Homeಅಂತರಾಷ್ಟ್ರೀಯ"ಬಹಳ ಹಿಂದೆ ನಾನು ಜನರಿಗಾಗಿ ಹಲವು ಕನಸು ಕಂಡಿದ್ದೆ...": ಬ್ರೆಜಿಲ್‌ನ ಮುಂದಿನ ಅಧ್ಯಕ್ಷ ಲೂಲಾರ 2018ರ...

“ಬಹಳ ಹಿಂದೆ ನಾನು ಜನರಿಗಾಗಿ ಹಲವು ಕನಸು ಕಂಡಿದ್ದೆ…”: ಬ್ರೆಜಿಲ್‌ನ ಮುಂದಿನ ಅಧ್ಯಕ್ಷ ಲೂಲಾರ 2018ರ ಭಾಷಣ

- Advertisement -
- Advertisement -

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಜೈರ್ ಬೊಲ್ಸೊನಾರೊರನ್ನು ಸೋಲಿಸಿ ಆಯ್ಕೆಯಾಗಿರುವ ಕಾರ್ಮಿಕ ನಾಯಕ- ’ಲೂಲಾ’ ಎಂದೇ ಹೆಸರಾದ ಲೂಯಿಜ್ ಇನಾಷಿಯೊ ’ಲೂಲಾ’ ಡಾ ಸಿಲ್ವ ಅವರು, ಫೆಡರಲ್ ನ್ಯಾಯಾಧೀಶ ಸೆರ್ಜಿಯೊ ಮೋರೊ ನೀಡಿದ ವಾರಂಟ್ ಬಳಿಕ ತನ್ನ ಬಂಧನ ನಡೆಯುವುದಕ್ಕೆ ಮೊದಲು, ಏಪ್ರಿಲ್ 7, 2018ರಂದು ಸಾವೋ ಬರ್ನಾರ್ಡೊ ಕ್ಯಾಂಪೊದ ಮೆಟಲ್ ವರ್ಕರ್ಸ್ ಯೂನಿಯನ್‌ನಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾಡಿದ ಭಾಷಣದ ಸಾರಾಂಶವಿದು.

ನನ್ನ ಸಂಗಾತಿಗಳೇ,

ನಾನು ಇದೇ ಯೂನಿಯನ್‌ನಲ್ಲಿ ಹುಟ್ಟಿದವನು. ನಾನಿಲ್ಲಿ ಮೊದಲು ಬಂದಾಗ ಇದೊಂದು ಹಟ್ಟಿಗಿಂತ ದೊಡ್ಡದೇನೂ ಆಗಿರಲಿಲ್ಲ. ಈ ಕಟ್ಟಡವನ್ನು ನಮ್ಮ ಸಮಿತಿ ಮೇಲ್ವಿಚಾರಣೆ ಮಾಡುವಾಗಲೇ ಕಟ್ಟಲಾಯಿತು. ನಾನು ಇಲ್ಲಿ ಮಡೊರೆಝದಲ್ಲಿ ಶಾಲಾ ಶಿಕ್ಷಕನಾಗಿದ್ದೆ. ಅದರಲ್ಲಿ 1,800 ವಿದ್ಯಾರ್ಥಿಗಳಿದ್ದರು. ನಾನು ಬರೇ ಒಬ್ಬ ಮೆಕ್ಯಾನಿಕ್ ಎಂದು ಯೋಚಿಸುತ್ತೀರಾ? ನಾನು 1,800 ವಿದ್ಯಾರ್ಥಿಗಳಿದ್ದ ಶಾಲೆಯ ಶಿಕ್ಷಕನೂ ಆಗಿದ್ದೆ. (ಇಲ್ಲಿ ಅವರು ತನ್ನ ಕಾರ್ಖಾನೆಯನ್ನೇ ಶಾಲೆ ಎಂದು ಕರೆಯುತ್ತಿದ್ದಾರೆ.) 1978ರಿಂದಲೂ ಬ್ರೆಜಿಲ್‌ನ ಪ್ರಜಾಪ್ರಭುತ್ವವು ಏನು ಸಾಧಿಸಿದೆಯೋ ಅದರ ಒಂದು ಭಾಗಕ್ಕೆ ನಾವು ಈ ಸಾವೊ ಬರ್ನಾರ್ಡೊದ ಮೆಟಲ್ ವರ್ಕರ್ಸ್ ಯೂನಿಯನ್‌ಗೆ ಆಭಾರಿಗಳಾಗಿದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ಇದು ನನ್ನ ಶಾಲೆಯಾಗಿತ್ತು. ಇಲ್ಲಿ ನಾನು ಎಲ್ಲವನ್ನೂ ಕಲಿತೆ. ನಾನಿಲ್ಲಿ ರಾಜಕೀಯ ಮಾಡುವುದನ್ನೂ ಕಲಿತೆ ಏಕೆಂದರೆ, ನಾನು ಯೂನಿಯನ್‌ನ ನಿರ್ದೇಶಕನಾಗಿದ್ದೆ ಮತ್ತು ಕಾರ್ಖಾನೆಗಳಲ್ಲಿ 1,40,000 ಶಿಕ್ಷಕರಿದ್ದರು. ಅವರು ನನಗೆ ಯಾವುದನ್ನು ಹೇಗೆ ಮಾಡಬೇಕೆಂದು ಕಲಿಸಿಕೊಟ್ಟರು. ಪ್ರತಿಯೊಂದು ಸಲ ನನಗೇನಾದರೂ ಸಂಶಯ ಬಂದಾಗ, ನಾನು ಕಾರ್ಖಾನೆಯ ಗೇಟಿಗೆ ಹೋಗುತ್ತಿದ್ದೆ ಮತ್ತು ಈ ದೇಶದಲ್ಲಿ ಏನನ್ನಾದರೂ ಮಾಡುವುದು ಹೇಗೆ ಎಂದು ಸಹ ಕಾರ್ಮಿಕರಲ್ಲಿಯೇ ಕೇಳುತ್ತಿದ್ದೆ. ನಿಮಗೆ ಸಂಶಯವಿದ್ದಾಗ, ತಪ್ಪು ಮಾಡುವ ತಪ್ಪನ್ನು ಮಾಡಬೇಡಿ. ಸುಮ್ಮನೇ ಕೇಳಿ. ಆಗ ನೀವು ಸರಿಯನ್ನೇ ಮಾಡುವ ಸಾಧ್ಯತೆ ಬಹಳಷ್ಟು ಹೆಚ್ಚಾಗುತ್ತದೆ.

ಈ ಯೂನಿಯನ್ ಉಳಿದೆಲ್ಲಾ ಯೂನಿಯನ್‌ಗಳಿಗೆ ವ್ಯತಿರಿಕ್ತವಾಗಿ 283ರಷ್ಟು ನಿರ್ದೇಶಕರನ್ನು ಹೊಂದಿದೆ. ಇಲ್ಲಿ ನಿರ್ದೇಶಕರಾಗಬೇಕಾದರೆ ಸಹ ಕಾರ್ಮಿಕರಿಂದ ಸಮಿತಿಯೊಂದಕ್ಕೆ ನೇರ ಆಯ್ಕೆಯಾಗಬೇಕು. ಅದೊಂದೇ ದಾರಿ. ಸಮಿತಿಯೊಂದಕ್ಕೆ ಆಯ್ಕೆಯಾದ ಮೇಲೆ ಮತ್ತೆ ಯೂನಿಯನ್‌ನ ನಿರ್ದೇಶಕರನ್ನು ಮತ್ತು ಭಾಗಶಃ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಯಾವತ್ತೂ 283ರಷ್ಟು ನಿರ್ದೇಶಕರು ಮತ್ತು ಸಲಹೆಗಾರರು ಇದ್ದೇ ಇರುತ್ತಾರೆ. ಬ್ರೆಜಿಲ್‌ನ ಪ್ರತಿಯೊಂದು ಯೂನಿಯನ್‌ನಲ್ಲಿ ಇದೇ ರೀತಿ ಮಾಡಿದಲ್ಲಿ ಇಲ್ಲಿನ ಕಾರ್ಮಿಕ ಸಂಘಟನೆಗಳ ಚಳವಳಿಯಲ್ಲಿ ’ಮಾರಿ ಹೋಗುವುದು ಖಂಡಿತ ಕಡಿಮೆಯಾಗುತ್ತದೆ.

