ನಂದಿನಿ, 17 ವರ್ಷದ ಯುವತಿ. ತಮಿಳುನಾಡಿನ ಅರಿಯೂರು ಜಿಲ್ಲೆಯ ಸಿರುಕಡಂಬೂರ್ ಎಂಬ ಹಳ್ಳಿಯ ದಲಿತ ಸಮುದಾಯ ಪರೈಯ್ಯಾ ಕುಟುಂಬದ ಯುವತಿ. ತಮಿಳುನಾಡಿನಲ್ಲಿ ಪ್ರತ್ಯೇಕವಾಗಿ ದಲಿತರ ಕಾಲೋನಿಗಳು ಕಣ್ಣಿಗೆ ಎದ್ದು ಕಾಣುವಂತೆಯೇ ಇರುತ್ತವೆ. ಸಿರುಕಡಂಬೂರಿನ ದಲಿತರ ಕಾಲೋನಿಯೂ ಹಾಗೆಯೇ ಇತ್ತು. ಈ ವಿದ್ಯಮಾನ ಇಡೀ ಭಾರತಕ್ಕೆ ಅನ್ವಯಿಸುತ್ತದೆ ಬಿಡಿ. ನಂದಿನಿ ಓದಿದ್ದು 8ನೇ ತರಗತಿಯವರೆಗೆ ಮಾತ್ರ. ಕುಟುಂಬದ ಕಡುಬಡತನ ಹೆಚ್ಚು ಓದಲು ಅವಳಿಗೆ ಬಿಡಲಿಲ್ಲ. ಹಾಗಾಗಿ ಶಾಲೆಯನ್ನು ಬಿಟ್ಟವಳೇ ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡಲು ಆರಂಭಿಸಿದಳು. ಹಾಸ್ಯಭರಿತ ಮಾತು ಹಾಗು ಚುರುಕು ಬುದ್ಧಿಯಿಂದಾಗಿ ಅವಳು ಕೆಲಸ ಮಾಡುವ ಜಾಗದಲ್ಲಿಯೂ ಹೆಸರುವಾಸಿಯಾಗಿದ್ದಳು.
ಹೀಗಿದ್ದ ನಂದಿನಿ ದಿನಾಂಕ 29, ಡಿಸೆಂಬರ್ 2016ರಂದು ದಿಢೀರನೇ ಕಣ್ಮರೆಯಾದಳು. ಆ ದಿನ ಸಂಜೆ ನಂದಿನಿಯ ಸಂಬಂಧಿಕರೊಬ್ಬರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ’ನಂದಿನಿ ತನ್ನ ಬಳಿ ಇದ್ದಾಳೆ’ ಎಂದು ಹೇಳಿದ್ದ. ಗಾಬರಿಗೊಂಡ ನಂದಿನಿ ಕುಟುಂಬ ಪೊಲೀಸರಿಗೆ ದೂರು ನೀಡಿತು. ದೂರಿನಲ್ಲಿ ಮಣಿಕಂಠನ್ ಎಂಬ ವಣ್ಣಿಯಾರ್ ಹಿಂದೂ ಮೇಲ್ಜಾತಿಗೆ ಸೇರಿದ್ದ ವ್ಯಕ್ತಿಯ ವಿರುದ್ಧ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದರು. ಈ ಮಣಿಕಂಠನ್ ’ಹಿಂದೂ ಮುನ್ನಾಣಿ’ ಸಂಘಟನೆಯ ಕಾರ್ಯದರ್ಶಿಯಾಗಿದ್ದನು. ಹಿಂದೂ ಮುನ್ನಾಣಿ ಸಂಘಟನೆಯನ್ನು 1980ರಲ್ಲಿ ’ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ರಾಮಗೋಪಾಲನ್ ಅವರು ಸ್ಥಾಪಿಸಿದ್ದರು. ಈಗದು ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವ ಸಂಘಪರಿವಾರದ ಭಾಗವಾಗಿದೆ.
ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದರು. ಅಪ್ರಾಪ್ತೆ ನಂದಿನಿ ಕಾಣೆಯಾಗಿದ್ದ ಕಾರಣ ’ಮಿಸ್ಸಿಂಗ್ ಕಂಪ್ಲೇಂಟ್’ ದಾಖಲಿಸಿಕೊಂಡಿದ್ದರು. ವಿಚಾರಣೆಯ ವೇಳೆ ನಂದಿನಿಯ ಆಪ್ತ ಸ್ನೇಹಿತೆಯಾಗಿದ್ದ ದೇವಿಯೂ ಮಣಿಕಂಠನ ಹೆಸರನ್ನು ಪ್ರಸ್ತಾಪಿಸಿದಳು. ಅಷ್ಟೇ ಅಲ್ಲದೇ ನಂದಿನಿ ಮತ್ತು ಮಣಿಕಂಠನ್ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದುದಾಗಿ ಹಾಗೂ ಇತ್ತೀಚೆಗೆ ನಂದಿನಿ ’ತಾನು ಗರ್ಭಿಣಿ’ ಆಗಿರುವುದಾಗಿಯೂ ಹೇಳಿಕೊಂಡಿದ್ದಳೆಂದು ದೇವಿ ತಿಳಿಸಿದಳು. ಈ ಕಾರಣವಾಗಿ ದಿನಾಂಕ 5, ಜನವರಿ 2017ರಂದು ಮಣಿಕಂಠನ ವಿಚಾರಣೆಯನ್ನು ಪೊಲೀಸರು ಮಾಡಿದ್ದರು. ಅಂದು ಸಂಜೆಯ ವೇಳೆಗಾಗಲೇ ವಣ್ಣಿಯಾರ್ ಸಮುದಾಯದ ಹಿರಿಯರು ಆತನನ್ನು ಮನೆಗೆ ಕರೆದುಕೊಂಡು ಹೋದರು. ಈ ಘಟನೆಯಾದ ಮಾರನೇ ದಿನದಿಂದ ಮಣಿಕಂಠನ್ ನಾಪತ್ತೆಯಾದನು. ಆತನ ಮೇಲಿದ್ದ ಕುಟುಂಬದವರ ಅನುಮಾನ ನಿಜವಾಗಿತ್ತು. ಪೊಲೀಸರು ಮಣಿಕಂಠನ ಪತ್ತೆಗಾಗಿ ಶೋಧಿಸತೊಡಗಿದರು.
ಇದಾದ ವಾರದ ನಂತರ ಮಣಿಕಂಠನ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದನು. ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಣಿಕಂಠನ್‌ನನ್ನು ಪರಿಚಿತರು ಆಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖನಾದ ಮಣಿಕಂಠನ್ ಪೊಲೀಸರ ಬಳಿ ಬಾಯಿಬಿಟ್ಟ ವಿಷಯ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದರು. ಹಿಂದೂರಾಷ್ಟ್ರ ಚಿಂತನೆಯಲ್ಲಿ ಬೆಳೆದುಬಂದ ಮಣಿಕಂಠನೊಳಗಿದ್ದ ಮಾನವ ವಿರೋಧಿ ಜಾತಿಪದ್ಧತಿಯ ಕರಾಳ ಮುಖವನ್ನು ನೋಡಿ ಪೊಲೀಸರಷ್ಟೇ ಅಲ್ಲ, ಇಡೀ ತಮಿಳುನಾಡು ಬೆಚ್ಚಿಬಿದ್ದಿತು.
ನಂದಿನಿ ಕೆಲಸ ಮಾಡುತ್ತಿದ್ದ ಕಟ್ಟಡದ ಉಸ್ತುವಾರಿ ಹೊತ್ತಿದ್ದವನು ಮಣಿಕಂಠನ್. ಅಲ್ಲಿ ಅವರಿಬ್ಬರ ನಡುವೆ ಸಲುಗೆ ಬೆಳೆದು ಮಣಿಕಂಠನ ಪ್ರೀತಿಯೆಂಬ ನಾಟಕಕ್ಕೆ ತಲೆದೂಗಿದ್ದ ನಂದಿನಿ ಮೈಮನಸ್ಸನ್ನು ಒಪ್ಪಿಸಿದ್ದಳು. ಇದರಿಂದಾಗಿ ಗರ್ಭಿಣಿಯಾಗಿದ್ದ ನಂದಿನಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಕ್ಕೆ ’ಮೊದಲು ಗರ್ಭಪಾತ ಮಾಡಿಸಿಕೋ’ ಎಂದು ತಾಕೀತು ಮಾಡಿದ್ದ ಮಣಿಕಂಠನ್. ಅವಳೆಷ್ಟೇ ಬೇಡಿಕೊಂಡರೂ ಅದಕ್ಕೆ ಮಣಿಯದ ಮಣಿಕಂಠನ್ ಗರ್ಭಪಾತವಾದ ನಂತರವೇ ಮದುವೆ ಎಂದು ಹೇಳಿದ್ದನಾದರೂ ಅದಕ್ಕೆ ಒಪ್ಪಿಕೊಳ್ಳದ ನಂದಿನಿ ಇದ್ದ ವಿಷಯವನ್ನು ತನ್ನ ಆಪ್ತರೊಂದಿಗೆ ಹೇಳಿದ್ದಳು. ಇದನ್ನು ಸಹಿಸದ ಮಣಿಕಂಠನ್ ದಿನಾಂಕ 29, ಡಿಸೆಂಬರ್ 2016ರಂದು ನಂದಿನಿಯನ್ನು ಹೊರಗಡೆ ಭೇಟಿಯಾಗುವಂತೆ ತಿಳಿಸಿದ್ದ; ನಂದಿನಿ ಭೇಟಿ ಮಾಡಲು ಬಂದಾಗ ತನ್ನ ಮೂವರು ಸ್ನೇಹಿತರೊಡನೆ ಆಕೆಯನ್ನ ಅಪಹರಿಸಿದ್ದನು. ಮೂರು ದಿನಗಳ ನಂತರ ನಂದಿನಿಯ ಮೇಲೆ ಮೃಗಗಳಂತೆ ಎರಗಿದ ನಾಲ್ವರು ಗಂಡು ಪಿಶಾಚಿಗಳು ಒಬ್ಬರಾದ ಮೇಲೊಬ್ಬರಂತೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಿತ್ರಾಣಳಾಗಿ ಬಿದ್ದಿದ್ದ ನಂದಿನಿಯ ಜನನಾಂಗವನ್ನು ಬ್ಲೇಡಿನಿಂದ ಕೊಯ್ದು ಅವಳ ಗರ್ಭಕ್ಕೆ ಕೈ ಹಾಕಿ ಭ್ರೂಣವನ್ನು ಹೊರತೆಗೆದು ಬಿಸಾಡಿದರು. ಪ್ರಜ್ಞೆ ತಪ್ಪಿದ್ದ ನಂದಿನಿ ರಕ್ತಸ್ರಾವದಿಂದ ಅಲ್ಲಿಯೇ ಕೊನೆಯುಸಿರೆಳೆದಿದ್ದಳು. ಇಂತಹ ಭೀಕರ ಕೃತ್ಯವೆಸಗಿದ ಮಣಿಕಂಠನ್ ಮತ್ತು ಮೂವರು ಸ್ನೇಹಿತರು ಆಕೆಯ ದೇಹವನ್ನು ಸಂಪೂರ್ಣ ಬೆತ್ತಲೆಗೊಳಿಸಿ, ಆಭರಣವನ್ನು ಕಸಿದುಕೊಂಡು ಕೈಗಳನ್ನು ಕಟ್ಟಿ ಕಾಲಿಗೆ ಕಲ್ಲುಕಟ್ಟಿ ಬಾವಿಯೊಂದರಲ್ಲಿ ಬಿಸಾಕಿಬಿಟ್ಟಿದ್ದರು. ಯಾರಿಗೂ ವಾಸನೆಯಿಂದ ಅನುಮಾನ ಬರಬಾರದೆಂದು ನಾಯಿಯೊಂದನ್ನು ಕೊಂದು ಅದೇ ಬಾವಿಗೆ ಎಸೆದಿದ್ದರು. ಜನವರಿ 14ರಂದು ಪೊಲೀಸರು ಬಾವಿಯನ್ನು ಶೋಧಿಸಿ ನಂದಿನಿಯ ಕೊಳೆತ ದೇಹವನ್ನು ಹೊರತೆಗೆದಿದ್ದರು. ಕ್ರೂರಿ ಮಣಿಕಂಠನ್ ಮತ್ತು ಆತನ ಸ್ನೇಹಿತರು ಇಂದು ಜೈಲಿನಲ್ಲಿದ್ದಾರೆ.
ಈ ಇಡೀ ಪ್ರಕರಣ ತಿಳಿಸುವ ಸತ್ಯವೇನೆಂದರೆ ಹಿಂದೂರಾಷ್ಟ್ರ ಪ್ರತಿಪಾದಕರು ಆಳದಲ್ಲಿ ಜಾತಿವಾದಿಗಳೇ ಆಗಿದ್ದು ಮುಸ್ಲಿಮರ ವಿರುದ್ಧದ “ದ್ವೇಷ ಸಾಧಿಸಿ” ಸೆಣಸಾಡಲು ಮಾತ್ರ ಹಿಂದುತ್ವ ಶಕ್ತಿಗಳಿಗೆ ದಲಿತರು ಬೇಕೆಂದೂ, ಮದುವೆಯಾಗಲು ದಲಿತರು ಯಾವುದೇ ಕಾರಣಕ್ಕೆ ಬೇಡವೆಂಬುದನ್ನು! ಇವರೊಳಗಿನ ಜಾತಿಪ್ರಜ್ಞೆ ಅದೆಷ್ಟರಮಟ್ಟಿಗೆ ಆಳದಲ್ಲಿ ಹುದುಗಿದೆಯೆಂದರೆ ದಲಿತ ಹೆಣ್ಣಿನ ಗರ್ಭದಲ್ಲಿರುವ ತಮ್ಮ ಭ್ರೂಣವನ್ನೂ ಕೊಲ್ಲುವಷ್ಟು! ಹಿಂದೂಗಳ ದೃಷ್ಟಿಯಲ್ಲಿ ದಲಿತರೆಂದಿಗೂ ಹಿಂದೂಗಳಾಗಲು ಸಾಧ್ಯವೇ ಇಲ್ಲ. ಯಾರು ಏನೇ ಹೇಳಿದರೂ ಇದೇ ಸತ್ಯವೆಂದು ಪದೇಪದೇ ಸಾಬೀತಾಗುತ್ತಿದೆ. ದುರಂತವೆಂದರೆ ದಲಿತರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪದೇಪದೇ ಎಡವುತ್ತಲೇ ಇದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ


