Homeಕರ್ನಾಟಕಸುತ್ತೋಲೆ ಹೊರಡಿಸಿ ವಾಪಸ್‌ ಪಡೆಯುವ ಸರ್ಕಾರ: ಒಂದೇ ತಿಂಗಳಲ್ಲಿ ಮೂರು ಪ್ರಕರಣ

ಸುತ್ತೋಲೆ ಹೊರಡಿಸಿ ವಾಪಸ್‌ ಪಡೆಯುವ ಸರ್ಕಾರ: ಒಂದೇ ತಿಂಗಳಲ್ಲಿ ಮೂರು ಪ್ರಕರಣ

- Advertisement -
- Advertisement -

“ಸುತ್ತೋಲೆ ಹೊರಡಿಸಿ ನಂತರ ವಾಪಸ್‌ ಪಡೆಯುವ ಸರ್ಕಾರವಿದು” ಎಂಬ ಟೀಕೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಗುರಿಯಾಗಿದೆ. ಅಲ್ಪಾವಧಿಯಲ್ಲಿ ಮೂರು ಸುತ್ತೋಲೆಗಳನ್ನು ವಾಪಸ್ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಸರ್ಕಾರಗಳು ಸಾಮಾನ್ಯವಾಗಿ ಯಾರದೋ ಹಿತಾಸಕ್ತಿಯ ಪರವಾಗಿ ತಪ್ಪು ಹೆಜ್ಜೆ ಇಡುವುದು ಸಾಮಾನ್ಯ. ಆದರೆ ಪದೇಪದೇ ಇದೇ ತಪ್ಪುಗಳು ಮರುಕಳಿಸುತ್ತಿರುವುದಕ್ಕೆ ಜನರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಮುಂದಾಲೋಚನೆ ಮಾಡದೆ ಜನವಿರೋಧಿ ಕ್ರಮಗಳನ್ನು ಜರುಗಿಸಿ, ಆಕ್ಷೇಪಗಳು ವ್ಯಕ್ತವಾದ ಬಳಿಕ ಸುತ್ತೋಲೆ ಹಿಂಪಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸುಮಾರು ಒಂದು ತಿಂಗಳ ಅವಧಿಯಲ್ಲಿ ಇಂತಹ ಮೂರು ಪ್ರಕರಣಗಳು ನಡೆದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಲೇಖಕರ ವಿರೋಧವನ್ನೂ ಲೆಕ್ಕಿಸದೆ ಪಠ್ಯ ಮರುಸೇರ್ಪಡೆ

ನಾಡಗೀತೆಗೆ ಅವಮಾನ ಮಾಡಿದ ಆರೋಪವನ್ನು ಹೊತ್ತಿರುವ ರೋಹಿತ್ ಚಕ್ರತೀರ್ಥ ಎಂಬವರು ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆಗೆ ನಾಡಿನ ಹಿರಿಯ ಲೇಖಕರು ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರ ಅಂತಿಮವಾಗಿ ಏಳು ಲೇಖಕರ ಪಠ್ಯವನ್ನು ಕೈಬಿಟ್ಟಿತ್ತು. ಆದರೆ ಮತ್ತೆ ಆ ಲೇಖಕರ ಪಠ್ಯಗಳು ಸೇರಿಸುವುದಾಗಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

ನಾಡಿನ ಸಾಕ್ಷಿಪ್ರಜ್ಞೆಗಳಾದ ದೇವನೂರ ಮಹಾದೇವ ಹಾಗೂ ಡಾ. ಜಿ.ರಾಮಕೃಷ್ಣ ಅವರು ಸೇರಿದಂತೆ ಏಳು ಲೇಖಕರ ಪಠ್ಯವನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದ ಸೆ.23ರ ಆದೇಶವನ್ನು ಶಿಕ್ಷಣ ಇಲಾಖೆ ಹಿಂಪಡೆದಿದೆ. ಈ ಮೂಲಕ ಅವರ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

