ಇಂದು ಭಾರತ ಕ್ರಿಕೆಟ್ ತಂಡದ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯವರ 34 ನೇ ಜನ್ಮದಿನ. ಸದ್ಯ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ (4 ಪಂದ್ಯಗಳಿಂದ 220 ರನ್, 3 ಅರ್ಧಶತಕ) ಗಳಿಸಿರುವ ಅವರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅದರಿಂದಾಗಿಯೇ ಭಾರತ ತಂಡ ಪಾಕಿಸ್ತಾನ ಎದುರು ಮಾತ್ರವಲ್ಲದೆ ನೆದರ್ಲೆಂಡ್ಸ್ ಮತ್ತು ಬಾಂಗ್ಲಾದೇಶದ ಎದುರು ಕೂಡ ಗೆದ್ದು ಸೆಮಿಫೈನಲ್ ಕಡೆ ಮುಖ ಮಾಡಿದೆ. ಅಭಿಮಾನಿಗಳಿಂದ ಕಿಂಗ್ ಕೊಹ್ಲಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ವಿರಾಟ್ ತಮ್ಮ ಕ್ರಿಕೆಟ್ ಜೀವನದಲ್ಲಿ ಹತ್ತು ಹಲವು ದಾಖಲೆಗಳನ್ನು ಸೃಷ್ಟಿಸಿರುವ ಅವರು ಅನೇಕ ಏಳು-ಬೀಳುಗಳನ್ನು ಸಹ ಕಂಡಿದ್ದಾರೆ.
ಆರಂಭಿಕ ವರ್ಷಗಳಲ್ಲಿ ತುಂಬಾ ಆಕ್ರಮಣಕಾರಿ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದ ಕೊಹ್ಲಿ ಈಗ ಮಾಗಿದ್ದಾರೆ. ಕ್ರೀಡೆಯ ನಿಜವಾದ ಉದ್ದೇಶವಾದ ಸೌಹಾರ್ದತೆ ಮತ್ತು ಬೆಸುಗೆ ಸಾಧಿಸುವ ನಿಟ್ಟಿನಲ್ಲಿ ಅವರು ಹೆಜ್ಜೆಯಿಟ್ಟಿರುವುದು ಸಕರಾತ್ಮಕವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಯಾದ ಕ್ರಿಕೆಟ್ ದೇಶ-ದೇಶಗಳ ನಡುವೆ ಬೆಸುಗೆಗೆ-ಬಾಂಧವ್ಯಕ್ಕೆ ಬಳಕೆಯಾಗಬೇಕಿತ್ತು. ಆದರೆ ದುರಾದೃಷ್ಟವವೆಂಬಂತೆ ದ್ವೇಷಕ್ಕೆ ಬಳಕೆಯಾಗುವ ಸಾಧನವಾಗಿ ಬಿಟ್ಟಿತ್ತು. ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಎರಡೂ ದೇಶದ ಮಾಧ್ಯಮಗಳು ಯುದ್ದ-ಕದನವೆಂಬಂತೆ ಬಿಂಬಿಸುತ್ತಿದ್ದವು. ಮೈದಾನದಲ್ಲಿ ಕೆಲ ಆಟಗಾರರು ಸಹ ಅದಕ್ಕೆ ಪುಷ್ಟಿ ಕೊಡುವಂತೆ ವರ್ತಿಸುತ್ತಿದ್ದರು. ಆದರೆ ವಿರಾಟ್ ಕೊಹ್ಲಿ ಅದಕ್ಕೆ ತಿಲಾಂಜಲಿ ಇಡುವತ್ತ ಮುಖ ಮಾಡಿರುವುದು ಆಶಾದಾಯಕವಾಗಿ ಗೋಚರಿಸುತ್ತಿದೆ.
