ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಕಥನ ಶೈಲಿಯ ಮೂಲಕ ಗಮನ ಸೆಳೆದವರು ‘ಅಂಜಲಿ ಮೆನಾನ್’. ‘ಬೆಂಗಳೂರ್ ಡೇಸ್’, ‘ಕೂಡೆ’, ‘ಕೇರಳ ಕೆಫೆ’, ‘ಉಸ್ತಾದ್ ಹೋಟೆಲ್’ನಂತಹ ಸಿನಿಮಾಗಳ ರೈಟರ್ ಆಗಿರುವ ಅಂಜಲಿಯವರು, ಎಲೈಟ್ ವರ್ಗದ ಹಿನ್ನೆಲೆಯಲ್ಲಿ ಪಾತ್ರಗಳನ್ನು ಚಿತ್ರಿಸುವುದನ್ನು ಸಾಮಾನ್ಯವಾಗಿ ಕಾಣಬಹುದು. ಪಾತ್ರಗಳು ಎಲೈಟ್ ಹಿನ್ನೆಲೆಯಲ್ಲಿದ್ದರೂ ಎಲ್ಲ ಮನುಷ್ಯರನ್ನು ಸ್ಪರ್ಶಿಸಬಲ್ಲ ವರ್ಗಾತೀತ ಅನುಭವವೊಂದನ್ನು ಅಂಜಲಿಯವರು ತಮ್ಮ ಕತೆಗಳೊಳಗೆ ತರುವ ಪ್ರಯತ್ನ ಮಾಡುವುದು ಗಮನಾರ್ಹ. ಅಂಥದ್ದೇ ಮತ್ತೊಂದು ಸಿನಿಮಾ ಕತೆಯನ್ನು ಬರೆದು, ಅವರೀಗ ನಿರ್ದೇಶಿಸಿದ್ದಾರೆ.
ಅಂಜಲಿ ಮೆನಾನ್ ನಿರ್ದೇಶನದ ಇತ್ತೀಚಿನ ಸಿನಿಮಾ ‘ವಂಡರ್ ವುಮೆನ್’ (ಇಂಗ್ಲಿಷ್) ‘ಸೋನಿಲೈವ್’ನಲ್ಲಿ ಸ್ಟ್ರೀಮ್ ಆಗುತ್ತಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ‘ವಂಡರ್ ವುಮೆನ್’ ತಾಯ್ತನ, ಗರ್ಭಿಣಿಯರ ಕಷ್ಟಸುಖದ ಸುತ್ತ ಸಾಗುತ್ತದೆ. ನವಿರಾದ ಸಂಭಾಷಣೆಯು ಹಿತವೆನಿಸುತ್ತದೆ ಹಾಗೂ ಕೆಲವು ಗಂಭೀರ ಚಿಂತನೆಗಳಿಗೆ ಅವಕಾಶ ನೀಡಿದೆ.
ಆರು ಮಂದಿ ತುಂಬು ಗರ್ಭಿಣಿಯರು ‘ಪ್ರಸವ ಪೂರ್ವ ತರಗತಿ’ಗೆ ಸೇರುತ್ತಾರೆ. ತಮ್ಮ ಮುಂದಿರುವ ಸವಾಲುಗಳನ್ನು ನಿವಾರಿಸಿಕೊಂಡು, ಪ್ರಸವ ವೇದನೆಯನ್ನು ಮೀರಿ ತಾಯ್ತನದ ನೆಮ್ಮದಿಯನ್ನು ಪಡೆಯುವುದು ಇಂತಹ ತರಗತಿ/ತರಬೇತಿಯ ಉದ್ದೇಶ. ಆರು ಮಂದಿ ಗರ್ಭಿಣಿಯರ ಹಿನ್ನೆಲೆಯೂ ವಿಭಿನ್ನ. ಅವರೆಂದರೆ- ಸಂಪ್ರದಾಯವಾದಿ ಹಿಂದೂ ಕುಟುಂಬದ ಮಹಿಳೆ, ಕ್ರಿಶ್ಚಿಯನ್ ಮಹಿಳೆ, ಪ್ರಸವ ಪೂರ್ವ ತರಬೇತಿ ನೀಡುವ ತಜ್ಞೆಯೊಂದಿಗೆ ಇರುವ ಕೆಲಸದಾಕೆ, ಲಿವಿಂಗ್ ಟುಗೆದರ್ ಮೂಲಕ ಜೀವನ ನಡೆಸುತ್ತಿರುವಾಕೆ, ಸಿಂಗಲ್ ಪೇರೆಂಟ್ (ಅಂದರೆ- ಪ್ರಸವ ಪೂರ್ವದಲ್ಲಿ ವಿಚ್ಛೇದನಾ ಪಡೆದಿರುವ ಮುಸ್ಲಿಂ ಮಹಿಳೆ), ಈಗಾಗಲೇ ಎರಡು ಸಲ ಗರ್ಭಪಾತವಾಗಿ ತಾಯ್ತನಕ್ಕಾಗಿ ಹಂಬಲಿಸುತ್ತಿರುವ ಮರಾಠಿ ಮೂಲದ ಮಹಿಳೆ.

ಪ್ರತಿ ಹೆಣ್ಣಿನ ಹಿಂದೆಯೂ ಇರುವ ಸುಖ- ದುಃಖದ ಅನಾವರಣ ಮಾಡುತ್ತಾ, ಒಬ್ಬೊರ ದುಃಖದಲ್ಲಿ ಇನ್ನೊಬ್ಬರು ಸಹಭಾಗಿಯಾಗಿ ಸಂತ್ವಾನ ಮೆರೆಯುತ್ತಾ ಸುಖ್ಯಾಂತ್ಯದಲ್ಲಿ ಕತೆ ಮುಗಿಯುತ್ತದೆ. ಗರ್ಭಿಣಿ ಮಹಿಳೆಯರು ಎದುರಿಸುವ ಸವಾಲು, ಭಯ, ಆತಂಕ, ತಾಯಿ ಮತ್ತು ಮಗುವಿನ ಪಾಲನೆಯಲ್ಲಿ ಗಂಡ ಹಾಗೂ ಕುಟುಂಬದ ಜವಾಬ್ದಾರಿ- ಇತ್ಯಾದಿಗಳ ವಿಷಯಗಳನ್ನು ಸೂಕ್ಷ್ಮವಾಗಿ ಕತೆ ಚರ್ಚಿಸುತ್ತದೆ.
ಶ್ರೇಣೀಕೃತ ಪುರುಷಾಧಿಪತ್ಯದ ಪ್ರಶ್ನೆಯನ್ನು ಗಂಭೀರವಾಗಿಯಲ್ಲದಿದ್ದರೂ ಖೋ ಖೋ ಆಟದಂತೆ ಸ್ಪರ್ಶಿಸಿ ಕಥೆ ಮುಂದೆ ಸಾಗುತ್ತದೆ. ಎಲ್ಲರ ಹಿಂದೆಯೂ ಕಷ್ಟಗಳಿವೆ ಎಂಬ ಸಿದ್ಧಸೂತ್ರವನ್ನು ಹೆಣೆದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮಾದರಿಯನ್ನು ಇಲ್ಲಿ ಕಾಣಬಹುದು. ತಾಯಿ ಮತ್ತು ಮಗುವಿನ ಪಾಲನೆಗಿರುವ ತೊಡರುಗಳನ್ನು ಪರಿಹರಿಸಿಕೊಳ್ಳುವತ್ತ ಕಥೆಯನ್ನು ಕೇಂದ್ರೀಕರಿಸಲಾಗಿದೆ.
ಮಲಯಾಳಂ, ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಕನ್ನಡ ಭಾಷಾ ಹಿನ್ನೆಲೆಯ ಇಲ್ಲಿನ ಪಾತ್ರಗಳು ಮುಖ್ಯವಾಗಿ ವ್ಯವಹಿಸುವುದು ‘ಇಂಗ್ಲಿಷ್’ ಮೂಲಕ. ಭಾವನೆಗಳ ಹಂಚಿಕೆಗೆ ಭಾಷೆ ಮುಖ್ಯವಲ್ಲ ಎಂಬ ಎಚ್ಚರಿಕೆಯನ್ನು ಇಂಗ್ಲಿಷ್ ಭಾರದಿರುವ ಮರಾಠಿ ಮಹಿಳೆಯ ಮೂಲಕ ಹೇಳಲು ಹೊರಟಿರುವುದನ್ನು ಗಮನಿಸಬಹುದು.
ಎಲೈಟ್ ವರ್ಗಗಳನ್ನು ಪ್ರತಿನಿಧಿಸುತ್ತಿರುವ ಇಲ್ಲಿನ ಪಾತ್ರಗಳೊಳಗೆ, ಪ್ರಸವ ಪೂರ್ವ ತರಬೇತಿ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಗರ್ಭಿಣಿಯನ್ನು ಒಳಗೊಳ್ಳುವ ಮೂಲಕ- ವರ್ಗ ಪ್ರಣೀತ ಚೌಕಟ್ಟನ್ನು ಮೀರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆದರೆ ಇದು ಸಾಂಕೇತಿಕವೆನಿಸುತ್ತದೆಯೇ ಹೊರತು, ಇಂತಹ ತರಬೇತಿಗಳೆಲ್ಲ ಎಲೈಟ್ ವರ್ಗವನ್ನೇ ಪ್ರತಿನಿಧಿಸುತ್ತವೆ ಎಂಬುದು ವಾಸ್ತವ. ಪ್ರಸವ ಪೂರ್ವದಲ್ಲಿ ಈ ರೀತಿಯ ಮುಂಜಾಗ್ರತೆ ಎಲ್ಲ ಹಿನ್ನೆಲೆಯ ಮಹಿಳೆಯರಿಗೆ ಅಗತ್ಯ ಎಂಬುದನ್ನು ತಳ್ಳಿಹಾಕಲಾಗದು.
ಸರ್ ನೇಮ್‌ನಿಂದ ಗುರುತಿಸಿಕೊಳ್ಳಬೇಕು ಎಂಬ ಸಂಪ್ರದಾಯವಾದಿ ಕುಟುಂಬದ ಹಿನ್ನೆಲೆಯ ಅತ್ತೆಯ ಪಾತ್ರವೊಂದನ್ನು ಇಲ್ಲಿ ಬರುತ್ತದೆ. ತನ್ನ ಸೊಸೆ ಗಂಡನ ಹೆಸರಿನಿಂದ ಗುರುತಿಸಿಕೊಳ್ಳದಿದ್ದರೆ ಮಹಾಪರಾಧ ಎಂಬಂತೆ ಈ ಪಾತ್ರ ವರ್ತಿಸುತ್ತದೆ. ಹೆಣ್ಣಿನ ಭಾವನೆಗಳು ಮತ್ತು ತಾಯ್ತನದ ಕುರಿತು ಗಂಡಿನಲ್ಲಿ ತಿಳಿವಳಿಕೆಯ ಕೊರತೆ ಇದೆ ಎಂಬುದನ್ನು ಮನಗಾಣಿಸುವ ಪ್ರಯತ್ನವಾಗಿ ಸಂಪ್ರದಾಯವಾದಿ ಕುಟುಂಬದ ಮಹಿಳೆಯ ಗಂಡನನ್ನು ಪುರುಷಾಧಿಪತ್ಯ ವ್ಯವಸ್ಥೆಯ ಪ್ರತಿನಿಧಿಯಂತೆ ಚಿತ್ರಿಸಲಾಗಿದೆ. ಉಳಿದೆಲ್ಲ ಗಂಡಸರ ಪಾತ್ರಗಳಿಗಿಂತ ಪ್ರತಿಗಾಮಿಯಂತೆ ತೋರುವ ಈ ಪಾತ್ರವು ಮನಃಪರಿವರ್ತನೆಯಾಗಲು ಹೆಚ್ಚು ಸಮಯ ಬೇಡುವುದಿಲ್ಲ. ಸಂಪ್ರದಾಯನಿಷ್ಠ ಅತ್ತೆಯ ಪಾತ್ರವೂ ಹೀಗೆಯೇ ಬದಲಾಗುತ್ತದೆ. ಪಾತ್ರಗಳ ಮಾನಸಿಕತೆಯ ಬದಲಾವಣೆಯಲ್ಲಿ ಧಾವಂತ ಎದ್ದು ಕಾಣುತ್ತದೆ.
ಇದನ್ನೂ ಓದಿರಿ: ಮುಂದಿನ ಸಲ ಗಂಭೀರವಾಗಿ ಸಂಶೋಧನೆ ಮಾಡಿ: ಅಗ್ನಿಹೋತ್ರಿಗೆ ಅನುರಾಗ್ ಕಶ್ಯಪ್ ಸಲಹೆ
ವಿಚ್ಛೇದನಾ ಪಡೆಯುತ್ತಿರುವ ಗರ್ಭಿಣಿಯನ್ನು ‘ಮುಸ್ಲಿಂ’ ಸಮುದಾಯದ ಭಾಗವಾಗಿ ಚಿತ್ರಿಸಿರುವುದು ಕತೆಯ ಆಶಯಕ್ಕೆ ಚ್ಯುತಿ ಬರುವಂತಿದೆ. ಪುರುಷಾಧಿಪತ್ಯ ಹಾಗೂ ಹೆಣ್ಣನ್ನು ಭೋಗಿಸುವವರು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ಪಿತೂರಿ ವ್ಯವಸ್ಥೆಯು ಅಲ್ಪಸಂಖ್ಯಾತ ಸಮುದಾಯವನ್ನು ಮಾತ್ರ ಕಟಕಟೆಯಲ್ಲಿ ನಿಲ್ಲುಸುತ್ತದೆ. “ಹೆಣ್ಣನ್ನು ಭೋಗಿಸಿ, ವಂಚಿಸುವ ಧರ್ಮಾಂಧರಿವರು” ಎಂಬಂತೆ ಕತೆಗಳನ್ನು ಹಬ್ಬಿಸಿ, ದ್ವೇಷವನ್ನು ಹರಡುವ ಮೂಲಭೂತವಾದಿ ವ್ಯವಸ್ಥೆಯನ್ನು ಇಂದು ಕಾಣುತ್ತಿದ್ದೇವೆ. ಹೀಗಾಗಿ ಸಿಂಗಲ್ ಪೇರೆಂಟ್ ಗರ್ಭಿಣಿಯನ್ನು ಮುಸ್ಲಿಂ ಎಂದು ಬಿಂಬಿಸುವುದು- ಸದ್ಯದ ರಾಜಕೀಯ ಪಿತೂರಿಗೆ ಇಂಬು ನೀಡಿದಂತಾಗುತ್ತದೆ. ಹೀಗಾಗಿ ಈ ಪಾತ್ರದ ಸುತ್ತ ಬಹುಸಂಖ್ಯಾತ ರಾಜಕೀಯ ಪ್ರಣೀತ ಪ್ರಶ್ನೆ ಏಳದಂತೆ ಅಂಜಲಿಯವರು ಎಚ್ಚರ ವಹಿಸಬೇಕಿತ್ತು. ಸಿಂಗಲ್ ಪೇರೆಂಟ್- ಬಹುಸಂಖ್ಯಾತ ಹಿನ್ನೆಲೆಯವಳೆನ್ನುವುದಕ್ಕಿಂತ ಅಲ್ಪಸಂಖ್ಯಾತಳಾಗಿ ಚಿತ್ರಿತವಾದರೆ ಅಲ್ಲಿ ಹುಟ್ಟುವ ರಾಜಕೀಯ ತರಂಗಳು ಬೇರೆಬೇರೆಯಾಗುತ್ತವೆ. ಈ ಚರ್ಚೆಯು ಎರಡಗಲಿನ ಕತ್ತಿಯೆಂಬುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.
ನವಿರಾದ ಹಾಗೂ ಸುಖ್ಯಾಂತದಲ್ಲಿ ಮುಗಿಯುವ ‘ವಂಡರ್ ವುಮೆನ್’- ತಾಯ್ತನದ ಸುತ್ತ ಮೂಡಿಬಂದಿರುವ ವಿಭಿನ್ನ ಪ್ರಯತ್ನ. ತಾರಾಗಣದಲ್ಲಿ ನದಿಯಾ ಮೊಯ್ದು, ನಿತ್ಯಾ ಮೆನೆನ್, ಪಾರ್ವತಿ ತಿರುವೋತು, ಪದ್ಮಪ್ರಿಯಾ, ಸಯನೋರಾ ಫಿಲಿಪ್, ಅರ್ಚನಾ ಪದ್ಮಿನಿ ಮತ್ತು ಅಮೃತಾ ಸುಭಾಷ್ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಾಲ್ಕೈದು ಲೊಕೇಷನ್‌ಗಳಲ್ಲಿಯೇ ಕತೆ ಮುಗಿದು ಹೋದರೂ ಮನೇಶ್ ಮಾಧವನ್ ಅವರ ಛಾಯಾಗ್ರಹಣ ಮೆಚ್ಚುವಂತಿದೆ. ಗೋವಿಂದ ವಸಂತ ಅವರ ಸಂಗೀತ ಭಾವುಕ ದೃಶ್ಯಗಳನ್ನು ತೀವ್ರವಾಗಿಸಿದೆ.


