Homeಕ್ರೀಡೆಕ್ರಿಕೆಟ್ಟಿ20 ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್, ನ್ಯೂಜಿಲೆಂಡ್ -ಅತಿಥೇಯ ಆಸ್ಟ್ರೇಲಿಯಾಕ್ಕೆ ನಿರಾಸೆ

ಟಿ20 ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್, ನ್ಯೂಜಿಲೆಂಡ್ -ಅತಿಥೇಯ ಆಸ್ಟ್ರೇಲಿಯಾಕ್ಕೆ ನಿರಾಸೆ

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 1ರಲ್ಲಿ ಶ್ರೀಲಂಕಾ ತಂಡದ ಎದುರು ಜಯ ಸಾಧಿಸಿದ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ತಂಡದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲ್ಲಲಿ ಎಂದು ಕಾದು ಕುಳಿತಿದ್ದ ಅತಿಥೇಯ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಭಾರೀ ನಿರಾಸೆಯಾಗಿದೆ.

ಶ್ರೀಲಂಕಾ ನೀಡಿದ್ದ 142 ರನ್‌ಗಳ ಗುರಿಯನ್ನು ಇಂಗ್ಲೆಂಡ್ ತಂಡ ತಿಣುಕಾಡಿ ಕೊನೆಯ ಓವರ್‌ನಲ್ಲಿ ತಲುಪಿತು. ಆ ಮೂಲಕ 4 ವಿಕೆಟ್‌ಗಳಿಂದ ಗೆದ್ದು ನಿಟ್ಟುಸಿರು ಬಿಟ್ಟಿತ್ತಲ್ಲದೇ ಸೆಮಿಫೈನಲ್ ಪ್ರವೇಶ ಪಡೆಯಿತು.

ಗ್ರೂಪ್ 1ರ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 7 ಅಂಕ ಪಡೆದಿವೆ. ಆದರ್ ಉತ್ತಮ ನೆಟ್ ರನ್‌ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ಸೆಮಿಗೆ ಅವಕಾಶ ಪಡೆದರೆ ಕಡಿಮೆ ನೆಟ್ ರನ್ ರೇಟ್ ಹೊಂದಿರುವ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಶುಕ್ರವಾರ ಆಫ್ಘಾನಿಸ್ಥಾನ ಎದುರಿನ ಭಾರೀ ಅಂತರದಲ್ಲಿ ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೇವಲ 4 ರನ್‌ ಗಳಿಂದ ಗೆದ್ದಿದ್ದು ಅದಕ್ಕೆ ಮುಳವಾಗಿ ಪರಿಣಮಿಸಿತು. ಆ ಪಂದ್ಯದಲ್ಲಿ ಆಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ ಕೊನೆಯ ಹಂತದಲ್ಲಿ ಕೇವಲ 23 ಎಸೆತಗಳಲ್ಲಿ 48 ರನ್ ಚಚ್ಚಿ ತಂಡವನ್ನು ಗೆಲುವಿನ ಸನಿಹಕ್ಕೆ ತಲುಪಿಸಿದ್ದರು. ಆದರೆ ಕೊನೆಗೂ 4 ರನ್‌ನಿಂದ ಸೋಲಬೇಕಾಗಿತ್ತು. ಈಗಾಗಿ ಪಂದ್ಯ ಗೆದ್ದರೂ ಆಸ್ಟ್ರೇಲಿಯಾದ ನೆಟ್ ರನ್‌ ರೇಟ್ ಏರಿಕೆಯಾಗಲಿಲ್ಲ.

ಇಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದ್ದರೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ಎರಡೂ ತಂಡಗಳು ಟೂರ್ನಿಯಿಂದ ಹೊರಬೀಳುತ್ತಿದ್ದವು. 7 ಅಂಕ ಗಳಿಸಿದ್ದ ಆಸ್ಟ್ರೇಲಿಯಾಗೆ ವರದಾನವಾಗುತ್ತಿತ್ತು. ಆದರೆ ಅದಕ್ಕೆ ಇಂಗ್ಲೆಂಡ್ ಆಟಗಾರರು ಅವಕಾಶ ಮಾಡಿಕೊಡದೆ ಗೆಲುವಿನ ಮೂಲಕ ಸೆಮಿಫೈನಲ್ ತಲುಪಿದ್ದಾರೆ.

