Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!

- Advertisement -
- Advertisement -

ಧಾರವಾಡ ಜಿಲ್ಲೆ ಜವಾರಿ ಲಯದ ಖಡಕ್ ಕನ್ನಡ ಸಂಸ್ಕೃತಿ ಸೀಮೆ; ಮಲೆನಾಡು-ಅರೆ ಮಲೆನಾಡು ಮತ್ತು ಬೆಳವಲ ನಾಡುಗಳ ವಿಭಿನ್ನ ಭೌಗೋಳಿಕ ರಚನೆಯ ಧಾರವಾಡ ಜಿಲ್ಲೆ ಪೂರ್ವ-ಪಶ್ಚಿಮ ಘಟ್ಟಗಳ ಬಯಲು ಪ್ರದೇಶಗಳ ನಡುವಿನ ಹೆಬ್ಬಾಗಿಲು. ’ಧಾರವಾಡ’ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೆ ಉತ್ತರ ಕರ್ನಾಟಕದ ಮಣ್ಣಿನ ಸೊಗಡಿನ ವಿಶಿಷ್ಟ ಕನ್ನಡ ಮಾತುಗಾರಿಕೆ, ಹಾಲು ಮತ್ತು ಸಕ್ಕರೆ ಬೆರೆಸಿ ತಯಾರಿಸಿದ ಘಮಘಮಿಸುವ ಧೂದ್‌ಪೇಢಾ, ಆದಿ ಕವಿ ಪಂಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ-ಸಾಹಿತಿಗಳು, ಸಾರಸ್ವತ ಲೋಕದ ವಿಮರ್ಶಕ, ಸಂಶೋಧಕ ದಿಗ್ಗಜರು, ಹಿಂದುಸ್ತಾನಿ ಸಂಗೀತದ ಗಾನ ಗಂಧರ್ವರು, ಕರ್ನಾಟಕ ಏಕೀಕರಣ ಹೋರಾಟ, ಗೋಕಾಕ್ ಚಳವಳಿ, ಕಳಸಾ-ಬಂಡೂರಿ ನೀರಾವರಿ ಹೋರಾಟ, ರೈತ ಬಂಡಾಯ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ, ಅಂದಿನ ಅಕ್ಷರ ದಾಸೋಹ, ಇಂದಿನ ವಿದ್ಯಾವ್ಯಾಪಾರ ಕೇಂದ್ರಗಳೆಲ್ಲ ಒಟ್ಟೊಟ್ಟಿಗೇ ಕಣ್ಮುಂದೆ ಸುಳಿಯುತ್ತವೆ!

ಧಾರವಾಡದ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮುಂತಾದ ಸಕಲ ವಲಯದಲ್ಲಿ ಪ್ರಬಲ ಲಿಂಗಾಯತರ ಏಕಸ್ವಾಮ್ಯ ವ್ಯವಸ್ಥೆ ಮಡುಗಟ್ಟಿದೆ ಎಂಬುದು ಸಾಮಾನ್ಯ ತಿಳಿವಳಿಕೆ. ಲಿಂಗಾಯತ ಒಳ ಪಂಗಡಗಳಲ್ಲಿ ಪ್ರಚ್ಛನ್ನ ಮೇಲಾಟ ಇದೆಯಾದರೂ ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಲಿಂಗಾಯತ ಪ್ರಭುತ್ವ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನಲಾಗಿದೆ! ಹಿಂದು, ಮುಸ್ಲಿಮ್, ಲಿಂಗಾಯತ, ಕ್ರಿಶ್ಚಿಯನ್, ಜೈನ್, ಸಿಖ್ ಹೀಗೆ ವಿವಿಧ ಧರ್ಮದ ನೆಲೆವೀಡು ಧಾರವಾಡ ಜಿಲ್ಲೆ. ಬಸವಣ್ಣನ ಸಮಸಮಾಜದ ಸಿದ್ಧಾಂತ ಪ್ರಭಾವಳಿಯ ಪ್ರಮುಖ ಪ್ರದೇಶವಾಗಿದ್ದ ಧಾರವಾಡ ಜಿಲ್ಲೆಯಲ್ಲೀಗ ಕಂಡೂಕಾಣದಂತೆ ಭೇದ ಸಂಸ್ಕೃತಿ ನೆಲೆಯಾಗಿರುವುದು ದುರಂತ ಎಂದು ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸುತ್ತಾರೆ. ಬಸವ ತತ್ವಾದರ್ಶಕ್ಕೆ ತದ್ವಿರುದ್ಧ ಆಚರಣ-ಸಂಪ್ರದಾಯ ರೂಢಿಸಿಕೊಂಡಿರುವ ಆಧುನಿಕ ಲಿಂಗಾಯತರನ್ನು ಪ್ರಖರ ಸಂಶೋಧಕ ಎಂ.ಎಂ.ಕಲಬುರ್ಗಿ ’ಲಿಂಗಿ ಬ್ರಾಹ್ಮಣರು’ ಅನ್ನುತ್ತಿದ್ದರು!

2

ಮೂರು ಸಾವಿರ ಮಠ

000ದ ದಶಕಾರಂಭದಿಂದ ಹಿಂದುತ್ವ ಲಿಂಗಾಯತ ಧರ್ಮವನ್ನು ನಾಜೂಕಾಗಿ ಜೀರ್ಣಿಸಿಕೊಳ್ಳುತ್ತಿರುವುದರಿಂದ ರಹಸ್ಯ ಕೇಸರಿ ಕರಾಮತ್ತುಗಳಿಗೆ ಬಿರುಸು ಬಂದಿದೆ; ಹೀಗಾಗಿಯೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ತಾರ್ಕಿಕ ಅಂತ್ಯ ಕಾಣಲಿಲ್ಲ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತದೆ. ಧಾರವಾಡ ಜಿಲ್ಲೆಯ ಅಷ್ಟೂ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ಪ್ರತಿಶತ 35ರಷ್ಟು ಹಿಂದುತ್ವಕ್ಕೆ ಒಗ್ಗಿಕೊಂಡಿರುವ ಲಿಂಗಾಯತ ಮತದಾರರಿದ್ದಾರೆ. ಪ್ರಭಾವಿ ಲಿಂಗಾಯತ ಮಠಗಳಾದ ಮೂರು ಸಾವಿರ ಮಠ, ಎರಡೆತ್ತಿನ ಮಠ, ಸಿದ್ದಾರೂಢ ಮಠ ಮತ್ತು ಮುರುಘಾ ಮಠದ ಚುನಾವಣಾ ಸಂದರ್ಭದ ’ಫರ್ಮಾನು’ ಬಿಜೆಪಿಗೆ ಅನಕೂಲಕರ ಆಗಿರುತ್ತದೆಂಬುದು ಬಹಿರಂಗ ರಹಸ್ಯ. ಹಾಗಾಗಿ ಸಹಜವಾಗಿ ಬಿಜೆಪಿ ಜಿಲ್ಲೆಯಲ್ಲಿ ಪ್ರಬಲವಾಗಿ ಬೇರುಬಿಟ್ಟಿದೆ. ಹಾಗಂತ ಎದುರಾಳಿ ಕಾಂಗ್ರಸ್ ತೀರಾ ದುರ್ಬಲವಾಗೇನೂ ಇಲ್ಲ. ಆದರೆ ಕಾಂಗ್ರೆಸ್‌ನ ನಾಯಕತ್ವ ಕೊರತೆ ಮತ್ತು ಅರಾಜಕತೆ ಬಿಜೆಪಿಯನ್ನು ಸುಲಭವಾಗಿ ಗೆಲ್ಲಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಇತಿಹಾಸ-ಸಂಸ್ಕೃತಿ

ವಿಶಾಲ ಧಾರವಾಡ ಜಿಲ್ಲೆಯನ್ನು 1997ರಲ್ಲಿ ವಿಂಗಡಿಸಿ ಧಾರವಾಡ, ಹಾವೇರಿ ಹಾಗೂ ಗದಗ ಎಂಬ ಮೂರು ಜಿಲ್ಲೆಗಳನ್ನು ಮಾಡಲಾಯಿತು. ಪ್ರಾಚೀನ ಶಿಲಾಯುಗದ ಆರಂಭದ ಜನ ಸಮುದಾಯ ಧಾರವಾಡ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು ಎಂಬುದು ಇತಿಹಾಸ ಅಧ್ಯಯನ ಖಾತ್ರಿ ಪಡಿಸುತ್ತದೆ. ಹನ್ನೆರಡನೆ ಶತಮಾನದಷ್ಟು ಪುರಾತನ ಶ್ರೀಮಂತ ಐತಿಹಾಸಿಕ ಪರಂಪರೆಯ ಧಾರವಾಡದ ಸ್ಥಳ ನಾಮದ ಕುರಿತು ಹಲವು ಪುರಾಣಗಳಿವೆ. ಧಾರವಾಡ ಎಂದರೆ ಸುದೀರ್ಘ ಪ್ರಯಾಣದ ನಡುವಿನ ಸಣ್ಣ ವಿಶ್ರಾಂತಿ ಧಾಮ ಎಂಬ ತರ್ಕವಿದೆ. ಧಾರವಾಡ ಸಂಸ್ಕೃತದ ’ದ್ವಾರವಾಟ’ ಶಬ್ದದಿಂದ ಬಂದಿದೆ ಎನ್ನಲಾಗುತ್ತಿದೆ. ಸಂಸ್ಕೃತದಲ್ಲಿ ’ದ್ವಾರ’ ಎಂದರೆ ಬಾಗಿಲು; ’ವಾಟ’ ಎಂದರೆ ಊರು. ಬಹಳ ಕಾಲದಿಂದ ಮಲೆನಾಡು ಮತ್ತು ಬಯಲು ಸೀಮೆಗೆ ಧಾರವಾಡ ರಹದಾರಿ ಆಗಿರುವುದರಿಂದ ಈ ಹೆಸರು ಬಂದಿದೆ ಎಂದು ವಾದಿಸಲಾಗುತ್ತಿದೆ. ಆದರೆ ಧಾರವಾಡ ವ್ಯುತ್ಪತ್ತಿಗೆ ವ್ಯಕ್ತಿ ನಾಮ ಮೂಲವಾಗಿರುವ ಸಾಧ್ಯತೆಯೆ ಹೆಚ್ಚೆಂಬ ಅಭಿಪ್ರಾಯವಿದೆ; ಇದು ಭಾಷಾ ಶಾಸ್ತ್ರದಂತೆ ಸಮಂಜಸವೂ ಆಗಿದೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಸ್ಥಿರವಾದ ಭೂಪ್ರದೇಶದಲ್ಲಿ ಏಳು ಬೆಟ್ಟಗಳ ಮಧ್ಯದಲ್ಲಿ ಹಬ್ಬಿರುವ ಧಾರವಾಡಕ್ಕೆ ಆ ಹೆಸರು ಬರಲು ವಿಜಯನಗರದ ಅರಸ ರಾಮರಾಜನ ಕಾಲದ ’ಧಾರರಾವ್’ ಕಾರಣ ಎಂಬ ಉಲ್ಲೇಖ ಧಾರವಾಡ ಜಿಲ್ಲಾ ಗೆಝೆಟಿಯರ್‌ನಲ್ಲಿದೆ. 1403ರಲ್ಲಿ ಈ ಧಾರರಾವ್ ಕೋಟೆ ಕಟ್ಟಿಸಿದ್ದು ಧಾರವಾಡ ಎಂಬ ನಾಮಕರಣಕ್ಕೆ ಮೂಲ ಎನ್ನಲಾಗುತ್ತಿದೆ. ಆದರೆ, ಕ್ರಿ.ಶ.1117ರ ಶಾಸನ ಒಂದರಲ್ಲಿ ’ದಾರವಾಡ’ ಎಂಬ ಹೆಸರಿದೆ. ಅಲ್ಲದೆ 1403ರಲ್ಲಿ ವಿಜಯನಗರವನ್ನು ರಾಮರಾಜ ಆಳುತ್ತಿರಲಿಲ್ಲ. ಹಾಗಾಗಿ ಗೆಝೆಟಿಯರ್ ದಾಖಲೆ ಒಪ್ಪಲಿಕ್ಕಾಗದೆಂಬ ವಿಶ್ಲೇಷಣೆಗಳಿವೆ. 9ನೆ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ’ದೇರಣ್ಣ’ ಎಂಬ ವ್ಯಕ್ತಿಯ ಉಲ್ಲೇಖ ಬರುತ್ತದೆ.

