ತನ್ನ ಸಂಗಾತಿಯನ್ನು ಕೊಂದ ಆರೋಪದಲ್ಲಿ ಬಂಧಿತನಾದ 28 ವರ್ಷದ ಅಫ್ತಾಬ್ ಅಮೀನ್ ಪೂನಾವಾಲಾನನ್ನು ದಕ್ಷಿಣ ದೆಹಲಿಯ ಛತ್ತರ್‌ಪುರದ ಅರಣ್ಯ ಪ್ರದೇಶಕ್ಕೆ ಪೊಲೀಸರು ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಾವು ಕೊಲೆ ಮಾಡಿದ ಶ್ರದ್ಧಾ ವಾಕರ್ ಅವರ ದೇಹದ ಭಾಗಗಳನ್ನು ಇಲ್ಲಿ ಎಸೆದಿದ್ದನು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ದೆಹಲಿ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿರುವ ವರದಿಯು, “ಅಫ್ತಾಬ್ ತಾನು ಬಿಡಿಭಾಗಗಳನ್ನು ಎಸೆದ ಪ್ರದೇಶಗಳನ್ನು ಗುರುತಿಸಿದ್ದಾನೆ. ನಂತರ ದೇಹದ 13 ಭಾಗಗಳು ಪತ್ತೆಯಾಗಿವೆ. ಆದರೆ ವಿಧಿವಿಜ್ಞಾನ ಪರೀಕ್ಷೆಯ ನಂತರವೇ, ಅವು ಕೊಲೆಯಾದ ಯುವತಿಗೆ ಸೇರಿದೆಯೇ ಎಂದು ದೃಢೀಕರಿಸಬಹುದು” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಅಫ್ತಾಬ್‌ನನ್ನು ಛತ್ತರ್‌ಪುರ ಪ್ರದೇಶವನ್ನು ಹೊರತುಪಡಿಸಿ ನವದೆಹಲಿಯ ಇತರ ಕೆಲವು ಸ್ಥಳಗಳಿಗೆ ಕರೆದೊಯ್ಯಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್ ಪೂನವಾಲ ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್ ಅವರ ಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು, ನಂತರ ನಗರದ ವಿವಿಧ ಪ್ರದೇಶಗಳಲ್ಲಿ ಒಂದೊಂದು ಭಾಗವನ್ನು ವಿಲೇವಾರಿ ಮಾಡಿದ್ದ.
ಇದುವರೆಗೆ ಪತ್ತೆಯಾಗಿರುವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವೆಲ್ಲವೂ ಮಾನವ ಅವಶೇಷಗಳೇ ಎಂದು ಖಚಿತಪಡಿಸಿಕೊಳ್ಳಲಾಗಿದೆ. ತಲೆ ಇನ್ನೂ ಪತ್ತೆಯಾಗಿಲ್ಲ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಕೊಲೆಗೆ ಬಳಸಲಾದ ಆಯುಧವನ್ನು ಪತ್ತೆಹಚ್ಚಲಾಗಿಲ್ಲ.
ಅಫ್ತಾಬ್ ಹದಿನೈದು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈನಲ್ಲಿರುವ ಹೌಸಿಂಗ್ ಸೊಸೈಟಿಗೆ ಭೇಟಿ ನೀಡಿದ್ದನು. ಆತನ ಕುಟುಂಬ ಸದಸ್ಯರು ಮುಂಬೈಗೆ ತೆರಳಲು ಸಹಾಯ ಮಾಡಿದ್ದರು ಎಂದು ಸೊಸೈಟಿ ಸದಸ್ಯರೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆರೋಪಿ ಅಫ್ತಾಬ್ ಭೇಟಿ ಮಾಡಿದ ಯುವತಿಯ ವಿವರಗಳನ್ನು ಕಂಡುಹಿಡಿಯಲು ದೆಹಲಿ ಪೊಲೀಸರು ಡೇಟಿಂಗ್ ಆ್ಯಪ್ ಬಂಬಲ್‌ಗೆ ಪತ್ರ ಬರೆಯುವ ಸಾಧ್ಯತೆಯಿದೆ. ಈ ಡೇಟಿಂಗ್ ಆಪ್‌ನಲ್ಲಿ ಶ್ರದ್ಧಾ ಅವರನ್ನು ಅಫ್ತಾಬ್ ಭೇಟಿಯಾಗಿದ್ದನು. ಬಂಬಲ್‌ನ ಪ್ರಧಾನ ಕಛೇರಿಯು ಅಮೆರಿಕಾದ ಟೆಕ್ಸಾಸ್‌ನಲ್ಲಿದೆ.
ಶ್ರದ್ಧಾಳ ತಂದೆ ವಿಕಾಸ್ ವಾಕರ್ ಪ್ರತಿಕ್ರಿಯಿಸಿ, “ಆರೋಪಿಗೆ ಮರಣದಂಡನೆ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ. ಈ ಜೊತೆಯ ಬೆನ್ನಲ್ಲೇ ಲವ್ ಜಿಹಾದ್ ಚರ್ಚೆ ನಡೆಯುತ್ತಿದೆ.
ಜಗಳದ ನಂತರ ತನ್ನ ಪ್ರಿಯತಮೆ ಶ್ರದ್ಧಾಳನ್ನು ಕೊಂದಿರುವುದಾಗಿ ಮತ್ತು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸುವ ಆಲೋಚನೆಯನ್ನು ಅಮೇರಿಕನ್ ಕ್ರೈಮ್ ಟಿವಿ ಸರಣಿಯಾದ ‘ಡೆಕ್ಸ್ಟರ್’ನಿಂದ ಬೆಳೆಸಿಕೊಂಡಿದ್ದಾಗಿ ಪೂನಾವಾಲಾ ತನಿಖೆಯ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.
ಪ್ರೇಯಸಿಯ ದೇಹದ ಬಿಡಿಭಾಗಗಳನ್ನು ಸಂರಕ್ಷಿಸಲು ಫ್ರಿಜ್ ಖರೀದಿಸಿದ್ದನು. ಅವುಗಳನ್ನು ವಿಲೇವಾರಿ ಮಾಡಲು ಮಧ್ಯರಾತ್ರಿಯ ನಂತರ ಹೊರಗೆ ಹೋಗುತ್ತಿದ್ದನು. ಯಾವ ಭಾಗವು ಬೇಗನೆ ಕೊಳೆಯಲು ಪ್ರಾರಂಭಿಸುತ್ತದೆ ಎಂಬುದರ ಆಧಾರದ ಮೇಲೆ ಆರೋಪಿಯು ಯಾವುದನ್ನು ಮೊದಲು ವಿಲೇವಾರಿ ಮಾಡಬೇಕೆಂದು ನಿರ್ಧರಿಸುತ್ತಿದ್ದನು ಎಂದು ಪೊಲೀಸರು ವಿವರಿಸಿದ್ದಾರೆ.
ಪೂನಾವಾಲಾ ಜೊತೆಗಿನ ಸಂಬಂಧದ ಬಗ್ಗೆ ಭಿನ್ನಾಭಿಪ್ರಾಯ ಇದ್ದಿದ್ದರಿಂದ ಯುವತಿಯು ತನ್ನ ಕುಟುಂಬದೊಂದಿಗೆ ಮಾತುಕತೆ ನಡೆಸಿರಲಿಲ್ಲ.
ಮೇ 18 ರಂದು, ಆರೋಪಿ ಮತ್ತು ಯುವತಿಯ ನಡುವೆ ಜಗಳವಾಗಿತ್ತು. ಯುವತಿಯು ಕೂಗುತ್ತಿದ್ದರಿಂದ ಅಫ್ತಾಬ್ ತನ್ನ ಕೈಯಿಂದ ಆಕೆಯ ಬಾಯಿಯನ್ನು ಮುಚ್ಚಿದನು. ನಂತರ ಆಕೆಯ ಕತ್ತು ಹಿಸುಕಿ, ದೇಹವನ್ನು ಭಾಗಗಳಾಗಿ ಕತ್ತರಿಸಿ ಹತ್ತಿರದ ಕಾಡಿನಲ್ಲಿ ವಿಲೇವಾರಿ ಮಾಡಲಾರಂಭಿಸಿದನು ಎಂದು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂನಾವಾಲಾನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಶ್ರದ್ಧಾಳ ನೆನಪಿಗಾಗಿ ಫ್ರಿಡ್ಜ್‌ನಲ್ಲಿ ದೇಹವಿರಿಸಿದ್ದೆ: ಅಫ್ತಾಬ್
“ಕೊಲೆ ಮಾಡಿದ ನಂತರ ಯುವತಿಯ ತಲೆಯನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದ್ದೆನು. ಆಕೆ ಮತ್ತು ನನ್ನ ನಡುವಿನ ಸಂಬಂಧದ ನೆನಪಿಗಾಗಿ ಆ ದೇಹವನ್ನು ಆಗಾಗ್ಗೆ ನೋಡುತ್ತಿದ್ದೆ. ಆ ನಂತರದ ದಿನಗಳಲ್ಲಿ ಆಕೆಯ ತಲೆಯನ್ನು ಹೊರಗೆ ಎಸೆದಿದ್ದೇನೆ” ಎಂದು ಆರೋಪಿ ಅಫ್ತಾಬ್ ಪೊಲೀಸರಿಗೆ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಇದನ್ನೂ ಓದಿರಿ: ಊನಾ ಪ್ರಕರಣದ ಆರೋಪಿಗಳಿಂದ ದಲಿತ ಸಂತ್ರಸ್ತರಿಗೆ ಜೀವ ಬೆದರಿಕೆ; ಎಫ್‌ಐಆರ್
ತಲೆ ಪತ್ತೆಯಾದ ನಂತರ, ಪೊಲೀಸರು ಸ್ಕಲ್ ಸೂಪರ್‌ಇಂಪೊಸಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಸಂತ್ರಸ್ತೆಯ ಗುರುತನ್ನು ಪತ್ತೆಹಚ್ಚಲಿದ್ದಾರೆ. ಸದ್ಯಕ್ಕೆ ಅವರ ಏಕೈಕ ಭರವಸೆ ಎಂದರೆ ವಾಕರ್ ಅವರ ತಂದೆಯೊಂದಿಗೆ, ಈಗ ದೊರೆತಿರುವ ಕೆಲವು ಬಿಡಿಭಾಗಗಳ ಡಿಎನ್‌ಎ ಹೊಂದಾಣಿಕೆಯಾಗಿದೆ.
ಯುವತಿಯ ದೇಹದ ಭಾಗಗಳನ್ನು ಕತ್ತರಿಸುವಾಗ, ಸಂಗ್ರಹಿಸುವಾಗ ಮತ್ತು ವಿಲೇವಾರಿ ಮಾಡುವಾಗ ಆರ್ಥೋಬೊರಿಕ್ ಆಸಿಡ್ (ಬೋರಿಕ್ ಪೌಡರ್), ಫಾರ್ಮಾಲ್ಡಿಹೈಡ್, ಸಲ್ಫ್ಯೂರಿಕ್ ಆಸಿಡ್ ಮತ್ತು ಇತರ ಕೆಲವು ರಾಸಾಯನಿಕಗಳನ್ನು ಪೂನಾವಾಲಾ ಬಳಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಉಲ್ಲೇಖಿಸಿದೆ.
ಕೊಲೆಯಾಗಿ ಆರು ತಿಂಗಳುಗಳು ಕಳೆದಿರುವುದರಿಂದ, ಕೊಲೆಯನ್ನು ದೃಢೀಕರಿಸಲು ಪೊಲೀಸರು ವಿಧಿವಿಜ್ಞಾನವನ್ನು ಅವಲಂಬಿಸಬೇಕಾಗುತ್ತದೆ. ಆರೋಪಿಯು ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ತನ್ನ ಉತ್ತರಗಳನ್ನು ಆಗಾಗ್ಗೆ ಬದಲಾಯಿಸುತ್ತಿದ್ದಾನೆ ಮತ್ತು ಅನೇಕ ವಿವರಗಳನ್ನು ಮರೆತಿರುವುದಾಗಿ ಆತ ಹೇಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


