Homeಮುಖಪುಟ’ಕೊಲುವೆನೆಂಬ ಭಾಶೆ’ ಕೃತಿ ಪರಿಚಯ: ಉಳಿಸುವ ನುಡಿಯ ಹುಡುಕುತ್ತಾ...

’ಕೊಲುವೆನೆಂಬ ಭಾಶೆ’ ಕೃತಿ ಪರಿಚಯ: ಉಳಿಸುವ ನುಡಿಯ ಹುಡುಕುತ್ತಾ…

ರಂಗನಾಥ್‌ ಕಂಟನಕುಂಟೆ ಅವರ ‘ಕೊಲುವೆನೆಂಬ ಭಾಶೆ’ ಕೃತಿಯು ನಾಳೆ (ಡಿ.29) ಮೈಸೂರಿನಲ್ಲಿ ಬಿಡುಗಡೆಯಾಗಲಿದ್ದು, ಲೇಖಕ ಕೆ.ನರಸಿಂಹಮೂರ್ತಿಯವರು ಕೃತಿ ಪರಿಚಯ ಮಾಡಿದ್ದಾರೆ.

- Advertisement -
- Advertisement -

ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಬೆನ್ನಿಗೆ ಗೆಳೆಯ ಡಾ.ರಂಗನಾಥ ಕಂಟನಕುಂಟೆಯ ಈ ಕೃತಿ ಹೊರ ಬರುತ್ತಿರುವುದು ಕನ್ನಡ ನುಡಿ ಮತ್ತು ನಡೆಯ ಸನ್ನಿವೇಶದಲ್ಲಿ ಪ್ರಮುಖ ಘಟನೆ.

ಸುಗ್ರೀವಾಜ್ಞೆ ಮೂಲಕ ಕೇಂದ್ರವು ಕಾಯ್ದೆಗಳನ್ನು ಜಾರಿಗೆ ತಂದ ನಂತರ ಶಿಕ್ಷಣ, ಹೊಸ ಶಿಕ್ಷಣ ನೀತಿ, ಸಂಶೋಧನೆ, ಮಾಧ್ಯಮ, ಕೃಷಿ, ಭಾಷೆ, ಮಾರುಕಟ್ಟೆ ನೀತಿ ಮತ್ತು ಜನಸಾಮಾನ್ಯರ ಬದುಕಿನಲ್ಲಿ ಆದ ಬದಲಾವಣೆಗಳು, ದೆಹಲಿಯಲ್ಲಿ ರೈತರ ಸುದೀರ್ಘ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವರ ಚಿಂತನೆಗಳು ಮೈದಾಳಿವೆ. ಇದು ತನ್ನ ಸಮಕಾಲೀನ ಬಿಕ್ಕಟ್ಟುಗಳಿಗೆ ಅವರು ಕಂಡು ಕೊಂಡ ಅಂಕಣ–ವಿಶ್ಲೇಷಣೆಯ ದಾರಿಯೂ ಹೌದು.

ಕೃತಿಯಲ್ಲಿರುವ ಇಪ್ಪತ್ತು ಲೇಖನಗಳ ಕೇಂದ್ರ ಆಸಕ್ತಿ ಎಂದರೆ ಈ ಕಾಲದ ಭಾಷೆ ಮತ್ತು ಸಮಾಜಗಳು ಎದುರಿಸುತ್ತಿರುವ ಬಿಕ್ಕಟ್ಟು. ವಿವಿಧ ಸಮುದಾಯಗಳ ಭಾಷೆ ಹಾಗೂ ಅಭಿವ್ಯಕ್ತಿ ಸ್ವರೂಪದಲ್ಲಿ ಆದ ಬದಲಾವಣೆ, ಆ ಮೂಲಕ ಜನಸಾಮಾನ್ಯರ ಮೇಲೆ, ಸರ್ಕಾರದ ನೀತಿ ನಿರೂಪಣೆಗಳ ಮೇಲೆ ಆಗುವ ಪರಿಣಾಮಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ, ಧ್ಯಾನಿಸಿ ಬರೆದ ಲೇಖನಗಳನ್ನು ರಂಗನಾಥ್‌ ಜೋಡಿಸಿ ಕೊಟ್ಟಿದ್ದಾರೆ. ಭಾರತವೂ ಸೇರಿದಂತೆ ಜಾಗತಿಕ ಮಟ್ಟದ ಪ್ರಮುಖ ಘಟನಾವಳಿಗಳ ಹಿನ್ನೆಲೆಯಲ್ಲೂ ಕೆಲವು ಗಂಭೀರ ವಿಶ್ಲೇಷಣೆಗಳೂ ಇಲ್ಲಿವೆ.