ಆತ ವೀರಮರಣ ಹೊಂದಿದವನಾಗಿರಬೇಕು; ಆತನಿಂದಲೇ ಧಾರವಾಡದ ನಿಷ್ಪತ್ತಿ ಆಗಿರಬೇಕೆಂಬ ವಾದವಿದೆ. ವಾಡ ’ಬಾಡ’ದಿಂದ ಬಂದಿರಬೇಕೆಂದು ಉದ್ಧಾಮ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅಭಿಪ್ರಾಯ ಪಡುತ್ತಾರೆ. ದೇರಣ್ಣಬಾಡ ಕಾಲಕ್ರಮೇಣ ದ್ಯಾರಣ್ಣಬಾಡ-ದಾರನಬಾಡ-ದಾರವಾಡವಾಗಿ ಅಂತಿಮವಾಗಿ ಧಾರವಾಡವಾಗಿದೆ ಎಂಬ ತರ್ಕವಿದೆ. ಸಾಂಸ್ಕೃತಿಕ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಲ್ಪಟ್ಟಿದ್ದ ಧಾರವಾಡ ಆದಿಲ್‌ಶಾಹಿ ಕಾಲದಲ್ಲಿ ನಶರತಾಬಾದ್ ಎಂದಾಗಿತ್ತು; ಬ್ರಿಟಿಷರ ಪರ್ವದಲ್ಲಿ ಧಾರವಾರ ಎಂದು ಗುರುತಿಸಲಾಗುತ್ತಿತ್ತು.

ತಾಮ್ರ ಶಾಸನಗಳ ಪ್ರಕಾರ ಬನವಾಸಿಯ ಕದಂಬರ ಆಳ್ವಿಕೆಗೆ ಒಳಪಟ್ಟಿದ್ದ ಧಾರವಾಡ ಜಿಲ್ಲೆ 5ನೆ ಶತಮಾನದಿಂದ ವಿವಿಧ ರಾಜವಂಶಗಳ ಆಡಳಿತದಲ್ಲಿತ್ತು. ಬಾದಾಮಿ ಮತ್ತು ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ದೇವಗಿರಿಯ ಯಾದವರು, ವಿಜಯನಗರ ಸಾಮ್ರಾಜ್ಯದ ಪಾರುಪತ್ಯದಲ್ಲಿದ್ದ ಧಾರವಾಡ ಜಿಲ್ಲೆ ಬಿಜಾಪುರದ ಆದಿಲ್‌ಶಾಹಿ ಸುಲ್ತಾನರ ಕಾಲದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಇದಕ್ಕೆ ಕಾರಣ ಸುಲ್ತಾನರು ಕಟ್ಟಿಸಿದ ಕೋಟೆ ’ಮನ್ನಕಿಲ್ಲಾ’; ಆಗಿನ ಕಾಲದ “ನಜರತಾಬಾದ್”. ಆನಂತರ ಧಾರವಾಡ ಮೊಘಲರ ವಶವಾಗಿತ್ತು. ಮೊಘಲರ ಸಾಮ್ರಾಜ್ಯ ಪತನದ ಬಳಿಕ ಮರಾಠರು (ಪೇಶ್ವೆಗಳು), ಹೈದರ್ ಅಲಿ-ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ಪ್ರಭುತ್ವ ಧಾರವಾಡ ಜಿಲ್ಲೆಯಲ್ಲಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಮುಂಬೈ ಪ್ರಾಂತ್ಯಕ್ಕೆ ಸೇರಿಸಲ್ಪಟ್ಟ ಧಾರವಾಡ ಜಿಲ್ಲೆಯಲ್ಲಿ, ಪೇಶ್ವೆಗಳ ದರ್ಬಾರಿನಲ್ಲಿ ಅಂದರೆ-19ನೆ ಶತಮಾನದ ಆರಂಭದಲ್ಲೇ ಮರಾಠಿ ಪ್ರಭಾವ ಆಗಿರುವುದು ಕಂಡುಬರುತ್ತದೆ.

ಬ್ರಿಟಿಷರ ಆಡಳಿತದಲ್ಲಿ ಮರಾಠಿ ಹಾವಳಿ ಹೆಚ್ಚಾಗುತ್ತಿದ್ದಾಗ ಕನ್ನಡತನದ ಜಾಗೃತಿಗಾಗಿ ಆರ್.ಎಚ್.ದೇಶಪಾಂಡೆ ನೇತೃತ್ವದಲ್ಲಿ ’ಕರ್ನಾಟಕ ವಿದ್ಯಾವರ್ಧಕ ಸಂಘ’ ಸ್ಥಾಪಿಸಲ್ಪಟ್ಟಿತು. ಕರ್ನಾಟಕ ಏಕೀಕರಣಕ್ಕಾಗಿ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು, ’ಹಚ್ಚೇವು ಕನ್ನಡದ ದೀಪ’ ಖ್ಯಾತಿಯ ಹುಯಿಲಗೋಳ ನಾರಾಯಣರಾಯರಂಥ ದಿಗ್ಗಜರ ಅಧ್ವರ್ಯದಲ್ಲಿ ನಡೆದ ಹೋರಾಟದಲ್ಲಿ ಧಾರವಾಡ ಪ್ರಮುಖ ಪಾತ್ರವಹಿಸಿತ್ತು. ಬಹುಭಾಷಾ ಸಾಂಸ್ಕೃತಿಕ ನೆಲ ಧಾರವಾಡ ಜಿಲ್ಲೆಯ ಜೀವ-ಜೀವನದ ಭಾಷೆ ಪ್ರಾದೇಶಿಕ ಅಸ್ಮಿತೆಯ ವಿಶಿಷ್ಟ ಕನ್ನಡ. ದೈನಂದಿನ ವ್ಯವಹಾರ-ಸಂವಹನ ನಡೆಯುವುದೆ ಈ ಜವಾರಿ ಕನ್ನಡದಲ್ಲಿ. ಮರಾಠಿಯೂ ಜಿಲ್ಲೆಯಲ್ಲಿ ಹಾಸುಹೊಕ್ಕಾಗಿದೆ. ಉರ್ದು, ಹಿಂದಿ, ತೆಲಗು, ಗುಜರಾತಿ, ಕೊಂಕಣಿ, ಲಂಬಾಣಿ ಮುಂತಾದ ಭಾಷೆಗಳು ಕೇಳಿಬರುತ್ತವೆ. ಆಡಳಿತ ಕೇಂದ್ರವಾದ ಧಾರವಾಡ ಸಾಂಸ್ಕೃತಿಕ-ಶೈಕ್ಷಣಿಕ ನಗರಿಯಾದರೆ, ಹುಬ್ಬಳ್ಳಿ ವಾಣಿಜ್ಯ-ವ್ಯಾಪಾರ ನಗರ; ಕರ್ನಾಟಕದ ಎರಡನೇ ಅತಿ ದೊಡ್ಡ ಮಹಾನಗರ ಹುಬ್ಬಳ್ಳಿ-ಧಾರವಾಡ ಕಾಸ್ಮೋಪಾಲಿಟನ್.

ತಲೆಗೆ ರುಮಾಲು ಸುತ್ತಿಕೊಳ್ಳುವ, ಬಿಳಿ ಟೋಪಿ ಹಾಕಿಕೊಳ್ಳುವ ಪುರುಷರು ಮತ್ತು ಇಳಕಲ್ ಅಥವಾ ಕೈಮಗ್ಗದ ಸೀರೆಯನ್ನುಟ್ಟ ಮಹಿಳೆಯರು ಜಿಲ್ಲೆಯಾದ್ಯಂತ ಕಾಣಿಸುತ್ತಾರೆ. ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು ಕುಣಿತ, ಜೋಡು ಹಲಿಗೆ, ಲಂಬಾಣಿ ನೃತ್ಯ, ವೀರಭದ್ರ ಕುಣಿತ ಧಾರವಾಡ ಜಿಲ್ಲೆಯ ಸಾಂಸ್ಕೃತಿಕ ಪ್ರಕಾರಗಳು; ದೀಪಾವಳಿ ಹಬ್ಬದ ಹೊತ್ತಲ್ಲಿ ಹೋರಿ ಓಡಿಸುವ ಸಂಪ್ರದಾಯವೂ ಜಿಲ್ಲೆಯಲ್ಲಿದೆ. ಸಾಹಿತ್ಯ-ಸಂಗೀತ-ಕಲೆಯ ಹಿರಿಮೆ-ಗರಿಮೆಗಳ ಧಾರವಾಡ ಜಿಲ್ಲೆ ವಿವಿಧ ರಂಗದ ಪ್ರತಿಭಾನ್ವಿತರ ತವರು; ಮೊದಲ ಕವಿಪುಂಗವನೆಂದು ಗುರುತಿಸಲ್ಪಡುವ ಪಂಪ ಹುಟ್ಟಿದ್ದು ಜಿಲ್ಲೆಯ ಅಣ್ಣಿಗೇರಿಯಲ್ಲಿ; ಧಾರವಾಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ದ.ರಾ.ಬೇಂದ್ರೆಯವರ ಜನ್ಮಭೂಮಿ! ಇನ್ನಿಬ್ಬರು ಜ್ಞಾನಪೀಠ ಪ್ರಶಸ್ತಿ ಸನ್ಮಾನಿತ ಸಾಹಿತಿಗಳಾದ ವಿ.ಕೃ.ಗೋಕಾಕ್ ಮತ್ತು ಗಿರೀಶ್ ಕಾರ್ನಾಡ್‌ರನ್ನು ಧಾರವಾಡ ಪೊರೆದು ಪೋಷಿಸಿದೆ. ಜಿ.ಎಸ್,ಆಮೂರ್, ಕೀರ್ತಿನಾಥ ಕುರ್ತಕೋಟಿ, ಪಿ.ಸಿ.ಸಿದ್ಧಾಶ್ರಮ ಧಾರವಾಡ ಜಿಲ್ಲೆ ಹೆತ್ತ ಹೆಸರಾಂತ ವಿಮರ್ಶಕರು. ಕವಿ ಚೆನ್ನವೀರ ಕಣವಿ, ಪ್ರಸಿದ್ಧ ಪತ್ರಕರ್ತ ಪಾಟೀಲ್ ಪುಟ್ಟಪ್ಪ, ಖ್ಯಾತ ಕುಂಚ ಕಲಾವಿದ ಹಾಲಭಾವಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದ ಸ್ವಾತಂತ್ರ್ಯ ಮತ್ತು ಕನ್ನಡ ಏಕಿಕರಣ ಹೋರಾಟಗಾರ ರಂಗನಾಥ ದಿವಾಕರ್, ಸಿದ್ದಪ್ಪ ಕಂಬಳಿ ಧಾರವಾಡ ಜಿಲ್ಲೆಯವರು.

