’ಆಯಿಷತ್ ಶಿಫಾ ವರ್ಸಸ್ ಕರ್ನಾಟಕ ರಾಜ್ಯ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಭಜಿತ ತೀರ್ಪು ನೀಡಿದ್ಧು, ನ್ಯಾಯಮೂರ್ತಿ ಗುಪ್ತಾ ಹಿಜಾಬ್ ನಿಷೇಧದ ಪರ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದು, ನ್ಯಾಯಮೂರ್ತಿ ಧುಲಿಯಾ ಭಿನ್ನಮತದ ತೀರ್ಪು ನೀಡಿದ್ದಾರೆ. ಈ ಭಿನ್ನ ತೀರ್ಪಿನ ಕಾರಣದಿಂದ, ಈ ಪ್ರಕರಣವನ್ನು ಮುಖ್ಯ ನ್ಯಾಯಾಧೀಶರು ಹಚ್ಚಿನ ನ್ಯಾಯಾಧೀಶರನ್ನೊಳಗೊಂಡ ದೊಡ್ಡ ಪೀಠದ ಮುಂದೆ ವಿಚಾರಣೆಗೆ ಇಡಲಾಗುತ್ತದೆ.
ನ್ಯಾ. ಗುಪ್ತಾ ಅವರ ಆಭಿಪ್ರಾಯವು- ಸಮವಸ್ತ್ರದ ಮಹತ್ವ ಮತ್ತು ’ಶಾಲೆಗಳಲ್ಲಿ ಜಾತ್ಯತೀತ ವಾತಾವರಣವನ್ನು ಪ್ರೋತ್ಸಾಹಿಸುವ’ ವಿಧಾನವಾಗಿ, ’ಶಿಕ್ಷಣ ನೀಡುವಾಗ ಏಕರೂಪತೆಯನ್ನು ಕಾಯ್ದುಕೊಳ್ಳುವ ಅಗತ್ಯ’ದ ಮೇಲೆ ಆಧರಿಸಿದೆ. ಹಿಜಾಬ್ ಧರಿಸುವ ಹಕ್ಕನ್ನು ಒಂದು ಮೂಲಭೂತ ಹಕ್ಕಾಗಿ ಅವರು ನಿರಾಕರಿಸುವುದಿಲ್ಲವಾದರೂ, ರಾಜ್ಯದ ನಿಷೇಧವನ್ನು ’ಸರಕಾರದಿಂದ ಸಮರ್ಥನೀಯ ನಿರ್ಬಂಧ’ ಎಂದು ಅವರು ಕಾಣುತ್ತಾರೆ.
ಅವರ ಪ್ರಕಾರ, ಸಮವಸ್ತ್ರಕ್ಕೆ ’ಒಂದೇ ಒಂದು ಸೇರ್ಪಡೆ ಅಥವಾ ಕಳೆಯುವಿಕೆ’ ಇರಲು ಸಾಧ್ಯವಿಲ್ಲ. ಸರಕಾರದ ಆದೇಶವು ’ಯಾವುದೇ ರೀತಿಯ ಅಡೆತಡೆ ಇಲ್ಲದೇ ಇಂತಾ ಸೌಹಾರ್ದ ಭ್ರಾತೃತ್ವದ ಮೌಲ್ಯಗಳನ್ನು ಒಳಗೊಳಿಸಿ ಬೆಳೆಸುವ, ಸಮಾನತೆಯ ವಾತಾವರಣವನ್ನು ಪ್ರೋತ್ಸಾಹಿಸುತ್ತದೆ’ ಎಂಬ ವಿರೋಧಾಭಾಸದ ತೀರ್ಮಾನಕ್ಕೆ ಅವರು ಬರುತ್ತಾರೆ. ನ್ಯಾ. ಗುಪ್ತಾ ಅವರ ಅಭಿಪ್ರಾಯವು, ತಮ್ಮ ಘನತೆ, ಖಾಸಗಿತನ ಮತ್ತು ಸಮಾನತೆಯ ಹಕ್ಕನ್ನು ಈ ನಿರಂಕುಶ ನಿಷೇಧವು ಉಲ್ಲಂಘಿಸುತ್ತದೆ ಎಂಬ ಅರ್ಜಿದಾರರ ವಾದಕ್ಕೆ ಸಾಕಷ್ಟು ಗಮನಕೊಡಲು ವಿಫಲವಾಗಿದೆ.
