“ನಂದಿನಿ ಕನ್ನಡಿಗರ ಜೀವನಾಡಿ. ಅದರ ತಂಟೆಗೆ ಬಂದರೆ ಬಿಜೆಪಿ ಭಸ್ಮವಾಗುತ್ತದೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಗುಜರಾತ್‌ನ ಅಮುಲ್‌ನೊಂದಿಗೆ ಕೆಎಂಎಫ್ (ನಂದಿನಿ) ವಿಲೀನಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
“ನೆಲ, ಜಲ, ನುಡಿಯ ಬಗ್ಗೆ ಕನ್ನಡ ಮತ್ತು ಕರ್ನಾಟಕದ ಮೇಲೆ ಸದಾ ಪ್ರಹಾರ ನಡೆಸುತ್ತಿರುವ ಬಿಜೆಪಿ, ಕನ್ನಡಿಗರ ವಿರುದ್ಧ ತನ್ನ ರಕ್ಕಸ ನೀತಿಗಳನ್ನು ಮುಂದುವರಿಸಿದೆ. ಈಗ ಕರ್ನಾಟಕದ ಹಾಲಿನಲ್ಲೂ ಗುಜರಾತಿನ ಹುಳಿ ಹಿಂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟಿದ್ದಾರೆ” ಎಂದು ಟೀಕಿಸಿದ್ದಾರೆ.
“ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟ ವ್ಯಕ್ತಿ, ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಕಿವಿ ಹಿಂಡದ ವ್ಯಕ್ತಿ ಈಗ ಕನ್ನಡ ನೆಲದ ಮಣ್ಣಿನಮಕ್ಕಳ ಜೀವನಾಡಿ ಕರ್ನಾಟಕ ಹಾಲು ಮಹಾ ಮಂಡಳಿ (KMF- ನಂದಿನಿ)ಯನ್ನು ಗುಜರಾತಿನ ಅಮುಲ್‌ನಲ್ಲಿ ವಿಲೀನ ಮಾಡುವ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮಾಡಲು ಹೊರಟಿರುವ ಘೋರ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕ ರಾಜ್ಯವನ್ನು ಗುಜರಾತ್ ಮಾಡುವ ಧೂರ್ತ ಹುನ್ನಾರ ಇದು. ಅಷ್ಟೇ ಅಲ್ಲ, ಗುಜರಾತ್‌ಗೆ ಕರ್ನಾಟಕವೇ ಪ್ರತಿಸ್ಪರ್ಧಿ ಎನ್ನುವ ಕಾರಣಕ್ಕೆ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮುಗಿಸೇಬೀಡಬೇಕು ಎನ್ನುವ ದುರಾಲೋಚನೆ ಅಮಿತ್ ಶಾ ಅವರಿಗೆ ಸ್ಪಷ್ಟವಾಗಿ ಇದ್ದಂತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ದೇಶದ ಬೇರಾವ ರಾಜ್ಯದ ಮೇಲೆಯೂ ಇಲ್ಲದ ಅಸಹನೆ, ಅಸೂಯೆ, ವೈಷಮ್ಯ ಕರ್ನಾಟಕದ ಮೇಲೇಕೆ ಅಮಿತ್ ಶಾ ಅವರೇ ಎಂದು ನಾನು ಕೇಳುತ್ತಿದ್ದೇನೆ. ಕನ್ನಡಿಗರನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಕನ್ನಡಿಗರನ್ನು ಗುಜರಾತಿನ ಗುಲಾಮರನ್ನಾಗಿ ಮಾಡಲು ಶಾ ಅವರು ಷಡ್ಯಂತ್ರ ರೂಪಿಸಿದ್ದಾರೆ ಎನ್ನುವುದು ನನ್ನ ಅನುಮಾನ” ಎಂದಿದ್ದಾರೆ.
“ನಂದಿನಿ ಕನ್ನಡಿಗರ ಜೀವನಾಡಿ. ಅದರ ತಂಟೆಗೆ ಬಂದರೆ ಬಿಜೆಪಿ ಭಸ್ಮವಾಗುತ್ತದೆ. ಇಡೀ ದೇಶವನ್ನೇ ಆಳಿದ ಕನ್ನಡಿಗರು ಯಾರೊಬ್ಬರ ಗುಲಾಮರಲ್ಲ. ಕರ್ನಾಟಕವನ್ನು ಆಕ್ರಮಣ ಮಾಡಿಕೊಳ್ಳುವ ಹಾಗೂ ಆರ್ಥಿಕ, ಕೈಗಾರಿಕೆ ಕ್ಷೇತ್ರಗಳಲ್ಲಿ ರಾಜ್ಯವನ್ನು ಹತ್ತಿಕ್ಕುವ ಹುನ್ನಾರ ಯಶಸ್ಸು ಕಾಣದು. ಬಿಜೆಪಿಯ ಬ್ರಹ್ಮರಾಕ್ಷಸ ರೂಪ ಕನ್ನಡಿಗರಿಗೆ ಈಗ ಅರಿವಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕವನ್ನು ಉತ್ತರ ಭಾರತದ ಬ್ಯಾಂಕ್‌ಗಳಿಗೆ ಅಡಿಯಾಳನ್ನಾಗಿಸಿ, ಹಿಂದಿ ಭಾಷಿಗರ ಉದ್ಧಾರಕ್ಕಾಗಿ ಕನ್ನಡಿಗರ ಅನ್ನ ಕಸಿದುಕೊಂಡ ಬಿಜೆಪಿ ಈಗ, ನಂದಿನಿಯನ್ನು ಹೊಡೆದುಕೊಂಡು ಹೋಗಲು ಹಿಡನ್ ಅಜೆಂಡಾ ರೂಪಿಸಿದಂತಿದೆ. ಕರ್ನಾಟಕ ಎಂದಿಗೂ ಗುಜರಾತಿನ ವಸಾಹತು ಆಗುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಎಚ್.ಡಿ. ರೇವಣ್ಣ ರೀಟ್ವೀಟ್
ಕೆಎಂಎಫ್- ಅಮುಲ್ ವಿಲೀನ ಪ್ರಸ್ತಾಪ ಖಂಡಿಸಿ ಜೆಡಿಎಸ್ ಟ್ವಿಟರ್ ಖಾತೆಯಲ್ಲಿ ಮಾಡಲಾದ ಟ್ವೀಟ್‌ಗಳನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ರೀಟ್ವೀಟ್ ಮಾಡಿದ್ದಾರೆ.
