ನಾನು ಹಿಂದೂಗಳ ವಿರೋಧಿಯಲ್ಲ. ನಾನೊಬ್ಬ ಹಿಂದೂ. ಆದರೆ ಹಿಂದುತ್ವ ರಾಜಕೀಯವನ್ನು, ಹಿಂದೂ ಧರ್ಮ ಇಟ್ಟುಕೊಂಡು ರಾಜಕಾರಣ ಮಾಡುವುದನ್ನು ವಿರೋಧಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಎಲ್ಲಾ ಧರ್ಮಗಳು ಸಮಾನ ಎಂದು ಸಂವಿಧಾನ ಹೇಳಿದೆ. ಅದು ಹಿಂದೂ, ಜೈನ, ಬೌದ್ದ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲವು ಸಮಾನವಾಗಿವೆ. ಇವುಗಳಲ್ಲಿ ಯಾವುದು ಹೆಚ್ಚು ಅಲ್ಲ, ಯಾವುದು ಕಡಿಮೆಯೂ ಅಲ್ಲ. ಹಾಗಾಗಿ ಧರ್ಮದ ಆಧಾರದಲ್ಲಿ, ಜಾತಿ ಆಧಾರದಲ್ಲಿ ರಾಜಕಾರಣ ಮಾಡಬೇಡಿ ಎನ್ನುತ್ತೇನೆ” ಎಂದರು.
ನಮ್ಮದು ಬಹುತ್ವದ ದೇಶ. ಇಲ್ಲಿ 140 ಕೋಟಿ ಜನರಿದ್ದಾರೆ. ಅದರಲ್ಲಿ ಎಲ್ಲಾ ಧರ್ಮದವರು, ಎಲ್ಲಾ ಜಾತಿಯವರು ಇದ್ದಾರೆ. ಅವರೆಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಎಲ್ಲರನ್ನು ಮನುಷ್ಯರಾಗಿ ಕಾಣಬೇಕೆಂದು ನಮ್ಮ ಸಂವಿಧಾನ ಹೇಳುತ್ತದೆ. ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು ಎಂಬುದು ನನ್ನ ನಿಲುವು ಎಂದರು.
ಎಲ್ಲ ಧರ್ಮದವರನ್ನು ಮನುಷ್ಯರಾಗಿ ಕಾಣಬೇಕೆಂದು ನಮ್ಮ ಸಂವಿಧಾನ ಹೇಳುತ್ತದೆ. – ಸಿದ್ದರಾಮಯ್ಯ pic.twitter.com/NetEM6hePn
— Naanu Gauri (@naanugauri) January 7, 2023
ಮೂರು ಕ್ಷೇತ್ರಗಳ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ
ತಾವು 2023ರ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಬಾದಾಮಿ, ಕೋಲಾರ ಮತ್ತು ವರುಣಾ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ತೀವ್ರ ಒತ್ತಡ ಬರುತ್ತಿದೆ. ಹಾಗಾಗಿ ಮೂರು ಕ್ಷೇತ್ರಗಳ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ. ವರುಣಾದಲ್ಲಿ ಸ್ಪರ್ಧಿಸುವಂತೆ ತೀವ್ರ ಒತ್ತಡ ಬಂದಿದೆ. ಆದರೆ ನಾನಿನ್ನು ನಿರ್ಧಾರ ಮಾಡಿಲ್ಲ. ನಮ್ಮ ಹೈಕಮಾಂಡ್ ಸೂಚಿಸಿದ ಕಡೆ ಸ್ಪರ್ಧಿಸುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ದೇವಾಲಯ ಪ್ರವೇಶಿಸಿದ ದಲಿತ ಮಹಿಳೆಗೆ ಥಳಿತ, ತಲೆಗೂದಲು ಹಿಡಿದು ಹೊರಗೆಳೆದುಹಾಕಿದ ಧರ್ಮದರ್ಶಿ – ವಿಡಿಯೋ ವೈರಲ್