ಕಾನೂನಿನ ತಾರ್ಕಿಕತೆ, ನ್ಯಾಯಾಂಗದ ಹಿಂದಿನ ತೀರ್ಪುಗಳ ಮೇಲೆ ದೃಢವಾಗಿ ಆಧರಿಸಿರುವ ಮತ್ತು ಅಸಾಧಾರಣವಾದ ಸಾಂವಿಧಾನಿಕ ಸಹಾನುಭೂತಿಯ ಮನೋಭಾವದಿಂದ ಕೂಡಿದ ನ್ಯಾ. ಧುಲಿಯಾ ಅವರ ಅಭಿಪ್ರಾಯಗಳು ನ್ಯಾ. ಗುಪ್ತಾ ಅವರ ಅಭಿಪ್ರಾಯಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿದ್ದು, ನ್ಯಾ. ಗುಪ್ತಾ ಅವರ ಅಭಿಪ್ರಾಯದ ಹಲವಾರು ವೈಫಲ್ಯಗಳನ್ನು ಎತ್ತಿತೋರಿಸಿದೆ.
ನ್ಯಾ. ಧುಲಿಯಾ ಅವರ ಅಭಿಪ್ರಾಯದ ಹೃದಯ ಗುರುತಿಸುವಂತೆ, ಇದು ಕೇವಲ ಒಂದು ಅಮೂರ್ತವಾದ ವಾದ ಮಾತ್ರವೇ ಅಲ್ಲ; ಇದು ಜೀವಂತವಾಗಿರುವ ವಿಷಯ; ಯುವ ಮುಸ್ಲಿಂ ವಿದ್ಯಾರ್ಥಿನಿಯರ ನಿಜ ಜೀವನದ ಮೇಲೆ ಪರಿಣಾಮ ಬೀರುವ ವಿಷಯ ಎಂಬುದನ್ನು ಗುರುತಿಸುತ್ತವೆ. ಒಂದು ಮುಂಜಾನೆ ಏಕಾಏಕಿಯಾಗಿ ಹಿಜಾಬ್ ಧರಿಸಿದ್ದಾರೆ ಎಂಬ ಕಾರಣಕ್ಕೆ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಗಳಾದ ಆಯಿಷತ್ ಶಿಫಾ ಮತ್ತು ತೆಹ್ರೀನಾ ಬೇಗಂ ಅವರನ್ನು ಕಾಲೇಜು ಪ್ರವೇಶಿಸದಂತೆ ತಡೆದ ಘಟನೆಯನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಉಲ್ಲೇಖಿಸುತ್ತಾ- ಅವರಿದನ್ನು ಹೇಳುತ್ತಾರೆ. “ಹಿಜಾಬ್ ಸಮವಸ್ತ್ರದ ಭಾಗವಲ್ಲ ಮತ್ತು ಅದನ್ನು ಧರಿಸುವುದು ಏಕತೆ, ಸಮಾನತೆ ಮತ್ತು ಸಾರ್ವಜನಿಕ ಶಿಸ್ತಿನ ಹಿತಾಸಕ್ತಿಯಲ್ಲಿಲ್ಲ” ಎಂಬ ನೆಲೆಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಒಂದು ಆದೇಶವನ್ನು ಹೊರಡಿಸುವ ಮೂಲಕ- ಸರಕಾರವು ತನ್ನ ಕಾನೂನುಬಾಹಿರ ಕೃತ್ಯಕ್ಕೆ ಪೂರ್ವಾನ್ವಯದ (ex post factu) ಸಮರ್ಥನೆಯನ್ನು ಒದಗಿಸಿತು.
ಆಯಿಷತ್ ಶಿಫಾ ಆಗಲೀ, ತೆಹ್ರೀನಾ ಬೇಗಂ ಆಗಲೀ, “ಹಿಂದೆಂದೂ, ಕಾಲೇಜು ಆಡಳಿತ ಸೇರಿದಂತೆ ಯಾರಿಂದಲೂ ಯಾವುದೇ ಆಕ್ಷೇಪ ಎದುರಿಸಿರಲಿಲ್ಲ ಮತ್ತು ಅವರು ತರಗತಿಯಲ್ಲಿ ಹಿಜಾಬ್ ಧರಿಸುವುದು ಎಂದೂ ಒಂದು ವಿಷಯವೇ ಆಗಿರಲಿಲ್ಲವಾದ್ದರಿಂದ ಸರಕಾರದ ಕ್ರಮದ ಹಿಂದೆ ಯಾವುದೇ ತರ್ಕವಿಲ್ಲ” ಎಂಬುದನ್ನು ನ್ಯಾ. ಧುಲಿಯಾ ಎತ್ತಿತೋರಿಸಿದ್ದಾರೆ. ನ್ಯಾ. ಧುಲಿಯಾ ಅವರ ತೀರ್ಪು, ಹೆಣ್ಣು ಮಕ್ಕಳ ಶಿಕ್ಷಣದ ಸಮಾನಾವಕಾಶದ ಹಕ್ಕುಗಳ ಕುರಿತು ಸಾಂವಿಧಾನಿಕ ಕಾಳಜಿಯನ್ನು ಒಳಗೊಂಡಿದೆ.
ಇದನ್ನೂ ಓದಿ: ಹಿಜಾಬ್: ‘ವಿಭಿನ್ನ ತೀರ್ಪು’ ನೀಡಿದ ಸುಪ್ರಿಂಕೋರ್ಟ್ ದ್ವಿಸದಸ್ಯ ಪೀಠ
“ಕರ್ನಾಟಕದ ಶಾಲೆಗಳಲ್ಲಿ ಹಿಜಾಬ್ ನಿಷೇಧದ ದುರದೃಷ್ಟಕರ ಪರಿಣಾಮ”ವನ್ನು ಅವರು ಗುರುತಿಸುತ್ತಾರೆ. ಇದರಿಂದಾಗಿ, “ಕೆಲವು ವಿದ್ಯಾರ್ಥಿನಿಯರು ಬೋರ್ಡ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಮತ್ತು ಇನ್ನೂ ಹಲವರು ಬೇರೆ ಶಾಲೆಗಳಿಗೆ- ಅವು ಮದರಸಗಳಾಗಿರುವ ಸಾಧ್ಯತೆಗಳು ಹೆಚ್ಚು- ಅನಿವಾರ್ಯವಾಗಿ ವರ್ಗಾವಣೆ ಪಡೆಯಬೇಕಾಯಿತು. ಅಲ್ಲಿ ಅವರಿಗೆ ಅದೇ ಗುಣಮಟ್ಟದ ಶಿಕ್ಷಣ ದೊರೆಯದಿರಬಹುದು. ಇದು ಮೊದಲನೆಯದಾಗಿ- ಶಾಲೆಯ ಬಾಗಿಲಿನವರೆಗೆ ತಲುಪುವುದೇ ಸುಲಭವಾಗಿ ಇರದಿರಬಹುದಾದ ಹೆಣ್ಣು ಮಗುವಿನ ಜೊತೆಗೆ ನಡೆದಿದೆ” ಎಂದವರು ಹೇಳುತ್ತಾರೆ. ನ್ಯಾ ಧುಲಿಯಾ ಅವರ ಪ್ರಕಾರ, “ಪರಿಚ್ಛೇದ 25ರ ಅನ್ವಯ ಇದು ರಕ್ಷಿತವಾದ ಹಕ್ಕು ಹೌದೇ, ಅಲ್ಲವೇ ಎಂಬುದನ್ನು ನಿರ್ಧರಿಸಲು, ಹಿಜಾಬ್ ಎಂಬುದು ಧರ್ಮದ ಒಂದು ಅಗತ್ಯ ಆಚರಣೆ ಹೌದೇ ಅಥವಾ ಅಲ್ಲವೇ ಎಂದು ಕೇಳುವುದೇ ತಪ್ಪಾದ ಪ್ರಶ್ನೆ”. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡರಲ್ಲೂ ನಡೆದ ವಾದಗಳು ಮತ್ತು ಹೆಚ್ಚಿನ ಮಾಧ್ಯಮ ಕಥಾನಕಗಳು ಹಿಜಾಬ್ ಧರಿಸುವುದು ಇಸ್ಲಾಮಿನ ಅಗತ್ಯ ಆಚರಣೆಯೇ ಎಂಬ ಪ್ರಶ್ನೆಯ ಸುತ್ತಲೇ ಬಹಳವಾಗಿ ಕೇಂದ್ರಿತವಾಗಿದ್ದವು.

ನ್ಯಾ. ಧುಲಿಯಾ ಅವರ ತಿಳಿವಳಿಕೆಯಲ್ಲಿ, ಯಾವುದು ಒಂದು “ಧರ್ಮದ ಅಗತ್ಯ ಆಚರಣೆ” ಎಂಬ ಪ್ರಶ್ನೆ ಬರುವುದು ಒಂದು ನಿರ್ದಿಷ್ಟ ಧರ್ಮದ, ಒಂದು ವಿಭಾಗ ಅಥವಾ ಪಂಗಡದ ವಿಧಿ ಅಥವಾ ಆಚರಣೆಗಳಲ್ಲಿ ಸರಕಾರಿ ಮಧ್ಯಪ್ರವೇಶದ ವಿರುದ್ಧ ರಕ್ಷಣೆ ಕೋರಿದಾಗ ಅಥವಾ ಧಾರ್ಮಿಕ ಆಚರಣೆಯ ವಿರುದ್ಧ ವೈಯಕ್ತಿಕ ಹಕ್ಕಿನ ರಕ್ಷಣೆ ಕೋರಿದಾಗ ಮಾತ್ರ.
ಇದಕ್ಕೆ ತದ್ವಿರುದ್ಧವಾಗಿ, ಹಿಜಾಬ್ ಧರಿಸುವ ಹಕ್ಕಿನ ಈ ಪ್ರಕರಣವು- ಪರಿಚ್ಛೇದ 25ರ ಅಡಿಯಲ್ಲಿ ಬರುವ ವ್ಯಕ್ತಿಯ ಧಾರ್ಮಿಕ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು, ಪರಿಚ್ಛೇದ 19(1)(ಎ) ಅಡಿಯಲ್ಲಿ ಬರುವ “ಅಭಿವ್ಯಕ್ತಿ ಸ್ವಾತಂತ್ರ್ಯ”ದ ಜೊತೆ ಅಂತರ್‌ಸಂಬಂಧ ಹೊಂದಿದಂತೆ ನೋಡಬೇಕಾಗುತ್ತದೆ.
ಹಿಜಾಬ್ ಧರಿಸುವುದು ಇಸ್ಲಾಮಿನ ಅಗತ್ಯ ಆಚರಣೆಯೇ ಎಂಬ ಕುರಿತ ಶಬ್ದಾಡಂಬರವನ್ನು ದಾಟಿ ಹೋಗುವ ನ್ಯಾ. ಧುಲಿಯಾ, “ನಂಬಿಕೆಯು ಪ್ರಾಮಾಣಿಕವಾಗಿದ್ದು, ಅದು ಯಾರಿಗೂ ಹಾನಿ ಮಾಡದಿದ್ದರೆ, ಒಂದು ತರಗತಿಯಲ್ಲಿ ಹಿಜಾಬನ್ನು ನಿಷೇಧಿಸಲು ಯಾವುದೇ ಸಮರ್ಥನೀಯ ಕಾರಣಗಳು ಇರಲಾರವು” ಎಂಬ ಸರಳ ಆದರೆ, ಸೊಗಸಾದ ತೀರ್ಮಾನಕ್ಕೆ ಬರುತ್ತಾರೆ.
ನ್ಯಾ. ಧುಲಿಯಾ ಅವರು ಸಮಂಜಸವಾದ ಪೂರ್ವ ನಿದರ್ಶನವನ್ನು ’ಬಿಜೋ ಇಮಾನ್ಯುವೆಲ್ ವರ್ಸಸ್ ಕೇರಳ ರಾಜ್ಯ’ ಪ್ರಕರಣದಲ್ಲಿ ಕಂಡುಕೊಳ್ಳುತ್ತಾರೆ. ಈ ಪ್ರಕರಣದಲ್ಲಿ, ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವುದಿಲ್ಲ ಎಂಬ ಕಾರಣಕ್ಕೆ (ಅವರು ರಾಷ್ಟ್ರಗೀತೆ ಹಾಡಲಾಗುತ್ತಿರುವಾಗ ಗೌರವಪೂರ್ವಕವಾಗಿ ನಿಂತುಕೊಳ್ಳುತ್ತಿದ್ದರೂ ಕೂಡಾ) ಶಾಲೆಯಿಂದ ಹೊರಹಾಕಲಾಗಿದ್ದ “ಜೆಹೋವಾಸ್ ವಿಟ್ನೆಸ್ ಎಂಬ ನಂಬಿಕೆಯ ಪಂಥಕ್ಕೆ ಸೇರಿದ ಮೂವರು ಮಕ್ಕಳು ಮೇಲ್ಮನವಿದಾರರಾಗಿದ್ದರು. ಅ ಮಕ್ಕಳು ರಾಷ್ಟ್ರಗೀತೆ ಯಾಕೆ ಹಾಡುತ್ತಿರಲಿಲ್ಲ ಎಂದರೆ, ಅವರು, “ಜೆಹೋವಾನ ಹೊರತಾಗಿ ಬೇರಾರಿಗಾಗಿಯೂ ಹಾಡುವುದನ್ನು ತಮ್ಮ ನಂಬಿಕೆಯು ನಿಷೇಧಿಸುತ್ತದೆ ಎಂದು ಪ್ರಾಮಾಣಿಕವಾಗಿ ನಂಬಿದ್ದರು” ಎಂದು ಸುಪ್ರೀಂ ಕೋರ್ಟ್ ಕಂಡುಕೊಂಡಿತು.
