ಹಣಕಾಸಿನ ವಹಿವಾಟುಗಳು, ಸಾಲಗಳ ಮರು ಪಾವತಿ ಸೇರಿದಂತೆ ತಮ್ಮ ವಿವಾದಗಳನ್ನು ಪರಿಹರಿಸುವ ಸಲುವಾಗಿ ಸ್ಟಾಂಪ್ ಪೇಪರ್‌ಗಳಲ್ಲಿ ಒಪ್ಪಂದ ನಡೆಸಿ 8 ರಿಂದ18 ವರ್ಷದೊಳಗಿನ ಹುಡುಗಿಯರನ್ನು ಮಾರಾಟ ಮಾಡುತ್ತಿರುವ ಅಘಾತಕಾರಿ ಘಟನೆ ರಾಜಸ್ಥಾನದ ಸುಮಾರು ಆರು ಜಿಲ್ಲೆಗಳಲ್ಲಿ ನಡೆಯುತ್ತಿದೆ ಎಂದು ದೈನಿಕ್ ಭಾಸ್ಕರ್ ದಿನಪತ್ರಿಕೆ ವರದಿ ಮಾಡಿದೆ.
ಹುಡುಗಿಯರ ಮಾರಾಟಕ್ಕೆ ನಿರಾಕರಿಸಿದರೆ ಗ್ರಾಮದ ಜಾತಿ ಮಂಡಳಿಗಳ ಆದೇಶದ ಮೇರೆಗೆ ಹುಡುಗಿಯರ ತಾಯಂದಿರ ಮೇಲೆ ಅತ್ಯಾಚಾರ ನಡೆಸಿ ಅದನ್ನು ಇತ್ಯರ್ಥ ಮಾಡಲಾಗುತ್ತದೆ ಎಂದು ವರದಿ ಹೇಳಿದೆ. ರಾಜ್ಯದ ಭಿಲ್ವಾರದಂತಹ ಸ್ಥಳಗಳಲ್ಲಿನ ಜನರು ತಮ್ಮ ವಿವಾದಗಳನ್ನು ಪೋಲೀಸರ ಬಳಿಗೆ ಹೋಗುವ ಬದಲು ಜಾತಿ ಮಂಡಳಿಗಳನ್ನು ಸಂಪರ್ಕಿಸುತ್ತಾರೆ ಎಂದು ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಾರಾಟವಾದ ಹುಡುಗಿಯರನ್ನು ಉತ್ತರ ಪ್ರದೇಶ, ಮಧ್ಯಪ್ರದೇಶ, ಮುಂಬೈ, ದೆಹಲಿ ಮತ್ತು ವಿದೇಶಗಳಿಗೆ ಕಳುಹಿಸಲಾಗುತ್ತಿದೆ. ಗುಲಾಮಗಿರಿಗೆ ಒಳಗಾದ ಅವರ ಮೇಲೆ ದೈಹಿಕ ಕಿರುಕುಳ, ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯ ಎಸಗಲಾಗುತ್ತದೆ. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ವರದಿ ಸಲ್ಲಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀವಾದ ಸಮಾನ ಹಕ್ಕುಗಳ ಬೇಡಿಕೆಯಷ್ಟೆ ಅಲ್ಲ ಸಮಾನ ಗೌರವದ ಬೇಡಿಕೆ ಕೂಡ
ವ್ಯಕ್ತಿಯೊಬ್ಬ ತಾನು ಪಡೆದ 15 ಲಕ್ಷ ರೂ. ಸಾಲವನ್ನು ಮರು ಪಾವತಿಸಲು ತನ್ನ ಸಹೋದರಿಯನ್ನು ಮಾರಾಟ ಮಾಡುವಂತೆ ಜಾತಿ ಮಂಡಳಿ ಆದೇಶ ನೀಡಿತ್ತು. ಅಷ್ಟಾಗಿಯು ಅವರ ಸಾಲ ತೀರದೆ ಇದ್ದಾಗ ಅವರ 12 ವರ್ಷದ ಮಗಳನ್ನು ಕೂಡಾ ಮಾರಾಟ ಮಾಡುವಂತೆ ಜಾತಿ ಮಂಡಳಿ ಒತ್ತಾಯಿಸಿದೆ ಎಂದು ವರದಿ ಹೇಳಿದೆ.
ಅದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಚಿಕಿತ್ಸೆಗಾಗಿ ಪಡೆದಿದ್ದ 6 ಲಕ್ಷ ರೂ.ಗಳನ್ನು ಮರುಪಾವತಿ ಮಾಡಲು ತನ್ನ ಮನೆಯನ್ನು ಮಾರಿದ್ದರು. ಮನೆ ಮಾರಿಯು ಸಾಲ ತೀರದೆ ಇದ್ದಾಗ ತನ್ನ ಮಗಳನ್ನು ಮಾರಾಟ ಮಾಡಿದ್ದಾರೆ. ಈ ಬಾಲಕಿಯನ್ನು ಆಗ್ರಾಕ್ಕೆ ಕರೆದೊಯ್ಯಲಾಗಿತ್ತು, ಅಲ್ಲಿಂದ ಬಾಲಕಿಯನ್ನು ಮೂರು ಬಾರಿ ಮಾರಾಟ ಮಾಡಲಾಗಿದೆ ಜೊತೆಗೆ ಅವರು ನಾಲ್ಕು ಬಾರಿ ಗರ್ಭಿಣಿಯಾಗಿದ್ದಾರೆ ಎಂದು ವರದಿ ಹೇಳಿದೆ.
ಪತ್ರಿಕೆಯು ವರದಿಯಲ್ಲಿ ಉಲ್ಲೇಖಿಸಿರುವ ವಿಷಯಗಳು ನಿಜವೇ ಆಗಿದ್ದಲ್ಲಿ ಅದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೇಳಿದೆ. ನಾಲ್ಕು ವಾರಗಳಲ್ಲಿ ಕ್ರಮ ತೆಗೆದುಕೊಂಡ ವಿವರವಾದ ವರದಿಯನ್ನು ಸಲ್ಲಿಸುವಂತೆ ಅದು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ಕೇಳಿದೆ. ಅಲ್ಲದೆ ಆಯೋಗವು ಈಗಾಗಲೇ ಕೈಗೊಂಡಿರುವ ಕ್ರಮಗಳ ವಿವರಗಳನ್ನು ಕೇಳಿದ್ದು, ಅಂತಹ ಘಟನೆಗಳನ್ನು ತಡೆಗಟ್ಟಲು ಹೇಳಿದೆ.
ಇದನ್ನೂ ಓದಿ: ಕೇಟ್ ಮಿಲ್ಲೆಟ್ ಅವರ ’ಸೆಕ್ಷುವಲ್ ಪಾಲಿಟಿಕ್ಸ್’ ಅನುವಾದದ ಒಂದು ಭಾಗ
ಮಾನವ ಹಕ್ಕುಗಳು ಹಾಗೂ ಹೆಣ್ಣು ಮತ್ತು ಮಹಿಳೆಯರ ಘನತೆಯ ಹಕ್ಕನ್ನು ತೊಡೆದುಹಾಕುವ ಜಾತಿ ಆಧಾರಿತ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು, ಸಂವಿಧಾನ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಗ್ರಾಮ ಸಭೆಗಳ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವರದಿಯಲ್ಲಿ ವಿವರಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೇಳಿದೆ.
ಅಂತಹ ಅಪರಾಧಗಳಲ್ಲಿ ಭಾಗಿಯಾಗುವವರು, ಅವರಿಗೆ ಕುಮ್ಮಕ್ಕು ನೀಡುವವರು ಮತ್ತು ಅವರಿಗೆ ಸಹಾನುಭೂತಿ ಹೊಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ರಾಜಸ್ಥಾನ ಪೊಲೀಸ್ ಮುಖ್ಯಸ್ಥರಿಗೆ ಆಯೋಗ ನೋಟಿಸ್ ನೀಡಿದ್ದು, ಪ್ರಕರಣಗಳ ಸ್ಥಿತಿ, ಚಾರ್ಜ್ ಶೀಟ್‌ಗಳು, ಬಂಧನಗಳು ಇತ್ಯಾದಿಗಳ ವಿವರಗಳನ್ನು ಕೇಳಿದೆ.
ಇಂತಹ ಘಟನೆಗಳನ್ನು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಅಥವಾ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಬಗ್ಗೆ ವಿವರಗಳನ್ನು ನೀಡುವಂತೆ ಕೂಡಾ ಆಯೋಗವು ಪೊಲೀಸ್ ಮುಖ್ಯಸ್ಥರನ್ನು ಕೇಳಿದೆ.
ಇದನ್ನೂ ಓದಿ: ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ವರದಕ್ಷಿಣೆಯ ಉಪಯೋಗಗಳು’ ಎಂಬ ಪಠ್ಯ ಮುದ್ರಣ: ಕ್ರಮಕ್ಕೆ ಮಹಿಳಾ ಆಯೋಗ ಆಗ್ರಹ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ವಿಶೇಷ ವರದಿಗಾರ ಉಮೇಶ್ ಕುಮಾರ್ ಶರ್ಮಾ ಕೂಡ ರಾಜಸ್ಥಾನಕ್ಕೆ ಭೇಟಿ ನೀಡಿ ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದ್ದಾರೆ.



ಈ ಅಮಾನುಷ ಪದ್ದತಿ ಕೊನೆಗೊಳ್ಳಬೇಕು.