ಧಾರವಾಡ ಜಿಲ್ಲೆಯೆಂದರೆ ಹಿಂದುಸ್ತಾನಿ ಸಂಗೀತದ ತೊಟ್ಟಿಲು; ಹಿಂದುಸ್ತಾನಿ ಸಂಗೀತದ ಶೇಷ್ಠ ಗಾಯಕರಾದ ಸವಾಯಿ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಭೀಮಸೇನ ಜೋಶಿ, ಬಸವರಾಜ ರಾಜಗುರು, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್‌ರಿಗೆ ಧಾರವಾಡ ಜಿಲ್ಲೆ ಜನ್ಮನೀಡಿದೆ. ಲೀನಾ ಚಂದಾವರ್‍ಕರ್, ಸುರೇಶ್ ಹೆಬ್ಳೀಕರ್, ಶಾಂತಾ ಹುಬ್ಳಿಕರ್, ಗುಡಗೇರಿ ಬಸವರಾಜ್ ಧಾರವಾಡ ಜಿಲ್ಲೆಯ ಪ್ರಮುಖ ಸಿನೆಮಾ-ರಂಗ ಭೂಮಿ ಕಲಾವಿದರು. ಧಾರವಾಡದ ಪಾಲ್ವಂಕರ್ ಬಾಲೂ ದಲಿತ ಸಮುದಾಯದ ಮೊದಲ ಕ್ರಿಕೆಟಿಗ. ಬಾಲೂ ದಲಿತರ ಹಕ್ಕುಗಳಿಗಾಗಿ ರಾಜಕೀಯ ಕಾರ್ಯಕರ್ತರೂ ಆಗಿದ್ದರು. ಬೌಲರ್ ಸುನಿಲ್ ಜೋಶಿ ಮತ್ತು ಹರ್ಷದ್ ಮೆಹ್ತಾನ ಶೇರು ಹಗರಣ ಬಯಲಿಗೆಳೆದ ದಿಟ್ಟ ಪತ್ರಕರ್ತೆ ಸುಚೇತಾ ದಲಾಲ್ ಮತ್ತು ಖ್ಯಾತ ಹಿಂದುಸ್ತಾನಿ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಧಾರವಾಡ ಮೂಲದವರು.

ಕೃಷಿ-ಕೈಗಾರಿಕೆ-ಆರ್ಥಿಕತೆ!

ಒಣ ಬೇಸಾಯ ಧಾರವಾಡ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು. ಮಲಪ್ರಭಾ, ಶಾಲ್ಮಲಾ, ವರದಾ, ಧರ್ಮಾ ನದಿಗಳು ಹಾಗು ತುಪ್ಪರಿ ಹಳ್ಳ, ಬೆಣ್ಣೆ ಹಳ್ಳಗಳೆ ಮುಂತಾದ ತೊರೆಗಳು ಜಿಲ್ಲೆಯ ಜೀವ ಜಲದ ಮೂಲಗಳು. ಹತ್ತಿ, ಮೆಕ್ಕೆ ಜೋಳ ಮತ್ತು ಗೋವಿನ ಜೋಳ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಗಳು; ಭತ್ತ, ಗೋಧಿ, ರಾಗಿ, ತೊಗರಿ, ಶೇಂಗಾ, ಮೆಣಸಿನ ಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಎಣ್ಣೆ ಕಾಳುಗಳು ಮತ್ತು ಮಾವು, ಪಪ್ಪಾಯಿ ಫಸಲು ಸಹ ದೊಡ್ಡ ಪ್ರಮಾಣದಲ್ಲೆ ಬರುತ್ತದೆ. ಈ ಬೆಳೆಗಳ ಮೇಲೆ ಗ್ರಾಮೀಣ ಭಾಗದ ಬದುಕು ಅವಲಂಬಿಸಿದೆ. ಕೈಗಾರಿಕಾ ನಗರ ಹುಬ್ಬಳ್ಳಿ-ಧಾರವಾಡದಾಚೆಯೂ ಹತ್ತಿ ಸಂಸ್ಕರಣಾ ಕಾರ್ಖಾನೆ, ಎಣ್ಣೆ ಗಿರಣಿ, ಅಕ್ಕಿ ಮಿಲ್‌ಗಳು ಮತ್ತು ಕೈಮಗ್ಗ ಸೀರೆ ಘಟಕಗಳಿವೆ. ಈ ಉದ್ಯಮ ನಂಬಿ ಹಲವು ಹಳ್ಳಿಗಾಡಿನ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕಳಸಾ-ಬಂಡೂರಿ, ಮಹದಾಯಿ ನೀರು ಜಿಲ್ಲೆಗೆ ಅನಿವಾರ್ಯವಾಗಿದೆ; ಈ ನೀರು ಹರಿದರೆ ಹೊಲ-ಗದ್ದೆಗಳು ಹಸಿರಾಗಿ ರೈತರು ನಿಟ್ಟುಸಿರು ಬಿಡುವಂತಾಗುತ್ತದೆಂದು ನೀರಾವರಿ ಹೋರಾಟಗಾರರು ಹೇಳುತ್ತಾರೆ. ಆದರೆ ಶಾಸಕ-ಸಂಸದರಲ್ಲಿ ಇಚ್ಛಾಶಕ್ತಿ ಇಲ್ಲದಿರುವುದರಿಂದ ಸಂಕಷ್ಟಕ್ಕೆ ಈಡಾಗಿದ್ದೇವೆಂಬ ಆಕ್ರೋಶ ರೈತ ಸಮೂಹದಲ್ಲಿದೆ.

ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬೈ ಮಧ್ಯದ ಆಯಕಟ್ಟಿನ ಸ್ಥಳದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ದಕ್ಷಿಣ ಮಹಾರಾಷ್ಟ್ರದ ಕಮರ್ಷಿಯಲ್ ಹಬ್ ಎಂದೇ ಪ್ರಸಿದ್ಧವಾಗಿದೆ; ರಾಜ್ಯದಲ್ಲಿ ಬೆಂಗಳೂರಿನ ಬಳಿಕ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಕೈಗಾರಿಕಾ ಕೇಂದ್ರವಿದು. ಕೈಗಾರಿಕೆ-ವಾಣಿಜ್ಯ-ವೈದ್ಯಕೀಯ ಮತ್ತು ಶೈಕ್ಷಣಿಕ ವಹಿವಾಟಿನ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮದ್ಯಮ ಗಾತ್ರದ ಕೈಗಾರಿಕೆಗಳಿವೆ. ಮೂರು ಮೆಡಿಕಲ್ ಕಾಲೇಜು, ನಾಲ್ಕೈದು ಇಂಜಿನಿಯರಿಂಗ್ ಕಾಲೇಜುಗಳು, ದಂತ ವೈದ್ಯಕೀಯ ಕಾಲೇಜು ಮತ್ತು ವಿವಿಧ ವೃತ್ತಿಪರ ಕೋರ್ಸ್‌ಗಳ ವಿದ್ಯಾ ಸಂಸ್ಥೆಗಳಿವೆ; ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಹೈಕೋರ್ಟ್, ಆಕಾಶವಾಣಿ, ನೈಋತ್ಯ ರೈಲ್ವೆ ವಲಯ, ರಾಷ್ಟ್ರೀಯ ಪ್ರಾಮುಖ್ಯತೆಯ ಐಐಟಿ, ಐಐಐಟಿ ಮತ್ತು ಹಲವು ಹೈಟೆಕ್-ಲೋಟೆಕ್ ಆಸ್ಪತ್ರೆಗಳಿವೆ. ಇಲ್ಲೆಲ್ಲ ಉದ್ಯೋಗ ಸೃಷ್ಟಿಯಾಗಿದೆಯಾದರೂ ಸ್ಥಳೀಯರಿಗೆ ಉದ್ಯೋಗಾವಕಾಶದಲ್ಲಿ ಪ್ರಮುಖ ಆದ್ಯತೆ ಸಿಗುತ್ತಿಲ್ಲ ಎಂಬ ಕೊರಗು ಯುವ ಸಮೂಹದಲ್ಲಿದೆ.

ಬಾಬಾ ಗೌಡ ಪಾಟೀಲ್

ದೇಶದಲ್ಲೆ ಅತಿ ದೊಡ್ಡ ಹತ್ತಿ ಮಾರುಕಟ್ಟೆ ಎನಿಸಿರುವ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪ್ರತಿ ದಿನ ಕೋಟ್ಯಾಂತರ ರೂ. ಕಬ್ಬಿಣ ಹಾಗು ಹತ್ತಿ ಉತ್ಪನ್ನದ ವ್ಯಾಪಾರವಾಗುತ್ತದೆ. ಇದು ಕೈಮಗ್ಗದ ಬಟ್ಟೆ ಮತ್ತು ಉನ್ನತ ಮಟ್ಟದ ಜವಳಿ ಕೇಂದ್ರವೂ ಹೌದು. ಏಷ್ಯಾದಲ್ಲೆ ಅತ್ಯಂತ ದೊಡ್ಡದಾದ ಕೃಷಿ ಉತ್ಪನ್ನ ಮಾರುಕಟ್ಟೆ ಎಪಿಎಂಸಿ ಅಮರಗೋಳದಲ್ಲಿದೆ. ಯಂತ್ರೋಪಕರಣ ಕೈಗಾರಿಕೆ, ಆಹಾರ ಸಂಸ್ಕರಣೆ, ಅಗ್ರೋ ಇಂಡಸ್ಟ್ರೀಸ್, ಇನ್ಪೋಸಿಸ್, ಕಿರ್ಲೊಸ್ಕರ್ ಲಿ., ಟಾಟಾ ಹಿಟಾಚಿ ಲಿ., ಟಾಟಾ ಮಾರ್ಕೋಪೋಲಾ ಮೋಟರ್ಸ್ ಲಿ., ಸಾಪ್ಟವೇರ್ ಟೆಕ್ನಾಲಜೀಸ್, ಆರ್ಯಭಟ ಟೆಕ್ ಪಾರ್ಕ್‌ನಂಥ ಪ್ರತಿಷ್ಠಿತ ಕೈಗಾರಿಕೆಗಳು ಹುಬ್ಬಳ್ಳಿ-ಧಾರವಾಡದಲ್ಲಿದೆ. ಬೇರೆಡೆ ಅಕ್ಕಿ, ಹತ್ತಿ, ಎಣ್ಣೆ ಮಿಲ್ ಮತ್ತು ಕೈಮಗ್ಗ ಬಿಟ್ಟರೆ ಬೇರೆ ಕೈಗಾರಿಕೆಗಳು ಕಾಣಿಸದು. ಹುಬ್ಬಳ್ಳಿ-ಧಾರವಾಡದ ಹೊರಗೂ ಕೈಗಾರೀಕರಣಕ್ಕೆ ಅವಕಾಶ ಕೊಟ್ಟು ದುಡಿವ ಕೈಗಳಿಗೆ ಕೆಲಸಕೊಡುವ ಯೋಚನೆ ಶಾಸಕ-ಸಂಸದ-ಸಚಿವರಲ್ಲಿ ಇಲ್ಲದಾಗಿದೆ ಎಂಬ ಆಕ್ಷೇಪ ನವಲಗುಂದ, ಕಲಘಟಗಿ ಮತ್ತು ಕುಂದಗೋಳ ತಾಲೂಕಿನಲ್ಲಿ ಕೇಳಿಬರುತ್ತಿದೆ.