ನಾನು ನನ್ನ ಅತ್ಯುತ್ತಮ ರಾಜಕೀಯ ಕ್ಷಣಗಳನ್ನು ಇಲ್ಲಿ ಅನುಭವಿಸಿದೆ ಎಂದು ಒಪ್ಪಿಕೊಳ್ಳಬೇಕು. ನಾನು ನನ್ನ ಯೂನಿಯನ್ ನೋಂದಣಿ ಸಂಖ್ಯೆಯನ್ನು ಇಂದಿಗೂ ಮರೆತಿಲ್ಲ. ಅದು 1968ರ ಸೆಪ್ಟೆಂಬರ್ ತಿಂಗಳಲ್ಲಿ- 25,986. ಅಂದಿನಿಂದ ಇಂದಿನ ತನಕ ಈ ಸಂಘದೊಂದಿಗೆ ನನ್ನ ಸಂಬಂಧ ಹೇಗಿದೆ ಎಂದರೆ, ಯಾವ ಅಧ್ಯಕ್ಷರೂ ಅಷ್ಟು ಬಲವಾದ ಸಂಬಂಧ ಹೊಂದಿರಲಾರರು ಯಾಕೆಂದರೆ, ನನ್ನನ್ನು ಇಂದಿಗೂ ಅಧ್ಯಕ್ಷನಂತೆಯೇ ನಡೆಸಿಕೊಳ್ಳಲಾಗುತ್ತಿದೆ.

1979ರಲ್ಲಿ ಯೂನಿಯನ್ ಒಂದು ಅಸಾಧಾರಣವಾದ ಮುಷ್ಕರ ನಡೆಸಿತು. ನಮಗೆ ಮೋಟಾರು ವಾಹನ ಉದ್ಯಮದಿಂದ ಒಂದು ಒಪ್ಪಂದದ ಕೊಡುಗೆ ಬಂತು. ಅದು ಬಹುಶಃ ನಾವು ಪಡೆಯಲು ಸಾಧ್ಯವಿದ್ದುದಕ್ಕಿಂತ ಉತ್ತಮವಾಗಿತ್ತು. ನನ್ನ ಬಳಿ 300 ಕಾರ್ಮಿಕರ ಸಮಿತಿಯಿತ್ತು. ನಾವು ಅದನ್ನು ಸಂಘದ ಸಭೆಗೆ ಕೊಂಡೊಯ್ಯಲು ನಿರ್ಧರಿಸಿದೆವು. ನಾನು ಕಾರ್ಮಿಕರೊಂದಿಗೆ ಮಾತಾಡಲು ಬೆಳಗ್ಗೆ ಬೇಗನೇ ಹೋಗುವಂತೆ ಸಮಿತಿಯವರಲ್ಲಿ ಹೇಳಲು ನಿರ್ಧರಿಸಿದೆ.

ಯಾಕೆಂದರೆ, ಜನರು ಮಧ್ಯಾಹ್ನದ ಹೊತ್ತಿಗೆ ಒಂದೆರಡು ಪೆಗ್ ಏರಿಸಲು ಇಷ್ಟಪಡುವುದರಿಂದ, ಬೆಳಗ್ಗೆಯೇ ಸಭೆ ನಡೆಯಲಿ ಎಂದು ನಾನು ಬಯಸಿದ್ದೆ. ನಿಮಗೆ ಗೊತ್ತಿರುವಂತೆ ಒಂದೆರಡು ಪೆಗ್ ಕುಡಿದ ಮೇಲೆ ಧೈರ್ಯ ಹೆಚ್ಚಾಗುತ್ತದೆ. ಸರಿ, ಬೆಳಿಗ್ಗೆ ಸಭೆ ನಡೆಸಿದ್ದು ಅವರು ಕುಡಿಯುವುದನ್ನೇನೂ ತಡೆಯಲಿಲ್ಲ. ಯಾಕೆಂದರೆ, ಬಾಟಲಿಗಳನ್ನು ಅವರು ಜೊತೆಗೇ ತರುತ್ತಾರೆ. ನಾನೂ ಒಂದು ಪೆಗ್ ಕುಡಿಯುತ್ತಿದ್ದೆ. ಅದು ನನ್ನ ಗಂಟಲನ್ನು ಸರಾಗ ಮಾಡುತ್ತಿತ್ತು. ಈ ದಿನ ಅದು ನಡೆಯಲಿಲ್ಲ.

ಸರಿ, ನಾವು ನಿರ್ಧಾರವನ್ನು ಮತಕ್ಕೆ ಹಾಕಿದೆವು. ವಿಲಾ ಯೂಕ್ಲಿಡಿಸ್ ಸ್ಟೇಡಿಯಂನಲ್ಲಿ ಸೇರಿದ್ದ 1,00,000 ಜನರು ಕೊಡುಗೆಯನ್ನು ಒಪ್ಪಲಿಲ್ಲ. ನಾವು ಪಡೆಯಬಹುದಾಗಿದ್ದ ಅತ್ಯುತ್ತಮ ಕೊಡುಗೆ ಇದಾಗಿತ್ತು. ಯಾಕೆಂದರೆ, ನಾವು ನಮ್ಮ ರಜಾದಿನಗಳನ್ನು ಬಿಟ್ಟು ಕೊಡುವ ಮತ್ತು 13ನೇ ಬಾರಿ ಸಂಬಳವಿಲ್ಲದೇ ಇರುವ ಸ್ಥಿತಿಯಲ್ಲಿ ಇರಲಿಲ್ಲ. ನಮಗೆ 15 ಶೇಕಡಾ ಸಂಬಳ ಏರಿಕೆ ಆಗಲಿತ್ತು. ಆದರೆ, ಕಾರ್ಮಿಕರು ಎಷ್ಟು ತೀವ್ರವಾದಿಗಳಾಗಿದ್ದರೆಂದರೆ, ಆಗುವುದಿದ್ದರೆ 83 ಶೇಕಡಾ ಏರಿಕೆ, ಇಲ್ಲದಿದ್ದರೆ ಬೇಡವೇಬೇಡ ಎನ್ನುತ್ತಿದ್ದರು. ನಮಗೆ ಅದು ಸಿಗದೇ ಹೋದಾಗ, ನಮ್ಮನ್ನು ಒಂದು ವರ್ಷದ ಕಾಲ ’ಮಾರಿಹೋದವರು’ ಎಂದು ಕರೆದರು. ನಾನೂ, ನನ್ನ ಸಂಗಾತಿಗಳೂ ಕಾರ್ಖಾನೆಯಿಂದ ಕಾರ್ಖಾನೆಗೆ ಅಲೆದೆವು. ಆದರೆ, ಕಾರ್ಮಿಕರು ಈ ಕೊಡುಗೆಯನ್ನು ಒಪ್ಪಲಿಲ್ಲ.

ಇದನ್ನೂ ಓದಿ: ಬೊಲ್ಸೊನಾರೊ ಪತನ; ಸರ್ವಾಧಿಕಾರಿ ಆಡಳಿತದ ಕೊನೆ ಭಾರತಕ್ಕೂ ಸ್ಫೂರ್ತಿಯಾಗುವುದೇ?

ನಾನು ಚೆನ್ನಾಗಿದೆ ಎಂದು ಭಾವಿಸಿದ್ದ ಒಪ್ಪಂದವನ್ನು ಅಂಗೀಕರಿಸಲು ನಮಗೆ ಸಾಧ್ಯವಾಗಿರಲಿಲ್ಲ. ಆಗ ಜನರು ಯೂನಿಯನ್ ಸಮಿತಿಗೆ ಅಗೌರವ ತೋರಿಸಲು ಆರಂಭಿಸಿದರು. ನಾನು ಕಾರ್ಖಾನೆಗಳಿಗೆ ಹೋದರೆ, ಜನರು ನನ್ನ ಮಾತು ಕೇಳಲು ನಿಲ್ಲುತ್ತಿರಲಿಲ್ಲ. ಪತ್ರಿಕೆಗಳು ಬರೆದವು: “ಲೂಲಾ ಮಾತನಾಡುತ್ತಾನೆ. ಆದರೆ, ಜನರು ಅವನ ಮಾತಿಗೆ ಕಿವುಡಾಗಿದ್ದಾರೆ”. ಒಂದು ವರ್ಷ ನಂತರವಷ್ಟೇ ನಾವು ನಮ್ಮ ಗೌರವ ಮರಳಿ ಪಡೆಯಲು ಸಾಧ್ಯವಾಯಿತು.

“ಈ ಕಾರ್ಮಿಕರು ತಾವು ನೂರು ದಿನ, ನಾಲ್ಕು ನೂರು ದಿನ ಮುಷ್ಕರ ಮಾಡುತ್ತೇವೆ ಎಂದು ಭಾವಿಸಿದ್ದಾರೆ. ಅವರು ಕೊನೆಯವರೆಗೆ ಹೋರಾಡುವ ನಿರ್ಧಾರ ಮಾಡಿದ್ದರೆ, 1980ರ ಹೊತ್ತಿಗೆ ಏನು ಮಾಡುತ್ತಾರೆ, ನೋಡಿಯೇಬಿಡೋಣ” ಎಂದು ನಾನು ಸ್ವಲ್ಪ ಹಠ ಮತ್ತು ಕೋಪದ ಭಾವದಿಂದಲೇ ಯೋಚಿಸಿದ್ದೆ.

ಆಗ ನಾವು ನಮ್ಮ ಇತಿಹಾಸದಲ್ಲಿಯೇ ದೀರ್ಘ ಕಾಲದ ಮುಷ್ಕರ ನಡೆಸಿದೆವು. ನನ್ನನ್ನು ಬಂಧಿಸಲಾಯಿತು. ಕೆಲದಿನಗಳ ನಂತರ ಕೆಲವು ಕಾರ್ಮಿಕರು ಮುಷ್ಕರ ಮುರಿಯಲು ಆರಂಭಿಸಿದರು. ಮುಖ್ಯ ಪೊಲೀಸ್ ಅಧಿಕಾರಿ, ಯೂನಿಯನ್ ವಕೀಲರು ಮುಂತಾದವರು ಜೈಲಿನಲ್ಲಿ ನನ್ನನ್ನು ಭೇಟಿಯಾಗಿ, “ಏ ಲೂಲಾ, ನೀನು ಈ ಮುಷ್ಕರ ನಿಲ್ಲಿಸುವಂತೆ ಕಾರ್ಮಿಕರಿಗೆ ಹೇಳಬೇಕು” ಎಂದು ಒತ್ತಾಯಿಸುತ್ತಿದ್ದರು. “ನಾನು ಹಾಗೆ ಮಾಡುವುದಿಲ್ಲ. ಕಾರ್ಮಿಕರ ಪರ ಅವರೇ ನಿರ್ಧಾರ ಮಾಡಲಿ” ಎಂದು ಉತ್ತರಿಸುತ್ತಿದ್ದೆ. ವಾಸ್ತವಿಕತೆ ನೋಡಿದಾಗ, ನಲ್ವತ್ತೊಂದು ದಿನಗಳ ಮುಷ್ಕರ ತಡೆದುಕೊಳ್ಳಲು ನಮ್ಮ ಸಂಗಾತಿಗಳಿಗೆ ಸಾಧ್ಯವಿರಲಿಲ್ಲ. ಯಾಕೆಂದರೆ, ಬ್ರೆಡ್ಡು, ಹಾಲು, ವಿದ್ಯುತ್, ಗ್ಯಾಸ್ ಬಿಲ್ಲು ಎಂದು ಅವರ ಹೆಂಡತಿಯರು ಹಣ ಕೇಳಲು ಆರಂಭಿಸಿದ್ದರು. ಆದುದರಿಂದ ಅವರು ಒತ್ತಡಕ್ಕೆ ಒಳಗಾಗಿದ್ದರು ಮತ್ತು ಅದನ್ನು ಮುಂದಕ್ಕೂ ತಡೆದುಕೊಳ್ಳುವುದು ಅವರಿಗೆ ಸಾಧ್ಯವೇ ಇರಲಿಲ್ಲ.

ಹೇಗಿದ್ದರೂ, ಅದೊಂದು ಕುತೂಹಲಕಾರಿ ಸನ್ನಿವೇಶವಾಗಿತ್ತು. ಯಾಕೆಂದರೆ ನಾವು ಯಾವುದೇ ಹಣಕಾಸಿನ ಲಾಭ ಪಡೆಯದೇ ಇದ್ದರೂ, ನಾವು ಸೋತರೂ, ನಾವು ಬಹಳಷ್ಟು ಹೆಚ್ಚನ್ನು ಗೆದ್ದೆವು. ಒಂದು ಮುಷ್ಕರದ ಸಮಸ್ಯೆಯನ್ನು ನಿವಾರಿಸುವುದು ಹಣವಲ್ಲ. ಅದು- ಐದು ಶೇಕಡಾ ಅಥವಾ ಹತ್ತು ಶೇಕಡಾದ ಪ್ರಶ್ನೆಯಲ್ಲ. ಅದು ರಾಜಕೀಯ ಸಿದ್ಧಾಂತ ಮತ್ತು ರಾಜಕೀಯ ಪರಿಸ್ಥಿತಿಯ ಪ್ರಶ್ನೆ.

ನಾವೀಗ ಅಂತದ್ದೇ ಪರಿಸ್ಥಿತಿಯಲ್ಲಿ ಇದ್ದೇವೆ. ನನ್ನನ್ನು ನಾನು ಭಾಗಿಯಾಗಿರದ ನನ್ನದಲ್ಲದ ಒಂದು ಅಪಾರ್ಟ್‌ಮೆಂಟಿಗೆ ಸಂಬಂಧಿಸಿದ ಕೋರ್ಟು ಕೇಸಿನಲ್ಲಿ ಪೀಡಿಸಲಾಗುತ್ತಿದೆ. ನ್ಯಾಯಾಧೀಶ ಮೋರೊಗೆ ಅದು ನನ್ನದಲ್ಲ ಎಂದು ಗೊತ್ತಿದೆ. ’ಓ ಗ್ಲೋಬೊ’ ಪತ್ರಿಕೆ ಅದು ನನ್ನದೆಂದು ಹೇಳಿದಾಗ, ಅದು ಸುಳ್ಳು ಹೇಳುತ್ತಿದೆ ಎಂದೂ ಅವರಿಗೆ ಗೊತ್ತಿದೆ. ಫೆಡರಲ್ ಪೊಲೀಸ್ ಮತ್ತು ’ಅಪರೇಷನ್ ಕಾರ್ ವಾಷ್’ ನಡೆಸಿದವರಿಗೂ ಅದು ಸುಳ್ಳೆಂದು ಗೊತ್ತಿದೆ. ಪಬ್ಲಿಕ್ ಪ್ರಾಸಿಕ್ಯೂಷನ್ ನನ್ನ ಮೇಲೆ ಆರೋಪ ಹೊರಿಸಿ, ಅದು ನನ್ನದೆಂದು ಹೇಳಿದಾಗ, ಅದು ಸುಳ್ಳೆಂದು ಅದಕ್ಕೆ ಗೊತ್ತಿತ್ತು. ನ್ಯಾಯಾಧೀಶ ಮೋರೊ ಇದನ್ನು ಸರಿಪಡಿಸುತ್ತಾರೆ ಎಂದು ನಾನು ನಂಬಿದ್ದೆ. ಅವರೂ ನಾನು ತಪ್ಪಿತಸ್ಥನೆಂದು ಸುಳ್ಳು ಹೇಳಿ, ನನಗೆ ಒಂಭತ್ತು ವರ್ಷಗಳ ಸಜೆ ವಿಧಿಸಿದ್ದಾರೆ.

ಅದಕ್ಕಾಗಿ ನನಗೆ ಸಿಟ್ಟುಬಂದಿದೆ. ನಾನು ನನ್ನ ಎಪ್ಪತ್ತೆರಡು ವರ್ಷಗಳ ಜೀವನದಲ್ಲಿ ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಆದರೆ, ನಾನೊಬ್ಬ ಕಳ್ಳನೆಂದು ಸಮಾಜವು ನಂಬುವಂತೆ ಮಾಡಿದ್ದಕ್ಕಾಗಿ ನಾನವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಅವರು ಬ್ರೆಜಿಲ್‌ನಲ್ಲಿ ಕ್ರಿಮಿನಲ್‌ಗಳು ರಾಜ್ಯಭಾರ ನಡೆಸುವಂತೆ ಮಾಡಿದ್ದಾರೆ. ಕ್ರಿಮಿನಲ್‌ಗಳು ನಮ್ಮನ್ನು ದೂರುತ್ತಾ, ಈ ದೇಶದಲ್ಲಿ ರಾಜಕೀಯವನ್ನು ಕಡೆಗಣಿಸುವಂತ ಯುದ್ಧದ ವಾತಾವರಣ ಉಂಟುಮಾಡಿದ್ದಾರೆ. ನಾನು ಹೇಳುತ್ತೇನೆ: ಅವರು ಯಾರಿಗೂ- ನನ್ನಂತೆ, ಒಬ್ಬ ನಿರಪರಾಧಿ ಮತ್ತು ಪ್ರಾಮಾಣಿಕನಿಗೆ ಇರುವಂತ- ಸ್ವಚ್ಛ ಆತ್ಮಸಾಕ್ಷಿಯಾಗಲೀ, ಧೈರ್ಯವಾಗಲೀ ಇಲ್ಲ; ಒಬ್ಬರಿಗೂ ಇಲ್ಲ.

ನಾನೇನೂ ನ್ಯಾಯ ವ್ಯವಸ್ಥೆಗಿಂತ ಮೇಲಿನವನಲ್ಲ. ನಾನು ಅದನ್ನು ನಂಬದೇ ಇದ್ದಿದ್ದರೆ, ನಾನೊಂದು ರಾಜಕೀಯ ಪಕ್ಷವನ್ನೇ ಕಟ್ಟುತ್ತಿದ್ದೆ. ನಾನು ದೇಶದಲ್ಲಿ ಕ್ರಾಂತಿಗೆ ಕರೆಕೊಡುತ್ತಿದ್ದೆ. ಆದರೆ ನಾನು, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿದ್ದೇನೆ. ಒಂದು ನ್ಯಾಯಬದ್ಧ ನ್ಯಾಯಾಂಗ ವ್ಯವಸ್ಥೆಯಲ್ಲಿ- ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಾದಗಳನ್ನು ಕೇಳಿ, ವಾಸ್ತವಾಂಶಗಳನ್ನು ಪರಿಶೀಲಿಸಿ, ಸಾಕ್ಷ್ಯಗಳ ಆಧಾರದಲ್ಲಿ ತೀರ್ಪನ್ನು ಮತಕ್ಕೆ ಹಾಕಿ ಯಾರು ತಪ್ಪಿತಸ್ಥರು ಎಂದು ನಿರ್ಧರಿಸುವ ನ್ಯಾಯಾಂಗ ವ್ಯವಸ್ಥೆಯಲ್ಲಿ ನಾನು ನಂಬಿಕೆ ಹೊಂದಿದ್ದೇನೆ.

ಇದನ್ನೂ ಓದಿ: ಬ್ರೆಜಿಲ್: ಬೊಲ್ಸೊನಾರೊ ಸೋಲು; ಅಮೆಜಾನ್ ಕಾಡು ಉಳಿವ ಭರವಸೆ; ಜಗತ್ತಿಗೂ ನಿಟ್ಟುಸಿರು

ನನಗೆ ಒಪ್ಪಲು ಸಾಧ್ಯವಾಗದ್ದು ಎಂದರೆ, ಪ್ರಾಸಿಕ್ಯೂಷನ್ ವಕೀಲರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಜೊತೆಗೆ ಟೆಲಿವಿಷನ್‌ಗೆ ಹೋಗಿ ನಮ್ಮ ಸಂಘಟನೆಯ ಬಗ್ಗೆ ಆರೋಪ ಮಾಡುತ್ತಾರೆ. ಮತ್ತು ನಾನು ಸಂಘಟನೆಯ ಮುಖ್ಯಸ್ಥನಾಗಿರುವುದರಿಂದ ನನ್ನ ವಿರುದ್ಧ ತನಗೆ ಯಾವುದೇ ಸಾಕ್ಷ್ಯಾಧಾರಗಳ ಅಗತ್ಯವೇ ಇಲ್ಲವೆಂದೂ, ತನಗೆ ನಾನು ತಪ್ಪಿತಸ್ಥ ಎಂದು ಮನವರಿಕೆಯಾಗಿದೆ ಎಂದು ಹೇಳುತ್ತಾರೆ. ಅವರ ಮನವರಿಕೆಯನ್ನು ಅವರು ತನ್ನ ಧಣಿಗಳು ಮತ್ತು ತನ್ನ ಬಳಿಯೇ ಇಟ್ಟುಕೊಳ್ಳಲಿ, ನನಗದು ಬೇಡ. ಒಬ್ಬ ಕಳ್ಳ ಸಾಕ್ಷ್ಯ ಕೇಳುವುದಿಲ್ಲ. ತಮ್ಮ ಕಪಾಟಿನಲ್ಲಿ ಅಸ್ತಿಪಂಜರ ಬಚ್ಚಿಟ್ಟವರು ಬಾಯಿ ಮುಚ್ಚಿ ಕುಳಿತು, ಮಾಧ್ಯಮಗಳಲ್ಲಿ ತಮ್ಮ ಹೆಸರು ಬರದಿರಲಿ ಎಂದು ಆಶಿಸುತ್ತಿರುತ್ತಾರೆ. ನನ್ನ ಮೇಲೆ ಆರೋಪ ಮಾಡಿ ದೂರಲು ಟಿವಿಗಳು, ರೇಡಿಯೋಗಳ ನೂರಾರು ಗಂಟೆಗಳನ್ನು, ನೂರಾರು ಪತ್ರಿಕೆಗಳು ಸಾವಿರಾರು ಪುಟಗಳನ್ನು ಮೀಸಲಿಟ್ಟಿವೆ. ನನ್ನ ಮೇಲೆ ದಾಳಿ ಮಾಡಿದಷ್ಟೂ ನಾನು ಬ್ರೆಜಿಲಿನ ಜನರಿಗೆ ಹತ್ತಿರವಾಗುತ್ತೇನೆ ಎಂದವರಿಗೆ ಗೊತ್ತಿಲ್ಲ.

ನನಗೆ ಅವರ ಭಯವಿಲ್ಲ. ಅವರು ಮಾಡಿರುವ ಆರೋಪಗಳ ಕುರಿತು ನಾನು ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ ಎಂದು ನಾನು ಮೋರೊ ಸಹಿತ ನ್ಯಾಯಾಧೀಶರಿಗೂ, ಮರುಪರಿಶೀಲನಾ ನ್ಯಾಯಾಲಯದ ನ್ಯಾಯಾಧೀಶರುಗಳಿಗೂ ಸವಾಲು ಹಾಕಿದ್ದೇನೆ. ಈ ದೇಶದಲ್ಲಿ ನಾನು ಮಾಡಿರುವ ಅಪರಾಧಗಳನ್ನು ಅವರು ಸಾಬೀತು ಮಾಡಲಿ ಎಂದು ಹೇಳಿದ್ದೇನೆ. ಬಹಳ ವರ್ಷಗಳ ಹಿಂದೆ, ಈ ದೇಶದ ಲಕ್ಷಾಂತರ ಬಡವರನ್ನು ಆರ್ಥಿಕತೆಯಲ್ಲಿ ಸೇರಿಸಿಕೊಳ್ಳುವ ಮೂಲಕ, ಲಕ್ಷಾಂತರ ವಿದ್ಯಾರ್ಥಿಗಳಿಗೆ ದೇಶದ ವಿಶ್ವವಿದ್ಯಾಲಯಗಳು ಎಟಕುವಂತೆ ಮಾಡುವುದರ ಮೂಲಕ, ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಈ ದೇಶದ ಅಧ್ಯಕ್ಷನಾಗಲು ಸಾಧ್ಯ ಎಂದು ಕನಸು ಕಂಡಿದ್ದೆ. ಈ ದೇಶವನ್ನು ಆಳಿದ ಮತ್ತು ಅದರ ಶಿಕ್ಷಣವನ್ನು ನಿರ್ವಹಿಸಿದ ಹಲವಾರು ಪದವೀಧರರಿಗಿಂತ, ಯಾವುದೇ ವಿಶ್ವವಿದ್ಯಾಲಯದ ಪದವಿ ಇಲ್ಲದ ಕಾರ್ಮಿಕನೊಬ್ಬ ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನಿರ್ವಹಿಸಲು ಸಾಧ್ಯ ಎಂದು ನಾನು ಕನಸು ಕಂಡಿದ್ದೆ. ಮಕ್ಕಳಿಗೆ ಪ್ರತಿದಿನ ಹಾಲು, ಅನ್ನ, ಧಾನ್ಯ ಸಿಗುವಂತೆ ಮಾಡುವುದರ ಮೂಲಕ ಶಿಶುಮರಣವನ್ನು ಕಡಿಮೆ ಮಾಡಲು ನಮಗೆ ಸಾಧ್ಯ ಎಂದು ಕನಸು ಕಂಡಿದ್ದೆ. ನಮ್ಮ ನ್ಯಾಯಾಧೀಶರು, ವಕೀಲರು ಕೇವಲ ಪ್ರತಿಷ್ಠಿತ ವರ್ಗದವರಿಗೆ ಮಾತ್ರವೇ ಆಗಿರದಂತೆ ಮಾಡಲು ಗ್ರಾಮೀಣ ವಿದ್ಯಾರ್ಥಿಗಳಿಗೂ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ದೊರಕಿಸಲು ಸಾಧ್ಯ ಎಂದು ನಾನು ಕನಸು ಕಂಡಿದ್ದೆ. ಭೂರಹಿತ ಕಾರ್ಮಿಕರು, ವಸತಿ ರಹಿತರ ಚಳವಳಿಗಳು, ಕೇಂದ್ರೀಯ ಕಾರ್ಮಿಕರ ಯೂನಿಯನ್‌ನ ಬಹಳಷ್ಟು ಜನರು ಮುಂದೆ ವಿಶ್ವವಿದ್ಯಾಲಯಗಳ ಪದವೀಧರರು ಆಗಿರುತ್ತಾರೆಂದು ಕನಸು ಕಂಡಿದ್ದೆ.