‘ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು’ ಎಂಬ ಬಸವಣ್ಣನ ವಚನದ ಎರಡು ಪದವನ್ನು ಪ್ರಾತಿನಿಧಿಕವಾಗಿ ತೆಗೆದುಕೊಂಡು ಕೃತಿಗೆ ಹೆಸರಿಡಲಾಗಿದೆ. ದೇವರಿಗೆ ಸವಾಲು ಒಡ್ಡುವ ಭಕ್ತರ ಕುರಿತು ವಚನ ಉಲ್ಲೇಖಿಸುತ್ತದೆ.

ಆದರೆ ಸದ್ಯದ ಸಂಘರ್ಷಮಯ ಕಾಲಘಟ್ಟದಲ್ಲಿ ಭಕ್ತರು ‘ಕೊಲುವೆನೆಂಬ ಭಾಷೆ’ಯನ್ನು ನಿರ್ಭೀತಿಯಿಂದ ಬಳಸುತ್ತಿರುವುದರ ಕಡೆಗೆ ಲೇಖನಗಳು ಸೂಚ್ಯವಾಗಿ, ಕೆಲವೆಡೆ ನೇರ, ಮತ್ತು ಸ್ಪಷ್ಟವಾಗಿ ಗಮನ ಸೆಳೆಯುತ್ತವೆ. ಇದು ಲೇಖಕನ ಎದೆಗಾರಿಕೆ. ಕನಿಷ್ಠ ಒಂದು ದಶಕದ ಅವಧಿಯಲ್ಲಿ ಭಾಷೆಯನ್ನು ಅಪಾಯಕಾರಿ ಸಾಧನವಾಗಿಸಿಕೊಂಡು ದುಷ್ಟ ರೀತಿಯಲ್ಲಿ ಬಳಸಿದ ಮಾದರಿಗಳನ್ನು ಕೃತಿಯು ಕಣ್ಣ ಮುಂದೆ ನಿಲ್ಲಿಸುತ್ತದೆ.

ಇಲ್ಲಿನ ಲೇಖನಗಳನ್ನು ನಾವು ಪ್ರತ್ಯೇಕವಾಗಿ ಮತ್ತು ಒಟ್ಟಿಗೇ ಓದಿಕೊಳ್ಳಬಹುದು. ಏಕೆಂದರೆ ಪ್ರತಿ ಲೇಖನವೂ ಕೃತಿಯ ಇನ್ಯಾವುದೋ ಲೇಖನಕ್ಕೆ ವಿಶ್ಲೇಷಣೆಯ ಕೊಂಡಿಯಾಗಿರುವಂತೆಯೂ ಕಾಣುತ್ತದೆ. ನುಡಿ ಮತ್ತು ಅದನ್ನು ಅವಲಂಬಿಸಿದ ಸಮುದಾಯಗಳ ಬದುಕು ಇಲ್ಲಿನ ಎಲ್ಲ ಲೇಖನಗಳನ್ನು ಕೂಡಿ ಹಿಡಿಯುವ ಕೇಂದ್ರವಾಗಿರುವುದರಿಂದ ಹೀಗಾಗಿರಬಹುದು. ಬಹುತೇಕ ಲೇಖನಗಳ ಶೀರ್ಷಿಕೆಯಲ್ಲಿ ನುಡಿ–ಭಾಷೆ ಎಂಬ ಪದ ಬಳಕೆಯಾಗಿದೆ. ಬೆರಳೆಣಿಕೆಯಷ್ಟು ಲೇಖನಗಳಲ್ಲಿ ನುಡಿಯ ಉಲ್ಲೇಖ ಹಿಂದೆ ಸರಿದು, ಸಾಮಾಜಿಕ ವಿಷಯಗಳು ಮುಂದಕ್ಕೆ ಬರುತ್ತವೆ.