“ಕನ್ನಡಿಗರು ಕಟ್ಟಿಬೆಳೆಸಿದ ಸಂಸ್ಥೆಗಳ ಮೇಲೆ ಯಾಕಿಷ್ಟು ಅಸೂಯೆ ಅಮಿತ್ ಶಷಾ ಅವರೇ? ರಾಜ್ಯದಲ್ಲಿರುವ ನಿಮ್ಮದೇ ಸರ್ಕಾರ ಕಮಿಷನ್ ದಂದೆ, ಹಗರಣಗಳು ಹಾಗೂ ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ದೋಚುತ್ತಿದ್ದರೆ, ನೀವು ವೀಲಿನದ ಹೆಸರಲ್ಲಿ ಕನ್ನಡಿಗರು ಕಟ್ಟಿಬೆಳೆಸಿದ ಲಾಭದಾಯಕ ಸಂಸ್ಥೆಗಳನ್ನೇ ದೋಚಲು ಮುಂದಾಗಿದ್ದಿರಾ? ನಿಮ್ಮದು ಡಬಲ್ ಇಂಜಿನ್ ಸರ್ಕಾರವಲ್ಲ ಕನ್ನಡಿಗರ ಪಾಲಿಗೆ ದೋಚುವ ಸರ್ಕಾರ. ನಿಮ್ಮ ದೋಚುವ ಆಡಳಿತದ ಅವನತಿ 2023ಕ್ಕೆ ಕರ್ನಾಟಕದಿಂದಲೇ ಶುರುವಾಗಲಿದೆ” ಎಂದು ಜೆಡಿಎಸ್ ತಿಳಿಸಿದೆ.
ಕೆಎಂಎಫ್ ಗೆ ನಿಮ್ಮ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಡುಗೆಯಾದರೂ ಏನು? ಕರ್ನಾಟಕದ ಲಕ್ಷಾಂತರ ರೈತರು ಕಟ್ಟಿಬೆಳೆಸಿದ ಸಂಸ್ಥೆ ಇದು, ಇಂದು ರಾಜ್ಯದ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಸಂಸ್ಥೆಯನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಗಲುಗನಸನ್ನು ಮೊದಲು ಬಿಟ್ಟುಬಿಡಿ. 3/5
— Janata Dal Secular (@JanataDal_S) December 31, 2022
“ಕೆಎಂಎಫ್ ಗೆ ನಿಮ್ಮ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಡುಗೆಯಾದರೂ ಏನು? ಕರ್ನಾಟಕದ ಲಕ್ಷಾಂತರ ರೈತರು ಕಟ್ಟಿಬೆಳೆಸಿದ ಸಂಸ್ಥೆ ಇದು, ಇಂದು ರಾಜ್ಯದ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಸಂಸ್ಥೆಯನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಗಲುಗನಸನ್ನು ಮೊದಲು ಬಿಟ್ಟುಬಿಡಿ” ಎಂದಿದೆ.
“ಪಂಚರತ್ನ ರಥಯಾತ್ರೆಯ ಯಶಸ್ಸು ನಿಮ್ಮ ಕಣ್ಣಿಗೂ ಬಿದ್ದಿರಬಹುದು, ಇಲ್ಲವೇ ಯಾರಾದರೂ ಭಟ್ಟಂಗಿಗಳು ನಿಮ್ಮ ಕಿವಿ ಊದಿರಬಹುದು. ಅದಕ್ಕೆ ಮಂಡ್ಯಕ್ಕೆ ಬಂದು ಮಕ್ಮಲ್ ಟೋಪಿ ಹಾಕಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ. ನೀವು ಮಂಡ್ಯದಲ್ಲಿ ಮುಗ್ಗರಿಸುತ್ತಿರಿ. ಅಮಿತ್ ಶಾ ಅವರೇ ಅತಿಯಾದ ಅಮಿತೋತ್ಸಾಹ ಒಳ್ಳೆಯದಲ್ಲ” ಎಂದು ಕುಟುಕಿದೆ.