2021ರ ಟಿ20 ವಿಶ್ವಕಪ್‌ನ ಭಾರತ-ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ 10 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮಣಿಸಿದ ಸಾಧನೆಗೈದಿತು. ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಗಳು. ಅವರಿಬ್ಬರೂ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಕೊಹ್ಲಿ ನಾಯಕತ್ವದ ಎದುರೆ ಜಯ ಪಡೆದಿದ್ದರು. ಆ ಸಂದರ್ಭದಲ್ಲಿ ಅದೇ ಕೊಹ್ಲಿ ಅವರಿಬ್ಬರನ್ನು ಅಪ್ಪಿ ಅಭಿನಂದಿಸಿದರು. ಅವರ ಬೆನ್ನು ತಟ್ಟಿ ಮಾತನಾಡಿದರು. ಇದರಿಂದ ಅವರಿಬ್ಬರೂ ಎಷ್ಟು ಖುಷಿಗೊಂಡಿರಬೇಕು ಅಲ್ಲವೇ? ಆ ಸಂದರ್ಭದ ಸುಂದರ ಚಿತ್ರಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟರ್‌ನಲ್ಲಿ ಪ್ರಕಟಿಸಿ “Spirit of Cricket” ಎಂದು ಬರೆದು ಸಂಭ್ರಮಿಸಿತ್ತು!
Spirit of Cricket!! 👏👏👏 pic.twitter.com/pH6UfrRcKf
— Pakistan Cricket (@TheRealPCB) October 24, 2021
ಸೋತದ್ದು ಒಂದು ಪಂದ್ಯ ಮಾತ್ರ. ಆದರೆ ಗೆದ್ದದ್ದು ಸಹಸ್ರಾರು ಹೃದಯಗಳು. ವೆಲ್ ಡನ್ ವಿರಾಟ್ ಕೊಹ್ಲಿ ಎಂದು ಹಲವಾರು ಅಭಿಮಾನಿಗಳು ಅಂದು ಉದ್ಘಾರ ತೆಗೆದಿದ್ದರು.
ಆದರೆ ಕೆಲವು ಮತಾಂಧರು ಆ ಪಂದ್ಯ ಸೋಲಲು ಮೊಹಮ್ಮದ್ ಶಮಿ ಕಾರಣ ಎಂದು ತಗಾದೆ ತೆಗೆದು ಅವರನ್ನು ನಿಂದಿಸಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಮೊಹಮ್ಮದ್ ಶಮಿಯನ್ನು ಟ್ರೋಲ್ ಮಾಡಿ ನಿಂದಿಸಿದ್ದರು. ಅದಕ್ಕೆ ಶಮಿ ಮುಸ್ಲಿಂ ಧರ್ಮಿಯರಾಗಿದ್ದೇ ಏಕೈಕ ಕಾರಣವಾಗಿತ್ತು. ಆ ಸಂದರ್ಭದಲ್ಲಿ ತಂಡದ ನಾಯಕರಾಗಿದ್ದ ಕೊಹ್ಲಿ ಬೆಷರತ್ ಆಗಿ ಶಮಿ ಪರ ನಿಂತರು. ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ಕೆಲವರು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಾನು ಎಂದಿಗೂ ಊಹಿಸಿರಲಿಲ್ಲ” ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ‘ನಾವು ಶಮಿ ಅವರ ಬೆಂಬಲಕ್ಕೆ 200 ಪರ್ಸೆಂಟ್ ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವವನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಕೊಹ್ಲಿ ಘೋಷಿಸಿದ್ದರು.
