Homeಮುಖಪುಟಡಾ. ಸಿ ರವೀಂದ್ರನಾಥ್ ಅನುವಾದಿಸಿರುವ ’ಬಾಶೋ ಹಾಯ್ಕು’ವಿಗೆ ನಟರಾಜ ಬೂದಾಳು ಅವರ ಮುನ್ನುಡಿ: ಒಂದನ್ನು ತಿಳಿದರೆ...

ಡಾ. ಸಿ ರವೀಂದ್ರನಾಥ್ ಅನುವಾದಿಸಿರುವ ’ಬಾಶೋ ಹಾಯ್ಕು’ವಿಗೆ ನಟರಾಜ ಬೂದಾಳು ಅವರ ಮುನ್ನುಡಿ: ಒಂದನ್ನು ತಿಳಿದರೆ…

- Advertisement -
- Advertisement -

ಒಂದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ – ಎನ್ನುವುದು ಬೌದ್ಧ ದರ್ಶನದ ಮಾತು. ಇದು ಸರಿಯಾದ ಲೋಕವ್ಯಾಖ್ಯಾನದ ಮೊದಲ ಹೆಜ್ಜೆ. ಈ ಮಾತನ್ನು ಅನೇಕ ಕಾರಣಗಳಿಗೆ ಎಚ್ಚರದಿಂದ ಓದಬೇಕಾಗಿದೆ. ಯಾಕೆಂದರೆ ದರ್ಶನವಾಗಲೀ, ಕಾವ್ಯವಾಗಲೀ, ಮೀಮಾಂಸೆಯಾಗಲೀ ತನ್ನ ಉತ್ತುಂಗವನ್ನು ಮುಟ್ಟುವುದು ಲೋಕದ ಜೊತೆಗೆ ಸಂಪೂರ್ಣವಾಗಿ ಬೆರೆತು ತನ್ನನ್ನು ಇಲ್ಲವಾಗಿಸಿಕೊಂಡಾಗ. ಹಾಗೆ ತನ್ನನ್ನು ಇಲ್ಲವಾಗಿಸಿಕೊಳ್ಳಲು, ಲೋಕದೊಡನೆ ಬೆರೆಯಲು ತನ್ನನ್ನಾಗಲೀ ಲೋಕವನ್ನಾಗಲೀ ಅದು ಇರುವಂತೆ ಇದಿರಾಗಬೇಕು. ಲೋಕವನ್ನು ಇದಿರಾಗಲು ಎರಡು ಮಾದರಿಗಳು ನಮ್ಮ ಮುಂದಿವೆ. ಒಂದು ಅದರ ಸೂಕ್ಷ್ಮಾತಿಸೂಕ್ಷ್ಮ ಸ್ತರದ ವಿಶ್ಲೇಷಣೆಯ ಮೂಲಕ ಅದು ಏನು ಎಂಬುದನ್ನು ಅರಿತುಕೊಳ್ಳುವುದು. ಇನ್ನೊಂದು ವೈಶ್ವಿಕ ದೃಷ್ಟಿಕೋನದ ಮೂಲಕ ಮಾಡುವ ಅನುಸಂಧಾನ. ಇದನ್ನು ವಿಜ್ಞಾನವೂ ಒಪ್ಪಿಕೊಳ್ಳುತ್ತದೆ; ಬಹುತೇಕ ದರ್ಶನಗಳೂ ಒಪ್ಪಿಕೊಳ್ಳುತ್ತವೆ. ಯಾವುದಾದರೂ ಒಂದನ್ನು ಅರಿತುಕೊಳ್ಳುವುದು ಎಂದರೆ ಅದರ ರಚನೆ ಮತ್ತು ನಿರಚನೆಯು ಹೇಗೆ ಆಗಿದೆ ಆಗುತ್ತಿದೆ ಎಂಬುದನ್ನು ಕಂಡುಕೊಳ್ಳುವುದು. ಅದನ್ನು ಅರಿತುಕೊಂಡರೆ ಅದೇ ಸತ್ಯವು ಲೋಕಸಮಸ್ತಕ್ಕೂ ಅನ್ವಯವಾಗುತ್ತದೆ. ಹಾಗಾಗಿ ಒಂದನ್ನು ಅರಿತುಕೊಳ್ಳುವುದು ಎಂದರೆ ಲೋಕವನ್ನು ಅರಿತುಕೊಳ್ಳುವುದು ಎಂದೇ ಅರ್ಥ. ಅಷ್ಟೇ ಅಲ್ಲ ಒಂದರ ಶೂನ್ಯತೆಯು ಲೋಕ ಸಮಸ್ತದ ಶೂನ್ಯತೆಯೂ ಆಗಿರುವುದು ಅರಿವಿಗೆ ಬರುತ್ತದೆ ಎನ್ನುವವರೆಗೆ ಈ ಮಾತು ವಿಸ್ತಾರವನ್ನು ಪಡೆದುಕೊಳ್ಳುತ್ತದೆ.