ದೇಶಾದ್ಯಂತ ಹಾರಾಡುವ ಅಪ್ಪಟ ಖಾದಿಯಿಂದ ನೇಯ್ದ ರಾಷ್ಟ್ರಧ್ವಜ ತಯಾರಾಗುವುದು ಹುಬ್ಬಳ್ಳಿ ಬಳಿಯ ಬೆಂಗೇರಿಯಲ್ಲಿ. ರಾಷ್ಟ್ರಧ್ವಜ ತಯಾರಿಸುವ ಏಕೈಕ ಅಧಿಕೃತ ಘಟಕ ’ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ’ಇಲ್ಲಿದೆ. ಜಿಲ್ಲೆಯಲ್ಲಿ ಐತಿಹಾಸಿಕ-ಆಕರ್ಷಕ ಹಲವು ತಾಣಗಳಿವೆ. ಧಾರವಾಡದಿಂದ 6 ಕಿಮೀ. ದೂರದಲ್ಲಿರುವ ಅಮೀನಭಾವಿಯಲ್ಲಿ 24 ತೀರ್ಥಂಕರರ ಬಸದಿ, ಗುಹಾ ದೇವಾಲಯವಿದೆ. ಹಿರೇಮಠದ ಹಲಗೆಯ ಮೇಲೆ ಚಿತ್ತಾಕರ್ಷಕ ಕುಸುರಿ ಚಿತ್ತಾರಗಳಿವೆ. ಹುಬ್ಬಳ್ಳಿಯಿಂದ ಮೂರು ಕಿಮೀ. ದೂರದಲ್ಲಿ ಪ್ರವಾಸಿಗರ ಸೆಳೆವ ಸುಂದರ ಉಣಕಲ್ ಸರೋವರ, ಉದ್ಯಾನ ವನ ಮತ್ತು ಚಾಲುಕ್ಯರ ಕಾಲದ ಚಂದ್ರಮೌಳೇಶ್ವರ ದೇಗುಲವಿದೆ. ಹುಬ್ಬಳ್ಳಿಯ ಈಶಾನ್ಯದ ಅಂಚಿನಲ್ಲಿರುವ ನೃಪತುಂಗ ಬೆಟ್ಟದಿಂದ ಹುಬ್ಬಳ್ಳಿ ನಗರದ ವಿಹಂಗಮ ನೋಟ ಕಾಣಿಸುತ್ತದೆ.

1646ರಲ್ಲಿ ಮೊಹಮ್ಮದ್ ಅಲಿ ಶಾ ನಿರ್ಮಿಸಿದ ನ್ಯಾಯಾಲಯ ಸಭಾಂಗಣ ’ಅಸರ್’, ಸೂಫಿ ದೇಗುಲ ಸೈಯದ್ ಫತೇಶಾ ವಾಲಿ, ಅದ್ವೈತ ತತ್ವದ ಸಿದ್ದಾರೂಢ ಮಠ, ಇಂದಿರಾ ಗಾಜಿನ ಮನೆ- ಇವುಗಳಿಗೆ ದೊಡ್ಡ ಇತಿಹಾಸವಿದೆ; ಧಾರವಾಡದ ಮುರುಘಾ ಮಠ, ಹುಬ್ಬಳ್ಳಿಯ ಮೂರು ಸಾವಿರ ಮಠ, ಅಮ್ಮಿನಭಾವಿಯ ಹಿರೇಮಠ ಮತ್ತು ಧಾರವಾಡದ ಚರ್ಚ್ ಒಂದೂವರೆ ಶತಮಾನಕ್ಕಿಂತಲೂ ಹಿಂದಿನದು! ಅಣ್ಣಿಗೇರಿಯಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಅಮೃತೇಶ್ವರ ಮತ್ತಿತರ ಐತಿಹಾಸಿಕ ದೇವಾಲಯಗಳಿವೆ. ಕುಂದಗೋಳ ಹಿಂದುಸ್ತಾನಿ ಸಂಗೀತ ದಿಗ್ಗಜ- ಸವಾಯಿ ಗಂಧರ್ವ ಎಂದು ಪ್ರಸಿದ್ಧರಾದ ರಾಮಬಾವು ಕುಂದಗೋಳ್ಕರ್ ಜನ್ಮ ಭೂಮಿ; ಇಲ್ಲಿಯೆ ಭಾರತ ರತ್ನ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಹಿಂದುಸ್ತಾನಿ ಸಂಗೀತ ಕಲಿತದ್ದು. ಸಹ್ಯಾದ್ರಿ ತಪ್ಪಲಿನ ಕಲಘಟಗಿಯಲ್ಲಿ ದಟ್ಟ ಅರಣ್ಯವಿದೆ; ತಾಲೂಕಿನ ತಂಬೂರಲ್ಲಿ ಬಸವೇಶ್ವರ ದೇವಾಲಯವಿದೆ. ಬಣ್ಣಬಣ್ಣದ ಚಿತ್ತಾಕರ್ಷಕ ಚಿತ್ತಾರಗಳ ಕಟ್ಟಿಗೆಯ ತೊಟ್ಟಿಲುಗಳಿಗೆ ಪ್ರಸಿದ್ಧವಾಗಿದೆ. ನವಲಗುಂದದ ಸುಂದರವಾದ ಜಾಮಿತಿ ಮತ್ತು ಪ್ರಾಣಿ-ಪಕ್ಷಿ ವಿನ್ಯಾಸಗಳ ಕೈಮಗ್ಗದ ಡ್ಯೂರಿಗಳು (ಜಮಖಾನ) ವಿಶ್ವ ಖ್ಯಾತವಾಗಿದೆ;ಇದನ್ನು ಭೌಗೋಳಿಕವಾಗಿ ಟ್ಯಾಗ್ ಮಾಡಲಾಗಿದೆ.

ಕ್ಷೇತ್ರ ಸೂತ್ರ

ಬ್ರಿಟಿಷರ ಆಡಳಿತದಲ್ಲಿ ಮುಂಬೈ ಪ್ರೆಸಿಡೆನ್ಸಿಯಲ್ಲಿದ್ದ ಧಾರವಾಡ ಮರಾಠಿ-ಮಹಾರಾಷ್ಟ್ರದ ಪ್ರಭಾವಳಿಗೆ ಒಳಗಾಗಿತ್ತು; ಸಹಜವಾಗೆ ನಾಗಪುರ (ಆರ್‌ಎಸ್‌ಎಸ್) ನೆರಳು ಧಾರವಾಡದ ಮೇಲೆ ಬೀಳುತ್ತಿತ್ತು. ಹಾಗಾಗಿ ಜನಸಂಘ-ಬಿಜೆಪಿ ಧಾರವಾಡದಲ್ಲಿ ಲಾಗಾಯ್ತಿನಿಂದಲೆ ಬೇರುಬಿಟ್ಟಿದೆ. ಧಾರವಾಡ ಉರುಫ್ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚುನಾವಣಾ ಚರಿತ್ರೆಯ ಮೇಲೊಮ್ಮೆ ಹಾಗೆ ಸುಮ್ಮನೆ ಕಣ್ಣು ಹಾಯಿಸಿದರೆ ಇದೊಂದು ಲಿಂಗಾಯತ ಮೀಸಲು ಕ್ಷೇತ್ರ ಎಂಬಂತೆ ಭಾಸವಾಗುತ್ತದೆ. ಪ್ರಮುಖ ಪಕ್ಷಗಳು ಇಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಡುತ್ತವೆ. ಪಕ್ಷದ ಓಟ್ ಬ್ಯಾಂಕ್ ಜತೆ ಯಾರು ಸ್ವಜಾತಿ ಲಿಂಗಾಯತರ ಒಲವು ಗಳಿಸುತ್ತಾರೋ ಅವರು ಗೆಲ್ಲುತ್ತಾರೆ.

ಧಾರವಾಡ ಕ್ಷೇತ್ರ ಬಹುತೇಕ 2007ರ ವಿಧಾನಸಭಾ ಕ್ಷೇತ್ರಗಳ ಪುನರ್ ರಚನೆಯ ಪೂರ್ವದ ಧಾರವಾಡ ರೂರಲ್ ಕಾನ್‌ಸ್ಟೂಯೆನ್ಸಿ. ಪ್ರಬಲ ರೈತ ಚಳವಳಿ-ರೈತ ಸಂಘ ಕಟ್ಟಿದ್ದ ನಿಷ್ಠುರ ರೈತ ಮುಖಂಡರಾದ ಮಹಾಂತ(ಎಂ).ಡಿ(ದೇವರು).ನಂಜುಂಡಸ್ವಾಮಿ ಮತ್ತು ಬಾಬಾಗೌಡ ಪಾಟೀಲ್ ಗೆಲುವು ಸಾಧಿಸಿದ ಕ್ಷೇತ್ರವಿದು. 1989ರಲ್ಲಿ ಬಾಬಾ ಗೌಡ ಪಾಟೀಲ್ ಧಾರವಾಡ ಗ್ರಾಮೀಣ ಮತ್ತು ಬೆಳಗಾವಿಯ ಕಿತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕೆಆರ್‌ಎಸ್‌ನಿಂದ (ಕರ್ನಾಟಕ ರೈತ ಸಂಘ) ಆಯ್ಕೆಯಾಗಿದ್ದರು. ಬಾಬಾಗೌಡರು ಧಾರವಾಡ ಗ್ರಾಮೀಣ ಕ್ಷೇತ್ರವನ್ನು ನಂಜುಂಡಸ್ವಾಮಿಯವರಿಗೆ ಬಿಟ್ಟುಕೊಟ್ಟು ಕಿತ್ತೂರು ಉಳಿಸಿಕೊಂಡಿದ್ದರು. ಜೀವನದ ಸಂಧ್ಯಾಕಾಲದಲ್ಲಿ ದಿಕ್ಕು ತಪ್ಪಿದ್ದರೆಂಬ ಟೀಕೆಗೆ ಒಳಗಾಗಿದ್ದ ಬಾಬಾಗೌಡ ಬಿಜೆಪಿ ಸೇರಿ ಬೆಳಗಾವಿಯಿಂದ ಆ ಪಕ್ಷದ ಸಂಸದರಾಗಿ ವಾಜಪೇಯಿ ಸರಕಾರದಲ್ಲಿ ಕೆಲಕಾಲ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಮಂತ್ರಿಯೂ ಆಗಿದ್ದರು.