ಇದನ್ನೂ ಓದಿರಿ: ಕುವೆಂಪು ಅವರ ಜನುಮದಿನದಂದು ‘ಕೊಲುವೆನೆಂಬ ಭಾಶೆ’ ಕೃತಿ ಬಿಡುಗಡೆ; ಸಂವಾದ

‘ಕೇಳ್ವಿಯೆಂಬ ಕೂರಲಗು’ ಲೇಖನವು, ಪ್ರಶ್ನೆಗಳನ್ನು ಕೇಳುವ ಮಕ್ಕಳ ಸಹಜ ಪ್ರವೃತ್ತಿಯನ್ನು ಅದುಮಿಡುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಲೇ, ಪ್ರಜಾಪ್ರಭುತ್ವದ ಸಹಜ ಪ್ರವೃತ್ತಿಯಾದ ಪ್ರಶ್ನಿಸುವುದನ್ನೇ ತಡೆಯುವ ಈ ಕಾಲದ ಪ್ರಭುತ್ವದ ಧೋರಣೆಯ ಕಡೆಗೂ ಗಮನ ಸೆಳೆಯುತ್ತದೆ. ಇದು ಒಂದು ಪ್ರಮುಖ ವಿಷಯದ ಕುರಿತ ಕಂಟೆಂಟ್‌ ಅನ್ನು ಪ್ರಜ್ಞಾಪೂರ್ವಕವಾಗಿ ವಿಸ್ತರಿಸುವ ಶೈಲಿ. ಸಣ್ಣದೆಂದು ತೋರುವ ವಿಷಯವೊಂದರಿಂದ ಆರಂಭಿಸಿ ಗಹನ ವಿಷಯದ ಕಡೆಗೆ ನಡೆಯುವ ನಡಿಗೆ. ಇಂಥ ನಡಿಗೆಗಳು ಬಹುತೇಕ ಲೇಖನಗಳಲ್ಲಿ ಕಾಣುತ್ತವೆ.

ಗಂಭೀರವಾದ ಕಂಟೆಂಟ್‌ ಬಯಸುವ ಸಂಶೋಧನೆ, ವೈವಿಧ್ಯಮಯ ಓದು, ಧ್ಯಾನ ಸ್ಥಿತಿ, ಅಭಿವ್ಯಕ್ತಿ ಶೈಲಿ ಎಲ್ಲವೂ ಪೂರಕವಾಗಿ ದುಡಿಯುತ್ತವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಿಂದ ವಿಶ್ವವಿದ್ಯಾಲಯದ ಬೋಧಕರವರೆಗೆ, ನೀತಿ ನಿರೂಪಣೆ ಮಾಡುವ ರಾಜಕಾರಣಿಗಳಿಂದ ಜನ ಸಾಮಾನ್ಯರವರೆಗೆ ಯಾರಾದರೂ ಸರಿ, ಓದಿದರೆ ನೇರವಾಗಿ ಅರ್ಥವಾಗುವ ರೀತಿಯಲ್ಲಿ ಬರೆದ ಲೇಖನಗಳಿವು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಲೇಖಕ ತನಗೆ ತಾನೇ ವಿಷಯಗಳನ್ನು ಸ್ಪಷ್ಡಪಡಿಸಿಕೊಳ್ಳಲು ಬರೆದಂತೆ.

ನಾವು ಏನು ಹೇಳುತ್ತಿದ್ದೇವೆ ಎಂಬುದು ನಮಗೇ ಮೊದಲು ಅರ್ಥವಾಗಿರಬೇಕು. ಇಲ್ಲದಿದ್ದರೆ ಬೇರೆಯವರಿಗೆ ಅರ್ಥವಾಗುವುದಾದರೂ ಹೇಗೆ? ಇಲ್ಲಿನ ಲೇಖನಗಳ ಅರ್ಥದ ದಾರಿ ನೇರ. ಸ್ಪಷ್ಟ. ಇಂಥ ಭಾಷೆ ಮತ್ತು ನಿರೂಪಣೆ ಈ ಕಾಲದ ಅಗತ್ಯ ಎಂಬುದನ್ನೂ ಲೇಖಕರು ಒತ್ತಿ ಹೇಳುತ್ತಾರೆ. ಅದಕ್ಕೆ ಸಾಹಿತ್ಯ ಲೋಕವೂ ಹೊರತಲ್ಲ. ಹೀಗಾಗಿ, ವಿಮರ್ಶಕರಾದ ಸಿ.ಎನ್‌.ರಾಮಚಂದ್ರನ್, ಡಿ.ಆರ್‌.ನಾಗರಾಜ್‌, ಮನು ಚಕ್ರವರ್ತಿಯವರ ವಿಶ್ಲೇಷಣೆ ಶೈಲಿ ಕುರಿತ ಕಟುಟೀಕೆಗಳನ್ನು ‘ನುಡಿಯ ಅಸ್ಪಷ್ಟತೆಯೋ? ಅರಿವಿನ ಅಸ್ಪಷ್ಟತೆಯೋ?’ ಲೇಖನದಲ್ಲಿ ಕಾಣಬಹುದು. ಇಡೀ ಸಂಕಲನದಲ್ಲಿ ಇದು ಬಹಳ ಮುಖ್ಯವಾದ ಲೇಖನ. ಇದಕ್ಕೆ ಕನ್ನಡ ಸಾಹಿತಿ–ವಿಮರ್ಶಕರು ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಬೇಕು. ಭಾಷೆಯನ್ನು ಕುರಿತ ರಾಜಕೀಯವಾದ ನಿಲುವು ಮತ್ತು ನೋಟವನ್ನು ಹರಿಸಿರುವ ಲೇಖನವು 40ರ ದಶಕದಲ್ಲಿ ಜಾರ್ಜ್‌ ಆರ್ವೆಲ್‌ ಬರೆದ ಲೇಖನ ಮತ್ತು ಇವತ್ತಿನ ಭಾರತದ ಸನ್ನಿವೇಶವನ್ನು ಹೋಲಿಕೆಗೆ ತರುವ ಪ್ರಯತ್ನ ಮಾಡುತ್ತದೆ. ನಮ್ಮ ಅರಿವು ಅಸ್ಪಷ್ಟವಾಗಿದ್ದರೂ, ಸ್ಪಷ್ಟವಾಗಿದೆ ಎಂದು ನಂಬಿಸುವ ಪ್ರಯತ್ನಗಳನ್ನು ನಾವು ಮಾಡುತ್ತೇವೆ. ಹಾಗೆಯೇ, ನುಡಿ ಸ್ಪಷ್ಟವಾಗಿದ್ದರೂ ಅರಿವು ಅಸ್ಪಷ್ಟವಾಗಿರುತ್ತದೆ. ನಾವು ಬಹಳ ಖಚಿತ ನುಡಿಗಳಲ್ಲಿ ಹೇಳುತ್ತಿದ್ದರೂ ಅರಿವು ಕಾಣೆಯಾಗಿರುತ್ತದೆ.

ಇಂಗ್ಲಿಷ್‌ ಸೋಲನ್ನು ಕುರಿತ ಆರ್ವೆಲ್‌ನ ನೋಟದೊಂದಿಗೆ, ಕನ್ನಡವು ಹೇಗೆ ತನ್ನ ಅಭಿವ್ಯಕ್ತಿ ಸಾಮರ್ಥ್ಯವನ್ನು ಬಿಟ್ಟುಕೊಡುತ್ತಿದೆ ಎಂಬುದರತ್ತ ಗಮನ ಸೆಳೆಯುವ ಲೇಖನ, ಸಾಹಿತ್ಯದ ವಿಶ್ಲೇಷಣೆ ದಾಟಿ ರಾಜಕಾರಣದ ಚೌಕಟ್ಟಿಗೆ ಜಿಗಿಯುತ್ತದೆ.

ಇದಕ್ಕೆ ಇನ್ನೊಂದು ಆಯಾಮವೂ ಉಂಟು. ಭಾಷೆ ಸೋಲುವ ಬಗೆಯ ಕುರಿತ ಈ ಕಾಲದ ಕವಿಗಳ ಸಂಕಟ. ಅದು ‘ಸತ್ಯಾತೀತ ಕಾಲದ ಭಾಷೆ ಮತ್ತು ಕಾವ್ಯದ ಬಿಕ್ಕಟ್ಟು’ ಲೇಖನದಲ್ಲಿ ಚೆನ್ನಾಗಿಯೇ ಅನಾವರಣಗೊಂಡಿದೆ. ತಮ್ಮ ಕಾಲದ ಕೇಡುಗಳಿಗೆ ಪ್ರತಿಕ್ರಿಯಿಸುವ ಹೊತ್ತಿನಲ್ಲಿ ಕವಿಗಳು ಭಾಷೆಯ ಮೂಲಕ ತಮ್ಮನ್ನು ತಾವು ಮತ್ತು ಎದುರುದಾರರನ್ನು ತಲುಪಬೇಕಾದ ಸವಾಲು ಎಂಥದ್ದು ಎಂಬ ಗಹನ ವಿಚಾರವೂ ಇಲ್ಲಿದೆ.

ಇದನ್ನೂ ಓದಿರಿ: ಉತ್ತರ ಪ್ರದೇಶ: 7 ವರ್ಷದ ಮುಸ್ಲಿಂ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಬರ್ಬರ ಕೊಲೆ

ನಮ್ಮದು ದಿಢೀರ್‌ ಪ್ರತಿಕ್ರಿಯೆಗಳ ಕಾಲಘಟ್ಟ. ಅದಕ್ಕೆ ಫೇಸ್‌ಬುಕ್‌, ವಾಟ್ಸ್‌ ಆಪ್, ಟ್ವಿಟರ್‌ ಮುಂತಾದ ಸೋಶಿಯಲ್‌ ಮೀಡಿಯಾಗಳು ಬೆಚ್ಚನೆ ವೇದಿಕೆಗಳನ್ನು ಒದಗಿಸಿಕೊಟ್ಟಿವೆ. ವಿಷಯವೇನು? ಏನು ಹೇಳಿದ್ದಾರೆ? ಏಕೆ ಹೇಳಿದ್ದಾರೆ? ಸಂದರ್ಭ ಯಾವುದು? ಅದು ಮುಖ್ಯವೇ? ಪ್ರತಿಕ್ರಿಯೆಗೆ ಅರ್ಹವೇ? ಮೊದಲಾದ ಪ್ರಶ್ನೆಗಳನ್ನು ಕೇಳಿಕೊಳ್ಳದೆಯೇ ಆ ಕ್ಷಣದಲ್ಲಿ ಅನ್ನಿಸಿದ್ದನ್ನು ಎಸೆದು ತೃಪ್ತರಾಗುವ ಮನಸ್ಥಿತಿ. ಅದನ್ನು ದಾಟಿ, ವ್ಯಕ್ತಿಗಳು ಮತ್ತು ಸಮುದಾಯಗಳ ನಡುವೆ ಏರ್ಪಡಬೇಕಾದ ಆರೋಗ್ಯಕರವಾದ, ಸೌಹಾರ್ದ ಸಂವಾದ ಜಾರಿಗೆ ಬರುವುದೇ ಇಲ್ಲ. ಇಂಥ ಸನ್ನಿವೇಶದಲ್ಲಿ ಇಲ್ಲಿನ ಲೇಖನಗಳು, ಸರಳ ನಿರೂಪಣೆಯ ಭಾಷೆಯಲ್ಲಿ ಮುಂದುವರಿಯುತ್ತವೆ ಎಂಬುದೇ ವಿಶೇಷ. ಈ ನಿರೂಪಣೆ, ಓದುಗರಿಗೆ ತಮ್ಮ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ನಿರಾಕರಿಸುವುದಿಲ್ಲ. ಬದಲಿಗೆ ಚಿಂತನೆಗೆ ದೂಡುತ್ತವೆ.