ಬೃಹತ್ತಾದ ಗುಡಾರವೊಂದು ನಮ್ಮ ಅರಿವನ್ನು ಕವಿದುಕೊಂಡಿರುತ್ತದೆ. ಇದನ್ನು ಮಹಾಮರೆವು ಅಂತಲೋ, great amnaesia ಅಂತಲೋ ಕರೆಯಬಹುದು. ಇದೊಂದು ಜೈವಿಕ ಪ್ರಕ್ರಿಯೆ. ನಮ್ಮ ಮನೋಕೋಶವನ್ನು ನಿರಂತರವಾಗಿ ತುಂಬಿಕೊಳ್ಳುವ ಅನುಭವ ಸಂರಚನೆಗಳು ಅಲ್ಲೇ ನೆಲೆಗೊಂಡು ನಮ್ಮನ್ನು ನಮ್ಮ ಪ್ರಜ್ಞೆಯಿಂದ ದೂರಮಾಡುತ್ತವೆ. ಲೋಕದ ಅನುಭವಗಳನ್ನು ನಾವು ವಿಶ್ಲೇಷಿಸಿ ತೀರ್ಮಾನ ಕೈಗೊಳ್ಳುವ ಮೊದಲೇ ಹೀಗೆ ಸಂಗ್ರಹಗೊಂಡ ಅನುಭವಗಳು ತಾವೇ ನಿರ್ಣಯ ತೆಗೆದುಕೊಳ್ಳಲಾರಂಭಿಸಿ ನಮ್ಮನ್ನು ಅವುಗಳ ಅಡಿಯಾಳಾಗಿಸಿಕೊಳ್ಳುತ್ತವೆ. ನಮ್ಮಿಂದ ನಮ್ಮನ್ನು ಬಿಡುಗಡೆಗೊಳಿಸಲು ಕಾವ್ಯ, ದರ್ಶನ, ಮೀಮಾಂಸೆ ಮತ್ತು ಅನುಭಾವಿ ಸಾಧಕ ಮಾರ್ಗಗಳು ಒದಗಿಬರುತ್ತವೆ. ಜಡ್ಡುಬಿದ್ದ ನಮ್ಮ ಲೋಕಾನುಸಂಧಾನದ ಕ್ರಮವನ್ನು ಬದಲಿಸಲು ಅವು ಬಲವಾದ ಪ್ರಯೋಗವನ್ನೆ ಮಾಡಬೇಕಾಗುತ್ತದೆ. ಜೆನ್ ಕೋಆನ್‌ಗಳು, ತಾವೋ ವಚನಗಳು, ಅಲ್ಲಮನ ವಚನಗಳು, ಸೂಫಿ ಕತೆಗಳು ಮತ್ತು ಹಾಯಿಕುಗಳು ಇಂತಹ ಪ್ರಯೋಗಗಳೇ ಆಗಿವೆ. ಸಾಮಾನ್ಯವಾಗಿ ಇಂತಹ ಅಭಿವ್ಯಕ್ತಿಗಳು ನಮ್ಮ ಲೋಕಾನುಸಂಧಾನದ ಕ್ರಮವನ್ನು ಸೂಕ್ಷ್ಮಸ್ತರಕ್ಕೆ ಕುಗ್ಗಿಸಿ ಅಥವಾ ವೈಶ್ವಿಕ ಸ್ತರಕ್ಕೆ ಹಿಗ್ಗಿಸಿ ಲೋಕವನ್ನು ನೋಡುವಂತೆ ಮಾಡುತ್ತವೆ. ಹಾಗೆ ಹಿಗ್ಗಿಸಿಯೋ ಕುಗ್ಗಿಸಿಯೋ ನೋಡಿದಾಗ ಕಂಡ ಲೋಕ ಮತ್ತು ನಿತ್ಯ ನೋಡುತ್ತಿರುವ ಲೋಕಗಳಲ್ಲಿ ಯಾವುದು ನಿಜವಾದುದು? ಎಂಬ ಗೊಂದಲ ಮೊದಲಿಗೆ ಉಂಟಾಗುತ್ತದೆ. ಈ ಗೊಂದಲ ತಿಳಿಯಾಗುವ ಹೊತ್ತಿಗೆ ಮೇಲಿನ ಮೊದಲ ಸಾಲಿಗೆ ತಲುಪಿರುತ್ತೇವೆ. ಹಾಯಿಕು ಕಾವ್ಯ ಪ್ರಕಾರ ಹಾಗೆ ಸೂಕ್ಷ್ಮಸ್ತರಕ್ಕೆ ಇಳಿದು ಲೋಕವನ್ನು ನೋಡಲು ಒತ್ತಾಯಿಸುತ್ತದೆ. ಇಂತಹ ಕಾವ್ಯಪ್ರಕಾರವೊಂದರ ಓದಿಗೆ ಇಷ್ಟು ವಿಸ್ತಾರವಾದ ಪ್ರವೇಶಿಕೆ ಬೇಕೆ? ಬೇಕು. ಏಕೆಂದರೆ ಇದು ಕೇವಲ ಮತ್ತೊಂದು ಕಾವ್ಯ ಪ್ರಕಾರ ಅಲ್ಲ; ಬದಲಿಗೆ ಮತ್ತೊಂದು ಲೋಕಾನುಸಂಧಾನದ ಮಾದರಿಯಾಗಿದೆ. ಹಾಗಾಗಿ ಸಂಕ್ಷೇಪಗೊಂಡ ಮಾತನ್ನು ಅರ್ಥೈಸಲು ವ್ಯಾಖ್ಯಾನವೂ ಸೂಕ್ಷ್ಮಸ್ತರಕ್ಕೆ ಇಳಿಯಬೇಕಾಗುತ್ತದೆ.

ಹಾಯ್ಕುಗಳ ಅನುವಾದಿತ ಸಂಕಲನವೊಂದಕ್ಕೆ ನಾಲ್ಕು ಮಾತುಗಳನ್ನು ಬರೆಯಲು ಇಂತಹ ಗಂಭೀರ ತತ್ವದರ್ಶನದ ಮಾತಿನಿಂದ ಪ್ರವೇಶಿಸುವುದಕ್ಕೆ ಮತ್ತೂ ಒಂದು ಕಾರಣವಿದೆ. ಸಾಹಿತ್ಯದ ಹೊಸ ಪ್ರಕಾರವೊಂದು ಮತ್ತೊಂದು ಆವರಣಕ್ಕೆ ಪ್ರವೇಶಿಸುತ್ತಿದೆ ಎಂದರೆ ಅದು ಕೇವಲ ಒಂದು ಹೊಸ ಅಭಿವ್ಯಕ್ತಿ ಪ್ರಕಾರದ ಪ್ರವೇಶವಷ್ಟೆ ಆಗಿರದೆ ಹೊಸ ಕಾವ್ಯಮೀಮಾಂಸೆಯ, ಹೊಸದೊಂದು ದರ್ಶನದ ಪ್ರವೇಶವೆಂದು ಗುರುತಿಸುವ ಅಗತ್ಯವಿದೆ. ಹಾಯಿಕು, ಜೆನ್, ತಾವೋ, ಜೈನ-ಬೌದ್ಧ ಕಥನಸಾಹಿತ್ಯ ವಚನ ಮುಂತಾದ ಪ್ರಕಾರಗಳು ಕೇವಲ ಕತೆ ಕಾವ್ಯವೆಂದು ಪರಿಗಣಿತವಾದವುಗಳಲ್ಲ. ಅವುಗಳ ಮೂಲಕ ಲೋಕಾನುಸಂಧಾನದ ಹೊಸ ಮಾದರಿಗಳು ಮುನ್ನೆಲೆಗೆ ಬರುತ್ತವೆ. ಉದಾಹರಣೆಗೆ ದಾವ್ ದ ಜಿಂಗ್‌ನಂತಹ ತಾವೋ ಕಾವ್ಯ ಪ್ರಕಾರವನ್ನು ಪ್ರಾಮಾಣಿಕವಾಗಿ ಇದಿರಾದರೆ ಅದು ನಮ್ಮ ಲೋಕಗ್ರಹಿಕೆಯ ವಿಧಾನವನ್ನೂ ತನ್ಮೂಲಕ ನಮ್ಮ ಬಾಳುವೆಯ ಕ್ರಮವನ್ನೂ ಬದಲಿಸಬಲ್ಲ ಶಕ್ತ ಮಾಧ್ಯಮಗಳು.