ಇದೇ ನಾನು ಮಾಡಿದ ಅಪರಾಧ. ನಾನೀ ಅಪರಾಧ ಮಾಡಿದ್ದೇನೆ ಮತ್ತು ನಾನಿದನ್ನು ಮತ್ತೆ ಮಾಡಬಾರದು ಎಂಬುದು ಅವರ ಇಚ್ಛ. ಈ ಅಪರಾಧಕ್ಕಾಗಿ ನನ್ನ ವಿರುದ್ಧ ಹತ್ತು ಕೇಸುಗಳಿವೆ. ಈ ಅಪರಾಧಗಳೇ ನನ್ನನ್ನು ಶಿಕ್ಷಿಸಲು ಕಾರಣಗಳಾಗಿದ್ದರೆ, ಬಡ ಜನರಿಗೆ, ಕರಿ ಜನರಿಗೆ ವಿಶ್ವವಿದ್ಯಾಲಯಗಳ ಪ್ರವೇಶ ದೊರಕುವಂತೆ ಮಾಡಿದ್ದಕ್ಕೆ, ಬಡವರು ಕೂಡಾ ಮಾಂಸ ತಿನ್ನಲು, ಕಾರುಗಳನ್ನು ಕೊಳ್ಳಲು, ವಿಮಾನಗಳಲ್ಲಿ ಪಯಣಿಸಲು, ಚಿಕ್ಕದೊಂದು ಗದ್ದೆ-ಮನೆ-ವ್ಯಾಪಾರ, ಸ್ವಂತ ಬಾವಿ ಹೊಂದಲು ಸಾಧ್ಯ ಮಾಡಿದ್ದಕ್ಕೆ ನನ್ನನ್ನು ಶಿಕ್ಷಿಸಲಾಗುತ್ತಿದೆಯಾದರೆ, ಇದೇ ನನ್ನ ಅಪರಾಧ ಆಗಿದ್ದರೆ- ಸರಿ, ನಾನು ಈ ದೇಶದಲ್ಲಿ ಕ್ರಿಮಿನಲ್ ಆಗಿರುವುದನ್ನು ಮುಂದುವರಿಸುತ್ತೇನೆ. ಯಾಕೆಂದರೆ, ನಾನು ಇನ್ನಷ್ಟನ್ನು ಮಾಡಲಿದ್ದೇನೆ, ಬಹಳಷ್ಟನ್ನು ಮಾಡಲಿದ್ದೇನೆ.

1986ರಲ್ಲಿ ನಾನು ಬ್ರೆಜಿಲಿನ ಇತಿಹಾಸದಲ್ಲಿಯೇ ಅತ್ಯಂತ ಜನಪ್ರಿಯ ಸಂಸತ್ ಸದಸ್ಯನಾಗಿದ್ದೆ. ಆ ಕಾಲದಲ್ಲಿ ಅಧಿಕಾರದಲ್ಲಿ ಇರುವವರು ಮಾತ್ರವೇ ವರ್ಕರ್ಸ್ ಪಾರ್ಟಿಯೊಳಗೆ (ಬ್ರೆಜಿಲ್‌ನಲ್ಲಿ ಪಿ.ಟಿ., ಲೂಲಾ ಅವರ ಪಕ್ಷ) ಏನನ್ನಾದರೂ ಮಾಡಲು ಸಾಧ್ಯ ಎಂದು ಬಹಳಷ್ಟು ಜನರು ನಂಬಿದ್ದರು. ಆಗ ನಾನೇನು ಮಾಡಿದೆನೆಂದರೆ, ಸಂಸತ್ ಸದಸ್ಯನಾಗುವುದನ್ನೇ ನಿಲ್ಲಿಸಿಬಿಟ್ಟೆ. ಯಾವುದೇ ಅಧಿಕಾರ ಇಲ್ಲದೆಯೇ ದೇಶದ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಉಳಿಯಲು ಸಾಧ್ಯ ಎಂದು ನನಗೆ ತೋರಿಸಬೇಕಿತ್ತು. ಜನಪ್ರಿಯತೆಯಲ್ಲಿ ನನ್ನನ್ನು ಸೋಲಿಸಲು ಒಂದೇ ಒಂದು ದಾರಿ ಎಂದರೆ, ನನಗಿಂತಲೂ ಹೆಚ್ಚು ಕೆಲಸ ಮಾಡುವುದು ಮತ್ತು ಜನರನ್ನು ನನಗಿಂತಲೂ ಹೆಚ್ಚು ಪ್ರೀತಿಸುವುದು; ಇಲ್ಲವಾದಲ್ಲಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನನಗೆ ತೋರಿಸಲಿಕ್ಕಿತ್ತು.

ಸರಿ, ಈಗ ಬಹಳಷ್ಟು ಸೂಕ್ಷ್ಮವಾದ ಕೆಲಸ ನಮ್ಮ ಮುಂದಿದೆ. ಮನುಷ್ಯನೊಬ್ಬ ಅನುಭವಿಸಬಹುದಾದ ಅತ್ಯಂತ ದೊಡ್ಡ ಅನ್ಯಾಯವನ್ನು ನಾನು ಅನುಭವಿಸಲಿದ್ದೇನೆ. ನನ್ನ ಕುಟುಂಬ ಏನು ಅನುಭವಿಸುತ್ತಿದೆಯೋ ಅದು ಸುಲಭವಲ್ಲ. ನನ್ನ ಮಕ್ಕಳು ಎದುರಿಸುತ್ತಿರುವುದೂ ಸುಲಭವಲ್ಲ. ಮರಿಸಾ (ಲೂಲಾರ ಮೃತ ಪತ್ನಿ) ಎದುರಿಸಿದ್ದು ಸುಲಭವಲ್ಲ. ಮರಿಸಾ ಸಾಯುವುದಕ್ಕೆ ಮುಂಚೆಯೇ, ಅವರ ಸಾವನ್ನು ಘೋಷಿಸಿ ಮಾಧ್ಯಮಗಳು, ಪ್ರಾಸಿಕ್ಯೂಷನ್ ಕಚೇರಿ- ಸಂಕುಚಿತ ಕ್ರೌರ್ಯವನ್ನು ತೋರಿಸಿವೆ. ಅವರಿಗೆ ಮಕ್ಕಳಿಲ್ಲವೆಂದು ಕಾಣುತ್ತದೆ. ಅವರಿಗೆ ಆತ್ಮವಿಲ್ಲ. ತಮ್ಮ ಮಕ್ಕಳಿಗೆ ಹೊಡೆಯುವುದನ್ನು, ಅವರನ್ನು ಪೀಡಿಸುವುದನ್ನು ನೋಡಿದಾಗ ತಂದೆ, ತಾಯಿಗೆ ಏನನಿಸುತ್ತದೆ ಎಂದು ಅವರಿಗೆ ಕಲ್ಪನೆಯಿಲ್ಲ.

