(ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್’ ಮಾಡಿದ ಸಮಯದಲ್ಲಿ ದಲಿತರ ಮೇಲೆ ನಡೆದ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸಿರುವ ಒಂದೊಂದೂ ಭೀಕರ ಕ್ರೂರ ಕೃತ್ಯಗಳನ್ನು ಈ ವರದಿ ಬಯಲುಗೊಳಿಸುತ್ತದೆ. ದಲಿತರ ಮೇಲಿನ ದೌರ್ಜನ್ಯಗಳ 10 ಘಟನೆಗಳನ್ನು ಅನುವಾದಕ್ಕೆ ಇಲ್ಲಿ ಆಯ್ದುಕೊಂಡಿದ್ದು, ಇದು ಎರಡನೆಯದ್ದಾಗಿದೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತಿಸುವುದಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)
2020ರ ನವೆಂಬರ್ 14ರಂದು ಭಾರತದೆಲ್ಲೆಡೆ ದೀಪಾವಳಿಯನ್ನು ಆಚರಿಸುತ್ತಿರುವಾಗ ತಮಿಳುನಾಡಿನ ಒಂದು ಜಿಲ್ಲೆಯಲ್ಲಿ ಈ ಜಾತಿಕ್ರೌರ್ಯ ನಡೆಯಿತು. ಹಿಂದೂ ಮೇಲ್ಜಾತಿಗಳ ಗುಂಪು 58 ವರ್ಷದ ರಾಮಸ್ವಾಮಿ ಮತ್ತು ಅವರ 54 ವರ್ಷದ ಪತ್ನಿ ಅರ್ರುಕಣಿಯವರ ಕುಟುಂಬದವನ್ನು ಅಳಿಸಿಹಾಕುವ ಶಪಥ ಕೈಗೊಂಡಿತ್ತು.
ತನ್ನ ಜೀವನದುದ್ದಕ್ಕೂ ಕಾವಲುಗಾರನಂತೆ ಕಷ್ಟಪಟ್ಟು ಕೆಲಸ ಮಾಡಿದ ರಾಮಸ್ವಾಮಿ ತನ್ನ ಹಳ್ಳಿಯಲ್ಲಿ ಸಹಾನುಭೂತಿಯುಳ್ಳ ವ್ಯಕ್ತಿ ಎಂದು ಹೆಸರುವಾಸಿಯಾಗಿದ್ದರು. ಜನರು ಅವರ ಒಡನಾಟವನ್ನು ಆನಂದಿಸುತ್ತಿದ್ದರು ಮತ್ತು ನಂಬಿದ್ದರು. ಕೆಲವು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರಾದರೂ ಅದರಿಂದ ಚೇತರಿಸಿಕೊಂಡಿದ್ದರು.
ಅವರ ಪತ್ನಿ ಅರ್ರುಕಣಿ ಗಂಡನ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದರು. ಬಡತನದ ಜೀವನವಾದರೂ ಎಂದಿಗೂ ವೈಯಕ್ತಿಕ ಘನತೆಯನ್ನು ಬಿಟ್ಟುಕೊಡದವರು. ಅವರು ಪರಿಶಿಷ್ಟ ಜಾತಿಯ ಅರುಂದತಿಯಾರ್ ಸಮುದಾಯಕ್ಕೆ ಸೇರಿದವರಾಗಿದ್ದರು. ಗಂಡುಮಕ್ಕಳಾದ ಯುವರಾಜ್ (35) ಮತ್ತು ಭೂಪತಿ (28) ಮಗಳು ಮೇನಕಾರನ್ನು (31) ಎಂದೆಂದಿಗೂ ಜಾತಿಕಟ್ಟಳೆಗಳಿಗೆ ತಲೆಬಾಗದಂತೆ ಬೆಳೆಸಿದ್ದರು ಮತ್ತು ಅವರಿಗೂ ಅದನ್ನೇ ಕಲಿಸಿದ್ದರು.