ಇನ್ನು 2ನೇ ಗುಂಪಿನಲ್ಲಿ ಸೆಮಿಫೈನಲ್‌ ಪ್ರವೇಶಕ್ಕಾಗಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಭಾರತದ ಸಾಧ್ಯತೆಗಳು

ಭಾರತವು ತನ್ನ ಕೊನೆಯ ಪಂದ್ಯವನ್ನು ಜಿಂಬಾಬ್ವೆ ತಂಡದ ಎದುರು ನವೆಂಬರ್ 6 ರಂದು ಎದುರಿಸಲಿದೆ. ಆ ಪಂದ್ಯದಲ್ಲಿ ಭಾರತ ಗೆದ್ದಲ್ಲಿ ಒಟ್ಟು 08 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತ ಸೋತರೂ ಕೂಡ ಅದೇ ದಿನ ನಡೆಯುವ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಸೋತರೆ ಭಾರತಕ್ಕೆ ಅವಕಾಶವಿದೆ. ಒಂದು ವೇಳೆ ಭಾರತ ಸೋತು, ದಕ್ಷಿಣ ಆಫ್ರಿಕಾ ತಂಡ ಗೆದ್ದಲ್ಲಿ ಬಾಂಗ್ಲಾದೇಶ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕಡಿಮೆ ಅಂತರದಿಂದ ಸೋಲಿಸಬೇಕೆಂದು ಭಾರತ ಪ್ರಾರ್ಥಿಸಬೇಕಿರುತ್ತದೆ. ಆಗ ನೆಟ್ ರನ್ ರೇಟ್ ಆಧಾರದಲ್ಲಿ ಬಾಂಗ್ಲಾದೇಶಕ್ಕಿಂತ ಹೆಚ್ಚಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಸೆಮಿಫೈನಲ್ ತಲುಪಬಹುದು.

ದಕ್ಷಿಣ ಆಫ್ರಿಕಾ:

4 ಪಂದ್ಯಗಳಿಂದ 5 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡವು ತನ್ನ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಗೆಲ್ಲಲೇಬೇಕಿದೆ. ಅಲ್ಲಿ ಸೋತಲ್ಲಿ ಟೂರ್ನಿಯಿಂದ ಹೊರಬೀಳಲಿದೆ. ಅಂತಹ ಸಂದರ್ಭದಲ್ಲಿ ಕೊನೆಯ ಆಸೆಯಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪಂದ್ಯ ಮಳೆಯ ಕಾರಣಕ್ಕೆ ರದ್ದಾದರೆ ರನ್ ರೇಟ್ ಆಧಾರದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ.

ಪಾಕಿಸ್ತಾನ:

ಪಾಕಿಸ್ತಾನ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆದ್ದರೂ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ಎದುರು ಸೋಲುವುದನ್ನು ಕಾಯಬೇಕಿದೆ. ಅಲ್ಲದೆ ಭಾರತವು ಜಿಂಬಾಬ್ವೆ ವಿರುದ್ಧ ಸೋತಲ್ಲಿ ನೆಟ್ ರನ್ ರೇಟ್ ಆಧಾರದಲ್ಲಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಬಹುದಾಗಿದೆ.

ಬಾಂಗ್ಲಾದೇಶ

ಗ್ರೂಪ್ ಎರಡರಲ್ಲಿ ಅತಿ ಕೆಟ್ಟ ನೆಟ್ ರನ್ ರೇಟ್ ಹೊಂದಿರುವ ಬಾಂಗ್ಲಾದೇಶದ ಸೆಮಿಫೈನಲ್ ಪ್ರವೇಶ ತೀರಾ ಕಠಿಣವಾಗಿದೆ. ಪಾಕಿಸ್ತಾನದ ವಿರುದ್ಧ ದೊಡ್ಡ ಅಂತರದಲ್ಲಿ ಬಾಂಗ್ಲಾದೇಶ ಗೆದ್ದು ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಸೋತಲ್ಲಿ ಭಾರತದ ಜೊತೆಗೆ ಬಾಂಗ್ಲಾದೇಶಕ್ಕೆ ಸೆಮಿಫೈನಲ್ ಅವಕಾಶ ತೆರೆದುಕೊಳ್ಳುತ್ತದೆ.

ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ತಂಡಗಳು ಹೆಚ್ಚಿನ ಸೋಲು ಕಂಡಿರುವ ಕಾರಣ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿವೆ.

ಇದನ್ನೂ ಓದಿ: 34ನೇ ಜನ್ಮದಿನ: ಮಾಗಿದ, ಸೌಹಾರ್ದತೆ ಪರ ವಾಲಿದ ವಿರಾಟ್ ಕೊಹ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -