ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಭಾರತ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಭಾರತ ನೀಡಿದ 169 ರನ್‌ಗಳ ಗುರಿಯನ್ನು ಇಂಗ್ಲೆಂಡ್ 16 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಸುಲಭವಾಗಿ ತಲುಪಿ ಭರ್ಜರಿ ಗೆಲುವಿನೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟೂರ್ನಿಯ ಸೂಪರ್ 12 ಹಂತದಲ್ಲಿ 5 ಪಂದ್ಯಗಳಲ್ಲಿ 4ಅನ್ನು ಗೆದ್ದಿದ್ದ ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋತು ಶರಣಾಯಿತು.
ಐಸಿಸಿ ಟೆಸ್ಟ್ ಮತ್ತು ಟಿ20 ಫಾರ್ಮೆಟ್‌ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಭಾರತ ಏಕದಿನ ಕ್ರಿಕೆಟ್‌ನಲ್ಲಿ 3 ನೇ ಸ್ಥಾನದಲ್ಲಿದೆ. 2007ರಲ್ಲಿ ಮೊದಲ ಟಿ20 ವಿಶ್ವಕಪ್ ಗೆದ್ದ ಭಾರತ 15 ವರ್ಷ ಕಳದರೂ ಮತ್ತೆ ಆ ಸಾಧನೆ ಮಾಡಲಾಗಲಿಲ್ಲ. 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತ್ತು. ಆದರೆ ಆನಂತರ ಐಸಿಸಿಯ ಯಾವುದೇ ಟೂರ್ನಿಗಳಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ದ್ವಿಪಕ್ಷೀಯ ಈ ಟೂರ್ನಿಯಲ್ಲಿ ಭಾರತದ ನೀರಸ ಪ್ರದರ್ಶನಕ್ಕೆ 3 ಕಾರಣಗಳು ಇಲ್ಲಿವೆ.
- ಉತ್ತಮ ಆರಂಭಿಕ ಜೊತೆಯಾಟದ ವೈಫಲ್ಯ: ಸದ್ಯಕ್ಕೆ ಟಿ20ಯಲ್ಲಿ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಜೋಡಿಯಿಂದ ಉತ್ತಮ ಜೊತೆಯಾಟ ಬಂದಿಲ್ಲ. ಇದು ಮೊದಲ 6 ಓವರ್‌ಗಳ ಪವರ್ ಪ್ಲೆ ಹಂತದಲ್ಲಿ ಬಹಳ ಮುಖ್ಯವಾಗಿದೆ. ಆದರೆ ಭಾರತ ತಂಡ ಬಹುಬೇಗನೆ ವಿಕೆಟ್ ಕಳೆದುಕೊಳ್ಳುವುದರಿಂದ ಉಳಿದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಅತಿಯಾಗುತ್ತಿದೆ. ಅಲ್ಲದೆ ತಂಡದ ರನ್‌ರೇಟ್ ನಿಧಾನವಾಗಲು ಕಾರಣವಾಗುತ್ತಿದೆ. ಭಾರತವು ಮಧ್ಯದ 6ರಿಂದ 15 ಮತ್ತು ಕೊನೆಯ 15-20ನೇ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಉತ್ತಮ ಆರಂಭಕ್ಕೆ ಕೊರತೆಯಾಗಿದೆ. ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಕೇವಲ 116 ರನ್ ಗಳಿಸಿದ್ದರೆ, ಕೆ.ಎಲ್ ರಾಹುಲ್ ಕೇವಲ 128 ರನ್ ಗಳಿಸಿದ್ದಾರೆ.
- ವೇಗದ ಬೌಲರ್‌ಗಳಿಂದ ಬಾರದ ಉತ್ತಮ ಪ್ರದರ್ಶನ: ಇಡೀ ಟೂರ್ನಿಯಲ್ಲಿ ಭಾರತದ ಬೌಲರ್‌ಗಳು ಸಾಧಾರಣ ಪ್ರದರ್ಶನ ನೀಡಿದ್ದಾರೆ ಹೊರತು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. 6 ಪಂದ್ಯಗಳಿಂದ ಅರ್ಶದೀಪ್ 10 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 8 ವಿಕೆಟ್ ಗಳಿಸಿದ್ದಾರೆ. ಮೊಹಮ್ಮದ್ ಶಮಿ 6 ವಿಕೆಟ್ ಗಳಿಸಿದರೆ ಭುವನೇಶ್ವರ್ ಕುಮಾರ್ ಕೇವಲ 4 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಎಲ್ಲಾ ಬೌಲರ್‌ಗಳು ನೀರಸ ಪ್ರದರ್ಶನ ನೀಡಿ ಸೋಲಿಗೆ ಕಾರಣವಾದರು. ಜಸ್ಪ್ರಿತ್ ಬೂಮ್ರ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿದಿದ್ದು ಭಾರತಕ್ಕೆ ದೊಡ್ಡ ಹೊಡೆತವಾಯಿತು.
- ಯುವ ಸ್ಪಿನ್ ಬೌಲರ್‌ಗಳಿಗೆ ಸಿಗದ ಅವಕಾಶ: ಭಾರತದ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಇಡೀ ಟೂರ್ನಿಯಲ್ಲಿ 6 ವಿಕೆಟ್ ಗಳಿಸಿದರೆ, ಅಕ್ಸರ್ ಪಟೇಲ್ ಕೇವಲ 3 ವಿಕೆಟ್ ಪಡೆದರು. ಅಕ್ಸರ್ ಪಟೇಲ್ ಬ್ಯಾಟಿಂಗ್ ಸಹ ಮಾಡಬಲ್ಲರು ಎಂದು ಆಡಿಸಿದರೂ ಸಹ ಅವರು ಗಮನ ಸೆಳೆಯಲಿಲ್ಲ. ವಿಕೆಟ್ ತೆಗೆಯುವ ಸಾಮರ್ಥ್ಯವಿರುವ ಯುಜುವೆಂದ್ರ ಚಹಲ್, ರವಿ ಬಿಷ್ಣೋಯ್‌ರಂತಹ ಯುವ ಸ್ಪಿನ್ ಪ್ರತಿಭೆಗಳಿದ್ದರೂ ಸಹ ಅವರಿಗೆ ಯಾವುದೇ ಪಂದ್ಯಗಳಲ್ಲಿ ಅವಕಾಶ ಸಿಗಲಿಲ್ಲ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋತಿರುವ ಭಾರತ ಮುಂದಿನ ಸರಣಿಗಾಗಿ ನ್ಯೂಜಿಲೆಂಡ್‌ಗೆ ಪ್ರಯಾಣಿಸಬೇಕಿದೆ. ನವೆಂಬರ್ 18 ರಿಂದ ಭಾರತ- ನ್ಯೂಜಿಲೆಂಡ್ ಎದುರು 3 ಟಿ20 ಮತ್ತು 3 ಏಕದಿನ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಈ ಸರಣಿಯ ಪಂದ್ಯಗಳ ನೇರಪ್ರಸಾರವನ್ನು ಅಮೆಜಾನ್ ಪ್ರೈಮ್ ಓಟಿಟಿಯಲ್ಲಿಯೂ ನೋಡಬಹುದು.
ಇದನ್ನೂ ಓದಿ: ಮುಗ್ಗರಿಸಿದ ಭಾರತ: ಭರ್ಜರಿ ಜಯದೊಂದಿಗೆ ಫೈನಲ್ ಲಗ್ಗೆಯಿಟ್ಟ ಇಂಗ್ಲೆಂಡ್