ಇದನ್ನೂ ಓದಿ: ‘ಶ್ರಮಜೀವಿಗಳು, ವೈರಾಗ್ಯ ಮತ್ತು ಮತಧರ್ಮ’: ‘ಜರ್ಮನ್ ರೈತ ಯುದ್ಧ’ ಪುಸ್ತಕದ ಆಯ್ದ ಭಾಗ

ಹಾಯಿಕುಗಳು ಕನ್ನಡಕ್ಕೆ ಕಾಲಿಡಲು ಇದೀಗ ಆರಂಭಿಸಿವೆ. ಈ ಹಿಂದೆ ಕೆಲವು ಬಿಡಿ ಪ್ರಯತ್ನಗಳಾಗಿವೆ. ಗೆಳೆಯರಾದ ಡಾ ಸಿ ರವೀಂದ್ರನಾಥ್ ಹಾಯಿಕು ಕಾವ್ಯದ ಗಂಭೀರ ಅನುಸಂಧಾನಕ್ಕೆ ತೊಡಗಿದ್ದಾರೆ. ಹಾಯಿಕು ಜಪಾನಿನ ಒಂದು ಕಾವ್ಯ ಪ್ರಕಾರ. ಹೀಗೆ ಅನ್ಯನೆಲದ ಸಾಹಿತ್ಯ ಪ್ರಕಾರವೊಂದನ್ನು ಗಂಭೀರವಾಗಿ ತನ್ನದನ್ನಾಗಿಸಿಕೊಂಡು ಮತ್ತೊಂದು ಭಾಷಾ ಜಾಯಮಾನಕ್ಕೆ ಹೊಂದಿಸಿ ಕೊಡುವುದು ಸರಳ ಸಂಗತಿ ಅಲ್ಲ. ಅಂತಹ ಪ್ರಯತ್ನಗಳು ಅನೇಕ ಇಕ್ಕಟ್ಟುಗಳನ್ನು ಸೃಷ್ಟಿಸಬಲ್ಲವು. ಗಜ಼ಲ್ ಕಾವ್ಯ ಪ್ರಕಾರವು ಕನ್ನಡಕ್ಕೆ ಬಂದನಂತರ ಉಂಟಾಗಿರುವ ವಾಗ್ವಾದಗಳನ್ನು ಗಮನಿಸಬಹುದು. ಒಂದು ಭಾಷಿಕ ಆವರಣದಲ್ಲಿ ಸಹಜವಾಗಿ ಮೂಡಿಬಂದ ಭಾಷಿಕ ಸೌಂದರ್ಯ, ನಾದಲಯಗಳು ಮತ್ತೊಂದು ಆವರಣದಲ್ಲಿ ಉಂಟಾಗುವಂತೆ ಮಾಡುವುದು ಕಷ್ಟಸಾಧ್ಯ. ಹಾಯಿಕುಗಳು ಅತ್ಯಂತ ಸಂಕ್ಷೇಪ ಸಂರಚನೆಗಳು. ಅದರ ಹಿಂದೆ ದೀರ್ಘಕಾಲೀನವಾದ ಪಾರಂಪರಿಕ ಸ್ಪಂದನೆಗಳಿವೆ. ಮೊದಲನೆಯದಾಗಿ ಲೋಕದ ಸಹಜ ನಡೆಯನ್ನು ಒಂದಿಷ್ಟೂ ಅಲಗಿಸದಂತೆ ಹಿಡಿಯುವ ಸವಾಲನ್ನು ಹಾಯಿಕು ಮುಂದಿಡುತ್ತದೆ. ಅದು ಬೌದ್ಧ ತಾತ್ವಿಕತೆಯ ಎಂಟು ನಡೆಗಳಲ್ಲಿ ಒಂದಾದ right understandingನ ಕಾವ್ಯ ರೂಪವೆನ್ನಲು ಅಡ್ಡಿಯಿಲ್ಲ.

ಹಾಯಿಕು ನಡೆದುಬಂದ ದಾರಿ

ಮಾತ್ಸೋ ಬಾಶೋನನ್ನು (1644-1694) ಹಾಯಿಕು ಕಾವ್ಯ ಪ್ರಕಾರದ ಶ್ರೇಷ್ಠ ಮಾದರಿ ಎಂದು ಗುರುತಿಸುತ್ತಾರೆ. ಜಪಾನೀ ಕಾವ್ಯ ಪ್ರಕಾರವಾದ ಹಾಯಿಕುಗೆ ಬಾಶೋಗಿಂತ ಸುಮಾರು ಐದುನೂರು ವರ್ಷಗಳ ಹಿಂದಿನ ಇತಿಹಾಸ ಇದೆ. ಅಂದರೆ ಸುಮಾರು ಕ್ರಿ.ಶ ಹನ್ನೆರಡನೆಯ ಶತಮಾನದಲ್ಲಿಯೇ ಅದರ ಆರಂಭವನ್ನು ಗುರುತಿಸಲಾಗುತ್ತದೆ. ನಮ್ಮಲ್ಲಿ ಅದು ವಚನದ ಕಾಲ! ಇಲ್ಲಿಯೂ ಹೊಸ ಪ್ರಕಾರಗಳ ಪ್ರಯೋಗ ನಡೆಯುತ್ತಿತ್ತು. ಲೋಕದ ಹೊಸ ನೋಟಕ್ರಮಗಳ ಪ್ರಯೋಗ ಆರಂಭವಾಗಿದ್ದವು. ಹಾಗಾಗಿ ಇಂತಹ ಹೊಸ ಪ್ರಕಾರಗಳನ್ನು ಕೇವಲ ಸಾಹಿತ್ಯಿಕ ಅಭಿವ್ಯಕ್ತಿ ಎನ್ನಲಾಗದು. ಹಾಯಿಕುವನ್ನು ಮೊದಲಿಗೆ ’ಹೊಕ್ಕು’ ಎನ್ನುತ್ತಿದ್ದರು. ಹೊಕ್ಕು ಪದಕ್ಕೆ ಕನ್ನಡದ ಹಾಸು-ಹೊಕ್ಕು ಪದಕ್ಕೆ ಇರುವ ಅರ್ಥವೇ ಇದೆ. ಅಂದರೆ ಕವನವೊಂದರ ಶುರುವಿನ ಎಳೆ ಎಂಬರ್ಥದಲ್ಲಿ ಅದು ಬಳಕೆಯಾಗಿದೆ. ನಂತರ ಅದನ್ನು ಕುಸರಿ ರೆಂಗಾ (ಕಾವ್ಯಮಾಲೆ) ಎಂಬ ಹೆಸರಿನಿಂದ ಕರೆದರೆಂಬುದು ಇತಿಹಾಸದಲ್ಲಿ ದಾಖಲಾದ ಸಂಗತಿ. ಗಜ಼ಲ್ ಪ್ರಕಾರ ಹೇಗೆ ಅಂತ್ಯಪ್ರಾಸಗಳುಳ್ಳ ಶೇರ್‌ಗಳು, ಪ್ರೇಮತುಂಬಿದ ಅನುಭಾವಕ್ಕೆ ತುಡಿಯುವ, ಆಪ್ತ ಸಹೃದಯಿಗಳೊಡನೆ ಹಾಡುತ್ತ ಹಂಚಿಕೊಳ್ಳಬಲ್ಲ ಕಾವ್ಯವಾಗಿದೆಯೋ ಹಾಗೆ ಹಾಯಿಕು ನಿರ್ದಿಷ್ಟ ಸಂಖ್ಯೆಯ ಸ್ವರಸಂಯೋಜನೆಯ ಮತ್ತು ನಿಸರ್ಗದ ಸಹಜ ನಡೆಯೊಡನೆ ಅಂತಃಸಂಬಂಧವನ್ನು ನಿರಂತರವಾಗಿ ಕಾಪಾಡಿಕೊಂಡು ಬಂದ ಕಾವ್ಯ ಪ್ರಕಾರವಾಗಿದೆ. ಹಾಯಿಕುಗಳ ಭಾಷಿಕ ಸ್ವರೂಪವನ್ನು ಯಥಾವತ್ತಾಗಿ ಕನ್ನಡಕ್ಕೆ ತರಲಾಗದು. ಏಕೆಂದರೆ ಹಾಯಿಕುವಿನ ರಚನೆಯಲ್ಲಿ ಬಳಸುವ ಸ್ವರಸಂಖ್ಯೆಯ ಬಗೆಗೆ ಖಚಿತ ನಿಯಮಗಳಿವೆ.