10ನೇ ತರಗತಿಯ ಪಠ್ಯದಲ್ಲಿನ (ಪ್ರಥಮ ಭಾಷೆ) ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಗದ್ಯ, ಜಿ.ರಾಮಕೃಷ್ಣ ಅವರ ‘ಭಗತ್ ಸಿಂಗ್’ ಪೂರಕ ಗದ್ಯ, 9ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ರೂಪ ಹಾಸನ ಅವರ ‘ಅಮ್ಮನಾಗುವುದೆಂದರೆ’ ಪೂರಕ ಪದ್ಯ, 10ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ಈರಪ್ಪ ಎಂ.ಕಂಬಳಿ ಅವರ ‘ಹೀಗೊಂದು ಬಸ್ ಪ್ರಯಾಣ’ ಪೂರಕ ಗದ್ಯ, ಸತೀಶ್ ಕುಲಕರ್ಣಿ ಅವರ ‘ಕಟ್ಟುತ್ತೇವೆ ನಾವು’ ಪದ್ಯ, 10ನೇ ತರಗತಿ ಪಠ್ಯದಲ್ಲಿನ (ದ್ವಿತೀಯ ಭಾಷೆ) ಸುಕನ್ಯ ಮಾರುತಿ ಅವರ ‘ಏಣಿ’ ಪದ್ಯ, 6ನೇ ತರಗತಿ ಪಠ್ಯದಲ್ಲಿನ (ಪ್ರಥಮ ಭಾಷೆ) ದೊಡ್ಡಹುಲ್ಲೂರು ರುಕ್ಕೋಜಿರಾವ್‌ ಅವರ ‘ಡಾ.ರಾಜ್ ಕುಮಾರ್’ ಗದ್ಯಗಳನ್ನು ಪರಿಗಣಿಸದಂತೆ ಶಿಕ್ಷಣ ಇಲಾಖೆಯು ಒಂದು ತಿಂಗಳ ಹಿಂದೆ ಆದೇಶ ಹೊರಡಿಸಿತ್ತು.

ಪೋಷಕರಿಂದ ದೇಣಿಗೆ ಪಡೆಯುವ ಸುತ್ತೋಲೆ ವಾಪಸ್‌

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅಕ್ಟೋಬರ್ 19ರಂದು ಸುತ್ತೋಲೆಯೊಂದನ್ನು ಹೊರಡಿಸಿ,  ‘ನಮ್ಮ ಶಾಲೆ – ನನ್ನ ಕೊಡುಗೆ’ ಯೋಜನೆ ಘೋಷಿಸಿದ್ದರು. ಆ ಮೂಲಕ ಪೋಷಕರು ನೀಡುವ ದೇಣಿಗೆಯನ್ನು ಶಾಲೆ- ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಬಿಲ್ ಪಾವತಿ, ಆಟದ ಮೈದಾನದ ಸುಧಾರಣೆ, ಗಣಕ ಯಂತ್ರಗಳ ರಿಪೇರಿ, ಬೋಧನೋಪಕರಣಗಳು, ಅಗತ್ಯವಾದ ಅತಿಥಿ ಶಿಕ್ಷಕರ ವೇತನಗಳು ಸೇರಿದಂತೆ ಮೊದಲ ಮತ್ತು ಎರಡನೇ ಆದ್ಯತೆಯಲ್ಲಿ ಪಟ್ಟಿ ಮಾಡಿದ ಸುಮಾರು 17 ಅಗತ್ಯಗಳಿಗಾಗಿ ಎಸ್‌ಡಿಎಂಸಿಗಳು ದೇಣಿಗೆ ಸಂಗ್ರಹಿಸಬೇಕೆಂದು ಸರ್ಕಾರ ಸೂಚಿಸಿತ್ತು.

ಈ ಯೋಜನೆಗೆ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆ ಮುಖಂಡರು, ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಮಠಗಳಿಗೆ, ವಿವಾದಾತ್ಮಕ ಸ್ವಾಮೀಜಿಗಳಿಗೆ ನೂರಾರು ಕೋಟಿ ಹಣ ನೀಡುವ ಸರ್ಕಾರ ಬಡಮಕ್ಕಳ ಶಿಕ್ಷಣಕ್ಕೆ ಕೊಡಲು ಹಣವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

“ಶಾಲೆಗಳಲ್ಲಿ ಅಗತ್ಯವಿರುವ ಖರ್ಚು ವೆಚ್ಚಗಳಿಗಾಗಿ ಪೋಷಕರಿಂದ 100 ರೂ. ದೇಣಿಗೆ ಸಂಗ್ರಹಿಸಲು ಎಸ್‌ಡಿಎಂಸಿಗಳಿಗೆ ಅನುಮತಿ ನೀಡಿ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಇದರಲ್ಲಿ ಮುಖ್ಯಮಂತ್ರಿಗಳ ಅಥವಾ ನನ್ನ ಪಾತ್ರವಿಲ್ಲ” ಎಂದು ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಹೇಳಿದ್ದರು.

