‘ಭೂತಾರಾಧನೆ ಹಿಂದೂ ಸಂಸ್ಕೃತಿಯಲ್ಲ’ ಎಂದು ನಟ ಚೇತನ್ ಅಹಿಂಸಾ ಹೇಳಿಕೆ ನೀಡಿದ ಬಳಿಕ ಸುಳ್ಳು ಸುದ್ದಿಗಳಿಗೆ ಹೆಸರಾದ ಬಲಪಂಥೀಯ ಫೇಸ್‌ಬುಕ್ ಪೇಜ್ ‘ಪೋಸ್ಟ್‌ಕಾರ್ಡ್’ನಲ್ಲಿ ‘ಹೇ ಹಿಂದೂ ಎದ್ದೇಳು’ ಎಂಬ ಪೋಸ್ಟರ್ ಹಾಕಲಾಗಿದ್ದು, ಅದನ್ನು ನಾನಾ ರೂಪದಲ್ಲಿ ಜನರು ವ್ಯಂಗ್ಯ ಮಾಡಿದ್ದಾರೆ.
ಕಾಂತಾರ ಸಿನಿಮಾದ ಚಿತ್ರವನ್ನು ಈ ಪೋಸ್ಟರ್‌ನಲ್ಲಿ ಬಳಸಲಾಗಿದೆ. “ಹೇ ಹಿಂದೂ, ಎದ್ದೇಳು” ಎಂದು ದೊಡ್ಡ ಶೀರ್ಷಿಕೆಯನ್ನು ನೀಡಿ, “ನಿನ್ನತನಕ್ಕೆ ಧಕ್ಕೆಯಾದಾಗ ನೀ ಸುಮ್ಮನಿದ್ದರೆ ನಿನ್ನ ಅಂತ್ಯಕ್ಕೆ ನೀನೇ ಕಾರಣವಾದಂತೆ” ಎಂದು ಬರೆಯಲಾಗಿದೆ.

ಹಿಂದೂ- ಮುಸ್ಲಿಂ ಸಮುದಾಯಗಳ ನಡುವೆ ಒಡಕುಗಳನ್ನು ಮೂಡಿಸಲು ಈ ರೀತಿಯ ಪೋಸ್ಟ್‌ಗಳನ್ನು ‘ಪೋಸ್ಟ್‌ಕಾರ್ಡ್’ ನಿರಂತರ ಮಾಡುತ್ತಿರುವುದನ್ನು ಗಮನಿಸುತ್ತಾ ಬಂದಿರುವ ಜನರು, ‘ಹೇ ಹಿಂದೂ ಎದ್ದೇಳು’ ಎಂಬ ಟ್ಯಾಗ್‌ಲೈನ್‌ನಲ್ಲಿಯೇ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ಹೇ ಹಿಂದೂ ಎದ್ದೇಳು’ ಪೋಸ್ಟರ್‌ನ ವಿವಿಧ ಅವತರಣಿಕೆಗಳು ವೈರಲ್ ಆಗುತ್ತಿವೆ.
“ಹೇ ಹಿಂದೂ, ಎದ್ದೇಳು, ಪೆಟ್ರೋಲ್ ರೇಟು 105 ಆಗಿದೆ. ಗ್ಯಾಸ್ ಸಿಲಿಂಡರ್ 1100 ಆಗಿದೆ. ಡಾಲರ್ ಬೆಲೆ 83 ಆಗಿದೆ. ಎಲ್ಲಾ ಬೆಲೆ ಜಾಸ್ತಿ ಆಗ್ತಿದೆ. ಏಳು ಎದ್ದೇಳು, ಚುನಾವಣೆ ಬಂತು ಬಿಜೆಪಿಯನ್ನು ಸೋಲಿಸು” ಎಂಬ ಪೋಸ್ಟರ್ ಹರಿದಾಡಿದೆ.
ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿದಿರುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಸೇರಿದಂತೆ ಮೊದಲಾದ ಸಂಗತಿಗಳನ್ನು ಹೇ ಹಿಂದೂ ಎದ್ದೇಳು ಪೋಸ್ಟರ್‌ಗಳ ಮೂಲಕ ಮುನ್ನೆಲೆಗೆ ತರಲಾಗಿದೆ.