ಮೂವತ್ತೊಂದು ಸ್ವರಾಕ್ಷರಗಳ ಜಪಾನೀ ಕಾವ್ಯವೆಂದು ಹೆಸರಾಗಿರುವ ಹಾಯಿಕು ನಂತರ ಹದಿನೇಳು ಸ್ವರಾಕ್ಷರಗಳಿಗೆ ಇಳಿಯಿತು. ಅದು ಕೇವಲ ಸ್ವರ ನಿಯಂತ್ರಣವಲ್ಲ; ಬದಲಿಗೆ ನಾವಾಗಿ ತುಂಬಿಕೊಂಡಿರುವ ಭಾಷಿಕ ಕಸವನ್ನು ಬೇರ್ಪಡಿಸಿ ಸ್ವಚ್ಛಗೊಳಿಸಿಕೊಂಡ ಆವರಣದಲ್ಲಿ ಅಸಲಿ ಕಾವ್ಯ ಪ್ರತಿಷ್ಠಾಪಿತವಾಗಲಿ ಎಂಬ ಎಚ್ಚರ! ಜಪಾನೀ ಭಾಷೆಯ ಸ್ವರಸ್ವರೂಪವು ಕನ್ನಡದ ಭಾಷಾ ಜಾಯಮಾನಕ್ಕೆ ಭಿನ್ನವಾದುದು. ಆದರೆ ಹಾಯಿಕುವಿನ ಸಂಕ್ಷಿಪ್ತತೆಯು ಅದರ ಜೀವದ್ರವ್ಯವಾಗಿದ್ದು ಅದನ್ನು ಕನ್ನಡದಲ್ಲಿ ಪ್ರಯೋಗಿಸಲು ಯಾವ ಅಡ್ಡಿಯೂ ಇಲ್ಲ. ಹಾಗಾಗಿ ಇಂತಹ ಕಾವ್ಯಪ್ರಕಾರಗಳ ಅನುಸಂಧಾನವು ಒಂದು ಹಂತದ ಭಾಷಿಕ ಮತ್ತು ತಾತ್ವಿಕ ಸಿದ್ಧತೆಯನ್ನು ಬೇಡುತ್ತದೆ. ಕನ್ನಡದ ವಚನಗಳ ಓದಿಗೆ ಬೇಕಾಗುವ ತತ್ವಸಂಹಿತೆ, ಸಾಧಕ ಸಂಹಿತೆಗಳನ್ನು ಒದಗಿಸಿಕೊಳ್ಳದ ಅವುಗಳ ಓದು ಅಪೂರ್ಣವೆನ್ನಿಸುವ ಹಾಗೆಯೇ ಹಾಯಿಕುಗಳ ಓದು ಕೂಡ ಒಂದು ಹಂತದ ತಾತ್ವಿಕ ಸಿದ್ಧತೆಯನ್ನು ಬೇಡುತ್ತದೆ. ಹಾಗೆಯೇ ಜೆನ್ ಕೋನ್‌ಗಳ ಅನುಸಂಧಾನಕ್ಕೆ, ಕನ್ನಡದ ತತ್ವಪದಗಳನ್ನು ಇದಿರಾಗಲು ಮತ್ತೊಂದು ರೀತಿಯ ತತ್ವಸಂಹಿತೆಯ ಅಗತ್ಯವಿದೆ. ವಿಶೇಷವೆಂದರೆ ಈ ಸಿದ್ಧತೆಯು ಈಗಾಗಲೇ ಇರುವುದರ ಜೊತೆಗೆ ಇನ್ನೊಂದಷ್ಟನ್ನು ಸೇರಿಸಿಕೊಳ್ಳುವುದಲ್ಲ ಬದಲಿಗೆ ಇರುವುದನ್ನು ಖಾಲಿಯಾಗಿಸಿಕೊಂಡು ಬರಿಗೈಯಾಗಿ ನಿಲ್ಲುವುದು! ಎಲ್ಲವನ್ನೂ ಕಳೆದುಕೊಳ್ಳುವುದು ಸುಲಭದ ಸಂಗತಿಯಲ್ಲ. ಹಾಯಿಕು ತಾಕ್ಷಣಿಕತೆಯ ಕಾವ್ಯ. ಅನಂತ ಹಿಂದಣವನು ಅನಂತ ಮುಂದಣವನ್ನು ಒಂದು ದಿನ ಒಳಕೊಳ್ಳಲು ಸಾಧ್ಯವಾಗುವುದು ನಿರಂತರ ತಾಕ್ಷಣಿಕತೆಗೆ ಮಾತ್ರ. ಅಂತಹ ನಿರಂತರ ತಾಕ್ಷಣಿಕತೆಯನ್ನು ನಡೆಯಾಗಿಸಿಕೊಂಡಿರುವ ಹಾಯಿಕು ಕಾವ್ಯವನ್ನು ಕನ್ನಡಕ್ಕೆ ಬರಮಾಡಿಕೊಳ್ಳಲು ಇಲ್ಲಿಯ ನೆಲ ಮೊದಲೇ ಹದಗೊಂಡಿದೆ! ಈ ನೆಲದ ಅನುಭಾವಿಗಳು ಈಗಾಗಲೇ ಇಲ್ಲಿ ಉತ್ತು ಬಿತ್ತಿ ಸಹಜಯಾನದ ಬೆಳೆ ತೆಗೆದಿರುವುದರಿಂದ ಸಲೀಸಾಗಿ ಹಾಯಿಕು ಕನ್ನಡಕ್ಕೆ ಹರಿಯಬಲ್ಲದು.

