Homeಚಳವಳಿಹಿಂದಿಯೊಂದನ್ನೆ ರಾಷ್ಟ್ರಭಾಷೆ ಮಾಡಲು ಸಾಧ್ಯವಿಲ್ಲ: ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿ

ಹಿಂದಿಯೊಂದನ್ನೆ ರಾಷ್ಟ್ರಭಾಷೆ ಮಾಡಲು ಸಾಧ್ಯವಿಲ್ಲ: ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿ

1968, 86 ಮತ್ತು 92ರ ಶಿಕ್ಷಣ ನೀತಿಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದರೆ ದೇಶಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಹಾಗಾಗಿ ಶಿಕ್ಷಣ ವ್ಯವಸ್ಥೆಯ ಅಧಃಪತನದಲ್ಲಿ ಕಾಂಗ್ರೆಸ್ ಸರ್ಕಾರಗಳ ಪಾಲೂ ಸಹ ಇದೆ - ಡಾ.ವಿ.ಪಿ ನಿರಂಜನಾರಾಧ್ಯ

- Advertisement -
- Advertisement -

ಹಿಂದಿಯೊಂದನ್ನೆ ರಾಷ್ಟ್ರಭಾಷೆ ಮಾಡಲು ಸಾಧ್ಯವಿಲ್ಲ. ಆ ಮೂಲಕ ಕನ್ನಡದಂತ ಪ್ರಾದೇಶಿಕ ಭಾಷೆಗಳ ಅಸ್ಮಿತೆಗಳ ಮೇಲೆ ಧಕ್ಕೆ ತರುವ ಯಾವುದೇ ಉದ್ದೇಶವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಭಾರತ ಐಕ್ಯತಾ ಯಾತ್ರೆಯ ಅಂಗವಾಗಿ ನಾಗಮಂಗಲದ ಬಳಿ ಶಿಕ್ಷಣ ತಜ್ಞರು ಮತ್ತು ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಹತ್ವವಿದೆ. ನಾನು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇನೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಹಕ್ಕುಗಳನ್ನು ಹೊಂದಿದ್ದಾರೆ” ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ಡಾ.ವಿ.ಪಿ ನಿರಂಜನಾರಾಧ್ಯರವರು ಮಾತನಾಡಿ, “ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಶಾಲೆಗಳು ಸಂವಿಧಾನದ ತೊಟ್ಟಿಲುಗಳಿದ್ದಂತೆ. ಸಂವಿಧಾನ ಉಳಿಯಬೇಕು ಎಂದರೆ ಶಾಲಾ ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳನ್ನು ಆಚರಣೆಗೆ ತರಬೇಕಿದೆ. ಎಲ್ಲಾ ವರ್ಗದ, ಎಲ್ಲಾ ಜಾತಿ ಧರ್ಮದ ಮಕ್ಕಳ ಒಟ್ಟಿಗೆ ಬೆರೆತು ಕಲಿಯುವ ಸಮಾನ ಶಾಲಾ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ದೇಶದ ಐಕ್ಯತೆ ಉಳಿಯಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.

“ಇಂದು ಎನ್‌ಇಪಿ ಮೂಲಕ ಮಕ್ಕಳಿಗೆ ವಿಷ ತುಂಬುವ ಕೆಲಸ ನಡೆಯುತ್ತಿದೆ. ವಿಚಾರ ಮಾಡುವ, ವಿಮರ್ಶಾತ್ಮಕವಾಗಿ ಆಲೋಚಿಸುವುದನ್ನು ಕಲಿಸುವ ಬದಲಿಗೆ ಪಠ್ಯಗಳನ್ನು ತಿರುಚಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತವನ್ನು ಒಗ್ಗೂಡಿಸುವುದು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.

ನೀವು ಕೂಡ 1968, 86 ಮತ್ತು 92ರ ಶಿಕ್ಷಣ ನೀತಿಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದರೆ ದೇಶಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಹಾಗಾಗಿ ಶಿಕ್ಷಣ ವ್ಯವಸ್ಥೆಯ ಅಧಃಪತನದಲ್ಲಿ ಕಾಂಗ್ರೆಸ್ ಸರ್ಕಾರಗಳ ಪಾಲೂ ಸಹ ಇದೆ ಎಂದು ನಿರಂಜನಾರಾಧ್ಯರು ದೂರಿದರು. ದೇಶ ಇವತ್ತು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಜಾತ್ಯಾತೀತ ಮೌಲ್ಯಗಳು ದಾಳಿಗೊಳಗಾಗಿವೆ. ಶಿಕ್ಷಣ ಅವೆಲ್ಲವನ್ನು ಮೀರಿ ನಿಲ್ಲಬೇಕೆಂದು 1986ರಲ್ಲಿಯೇ ಶಿಕ್ಷಣ ನೀತಿಯ 1.11 ರಲ್ಲಿ ರಾಜೀವ್ ಗಾಂಧಿಯವರು ಹೇಳಿದ್ದರು. ಹಾಗಾಗಿ ಮೊದಲು ಶಿಕ್ಷಣ ವ್ಯವಸ್ಥೆ ಸರಿ ಮಾಡೋಣ. ಅದಕ್ಕಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಶಿಕ್ಷಣ ಕ್ಷೇತ್ರದ ಮೇಲೆ ಹಣ ಹೂಡಿಕೆ ಮಾಡಬೇಕೆಂಬುದನ್ನು ಒಪ್ಪಿಕೊಂಡರು ಮತ್ತು ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸುವುದು ನಮ್ಮ ಆದ್ಯತೆಯಾಗಬೇಕು ಎಂದರು ಎನ್ನಲಾಗಿದೆ.

ನಾನು ಹಲವು ಮಕ್ಕಳೊಂದಿಗೆ ಮಾತನಾಡಿದ್ದೇನೆ. ಆದರೆ ಚೆನ್ನಾಗಿ ಇಂಗ್ಲಿಷ್‌ನಲ್ಲಿ ಮಾತನಾಡಲು ಮಕ್ಕಳು ಕಷ್ಟಪಡುತ್ತಿದ್ದಾರೆ ಎಂದು ಸಭೆಯಲ್ಲಿ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞರು, ‘ನಮ್ಮಲ್ಲಿ ಚೆನ್ನಾಗಿ ಇಂಗ್ಲಿಷ್ ಕಲಿಸಲು ಸಮರ್ಪಕ ವ್ಯವಸ್ಥೆಯಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ, ನುರಿತ ಶಿಕ್ಷಕರಿಲ್ಲ. ಹೀಗಿದ್ದಾಗ ಮಕ್ಕಳು ಕಲಿಯಲು ಹೇಗೆ ಸಾಧ್ಯ? ಕನ್ನಡ ಮಾತೃಭಾಷೆಯಲ್ಲಿ ಬೋಧಿಸುತ್ತಲೆ ಉತ್ತಮವಾಗಿ ಇಂಗ್ಲಿಷ್ ಕಲಿಸಲು ಒತ್ತಾಯಿಸಬೇಕು’ ಎಂದರು.

ಇದನ್ನೂ ಓದಿ; ಗೌರಿ ಲಂಕೇಶ್ ಹೋರಾಟ ಸ್ಮರಿಸಿದ ರಾಹುಲ್ ಗಾಂಧಿ: ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆಹಾಕಿದ ಕವಿತಾ, ಇಂದಿರಾ ಲಂಕೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...