ಸುಮಾರು 120 ಕುಟುಂಬಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳೇ ಬಹುಸಂಖ್ಯಾತರಾಗಿದ್ದರೂ ಒಬಿಸಿ ಗೌಂಡರ್ ಜಾತಿಯದ್ದೇ ಪ್ರಾಬಲ್ಯ. ರಾಜಕೀಯ ಮತ್ತು ಸಾಮಾಜಿಕ ಅಧಿಕಾರದಲ್ಲಿ ಮೇಲ್ಜಾತಿ ಹಿಂದೂಗಳದ್ದೇ ಮೇಲುಗೈ. ನಾಡಾರ್‌ಗಳಂತಹ ಒಂದೆರಡು ಇತರೆ ಮೇಲ್ಜಾತಿಗಳು ಸಹ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಅಲ್ಲಿ ಇಂದಿಗೂ ದಲಿತ ಕುಟುಂಬಗಳು ರಾಮಸ್ವಾಮಿಯವರಂತೆ ಚಿಕ್ಕ ಗುಡಿಸಲುಗಳಲ್ಲಿ, ಕಿಂಚಿತ್ತೂ ಮೂಲಸೌಲಭ್ಯಗಳಿಲ್ಲದ ಹಾಗೂ ಗ್ರಾಮದ ಸ್ವಚ್ಛವಲ್ಲದ ಮೂಲೆಯೊಂದರಲ್ಲಿ ವಾಸಿಸುತ್ತವೆ. ಆದರೆ ಮೇಲ್ಜಾತಿ ಹಿಂದೂ ಕುಟುಂಬಗಳು ದೊಡ್ಡ ಮನೆಗಳನ್ನೂ ಹಾಗೂ ಎಕರೆಗಟ್ಟಲೆ ಭೂಮಿಯನ್ನೂ ಹೊಂದಿವೆ.
ಇಂತಹ ಪರಿಸ್ಥಿತಿಯುಳ್ಳ ತಮಿಳುನಾಡಿನ ಹಳ್ಳಿಯೊಂದರ ದಲಿತ ರಾಮಸ್ವಾಮಿಯವರ ಮಗಳು ಮೇನಕಾ ಬೇರೊಂದು ಗ್ರಾಮದ ಮೇಲ್ಜಾತಿ ಹಿಂದೂ ಹುಡುಗ ಪೆರುಮಾಳ್‌ನನ್ನು ಮದುವೆಯಾದರು. ಈ ಮದುವೆ ಆ ಪ್ರದೇಶದಲ್ಲಿ ಜಾತಿ ಉದ್ವಿಗ್ನತೆಯ ಪರಿಸ್ಥಿತಿಯನ್ನು ಉಂಟುಮಾಡಿತ್ತು. ಆದಾಗ್ಯೂ, ರಾಮಸ್ವಾಮಿ ಮತ್ತು ಅವರ ಕುಟುಂಬ ಇದಕ್ಕೆಲ್ಲ ಸೊಪ್ಪು ಹಾಕುವವರಲ್ಲ, ಧೈರ್ಯಶಾಲಿಗಳು. ಮೇನಕಾ ಮತ್ತು ಪೆರುಮಾಳ್ ದಂಪತಿಗಳ ಬೆನ್ನಿಗೆ ನಿಂತು ರಕ್ಷಿಸಿದರು.
ಇದನ್ನೂ ಓದಿ: ಮಾತು ಮರೆತ ಭಾರತ-27; ಲಾಕ್‌ಡೌನ್ ಫೈಲ್ಸ್: ನೀರು ಕೇಳಿದ ದಲಿತ ಯುವಕನ ಉಸಿರು ನಿಲ್ಲಿಸಿದರು
ಮದುವೆಯ ನಂತರ ಮೇನಕಾ ಮತ್ತು ಪೆರುಮಾಳ್ ಬೇರೊಂದು ಹಳ್ಳಿಗೆ ತೆರಳಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈಗ ಅವರೊಂದಿಗೆ 12 ವರ್ಷದ ಮಗ ಬೈರವಮೂರ್ತಿಯೂ ಇದ್ದಾನೆ. ದಿನ ಕಳೆದಂತೆ ಮದುವೆಯ ಕಾರಣಕ್ಕೆ ಎದ್ದಿದ್ದ ಜಾತಿ ವೈಷಮ್ಯದ ಕಿಡಿ ಕಡಿಮೆಯಾಗುತ್ತಿತ್ತು. ಮೇನಕಾ ಆಗಾಗ್ಗೆ ಚಿತ್ತಪುಲ್ಲಪಾಳ್ಯದಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡುತ್ತಿದ್ದಳು.
ಒಂದು ವರ್ಷದ ಹಿಂದೆ ಮತ್ತೊಂದು ಅಂತರ್ಜಾತಿ ವಿವಾಹ ಅದೇ ಹಳ್ಳಿಯಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತ್ತು. ನಾಡಾರ್ ಜಾತಿಯ ಹುಡುಗಿಯೊಬ್ಬಳು ದಲಿತ ಹುಡುಗನನ್ನು ಮದುವೆಯಾಗಿದ್ದಳು. ಹುಡುಗಿಯ ತಂದೆ ಸ್ವಾಮಿನಾಥನ್ ಗ್ರಾಮದಲ್ಲಿ ಬಲವಾದ ಹಿಡಿತ ಹೊಂದಿದ್ದ ಕಾರಣ ಮೇಲ್ಜಾತಿ ಹಿಂದೂ ಗುಂಪು ದಲಿತ ಕುಟುಂಬಗಳಿಗೆ ಬೆದರಿಕೆಯೊಡ್ಡಿ ಅವಮಾನಿಸುತ್ತಿತ್ತು.
ಹೀಗೆ ಮೇಲ್ಜಾತಿ ಪ್ರತಿಷ್ಠೆಯ ಉದ್ವಿಗ್ನತೆಗಳು ಕುದಿಯುತ್ತಿದ್ದ ಸಮಯದಲ್ಲಿ ನವೆಂಬರ್ 13ರಂದು ಮೇನಕಾ ತನ್ನ ಗಂಡ ಪೆರುಮಾಳ್ ಮತ್ತು ಮಗನ ಜೊತೆಯಲ್ಲಿ ದೀಪಾವಳಿ ಹಬ್ಬಕ್ಕೆಂದು ತವರು ಮನೆಗೆ ಬಂದಳು. ಲಾಕ್‌ಡೌನ್ ಸಮಯದಲ್ಲಿ ಭೇಟಿಯಾಗಲು ಸಾಧ್ಯವಾಗದ ಕಾರಣ ಇಡೀ ಕುಟುಂಬಕ್ಕೆ ಇದೊಂದು ಸಂತೋಷದ ಸಮಯವಾಗಿತ್ತು.
ಮೇನಕಾ ಹಾಗೂ ಪೆರುಮಾಳ್ ಹಬ್ಬದ ಸಡಗರವನ್ನೊಮ್ಮೆ ನೋಡಿ ಬರಲು ಮನೆಯಿಂದ ಹೊರಬಂದಾಗ ಸರ್ಕಾರಿ ಪ್ರಾಥಮಿಕ ಶಾಲೆಯ ಎದುರು ನಾಡಾರ್ ಜಾತಿಗೆ ಸೇರಿದ ಸೂರ್ಯ ಮತ್ತು ಅವನ ಆರು ಗೆಳೆಯರು ಮದ್ಯಪಾನ ಮಾಡಿ ಮತ್ತೇರಿಸಿಕೊಂಡು ಪಟಾಕಿ ಸಿಡಿಸುತ್ತಿದ್ದರು. ಈ ಅಮಲೇರಿದ ಯುವಕರು ಮೇನಕಾಳನ್ನುದ್ದೇಶಿಸಿ ಅಶ್ಲೀಲ ಮತ್ತು ಲೈಂಗಿಕವಾಗಿ ಆಕ್ಷೇಪಾರ್ಹವಾದ ಮಾತುಗಳನ್ನಾಡಲು ಪ್ರಾರಂಭಿಸಿದರು. ಕಿರುಕುಳ ನೀಡಲು ಆರಂಭಿಸಿದರು. ಅವರಲ್ಲೊಬ್ಬ ’ಪೆರುಮಾಳ್ ಬಾಯಿಗೆ ಪಟಾಕಿ ತುಂಬಿಸಿ’ ಎಂದು ಕೂಗಿದ. ದಂಪತಿಗಳಿಗೆ ಕಿರುಕುಳ ನೀಡುವುದು ಮುಂದುವರಿದಾಗ ಮೇನಕಾ ಆ ಯುವಕರಿಗೆ ಛೀಮಾರಿ ಹಾಕಿದಳು. ದಲಿತ ಹುಡುಗಿಯೊಬ್ಬಳು ಹಿಂದಿರುಗಿ ಮಾತನಾಡುವುದು ಈ ದೇಶದ ಹಿಂದೂ ಮೇಲ್ಜಾತಿಗಳಿಗೆ ಸಹಿಸಲು ಸಾಧ್ಯವೇ? ಆ ಯುವಕರನ್ನು ಇನ್ನಿಲ್ಲದಂತೆ ’ಕೆರಳಿಸಿತು’.
ಸೂರ್ಯ ಮತ್ತವನ ಸ್ನೇಹಿತರು ಪೆರುಮಾಳ್‌ನನ್ನು ಗುರಿಯಾಗಿಸಿಕೊಂಡು ಅಶ್ಲೀಲವಾಗಿ ಹಾಗೂ ಜಾತಿ ಹಿಡಿದು ತೆಗಳಲು ಆರಂಭಿಸಿದರು. ಮೇನಕಾಳತ್ತ ತಿರುಗಿ ’ನಮ್ಮ ಜಾತಿಯವನೊಂದಿಗೆ ಬದುಕ್ತಿದಿಯ ನಿನಗೆ ಗೌರವ ಬೇರೆ ಬೇಕಾ? ನಮ್ಮ ಜಾತಿಯನ್ನು ಕುಲಗೆಡಿಸಿದವಳು ನೀನು’ ಎಂದು ಅರಚಾಡಿದರು. ದಂಪತಿಗಳಿಬ್ಬರೂ ಕೋಪದಿಂದ ಕುದಿಯುತ್ತಿದ್ದರು. ಪೆರುಮಾಳ್ ತನ್ನ ಹೆಂಡತಿಯ ಸ್ವಗೌರವವನ್ನು ಕಾಪಾಡಲು ಪ್ರಯತ್ನಿಸುತ್ತಾ ಗದರಿದಾಗ, ಸೂರ್ಯ ಮತ್ತವನ ಸ್ನೇಹಿತರು ಅವನನ್ನು ಥಳಿಸಿಬಿಟ್ಟರು. ಅವರು ಪೆರುಮಾಳನ್ನು ಕೆಳಕ್ಕೆ ತಳ್ಳಿ ಅವನ ತಲೆಯನ್ನು ಬಂಡೆಗೆ ಚಚ್ಚಿದರು. ಸಂತೋಷಭರಿತ ದೀಪಾವಳಿಯ ಪ್ರವಾಸವು ದಂಪತಿಗಳಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿತ್ತು. ಹತಾಶಳಾದ ಮೇನಕಾ ತನ್ನ ಪೋಷಕರು ಮತ್ತು ಸಹೋದರ ಯುವರಾಜ್‌ನನ್ನು ಸಹಾಯಕ್ಕಾಗಿ ಕರೆದಳು. ಕುಟುಂಬ ಅಲ್ಲಿಗೆ ಓಡಿ ಬಂದಿತು.
ಇದನ್ನೂ ಓದಿ: ಮಾತು ಮರೆತ ಭಾರತ-26; ಪಾಯಲ್ ತಡ್ವಿ ಫೈಲ್: ವೈದ್ಯಳಾಗುವ ಕನಸು ಹೊತ್ತವಳನ್ನ ಸ್ಮಶಾನಕ್ಕೆ ಕಳಿಸಿದರು
ರಾಮಸ್ವಾಮಿ ಮತ್ತು ಯುವರಾಜ್ ಇಬ್ಬರೂ ಸೂರ್ಯ ಮತ್ತವನ ಸ್ನೇಹಿತರ ವಿರುದ್ಧ ಪೊಲೀಸ್‌ಗೆ ದೂರು ನೀಡುವುದಾಗಿ ಮಾತಾಯಿತು. ಆದರೆ ಕುಡಿದ ಅಮಲಿನಲ್ಲಿದ್ದ ಆ ಮೇಲ್ಜಾತಿ ಹಿಂದೂ ಗುಂಪು ಅವರ ಮೇಲೆಯೂ ದೈಹಿಕ ಹಲ್ಲೆ ನಡೆಸಿ ಹೊರಟುಬಿಟ್ಟರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಪೆರುಮಾಳ್‌ನನ್ನು ಚಿಕಿತ್ಸೆಗಾಗಿ ಸಮೀಪದ ಕೊಡುಮುಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಥಮ ಚಿಕಿತ್ಸೆಯ ಬಳಿಕ ಸ್ವಲ್ಪ ವಿಶ್ರಾಂತಿ ಪಡೆದ ನಂತರ ಆಂತರಿಕ ಗಾಯಗಳನ್ನು ಪತ್ತೆಹಚ್ಚಲು ಸಿಟಿ ಸ್ಕ್ಯಾನಿಗಾಗಿ ಪೆರುಮಾಳ್‌ನನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಮೇನಕಾಳಿಗೆ ತಿಳಿಸಿದರು. ದಾಳಿ ನಡೆದು 24 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿತ್ತು. ನವೆಂಬರ್ 14ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮೇನಕಾ ತನ್ನ ತಂದೆಗೆ ಕರೆಮಾಡಿ ಅಲ್ಲಿನ ಬೆಳವಣಿಗೆಗಳ ಬಗ್ಗೆ ತಿಳಿಸಿದ್ದಳು.
ಗ್ರಾಮದಲ್ಲಿ ಜಾತಿ ಉದ್ವಿಗ್ನತೆ ಉತ್ತುಂಗಕ್ಕೇರಿದೆ ಮತ್ತು ಸೂರ್ಯ ಮತ್ತು ಅವನ ಸ್ನೇಹಿತರ ನೇತೃತ್ವದಲ್ಲಿ 20 ಮೇಲ್ಜಾತಿ ಪುರುಷರ ಗುಂಪು ದಲಿತರ ಕೇರಿಗಳಲ್ಲಿ ಓಡಾಡುತ್ತಿದೆ ಎಂದು ರಾಮಸ್ವಾಮಿ ಮೇನಕಾಗೆ ತಿಳಿಸಿದ್ದರು. ದಂಪತಿ ಈ ಕ್ರೂರಿಗಳ ಕೆಂಗಣ್ಣಿಗೆ ಗುರಿಯಾಗಬಹುದು ಎಂದರಿತು ರಾಮಸ್ವಾಮಿ ಮಗಳಿಗೆ ಊರಿಗೆ ವಾಪಸ್ ಬರಬೇಡಿ ಎಂದು ಎಚ್ಚರಿಸಿದ್ದರು.