ಮುಂದುವರಿದು ಈ ರೀತಿ ದೇಣಿಗೆ ಸಂಗ್ರಹಿಸಿಲು ಆರ್‌ಟಿಇ ಕಾಯ್ದೆಯಲ್ಲಿ ಅವಕಾಶವಿದೆ. ಎಸ್‌ಡಿಎಂಸಿಯವರು ಮನವಿ ಮಾಡಿದ್ದರು. ಈ ರೀತಿ ಸುತ್ತೋಲೆ ಹೊರಡಿಸುವುದಕ್ಕೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಅವಕಾಶವಿದೆ. ಎಲ್ಲವನ್ನು ಸರ್ಕಾರದ ಗಮನಕ್ಕೆ ತರಬೇಕಾಗಿಲ್ಲ ಎಂದು ಸಹ ಸಚಿವರು ಸಮರ್ಥಿಸಿಕೊಂಡಿದ್ದರು. ಆದರೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆ ಸುತ್ತೋಲೆಯನ್ನೂ ಕರ್ನಾಟಕ ಸರ್ಕಾರ ವಾಪಸ್ ಪಡೆಯಿತು.

ವೇದಗಣಿತದ ಹೆಸರಲ್ಲಿ ಲೂಟಿ ಆರೋಪ; ಯೋಜನೆ ಸ್ಥಗಿತ

ದಲಿತ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸುವ ಯೋಜನೆಯನ್ನು ರೂಪಿಸಿದ್ದ ಸರ್ಕಾರ, ತೀವ್ರ ವಿರೋಧದ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಹೀಗಾಗಿ ದಲಿತರಿಗೆ ಮೀಸಲಾಗಿದ್ದ ಕೋಟ್ಯಂತರ ಹಣ ದುರುಪಯೋಗ ಆಗುವುದು ತಪ್ಪಿತು.

ವೇದಗಣಿತ ನೆಪದಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ದೂರುಗಳು ಬಂದಿದ್ದವು. ದಲಿತ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ದಲಿತರಿಗೆ ಮೀಸಲಾದ ಹಣವನ್ನು ಖಾಸಗಿ ಸಂಸ್ಥೆಗಳು ದುರುಪಯೋಗ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ‘ನಾನುಗೌರಿ.ಕಾಂ’ ಸರಣಿಯಾಗಿ ವರದಿ ಮಾಡಿತ್ತು. ವೇದಗಣಿತದಿಂದ ದಲಿತ ಮಕ್ಕಳ ಮೇಲೆ ಬೀರುವ ದೂರಗಾಮಿ ಪರಿಣಾಮಗಳ ಕುರಿತು ಬೆಳಕು ಚೆಲ್ಲಲಾಗಿತ್ತು. ಶಿಕ್ಷಣ ಇಲಾಖೆ ವ್ಯಾಪ್ತಿಯ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಡುತ್ತಿರುವುದು ಕೂಡ ಅನುಮಾನಗಳಿಗೆ ಆಸ್ಪದ ನೀಡಿತ್ತು.

ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ಹಕ್ಕುಗಳ ಸಂರಕ್ಷಣಾ ಪರಿಷತ್ ಈ ಕುರಿತು ಸರ್ಕಾರದ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿತ್ತು. ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು ಉಲ್ಲಂಘಿಸಿ ವೇದಗಣಿತ ಯೋಜನೆಗೆ ಆದೇಶವನ್ನು ಹೊರಡಿಸಲಾಗಿದೆ. ಸದರಿ ಆದೇಶವು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಕ್ರಿಯಾ ಯೋಜನೆ ಅನುಮೋದನೆಗೊಂಡಿರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಅನಧಿಕೃತ ಟಿಪ್ಪಣಿ ಉಲ್ಲೇಖಿಸಿತ್ತು.

ಆ ನಂತರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಅಪರ ಮುಖ್ಯನಿರ್ದೇಶಕರು ತಮ್ಮ ನಿರ್ದೇಶನಗಳನ್ನು ಹಿಂಪಡೆದಿರುವುದಾಗಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ತಿಳಿಸಿದ್ದರು.

“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಶೇ. 25ರ ಅನುದಾನದಲ್ಲಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೂಕ್ತ ಸಮವಸ್ತ್ರ ಸಹಿತ ವೇದಗಣಿತ ತರಬೇತಿ ನೀಡಲು ಎವಿಎಂ ಅಕಾಡೆಮಿಗೆ (ಹಿರಿಯೂರು) ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ನಿಯಮಾನುಸಾರ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಲ್ಲೇಖಿತ ಪತ್ರದಲ್ಲಿ ನಿರ್ದೇಶನ ನೀಡಲಾಗಿತ್ತು. ಪ್ರಸ್ತುತ ಸದರಿ ವಿಷಯದ ಕುರಿತು ಪುನರ್‌ ಪರಿಶೀಲಿಸಲಾಗಿದ್ದು, ಶಾಲೆಗಳಿಗೆ ಬೋಧಿಸುವ ವಿಷಯಗಳ ಪಠ್ಯಕ್ರಮದ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಿರ್ಧರಿಸಬೇಕಾಗಿರುತ್ತದೆ. ಆದರೆ ಈ ಕುರಿತು  ಸದರಿ ಇಲಾಖೆಯೊಂದಿಗೆ ಸಮಾಲೋಚಿಸದೆ ನಿರ್ದೇಶನ ನೀಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಉಲ್ಲೇಖಿತ ಸರ್ಕಾರದ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ” ಎಂದು ಸ್ಪಷ್ಟಪಡಿಸಿದ್ದರು.

 

ಇದನ್ನೂ ಓದಿರಿ: ಪತ್ರಕರ್ತರಿಗೆ ಲಂಚ ಪ್ರಕರಣ: ಬೊಮ್ಮಾಯಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಶಿಕ್ಷಣತಜ್ಞರಾದ ಶ್ರೀಪಾದ ಭಟ್‌ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಮೂರು ವಿದ್ಯಮಾನಗಳು ಇರುವುದನ್ನು ಕಾಣಬಹುದು. ಸರ್ಕಾರದ ಇಂತಹ ಹುಚ್ಚಾಟಗಳು ಅಳಿವಿನಂಚಿನಲ್ಲಿರುವ ಸಮುದಾಯದ ಮಕ್ಕಳು ಮತ್ತು ಪೋಷಕರ ಮೇಲೆ ಪರಿಣಾಮ ಬೀರುತ್ತವೆ. ಯಾವುದೇ ಹೆಜ್ಜೆ ಇರಿಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ” ಎಂದರು.

“ಲೇಖಕರ ವಿರೋಧದ ನಂತರ ಕೆಲವು ಪಠ್ಯಗಳನ್ನು ತೆಗೆಯುವುದಾಗಿ ಸರ್ಕಾರ ಹೇಳಿತ್ತು. ಆದರೆ ಈಗ ಸೇರಿಸುವುದಾಗಿ ತಿಳಿಸಿದೆ. ಪೋಷಕರು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಹೇಳುತ್ತಿದೆ. ಆದರೆ ಇದು ಪರಾದರ್ಶಕವಾಗಿಲ್ಲ. ಲೇಖಕರ ಅನುಮತಿಯನ್ನು ಗಣನೆಗೆ ತೆಗೆದುಕೊಳ್ಳದೆ ಪಠ್ಯಪುಸ್ತಕ ರೂಪಿಸಿರುವುದು ಸಾಂವಿಧಾನಿಕ ಬಿಕ್ಕಟ್ಟು. ಆದೇಶವಿಲ್ಲದೆ ಪಠ್ಯರಚಿಸಿ, ಮುದ್ರಣವನ್ನೂ ಮಾಡಿ ಪಠ್ಯಗಳನ್ನು ತೆಗೆಯುವುದಾಗಿ ಹೇಳಿದ್ದರಿಂದ ತೊಂದರೆಯಾಗಿರಬಹುದು. ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿರುವ ಸಾಧ್ಯತೆ ಇದೆ” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...