1994ರಲ್ಲಿ ಕಾಂಗ್ರೆಸ್‌ನ ಶ್ರೀಕಾಂತ ಅಂಬಡಗಟ್ಟಿ ಎ.ಬಿ.ದೇಸಾಯಿ (ಈಗಿನ ಎಮ್ಮೆಲ್ಲೆ ಅಮೃತ ದೇಸಾಯಿ ತಂದೆ- 1985ರಲ್ಲಿ ಜನತಾ ಪರಿವಾದರದ ಶಾಸಕರಾಗಿದ್ದವರು) ಅವರನ್ನು ಮಣಿಸಿದರು. ಶ್ರೀಕಾಂತ ಅಂಬಡಗಟ್ಟಿ ಅಪಘಾತದಲ್ಲಿ ನಿಧನರಾದ ನಂತರ ಅವರ ತಮ್ಮ ಶಿವಾನಂದ ಅಂಬಡಗಟ್ಟಿ ಪಕ್ಷೇತರ ಎಮ್ಮೆಲ್ಲೆಯಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಧಾರವಾಡ ತಾಲೂಕಿನ ಗ್ರಾಮೀಣ ಪ್ರದೇಶದ ಜತೆ ಮಹಾನಗರ ಪಾಲಿಕೆಯ ಎಂಟು ವಾರ್ಡ್ ಸೇರಿಸಿ ಧಾರವಾಡ ಕ್ಷೇತ್ರವೆಂದು ನಾಮಕರಣ ಮಾಡಲಾಗಿದೆ. ಶೈಕ್ಷಣಿಕ-ಸಾಂಸ್ಕೃತಿಕ ಹಿರಿಮೆ-ಗರಿಮೆಯ ತಾಣವಾಗಿರುವ ಮತ್ತು ಶಿಕ್ಷಿತರು ಹೆಚ್ಚಿರುವ ಧಾರವಾಡ ಕ್ಷೇತ್ರದ ನಗರ ಪ್ರದೇಶದಲ್ಲಿ ನೌಕರರು, ಕೃಷಿಯೇತರ ವ್ಯವಹಾರ ಮಾಡಿಕೊಂಡಿರುವ ಬಿಳಿ ಕಾಲರಿನವರಿದ್ದರೆ, ಗ್ರಾಮೀಣ ಭಾಗದಲ್ಲಿ ರೈತಾಪಿ ಮಂದಿ ಮತ್ತು ಕುಲ ಕಸುಬಿಂದ ಜೀವನ ನಿರ್ವಹಿಸುವ ಕುಟುಂಬಗಳಿವೆ.

ಚಂದ್ರಕಾಂತ ಬೆಲ್ಲದ್

ಧಾರವಾಡದಲ್ಲಿ (ಗ್ರಾಮೀಣ) ಒಮ್ಮೆ ಗೆದ್ದವರು ಮುಂದಿನ ಚುನಾವಣೆಯಲ್ಲಿ ಪುನರಾಯ್ಕೆ ಆಗುವುದಿಲ್ಲ ಎಂಬ ಮಾತಿದೆ; ಇದಕ್ಕೆ ಅಪವಾದವೆಂದರೆ ಪ್ರಭಾವಿ ಲಿಂಗಾಯತ-ಶ್ರೀಮಂತ ವ್ಯಾಪಾರೋದ್ಯಮಿ ಚಂದ್ರಕಾಂತ ಬೆಲ್ಲದ್ 1994 ಮತ್ತು 1999ರಲ್ಲಿ ಸತತ ಎರಡು ಬಾರಿ ಶಾಸಕರಾಗಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಕಾವು ಕಂಡಿದ್ದ ಧಾರವಾಡ ಅಸೆಂಬ್ಲಿ ಕ್ಷೇತ್ರದಲ್ಲಿ ಒಟ್ಟೂ 2,15,126 ಮತದಾರರಿದ್ದಾರೆ. ಇದರಲ್ಲಿ ಪಂಚಮಸಾಲಿ ವರ್ಗ ಹೆಚ್ಚಿರುವ ಲಿಂಗಾಯತರು 70 ಸಾವಿರ, ಮುಸ್ಲಿಮರು 35 ಸಾವಿರ, ಕುರುಬರು 32 ಸಾವಿರ, ಎಸ್ಸಿ-ಎಸ್ಟಿ 25 ಸಾವಿರ, ಮರಾಠರು 22 ಸಾವಿರ ಮತ್ತು ಬ್ರಾಹ್ಮಣರು 14 ಸಾವಿರದಷ್ಟಿದ್ದಾರೆಂದು ಅಂದಾಜಿಸಲಾಗಿದೆ. 1952ರಲ್ಲಿ ಕಾಂಗ್ರೆಸ್ ಪಕ್ಷದ ಮುಕ್ತುಮ್‌ಸಾಬ್ ದಾಸನಕೊಪ್ಪ ಶಾಸಕನಾಗಿದ್ದರು.

1957ರ ಚುನಾವಣಾ ಕದನದಲ್ಲಿ ಕಾಂಗ್ರೆಸ್‌ನ ಎಂ.ಬಿ.ಇನಾಮತಿ (12,317) ಮತ್ತು ಪಕ್ಷೇತರ ಅಭ್ಯರ್ಥಿ ಬಿ.ಎ.ದೇಸಾಯಿ (11,590) ನಡುವೆ ಹೋರಾಟ ನಡೆಯಿತು. ಇನಾಮತಿ 1,727 ಮತದಂತರದಿಂದ ಶಾಸನಸಭೆಗೆ ಆಯ್ಕೆಯಾದರು. 1962ರಲ್ಲಿ ಕಾಂಗ್ರೆಸ್‌ನ ಹಸನ್‌ಸಾಬ್ ದಾಸನಕೊಪ್ಪ ಜನಸಂಘದ ವೈ.ಎಸ್.ಪಾಟೀಲ್‌ರನ್ನು (5,185) 11,907 ಮತದಿಂದ ಮಣಿಸಿ ಆಯ್ಕೆಯಾದರು. 1972ರ ಹೊತ್ತಿಗೆ ಜನಸಂಘ ಪ್ರಬಲವಾಗಿತ್ತು. ಅಂದಿನ ಹಣಾಹಣಿಯಲ್ಲಿ ಜನಸಂಘದ ಎಸ್.ಬಿ.ವೈ.ಲಕ್ಷ್ಮಣ 11,786 ಮತಗಳಿಸಿದರು; ಕಾಂಗ್ರೆಸ್‌ನ ಡಿ.ಕೆ.ಮೆಹಬೂಬ್‌ಸಾಬ್ 3,539 ಮತದಂತರದಿಂದ ವಿಜಯಿಯಾಗಿದ್ದರು. 1972ರರ ಚುನಾವಣೆ ಸಂದರ್ಭದಲ್ಲಿ ಮುನ್ಸಿಪಾಲಿಟಿ ನೌಕರಿಬಿಟ್ಟು ರಾಜಕಾರಣ ಶುರು ಮಾಡಿಕೊಂಡಿದ್ದ ಕುರುಬ ಸಮುದಾಯದ ಡಿ.ಕೆ.ನಾಯ್ಕರ್ ಕಾಂಗ್ರೆಸ್ ಅಭ್ಯರ್ಥಿ ಆದರು; ಲಿಂಗಾಯತ ಜಾತಿಯ ಪಿ.ವೈ.ಶಂಕರಗೌಡ ಜನಸಂಘದಿಂದ ಎದುರಾಳಿಯಾಗಿದ್ದರು. ಈ ಕದನ ಕುತೂಹಲದಲ್ಲಿ ನಾಯ್ಕರ್ 8,536 ಮತದಿಂದ ಗೆದ್ದು ಎಮ್ಮೆಲ್ಲೆಯಾದರು.

ಶಾಸಕ ನಾಯ್ಕರ್‌ಗೆ 1978ರಲ್ಲಿ ಕಾಂಗೈ ಪಕ್ಷದಿಂದ ಮತ್ತೆ ಶಾಸನಸಭೆಗೆ ಹೋಗಲು ಸಾಧ್ಯವಾಗಲಿಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಸಂಘಟಿತವಾಗಿ ಜನತಾ ಪಕ್ಷ ಕಟ್ಟಿಕೊಂಡಿತ್ತು. ಧಾರವಾಡ-ಹುಬ್ಬಳ್ಳಿ ಏರಿಯಾದ ಪ್ರಬಲ ಆರ್‌ಎಸ್‌ಎಸ್-ಜನಸಂಘದ ಮುಂದಾಳಾಗಿದ್ದ ಬಾವುರಾವ್ ದೇಶಪಾಂಡೆ (27,530) ಕಾಂಗೈನ ಡಿ.ಕೆ.ನಾಯ್ಕರ್ ಎದುರು ಜನತಾ ಪಕ್ಷದ ಹುರಿಯಾಳಾಗಿ ಕಣಕ್ಕಿಳಿದಿದ್ದರು. ನಾಯ್ಕರ್ 4,348 ಮತದಂತರದಿಂದ ಪರಾಜಿತರಾದರು. ಜನತಾ ಪಕ್ಷದ ಮುಖವಾಡದಲ್ಲಿದ್ದ ಸಂಘಪರಿವಾರದ ಮೊದಲ ವಿಜಯವಿದು. ಡಿ.ಕೆ.ನಾಯ್ಕರ್ 1980ರಲ್ಲಿ ಲೋಕಸಭೆ ಸದಸ್ಯರಾದರು. 1983ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮರಾಠ ಸಮುದಾಯದ ಎಸ್.ಆರ್.ಮೋರೆ ಅವರನ್ನು ಆಖಾಡಕ್ಕಿಳಿಸಿತು. ವಾಣಿಜ್ಯ ಮತ್ತು ಸಾಮಾಜಿಕ ವಲಯದಲ್ಲಿ ವರ್ಚಸ್ವಿಯಾಗಿದ್ದ ಲಿಂಗಾಯತ ವರ್ಗದ ಚಂದ್ರಕಾಂತ ಬೆಲ್ಲದ್ ಅಂದು ಜನತಾ ಪಕ್ಷದ ಮುಂಚೂಣಿ ನಾಯಕರಾಗಿದ್ದ ಎಸ್.ಆರ್.ಬೊಮ್ಮಾಯಿ (ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ತಂದೆ) ಮೂಲಕ ಜನತಾ ರಂಗದ (ಜನತಾ ಪಕ್ಷ-ಕ್ರಾಂತಿರಂಗ ಮೈತ್ರಿ ಕೂಟ) ಟಿಕಟ್ ಪಡೆದರು. ಈ ಕತ್ತುಕತ್ತಿನ ಕಾಳಗದಲ್ಲಿ ಕಾಂಗ್ರೆಸ್‌ನ ಮೋರೆ ಕೇವಲ 132 ಮತದಿಂದ ಗೆದ್ದರು.