‘ಹಿಂದೂ ನಾವೆಲ್ಲ ಒಂದು’ ಎನ್ನುವ ಸಂಘಪರಿವಾರ ದಲಿತರ ಮೇಲೆ ದೌರ್ಜನ್ಯವಾದಾಗ ಮೌನ ತಾಳಿರುವುದನ್ನು ಈ ಅಭಿಯಾನದಲ್ಲಿ ಪ್ರಶ್ನಿಸಲಾಗಿದೆ.
“ಹೇ ಹಿಂದೂ ಎದ್ದೇಳು, ರಾಮನಗರದಲ್ಲಿ ಒಬ್ಬ ದಲಿತ ಬಾಲಕಿಯ ಮೇಲೆ ನಿವೃತ್ತ ಪೊಲೀಸ್ ಪೇದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹೇ ಹಿಂದೂ ಎದ್ದೇಳು, ಸ್ವಾಮೀಜಿಯೊಬ್ಬರ ಮೇಲೆ ಅತ್ಯಾಚಾರದ ಆರೋಪ ಬಂದಿದೆ, ಧರ್ಮಸ್ಥಳದ ಬಳಿ ಬಜರಂಗದಳದ ಮುಖಂಡನೊಬ್ಬ ದಲಿತ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾನೆ. ಪೆದ್ದನಹಳ್ಳಿಯ ಇಬ್ಬರು ದಲಿತರ ಹೆಣ ರಾತ್ರೋರಾತ್ರಿ ಬಿದ್ದಿವೆ. ಹೇ ಹಿಂದೂ ಎದ್ದೇಳು, ಶಿಕ್ಷಕನೇ ದಲಿತ ಬಾಲಕನನ್ನು ಹೊಡೆದು ಕೊಂದಿದ್ದಾನೆ. ಹೇ ಹಿಂದೂ ಎದ್ದೇಳು, ಗುಬ್ಬಿಯಲ್ಲಿ ದೇವಸ್ಥಾನಕ್ಕೆ ಒಳಹೋದ ದಲಿತನಿಗೆ ಅರ್ಚಕ ಜಾತಿ ನಿಂದನೆ ಮಾಡಿದ್ದಾನೆ. ಹೇ ಹಿಂದೂ ಎದ್ದೇಳು, ದೇವರ ಕೋಲು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ ಛೀಮಾರಿ ಹಾಕಿದ್ದಾರೆ. ಹೇ ಹಿಂದೂ ಎದ್ದೇಳು, ಚಿಕ್ಕಮಗಳೂರಲ್ಲಿ ಗರ್ಭಿಣಿ ದಲಿತ ಮಹಿಳೆಗೆ ಹೊಡೆದು ಜಗತ್ತನೇ ನೋಡದ ಮಗುವನ್ನೇ ಕೊಲ್ಲಲಾಗಿದೆ” ಎಂಬ ಸಾಲುಗಳು ವೈರಲ್ ಆಗುತ್ತಿವೆ.
“ಹೇ, ಹಿಂದೂ ಎದ್ದೇಳು. ಚುನಾವಣೆ ಹತ್ತಿರವಾಗುತ್ತಿದೆ” ಎಂದು ಟೀಕಿಸಲಾಗಿದೆ.
ಲೇಖಕ ರುದ್ರ ಪುನೀತ್ ಆರ್.ಸಿ. ಅವರು ಬರೆದಿರುವ ಪೋಸ್ಟ್‌ಅನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. “ಏಳೋದೇನೋ ಏಳೋಣ, ಆದ್ರೆ ಯಾರ್ ಎಳ್ಬೇಕು ಅನ್ನೋದನ್ನ ಸ್ಪೆಸಿಫಿಕ್ ಆಗಿ ಹೇಳ್ಬೇಕಲ್ವಾ?” ಎಂದು ಪ್ರಶ್ನಿಸಿರುವ ಅವರು, “ಹೇ ಹಿಂದೂ ಎದ್ದೇಳು ಅಂದ್ರೆ, ಬ್ರಾಹ್ಮಣರು ಎಳ್ಬೇಕಾ ? ಕ್ಷತ್ರಿಯರು ಎಳ್ಬೇಕಾ? ವೈಶ್ಯರು ಎಳ್ಬೇಕಾ? ಲಿಂಗಾಯತರು? ಒಕ್ಕಲಿಗರು? ಗಾಣಿಗರು? ಕುಂಚಿಟಿಗರು? ಭಂಟರು? ಮೊಗವೀರರು? ಪೂಜಾರರು ಮಾದಿಗರು? ಹೊಲೆಯರು? ದಕ್ಕಲಿಗರು? ಲಂಬಾಣಿಗರು? ಭೋವಿಗಳು? ಕೊರಚ ಕೊರಮರು? ಅಲೆಮಾರಿಗಳು ಆದಿವಾಸಿಗಳು? ಹಂದಿಜೋಗಿ, ಮಾಂಗ್ ಗಾರುಡಿಗಳು? ಯಾರು ಏಳಬೇಕು” ಎಂದು ಕೇಳಿದ್ದಾರೆ.