ನಾವು ಒಳ್ಳೆಯ ಉದ್ದೇಶಕ್ಕಾಗಿ ಮೈದಾನದಲ್ಲಿ ಆಡುತ್ತಿದ್ದೇವೆಯೇ ಹೊರತು ಸಾಮಾಜಿಕ ಮಾಧ್ಯಮಗಳಲ್ಲಿನ ಬೆನ್ನುಮೂಳೆಯಿಲ್ಲದ ಜನರ ಗುಂಪಿನಂತಲ್ಲ. ಅವರಿಗೆ ಕೇವಲ ಒಬ್ಬ ವ್ಯಕ್ತಿಯನ್ನು ಸಹ ನೇರವಾಗಿ ಎದುರಿಸಲು ಸಾಧ್ಯವಿಲ್ಲ. ಅವರು ತಮ್ಮ ಗುರುತನ್ನು ಮರೆಮಾಚಿ ಸಾಮಾಜಿಕ ಮಾಧ್ಯಮಗಳಲ್ಲಿ ಗೇಲಿ ಮಾಡುತ್ತಾರೆ. ಇದು ಕೆಲವರಿಗೆ ಮನರಂಜನೆಯ ಮೂಲವಾಗಿರುವುದು ದುರದೃಷ್ಟಕರ ಮತ್ತು ದುಃಖದ ವಿಷಯವಾಗಿದೆ. ಇದು ಅಕ್ಷರಶಃ ಒಬ್ಬ ಮನುಷ್ಯ ಅತಿ ಕೆಳಮಟ್ಟದ ಕೃತ್ಯವಾಗಿದೆ. ಜನರು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ಏಕೆಂದರೆ ಮೊಹಮ್ಮದ್ ಶಮಿ ಭಾರತದ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂಬ ತಿಳುವಳಿಕೆ ಅವರಿಗಿಲ್ಲ. ಶಮಿಯವರ ಪ್ರಾಮಾಣಿಕತೆ, ದೇಶದ ಬಗೆಗಿನ ಬದ್ಧತೆಯನ್ನು ಅರ್ಥಮಾಡಿಕೊಳ್ಳದ ಜನರೊಂದಿಗೆ ಒಂದು ನಿಮಿಷವನ್ನು ಸಹ ವ್ಯರ್ಥಮಾಡಲು ನಾನು ಬಯಸುವುದಿಲ್ಲ ಎಂದು ಕೊಹ್ಲಿ ಹೇಳಿದ್ದರು.
ಇದನ್ನೂ ಓದಿ: ಮೊಹಮ್ಮದ್ ಶಮಿ ಬೆನ್ನಿಗೆ ನಿಂತ ವಿರಾಟ್ ಕೊಹ್ಲಿ: ಕೋಮುವಾದಿ ದಾಳಿಗೆ ತೀವ್ರ ಖಂಡನೆ
ಕೊಹ್ಲಿ ಶಮಿ ಪರ ನಿಂತಿದ್ದಕ್ಕೆ ಕೆಲ ವಿಕೃತರು ಅವರ ಪುಟ್ಟ ಮಗಳ ಮೇಲೂ ಅತ್ಯಾಚಾರದ ಬೆದರಿಕೆಯಾಕಿದ್ದರು. ಆದರೂ ಕೊಹಲ್ಲಿ ಬಗ್ಗಲಿಲ್ಲ. ಬದಲಿಗೆ ಭಾರತದ ಬೌಲರ್ ಅರ್ಶದೀಪ್ ಸಿಂಗ್ ವಿರುದ್ಧ ಟ್ರೋಲಿಗರು ದಾಳಿ ನಡೆಸಿದಾಗ ಕೊಹ್ಲಿ ಅವರ ಪರ ನಿಂತರು. ಏಷ್ಯಾಕಪ್ ಕ್ರಿಕೆಟ್‌ನ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡವವಿನ ಪಂದ್ಯದಲ್ಲಿ ಪಾಕ್ ಆಟಗಾರ ಆಸಿಫ್ ಅಲಿ ನೀಡಿದ ಕ್ಯಾಚ್ ಅನ್ನು ಅರ್ಶದೀಪ್ ಸಿಂಗ್ ಕೈ ಚೆಲ್ಲಿದರು. ಅಷ್ಟಕ್ಕೆ ಕೆಲ ಮತಾಂಧರು ಅವರನ್ನು ಖಾಲಿಸ್ತಾನಿ ಭಯೋತ್ಪಾದಕ, ಪಾಕಿಸ್ತಾನಕ್ಕೆ ಹೋಗು ಎಂದೆಲ್ಲ ನಿಂದಿಸಿದ್ದರು.