ಪರಿಚ್ಛೇದ 25ರ ಅಡಿಯಲ್ಲಿ ಬರುವ ವ್ಯಕ್ತಿಯ ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಪರಿಚ್ಛೇದ 19(1)(ಎ) ಅಡಿಯಲ್ಲಿ ಬರುವ “ಅಭಿವ್ಯಕ್ತಿ ಸ್ವಾತಂತ್ರ್ಯ”ದ ಅನ್ವಯ ಮೌನವಾಗಿರುವ ಹಕ್ಕು ರಕ್ಷಿಸಲ್ಪಟ್ಟಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಇಂದು “ನಮ್ಮ ಮುಂದಿರುವ ಈ ಹುಡುಗಿಯರು ಕೂಡಾ, ತಮ್ಮ ನಂಬಿಕೆಯ ಒಂದು ವಸ್ತುವಾಗಿ ಹಿಜಾಬ್ ಧರಿಸುವುದರಿಂದಾಗಿ, ಜೆಹೋವಾಸ್ ವಿಟ್ನೆಸ್‌ನ ಮಕ್ಕಳಂತದ್ದೇ ಸಂಕಟದಲ್ಲಿ ಇದ್ದಾರೆ” ಎಂದು ನ್ಯಾ. ಧುಲಿಯಾ ತೀರ್ಮಾನಕ್ಕೆ ಬರುತ್ತಾರೆ.
ತನ್ನ ತೀರ್ಮಾನವನ್ನು ಬಲಗೊಳಿಸಲು ನ್ಯಾ. ಧುಲಿಯಾ ಅವರು, ಯುಎಸ್‌ಎ ಮತ್ತು ದಕ್ಷಿಣ ಆಫ್ರಿಕಾದ ತುಲನಾತ್ಮಕವಾದ ನ್ಯಾಯಾಂಗ ವಿವೇಕದ ಉಲ್ಲೇಖವನ್ನು ತೆಗೆದುಕೊಳ್ಳುತ್ತಾರೆ. ’ವೆಸ್ಟ್ ವರ್ಜಿನಿಯಾ ಸ್ಟೇಟ್ ಬೋರ್ಡ್ ಆಫ್ ಎಜುಕೇಶನ್ ವರ್ಸಸ್ ಬಾರ್ನೆಟ್’ ಪ್ರಕರಣದಲ್ಲಿ ಶಾಲಾ ಮಂಡಳಿಯು ವಿದ್ಯಾರ್ಥಿಗಳಿಗೆ ಕಡ್ಡಾಯ ಧ್ವಜವಂದನೆಯನ್ನು ಶಿಫಾರಸು ಮಾಡಲಾಗದು ಎಂದು ಯುಎಸ್‌ಎ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. “ಯಾವುದೇ ಅಧಿಕಾರಿ, ಎಷ್ಟು ದೊಡ್ಡವರಿರಲಿ, ಸಣ್ಣವರಿರಲಿ, ರಾಜಕೀಯ, ರಾಷ್ಟ್ರೀಯತೆ, ಧರ್ಮ ಅಥವಾ ಅಭಿಪ್ರಾಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳಲ್ಲಿ ಯಾವುದು ಸಾಂಪ್ರದಾಯಿಕವಾಗಿ ಇರಬೇಕು ಎಂದು ತೀರ್ಮಾನಿಸಲು ಆಗದು” ಎಂದು ನ್ಯಾ. ಜಾಕ್ಸನ್ ತೀರ್ಪು ನೀಡಿದ್ದರು.
ಇದನ್ನೂ ಓದಿ: ಹಿಜಾಬ್‌ಗೆ ಅವಕಾಶವಿಲ್ಲದೆ ಮಂಗಳೂರು ವಿವಿಯ ಶೇ.16ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಡ್ರಾಪ್‌ಔಟ್
ನ್ಯಾ. ಧುಲಿಯಾ ಉಲ್ಲೇಖಿಸಿದ ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ತೀರ್ಪು- ತಮಿಳು ಮೂಲದ ಹುಡುಗಿಯೊಬ್ಬಳು ಶಾಲೆಯಲ್ಲಿ, ತನ್ನ ಸಂಸ್ಕೃತಿ/ಧರ್ಮದ ಭಾಗವಾಗಿ ಮೂಗಿನ ಬೊಟ್ಟು (ನತ್ತು) ಧರಿಸದಂತೆ ನಿಷೇಧಿಸಬೇಕೆ ಎಂಬ ಕುರಿತದದ್ದಾಗಿತ್ತು.
“ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಒಬ್ಬ ವ್ಯಕ್ತಿಯ ಗುರುತು ಅಥವಾ ಅಸ್ಮಿತೆಗೆ ಬಹಳಷ್ಟು ಮಹತ್ವದ್ದಾಗಿರಬಹುದು. ಪ್ರಸ್ತುತವಾಗಿರುವುದು ಏನೆಂದರೆ, ಒಂದು ಆಚರಣೆಯು ಧಾರ್ಮಿಕ ಆಥವಾ ಸಾಂಸ್ಕೃತಿಕವಾಗಿ ಮುಖ್ಯವಾಗಿದೆಯೇ ಎಂದು ಪರಿಗಣಿಸುವುದಲ್ಲ; ಬದಲಾಗಿ, ಸಂಬಂಧಿಸಿದ ವ್ಯಕ್ತಿಗೆ ಅದರ ಅರ್ಥ (ಮಹತ್ವ) ಏನು ಎಂಬುದು” ಎಂದು ತೀರ್ಪು ನೀಡುವ ಮೂಲಕ ಆ ನ್ಯಾಯಾಲಯವು, ಮೂಗುಬೊಟ್ಟು ಧರಿಸುವ ಆ ಹುಡುಗಿಯ ಹಕ್ಕನ್ನು ಎತ್ತಿ ಹಿಡಿದಿತ್ತು.

ನ್ಯಾ. ಧುಲಿಯಾ ಅವರು, ಶಿಕ್ಷಣದ ಹಕ್ಕನ್ನು ರಕ್ಷಿಸುವ ಕುರಿತಾಗಿ ಸರಕಾರದ ಆಸಡ್ಡೆಯ ಮನೋಭಾವದ ಕುರಿತು ಆತಂಕಿತರಾಗಿದ್ದು, “ಪ್ರಸ್ತುತ ಪ್ರಕರಣದಲ್ಲಿ ಶಾಲಾ ಆಡಳಿತ ಮತ್ತು ಸರಕಾರ ಉತ್ತರಿಸಬೇಕಾದ ಪ್ರಶ್ನೆ ಎಂದರೆ, ಅವರಿಗೆ ಹೆಚ್ಚು ಮುಖ್ಯವಾಗಿರುವುದು ಯಾವುದು: ಹೆಣ್ಣು ಮಗುವಿನ ಶಿಕ್ಷಣವೋ, ಅಥವಾ ವಸ್ತ್ರಸಂಹಿತೆಯ ಅನುಷ್ಠಾನವೋ!” ಎಂದು ಖಾರವಾಗಿ ಹೇಳಿದ್ದಾರೆ.