“ನಾನು ಹಿಂದೂನೇ, ಎಲೆಕ್ಷನ್ ಬಂದಾಗ, ಯಾತ್ರೆ ಮೆರವಣಿಗೆ ರ್‍ಯಾಲಿ ನಡೆದಾಗ ಮಾತ್ರ. ಬಾಕಿ ಸಮಯದಲ್ಲಿ ನನ್ನನ್ನು ಒಂದು ಜಾತಿಗೆ ಕಟ್ಟಿಹಾಕಿ ಶೋಷಣೆ ಮಾಡ್ತಾರೆ. ನಾನೂ ಹಿಂದೂ ಅಂತೆ- ಆದರೆ ನಾನು ನನ್ನ ಮದುವೆಯಲ್ಲಿ ಕುದುರೆ ಏರಿದರೆ ನನ್ನನ್ನು ಹೊಡೆದು ಕೊಲ್ಲುತ್ತಾರೆ. ನಾನು ಹಿಂದೂ ಅಂತೆ- ಆದರೆ ಉಡುಪಿಯ ಕೋಟಾ ಬಳಿ ನನ್ನ ಮದುವೆಯಲ್ಲಿ ಡಿಜೆ ಹಾಕಿದ್ದಕ್ಕೆ ನನ್ನನ್ನು ಮದುಮಗ ಅಂತಲೂ ನೋಡದೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಬೆತ್ತಲೆ ನಿಲ್ಲಿಸುತ್ತಾರೆ. ನಾನು ಹಿಂದೂ ಅಂತೆ- ಕೆಎಎಸ್ ಪರೀಕ್ಷೆ ಬರೆದು ಬಂದು ನನ್ನ ಹಳ್ಳಿಗೆ ಬಸ್ ಸಿಗಲಿಲ್ಲವೆಂದು ಹತ್ತಿರವಿದ್ದ ದೇವಸ್ಥಾನವೊಂದರಲ್ಲಿ ಮಲಗಿದ್ದಕ್ಕೆ ನನ್ನನ್ನ ಕತ್ತೆಮೇಲೆ ಮೆರವಣಿಗೆ ಮಾಡುತ್ತಾರೆ. ನಾನು ಹಿಂದೂ ಅಂತೆ- ಆದರೆ ನನ್ನ ತಂಗಿ ದಾನಮ್ಮನ ಅತ್ಯಾಚಾರವಾದಾಗ ನಮ್ಮ ನ್ಯಾಯಕ್ಕಾಗಿ ಯಾರೂ ಬರಲಿಲ್ಲ. ನಾನು ಹಿಂದೂ ಅಂತೆ- ನನ್ನ ಕೇರಿಗಳು, ತಾಂಡಾಗಳು, ಓಣಿಗಳು, ಹಟ್ಟಿಗಳು, ಡೇರೆಗಳು ಈಗಲೂ ಊರಾಚೆ ಇವೆ”- ಹೀಗೆ ಹಲವಾರು ನೋವುಗಳನ್ನು ಪುನೀತ್ ವ್ಯಕ್ತಪಡಿಸಿದ್ದಾರೆ.
‘ಹೇ ಹಿಂದೂ ಎದ್ದೇಳು’ ರೀತಿಯಲ್ಲಿ ‘ಹೇ ದಲಿತ ಎದ್ದೇಳು’ ಅವತರಣಿಕೆಯನ್ನು ‘ನಾನೊಬ್ಬ ದಲಿತ’ ಪೇಜ್ ಪೋಸ್ಟ್ ಮಾಡಿದೆ. ನೂರಾರು ಜನರು ಈ ಪೋಸ್ಟರ್‌ಗಳನ್ನು ಶೇರ್ ಮಾಡುತ್ತಿದ್ದಾರೆ.







‘ನಾವು ಹೊಲೆಯರು- ಚಲವಾದೇರು’ ಪೇಜ್‌ನಲ್ಲಿ ‘ಎದ್ದೇಳು ಆದಿಮ’ ಅವತರಣಿಕೆಯನ್ನು ಪೋಸ್ಟ್ ಮಾಡಲಾಗಿದೆ.
“ಆರಂಬ ಮಾಡಿದ ನಮ್ಮನು ಅಡಿಯಾಳಾಗಿಸಿಕೊಂಡಿದ್ದಾರೆ. ನಮ್ಮ ಮುಟ್ಟಿ ಮೈಲಿಗೆಯೆಂದು ಕೈ ತೊಳೆದುಕೊಂಡಿದ್ದಾರೆ. ನೆಡೆದ ದಾರಿಗೆ ಪಂಚಗವ್ಯ ಚೆಲ್ಲಿ ಶುಚಿಗೊಳಿಸಿದ್ದಾರೆ. ನಾವೆಲ್ಲ ಒಂದೇ ಎಂದು ತಲೆಸವರಿ, ನಮ್ಮ ಮೇಲಾದ ದೌರ್ಜನ್ಯಗಳ ಕಂಡು ಕಾಣದಂತೆ ಸುಮ್ಮನಿದ್ದಾರೆ. ನಮ್ಮ ಹೊಲತಿ ಮಾದಿಗಿತ್ತಿ ಕೊರತಿ ಪಾಣರತಿ ಊರದೇವರ ಮಾರಿದೇವರ ಬಿಸಿಲವ್ವ ಬೆಳ್ಳಿಪಣದವ್ವರನ್ನೆಲ್ಲಾ ಲಲಿತಾ ಗಾಯಿತ್ರಿ ಶಾಖಾಂಬರಿ ಶ್ವೇತಾವರಾಹಿಯಾಗಿಸಿಕೊಂಡಿದ್ದಾರೆ. ನಮ್ಮ ವಾಸ್ತವ್ಯದ ತೆಂಕಣ ದಿಕ್ಕನ್ನು ಕೆಟ್ಟ ದಿಕ್ಕೆಂದಿದ್ದಾರೆ. ಹೊಲಯ ಮಾದಿಗ ಕೊರಗ ಪಾಣ ಪಂಬದ ನಲಿಕೆ ಪರವರ ಹೆಸರಿನರ್ಥಗಳಗೆಡಿಸಿ ಆ ಹೆಸರುಗನ್ನ ಬಳಸಲು ಕೀಳರಿಮೆಗೆ ಬೀಳುವಂತ ಸ್ಥಿತಿ ನಿರ್ಮಿಸಿದ್ದಾರೆ. ನಮ್ಮ ಶೋಷಣೆಯ ಇತಿಹಾಸದೊಳಗೆ ನಮ್ಮ ವೈಭವದ ಇತಿಹಾಸವನ್ನು ಕರಗಿಸಿ ರಾಜಕೀಯ ದಾಳವಾಗಿಸಿಕೊಂಡಿದ್ದಾರೆ. ನಮ್ಮ ಊರದ್ಯಾವ್ರು ಮಾರಿದ್ಯಾವ್ರು ಭೂತಗಳ ಕ್ಷುದ್ರದೈವಗಳೆಂದು ಜರಿದಿದ್ದಾರೆ. ನಮ್ಮ ಇತಿಹಾಸವ ತಿದ್ದಿ ವಿರೂಪಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಏಳೋ ಆದಿಮ, ಎದ್ದೇಳು…” ಎಂದು ಪೋಸ್ಟ್ ಮಾಡಲಾಗಿದೆ.
ವಿವಿಧ ರೀತಿಯ ಪೋಸ್ಟರ್‌ಗಳು ವೈರಲ್ ಆಗುತ್ತಿದ್ದಂತೆ ಪೋಸ್ಟ್ ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಮತ್ತೊಂದು ಪೋಸ್ಟರ್ ಹಾಕಿ ಸ್ಪಷ್ಟನೆ ನೀಡಿದ್ದಾರೆ. “ಮನಸೋ ಇಚ್ಛೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