ಆದುದರಿಂದ, ನನ್ನ ತಲೆಯನ್ನು ಎತ್ತಿ ಹಿಡಿಯಲು ನಿರ್ಧರಿಸಿದ್ದೇನೆ ಸಂಗಾತಿಗಳೆ. ನಾನು ’ಕಾರ್ ವಾಷ್’ ವಿರುದ್ಧ ಇದ್ದೇನೆ ಎಂದು ನಿಮಗನ್ನಿಸುವುದಿಲ್ಲವೇ. ಅದು ಖಂಡಿತವಾಗಿ ನಿಜವಾಗಿಯೂ ಹಣ ಕದ್ದ ಖದೀಮರನ್ನು ಹಿಡಿದು ಜೈಲಿಗೆ ತಳ್ಳಬೇಕು. ನಮಗೆಲ್ಲರಿಗೂ ಅದು ಬೇಕು. ನಾವು ನಮ್ಮ ಜೀವನದುದ್ದಕ್ಕೂ ಹೇಳುತ್ತಾ ಬಂದಿದ್ದೇವೆ: ನ್ಯಾಯವು ಬಡವರನ್ನು ಮಾತ್ರ ಬಂಧಿಸುತ್ತದೆ, ಶ್ರೀಮಂತರನ್ನಲ್ಲ. ಹಾಗಾದರೆ ಸಮಸ್ಯೆ ಏನು? ನೀವು ಮಾಧ್ಯಮಗಳನ್ನು ಅವಲಂಬಿಸಿದ ವಿಚಾರಣೆಯನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ, ಆಳದಲ್ಲಿ ನೀವು (ಮಾಧ್ಯಮಗಳು) ಮೊದಲಿಗೆ ಸಮಾಜದಲ್ಲಿರುವ ವ್ಯಕ್ತಿಗಳನ್ನು ನಾಶಮಾಡುತ್ತೀರಿ, ಅವರ ಗೌರವವನ್ನು ನಾಶ ಮಾಡುತ್ತೀರಿ. ನಂತರ ನ್ಯಾಯಾಧೀಶರು ಅವರ ವಿಚಾರಣೆ ಮಾಡುತ್ತಾರೆ ಮತ್ತು ಹೇಳುತ್ತಾರೆ: “ನಾನು ಸಾರ್ವಜನಿಕ ಅಭಿಪ್ರಾಯವನ್ನು ಮೀರಿ ಹೋಗಲು ಸಾಧ್ಯವಿಲ್ಲ. ನಾನು ಅವರನ್ನು ಶಿಕ್ಷಿಸುವಂತೆ ಜನಾಭಿಪ್ರಾಯ ಹೇಳುತ್ತಿದೆ” ಎಂದು. ನೀವು (ನ್ಯಾಯಾಧೀಶರು) ತೀರ್ಪನ್ನು ಸಾರ್ವಜನಿಕ ಅಭಿಪ್ರಾಯದ ಮೇಲೆ ಆಧರಿಸಿ ಕೊಡುವುದಾದಲ್ಲಿ, ನಿಮ್ಮ ಕರಿಗವುಸುಗಳನ್ನು ಕಿತ್ತೆಸೆಯಿರಿ, ಒಂದು ರಾಜಕೀಯ ಪಕ್ಷ ಆಯ್ಕೆ ಮಾಡಿ, ಅಧಿಕಾರಕ್ಕಾಗಿ ಸ್ಪರ್ಧಿಸಿ. ನ್ಯಾಯಾಧೀಶ ಎಂಬುದು ಜೀವನಪರ್ಯಂತ ಹುದ್ದೆಯಾಗಿರುವುದರಿಂದ ನ್ಯಾಯಾಧೀಶರು ಕೋರ್ಟಿನ ಮುಂದಿರುವ ದಾಖಲೆಗಳನ್ನು ಆಧರಿಸಿಯೇ ತೀರ್ಪು ನೀಡಬೇಕು. ನನ್ನ ಪ್ರಕಾರ, ತಾವು ಹೇಗೆ ತೀರ್ಪು ನೀಡಲಿದ್ದೇವೆ ಎಂಬ ಕುರಿತು ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಯಾವುದೇ ಹೇಳಿಕೆಗಳನ್ನು ನೀಡಬಾರದು. ಯುಎಸ್‌ಎಯಲ್ಲಿ ತೀರ್ಪು ನೀಡಿದ ಬಳಿಕವೂ, ಯಾವ ನ್ಯಾಯಾಧೀಶರು ಹೇಗೆ ಮತಚಲಾಯಿಸಿದರು ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಇದು ಖಚಿತವಾಗಿಯೇ, ಅವರು ಯಾವುದೇ ರೀತಿಯ ಒತ್ತಡಕ್ಕೆ ಬೀಳಬಾರದು ಎಂಬುದಕ್ಕಾಗಿ.

ಊಹಿಸಿಕೊಳ್ಳಿ: ಕೊಲೆಯನ್ನು ಮಾಡದ ವ್ಯಕ್ತಿಯೊಬ್ಬನ ಮೇಲೆ ಕೊಲೆ ಆರೋಪ ಮಾಡಲಾಗುತ್ತದೆ. ಆಗ ಕೊಲೆಯಾದ ವ್ಯಕ್ತಿಯ ಬಂಧುಗಳಿಗೆ ಏನು ಬೇಕು? ಒಟ್ಟಿನಲ್ಲಿ ಆರೋಪಿಗೆ ಶಿಕ್ಷೆಯಾಗಬೇಕು, ಅವನು ಸಾಯಬೇಕು. ಆದುದರಿಂದ ನ್ಯಾಯಾಧೀಶರು ನಮ್ಮೆಲ್ಲರಿಗಿಂತ ವ್ಯತಿರಿಕ್ತವಾಗಿ- ತಮ್ಮ ಧೈರ್ಯವನ್ನು ಕಾದುಕೊಳ್ಳಬೇಕು ಮತ್ತು ಯಾರ ಮೇಲಾದರೂ ಆರೋಪ ಮಾಡುವ, ಶಿಕ್ಷೆ ವಿಧಿಸುವ ಮೊದಲು ಹೆಚ್ಚು ಜವಾಬ್ದಾರಿ ಹೊಂದಿರಬೇಕಾಗುತ್ತದೆ. ಯಾಕೆಂದರೆ, ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಷನ್ ಕಚೇರಿಗಳು ಅತ್ಯಂತ ಪ್ರಬಲ ಸಾರ್ವಜನಿಕ ಸಂಸ್ಥೆಗಳಾಗಿವೆ. ಅದಕ್ಕಾಗಿಯೇ ಈ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕಾನೂನು ಕಲಿಯಲಾರಂಭಿಸುತ್ತಾರೆ. ನಂತರ ನ್ಯಾಯಾಧೀಶರಾಗುವ ಪರೀಕ್ಷೆ ಬರೆಯಲು ಜೀವನದ ಮೂರು ವರ್ಷ ವ್ಯಯಿಸುತ್ತಾರೆ, ಯಾಕೆಂದರೆ, ಅವರ ಹೆತ್ತವರಿಗೆ ಅದರ ವೆಚ್ಚ ಭರಿಸುವ ಶಕ್ತಿ ಇರುತ್ತದೆ. ಬ್ರೆಜಿಲ್‌ನಂತ ಸಮಾಜದಲ್ಲಿ ತಾವು ಮಾಡಬೇಕಾದ ಕೆಲಸವನ್ನು ಮಾಡಬೇಕೆಂದರೆ, ಈ ಮಕ್ಕಳು ಜೀವನದ ಕುರಿತು ಹೆಚ್ಚು ಮತ್ತು ರಾಜಕೀಯದ ಕುರಿತು ಕಡಿಮೆ ತಿಳಿಯಬೇಕು.

ಜವಾಬ್ದಾರಿ ಎಂಬುದೊಂದು ವಿಷಯವಿದೆ. ನಾನು ಹಿಂದೆ ಅಧ್ಯಕ್ಷನಾಗಿದ್ದೆ ಮತ್ತು ನಾಲ್ವರು ಪ್ರಾಸಿಕ್ಯೂಟರ್‌ಗಳನ್ನು ನೇಮಕ ಮಾಡಿದ್ದೇನೆ. ಅವರ ಪ್ರಮಾಣವಚನ ಸಂದರ್ಭದಲ್ಲಿ ಭಾಷಣ ಮಾಡುತ್ತಾ ಹೇಳಿದ್ದೇನೆ: “ಸಂಸ್ಥೆಗಳು ಹೆಚ್ಚು ಹೆಚ್ಚು ಬಲಿಷ್ಠವಾದಂತೆ, ಅದರ ಸದಸ್ಯರು ಹೆಚ್ಚು ಹೆಚ್ಚು ಜವಾಬ್ದಾರರಾಗಬೇಕು” ಎಂದು. ಯಾರನ್ನಾದರೂ ಮಾಧ್ಯಮಗಳು ಮೊದಲಿಗೆ ತಪ್ಪಿತಸ್ಥ ಎಂದು ಘೋಷಿಸಿ, ನಂತರ ಅವರ ವಿಚಾರಣೆ ನಡೆಸುವುದಲ್ಲ. ನಿಮಗೆ ನೆನಪಿರಬಹುದು, ನಾನು ಕ್ಯುರಿಟಿಬಾ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ, ನ್ಯಾಯಾಧೀಶ ಮೋರೊ ಅವರಿಗೆ ಹೇಳಿದ್ದೆ: “ಗ್ಲೋಬೋ ಪತ್ರಿಕೆಯು ನನ್ನನ್ನು ತಪ್ಪಿತಸ್ಥನೆಂದು ತೀರ್ಮಾನಿಸುವತ್ತ ನಿಮ್ಮನ್ನು ತಳ್ಳುತ್ತಿದೆ, ಹಾಗಾಗಿ ನನ್ನನ್ನು ತಪ್ಪಿತಸ್ಥ ಎಂದು ತೀರ್ಮಾನಿಸದೇ ಇರಲು ನಿಮಗೆ ಸಾಧ್ಯವಿಲ್ಲ. ಅದನ್ನೇ ನೀವು ಮಾಡಲಿದ್ದೀರಿ” ಎಂದು.

ಇದನ್ನೂ ಓದಿ: ಇಂಟರ್‌ನ್ಯಾಷನಲ್ ಫೋಕಸ್; ಇದು ಬ್ರೆಜಿಲ್‌ನ ಕೊನೆಯ ಚುನಾವಣೆಯಾಗಲಿದೆಯೇ?

ನನ್ನ ವಿರುದ್ಧ ನಿಂತಿರುವವರೆಲ್ಲಾ ಒಂದು ಸಮಾನ ಕನಸು ಹೊಂದಿದ್ದಾರೆ. ಅದೆಂದರೆ, 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಲಾ ಸ್ಪರ್ಧಿಸಬಾರದೆಂದು. ಲೂಲಾ ಸ್ಪರ್ಧಿಸಬಾರದು ಏಕೆಂದರೆ, ಲೂಲಾ ಗೆಲ್ಲಬಹುದಾದ ಎಲ್ಲಾ ಸಾಧ್ಯತೆಗಳಿವೆ. ಅವರಿಗೆ ಲೂಲಾ ಮತ್ತೆ ಬರಬಾರದು; ಏಕೆಂದರೆ, ಅವರ ಮನಸ್ಸಿನೊಳಗೆ ಬಡವರು ಹಕ್ಕುಗಳನ್ನು ಹೊಂದಿರುವುದು ಸಾಧ್ಯವಿಲ್ಲ. ಬಡವರು ಉತ್ತಮ ದರ್ಜೆಯ ಮಾಂಸ ತಿನ್ನಬಾರದು, ಬಡವರು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬಾರದು. ಅವರ ಪ್ರಕಾರ ಬಡವರು ಹುಟ್ಟಿರುವುದೇ ಕಳಪೆ ಆಹಾರ ತಿಂದು, ಕಳಪೆ ವಸ್ತುಗಳನ್ನು ಬಳಸಿ, ಕಳಪೆ ಜೀವನ ನಡೆಸಲು.

ಆದುದರಿಂದ ನನ್ನ ಸಂಗಾತಿಗಳೇ, ಅವರ ಎರಡನೇ ಕನಸೆಂದರೆ, ಜೈಲಿನೊಳಗ ಲೂಲಾನ ಚಿತ್ರ ತೆಗೆಯುವುದು. ಅವುಗಳನ್ನು ಮುಖಪುಟಗಳಲ್ಲಿ ಪ್ರಕಟಿಸುವುದು. ಗ್ಲೋಬೋದಂತಹ ಪತ್ರಿಕೆಗಳು ಇದರಿಂದ ಎಷ್ಟು ಆನಂದತುಂದಿಲರಾಗಬಹುದು ಎಂದರೆ, ಅವರಿಗೆ ಹಲವು ಬಾರಿ ಸ್ಖಲನವಾಗಬಹುದು.

ಅವರು ನನ್ನ ಬಂಧನಕ್ಕೆ ಆದೇಶಿಸಿದ್ದಾರೆ. ನಾನು ಅದನ್ನು ಅನುಸರಿಸಲಿದ್ದೇನೆಂದು ನಿಮಗೆ ತಿಳಿಸುತ್ತಿದ್ದೇನೆ. ಯಾಕೆಂದರೆ, ನಾನು ಇದರ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸಲು ಬಯಸಿದ್ದೇನೆ. ಈ ದೇಶದಲ್ಲಿ ಏನೆಲ್ಲಾ ನಡೆಯುತ್ತಿದೆಯೋ, ಅದು ನನ್ನ ಕಾರಣದಿಂದ ನಡೆಯುತ್ತಿದೆ ಎಂದು ಅವರು ಭಾವಿಸಿದ್ದಾರೆ. ಹಿಂದೆ ಒಮ್ಮೆ ನನ್ನನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ ಮೂರು ವರ್ಷ ಸಜೆ ವಿಧಿಸಲಾಗಿತ್ತು. ಏಕೆಂದರೆ, ನನಗೆ ಹರಿತವಾದ ನಾಲಗೆ ಇರುವುದರಿಂದ, ಬಂದೂಕಿನ ಅಗತ್ಯವಿಲ್ಲ; ಆದುದರಿಂದ ಮೆಡುಸ್ಸಾದ ನ್ಯಾಯಾಧೀಶರೊಬ್ಬರು ನನ್ನ ಬಾಯಿ ಮುಚ್ಚಿಸಬೇಕೆಂದು ಬಯಸಿದ್ದರು. ಇಲ್ಲದಿದ್ದರೆ ನಾನು ಮಾತನಾಡುವುದನ್ನು ಮುಂದುವರಿಸುತ್ತಿದ್ದೆ. ನ್ಯಾಯದಾನದಲ್ಲಿ ತಡೆಯೊಡ್ಡಿದ ನೆಪದಲ್ಲಿ ಅವರು ಹಿಂದೆ ನನ್ನನ್ನು ಬಂಧಿಸಲು ಯತ್ನಿಸಿದ್ದರು. ಅದು ಸಫಲವಾಗದಿರುವುದರಿಂದ, ಈಗ ಪ್ರತಿಬಂಧಕವಾಗಿ ಬಂಧಿಸುತ್ತಿದ್ದಾರೆ. ನಾನು ಹೇಬಿಯಸ್ ಕಾರ್ಪಸ್‌ಗಾಗಿ ಒಂದು ದಮ್ಮಡಿಯನ್ನೂ ಖರ್ಚು ಮಾಡುವುದಿಲ್ಲ. ನಾನು ಒಂದು ವಿಶ್ವಾಸದಿಂದ ಜೈಲಿಗೆ ಹೋಗುತ್ತೇನೆ: ನಾನೇನು ಹೇಳುತ್ತಾ ಬಂದಿದ್ದೇನೆ ಎಂದು ಮೊದಲ ಬಾರಿಗೆ ಅವರಿಗೆ ಅರ್ಥವಾಗಲಿದೆ. ಬ್ರೆಜಿಲ್‌ನ ಸಮಸ್ಯೆಗೆ ಲೂಲಾ ಎಂಬ ಹೆಸರಿಲ್ಲ ಎಂಬುದು ಅವರಿಗೆ ಗೊತ್ತಿಲ್ಲ. ಬ್ರೆಜಿಲ್‌ನ ಸಮಸ್ಯೆ, ನೀವೆಲ್ಲರೂ, ಸಮಸ್ಯೆ ಜನರಲ್ಲಿ ಹುಟ್ಟಿರುವ ಜಾಗೃತಿ, ಕಾರ್ಮಿಕರ ಪಕ್ಷ ಮತ್ತು ಕಾರ್ಮಿಕರ ಸಂಘಟನೆಗಳು. ಇದು ಅವರಿಗೆ ಗೊತ್ತಾಗಲಿದೆ. ನಾನು ಈ ದೇಶದಲ್ಲಿ ತಿರುಗಾಡುವುದನ್ನು ನಿಲ್ಲಿಸಿ ಪ್ರಯೋಜನವಿಲ್ಲ ಎಂದು ನಾನು ಹೇಳುತ್ತಾ ಬಂದಿದ್ದೇನೆ. ನನ್ನ ಪರವಾಗಿ ತಿರುಗಾಡಲು ಲಕ್ಷಾಂತರ ಜನರಿದ್ದಾರೆ.

ನನ್ನ ವಿಚಾರಗಳಿಗೆ ಕೊನೆ ಹಾಡಲು ಪ್ರಯತ್ನಿಸಿ ಫಲವಿಲ್ಲ; ಅವು ಈಗಾಗಲೇ ಗಾಳಿಯಲ್ಲಿ ತೇಲಾಡುತ್ತಿವೆ. ಅವರು ಅವುಗಳನ್ನು ಬಂಧಿಸಿಡಲು ಸಾಧ್ಯವಿಲ್ಲ. ನಾನು ಕನಸು ಕಾಣದಂತೆ ನಿಲ್ಲಿಸಲು ಸಾಧ್ಯವಿಲ್ಲ. ನಾನು ನಿಮ್ಮ ಕನಸುಗಳನ್ನು ಕಾಣುತ್ತೇನೆ. ನನಗೆ ಹೃದಯಾಘಾತ ಆದರೆ ಎಲ್ಲವೂ ನಿಲ್ಲುತ್ತದೆ ಎಂದು ಅವರು ಆಶಿಸಿ ಫಲವಿಲ್ಲ. ನನ್ನ ಹೃದಯ ಲಕ್ಷಾಂತರ ನಿಮ್ಮ ಹೃದಯದೊಂದಿಗೆ ಮಿಡಿಯುತ್ತದೆ.

ಅವರು ನನ್ನನ್ನು ತಡೆದು ನಿಲ್ಲಿಸುತ್ತಾರೆ ಎಂದು ಯೋಚಿಸಿ ಫಲವಿಲ್ಲ. ನಾನು ನಿಲ್ಲುವುದಿಲ್ಲ. ಯಾಕೆಂದರೆ, ನಾನು ಮನುಷ್ಯನಲ್ಲ. ನಾನು ಒಂದು ವಿಚಾರ, ನಾನು ನಿಮ್ಮ ವಿಚಾರಗಳೊಂದಿಗೆ ಬೆರೆತುಕೊಂಡ ಒಂದು ವಿಚಾರ. ನಮ್ಮ ಚಳವಳಿಗಳ ಜನರಿಗೆ ಅದು ಗೊತ್ತಿದೆ. ಅದಕ್ಕೆ ಸಾಕ್ಷಿ ಇಲ್ಲಿದೆ. ನಾನು ಬಂಧನ ವಾರಂಟನ್ನು ಪಾಲಿಸುತ್ತೇನೆ. ಆಗ ನೀವೆಲ್ಲರೂ ಬೇರೊಬ್ಬನಾಗುತ್ತೀರಿ: ನೀವು ಝೆಝಿನ್ಹೊ, ಚಿಕಿನ್ಹೊ, ಜೊವಝಿನ್ಹೊ ಅಥವಾ ಆಲ್ಬರ್ಟಿನ್ಹೊ ಆಗಿರುವುದಿಲ್ಲ. ಆ ಹೊತ್ತಿನಿಂದ ನೀವೆಲ್ಲರೂ ಲೂಲಾ ಆಗುತ್ತೀರಿ. ನೀವು ಈ ದೇಶದಲ್ಲಿ ತಿರುಗಾಡುತ್ತೀರಿ, ಪ್ರತೀದಿನವೂ ನೀವು ಏನು ಮಾಡಬೇಕೋ ಅದನ್ನೇ ಮಾಡುತ್ತೀರಿ.

ಹೋರಾಟಗಾರನೊಬ್ಬನ ಸಾವು ಕ್ರಾಂತಿಯನ್ನು ನಿಲ್ಲಿಸುವುದಿಲ್ಲ ಎಂದು ಅವರಿಗೆ ಗೊತ್ತಾಗಬೇಕು. ನಾವು ಖಂಡಿತವಾಗಿಯೂ ಮಾಧ್ಯಮ ನಿಯಂತ್ರಣಕ್ಕೆ ಮುಂದಾಗುತ್ತೇವೆ ಎಂಬುದು ಅವರಿಗೆ ಗೊತ್ತಾಗಬೇಕು; ಆದುದರಿಂದ ಪ್ರತಿಯೊಂದು ದಿನವೂ ಜನರು ಸುಳ್ಳುಗಳಿಗೆ ಬಲಿಪಶುಗಳಾಗಬಾರದು.

ಇದನ್ನೂ ಓದಿ: EWS: ಸಾಮಾಜಿಕ ನ್ಯಾಯಕ್ಕಾಗಿ ನಡೆದ ಶತಮಾನದ ಹೋರಾಟಕ್ಕೆ ಹಿನ್ನಡೆ: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

ನೀವು, ಬಹುಶಃ ನನಗಿಂತಲೂ ಬುದ್ಧಿವಂತ ಜನರು, ನಿಮ್ಮ ಹೋರಾಟಗಳನ್ನು ಮುಂದುವರಿಸುತ್ತೀರಿ ಎಂದು ಅವರಿಗೆ ಗೊತ್ತಾಗಬೇಕು. ಇದು ಕಷ್ಟ. ಆದರೂ, ನನಗೆ ನಾಳೆಗಳ ಮೇಲೆ ವಿಶ್ವಾಸವಿದೆ. ಒಂದು ದಿನ ಈ ನೆಲವು ನಿಮ್ಮದಾದ ಸುದ್ದಿಯನ್ನು ನೀವು ಕೇಳಲಿದ್ದೀರಿ.

ಲೂಲಾ ನೀನು ಬೇರೆ ದೇಶಗಳಲ್ಲಿ ರಾಜಕೀಯ ಆಶ್ರಯ ಕೇಳಬೇಕು, ನೀನು ಅಲ್ಲಿಂದ ಮಾತನಾಡುವುದು ಮುಂದುವರಿಸಬಹುದು ಎಂದು ಜನರು ಸಲಹೆ ಮಾಡಿದ್ದರು. ಹಾಗೆ ಮಾಡಲು ನನಗೆ ತುಂಬಾ ವಯಸ್ಸಾಗಿದೆ. ಆದರೆ, ನನ್ನ ವಯಸ್ಸಿನಲ್ಲಿ ನಾನವರನ್ನು ಮುಖಾಮುಖಿ ಎದುರಿಸಬೇಕು. ನಾನವರನ್ನು ಎದುರಿಸುತ್ತೇನೆ. ಬಂಧನ ವಾರಂಟನ್ನು ಅನುಸರಿಸುತ್ತೇನೆ.

ಅವರು ಎಷ್ಟು ದಿನಗಳ ಕಾಲ ನನ್ನನ್ನು ಜೈಲಿನಲ್ಲಿ ಇಡಲು ಸಾಧ್ಯ ಎಂದು ನನಗೆ ನೋಡಬೇಕು. ನನ್ನನ್ನು ಎಷ್ಟೆಷ್ಟು ಹೆಚ್ಚು ಕಾಲ ಜೈಲಿನಲ್ಲಿ ಇಡುತ್ತಾರೋ, ಈ ದೇಶದಲ್ಲಿ ಅಷ್ಟಷ್ಟು ಲೂಲಾಗಳು ಹುಟ್ಟುತ್ತಾರೆ. ಹೆಚ್ಚುಹೆಚ್ಚು ಜನರು ಹೋರಾಟಕ್ಕೆ ಸಿದ್ಧರಾಗುತ್ತಾರೆ. ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಕೊನೆ ಎಂಬುದಿಲ್ಲ. ಕೆಟ್ಟ ಸಮಯ ಎಂಬುದಿಲ್ಲ. ನನಗೆ ಸಾಧ್ಯವಿದ್ದಿದ್ದರೂ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ನನ್ನ ಸಂಗಾತಿಗಳಿಗೆ ಹೇಳಿದ್ದೇನೆ. ಇಲ್ಲದಿದ್ದರೆ, ನಾಳೆ ಅವರು ಹೇಳುತ್ತಾರೆ: ನಾನು ತಲೆತಪ್ಪಿಸಿಕೊಂಡವನು, ಅಡಗಿ ಕುಳಿತವನು. ಇಲ್ಲ. ನಾನು ಆಡಗುವುದಿಲ್ಲ. ನಾನು ಅವರನ್ನು ಎದುರಿಸುತ್ತೇನೆ. ನನಗೆ ಭಯವಿಲ್ಲ, ನಾನು ಓಡುವುದಿಲ್ಲ, ನನ್ನ ನಿರಪರಾಧಿತನ ಸಾಬೀತು ಮಾಡುತ್ತೇನೆ ಎಂದು ಅವರಿಗೆ ಗೊತ್ತಾಗಬೇಕು. ಅದವರಿಗೆ ಗೊತ್ತಾಗಲೇಬೇಕು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...