ಮೇನಕಾ ಅವರ ಮಗ ಬೈರವಮೂರ್ತಿ ಇನ್ನೂ ರಾಮಸ್ವಾಮಿ ಮತ್ತು ಅರ್ರುಕಣಿ ಜೊತೆಯಲ್ಲಿದ್ದನು. ವೃದ್ಧ ದಂಪತಿಗಳಿಗೆ ತಮ್ಮ ಮೊಮ್ಮಗನನ್ನು ಸಹ ರಕ್ಷಿಸಬೇಕಾಗಿತ್ತು. ಬೆಳಗಿನ ಜಾವ 1.30ರ ಸುಮಾರಿಗೆ ರಾಮಸ್ವಾಮಿ ಅವರು ಮೇನಕಾ ಅವರೊಂದಿಗೆ ಮಾತನಾಡುತ್ತಿರುವಾಗಲೇ ಕುಡುಗೋಲು ಮತ್ತು ಚಾಕುಗಳನ್ನು ಹಿಡಿದಿದ್ದ ಗುಂಪೊಂದು ಅವರ ಮನೆಗೆ ನುಗ್ಗಿತು. ರಾಮಸ್ವಾಮಿ ಮತ್ತು ಅರ್ರುಕಣಿಯವರನ್ನು ಬೆದರಿಸಿತು. ’ನಮ್ಮ ಜಾತಿಯ ಮಕ್ಕಳನ್ನು ಬಲೆಗೆ ಹಾಕಿಕೊಂಡು ಮದುವೆಯಾಗುತ್ತೀರ’ ಎನ್ನುತ್ತಾ ಥಳಿಸಿತು. ಕ್ಷಣಮಾತ್ರದಲ್ಲಿ ಕೈಯಲ್ಲಿದ್ದ ಆಯುಧಗಳಿಂದ ಅವರಿಬ್ಬರನ್ನೂ ಕತ್ತರಿಸಿಬಿಟ್ಟರು. ನಡುಗುತ್ತಿದ್ದ ಮೊಮ್ಮಗ ಬೈರವಮೂರ್ತಿ ಹತ್ಯೆಯನ್ನು ಮೌನವಾಗಿ ನೋಡಿ ಆಘಾತಕ್ಕೊಳಗಾದನು. ಹುಟ್ಟಿದಂದಿನಿಂದ ಅವನ ಮೇಲೆ ಪ್ರೀತಿ, ಅಪ್ಪುಗೆಯ ಸುರಿಮಳೆಗೈದ ಅವನ ಪ್ರೀತಿಯ ಅಜ್ಜ-ಅಜ್ಜಿಯರನ್ನು ತುಂಡುತುಂಡಾಗಿ ಕತ್ತರಿಸಿ ನೆಲದ ಮೇಲೆ ಬಿಸಾಡಲಾಗಿತ್ತು. ಆಘಾತಗೊಂಡು ಅಳುತ್ತಿದ್ದ ಮಗು ಮೇನಕಾ, ಯುವರಾಜ್ ಮತ್ತು ಭೂಪತಿಗೆ ಕರೆ ಮಾಡಿ ದುರಂತದ ಬಗ್ಗೆ ತಿಳಿಸಿತು. ಮೂವರು ಸ್ಥಳಕ್ಕೆ ಧಾವಿಸಿದರು. ಜಾತಿ ವೈಷಮ್ಯದಿಂದ ಅವರ ಜೀವನದಲ್ಲಿ ಸಂತೋಷ ಮತ್ತು ಪ್ರೀತಿ ಶಾಶ್ವತವಾಗಿ ಕಳೆದುಹೋಯಿತು.
ಇದನ್ನೂ ಓದಿ: ಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ’
ಮೇನಕಾ ಮತ್ತು ಯುವರಾಜ್ ದೂರು ನೋಡೊ ಪ್ರಕರಣ ದಾಖಲಿಸಿದ್ದಾರೆ. ಭಾರತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ದಲಿತರಿಗೆ ನ್ಯಾಯಕೊಡಿಸುವಲ್ಲಿ ಸತತವಾಗಿ ಸೋತಿದೆ. ಭಾರತದ ಇತಿಹಾಸ ಪುಟದಲ್ಲಿ ಬೆಳಕಿನಿಂದ ಹೊಳೆಯುತ್ತಿರುವ ದೀಪಾವಳಿಗಳು ದಲಿತರ ಬಾಳಿನಲ್ಲಿ ಕೇವಲ ಕತ್ತಲನ್ನು ಮಾತ್ರ ಉಳಿಸುತ್ತಿವೆ.