ಹಾಯಿಕು ಜಪಾನಿನ ವಾಕಾ ಎನ್ನುವ ಹಾಡುಸಂಪ್ರದಾಯದ ರಚನೆ. ಬೌದ್ಧ ಮತ್ತು ಸ್ಥಳೀಯ ಅನುಭಾವಿ ಧಾರೆಗಳ ಪ್ರಭಾವದಿಂದ ರೂಪು ಪಡೆದದ್ದು. ಮೊದಲಿಗೆ ಕವಿ ಮತ್ತು ಕೇಳುಗರಿಬ್ಬರೂ ಸೇರಿ ಕಟ್ಟುವ ಕಾವ್ಯ ಪ್ರಕಾರವಾಗಿತ್ತು. ಕಾವ್ಯವೆಂದರೆ ಕವಿ ಮತ್ತು ಓದುಗರಿಬ್ಬರ ಒಡನಾಟದಿಂದ ಉಂಟಾಗುವ ಅನುಭೂತಿ ಎಂಬ ಸೂಚನೆಯನ್ನು ನೀಡುತ್ತಿತ್ತು. ಅಷ್ಟೇ ಅಲ್ಲ ಕಾವ್ಯ ಎಲ್ಲರ ಸಾಧ್ಯತೆ ಎಂಬುದನ್ನೂ ತೋರಿತ್ತು. ನಿರಂತರವಾಗಿ ನಿಸರ್ಗದ ನಡೆಯ ಜೊತೆಗೇ ತಳುಕು ಹಾಕಿಕೊಂಡು ಬಂದಿರುವ ಹಾಯ್‌ಕು ಸಣ್ಣದು ಸುಂದರ ಎನ್ನುವ ತತ್ವವನ್ನು ತನ್ನ ಅಂತಸ್ಸತ್ವವಾಗಿಸಿಕೊಂಡಿದೆ. ಇದು ಪಿಸು ನುಡಿಯ ಕಾವ್ಯ. ಪೂರ್ತಿ ಬರಿದಾಗುವ ಮೂಲಕ ತುಂಬಿಕೊಳ್ಳುವ ನಡೆಯ ಈ ಕಾವ್ಯಕ್ಕೆ ಯಾವುದೂ ಯಃಕಶ್ಚಿತವಲ್ಲ. ಬೃಹತ್ತು ಮಹತ್ತು ಎನ್ನುವುದು ಸಾಪೇಕ್ಷವಾದುದು. ಸೂಕ್ಷ್ಮ ಸ್ಥೂಲ ಎಂಬ ವಿಂಗಡಣೆಯೇ ಅತಾರ್ಕಿಕ.

ಇದನ್ನೂ ಓದಿ: ’ಕೊಲುವೆನೆಂಬ ಭಾಶೆ’ ಕೃತಿ ಪರಿಚಯ: ಉಳಿಸುವ ನುಡಿಯ ಹುಡುಕುತ್ತಾ…

ಪ್ರಸ್ತುತ ಡಾ ಸಿ ರವೀಂದ್ರನಾಥ್ ಕನ್ನಡಕ್ಕೆ ರೂಪಾಂತರಿಸಿರುವ ಬಾಶೋ ಹಾಯ್ಕುಗಳು ಕನ್ನಡದ ಕಾವ್ಯಕ್ಕೆ ಈಗಾಗಲೇ ಸೇರ್ಪಡೆ ಆಗಿರುವ ಹಾಯ್ಕು ಕಾವ್ಯದ ವಿಸ್ತರಣೆಗೆ ದುಡಿಯುತ್ತವೆ. ಡಾ ರವೀಂದ್ರನಾಥ್ ಬೆಚ್ಚನೆಯ ಮನಸ್ಸಿನ ಅಂತಃಕರುಣಿ. ನಿಸರ್ಗವನ್ನು ಸದಾ ಆರಾಧನಾಭಾವದಿಂದ ನೋಡುವ, ನುಡಿಯುವ, ಚಿತ್ರಿಸುವ ಕವಿ-ಕಲಾವಿದ. ಅವರ ಮೂಲಕ ಬರುತ್ತಿರುವ ಬಾಶೋ ಹಾಯ್ಕುಗಳನ್ನು ವ್ಯಾಖ್ಯಾನಿಸುವುದು ನನ್ನ ಉದ್ದೇಶವಲ್ಲ. ಕೆಲವು ಹಾಯ್ಕುಗಳ ನನ್ನ ಓದನ್ನು ನಿಮಗೆ ಮುಟ್ಟಿಸಲು ಈ ಸಾಲುಗಳನ್ನು ಮುಂದಿಡುತ್ತಿದ್ದೇನೆ. ಹಾಯ್ಕುಗಳ ಓದಿಗೆ ಪೂರ್ವಸಿದ್ಧತೆಯೊಂದು ಬೇಕೆಂಬ ಮಾತುಗಳನ್ನು ಆಡಿದ್ದೇನೆ. ಮೊದಲಿಗೆ ಆ ಪೂರ್ವಸಿದ್ಧತೆ ಎಂದರೆ ಯಾವ ಸಿದ್ಧತೆಯೂ ಇಲ್ಲದೆ ಮುಕ್ತವಾಗಿರುವುದು! ಸಿದ್ಧನಾಗಿಲ್ಲದಿರಲು ಸಿದ್ಧನಾಗಿರುವುದು. ಇದು ಕೇವಲ ತಾತ್ವಿಕ ನಿಲುವಲ್ಲ. ಬದಲಿಗೆ ಹಾಯ್ಕುಗಳನ್ನು ಇದಿರಾಗಲು ಪೂರ್ವಾಗ್ರಹಗಳಿಂದ, ಪೂರ್ವಸಂರಚನೆಗಳಿಂದ ಮುಕ್ತವಾದ ಓದಿನ ಅಗತ್ಯವಿದೆ. ಎರಡನೆಯದಾಗಿ ಲೋಕವನ್ನು ಅದು ಇರುವಂತೆ ಕಾಣಬಲ್ಲ ಮುಕ್ತ ನೋಟದ ಅಗತ್ಯವಿದೆ. ಮೂರನೆಯದಾಗಿ ಲೋಕದ ಚಲನೆಯ ಜೊತೆಗೆ ಏಕವಾಗುವ ಚಲನಶೀಲತೆಯೂ ಬೇಕಿದೆ. ಮನಮುಕ್ತತೆ, ಲೋಕಮುಕ್ತತೆ ಮತ್ತು ಚಲನಶೀಲತೆ ಇವು ಲೋಕಾನುಸಂಧಾನದ ಸರಿಯಾದ ಕ್ರಮವಾಗಿದೆ. ಹಾಯ್ಕು ತನ್ನನ್ನು ಇದಿರಾಗಲು ಬರುವವರಿಗೆ ಹೀಗೆ ಬನ್ನಿ ಎಂದು ಕೋರಿಕೊಳ್ಳುತ್ತದೆ. ಕೆಲವು ಹಾಯ್ಕುಗಳನ್ನು ಓದಿ ಪ್ರಯತ್ನಿಸಬಹುದು:

ಆಹಾ! ಶರತ್ಕಾಲದ ಹೂವು
ತೊಟ್ಟು ತೊಟ್ಟಿನ ಹಾಗೆ
ಹೂವು ಹೂವಿನ ಹಾಗೆ

ಹಾಯ್ಕನ್ನು ಓದಲು ಇರುವ ಮೂರು ಸಾಲಿನಲ್ಲಿ ಯಾವ ಸಾಲಿನಿಂದಲಾದರೂ ಆರಂಭಿಸಬಹುದು. ಮೊದಲ ಸಾಲನ್ನೇ ಮೊದಲು ಓದಬೇಕೆಂಬುದಿಲ್ಲ. ಮಧ್ಯದ ಸಾಲಿನಿಂದ ಓದಿ ನೋಡಿದರೂ, ಕೊನೆಯ ಸಾಲನ್ನು ಮೊದಲು ಓದಿ ನಂತರದ ಉಳಿದ ಸಾಲುಗಳನ್ನು ಓದಿದರೂ ಅರ್ಥದ ಆಂತರ್ಯವನ್ನು ಮುಟ್ಟಬಹುದು. ಈ ಹಾಯಿಕು ಲೋಕವನ್ನು ಅದು ಇರುವಂತೆ ನೋಡುವ ಅಗತ್ಯವನ್ನು ಮುಂದಿಡುತ್ತಿದೆ. ಲೋಕವನ್ನು ಅದು ಇರುವಂತೆಯೇ ನೋಡುವುದನ್ನು ಬೌದ್ಧ ತಾತ್ವಿಕತೆಯೂ ಮುಂದಿಡುತ್ತದೆ. ಹಾಗಾದರೆ ಲೋಕವನ್ನು ಅದು ಇರುವಂತೆ ನಾವು ನೋಡುತ್ತಿಲ್ಲವೆ? ಹೇಗೆ ನೋಡುತ್ತಿದ್ದೇವೆ? ಮೊದಲನೆಯದಾಗಿ ನಾವು ನೋಡುತ್ತಿರುವ ಲೋಕಮಾತ್ರವೇ ಇದಿರಿನಲ್ಲಿ ಇದೆ ಎಂದಲ್ಲ. ಲೋಕ ನಮಗೆ ಕಾಣುತ್ತಿರುವುದು ಹಾಗೆಯೇ ಹೊರತು ನಾವು ಕಾಣುತ್ತಿರುವ ಲೋಕವನ್ನೆ ಎಲ್ಲ ಜೀವಿಗಳು ಕಾಣುತ್ತಿವೆ ಎಂದಲ್ಲ. ಯಾವುದನ್ನೇ ಆಗಲಿ ಅದು ಹೇಗಿದೆ ಎನ್ನಲಾಗದು; ಬದಲಿಗೆ ಹೇಗೆ ಕಾಣಿಸುತ್ತಿದೆ ಎಂದು ಮಾತ್ರ ಹೇಳಲು ಸಾಧ್ಯ! ನಾವು ನೋಡುವ ನೋಟ ಯಾವಾಗಲೂ ಪಾರ್ಶ್ವಿಕ ಮತ್ತು ಆಂಶಿಕವೇ ಹೊರತು ಪೂರ್ಣ ಲೋಕವಲ್ಲ. ಯಾವುದಾದರೂ ಕೆಲವು ಆಯಾಮಗಳನ್ನು, ಅಂಶಗಳನ್ನು ಮಾತ್ರ ನಮ್ಮ ಇಂದ್ರಿಯ ಜಗತ್ತು ಕಟ್ಟಿಕೊಡಬಲ್ಲದೇ ಹೊರತು ಲೋಕದ ಎಲ್ಲವನ್ನೂ ಅಲ್ಲ. ನಾವು ಕಾಣುತ್ತಿರುವ ಲೋಕ ಈ ಎಲ್ಲ ಮಿತಿಗಳಿಗೆ ಒಳಪಟ್ಟದ್ದು ಎಂಬ ಸತ್ಯದ ಜೊತೆಗೇ ಲೋಕದ ಅನುಸಂಧಾನ ನಡೆದರೆ ಅದು ಸರಿಯಾದ ನೋಟಕ್ರಮ! ಹೂವನ್ನು ಹೂವಿನ ಹಾಗೆ ನೋಡುವುದು ಎಂದರೆ ಇರಬಹುದಾದ ಅರ್ಥಗಳಲ್ಲಿ ಇದೂ ಒಂದು.

ಗಾಯ
ಮುಟ್ಟಲು ಬಾಗಿದೆ
ಒಂದು ವಿಲ್ಲೋ ಮರ

ಕರುಣಾಮೈತ್ರಿಯು ನಿಸರ್ಗದ ಕಣಕಣದಲ್ಲಿಯೂ ತುಂಬಿಕೊಂಡಿದೆ. ಅದು ಲೋಕದ ಸಂಕಟಕ್ಕೆ ಸದಾ ಸ್ಪಂದಿಸುತ್ತಿದೆ. ನಮ್ಮಲೂ ಅಂತಹ ಸ್ಪಂದನೆಗಳನ್ನು ನಿಸರ್ಗದ ನಡೆ ಪ್ರಚೋದಿಸುತ್ತಿದೆ. ಮೇಲಿನ ಹಾಯಿಕುವಿಗೆ ಇರಬಹುದಾದ ಅನೇಕ ಅರ್ಥಗಳಲ್ಲಿ ಇದೂ ಒಂದು.

