ಗ್ರಾಮ ಪಂಚಾಯತಿ ಮತ್ತು ಊರಿನ ಬಹುಸಂಖ್ಯಾತ ಜನರ ವಿರೋಧದ ನಡುವೆಯು ಎರಡು ಹಳ್ಳಿಗಳ ನಾಲ್ಕು ಕಿ.ಮೀ. ಅಂತರದ ನಡುವೆ ಎರಡು ‘ಮದ್ಯದ ಅಂಗಡಿ’ ತೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಮತ್ತು ಹರಿಹರ ಪಲ್ಲತ್ತಡ್ಕ ಗ್ರಾಮಗಳಲ್ಲಿ ನಡೆದಿದೆ. ಇದರ ವಿರುದ್ಧ ಜನರು ಕಳೆದ ಒಂದು ವಾರದಿಂದ ಹೋರಾಟ ನಡೆಸುತ್ತಿದ್ದು, ಯಾವುದೇ ಜನಪ್ರತಿನಿಧಿಗಳು ತಮ್ಮ ಅಹವಾಲು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲ್ಲಮೊಗ್ರು ಮತ್ತು ಹರಿಹರ ಪಲ್ಲತ್ತಡ್ಕ ಮದ್ಯ ವಿರೋಧಿ ಹೋರಾಟ ಸಮಿತಿಯು ಏಳು ದಿನಗಳಿಂದ ಹೋರಾಟ ನಡೆಸುತ್ತಿದೆ. ಆದರೆ ಜನ ಪ್ರತಿನಿಧಿಗಳಿಂದ ಪ್ರತಿಭಟನೆಗೆ ಈ ವರೆಗೂ ಯಾವುದೆ ಸ್ಪಂದನೆ ಸಿಕ್ಕಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದು, ಮದ್ಯದಂಗಡಿಯ ಸುತ್ತ ಪೋಲೀಸರ ಸರ್ಪಗಾವಲು ಮಾಡಲಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಗ್ರಾಮ ಪಂಚಾಯತ್‌ನ ಆಡಳಿತ, ಊರಿನ ಜನರ ವಿರೋಧ ನಡುವೆಯೂ ಬಾರ್ ಪ್ರಾರಂಭಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜನರು ಮದ್ಯದಂಗಡಿ ಬಂದ್ ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆಯನ್ನು ಕರೆದು, ಸಭೆಯಲ್ಲಿ ‘ಮದ್ಯ ಮುಕ್ತ ಗ್ರಾಮ’ವೆಂದು ಘೋಷಿಸಿ ನಿರ್ಣಯ ಕೈಗೊಂಡಿದೆ.
ಇದನ್ನೂ ಓದಿ: ಅಬಕಾರಿ ಇಲಾಖೆಯಿಂದ ಜನಾರೋಗ್ಯ ಕಡೆಗಣನೆ: ಮದ್ಯದಂಗಡಿ ತೆರವಿಗೆ ನೂರಾರು ಮಹಿಳೆಯರ ನಿರಂತರ ಧರಣಿ
ಉನ್ನತ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮೀಣ ಭಾಗದಲ್ಲಿ ಎರಡು ಬಾರ್ ತೆರೆಯಲಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಈ ನಡುವೆ ಹರಿಹರ ಪಲ್ಲತ್ತಡ್ಕದಲ್ಲಿ ಬಾರ್ ತೆರೆಯುವಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀವತ್ಸ ಅವರ ಕೈವಾಡ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರತಿಭಟನೆ ವೇಳೆ ಹೋರಾಟಗಾರರು ಅವರ ಪ್ರತಿಕೃತಿ ಧಹಿಸಿ ಆಕ್ರೋಶ ಕೂಡಾ ವ್ಯಕ್ತಪಡಿಸಿದ್ದಾರೆ.
ಮಧ್ಯದ ಅಂಗಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಎರಡು ಗ್ರಾಮ ಪಂಚಾಯತ್ ಕೂಡಾ ಆಡಳಿತರೂಢ ಬಿಜೆಪಿಯನ್ನು ನಿರಂತರವಾಗಿ ಗೆಲ್ಲಿಸಿಕೊಂಡು ಬರುತ್ತಿರುವ ಸುಳ್ಯ ಕ್ಷೇತ್ರದಲ್ಲಿ ಇದ್ದು, ಎರಡು ಗ್ರಾಮ ಪಂಚಾಯತ್‌ನಲ್ಲಿ ಕೂಡಾ ಬಿಜೆಪಿ ಅಧಿಕಾರದಲ್ಲಿ ಇವೆ.
“ಮಧ್ಯದ ಅಂಗಡಿ ತೆರೆಯಲು ಅನುಮತಿ ನೀಡದಂತೆ ಸ್ಥಳೀಯ ಶಾಸಕ, ಸಚಿವರೂ ಆಗಿರುವ ಎಸ್. ಅಂಗಾರ ಅವರಿಗೆ ಮನವಿ ನೀಡಿದರೂ ಮರು ದಿನ ಬಾರ್ ಓಪನ್ ಆಗಿದೆ” ಎಂದು ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಕರೆಕೋಡಿ ಕಿಡಿ ಕಾರಿದ್ದಾರೆ.
ಈ ನಡುವೆ ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯತ್ ಪಿಡಿಒ ಬಾರ್ ಕಟ್ಟಡಕ್ಕೆ ಅನುಮತಿ ನೀಡಿ ಎರಡು ತಿಂಗಳ ರಜೆ ಹಾಕಿ ಹೋಗಿದ್ದಾರೆ ಎಂದು ಗ್ರಾಮಸ್ಥರೊಬ್ಬರು ನಾನುಗೌರಿ.ಕಾಂಗೆ ಹೇಳಿದ್ದಾರೆ.
ಇದನ್ನೂ ಓದಿ: ಮದ್ಯ ಮಾರಾಟ ಹಾಗೂ ರಾಜಕೀಯ ಪಕ್ಷಗಳು ದ್ವಂದ್ವ ನಿಲುವುಗಳು…!
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸತೀಶ್ ಕೆರೆಕೋಡಿ, “ಕೊಲ್ಲಮೊಗ್ರುವಿನಲ್ಲಿ ಕಳೆದ ತಿಂಗಳು ಅಕ್ಟೋಬರ್ 19ರಂದು ಬಾರ್ ಪ್ರಾರಂಭವಾಗಿತ್ತು. ಅದರ ನಂತರ ನಾವು ಶಾಲಾ ಅಭಿವೃದ್ಧಿ ಸಮತಿ ಸೇರಿದಂತೆ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಪಂಚಾಯತ್‌ಗೆ ಮನವಿ ನೀಡಿದೆವು. ಗ್ರಾಮ ಸಭೆಯಲ್ಲಿ ಗ್ರಾಮದ ಒಳಗೆ ಯಾವುದೆ ಮದ್ಯದ ಅಂಗಡಿ ತೆರೆಯಬಾರದು ಎಂದು ನಿರ್ಣಯ ಕೂಡಾ ಮಾಡಿದೆವು. ಆದರೆ ಮದ್ಯದ ಅಂಗಡಿಗೆ ಲೈಸನ್ಸ್ ನೀಡುವುದರಲ್ಲಿ ಪಂಚಾಯತ್‌ನ ಅನುಮತಿ ಬೇಡ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ಬಾರ್ ತೆರೆಯಲಾಗಿರುವ ಎರಡೂ ಗ್ರಾಮಗಳು ಸುಳ್ಯ ತಾಲೂಕು ಕೇಂದ್ರದಿಂದ 40 ಕಿ.ಮೀ ದೂರವಿದ್ದು, ಬಾರ್ ತೆರೆದ ಪರಿಣಾಮದಿಂದ 18 ವರ್ಷದ ಮಕ್ಕಳು ಕೂಡಾ ಮಧ್ಯದ ಅಮಲಿನಲ್ಲಿ ತೇಲಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೊಲ್ಲಮೊಗ್ರುವಿನಲ್ಲಿ ತೆರೆಯಲಾಗಿರುವ ಬಾರ್ ಮತ್ತು ಶಾಲೆಯ ನಡುವಿನ ಅಂತರ ನೂರು ಮೀಟರ್ ಕೂಡಾ ಇಲ್ಲ. ಹಲವಾರು ನಿಯಮಗಳನ್ನು ಮೀರಿ ಅಬಕಾರಿ ಇಲಾಖೆ ಬಾರ್‌ಗೆ ಅನುಮತಿ ನೀಡಿದೆ ಎಂದು ಆರೋಪಿಸಿದ್ದಾರೆ.
“ಇದನ್ನು ವಿರೋಧಿಸಿ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ಇದೀಗ ಹರಿಹರ ಪಲ್ಲತಡ್ಕದಲ್ಲಿ ಕೂಡಾ ಬಾರ್ ತೆರೆಯಲಾಗಿದ್ದು, ಅದನ್ನು ವಿರೋಧಿಸಿ ಒಂದು ವಾರದಿಂದ ಹೋರಾಟ ನಡೆಯುತ್ತಿದೆ” ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ತೆಲಂಗಾಣ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮಾಧಿ ಮಾಡಿ ಪ್ರತಿಭಟನೆ!
“ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸೇರಿದಂತೆ ಎಲ್ಲಾ ಸದಸ್ಯರು ಜನರೊಂದಿಗೆ ಧರಣಿಗೆ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೊಲ್ಲಮೊಗ್ರುವಿನ ಅಧ್ಯಕ್ಷರು ಇದರ ವಿರುದ್ಧ ಧ್ವನಿಯೆತ್ತುತ್ತಾ ಇಲ್ಲ, ಯಾಕೆಂದರೆ ಅಲ್ಲಿನ ಬಾರ್ ಇರುವ ಕಟ್ಟಡವು ಅವರ ಚಿಕ್ಕಪ್ಪದ್ದಾಗಿದೆ” ಎಂದು ನಾನುಗೌರಿ.ಕಾಂ ಜೊತೆಗೆ ಮಾತನಾಡುತ್ತಾ ಹೋರಾಟ ಸಮಿತಿ ಅಧ್ಯಕ್ಷ ಸತೀಶ್ ಕೆರೆಕೋಡಿ ಅವರು ಆರೋಪಿಸಿದ್ದಾರೆ.



ಮಾನಗೇಡಿಗಳನ್ನ ಶಾಸನ ಸಭೆಗೆ ಆರಿಸಿ ಕಳಿಸಿದ ಪ್ರಜೆಗಳಿಗೆ ಸರಿಯಾದ ಉತ್ತರ