ಶಾಸಕ ಮೋರೆಗೆ 1985ರಲ್ಲಿ ಕಾಂಗ್ರೆಸ್ ಅವಕಾಶ ಕೊಡಲಿಲ್ಲ; ಚಂದ್ರಕಾಂತ ಬೆಲ್ಲದ್‌ಗೆ ಜನತಾ ಪಕ್ಷದ ಟಿಕೆಟ್ ಸಿಗಲಿಲ್ಲ. ಕಾಂಗ್ರೆಸ್ ವಿರೋಧಿ ರಾಜಕಾರಣದ ಪ್ರಮುಖ ಮುಂದಾಳಾಗಿದ್ದ ಗಂಗಾಧರ ಪಡಕಿ ಜನತಾ ಪಕ್ಷದಿಂದ ಸ್ಪರ್ಧೆಗಿಳಿದರು. ಚಂದ್ರಕಾಂತ ಬೆಲ್ಲದ್ ಬಂಡೆದ್ದು ಆಖಾಡಕ್ಕೆ ಧುಮುಕಿದರು. ಕಾಂಗ್ರೆಸ್ ಲಿಂಗಾಯತ ಕೋಮಿನ ಲೀಲಾವತಿ ಚರಂತಿಮಠನ್ನು ಆಖಾಡಕ್ಕೆ ಇಳಿಸಿತ್ತು. ನಿಕಟವಾದ ತ್ರಿಕೋನ ಸ್ಪರ್ಧೆ ಏರ್‍ಪಟ್ಟಿತು. ಕಾಂಗ್ರೆಸ್‌ಗೆ 14,662 ಮತ ಬಂದರೆ, ಜನತಾ ಪಕ್ಷ 14,397 ಓಟು ಗಳಿಸಿತು. ಅಂತಿಮವಾಗಿ ಪಕ್ಷೇತರ ಅಭ್ಯರ್ಥಿ ಬೆಲ್ಲದ್ ಎರಡನೆ ಪ್ರಯತ್ನದಲ್ಲಿ ಸಣ್ಣ ಅಂತರದಲ್ಲಿ (1,287) ನಿಟ್ಟುಸಿರುಬಿಟ್ಟು ಶಾಸಕರಾದರು. 1989ರಲ್ಲಿ ಶಾಸಕ ಬೆಲ್ಲದ್ ಸ್ಪರ್ಧೆಗಿಳಿವ ಧೈರ್ಯ ಮಾಡಲಿಲ್ಲ; ಮಾಜಿ ಶಾಸಕ ಎಸ್.ಆರ್.ಮೋರೆ ಕಾಂಗ್ರೆಸ್ ಟಿಕೆಟ್ ತರಲು ಸಫಲರಾದರು. ಜನತಾ ದಳದಿಂದ ಗಂಗಾಧರ ಫಡಕಿ ಸ್ಪರ್ಧಿಸಿದ್ದರು. ಎಸ್.ಆರ್.ಮೋರೆ (36,627) ದೊಡ್ಡ ಅಂತರದಲ್ಲೇ (21,791) ಗೆದ್ದು ಎರಡನೆ ಸಲ ಶಾಸಕರಾದರು. ಆ ಚುನಾವಣೆಯಲ್ಲಿ ಬಿಜೆಪಿ 14,584 ಮತ ಪಡೆದು ಅಸ್ತಿತ್ವ ಪ್ರದರ್ಶಿಸಿತು!

1994ರ ಚುನಾವಣಾ ಸಂದರ್ಭದಲ್ಲಿ ಬಾಬರಿ ಮಸೀದಿ ದ್ವಂಸ, ಕಾಂಗ್ರೆಸ್‌ನಿಂದ ಪ್ರಬಲ ನಾಯಕ ಬಂಗಾರಪ್ಪ ನಿರ್ಗಮನ ಮುಂತಾದ ಕಾರಣದಿಂದ ಬಿಜೆಪಿ ಶಕ್ತಿ ವೃದ್ಧಿಸಿಕೊಂಡಿತ್ತು. ಬಂಗಾರಪ್ಪನವರ ಕೆಜೆಪಿ ಅಭ್ಯರ್ಥಿ ಎಚ್.ವಿ.ಡಂಬಳ್ 10,715 ಮತ ಪಡೆದದ್ದು ಕಾಂಗ್ರೆಸ್‌ಗೆ ದೊಡ್ಡ ಹೊಡೆತವನ್ನೇ ಕೊಟ್ಟಿತ್ತು. ಇದು ಬಿಜೆಪಿಯ ಚಂದ್ರಕಾಂತ ಬೆಲ್ಲದ್‌ಗೆ ಹೋರಾಟವನ್ನು ತೀರಾ ಸುಲಭವಾಗಿಸಿತು; ಬೆಲ್ಲದ್ ಕಾಂಗ್ರೆಸ್‌ನ ಮಹಾದೇವ ಹೊರಟ್ಟಿ(17,114)ಯನ್ನು 9,516 ಮತದಿಂದ ಸೋಲಿಸಿ ದ್ವಿತೀಯ ಬಾರಿಗೆ ಶಾಸನ ಸಭೆ ಪ್ರವೇಶ ಪಡೆದರು. ಇದು ಬಂಗಾರಪ್ಪ ’ಕೃಪೆ’ಯಿಂದ ಬೆಲ್ಲದ್ ಪಡೆದ ವಿಜಯವೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. 1999ರಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌ನ ಮಾಜಿ ಮಂತ್ರಿ ಎಸ್.ಆರ್.ಮೋರೆ ಮತ್ತು ಬಿಜೆಪಿಯ ಚಂದ್ರಕಾಂತ ಬೆಲ್ಲದ್ ಮುಖಾಮುಖಿಯಾದರು. ಈ ನಿಕಟ ಪೈಪೋಟಿಯಲ್ಲಿ ಮೋರೆ (46,650) ಗೆಲುವಿನ ಹೊಸ್ತಿಲಿಗೆ ಬಂದು ಎಡವಿದರು! ಬೆಲ್ಲದ್ 988 ಮತಗಳಿಂದ ಬಚಾವಾದರು! ಆ ಬಳಿಕ ಆಂಟಿಇನ್‌ಕಂಬೆನ್ಸ್ ಸುತ್ತಿಕೊಳ್ಳಲು ಶುರುವಾಯಿತು. ಜನರನ್ನು ಮರೆತು ತಮ್ಮ ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಾರೆಂಬ ಆರೋಪ ಎದುರಾಗಿತ್ತು. ಮೋರೆ ಕ್ಷೇತ್ರದ ಮಂದಿಯ ಮಧ್ಯದಲ್ಲಿ ಇರುತ್ತಾರೆಂಬ ಮೆಚ್ಚುಗೆ ಇತ್ತು. ಹೀಗಾಗಿ 2004ರಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಗಾಳಿ ಜೋರಾಗಿದ್ದರೂ ಬೆಲ್ಲದ್(37,584)ಗೆ ಮಾತ್ರ ಗೆಲ್ಲಲಾಗಲಿಲ್ಲ! ಕಾಂಗ್ರೆಸ್‌ನ ಮೋರೆ 5,750 ಮತದಿಂದ ಗೆದ್ದು ಧರ್ಮಸಿಂಗ್ ಮಂತ್ರಿ ಮಂಡಲದಲ್ಲಿ ಸಚಿವರೂ ಆದರು.

ವಿನಯ್ ಕುಲಕರ್ಣಿ

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾಗಿದ್ದ ವಿನಯ್ ಕುಲಕರ್ಣಿ 2004ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಸಿಟ್ಟಲ್ಲಿ ಪಕ್ಷೇತರನಾಗಿ ಹಿಂದಿನ ಧಾರವಾಡ ಗ್ರಾಮೀಣ ಕ್ಷೇತ್ರದದಿಂದ ಸ್ಪರ್ಧಿಸಿದ್ದರು. ಅಂದಿನ ಶಾಸಕ-ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಅಂಬಡಗಟ್ಟಿ ಮತ್ತು ಮಾಜಿ ಶಾಸಕ-ಜೆಡಿಯುನ ಎ.ಬಿ.ಪಾಟೀಲರನ್ನು ಮಣಿಸಿ ಶಾಸಕನಾದರು. 2008ರ ಚುನಾವಣೆಯಲ್ಲಿ ಪುನರ್‌ರಚಿತ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳಾಗಿದ್ದ ಕುಲಕರ್ಣಿ ಬಿಜೆಪಿಯ ಸೀಮಾ ಮಸೂತಿ ಎದುರು ಕೇವಲ 723 ಮತದಿಂದ ಸೋಲನುಭವಿಸಿದರು. ಆದರೆ 2013ರಲ್ಲಿ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಅಮೃತ ದೇಸಾಯಿ ವಿರುದ್ಧ ದೊಡ್ಡ ಅಂತರದ (18,320) ಜಯಭೇರಿ ಬಾರಿಸಿದರು!

ಸಿದ್ದರಾಮಯ್ಯ ಸರಕಾರದಲ್ಲಿ ಗಣಿ ಮಂತ್ರಿಯಾಗಿದ್ದ ವಿನಯ್ ಕುಲಕರ್ಣಿ 2018ರ ಚುನಾವಣೆ ವೇಳೆಗೆ ಆಕ್ರಮಣಕಾರಿ ರಾಜಕಾರಣ, ಜಿಪಂ ಸದಸ್ಯನಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಆರೋಪ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ನಾಯಕತ್ವದಿಂದ ವಿರೋಧಿಗಳ ಎದುರು ಹಾಕಿಕೊಂಡಂಥ ಹಲವು ಋಣಾತ್ಮಕ ಅಂಶಗಳಿಂದ ಹೈರಾಣಾಗಿ ಹೋಗಿದ್ದರು. ಪ್ರಭಾವಿ ಜಮೀನ್ದಾರಿ ಮನೆತನದ ಅಮೃತ ದೇಸಾಯಿ ಜೆಡಿಎಸ್ ಬಿಟ್ಟು ಬಿಜೆಪಿ ಅಭ್ಯರ್ಥಿಯಾದರು. ಈ ’ಧರ್ಮಯುದ್ಧ’ದಲ್ಲಿ ವಿನಯ್ ಕುಲಕರ್ಣಿಗೆ 20,340 ಮತದಂತರದ ದೊಡ್ಡ ಸೋಲಾಯಿತು; ಅಮೃತ ದೇಸಾಯಿಗೆ ಎರಡನೆ ಪ್ರಯತ್ನದಲ್ಲಿ ಶಾಸಕನಾಗುವ ಭಾಗ್ಯ ಬಂತು.

ಕ್ಷೇತ್ರದ ಸ್ಥಿತಿ-ಗತಿ!

