ಟಿ20 ವಿಶ್ವಕಪ್ ಟೂರ್ನಿಯ ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಬಲಿಷ್ಟ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ತಲುಪದೆ ಟೂರ್ನಿಯಿಂದ ಹೊರನಡೆದಿದೆ. ಇಂದು ನಡೆದ ನೆದರ್ಲೆಂಡ್ಸ್ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ 13 ರನ್‌ಗಳ ಸೋಲಿನೊಂದಿಗೆ ನಿರಾಸೆಯಿಂದ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದಾಗಿ ಭಾರತ ತಂಡ ಇನ್ನೊಂದು ಪಂದ್ಯ ಉಳಿದಿರುವಂತೆಯೇ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇಂದು ನಡೆವ ಜಿಂಬಾಬ್ವೆ ವಿರುದ್ಧದ ಪಂದ್ಯದ ನಂತರ ಅಂಕಗಳ ಆಧಾರದಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಥವಾ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆಯೋ ಎಂಬುದಷ್ಟೇ ತೀರ್ಮಾನವಾಗಬೇಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಅದಕ್ಕುತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕಂಡು ಕೇವಲ 145 ರನ್ ಅಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
ಇನ್ನೊಂದೆ ದಕ್ಷಿಣ ಆಫ್ರಿಕಾ ತಂಡ ಹೊರ ನಡೆಯುತ್ತಲೇ ಸೆಮಿಫೈನಲ್‌ನ ಇನ್ನೊಂದು ಸ್ಥಾನಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ದಕ್ಷಿಣ ಆಫ್ರಿಕಾ ತಂಡ 5 ಪಂದ್ಯಗಳಿಂದ ಕೇವಲ 5 ಅಂಕ ಗಳಿಸಿದೆ. ಭಾರತ ತಂಡ 4 ಪಂದ್ಯಗಳಿಂದ 6 ಅಂಕ ಗಳಿಸಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ತಲಾ 4 ಪಂದ್ಯಗಳಿಂದ 4 ಅಂಕ ಗಳಿಸಿದ್ದು, ತಮ್ಮ ಕೊನೆಯ ಪಂದ್ಯದಲ್ಲಿ ಪರಸ್ಪರ ಸ್ಫರ್ಧಿಸುತ್ತಿವೆ.
ಸದ್ಯಕ್ಕೆ ಪಾಕ್ ಎದುರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಬಾಂಗ್ಲಾದೇಶ ತಂಡವು 14 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 92 ರನ್ ಗಳಿಸಿದೆ. ಈ ಪಂದ್ಯದಲ್ಲಿ ಗೆದ್ದವರು ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದ್ದಾರೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೂ ಸಹ 5 ಅಂಕದೊಂದಿಗೆ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಲಿದೆ.
ಕಳೆದ ವರ್ಷದ ವಿಶ್ವಕಪ್‌ನಲ್ಲಿಯೂ ಸಹ ದಕ್ಷಿಣ ಆಫ್ರಿಕಾ ತಂಡ ಸೂಪರ್ 12 ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿಯೂ ಸೆಮಿಫೈನಲ್ ತಲುಪದೆ ನಿರಾಶೆ ಅನುಭವಿಸಿತ್ತು. 5 ಪಂದ್ಯಗಳಲ್ಲಿ 4 ಗೆದ್ದರೂ ಸಹ ನೆಟ್ ರನ್ ರೇಟ್ ಕಡಿಮೆಯಿದ್ದ ಕಾರಣ ಟೂರ್ನಿಯಿಂದ ಹೊನಡೆದಿತ್ತು. ಆದರೆ ಈ ಬಾರಿ ಒಂದು ಪಂದ್ಯ ಮಳೆಗೆ ಆಹುತಿಯಾದರೆ ಪಾಕ್ ಮತ್ತು ನೆದರ್ಲೆಂಡ್ಸ್ ಎದುರು ಸೋತು ಟೂರ್ನಿಯಿಂದ ಹೊರಬಿದ್ದಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್, ನ್ಯೂಜಿಲೆಂಡ್ -ಅತಿಥೇಯ ಆಸ್ಟ್ರೇಲಿಯಾಕ್ಕೆ ನಿರಾಸೆ