ಪ್ರೊ ಕಬಡ್ಡಿ 9ನೇ ಆವೃತ್ತಿನ ಪಂದ್ಯಾವಳಿ ಆರಂಭಗೊಂಡು ಬಿರುಸಿನಿಂದ ಸಾಗುತ್ತಿದೆ. ಬೆಂಗಳೂರು ಬುಲ್ಸ್ ತಂಡವು ಸತತ ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದಾಗಿದೆ. ಇದಕ್ಕೆ ಕಾರಣ ಪವನ್ ಕುಮಾರ್ ಶೆರಾವತ್ ಸ್ಥಾನ ತುಂಬುತ್ತಿರುವ ಯುವ ಆಲ್ ರೌಂಡರ್ ಆಟಗಾರ ಭರತ್ ನರೇಶ್ ಹೂಡಾ.
ಅಂದು ಅಕ್ಟೋಬರ್ 22. ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ನಡುವಿನ ಕಬಡ್ಡಿ ಪಂದ್ಯ ನಡೆಯುತ್ತಿತ್ತು. ಪಂದ್ಯದ ಆರಂಭದಲ್ಲಿಯೇ ಆಕ್ರಮಣಕಾರಿ ಆಟವಾಡಿದ ಯು ಮುಂಬಾ ಬೆಂಗಳೂರು ತಂಡವನ್ನು ಎರಡು ಬಾರಿ ಆಲೌಟ್ ಮಾಡಿ 16 ಅಂಕಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಪಂದ್ಯ ಏಕಮುಖವಾಗಿ ಮುಗಿಯುತ್ತದೆ ಯು ಮುಂಬಾ ಸುಲಭವಾಗಿ ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದರೆ ಬುಲ್ಸ್ ತಂಡದ ಡಿಫೆಂಡಿಂಗ್ ತೀರಾ ಕಳಪೆಯಾಗಿತ್ತು. ಆಗ ಬಂದ ನೋಡಿ ಆಪತ್ಭಾಂಧವ ಭರತ್.. ತನ್ನ ಮಿಂಚಿನ ರೈಡಿಂಗ್ ಮೂಲಕ ಬೆಂಗಳೂರು ತಂಡಕ್ಕೆ ಸತತ ಪಾಯಿಂಟ್ ತಂದುಕೊಟ್ಟರು. ಪಂದ್ಯದ ಮೊದಲಾರ್ಧ ಮುಗಿದಾಗ ಬೆಂಗಳೂರು 13 ಪಾಯಿಂಟ್‌ಗಳ ಹಿನ್ನಡೆ ಅನುಭವಿಸಿತ್ತು.
ದ್ವಿತಿಯಾರ್ಧ ಆರಂಭವಾದ ಭರತ್ ಚುರುಕಿನ ರೈಡಿಂಗ್ ಮೂಲಕ ಯು ಮುಂಬಾ ತಂಡವನ್ನು ಮೂರು ಬಾರಿ ಆಲೌಟ್ ಮಾಡುವಲ್ಲಿ ಸಹಕಾರಿಯಾದರು. ತನ್ನ ಏಕಾಗ್ರತೆ ಮತ್ತು ಚಾಣಕ್ಷತನದಿಂದ 16 ರೈಡಿಂಗ್ ಪಾಯಿಂಟ್ ಗಳಿಸಿ ಬೆಂಗಳೂರು 10 ಪಾಯಿಂಟ್‌ಗಳ ಅಂತರದಿಂದ ಗೆಲುವು ಸಾಧಿಸಲು ನೆರವಾದರು. ಅದೇ ರೀತಿ ದಬಾಂಗ್ ಡೆಲ್ಲಿ ನಡುವಿನ ಪಂದ್ಯದಲ್ಲಿಯೂ ಸಹ ಆಕ್ರಮಣಕಾರಿ ಆಟವಾಡಿದ ಭರತ್ ಕೈಚೆಲ್ಲಿ ಹೋಗಿದ್ದ ಪಂದ್ಯವನ್ನು ಕೊನೆಯ ಒಂದು ನಿಮಿಷದಲ್ಲಿ ತಹಬದಿಗೆ ತಂದು ಬೆಂಗಳೂರು ತಂಡ 4 ಪಾಯಿಂಟ್‌ಗಳ ಅಂತರದಿಂದ ಗೆಲುವು ಸಾಧಿಸಲು ನೆರವಾದರು. ಆ ಪಂದ್ಯದಲ್ಲಿ ಭರತ್ 20 ರೈಡ್‌ಗಳಿಂದ 20 ಪಾಯಿಂಟ್ ಗಳಿಸಿ ಮಿಂಚಿದರು.