ಧಾರವಾಡ ವಿಧಾನಸಭಾ ಕ್ಷೇತ್ರದ ಅರ್ಧ ಭಾಗ ವಾಣಿಜ್ಯ ಗಡಿಬಿಡಿಯ ನಗರ ಪ್ರದೇಶವಾದರೆ, ಇನ್ನರ್ಧ ವ್ಯವಸಾಯ ಪ್ರಧಾನವಾದ ಗ್ರಾಮೀಣ ಭಾಗ. ನಗರದ ಮಂದಿ ಒಂದಲ್ಲ ಒಂದು ವ್ಯಾಪಾರ, ಕೈಗಾರಿಕೆಗಳಲ್ಲಿ ದುಡಿತ, ಸರಕಾರಿ-ಖಾಸಗಿ ನೌಕರಿ-ಚಾಕರಿ ಮಾಡಿಕೊಂಡಿದ್ದಾರೆ. ನಗರ ಕೇಂದ್ರಿತ ಪ್ರದೇಶದಲ್ಲಿ ಸಮಸ್ಯೆಗಳು ಕಡಿಮೆ; ಹಳ್ಳಿಗಾಡಿನಲ್ಲಿ ರೈತರು ಹಲವು ಕಷ್ಟ-ನಷ್ಟದಲ್ಲಿದ್ದಾರೆ. ನಗರದಲ್ಲಿ ಸುಸಜ್ಜಿತ ರಸ್ತೆ-ವ್ಯವಸ್ಥಿತ ಸಾರಿಗೆ-ಉದ್ಯಾನವನ, 24×7 ಕುಡಿಯುವ ನೀರು, ಚರಂಡಿಗಳಂಥ ಬೇಡಿಕೆ ಕೇಳಿಬರುತ್ತಿದೆ.

ಕುಡಿಯುವ ನೀರು ಮತ್ತು ರಸ್ತೆ ಸಮಸ್ಯೆ ಕ್ಷೇತ್ರವಾಸಿಗಳನ್ನು ಕಾಡುತ್ತಿದೆ; ವಸತಿ ಯೋಜನೆ, ಸೂರಿಲ್ಲದ ದಲಿತರಿಗೆ ಸರಿಯಾಗಿ ದಕ್ಕುತ್ತಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿದೆ. ಕೃಷಿ ದುಬಾರಿ ಬಾಬತ್ತಾಗಿದೆ. ವ್ಯವಸಾಯೋತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ.

ಮಳೆ ಹಾನಿಯ ಪರಿಹಾರವಿನ್ನೂ ರೈತರಿಗೆ ಸಿಕ್ಕಿಲ್ಲ; ಬೆಳೆ ವಿಮೆಯೆಂಬುದು ಮೋಸದ ಮಾತಾಗಿದೆ. ನಂಜುಂಡಸ್ವಾಮಿ, ಬಾಬಾ ಗೌಡರ ನಂತರ ರೈತ ಸಂಘಟನೆಗಳನ್ನು ಆಳುವ ಮಂದಿ ವ್ಯವಸ್ಥಿತವಾಗಿ ಒಡೆದುಹಾಕಿರುವುದರಿಂದ ರೈತರ ಅಳಲು ಕೇಳಿಸದಂತಾಗಿದೆ. ಶಾಸಕ ಅಮೃತ ದೇಸಾಯಿಗೆ ಇದೆಲ್ಲ ಬೇಡದ ಜಂಜಡವಾದರೆ, ಸದಾ ಹಿಂದುತ್ವದಿಂದ ಚುನಾವಣೆ ಫಸಲು ತೆಗೆಯುವ ಧಾವಂತದಲ್ಲಿರುವ ಸಂಸದ-ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿಗೆ ರೈತರ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ ಎಂದು ಪ್ರಜ್ಞಾವಂತ ರೈತರೊಬ್ಬರು ದುಗುಡದಿಂದ ಹೇಳುತ್ತಾರೆ.

ಪ್ರಹ್ಲಾದ್ ಜೋಶಿ

ಕೈಗಾರಿಕೀಕರಣದ ಮಾರಕ ಪರಿಣಾಮ ಧಾರವಾಡ ವಿಧಾನಸಭಾ ಕ್ಷೇತ್ರದ ರೈತಾಪಿ ಸಮೂಹದ ಮೇಲಾಗುತ್ತಿದೆ. ಧಾರವಾಡ-ಹುಬ್ಬಳ್ಳಿಯ ಪ್ರಮುಖ ಕೈಗಾರಿಕಾ ವಸಾಹತು (ಬೇಲೂರು ಕೈಗಾರಿಕಾ ಪ್ರದೇಶ) ಇಲ್ಲಿದೆ. ಹೈಕೋರ್ಟ್ ಕಟ್ಟಡ, ಟಾಟಾ ಮಾರ್ಕೋಪೋಲಾ ಮೋಟರ್ಸ್ ಮತ್ತಿತರ ಕೈಗಾರಿಕೆಗಾಗಿ ರೈತರ ಭೂಮಿ ವಶಪಡಿಕೊಳ್ಳಲಾಗಿದೆ. ಸರಕಾರ ರೈತರ ಭೂಮಿಗೆ ನ್ಯಾಯಯುತ ಬೆಲೆಯನ್ನು ನಿಗದಿ ಪಡಿಸಿಲ್ಲ; ಗುಂಟೆಗೆ ಕೋಟ್ಯಾಂತರ ರೂ. ಬೆಲೆಬಾಳುವ ಜಮೀನನ್ನು ಎಕರೆಗೆ ಸಾವಿರದ ಲೆಕ್ಕದಲ್ಲಿ ದರ ನಿಗದಿಸಲಾಗಿದೆ; ಆ ಪರಿಹಾರವೂ ಸಮರ್ಪಕವಾಗಿ ವಿತರಿಸಿಲ್ಲ; ರೈತರು ಕೋರ್ಟು-ಕಚೇರಿ ಅಲೆಯುವುದು ತಪ್ಪಿಲ್ಲ. ನಿರಾಶ್ರಿತರಿಗೆ ಉದ್ಯೋಗಾವಕಾಶದಲ್ಲೂ ಮೋಸ-ವಂಚನೆ ಮಾಡಲಾಗಿದೆ. ಭೂಮಿ ವಶಪಡಿಸಿಕೊಳ್ಳುವಾಗಿನ ಒಪ್ಪಂದದಂತೆ ನಿರಾಶ್ರಿತರ ಮಕ್ಕಳಿಗೆ ತಾಂತ್ರಿಕ ಅಥವಾ ಕೌಶಲ್ಯ ತರಬೇತಿ ನೀಡಿ ಉತ್ತಮ ದರ್ಜೆಯ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಆದರೆ ರೈತರ ಮಕ್ಕಳಿಗೆ ’ಡಿ’ ದರ್ಜೆ ನೌಕರಿ ಕೊಡಲಾಗುತ್ತಿದೆ ಎಂಬ ಆಕ್ರೋಶ ನಿರಾಶ್ರಿತರಲ್ಲಿ ಮಡುಗಟ್ಟಿದೆ. ಟಾಟಾ ಮಾರ್ಕೋಪೋಲಾ ಮೋಟರ್ಸ್ ಕಾರ್ಮಿಕರದಂತೂ ಜ್ವಲಂತ ಸಮಸ್ಯೆ. ಇದ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಶಾಸಕರಿದ್ದಾರೆ ಎಂಬ ಆಕ್ಷೇಪ ಕ್ಷೇತ್ರದಲ್ಲಿದೆ.

ಚುನಾವಣೆ ರಂಗತಾಲೀಮು!

ಧಾರವಾಡ ಜಿಲ್ಲೆಯ ರಾಜಕಾರಣ ಮಿಲಾಪಿ ಕುಸ್ತಿ (ಮ್ಯಾಚ್ ಫಿಕ್ಸಿಂಗ್) ಎಂಬ ಮಾತು 2-3 ದಶಕದಿಂದಿದೆ. ಎದುರಾಳಿ ಪಕ್ಷಗಳ ಘಟಾನುಘಟಿಗಳು ಒಳಒಪ್ಪಂದ ಮಡಿಕೊಂಡು ನಿರಂತರವಾಗಿ ಗೆಲ್ಲುತ್ತ ಬಂದಿದ್ದಾರೆ. ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್ ಹಲವು ವರ್ಷ ಪದವೀಧರ ಕ್ಷೇತ್ರದ ಎಮ್ಮೆಲ್ಸಿಯಾಗಿದ್ದರು; ಕಾಂಗ್ರೆಸ್ ವಿರೋಧಿ ಪಾಳೆಯದ ಬಸವರಾಜ ಹೊರಟ್ಟಿ ಸತತ ಏಳು ಬಾರಿ ವಿವಿಧ ಪಕ್ಷದಿಂದ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಈ ಜಯದ ಹಿಂದೆ ಲಿಂಗಾಯತ ಸಮುದಾಯದ ಎಚ್ಕೆಪಿ-ಹೊರಟ್ಟಿ ಮಿಲಾಪಿಯಿದೆ. ಇಂಥ ’ಅನೈತಿಕ’ ಹೊಂದಾಣಿಕೆ ಅಸೆಂಬ್ಲಿ, ಪಾರ್ಲಿಮೆಂಟ್ ಚುನಾವಣೆಯಲ್ಲೂ ನಡೆಯುತ್ತಿರುತ್ತದೆ. ಆದರೆ ಕಾಂಗ್ರೆಸ್ಸಿಗರ ಉದಾಸೀನ-ಒಳಜಗಳ ಮತ್ತು ಹಿಂದುತ್ವದ ತಂತ್ರಗಾರಿಕೆಯಿಂದ ನಿರಂತರವಾಗಿ ಗೆಲ್ಲುತ್ತ ಬಂದಿದ್ದ ಬಿಜೆಪಿಗೆ 2014ರಲ್ಲಿ ಸೋಲಿನ ಭಯ ಮೂಡಿತ್ತು.

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಬಲ ಲಿಂಗಾಯತ ಪಂಚಮಸಾಲಿ ಪಂಗಡದ ವಿನಯ್ ಕುಲಕರ್ಣಿ ಬಿಜೆಪಿ ಎದುರಾಳಿ ಪ್ರಹ್ಲಾದ್ ಜೋಶಿಯನ್ನು ಸೋಲಿಸುವ ಅಸಲಿ ಕಾಳಗ ಮಾಡಿದ್ದರು. ಧಾರವಾಡದ ಲಿಂಗಾಯತ ಏಕಸ್ವಾಮ್ಯದ ಜಾತಿ ಆಖಾಡದಲ್ಲಿ ನಿರಂತರವಾಗಿ ಗೆಲ್ಲುತ್ತ ಬಂದಿದ್ದ ತೀರಾ ಸಣ್ಣ ಬ್ರಾಹ್ಮಣ ಜಾತಿಯ ಪ್ರಹ್ಲಾದ್ ಜೋಶಿಗೆ ನಡುಕ ಉಂಟಾಗಿತ್ತು. ಆ ನಂತರ ಕೇಂದ್ರ ಬಿಜೆಪಿ ಸರಕಾರದಲ್ಲಿ ಪ್ರಭಾವಿಯಾದ ಪ್ರಹ್ಲಾದ್ ಜೋಶಿ ಇಂದಲ್ಲ ನಾಳೆ ವಿನಯ್ ಕುಲಕರ್ಣಿ ಗಂಡಾಂತರಕಾರಿ ಎಂದು ಭಾವಿಸಿ ಸಿಬಿಐ ಬಳಸಿಕೊಂಡರು; ವಿನಯ್ ಪ್ರತಿಸ್ಪರ್ಧಿಗಳಿಗೆ ಫಂಡಿಂಗ್ ಮಾಡುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ವಿವರಿಸುತ್ತಾರೆ.

ಈ ಪೀಠಿಕೆ ಇಲ್ಲದಿದ್ದರೆ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಟಿಕೆಟ್ ಟ್ಯಾಕ್ಟಿಕ್ ಅರ್ಥವಾಗುವುದಿಲ್ಲ. ಬಿಜೆಪಿಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ತಿಂಗಳುಗಟ್ಟಲೆ ಜೈಲಲ್ಲುಳಿದು ಹೊರಬಂದಿರುವ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ನಿರ್ಬಂಧಿಸಿದೆ. ಇತ್ತ ಧಾರವಾಡ ಜಿಲ್ಲಾ ಬಿಜೆಪಿ ಸರ್ವೋಚ್ಚ ನಾಯಕ ಪ್ರಹ್ಲಾದ ಜೋಶಿ ಬಳಗ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಟಿಕೆಟ್ ಸಿಗದಂತೆ ನೋಡಿಕೊಳ್ಳುವ, ಟಿಕೆಟ್ ಸಿಕ್ಕರೂ ಕಾಂಗ್ರೆಸಿಗೆ ಹೋಗುವ ದಲಿತ-ಮುಸ್ಲಿಮ್ ಮತ ಬ್ಯಾಂಕ್ ವಿಭಜಿಸಿ ಗೆಲ್ಲದಂತೆ ಮಾಡುವ ತಂತ್ರಗಾರಿಕೆ ಹೆಣೆದಿದೆ ಎಂಬ ಮಾತು ಧಾರವಾಡದ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಕೇಳಿ ಬರುತ್ತಿದೆ!

2018ರ ಚುನಾವಣೆಯಲ್ಲಿ ಪಕ್ಕದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತ ಮುಸ್ಲಿಮ್ ಸಮುದಾಯದ ಪ್ರಭಾವಿ ಧುರೀಣ ಇಸ್ಮಾಯಿಲ್ ತಮಟಗಾರ್ ಈ ಬಾರಿ ತನಗೆ ಧಾರವಾಡದ ಟಿಕೆಟ್ ಕೊಡುವಂತೆ ಕಾಂಗ್ರೆಸ್ ಹಿರಿಯರಿಗೆ ದುಂಬಾಲು ಬಿದ್ದಿದ್ದಾರಂತೆ. ತಾನು ಪಶ್ಚಿಮದಲ್ಲಿ ಸ್ಪರ್ಧಿಸಿದರೆ ಮತೀಯ ಧ್ರುವೀಕರಣವಾಗಿ ಸೋಲಾಗುತ್ತದೆ; ವಿನಯ್ ಕುಲಕರ್ಣಿಗಾದರೆ ಪಶ್ಚಿಮ ಸುಲಭ ಕ್ಷೇತ್ರ. ಧಾರವಾಡದಲ್ಲಿ ನನಗೆ ಗೆಲ್ಲುವ ಅವಕಾಶ ಜಾಸ್ತಿಯಿದೆ; ಹಾಗಾಗಿ ಕ್ಷೇತ್ರ ಅದಲು-ಬದಲುಮಾಡಿ ಎಂಬ ತರ್ಕ ಇಸ್ಮಯಿಲ್ ತಮಟಗಾರ್ ಮಂಡಿಸುತ್ತಿದ್ದಾರೆ. ಕಾಂಗ್ರೆಸ್ ಅವಕಾಶ ಕೊಡದಿದ್ದರೆ ಜೆಡಿಎಸ್‌ನಿಂದ ಸ್ಪರ್ದೆಗಿಳಿವ ಯೋಚನೆಯಲ್ಲಿ ತಮಟಗಾರ್ ಇದ್ದಾರಂತೆ. ತಮಟಗಾರ್ ’ತಂಟೆ’ಯ ಹಿಂದೆ ಬಿಜೆಪಿಯ ಫಂಡಿಂಗ್ ಪಿತಾಮಹನ ಚಿತಾವಣೆಯಿದೆ ಎನ್ನಲಾಗುತ್ತಿದೆ. ಪಶ್ಚಿಮದಲ್ಲಿ ವಿನಯ್ ಕುಲಕರ್ಣಿಗೆ ಬಿಜೆಪಿಯ ಅರವಿಂದ್ ಬೆಲ್ಲದ್ ವಿರುದ್ಧ ಗೆಲುವು ಸುಲಭವಲ್ಲ ಎಂಬ ಎಣಿಕೆ ಈ ಶತ್ರು ಪಾಳಯದು.

ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುವ ಡಿಸ್‌ಮಿಸ್ಡ್ ಪೊಲೀಸ್ ಬಸವರಾಜ ಕೊರವರ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಾರ್ಟಿಯ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ. ಶಾಸಕ ಅಮೃತ ದೇಸಾಯಿ ಪರಮಾಪ್ತ ಮಿತ್ರನಾಗಿದ್ದ ಕೊರವರ್ ಈಗ ಪರಮ ಶತ್ರುವಾಗಿ ಮಾರ್‍ಪಟ್ಟಿದ್ದಾರೆ. ಪಕ್ಷೇತರನಾಗಿ ಕೊರವರ್‌ರನ್ನು ಅಖಾಡಕ್ಕಿಳಿಸಿ ಕಾಂಗ್ರೆಸ್‌ಗೆ ದಲಿತರ ಮತ ಬೀಳದಂತೆ ಮಾಡುವ ಯೋಜನೆ ಬಿಜೆಪಿಯ ಫಂಡಿಂಗ್ ಲೀಡರ್ ಹಾಕಿದ್ದಾರೆಂಬ ಚರ್ಚೆ ಧಾರವಾಡದಲ್ಲಿ ನಡೆದಿದೆ. ಕಾಂಗ್ರೆಸ್ ಟಿಕೆಟ್ ಪಡೆಯುವ ಮತ್ತು ಚುನಾವಣಾ ಸಂದರ್ಭದಲ್ಲಿ ಕ್ಷೇತ್ರ ಪ್ರವೇಶಕ್ಕೆ ಕೋರ್ಟ್ ಅನುಮತಿ ಕೊಡುವ ಆಸೆಯಲ್ಲಿ ವಿನಯ್ ಕುಲಕರ್ಣಿ ಇದ್ದಾರೆ. ಹಾಗೊಮ್ಮೆ ಚುನಾವಣೆಗೆ ನಿಲ್ಲಲು ಸಾಧ್ಯವಾಗದಿದ್ದರೆ ಮಡದಿ ಶಿವಲೀಲಾರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡುವ ಯೋಚನೆಯಲ್ಲಿ ವಿನಯ್ ಕುಲಕರ್ಣಿ ಇದ್ದಾರೆನ್ನಲಾಗುತ್ತಿದೆ. ಶಿವಲೀಲಾ ಕುಲಕರ್ಣಿ ಕ್ಷೇತ್ರದಲ್ಲಿ ಓಡಾಟವನ್ನೂ ಶುರುಮಾಡಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಮುಸುಕಿನ ಗುದ್ದಾಟ ಜೋರಾಗುತ್ತಿದೆ. ಧಾರವಾಡ ಬಿಜೆಪಿಯಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಣವಿದೆ; ಈ ಎರಡೂ ಪ್ರತಿಸ್ಪರ್ಧಿ ತಂಡಕ್ಕೆ ಆರ್‌ಎಸ್‌ಎಸ್ ಸಖ್ಯದ ಮಂತ್ರಿ ಪ್ರಹ್ಲಾದ್ ಜೋಶಿ ಹೈಕಮಾಂಡ್. ಪ್ರಹ್ಲಾದ್ ಜೋಶಿ ಕೃಪಾಕಟಾಕ್ಷ ಇರುವವರಿಗೆ ಟಿಕೆಟ್ ಸಿಗುತ್ತದೆಂಬ ಭಾವನೆ ಬಿಜೆಪಿಯಲ್ಲಿದೆ. ಶಾಸಕ ಅಮೃತ ದೇಸಾಯಿಗೆ ಟಿಕೆಟ್ ತಪ್ಪಿಸುವ ಪ್ರಯತ್ನವಾಗುತ್ತಿದೆ ಎಂಬ ವರ್ತಮಾನ ಬಿಜೆಪಿ ಬಿಡಾರದಿಂದ ಬರುತ್ತಿದೆ. ಅಮೃತ್ ಕಾರ್ಯಕರ್ತರಿಗೆ ಸ್ಪಂದಿಸುವುದಿಲ್ಲ; ಸಂಘ ತತ್ವ ಬದ್ಧತೆಯಿಲ್ಲದ ಜೆಡಿಎಸ್ ವಲಸಿಗ ಎಂಬ ಅಸಮಾಧಾನ ಕಟ್ಟರ್ ಕಮಲಿಗರ ಪಾಳೆಯದಲ್ಲಿದೆ; ಹಾಗಂತ ತಮ್ಮ ಜಮೀನ್ದಾರಿ ಕುಟುಂಬದ ಪ್ರಭಾವಳಿಯಲ್ಲಿರುವ ಸರಿಸುಮಾರು 30 ಸಾವಿರ ಮತ ಗಳಿಸಬಲ್ಲ ಅಮೃತ ದೇಸಾಯಿ ಕೈಬಿಡುವ ಧೈರ್ಯವೂ ಬಿಜೆಪಿ ಭೂಪರಿಗಿಲ್ಲ ಎನ್ನಲಾಗಿದೆ.

ಯಡಿಯೂರಪ್ಪರ ಕೆಜೆಪಿಯಿಂದ 2013ರಲ್ಲಿ ಸ್ಪರ್ಧಿಸಿ 21,589 ಮತ ಬಾಚಿದ್ದ ಮಾಜಿ ಜಿಪಂ ಸದಸ್ಯ ತವನಪ್ಪ ಅಷ್ಟಗಿ 2018ರಲ್ಲಿ ಬಿಜೆಪಿ ಹುರಿಯಾಳಾಗಲು ಶತಾಯಗತಾಯ ಪ್ರಯತ್ನ ಪಟ್ಟಿದ್ದರು. ಈ ಬಾರಿ ’ಗುರು’ ಬಿಜೆಪಿ ಟಿಕೆಟ್ ಕೊಡಿಸುತ್ತಾರೆಂಬ ನಂಬಿಕೆಯಲ್ಲಿದ್ದಾರೆ; ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರ ಶೆಟ್ಟಿ ಹೈಕಮಾಂಡ್ ಹಿರಿಯರ ಸಂಪರ್ಕ ಬಳಸಿ ಅಭ್ಯರ್ಥಿಯಾಗುವ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಜೆಡಿಎಸ್‌ಗೆ ಪರಿಗಣಿಸಬಹುದಾದಷ್ಟು ಮತಗಳಿವೆ. ಆದರೆ ಎಚ್ ಡಿ ಕುಮಾರಸ್ವಾಮಿ ನಂಬಿ ಪಕ್ಷ ಸಂಘಟಿಸುವ ಸಮರ್ಥ ಮುಂದಾಳುಗಳು ಇಲ್ಲದಾಗಿದೆ. ಹಾಗಾಗಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಳಬಾಗಿಲು: ಪಕ್ಷೇತರ ಅಭ್ಯರ್ಥಿಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್ ಬೀಳಲಿದೆಯೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...