Homeಅಂಕಣಗಳುಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

ಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

- Advertisement -
- Advertisement -

“ಬೆಳಗಾವಿ ಸೇರಿದಂತೆ ಮರಾಠಿ ಮಾತಾಡುವ ನಾಲ್ಕು ಜಿಲ್ಲೆಗಳ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಇಂದಲ್ಲಾ ನಾಳೆ ಇದು ಆಗಲೇಬೇಕು (ಝಾಲಚ ಪಾಹೀಜೆ)” ಎನ್ನುವ ಘೋಷವಾಕ್ಯ ಗಡಿ ನಗರ ಬೆಳಗಾವಿಯಲ್ಲಿ ಚುನಾವಣೆ ಬಂದಾಗೊಮ್ಮೆ ಮೊಳಗುತ್ತದೆ. ಇದು ಸುಮಾರು 66 ವರ್ಷಗಳಿಂದ ನಡೆಯುತ್ತಿದೆ.

ಗಡಿ ಆಚೆಯ ಹೋರಾಟಗಾರರು ಹಾಗೂ ಈಚೆಗಿನ ಹೋರಾಟಗಾರರಿಗೆ ಜಟಾಪಟಿ ಶುರು ಆಗುತ್ತದೆ. ಆದರೆ ಅವರಿಬ್ಬರೂ ತಮ್ಮತಮ್ಮ ಸಿಟ್ಟನ್ನು ಬಡಪಾಯಿ ಬಸ್ಸುಗಳ ಮೇಲೆ ತೀರಿಸಿಕೊಳ್ಳುತ್ತಾರೆ. ಮೊದಲೇ ಸೊರಗಿಹೋಗಿರುವ ಮಹಾರಾಷ್ಟ್ರದ ಬಸ್ಸುಗಳು ಇನ್ನಷ್ಟು ಶಕ್ತಿಹೀನವಾಗಿ ಕುಟುಕುಟು ಓಡಾಡತೊಡಗುತ್ತವೆ. ಸೂಪರ್ ಸ್ಟಾರ್ ರಜನಿ ಅವರ ಪಾದಧೂಳು ಸೋಕಿದ ಬೆಂಗಳೂರಿನ ಮೆಜೆಸ್ಟಿಕ್ ಟು ಜೆಪಿ ನಗರವೆಂಬೋ ರೂಟಿನಲ್ಲಿ ಜಮ್‌ಜಮ್ ಅಂತ ಓಡಾಡಿ ನಂತರ ರಿಟೈರ್ ಆಗಿ ಕಲ್ಯಾಣ ಕರ್ನಾಟಕಕ್ಕೆ ಬಂದ ಕೆಂಪು ಬಸ್ಸುಗಳು ಇಲ್ಲಿ ಮೂತಿಗೆ ಮಸಿ ಬಳಿಸಿಕೊಳ್ಳುತ್ತವೆ; ರಾತ್ರಿ ಕತ್ತಲಾದ ಮೇಲೆ ಬೆಳಗಾವಿಗೆ ಬಂದು ಬಸ್ ನಿಲ್ದಾಣದ ಮೂಲೆಯಲ್ಲಿ ಯಾರಿಗೂ ಕಾಣದಂತೆ ನಿಂತುಕೊಳ್ಳುತ್ತವೆ. “ನಮ್ ಬ್ಯಾಂಗ್‌ಲೋರ್‌ನಲ್ಲಿ ಎಷ್ಟು ಚೆನ್ನಾಗಿದ್ದೆ, ಯಾರೋ ಕೆಟ್ಟ ಆಫೀಸರ್‌ಗಳು ನನ್ನನ್ನ ಜುಜುಬಿ ಒಂದು ಲಕ್ಷಕ್ಕೆ ಇಲ್ಲಿಗೆ ಮಾರ್‌ಬುಟ್ರೂ” ಅಂತ ಪಕ್ಕದ ಬಸ್ಸಿಗೆ ಗೋಳು ಹೇಳುತ್ತಾ, ಕಣ್ಣಿನಿಂದ ಕಪ್ಪಾಗಿ ಹೋದ ಇಂಜಿನ್ ಆಯಿಲ್ ಸುರಿಸುತವೆ.

ಸ್ಥಳೀಯ ‘ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ’ ಎನ್ನುವ ಪಕ್ಷ ಪ್ರತಿ ಬಾರಿ ಬಿಸಿರಕ್ತದ ತರುಣರನ್ನು ಕೆಣಕುತ್ತದೆ. ಅವರು ಕರ್ನಾಟಕ ಏಕೀಕರಣದ ದಿವಸ ‘ಕಾಳಾ ದಿನ್’ ಆಚರಿಸುತ್ತಾರೆ. ಪಾದಯಾತ್ರೆ, ಸೈಕಲ್ ಯಾತ್ರೆ ನಡೆಸುತ್ತಾರೆ. ಹಿರಿಯ ಪೊಲೀಸು ಅಧಿಕಾರಿಗಳು ಸುತ್ತಮುತ್ತಲಿನ ಜಿಲ್ಲೆಗಳ ಪೊಲೀಸರನ್ನು ಕರೆಸಿ ದೊಡ್ಡದೊಡ್ಡ ಬ್ಯಾರಿಕೇಡ್‌ಗಳನ್ನು ಹಾಕಿಸಿ, ರಾಜ್ಯೋತ್ಸವದ ಮೆರವಣಿಗೆ ಹಾಗೂ ಕಪ್ಪು ವಸ್ತ್ರಧಾರಿಗಳ ಯಾತ್ರೆ ಎರಡೂ ಒಂದಕ್ಕೊಂದು ಭೇಟಿ ಆಗದ ಹಾಗೆ ನೋಡಿಕೊಳ್ಳುತ್ತಾರೆ.

‘ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಾಗ ಬೇರೆಯವರ ಎಲೆಯಲ್ಲಿ ನೊಣ ಹೊಡೆಯುವ’ ಮಹಾರಾಷ್ಟ್ರದ ಕೆಲ ರಾಜಕಾರಣಿಗಳು ಬೆಳಗಾವಿಯ ವಿಷಯ ಬಂದಾಗ ಮುಂಬೈ ಬಿಟ್ಟು ಓಡೋಡಿ ಬರುತ್ತಾರೆ. ಇಲ್ಲಿ ಬಂದು ಬಂದ್, ಧರಣಾ, ಕರ್ಫ್ಯು ಮುಂತಾದವುಗಳನ್ನು ಪ್ರಾಯೋಜಿಸುತ್ತಾರೆ. ಆದರೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಭಯಂಕರ ಭಾಷಣ ಬಿಗಿಯುವ ಗಡಿ ಜಿಲ್ಲೆಯ ನಾಯಕರು ಗಡಿ ಸಮಸ್ಯೆ ಬಂದಾಗ ಬಾಯಲ್ಲಿರುವ ಅವಲಕ್ಕಿ ಚಪ್ಪರಿಸುತ್ತಾ ಮಿರ್ಚಿ-ಭಜಿಯ ಬಗ್ಗೆ ಚರ್ಚೆ ನಡೆಸುತ್ತಾ ಇರುತ್ತಾರೆ. ಇದೇ ನಾಯಕರು, ತಮ್ಮ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಇದ್ದಾಗ ಮುಂಬಯಿಗೆ ಹೋಗಿ ಅಲ್ಲಿನ ನೇತಾರರನ್ನು ಅಣ್ಣಾ-ಅಕ್ಕಾ ಎಂದು ಓಲೈಸಿ ಕೆಲಸ ಮಾಡಿಸಿಕೊಳ್ಳುತ್ತಾರೆ.

ಗಡಿ ಆಚೆ-ಈಚಿನ ನಾಯಕರು ತಮ್ಮ ಅನುಕೂಲಸಿಂಧು ರಾಜಕಾರಣದಿಂದಾಗಿ ಕನ್ನಡಿಗರು-ಮರಾಠಿಗರು ಒಬ್ಬರು ಇನ್ನೊಬ್ಬರನ್ನು ಸಂಶಯದಿಂದ ನೋಡುವ ಸನ್ನಿವೇಶ ಸೃಷ್ಟಿಸಿಬಿಟ್ಟಿದ್ದಾರೆ.

