ಸೀಬೆಹಣ್ಣು ಕದ್ದಿದ್ದಾನೆಂದು ಆರೋಪಿಸಿ ದಲಿತ ಯುವಕನನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಮನೇನಾ ಗ್ರಾಮದಲ್ಲಿ ನಡೆದಿದೆ.
ಗಂಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತೋಟದಲ್ಲಿ ಸೀಬೆಹಣ್ಣು ಕದ್ದನೆಂದು ಕೊಲೆ ಮಾಡಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್ 3(2)(ವಿ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅಭಯ್ ಪಾಂಡೆ ತಿಳಿಸಿದ್ದಾರೆ. ಸಂತ್ರಸ್ತ ಓಂಪ್ರಕಾಶ್ ಅವರ ಸಹೋದರ ಸತ್ಯಪ್ರಕಾಶ್ ಮಾತನಾಡಿ, “ನನ್ನ ಸಹೋದರ ಕಾಡಿಗೆ ಹೋಗಿದ್ದನು. ಮನೆಗೆ ಹಿಂದಿರುಗುವಾಗ ತೋಟದಲ್ಲಿ ನೆಲದ ಮೇಲೆ ಬಿದ್ದಿದ್ದ ಸೀಬೆಹಣ್ಣನ್ನು ಎತ್ತಿಕೊಂಡಿದ್ದನು” ಎಂದು ತಿಳಿಸಿದ್ದಾರೆ.
ಅವನ ಕೈಯಲ್ಲಿ ಸೀಬೆಹಣ್ಣನ್ನು ನೋಡಿದ, ತೋಟದ ಮಾಲೀಕರಾದ ಭೀಮಸೇನ್ ಮತ್ತು ಬನ್ವಾರಿ ಸೇರಿದಂತೆ ಕೆಲವು ಸ್ಥಳೀಯ ಗಂಡಸರು ಸೇರಿ ಥಳಿಸಿದ್ದಾರೆ. ಪ್ರಜ್ಞೆ ಕಳೆದುಕೊಳ್ಳುವವರೆಗೂ ಲಾಠಿ ಮತ್ತು ಇತರ ಭಾರವಾದ ಅಸ್ತ್ರಗಳಿಂದ ಅಮಾನುಷವಾಗಿ ಹೊಡೆದಿದ್ದಾರೆ ಎಂದು ವಿವರಿಸಿದ್ದಾರೆ.
ಓಂಪ್ರಕಾಶ್ ದೇಹದ ಮೇಲೆ ಅಸಂಖ್ಯಾತ ಗಾಯದ ಗುರುತುಗಳಿದ್ದವು. ಓಂಪ್ರಕಾಶ್ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿರಿ: ಜಾತಿ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್ ವಿಳಂಬ: ಮನನೊಂದು ದಲಿತ ಯುವಕ ಸಾವಿಗೆ ಶರಣು
ಅಕ್ಕಿ ಕದ್ದನೆಂದು ಆರೋಪಿಸಿ ಆದಿವಾಸಿ ಯುವಕನನ್ನು ಕೊಂದ ಘಟನೆ ಕೇರಳದಲ್ಲಿ ನಾಲ್ಕೂವರೆ ವರ್ಷಗಳ ಹಿಂದೆ ನಡೆದಿತ್ತು. ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯಲ್ಲಿ 2018ರ ಫೆಬ್ರವರಿ 22ರಂದು ಕಿರಾಣಿ ಅಂಗಡಿಯಿಂದ ಅಕ್ಕಿ ಕದ್ದ ಆರೋಪದಲ್ಲಿ 30 ವರ್ಷದ ಆದಿವಾಸಿ ಯುವಕ ಎ.ಮಧು ಕೊಲೆಯಾಗಿದ್ದನು.
ವಿಶೇಷ ತನಿಖಾ ತಂಡವು ಮೇ 2018ರಲ್ಲಿ 3,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. 16 ವ್ಯಕ್ತಿಗಳನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989ರ ಅಡಿಯಲ್ಲಿ ಕೊಲೆ ಆರೋಪವನ್ನು ಮಾಡಲಾಗಿದೆ. ಈಗ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯು ಕೇರಳದ ಆದಿವಾಸಿ ಯುವಕನ ಪ್ರಕರಣವನ್ನು ನೆನಪಿಸುವಂತಿದೆ.


