Homeಅಂಕಣಗಳುಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

- Advertisement -
- Advertisement -

2012ರಲ್ಲಿ ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಹಲವು ಹಳ್ಳಿಗಳ ದಲಿತರ ಮೇಲೆ ನಡೆದ ದೌರ್ಜನ್ಯ ಭಾರತದ ಹಿಂದೂ ಮೇಲ್ಜಾತಿಗಳ ಮತ್ತೊಂದು ಮುಖವನ್ನು ತೋರಿಸುತ್ತದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್‌ಅವರು ’ಅಸ್ಪೃಶ್ಯರ ಮೇಲೆ ಹಿಂದೂ ಮೇಲ್ಜಾತಿಗಳು ಒಂದು ವರ್ಗವಾಗಿ ಶೋಷಿಸುತ್ತಾರೆ’ ಎಂದಿದ್ದರು. ಅದೇ ಮಾತನ್ನು ಪದೇಪದೇ ಸಾಬೀತುಪಡಿಸುವ ಬೆಳವಣಿಗೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆಯೇ ಧರ್ಮಾಪುರಿ.

ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ಬಲಿಷ್ಠವಾದ ಶೂದ್ರಜಾತಿ ವಣ್ಣಿಯಾರ್. ಭೂಸುಧಾರಣಾ ಕಾನೂನಿನಿಂದ ಅತಿ ಹೆಚ್ಚು ಲಾಭ ಪಡೆದುಕೊಂಡ ಶೂದ್ರ ಮೇಲ್ಜಾತಿ ಈ ವಣ್ಣಿಯಾರ್. ಧರ್ಮಾಪುರಿ ಜಿಲ್ಲೆಯಲ್ಲಿಯೂ ಇದೇ ವಣ್ಣಿಯಾರರ ಪ್ರಾಬಲ್ಯವೇ ಹೆಚ್ಚು. ಇಂದಿಗೂ ಸಹ ರಾಜಕೀಯ ಮೇಲುಗೈ ಸಾಧಿಸಿರುವ ವಣ್ಣಿಯಾರರು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಇಂತಹ ವಣ್ಣಿಯಾರ್ ಸಮುದಾಯ ಹಿಂದೂ ಜಾತಿಪದ್ಧತಿಯನ್ನು ಮೈಗೂಡಿಸಿಕೊಂಡು ಬೆಳೆದುಬಂದಿದೆ. ಕಾಲಾಂತರದಲ್ಲಿ ತಳಜಾತಿಯೊಂದು ಆರ್ಥಿಕವಾಗಿ ಸಬಲರಾಗುತ್ತಿದ್ದಂತೆ ಮೇಲ್ಜಾತಿ ಮೇಲರಿಮೆಯನ್ನು ರೂಢಿಸಿಕೊಂಡುಬಿಡುವುದೇ ಶ್ರೇಣೀಕೃತ ಜಾತಿಪದ್ಧತಿಯ ಬಹುಮುಖ್ಯ ಲಕ್ಷಣವಾಗಿದೆ. ಇದಕ್ಕೆ ವಣ್ಣಿಯಾರ್ ಶೂದ್ರರೂ ಹೊರತಲ್ಲ.

ಧರ್ಮಾಪುರಿ ಜಿಲ್ಲೆಯ ನಾಥಮ್ ಕಾಲೋನಿಯ ದಲಿತ ಸಮುದಾಯದ ಇಳವರಸನ್ ಹಾಗೂ ಪಕ್ಕದ ಸೆಲ್ಲಕೋಟ್ಟೈ ಹಳ್ಳಿಯ ವಣ್ಣಿಯಾರ್ ಸಮುದಾಯದ ದಿವ್ಯಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ದಿವ್ಯಾಳಿಗಿಂತ ಇಳವರಸನ್ ಒಂದು ವರ್ಷ ಚಿಕ್ಕವನಾದರೂ ವಯಸ್ಸು ಅವರಿಬ್ಬರ ಪ್ರೀತಿಗೆ ಅಡ್ಡ ಬರಲಿಲ್ಲ. ಜಾತಿ ಗೊತ್ತಿದ್ದರೂ ಒಬ್ಬರಿಗೊಬ್ಬರು ಇಷ್ಟಪಟ್ಟುಕೊಂಡರು. ಈ ವಿಷಯ ಇಳವರಸನ್ ಕುಟುಂಬಕ್ಕೆ ತಿಳಿದಿದ್ದರೂ ಅವರು ಅಷ್ಟೇನೂ ವಿರೋಧಿಸಲಿಲ್ಲ. ಇದಕ್ಕೆ ಕಾರಣ ಹಿಂದೂ ಧರ್ಮದೊಳಗಿನ ಮೇಲ್ಜಾತಿಯ ಮೇಲರಿಮೆ ಹಾಗೂ ಅಸ್ಪೃಶ್ಯತೆಯ ಕೀಳರಿಮೆ. ಈ ಎರಡು ಪ್ರೇಮಿಗಳ ಪ್ರೀತಿಯು ಉಂಟುಮಾಡಿದ ಅಲ್ಲೋಲಕಲ್ಲೋಲ ಅಂತಿಂತಹದ್ದಲ್ಲ.

ದಿವ್ಯ ಮತ್ತು ಇಳವರಸನ್ ಪ್ರೀತಿಗೆ ದಿವ್ಯಳ ಕುಟುಂಬ ಒಪ್ಪಿಗೆ ನೀಡುವುದಿಲ್ಲ ಎಂಬ ವಿಚಾರ ತಿಳಿದೊಡನೆ ಈ ಇಬ್ಬರೂ ಪ್ರೇಮಿಗಳು ದೂರ ಹೋಗಿ ಮದುವೆಯಾಗಲು ತೀರ್ಮಾನಿಸಿದರು. 2012ರ ಅಕ್ಟೋಬರ್ 12ರಂದು ಸೇಲಂ ದೇಗುಲದಲ್ಲಿ ಮದುವೆಯಾದರು. ಈ ವಿಚಾರ ದಿವ್ಯಾಳ ಹಳ್ಳಿಯಲ್ಲಿ ಕೋಲಾಹಲ ಉಂಟುಮಾಡಿತು. ದಿವ್ಯಾಳ ಕುಟುಂಬ ಎರಡು ವಾರಗಳ ಕಾಲ ಮಗಳಿಗಾಗಿ ಹುಡುಕಾಡುತ್ತಾ ಹಲವು ಸ್ಥಳಗಳಲ್ಲಿ ಶೋಧಿಸಿದ ಮೇಲೆ ವಣ್ಣಿಯಾರ್ ಜಾತಿ ಸಮುದಾಯದ ’ಪ್ರತಿಷ್ಠಿತ’ರ ಒತ್ತಾಯಕ್ಕೆ ಮಣಿದು ನವೆಂಬರ್ 7ರಂದು ವಣ್ಣಿಯಾರ್ ಜಾತಿ ಪಂಚಾಯತ್ ನಡೆಸಿತು. ಈ ಸಭೆಗೆ ಇಳವರಸನ್ ಕುಟುಂಬವನ್ನೂ ಆಹ್ವಾನಿಸಿತು. ಆದರೆ ವಣ್ಣಿಯಾರರ ಭಯಕ್ಕೆ ಬಿದ್ದು ಇಳವರಸನ್ ಕುಟುಂಬವೂ ಸಹ ಊರುಬಿಟ್ಟಿತ್ತು. ಅಷ್ಟೊತ್ತಿಗೆ ದಿವ್ಯಾ ಮತ್ತು ಇಳವರಸನ್ ನೆಲೆಸಿದ್ದ ಸ್ಥಳವೂ ಪತ್ತೆಯಾಗಿ ದೂರವಾಣಿಯ ಮುಖಾಂತರ ಮನೆಗೆ ಬರಲು ದಿವ್ಯಾಳನ್ನು ಕೇಳಿಕೊಂಡಾಗ ಆಕೆ ನಿರಾಕರಿಸಿದ್ದಳು. ಇದು ವಣ್ಣಿಯಾರ್ ಸಮುದಾಯದವರನ್ನು ಕೆರಳಿಸಿತ್ತು. ಪಂಚಾಯತ್ ಸಭೆಯಲ್ಲಿ ನೆರೆದಿದ್ದ ವಣ್ಣಿಯಾರ್ ಹಿರಿಯರು ದಿವ್ಯಾಳ ಮೇಲಿದ್ದ ಕೋಪವನ್ನೆಲ್ಲ ಅವಳ ತಂದೆಯ ಮೇಲೆ ತೀರಿಸಿಕೊಂಡರು. ಅವರನ್ನುದ್ದೇಶಿಸಿ ಬಹಳ ಕೆಟ್ಟದಾಗಿ ನಿಂದಿಸಿದರು. ’ನಮ್ಮ ವಣ್ಣಿಯಾರ್ ಜಾತಿಯ ಮಾನವನ್ನು ಕಳೆದೆ’ ಎಂದು ಆರೋಪಿಸಿದರು. ಅಂತಹ ಮಗಳನ್ನು ಹೆತ್ತದ್ದಕ್ಕೆ ನಾಚಿಕೆಯಾಗಬೇಕೆಂದರು ಜರೆದರು. ಈ ಅವಮಾನವನ್ನು ತಾಳಲಾರದೆ ದಿವ್ಯಾಳ ತಂದೆ ಅಂದೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆಯು ವಣ್ಣಿಯಾರರನ್ನು ಮತ್ತಷ್ಟು ಕೆರಳಿಸಿತು. ದಿವ್ಯಾಳ ತಂದೆಯ ಅಂತ್ಯಸಂಸ್ಕಾರಕ್ಕೆ ಅಕ್ಕಪಕ್ಕದ 22 ಹಳ್ಳಿಗಳ ವಣ್ಣಿಯಾರರು ಆಗಮಿಸಿದ್ದರು. ಅವರೆಲ್ಲರ ಬಾಯಿಗಳೂ ಬಹಿರಂಗವಾಗಿ ’ದಲಿತರಿಗೆ ಬುದ್ಧಿ ಕಲಿಸಬೇಕು’ ಎನ್ನುತ್ತಿದ್ದವು. ತನ್ನ ತಂದೆಯ ಅಂತಿಮ ದರ್ಶನ ಮಾಡಬೇಕೆಂದಿದ್ದ ದಿವ್ಯಾಳಿಗೆ ಕೊಲ್ಲುವ ಬೆದರಿಕೆ ಒಡ್ಡಲಾಗಿತ್ತು. ಇತ್ತ ತನ್ನ ತಂದೆಯ ಸಾವಿಗೆ ತಾನೇ ಕಾರಣವೆಂದುಕೊಂಡು ದುಃಖದಲ್ಲಿ ಮುಳುಗಿದ್ದ ದಿವ್ಯಾಳಿಗೆ ಇಳವರಸನ್ ಸಮಾಧಾನಪಡಿಸಿದ್ದ.

ದಿವ್ಯಾಳ ತಂದೆಯ ಆತ್ಮಹತ್ಯೆಯ ನಂತರ ವಣ್ಣಿಯಾರ್ ಸಂಘವು ದಲಿತರಿಗೆ ಬುದ್ಧಿ ಕಲಿಸಲಿಕ್ಕಾಗಿಯೇ ಒಂದು ಬೃಹತ್ ಸಭೆಯನ್ನು ಕರೆದಿದ್ದರ ಬಗ್ಗೆ ವರದಿಯಾಗಿದೆ. ಶವಸಂಸ್ಕಾರ ಮಾಡಿದ ನಂತರ ಅಂದೇ ಅಪರಾಹ್ನದ ವೇಳೆಯಲ್ಲಿ ಸುಮಾರು 1500 ಜನ ವಣ್ಣಿಯಾರರು ಈ ಹಿಂದೆ ಇಳವರಸನ್ ವಾಸವಾಗಿದ್ದ ನಾಥಮ್ ಕಾಲೋನಿಯ ಕಡೆ ಹೆಜ್ಜೆ ಹಾಕುತ್ತಾರೆ. ಕಾಲೋನಿಯ ಗಂಡಸರೆಲ್ಲರೂ ಕೆಲಸಕ್ಕೆ ತೆರಳಿದ್ದರಿಂದ ಹೆಂಗಸರು ಮಕ್ಕಳೇ ಮನೆಯಲ್ಲಿದ್ದರು. ಕೈಯ್ಯಲ್ಲಿ ಪೆಟ್ರೋಲ್ ಹಿಡಿದು ಬಂದಿದ್ದ ವಣ್ಣಿಯಾರರು ದಲಿತರ ಮನೆಗಳ ಮೇಲೆ ಸುರಿದು ಬೆಂಕಿ ಹಚ್ಚಿದರು. ಬೆಂಕಿ ಹಚ್ಚುವ ಮುನ್ನ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ ಲೂಟಿ ಮಾಡಿದ್ದರು. ಅಷ್ಟಕ್ಕೆ ತೃಪ್ತಿಗೊಳ್ಳದ ವಣ್ಣಿಯಾರ್ ಜಾತಿವಾದಿಗಳು ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿದ್ದ ಮತ್ತೊಂದು ದಲಿತ ಕಾಲೋನಿ ಅಣ್ಣಾನಗರಕ್ಕೆ ತೆರಳಿ ಅಲ್ಲಿಯ ದಲಿತರ ಮನೆಗೂ ಬೆಂಕಿಹಚ್ಚಿದರು. ಅಲ್ಲಿಂದ ಮತ್ತೆ ಕೊಡಂಪಟ್ಟಿ ದಲಿತ ಕಾಲೋನಿಗೂ ತೆರಳಿ ಅಲ್ಲಿಯೂ ಬೆಂಕಿ ಹಚ್ಚಲಾಯಿತು. ಅಷ್ಟೊತ್ತಿಗೆ ಪೊಲೀಸ್ ತುಕಡಿ ಬಂದ ಕಾರಣ ಎಲ್ಲರೂ ಓಡಿಹೋದರು. ಈ ಹಿಂಸಾಚಾರದಲ್ಲಿ ಸಾವುಗಳು ಸಂಭವಿಸುವುದಿಲ್ಲವಾದರೂ ಹಲವು ಹೆಂಗಸರು ಮಕ್ಕಳು ಆಸ್ಪತ್ರೆ ಸೇರಿದರು. ಪೊಲೀಸರ ಪ್ರಕಾರ 268 ಮನೆಗಳನ್ನು ವಣ್ಣಿಯಾರ್ ಜಾತಿವಾದಿಗಳು ಸುಟ್ಟು ಭಸ್ಮಮಾಡಿದ್ದರು.

ಈ ಘಟನೆಯು ತಮಿಳುನಾಡಿನ ತುಂಬಾ ಹೆಚ್ಚು ಸದ್ದು ಮಾಡಿದ ಕಾರಣ 146 ಮಂದಿಯನ್ನು ಬಂಧಿಸಲಾಗುತ್ತದೆ. ಆದರೆ ಅವರೆಲ್ಲರಿಗೂ ಬೇಗ ಜಾಮೀನು ಸಿಕ್ಕಿತಲ್ಲದೇ ಕೊನೆಗೆ ಸಾಕ್ಷಿ ಕೊರತೆಯಿಂದಾಗಿ ಎಲ್ಲರೂ ಬಿಡುಗಡೆಗೊಳ್ಳುತ್ತಾರೆ. ದಲಿತರಿಗೆ ಭಿಕ್ಷೆಯಂತೆ ಪರಿಹಾರ ನೀಡಲಾಗುತ್ತದೆ. ಹಲವು ದಲಿತ ಕುಟುಂಬಗಳು ಊರುಬಿಟ್ಟು ಹೋಗುತ್ತವೆ.

ಧರ್ಮಾಪುರಿಯ ಈ ಮೇಲಿನ ಘಟನೆ ಅಲ್ಲಿಗೆ ಮುಗಿಯುವುದಿಲ್ಲ. ಮತ್ತೊಂದು ಹೃದಯ ವಿದ್ರಾವಕ ಪ್ರಕರಣ ಜರುಗುತ್ತದೆ.

ಅಲ್ಲಿಂದ ಸುಮಾರು 5 ತಿಂಗಳ ನಂತರ ದಿವ್ಯಾ ತಾಯಿ ’ತನ್ನ ಮಗಳನ್ನು ಇಳವರಸನ್ ಅಪಹರಿಸಿದ್ದಾನೆ’ ಎಂದು ಮದ್ರಾಸ್ ಹೈಕೋರ್ಟ್‌ಗೆ ಮೊರೆಹೋದರು. ಜೂನ್ ತಿಂಗಳಿನಲ್ಲಿ ದಿವ್ಯಾ ತನ್ನ ತಾಯಿಯನ್ನು ಭೆಟಿಯಾದಳು. ಅಂದು ದಿವ್ಯಾಳ ಮನವೊಲಿಸುವಲ್ಲಿ ಅವಳ ತಾಯಿ ಯಶಸ್ವಿಯಾದರು. ತನ್ನ ತಂದೆಯ ಸಾವಿಗೆ ಪಶ್ಚಾತ್ತಾಪವಾಗಿ ಇಳವರಸನ್‌ನನ್ನು ಬಿಟ್ಟುಬಿಡಬೇಕೆಂದು ಮಾಡಿದ ಬ್ಲಾಕ್‌ಮೇಲ್ ತಂತ್ರಕ್ಕೆ ದುಃಖದ ಮಡುವಿನಲ್ಲಿದ್ದ ದಿವ್ಯಾ ಇಲ್ಲವೆನ್ನಲಿಲ್ಲ. ಕೋರ್ಟಿನ ಮುಂದೆ ಜುಲೈ 3, 2013ರಂದು ಇಳವರಸನ್ ಮುಂದೆಯೇ ದಿವ್ಯಾ ’ನನಗೂ ಇಳವರಸನ್‌ಗೂ ಯಾವುದೇ ಸಂಬಂಧವಿಲ್ಲ’ ಎಂದುಬಿಟ್ಟಳು. ಇದರಿಂದ ಇಳವರಸನ್ ತೀವ್ರ ಆಘಾತಕ್ಕೊಳಗಾದನು. ಅವನಿಗೆ ಸ್ನೇಹಿತರು ಕುಟುಂಬ ಧೈರ್ಯ ನೀಡಿತು. ಆದರೆ ಮಾರನೇ ದಿನ ರೈಲ್ವೇ ಹಳಿಯ ಮೇಲೆ ಅವನ ಹೆಣ ಸಿಕ್ಕಾಗ ಇಡೀ ಧರ್ಮಾಪುರಿಯೇ ಬೆಚ್ಚಿಬಿದ್ದಿತು. ವಣ್ಣಿಯಾರರು ಆತ್ಮಹತ್ಯೆಯೆಂದು ಪ್ರಚಾರ ಆರಂಭಿಸಿದ್ದರು. ಇಳವರಸನ್ ಕುಟುಂಬ ಇದನ್ನು ನಂಬಲೂ ಇಂದಿಗೂ ತಯಾರಿಲ್ಲ. ಅದು ವಣ್ಣಿಯಾರರು ನಡೆಸಿದ ’ಮರ್‍ಯಾದೆಗೇಡಿ ಹತ್ಯೆ’ ಎಂದೇ ನಂಬಿದೆ. ಇದಕ್ಕೆ ಸಾಕ್ಷಿಯೆಂಬಂತೆ ವಿದ್ಯಾವಂತನಾಗಿದ್ದ ಇಳವರಸನ್ ಆತ್ಮಹತ್ಯೆ ಪತ್ರವನ್ನೂ ಬರೆದಿರಲಿಲ್ಲ. ಈ ಸಾವು ಕೇವಲ ರೈಲಿಗೆ ಸಿಕ್ಕಿರುವುದರಿಂದ ಆಗಿದೆ ಎಂದು ಶವಪರೀಕ್ಷೆಯು ಹೇಳಿದೊಡನೆ ಪೊಲೀಸರೂ ಸಹ ಆತ್ಮಹತ್ಯೆ ಎಂದು ಷರಾ ಬರೆದು ಸುಮ್ಮನಾದರು. ತನ್ನ ತಂದೆಯ ಸಾವಿಗೆ ತಾನೇ ಕಾರಣ ಎಂದು ಇಳವರಸನ್‌ನನ್ನು ಬಿಟ್ಟು ಹೋದ ದಿವ್ಯಾ ಈಗ ಅವನ ಸಾವಿಗೆ ತಾನೇ ಕಾರಣವೆಂದು ಕೊರಗುತ್ತಿರಬಹುದು. ಇಲ್ಲವೇ ಜಾತಿಯ ಮೇಲರಿಮೆ ಅವಳನ್ನೂ ಸೆಳೆದುಕೊಂಡಿರಬಹುದು.

ಅಂತರ್ಜಾತಿ ಪ್ರೇಮವೆಂಬುದು ಭಾರತದಲ್ಲಿನ ಜಾತಿವಾದಿಗಳನ್ನು ಕೆರಳಿಸುತ್ತದೆ. ಅದು ಎದುರು ಸಮುದಾಯದವನನ್ನು ಕೊಲ್ಲಲು ಹಿಂದೆಮುಂದೆ ಯೋಚಿಸುವುದಿಲ್ಲ. ಅಷ್ಟೇ ಏಕೆ ಸ್ವಂತ ಮಗಳನ್ನೇ ಕೊಲ್ಲಲು ಯೋಚಿಸುವುದಿಲ್ಲ. ’ಮರ್‍ಯಾದೆ’ ಎಂಬ ಹೆಸರಿನಲ್ಲಿ ಜಾತಿರಕ್ಷಣೆಗೆ ನಿಲ್ಲುವ ಹಿಂದೂ ಮೇಲ್ಜಾತಿಯ ಅಜ್ಞಾನ ಇಡೀ ದೇಶವನ್ನೇ ಬಲಿ ಪಡೆಯುವುದರಲ್ಲಿಯೂ ಹಿಂದೆ ಮುಂದೆ ನೋಡಲಾರದು. ಅದರಲ್ಲೂ ದಲಿತರೇನಾದರೂ ಮೇಲ್ಜಾತಿಯ ಹೆಣ್ಣನ್ನು ಇಷ್ಟಪಟ್ಟರೆ ಮುಗಿದೇಹೋಯಿತು. ಅಲ್ಲೊಂದು ಕೊಲೆ ನಡೆಯಲೇಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿಯೂ ಈ ಬೆಳವಣಿಗೆಗಳೇನು ಕಡಿಮೆಯಾಗಿಲ್ಲ. ಆಶ್ಚರ್ಯವೆಂದರೆ ಅವು ಮತ್ತಷ್ಟು ಹೆಚ್ಚಾಗುತ್ತಲೇ ಇವೆ. ಕಪೋಲಕಲ್ಪಿತ ’ಲವ್ ಜಿಹಾದ್’ ಹೆಸರಿನಲ್ಲಿ ಹಿಂದೂ-ಮುಸ್ಲಿಂ ಪ್ರೇಮಿಗಳನ್ನು ಬಲಿಪಡೆಯುವ ಹಿಂದೂ ಮೂಲಭೂತವಾದವು, ’ಜಾತಿ ಮರ್‍ಯಾದೆ’ ಹೆಸರಿನಲ್ಲಿ ದಲಿತರನ್ನು ಬಲಿಪಡೆಯುತ್ತದೆ. ಹಿಂದೂ ಮುಸ್ಲಿಂ ಗಲಭೆಯ ವೇಳೆ ದಲಿತರನ್ನು ಹಿಂದೂಗಳನ್ನಾಗಿಸಿಕೊಳ್ಳುವ ಹಿಂದುತ್ವ, ಅಂತರ್ಜಾತಿ ಪ್ರೇಮದ ವೇಳೆ ಅದೇ ದಲಿತರನ್ನು ಅಸ್ಪೃಶ್ಯರನ್ನಾಗಿ ನೋಡುತ್ತದೆ. ದುರಂತವೆಂದರೆ ಈ ಹುನ್ನಾರ ದಲಿತರು ಹಾಗೂ ಮುಸ್ಲಿಮರಿಬ್ಬರಿಗೂ ಸರಿಯಾಗಿ ಅರ್ಥವಾಗಿಲ್ಲದಿರುವುದು.


ಇದನ್ನೂ ಓದಿ: ಮಾತು ಮರೆತ ಭಾರತ-23; ಮಿರ್ಚ್‌ಪುರ ಫೈಲ್: ಊರುಬಿಟ್ಟ ದಲಿತರಿಗೆ ಧೈರ್ಯ ತುಂಬುವವರಾರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...