“ಹಿಜಾಬ್ ಧರಿಸುವುದು ಅಥವಾ ಬಿಡುವುದು ಸರಳವಾಗಿ ಒಂದು ಆಯ್ಕೆಯ ವಿಷಯವಾಗಬೇಕು. ಆಕೆಯ ಸಾಂಪ್ರದಾಯಿಕ (ಮನೋಭಾವದ) ಕುಟುಂಬದವರು ಆಕೆಯನ್ನು ಶಾಲೆಗೆ ಹೋಗಲು ಅನುಮತಿ ನೀಡುವ ಏಕೈಕ ದಾರಿಯೆಂದರೆ ಹಿಜಾಬ್ ಧರಿಸುವುದು ಆಗಿರಬಹುದು; ಆಕೆಯ ಹಿಜಾಬ್, ಶಾಲೆಗೆ ಹೋಗಲು ಆಕೆಯ ಟಿಕೆಟೂ ಆಗಿರಬಹುದು” ಎಂಬುದನ್ನು ಅವರು ಗಮನಿಸುತ್ತಾರೆ.
ತಾನು ತೀರ್ಪು ಆರಂಭಿಸಿದ ವಾಸ್ತವಾಂಶಗಳಿಗೆ ಮರಳುವ ನ್ಯಾ. ಧುಲಿಯಾ ಅವರು, “ಶಾಲಾ ಗೇಟು ಪ್ರವೇಶಿಸುವ ಮುನ್ನ ಹಿಜಾಬ್ ತೆಗೆಯಬೇಕೆಂದು ಹೆಣ್ಣುಮಕ್ಕಳಿಗೆ ಹೇಳುವುದು- ಮೊದಲನೆಯದಾಗಿ, ಅವರ ಖಾಸಗಿತನದ ಉಲ್ಲಂಘನೆಯಾಗಿದೆ, ನಂತರ ಆದು ಅವರ ಘನತೆಯ ಮೇಲಿನ ದಾಳಿಯಾಗಿದೆ ಮತ್ತು ಅಂತಿಮವಾಗಿ ಅದು ಅವರಿಗೆ ಜಾತ್ಯತೀತ ಶಿಕ್ಷಣದ ಅವಕಾಶ ನಿರಾಕರಣೆಯಾಗಿದೆ. ಇವುಗಳು ಸ್ಪಷ್ಟವಾಗಿಯೇ ಭಾರತೀಯ ಸಂವಿಧಾನದ ಪರಿಚ್ಛೇದ 19(1)(ಚಿ), ಪರಿಚ್ಛೇದ 21 ಮತ್ತು ಪರಿಚ್ಛೇದ 25(1)ರ ಸ್ಪಷ್ಟ ಉಲ್ಲಂಘನೆಗಳಾಗಿವೆ” ಎಂದು ತೀರ್ಮಾನಿಸುತ್ತಾರೆ.
ನ್ಯಾ. ಧುಲಿಯಾ ಅವರ ಅಭಿಪ್ರಾಯವು ’ಜಬ್ಬಲ್ಪುರ್ ಎಡಿಎಂ ವರ್ಸಸ್ ಶಿವಕಾಂತ್ ಶುಕ್ಲಾ’ ಪ್ರಕರಣದಲ್ಲಿ ನ್ಯಾ. ಖನ್ನಾ ಅವರ ಭಿನ್ನಮತದ ತೀರ್ಪಿನಂತೆ, ’ಭವಿಷ್ಯದ ಬುದ್ದಿವಂತಿಕೆ’ಯಾಗಬಹುದು ಮತ್ತು ಸುಪ್ರೀಂ ಕೋರ್ಟಿನ ವಿಸ್ತೃತ ಪೀಠವು, ಕರ್ನಾಟಕ ಹೈಕೋರ್ಟಿನ ಗಂಭೀರ ಪ್ರಮಾದವನ್ನು ತ್ವರಿತವಾಗಿ ಸರಿಪಡಿಸಬಹುದು ಎಂದು ಆಶಿಸಬಹುದು.
ಅರವಿಂದ ನಾರಾಯಣ್
ಬೆಂಗಳೂರು ಮೂಲದ ವಕೀಲರು ಮತ್ತು ಲೇಖಕರು. India’s Undeclared Emergency: Constitutionalism and the Politics of Resistance” ಎಂಬ ಪುಸ್ತಕ ಬರೆದಿದ್ದಾರೆ.
ಮೊಹಮ್ಮದ್ ಹಫೀಫ್
ಕರ್ನಾಟಕ ಹೈಕೋರ್ಟಿನ ವಕೀಲರು
ಕನ್ನಡಕ್ಕೆ: ನಿಖಿಲ್ ಕೋಲ್ಪೆ