ಆಗ ಮಾತನಾಡಿದ ವಿರಾಟ್ ಕೊಹ್ಲಿ, “ಎಲ್ಲರೂ ತಪ್ಪು ಮಾಡುತ್ತಾರೆ. ತುಂಬಾ ಒತ್ತಡ ಸನ್ನಿವೇಷವಿದ್ದಾಗ ತಪ್ಪುಗಳಾಗುವುದು ಸಹಜ. ನನಗಿನ್ನೂ ನೆನಪಿದೆ, ನನ್ನ ಮೊದಲ ಪಂದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಎದುರಾಗಿತ್ತು. ಆದರೆ ಅಂದು ಶಾಹಿದ್ ಅಫ್ರಿದಿ ಎದುರು ನಾನು ಕೆಟ್ಟ ಹೊಡೆತ ಹೊಡೆದು ಔಟ್ ಆದೆ. ಅಂದು ರಾತ್ರಿ ನಾನು ನಿದ್ರೆ ಮಾಡಲಿಲ್ಲ ಮತ್ತು ನನ್ನ ಕ್ರಿಕೆಟ್ ಜೀವನ ಮುಗಿಯಿತು ಎಂದುಕೊಂಡೆ. ಆದರೆ ಹಾಗಾಗಲಿಲ್ಲ. ಭಾರತ ತಂಡದಲ್ಲಿ ಹಿರಿಯ ಆಟಗಾರರಿದ್ದಾರೆ. ಒಳ್ಳೆಯ ತಂಡಸ್ಪೂರ್ತಿಯಿದೆ. ಉತ್ತಮ ನಾಯಕ ಮತ್ತು ಕೋಚ್ ಇದ್ದಾರೆ. ಆಟಗಾರರು ತಮ್ಮ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ತಪ್ಪನ್ನು ಒಪ್ಪಿಕೊಂಡು ಯಾಕಾಯಿತು ಎಂದು ವಿಶ್ಲೇಷಿಸಿ ಮತ್ತೆ ಅಂಥದ್ದೆ ಒತ್ತಡದ ಸಂದರ್ಭಗಳನ್ನು ನಿಭಾಯಿಸುತ್ತಾರೆ” ಎನ್ನುವ ಮೂಲಕ ಅರ್ಶದೀಪ್‌ರನ್ನು ಬೆಂಬಲಿಸಿದ್ದರು.
ಈ ವರ್ಷದ ಟಿ20 ಕ್ರಿಕೆಟ್‌ನಲ್ಲಿಯೂ ಸಹ ಕೊಹ್ಲಿ ಮಿಂಚುತ್ತಿದ್ದಾರೆ. ಎಲ್ಲಾ ದೇಶದ ಆಟಗಾರರ ಜೊತೆಗೆ ಪ್ರೀತಿಯಿಂದ ಬೆರೆಯುತ್ತಿದ್ದಾರೆ. ಮಾನವೀಯತೆ ಪರ ತುಡಿಯುತ್ತಿದ್ದಾರೆ. ಹಾಗಂತ ಕೊಹ್ಲಿ ಟೀಕೆಗೆ ಹೊರತಾದವರಲ್ಲ. ಇತ್ತೀಚೆಗೆ ಬಾಂಗ್ಲಾದೇಶದ ಎದುರು ನಕಲಿ ಫೀಲ್ಡಿಂಗ್ ಆರೋಪ ಅವರ ಮೇಲಿದೆ. ರೈತ ಹೋರಾಟದ ವಿರುದ್ಧ ಟ್ವೀಟ್ ಮಾಡಿದ ಸೆಲೆಬ್ರೆಟಿಗಳಲ್ಲಿ ಅವರು ಸಹ ಒಬ್ಬರಾಗಿದ್ದರು. ಆದರೆ ಧರ್ಮದ ವಿಷಯದಲ್ಲಿ ಅವರು ತೆಗೆದುಕೊಂಡ ನಿಲುವುಗಳು ಅವರ 34ನೇ ಜನ್ಮದಿನದಂದು ಸ್ಮರಿಸುವಂತೆ ಮಾಡಿವೆ. ಮುಂದಕ್ಕೂ ಅವರು ಸೌಹಾರ್ದತೆಗೆ ಸಾಕ್ಷಿಯಾಗಲಿ ಎಂದು ಆಶಿಸೋಣ.
ಇದನ್ನೂ ಓದಿ: ಕ್ರಿಕೆಟ್ ಜಗತ್ತು ಕಂಡ ಕೆಚ್ಚೆದೆಯ ನಾಯಕ ಕೊಹ್ಲಿ