ಹಿಂದೆಲ್ಲಾ ಹೀಗಿರಲಿಲ್ಲ. ಗಾಂಧೀಜಿ ಅವರ ಯಂಗ್ ಇಂಡಿಯಾದಿಂದ ಪ್ರೇರಣೆ ಪಡೆದು ಬಾಬುರಾವ್ ಠಾಕೂರ್ ಅವರು ತರುಣ್ ಭಾರತ ಅನ್ನುವ ನಾಲ್ಕು ಪುಟಗಳ ಪತ್ರಿಕೆ ಶುರು ಮಾಡಿದರು. ಅದು ಎರಡು ಪುಟ ಕನ್ನಡ ಹಾಗೂ ಎರಡು ಪುಟ ಮರಾಠಿ ಇತ್ತು. ಹೀಗೆ ಕೆಲವು ವರ್ಷ ನಡೆಯಿತು. ಆದರೆ 1956ಕ್ಕೆ ರಾಜ್ಯ ಮರು ವಿಂಗಡಣೆ ಆದಾಗ ಅದರ ಸಂಪಾದಕೀಯ ದೃಷ್ಟಿ ಬದಲಾಯಿತು. ಅದು ಸಂಪೂರ್ಣ ಮರಾಠಿ ಪತ್ರಿಕೆ ಆಯಿತು. ಬೆಳಗಾವಿ ಸೇರಿದಂತೆ ಇತರ ಮರಾಠಿ ಬಹುಸಂಖ್ಯಾತ ಪ್ರದೇಶಗಳು ಮಹಾರಾಷ್ಟ್ರ ಸೇರಲೇಬೇಕು ಎನ್ನುವ ಏಕಮೇವ ಅಜೆಂಡಾವನ್ನು ಪತ್ರಿಕೆ ಅಳವಡಿಸಿಕೊಂಡಿತು. ಈಗಲೂ ಅದೇ ನಡೆಯುತ್ತಿದೆ. ಅವರ ಮಗ ಕಿರಣ್ ಠಾಕೂರ್ ಈಗ ಆ ಪತ್ರಿಕೆಯ ಸಂಪಾದಕರು. ಅವರು ದೇಶದಲ್ಲಿನ ಅತಿ ದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಒಂದರ ಮಾಲೀಕರು. ತಮ್ಮ ತಂದೆಯಿಂದ ಬಳುವಳಿ ಪಡೆದ ಪತ್ರಿಕೋದ್ಯಮ ಅಲ್ಲದೇ ಇನ್ನೂ ಅನೇಕ ವ್ಯವಹಾರ-ವ್ಯಾಪಾರಗಳನ್ನು ಅವರು ನಡೆಸುತ್ತಿದ್ದಾರೆ. ನೆನಪಾದಾಗ ಒಮ್ಮೆ ಮುಂಬಯಿಯ ಮಂತ್ರಾಲಯಕ್ಕೆ ಹೋಗಿ ಅಲ್ಲಿನ ತಮ್ಮ ದೇವರ ದರ್ಶನ ಮಾಡಿ, ಗಡಿ ವಿವಾದ ಇನ್ನೂ ಶತಮಾನಗಳವರೆಗೆ ಮುಂದುವರೆಯಲಿ, ನಮ್ಮ ಕೈ ತುಂಬಾ ಕೆಲಸ ಇರಲಿ ಎಂದು ಪ್ರಾರ್ಥಿಸಿ ಬರುತ್ತಾರೆ.

ಇದಕ್ಕೆಲ್ಲ ರಾಜ್ಯ ಮರು ವಿಂಗಡನಾ ಆಯೋಗದ ಶಿಫಾರಸು ಕಾರಣ ಅಂತ ಮರಾಠಿ ಹೋರಾಟಗಾರರು ಹೇಳುತ್ತಾರೆ. ಆದರೆ ಪ್ರಧಾನಿ ನೆಹರು ಅವರು ನೇಮಿಸಿದ ಮೊದಲ ಆಯೋಗ ರಾಜ್ಯಗಳನ್ನು ಭಾಷಾ ಆಧಾರದ ಮೇಲೆ ವಿಂಗಡಣೆ ಮಾಡಿ ಅಂತ ಹೇಳಲಿಲ್ಲ. ಭಾಷೆ- ಪ್ರದೇಶ ಮುಂತಾದ ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ರಾಜ್ಯ ಮರು ನಿರ್ಮಾಣ ಆಗಬಾರದು. ಅದು ರಾಜಧಾನಿಗೆ ಇರುವ ಅಂತರ, ಆಡಳಿತಾತ್ಮಕ ಅನುಕೂಲ, ಮೂಲ ಸೌಕರ್ಯಗಳ ಇರುವಿಕೆ-ಅಗತ್ಯ, ಜನಸಂಖ್ಯೆ ಇತ್ಯಾದಿ ಅಂಶಗಳ ಆಧಾರದ ಮೇಲೆ ನಿರ್ಧಾರ ಆಗಬೇಕು ಎಂದು ಆ ಸಮಿತಿಯ ತಜ್ಞರು ಹೇಳಿದರು. ಆಂಧ್ರದ ಭಾಷಾ ಪ್ರೇಮಿ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಅವರು ಯಶಸ್ವಿ ಆಮರಣ ಉಪವಾಸ ಮಾಡಿದ ಮೇಲೆ ಪ್ರಧಾನಿ ಕಚೇರಿಯ ಮೇಲೆ ಒತ್ತಡ ಹೆಚ್ಚಾಗಿ ಎರಡನೇ ಆಯೋಗ ನೇಮಕ ಆಯಿತು. ಇವರು ಒಂದು ಭಾಷೆ ಮಾತಾಡುವವರು ಒಂದು ಕಡೆ ಎನ್ನುವ ತತ್ವದ ಮೇಲೆ ರಾಜ್ಯ ವಿಂಗಡಣೆ ಮಾಡಿದರು. ಆದರೂ ಒಂದೇ ಭಾಷೆ ಮಾತಾಡುವ ನಾಲ್ಕು ರಾಜ್ಯಗಳನ್ನು ಸೃಷ್ಟಿ ಮಾಡಿದರು. ಇರಲಿ.

ಇದನ್ನೂ ಓದಿ: ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

ಅದನ್ನು ಒಪ್ಪದ ಅಂದಿನ ಮಹಾರಾಷ್ಟ್ರ ಸರಕಾರ, ಕೇಂದ್ರಕ್ಕೆ ಮೊರೆಹೋಯಿತು. ಆಗ ಸರಕಾರ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ, ಕಾಶ್ಮೀರ ಮೂಲದವರಾದ ಮಿಹಿರ ಚಂದ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತು.

ಒಂದೇ ಭಾಷೆ ಮಾತಾಡುವರು ಒಂದೇ ಕಡೆ ಇರಲಿ ಎನ್ನುವ ತತ್ವ ಒಪ್ಪುವುದಾದರೆ ಬೆಳಗಾವಿ ಹಾಗೂ ಇತರ ಕೆಲವು ಪ್ರದೇಶ ಮಹಾರಾಷ್ಟ್ರಕ್ಕೆ ಹೋಗಲಿ, ಮಹಾರಾಷ್ಟ್ರದ ಕೆಲವು ತಾಲೂಕುಗಳು ಕರ್ನಾಟಕಕ್ಕೆ ಬರಲಿ ಎಂದು ಮಹಾಜನ್ ಆಯೋಗ ಶಿಫಾರಸು ಮಾಡಿತು. ಇದನ್ನು ಒಪ್ಪದ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟಿಗೆ ಹೋಯಿತು. ಅದರ ಕೊನೆಯ ವಾದ ವಿವಾದದ ತಾರೀಕು ನವೆಂಬರ್ 30. ತೀರ್ಪು ಬರುವುದು ಇನ್ನೂ ತಡ ಆಗಬಹುದು.

ಆಯಿತು. ಈಗ ಒಂದು ಭಾಷೆ ಮಾತಾಡುವವರು ಒಂದೇ ಕಡೆ ಇರಲಿ ಎನ್ನುವ ಬೇಡಿಕೆಯಲ್ಲಿ ಏನು ತಪ್ಪಿದೆ? ತಪ್ಪೇನೂ ಇಲ್ಲ. ಆದರೆ ಅದು ಭಾಷಾ ಗಣತಿಯ ಮೇಲೆ ಅವಲಂಬಿತವಾಗಿರಬೇಕೆ ಹೊರತು, ಚುನಾವಣೆ ಪೂರ್ವದಲ್ಲಿ ವಿವಿಧ ಜಾತಿ ನಾಯಕರು ತಮ್ಮತಮ್ಮ ಜಾತಿಯ ಸಂಖ್ಯೆಯ ಬಗ್ಗೆ ಮಾತಾಡುವ ತಳ ಬುಡವಿಲ್ಲದ ಮಾತುಗಳಂತೆ ಸುಳ್ಳಾಗಿರಬಾರದು.

ಇನ್ನೊಂದು, ಇದು ಸಾಂಸ್ಕೃತಿಕ ಹೋರಾಟ ಆಗಬೇಕೇ ಹೊರತು, ರಾಜಕೀಯ ಹೋರಾಟ ಆಗಬಾರದು. ಈಗ ಆಗುತ್ತಿರುವುದು ಎರಡನೆಯದು. ಇನ್ನೊಂದು ದುಃಖಕರ ಸಂಗತಿ ಅಂದರೆ ಇದರ ಚರ್ಚೆ ಆರೋಗ್ಯಕರವಾಗಿ ಆಗುತ್ತಿಲ್ಲ. ಮರಾಠಿ ಪತ್ರಿಕೆಗಳು ಕರ್ನಾಟಕವನ್ನು ‘ಕರ್ ನಾಟಕ’ ಅಂತ ಕರೆಯುವುದೂ, ಕನ್ನಡ ಪತ್ರಿಕೆಗಳು ಮರಾಠಿ ಹೊರಟಗಾರರನ್ನು ‘ನಾಡದ್ರೋಹಿಗಳು’, ‘ಕಂಗಾಲ ಕಂಪನಿ’ ಅಂತ ಕರೆಯುವುದು, ನಡೆದೇ ಇರುತ್ತದೆ.

ಗಡಿಯ ಮರಾಠಿ ಹೋರಾಟಗಾರರು ಕರ್ನಾಟಕ ಏಕೀಕರಣ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ ಅನ್ನುವುದನ್ನು ಘೋರವಾಗಿ ಖಂಡಿಸಲಾಗುತ್ತದೆ. ಆದರೆ ಕಾಸರಗೋಡು ಕನ್ನಡಿಗರು ಕರ್ನಾಟಕ ಸೇರಲು ಬಯಸುತ್ತಿದ್ದಾರೆ ಎನ್ನುವ ಮಾತುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತದೆ. ನಮಗೆ ಇದು ಸರಿ ಎನ್ನಿಸಿದರೂ ಹೊರಗಿನಿಂದ ನೋಡುವವರಿಗೆ ಕನ್ನಡಿಗರದು ಇಬ್ಬಗೆ ನೀತಿ ಅನ್ನಿಸಬಹುದು.

ಕೊನೆಯದಾಗಿ, ಯಾವ ರಾಜ್ಯವೂ ಇನ್ನೊಂದು ರಾಜ್ಯಕ್ಕೆ ತನ್ನ ಪ್ರದೇಶವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಈ ಐಡಿಯಾ ಪ್ರಾಯೋಗಿಕವಲ್ಲ ಎನ್ನುವುದು ಅನೇಕರಿಗೆ ಗೊತ್ತಿದೆ. ಅದನ್ನು ಜೋರಾಗಿ ಪ್ರತಿಪಾದಿಸುವವರಿಗೂ ಅದು ಗೊತ್ತಿರಬಹುದು. ಅವರು ಜೋರಾಗಿ ಹೇಳುತ್ತಿಲ್ಲ ಅಷ್ಟೇ. ಭಾಷೆಯ ಹೆಸರಿನಲ್ಲಿ ಮನೆ ಮಠ ಬಿಟ್ಟು, ಬಸ್ಸಿಗೆ ಮಸಿ ಹಚ್ಚುವ ಹುಡುಗರಿಗೆ ಇದು ಗೊತ್ತಾಗುತ್ತಿಲ್ಲ.

ಭಾಷಾ ಜಗಳ ಅನ್ನುವುದು ಅಂತಾರಾಷ್ಟ್ರೀಯ ಸಮಸ್ಯೆ. ಕೆನಡಾ ದೇಶದ ಕೇಬೇಕ ಪ್ರಾಂತದವರು ಫ್ರೆಂಚ್ ಮಾತಾಡುತ್ತಾರೆ. ಫ್ರಾನ್ಸ್ ದೇಶಕ್ಕೆ ಸೆಡ್ಡು ಹೊಡೆದು ಫ್ರೆಂಚ್ ಸಿನಿಮಾ ತಯಾರಿಸುತ್ತಾರೆ. ಟರ್ಕಿಯ ಅನೇಕ ಪ್ರದೇಶಗಳಲ್ಲಿ ಅರ್ಧ ಜನ ಒಂದು, ಇನ್ನರ್ಧ ಜನ ಇನ್ನೊಂದು ಭಾಷೆ ಮಾತಾಡುತ್ತಾರೆ. ಎಲ್ಲಾ ಹೋಗಲಿ, ಆಫ್ರಿಕಾದ ಉಬಾಂಗ ಪ್ರದೇಶದಲ್ಲಿ ಗಂಡು ಮಕ್ಕಳು ಬೇರೆ- ಹೆಣ್ಣು ಮಕ್ಕಳು ಬೇರೆ ಭಾಷೆ ಮಾತಾಡುತ್ತಾರೆ.

ಭಾಷೆ ನಮ್ಮನ್ನು ಜೋಡಿಸುವ ಉಪಕರಣ ಆಗಬೇಕೇ ಹೊರತು ಸ್ವಾರ್ಥ ಸಾಧನೆಯ ರಾಜಕಾರಣಿಗಳ ಆಯುಧವಾಗಬಾರದು; ವಿವಿಧ ಭಾಷೆ ಮಾತಾಡುವ, ನೆರೆ ಹೊರೆಯಲ್ಲಿ ಜೀವಿಸುವ ಅಣ್ಣ ತಮ್ಮಂದಿರನ್ನು ಪರಸ್ಪರ ವಿರೋಧಿಗಳನ್ನಾಗಿಸುವ ಹತಾರವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...