಯನ್ನೆ ಏಕೆ ನಾವು ನಾಟಕದಲ್ಲೂ ತೋರಿಸಬೇಕು ಒಂದು ಪಾಸಿಟಿವ್ ಅಲೋಚನೆಯನ್ನು ಯಾಕೆ ನಾವು ಕಟ್ಟಿಕೊಡಬಾರದೆಂದು ಅರ್ಜುನ್ ಪ್ರಶ್ನಿಸುತ್ತಾನೆ. ಅಷ್ಟರಮಟ್ಟಿಗೆ ಅರ್ಜುನ್ ಪಾತ್ರ ಬದಲಾಗುವ ಆಶಯವನ್ನು ರಂಜಿತ್ ವ್ಯಕ್ತಪಡಿಸುತ್ತಾರೆ. ಅರ್ಜುನ್ ಪಾತ್ರದ ಅಲೋಚನೆಯ ಹಿನ್ನೆಲೆ ಯಾವುದೆಂಬ ಝಲಕ್ ತೋರಿಸುವ ಸಲುವಾಗಿ, ಇಡೀ ಸಿನಿಮಾದ ಬ್ಯಾಕ್‌ಡ್ರಾಪ್ ಸಡನ್ನಾಗಿ ಅರ್ಜುನ್‌ನ ಊರಿಗೆ ಜಿಗಿಯುತ್ತದೆ. ಫ್ಯೂಡಲ್ ಸಮುದಾಯದ ಹಿಪಾಕ್ರಸಿಯನ್ನು ವ್ಯಂಗ್ಯದ ಧಾಟಿಯಲ್ಲಿ ರಂಜಿತ್ ಕಟ್ಟಿಕೊಟ್ಟಿದ್ದಾರೆ.

ಫ್ಯೂಡಲ್ ಸಮುದಾಯದ ಈ ಬೂಟಾಟಿಕೆಯ ಮೂಲ ಯಾವುದು? ಇದನ್ನು ರಂಜಿತ್ ಸಿನಿಮಾದ ಕೊನೆಯಲ್ಲಿ ಸಾಗಸ್ ರಟ್ಚಗನ್ ಪಾತ್ರದ ಮುಖಾಂತರ ಕಟ್ಟಿಕೊಡುತ್ತಾರೆ. ಸಿನಿಮಾದ ಅಂತ್ಯದ ವೇಳೆಗೆ ಉಗ್ರ ಹನುಮಂತನ ವೇಷಧಾರಿಯಾಗಿ ಬರುವ ಈ ಪಾತ್ರ ಸಮುದಾಯದಲ್ಲಿರುವ ತರತಮಗಳು, ಜಾತಿಪದ್ಧತಿಗಳು ಈ ದೇಶದ ಸಂಸ್ಕೃತಿ, ಮಹತ್ವ. ಇದನ್ನು ಗೌರವಿಸುವುದು, ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಉಯಿಲಿಡುತ್ತದೆ. ಈ ತರದ ಅಲೋಚನೆಯನ್ನೆ ಬುಡಮೇಲು ಮಾಡುವ ನಾಟಕದ ಸೆಟ್ ಮತ್ತು ಕಲಾವಿದರ ಮೇಲೆ ಹಲ್ಲೆ ಮಾಡುತ್ತದೆ. ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಧಾರ್ಮಿಕ ಮೂಲಭೂತವಾದಿಗಳು ನಡೆಸುವ ದೌರ್ಜನ್ಯಗಳಿಗೆ ಮತ್ತು ಅದಕ್ಕೆ ಒತ್ತಾಸೆಯಾಗಿರುವ ಪ್ರಭುತ್ವಕ್ಕೆ ಈ ದೃಶ್ಯ ಕನ್ನಡಿ ಹಿಡಿದಂತಿದೆ.