ಯಾವುದೋ ಗಿಡದ
ಹೆಸರಿಲ್ಲದ ಹೂ
ಎಂಥ ಘಮಲು

ನಾವು ಪಡೆಯುವ ನಿಸರ್ಗದ ಅನುಭವಗಳಿಗೆ ನಾಮರೂಪಗಳನ್ನು ಪ್ರದಾನ ಮಾಡುವುದರಿಂದಾಗಿ ಅವುಗಳನ್ನು ನಿರ್ದಿಷ್ಟ ಚೌಕಟ್ಟಿಗೆ ಮಿತಿಗೊಳಿಸಿಬಿಡುತ್ತೇವೆ. ಭಾಷಿಕ ಚೌಕಟ್ಟುಗಳು ಅನುಭವಗಳನ್ನು ಬಂಧಿಸಿಬಿಡುತ್ತವೆ. ಕಂಡದ್ದನ್ನು ಹಾಗೆಯೇ ಅನುಭವಿಸುವುದಕ್ಕೂ, ಅದಕ್ಕೊಂದು ಹೆಸರಿಟ್ಟು ಹಿಂದಿನ ಮುಂದಿನ ಅನುಭವಗಳ ಜೊತೆಗೆ ಹೋಲಿಕೆಯನ್ನು ಏರ್ಪಡಿಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕು! ಈಗಾಗಲೇ ಹೆಸರಿಟ್ಟ ಹಳಸಲು ಸಂವೇದನೆಗಳ ಮೂಲಕ ನೋಡದೆ ಆ ಕ್ಷಣದ ಅನುಭವವನ್ನು ಹೆಸರಿಗೆ ಮಿತಿಗೊಳಿಸದೆ ಅನುಭವಿಸುವುದೇ ನಿಜ ಅನುಭವವಾಗುತ್ತದೆ. ಅದನ್ನು ಕೆಳಗಿನ ಹಾಯಿಕು ಕೂಡಾ ಧ್ವನಿಸುತ್ತಿದೆ:

ಭರ್ರೋ ಎಂದು ಬೀಸುವ ಗಾಳಿ
ಪೊಳ್ಳು ಮಾತಿನ ಮನುಷ್ಯರು
ಜುಗುಪ್ಸೆಯಿಂದ ನೋಡುತ್ತಿದೆ ಹೂ

ನಾವು ಕಟ್ಟಿಕೊಂಡಿರುವ ಈ ಭಾಷಿಕ ಜಗತ್ತಿಗೂ ಐಂದ್ರಿಯಿಕ ಜಗತ್ತಿಗೂ ಒಂದು ಕೊಡು – ಪಡೆ ನಿರಂತರ ನಡೆಯುತ್ತಲೇ ಇದೆ. ಭಾಷೆಯನ್ನು ಕಟ್ಟಿಕೊಂಡ ಮೇಲೆ ಮನುಷ್ಯ ಅನುಭವಿಸುವ ಸಂಕಟ ಅನೇಕ ಪಟ್ಟು ಹೆಚ್ಚಾಯಿತು. ನಮ್ಮ ಮನೋಸಂರಚನೆಗಳನ್ನು ಗುಡ್ಡೆಹಾಕಿಕೊಳ್ಳಲು ಭಾಷೆ ಮಾಧ್ಯಮವಾಗಿ ಬಂತು. ಭಾಷೆ ನಮ್ಮನ್ನು ಅರೆಯುವ ಕುಲುಮೆಯಾಯಿತು. ಕಾಲ್ಪನಿಕ ಭ್ರಮೆಗಳೊಡನಾಟಕ್ಕಿಂತ ನಿಸರ್ಗದ ಮೂರ್ತ ರೂಪಗಳು ಉಂಟು ಮಾಡುವ ಚಲನಶೀಲತೆಗೆ ಹಾಯ್‌ಕು ತಾವು ಮಾಡಿಕೊಳ್ಳುತ್ತದೆ.

ಎಲ್ಲೂ ನಿಲ್ಲದ ಈ
ಅಲೆಮಾರಿ ಹೃದಯ
ಹೊತ್ತೊಯ್ಯುವ ಕುಲುಮೆ

ನಮ್ಮ ಮನಸ್ಸು ಸದಾ ಸುತ್ತುತ್ತಲೇ ಇರುವ ಒಂದು ವಿಂಡ್ ಮಿಲ್. ಹಿಂದಿನದನ್ನೋ ಮುಂದಿನದನ್ನೋ ನೆನಪಿಸಿಕೊಂಡು ಸದಾ ತಿರುಗುತ್ತಲೇ ಇರುತ್ತದೆ. ಹಾಗೆ ತಿರುಗು ಎಂದು ನಾವೇನೂ ಅದಕ್ಕೆ ಆದೇಶ ಕೊಟ್ಟಿಲ್ಲ. ಆದರೂ ಅದು ನಮ್ಮನ್ನು ಅದರ ಗಿರುಗಿಟ್ಟಲೆಗೆ ಸಿಕ್ಕಿಸಿಕೊಂಡಿದೆ. ಎಲ್ಲಿಗೆ ಹೋದರೂ ಈ ಗಿರುಗಿಟ್ಟಲೆಯನ್ನು ಹೊತ್ತುಕೊಂಡೇ ಹೋಗಬೇಕು. ಆ ಕುಲುಮೆಯಲ್ಲಿ ಅದು ನಮ್ಮನ್ನು ಸದಾ ಕುಟ್ಟುತ್ತಲೇ ಇರುತ್ತದೆ. ನಾವೇ ಅದನ್ನು ಹೊತ್ತುಕೊಂಡು ಓಡಾಡುತ್ತ ಅದರ ಕೈಯಲಿ ಹೀಗೆ ನುಗ್ಗುನುಗ್ಗಾಗುತ್ತಿದ್ದೇವೆ. ಒಂದು ನಿಮಿಷ ಅದನ್ನು ಸುಮ್ಮನಾಗಿಸಬಾರದೆ?

ಮಗು ಗೀಚಿದ
ಗೆರೆಗಳಲ್ಲಿ
ಅಮ್ಮನ ಹೆಸರು

ಈ ಹಾಯಿಕುವನ್ನು ವ್ಯಾಖ್ಯಾನಿಸದಿರುವುದೇ ಸರಿಯಾದುದು! ತಾಯಿ-ಮಗುವಿನ ಸಂಬಂಧ ಅದನ್ನು ಕಳೆದುಕೊಂಡ ನಮಗೆ ಸಿಗಲಾರದು!

ತಾಕ್ಷಣಿಕತೆಯು ಹಾಯಿಕುಗಳ ಜೀವಾಳ. ಅವು ಲೋಕದ ನಡೆಯೊಂದಿಗೆ ನಮ್ಮನ್ನು ಬೆಸೆಯುತ್ತವೆ. ಲೋಕವೆಲ್ಲ ಸಂಬಂಧಗಳ ಒಂದು ಬೃಹತ್ ಜಾಲ. ಆ ಜಾಲದ ತಂತುಗಳನ್ನು ಹಾಯಿಕುಗಳು ಹಿಡಿದು ಮೀಟುತ್ತವೆ. ಯಾವುದೋ ಒಂದು ಎಳೆಯನ್ನು ಹಿಡಿದು ಎಳೆದರೆ ಮತ್ತಲ್ಲೋ ಇನ್ನೊಂದು ಎಳೆ ಮಿಸುಕುತ್ತದೆ. ಈ ಬೃಹತ್ ನೇಯ್ಗೆಯನ್ನು ನಿಸರ್ಗ ಪ್ರತಿಕ್ಷಣವೂ ಬದಲಿಸುತ್ತಲೇ ಇರುತ್ತದೆ. ಒಂದು ಕ್ಷಣವೂ ಸ್ಥಗಿತಗೊಳ್ಳಲು ಬಿಡುವುದಿಲ್ಲ. ಹಾಯಿಕುಗಳು ಅಂತಹ ಚಲನಶೀಲತೆಯನ್ನು ತಮ್ಮ ಶಕ್ತಿಯನ್ನಾಗಿಸಿಕೊಳ್ಳುತ್ತವೆ. ಈ ಆಹ್ವಾನ-ವಿಸರ್ಜನೆಯ ನಿರಂತರ ಆಟ ನಡೆಯುತ್ತಲೇ ಹೋಗುತ್ತದೆ. ಹಾಯಿಕುಗಳ ಮೂಲಕ ನಾವು ಅದರ ಸಹಪ್ರಯಾಣಿಕರಾಗುತ್ತೇವೆ. ಹಾಗಾಗಿ ಹಾಯಿಕುಗಳನ್ನು ಅನುಭವಿಸಲು ಬೇಕಿರುವುದು ಅದರ ಬಗೆಗಿನ ತಿಳಿವಳಿಕೆ/ಮಾಹಿತಿ ಅಲ್ಲ; ಬದಲಿಗೆ ಎಲ್ಲವನ್ನೂ ವಿಸರ್ಜಿಸಿ ತೊಳೆದಿಟ್ಟ ಮನಸ್ಸು! ಅದು ಭಾಷಿಕವಾದರೂ ಇಂದ್ರಿಯ ಅನುಭವಗಳ ರೂಪಾಂತರ ಪಡೆದುಕೊಳ್ಳಲು ಬಯಸುತ್ತದೆ. ಹಾಗಾಗಿ ಹಾಯಿಕುಗಳೆಂದರೆ ಹಿಂದಿನ ಎಲ ಮನೋಸಂರಚನೆಗಳನ್ನು ಗುಡಿಸಿಹಾಕಿದ ಮನಸ್ಸಿನೊಂದಿಗೆ ಓದುವ ಕಾವ್ಯ. ವಿನೀತ ಮನಸ್ಸು ಅನುಭವಿಸುವ ಲೋಕಾನುಕಂಪ. ಅದರ ಸೂಚನೆ ನೀಡುತ್ತಿದೆ ಈ ಹಾಯಿಕು:

ಹೋಲಬಾರದು ನಮ್ಮನ್ನು
ಬರೆದ ಮೊದಲ ಕವನ
ಅರಳುತ್ತಿರುವ ಮೊಗ್ಗು

ಹಾಯಿಕು, ವಚನ, ಜೆನ್ ಕೋನ್‌ಗಳು ನಮ್ಮನ್ನು ಸರಿಯಾದ ಲೋಕಾನುಸಂಧಾನಕ್ಕೆ ಸಿದ್ಧಗೊಳಿಸುವ ಅಭಿವ್ಯಕ್ತಿಪ್ರಕಾರಗಳು. ದೀರ್ಘಕಾಲದ ನಮ್ಮ ಮನೋಸಂರಚನೆಗಳಿಂದ ಕಳಚಿಕೊಳ್ಳಲು ಬೇಕಾದ ತೀಕ್ಷ್ಣತೆಯನ್ನು ಅವು ಒದಗಿಸಿಕೊಡುತ್ತವೆ. ನಮ್ಮನ್ನು ಹೊಸದಾಗಿಸುತ್ತವೆ. ಹೊಸ ಪ್ರಯಾಣಕ್ಕೆ ನಮ್ಮನ್ನು ಅಣಿಗೊಳಿಸುತ್ತವೆ. ಇದಿರಾಗುವ ನದಿ ತೊರೆಗಳನ್ನು ದಾಟಿಸುವ ಹಾಯಿ ದೋಣಿಗಳಾಗುತ್ತವೆ ಮತ್ತು ದಾಟಿದ ಮೇಲೆ ದೋಣಿಯನ್ನು ಅಲ್ಲೇ ಬಿಟ್ಟು ಮುಂದೆ ಹೋಗುವ ಎಚ್ಚರವನ್ನೂ ಉಂಟುಮಾಡುತ್ತವೆ.

ಭಾಷೆಯೊಂದಿಗೆ ನಾವು ದೀರ್ಘಕಾಲದಿಂದ ಕಟ್ಟಿಕೊಂಡುಬಂದ ಸುಳ್ಳುಗಳು ಇಂಗಿದ ಈ ಹಾಯಿಕುಗಳಲ್ಲಿ ಜ್ಯೋತಿರ್ಲಿಂಗವೊಂದು ಬೆಳಗುತ್ತಿದೆ. ಎಲ್ಲರೂ ಬೆಳಕಿನಲ್ಲಿ ಬಾಳಲಿ – ಇದು ಬಾಶೋವಿನ ಆಶಯವೂ ಹೌದು ರವೀಂದ್ರನಾಥರ ಆಶಯವೂ ಹೌದು. ಒಳಿತಾಗಲಿ ಎಂದು ಹಾರೈಸುವೆ.

(ಡಾ. ಸಿ ರವೀಂದ್ರನಾಥ್ ಅನುವಾದಿಸಿರುವ ’ಬಾಶೋ ಹಾಯ್ಕು’ ಪುಸ್ತಕವನ್ನು ಗೌರಿ ಮೀಡಿಯಾ ಟ್ರಸ್ಟ್ ಶೀಘ್ರದಲ್ಲೇ ಪ್ರಕಟಿಸಲಿದೆ)

ಎಸ್. ನಟರಾಜ ಬೂದಾಳು

ಎಸ್. ನಟರಾಜ ಬೂದಾಳು
ಬೌದ್ಧ ತಾತ್ವಿಕತೆಯ ಚಿಂತಕ ಮತ್ತು ಲೇಖಕ. ’ನಾಗಾರ್ಜುನನ ಮೂಲಮಾಧ್ಯಮಕಕಾರಿಕಾ’, ’ಬೌದ್ಧಧರ್ಮ ಮತ್ತು ಅಲ್ಲಮಪ್ರಭು ತೌಲನಿಕ ಅಧ್ಯಯನ’, ’ಸರಹಪಾದ’ ಅವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...