ಹೌದಾ? ದೇಶದಲ್ಲಿ ಹೀಗೆ ನಡೆಯುತ್ತಿದೆಯಾ? ಎನ್ನಿಸುತ್ತದೆ. ಆ ಬಗ್ಗೆ ನಿರ್ಧಾರ ತಡವಾದರೂ ಸರಿ. ಮೊದಲು ಕಣ್ಣ ಮುಂದೆ ನಡೆಯುತ್ತಿರುವುದನ್ನು ಸರಿಯಾಗಿ ಅವಲೋಕಿಸಬೇಕು. ಹೀಗಾಗಿ ಇಡೀ ಕೃತಿ ಸಮರ್ಥ ಅವಲೋಕನಕ್ಕೆ ಒಂದು ಮಾದರಿ.

ರಂಗನಾಥ್‌ ಅವರ ಪಿಎಚ್‌ಡಿ ಸಂಶೋಧನಾ ಪ್ರಬಂಧ ‘ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು’ ಕೃತಿಯಲ್ಲೂ ಈ ಮಾದರಿಯೇ ಇದೆ. ಅವರ ಕಾವ್ಯದಲ್ಲೂ ಈ ಗುಣ ಲಕ್ಷಣವಿದೆ.
‘ಟ್ರಂಪಿಸಂನ ಸತ್ಯ–ಜ್ಞಾನಗಳ ವಿರೋಧ’ ಇಲ್ಲಿನ ಮಹತ್ವದ ಲೇಖನಗಳಲ್ಲಿ ಒಂದು. ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರೆನ್ನಲಾದ ಸುಳ್ಳುಗಳ ಅಂಕಿ ಅಂಶ, ಅವುಗಳಿಗೆ ಅಲ್ಲಿನ ಜನ ತೋರಿದ ಪ್ರತಿರೋಧ, ನೋಮ್‌ ಚಾಮ್‌ಸ್ಕಿಯಂಥ ಚಿಂತಕರು ಅದನ್ನು ವಿಶ್ಲೇಷಿಸಿದ ಬಗೆಯನ್ನು ಕನ್ನಡದಲ್ಲಿ ಸರಳವಾಗಿ ಕಟ್ಟಿಕೊಟ್ಟ ಲೇಖನಗಳಲ್ಲಿ ಇದೂ ಒಂದು.