ತಳ ಜಾತಿಯವರ ಬುದ್ಧಿ ಕನಿಷ್ಟವಾದದ್ದು ಎಂಬ ಅರ್ಥದಲ್ಲಿ ಮೂದಲಿಸುವ ಇನಿಯನ್‌ಗೆ ರೆನೆ ಬಾರಿಸುವ ಹೊಡೆತ ಕೇವಲ ಅವನಿಗೆ ಮಾತ್ರವಲ್ಲ, ಇದೇ ತರಹದ ಪೂರ್ವಗ್ರಹಗಳನ್ನು ಮೆರೆವ ಕಲಾವಿದ-ಕಲಾರಸಿಕನಿಗೂ ಕೊಟ್ಟ ಪೆಟ್ಟು ಕೂಡ ಹೌದು. ಈ ತರದ ಪೆಟ್ಟುಗಳನ್ನು ಸಿನಿಮಾ ಪ್ರೇಕ್ಷಕ ಸಿನಿಮಾದುದ್ದಕ್ಕೂ ತಿನ್ನುತ್ತಾನೆ. ಇದುವರೆಗೂ ಯಾವ ಸಂಗತಿಗಳನ್ನು ಕಲೆಯಲ್ಲಿ ಪ್ರತಿಬಿಂಬಿಸಲು ಮಡಿವಂತಿಕೆ ಇಟ್ಟುಕೊಳ್ಳಲಾಗುತ್ತೋ ಆ ಎಲ್ಲವನ್ನು ರಂಜಿತ್ ಈ ಸಿನಿಮಾದಲ್ಲಿ ತಂದು ಪ್ರೇಕ್ಷಕನಿಗೆ ಹೊಸ ಅರಿವನ್ನು ದಾಟಿಸುತ್ತಾರೆ.

ಗಟ್ಟಿಯಾದ ಮಹಿಳಾ ಪಾತ್ರಗಳು ಅಥವಾ ಮಹಿಳೆಯನ್ನೆ ಪೊಟಾಗನಿಸ್ಟ್ ಮಾಡಿಕೊಂಡ ಸಿನಿಮಾಗಳು ಇದುವರೆಗೂ ಬಂದೇ ಇಲ್ಲವೆಂದಲ್ಲ. ಆದರೆ, ಇವುಗಳಲ್ಲಿ ಬಹುತೇಕ ಪಾತ್ರಗಳು ಈಗಾಗಲೆ ಅಸ್ತಿತ್ವದಲ್ಲಿರುವ ಪೇಟ್ರಿಯಾರ್ಕಿ ಅಲೋಚನೆಯನ್ನು ಬಲಪಡಿಸಿ, ಮೂಲದಲ್ಲಿ ಮಹಿಳಾ ವಿರೋಧಿ ಆಗಿದ್ದು ಮಾತ್ರ ದುರಂತ. ದಲಿತ ಸಮುದಾಯದ ಹೆಣ್ಣೊಬ್ಬಳನ್ನು ಕಥಾನಾಯಕಿಯನ್ನಾಗಿ ಮಾಡಿಕೊಂಡು ಅವಳಲ್ಲಿರುವ ತಿಳಿವಿನ ಪ್ರತಿಫಲನದಿಂದ ಸಿನಿಮಾದಲ್ಲಿನ ಇತರೆ ಪಾತ್ರಗಳು ಹೊಸ ಅಲೋಚನೆಗೆ ಹೊರಳವುದನ್ನು ಕಂಡಿದ್ದು ರಂಜಿತ್ ಸಿನಿಮಾಗಳಲ್ಲಿ ಮಾತ್ರ. ಅದರಲ್ಲೂ ಈ ಸಿನಿಮಾದಲ್ಲಿನ ರೆನೆ ಪಾತ್ರ ಪ. ರಂಜಿತ್‌ರ ಇದುವರೆಗಿನ ಹೆಣ್ಣು ಪಾತ್ರಗಳ ವಿಸ್ತೃತ ಮತ್ತು ವಿಶಾಲ ರೂಪ.

ನಟ್ಚತಿರಮ್ ನಗರ್ಗಿರದುನಲ್ಲಿ ರಂಜಿತ್ ತಮ್ಮ ಇದುವರೆಗಿನ ಸಿನಿಮಾಗಳಿಗಿಂತ ದೊಡ್ಡದ್ದನ್ನು ಸಾಧಿಸಿದ್ದಾರೆ. ತನ್ನಲ್ಲಿರುವ ಐಡಿಯಾವನ್ನು ಸಶಕ್ತವಾಗಿ, ಹೊಸಬಗೆಯ ಕಥನ ಶೈಲಿಯಲ್ಲಿ ಮತ್ತು ಅದ್ಭುತ ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ರೆನೆ ಪಾತ್ರದಲ್ಲಿ ನಟಿಸಿದ ದುಶ್ರಾ ವಿಜಯನ್ ಮತ್ತು ಅರ್ಜುನ್ ಪಾತ್ರದಲ್ಲಿ ನಟಿಸಿರುವ ಕಲೈರಸನ್ ಅಭಿನಯ ಅದ್ಭುತವಾಗಿ ಮೂಡಿಬಂದಿದೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...