Namaskara, naanu Bharat anna mathe Saurabh annan abhimaani, admin-naadu admin 🙏
🎵 Bharat anna,Bharat anna, Happyyyy Barthaday, Bharat Annan barthadayy, Nam Annan BARTHADAYY 🥳🥳 https://t.co/Irzc8XokWB
— Bengaluru Bulls (@BengaluruBulls) October 30, 2022
ಬೆಂಗಳೂರು ಬುಲ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ರೈಡರ್ ಭರತ್. 8ನೇ ಆವೃತ್ತಿಯಿಂದ ಬೆಂಗಳೂರು ತಂಡದ ಪರವಾಗಿ ಆಡುತ್ತಿರುವ ಅವರು ಆ ಆವೃತ್ತಿಯಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿದ್ದರು. ಆದರೆ ಆಗ ಪವನ್ ಶೆರಾವತ್ ಕಾಲ ನಡೆಯುತ್ತಿತ್ತು. ಎಲ್ಲಾ ಪಂದ್ಯಗಳಲ್ಲಿಯೂ ಪವನ್ ಮಿಂಚುತ್ತಿದ್ದರು. ಹಾಗಾಗಿ ಭರತ್ ಸಹಾಯಕ ರೈಡರ್ ಮಾತ್ರ ಆಗಿದ್ದು ಅವರಿಗೆ ಅವಕಾಶದ ಕೊರತೆಯಿತ್ತು. 9ನೇ ಸೀಸನ್‌ನಲ್ಲಿ 20 ಲಕ್ಷ ರೂ ಗಳಿಗೆ ಬೆಂಗಳೂರು ಅವರನ್ನು ರಿಟೈನ್ ಮಾಡಿಕೊಂಡಿತು. ಈ ಬಾರಿ ವಿಕಾಸ್ ಖಂಡೋಲರನ್ನು ಮೇನ್ ರೈಡರ್ ಆಗಿ 1.7 ಕೋಟಿಗಳಿಗೆ ಬೆಂಗಳೂರು ತನ್ನದಾಗಿಸಿಕೊಂಡಿತು. ಆದರೆ ಇಡೀ ಸೀಸನ್‌ನಲ್ಲಿ ಮಿಂಚಿದ್ದು ಮಾತ್ರ ಭರತ್ ಹೂಡಾ.
ಭರತ್ ಆಡಿದ 15 ಪಂದ್ಯಗಳಲ್ಲಿ 177 ರೈಡ್ ಪಾಯಿಂಟ್ ಗಳಿಸಿ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ಗಳಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಹಾಗೆಯೇ 11 ಸೂಪರ್ ಟೆನ್ ಗಳಿಸಿದ್ದಾರೆ. ಈ ಎಲ್ಲವೂ ಗೆಲುವಿನ ಪಂದ್ಯಗಳಲ್ಲಿಯೇ ಬಂದಿರುವುದು ವಿಶೇಷ. ಅಲ್ಲದೆ ಅವರು 7 ಬಾರಿ ರೈಡಿಂಗ್‌ನಲ್ಲಿ ಮೂರಕ್ಕಿಂತ ಹೆಚ್ಚು ಜನರನ್ನು ಔಟ್ ಮಾಡಿ ಸೂಪರ್ ರೈಡ್ ಮಾಡಿದ್ದಾರೆ.
ಮೂಲತಃ ಹರ್ಯಾಣದವರಾದ ಭರತ್ ತಮಗಿರುವ ಎತ್ತರವನ್ನು ಸಂಪೂರ್ಣವಾಗಿ ಬಳಸಿಕೊಂಡು ಚಾಕಚಕ್ಯತೆಯಿಂದ ಪಾಯಿಂಟ್ ಗಳಿಸಿ ಮಿಂಚುತ್ತಿದ್ದಾರೆ. 8ನೇ ಸೀಸನ್‌ನಲ್ಲಿ ಪವನ್ ಕುಮಾರ್ ಶೆರಾವತ್ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ; ಟಿ20 ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಪಾಕ್ ವಿರುದ್ಧ ರೋಚಕ ಗೆಲುವು ತಂದುಕೊಟ್ಟ ಕೊನೆಯ 8 ಎಸೆತಗಳು ಹೀಗಿದ್ದವು..