‘ಮಾಧ್ಯಮಗಳು ಮತ್ತು ಸಾಮಾಜಿಕ ನ್ಯಾಯ’, ‘ದುರಂತಗಳ ಗ್ರಾಹಕರನ್ನು ಸೃಷ್ಟಿಸುವ ಮಾಧ್ಯಮಗಳು’ ಮಾಧ್ಯಮಲೋಕದ ವಾಣಿಜ್ಯ ದೃಷ್ಟಿಕೋನ ಮತ್ತು ಸಮಾಜವಿರೋಧಿ ಗುಣಗಳ ಕುರಿತು ಬೆಳಕು ಚೆಲ್ಲುತ್ತವೆ. ಆದರೆ ಮಾಧ್ಯಮದ ಮನೆಯೊಳಗಿರುವವರೊಂದಿಗೆ ಇನ್ನಷ್ಟು ಚರ್ಚೆ ನಡೆಸಿದ್ದರೆ ಕಂಟೆಂಟ್‌ನಲ್ಲಿ ತಾಜಾ ನಿದರ್ಶನಗಳು ದೊರಕುವ ಸಾಧ್ಯತೆ ಇತ್ತು.

‘ಮಾಲಿನ್ಯವಿಲ್ಲದ ಭಾಷೆ’ಯನ್ನು ವಿರೋಧಿಸಿ ನಾವೆಲ್ಲರೂ ಖಾಸಗಿಯಾಗಿ ಜೋರುದನಿಯಲ್ಲಿ ಮಾತನಾಡುತ್ತೇವೆ. ಆದರೆ ಬಹಿರಂಗವಾಗಿ ಅದನ್ನು ಪ್ರತಿಪಾದಿಸಲು ಹಿಂದೆ ಮುಂದೆ ನೋಡುತ್ತೇವೆ. ಅಂಥ ಭಾಷೆಯು ರೂ‍ಪುಗೊಳ್ಳಬೇಕು ಎಂದು ಪ್ರತಿಪಾದಿಸಲೆಂದೇ ‘ಸ್ವಾಮೀಜಿಗಳು ಮತ್ತು ಸುಳ್ಳು ನುಡಿ’ ಲೇಖನವನ್ನು ಬರೆದಿರುವಂತೆ ತೋರುತ್ತದೆ.

‘ಆತ್ಮನಿರ್ಭರ;ಭಾಷೆ ಬೇರಿಗಿಳಿಸುವ ಬಗೆ’, ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’– ಜನಸಾಮಾನ್ಯರ ದೃಷ್ಟಿಯಿಂದ ಸರ್ಕಾರದ ಗೊಂದಲಮಯ ಅಭಿವೃದ್ಧಿ ಪರಿಭಾಷೆಗಳನ್ನು ವಿಮರ್ಶಿಸುವ ಪ್ರಯತ್ನ ಮಾಡುತ್ತವೆ. ಇದು ಲೇಖಕನೊಬ್ಬ ಪ್ರಜಾಪ್ರಭುತ್ವದ ವಿಪರ್ಯಾಸಗಳಿಗೆ ಮುಖಾಮುಖಿಯಾಗುವ ಮಾದರಿಯಾಗಿಯೂ ಗಮನ ಸೆಳೆಯುತ್ತದೆ.

‘ಸಂಶೋಧನೆ ಮತ್ತು ಜ್ಞಾನವೆಂಬ ಸಟೆ’ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಕುರುಡು ಅನುಷ್ಠಾನಗಳ ಬಗ್ಗೆ ಸಿಡಿಯುವಂಥ ಲೇಖನ. ‘ಈಗಾಗಲೇ ಕೆಲಸ ಮಾಡುತ್ತಿರುವ ಕೆಲವು ಡೀಮ್ಡ್‌ ವಿಶ್ವವಿದ್ಯಾಲಯಗಳು, ಸ್ವಾಯತ್ತ ಕಾಲೇಜುಗಳು ಪಠ್ಯಪುಸ್ತಕಗಳನ್ನು ಪ್ರಕಟಿಸಲಾಗದೆ ಜೆರಾಕ್ಸ್‌ ಪ್ರತಿಗಳನ್ನು ಹಂಚುವ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳು ಯಾವುದೇ ಜ್ಞಾನಕ್ಕೆ ಸಂಬಂಧಿಸಿದ ಅತ್ಯುತ್ತಮ ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವೇ?’ ಎಂಬ ಪ್ರಶ್ನೆಯು ‘ಎಲ್ಲರಿಗೂ ಗೊತ್ತಿರುವ ಸತ್ಯ’ದ ಕಡೆಗೆ ಬೆರಳು ತೋರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಈ ಬಗ್ಗೆ ಇನ್ನಾದರೂ ತುಟಿ ಬಿಚ್ಚಬೇಕು.

ಈ ಕೃತಿಯನ್ನು ಕೊನೆಯಿಂದ ಓದಿದರೆ ಹೆಚ್ಚಿನ ಲಾಭವೂ ಇದೆ. ಜಾಗತಿಕ ರಾಜಕೀಯ ಚರ್ಚೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ‘ಮ್ಯಾನುಫ್ಯಕ್ಚರಿಂಗ್‌ ಕಂನ್ಸೆಂಟ್’ ಕುರಿತ ಕೊನೆಯ ಲೇಖನ ಮೂಡಿಸುವ ತಿಳಿವಳಿಕೆ ದೊಡ್ಡದು. ಆ ತಿಳಿವಳಿಕೆಯು ಸಂಕಲನದ ಎಲ್ಲ ಲೇಖನಗಳ ಓದಿಗೆ ಹೊಸ ಒಳನೋಟಗಳನ್ನು ಒದಗಿಸುತ್ತದೆ.

‘ಒಪ್ಪಿತ ಅಭಿಪ್ರಾಯ’ಗಳನ್ನು ಉತ್ಪಾದಿಸುವ ‘ಅಭಿವೃದ್ಧಿ ರಾಜಕಾರಣ’ವೇ ಭಾಷೆ, ಸಮಾಜ, ಸಮುದಾಯಗಳನ್ನು ತನಗೆ ಬೇಕಾದ ರೀತಿಯಲ್ಲಿ ರೂಪಿಸುವ ಹುನ್ನಾರವನ್ನು ನಡೆಸುತ್ತಿರುತ್ತದೆ. ಆ ಹುನ್ನಾರವನ್ನ ಒಬ್ಬ ಪ್ರಭಾಪ್ರಭುತ್ವವಾದಿ ಬೋಧಕ ಜನ–ಭಾಷೆಯ ಮೂಲಕ ಗ್ರಹಿಸಿ ಬರೆದರೆ ‘ಕೊಲುವೆನೆಂಬ ಭಾಷೆ’ಯಂಥ ಕೃತಿ ಹುಟ್ಟುತ್ತದೆ.

‘ತಿಂಗಳ ಓದು’ ಕಾರ್ಯಕ್ರಮದ ಮೂಲಕ ಮೈಸೂರಿನ ಸಾಹಿತ್ಯ- ಸಂಸ್ಕೃತಿ ಲೋಕಕ್ಕೆ ಕಾಲಿಟ್ಟ ನಿಂಗರಾಜು ಚಿತ್ತಣ್ಣನವರ್ ಅವರ ‘ಚಿಂತನ ಚಿತ್ತಾರ’ ಪ್ರಕಾಶನದ ಮೂಲಕ ಈ ಕೃತಿಯನ್ನು ಪ್ರಕಟಿಸಿದ್ದಾರೆ.

  • ಕೆ.ನರಸಿಂಹಮೂರ್ತಿ, ಮೈಸೂರು
    (ಕೃಪೆ: ಫೇಸ್‌ಬುಕ್‌ ಪ್ರೊಫೈಲ್‌ನಿಂದ)

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ತಿರುಪತಿ ದೇವಸ್ಥಾನದ ಪುರೋಹಿತರ ಮನೆಯಲ್ಲಿ 128Kg ಚಿನ್ನ ಸಿಕ್ಕಿದ್ದು ನಿಜವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -