ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ, ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬುಧವಾರ ಬೆಂಬಲ ನೀಡಿದೆ. ಸೌರಭ್ ಕಿರ್ಪಾಲ್ ಅವರು ಸಲಿಂಗಾಸಕ್ತರಾಗಿದ್ದಾರೆ.
ಕಿರ್ಪಾಲ್ ಅವರ ವಿರುದ್ಧದ ಆಕ್ಷೇಪಣೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ನಂತರ, ಇದೀಗ ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಅವರ ಹೆಸರನ್ನು ಪುನರುಚ್ಚರಿಸಲು ಕೊಲಿಜಿಯಂ ನಿರ್ಧರಿಸಿದೆ.
ಹಿರಿಯ ವಕೀಲರು ಸಾಂವಿಧಾನಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಎಲ್ಲಾ ಅಂಶಗಳಲ್ಲಿ ಅರ್ಹರಾಗಿದ್ದಾರೆ ಎಂದು ಕೊಲಿಜಿಯಂ ಎಂದು ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆಎಂ ಜೋಸೆಫ್ ಅವರನ್ನು ಒಳಗೊಂಡ ಕೊಲಿಜಿಯಂ ಬುಧವಾರ ಮಧ್ಯಾಹ್ನ ಸಭೆ ನಡೆಸಿತು. ಕಿರ್ಪಾಲ್ ಅವರ ಹೆಸರನ್ನು ಪುನಃ ಪ್ರತಿಪಾದಿಸುವುದರ ಜೊತೆಗೆ, ಮದ್ರಾಸ್, ಅಲಹಾಬಾದ್, ಕರ್ನಾಟಕ ಮತ್ತು ಪಂಜಾಬ್‌ನ ಉಚ್ಚ ನ್ಯಾಯಾಲಯಗಳಲ್ಲಿ ನೇಮಕಾತಿಗಾಗಿ ಕೆಲವು ಶಿಫಾರಸುಗಳನ್ನು ಸಹ ತೆಗೆದುಕೊಂಡಿತು. ಹೈಕೋರ್ಟ್ ನ್ಯಾಯಾಧೀಶರಿಗೆ ಕೊಲಿಜಿಯಂ ಸುಮಾರು ಎರಡು ಡಜನ್ ಹೊಸ ಶಿಫಾರಸುಗಳನ್ನು ಮಾಡಿದೆ.
ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಆಗುವರೇ ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ ಸೌರಭ್ ಕಿರ್ಪಾಲ್?
ಈ ಹಿಂದೆ ಸೌರಭ್ ಅವರು ತಮ್ಮನ್ನು ನ್ಯಾಯಾಧೀಶರನ್ನಾಗಿ ನೇಮಿಸುತ್ತಿಲ್ಲ ಎನ್ನುವ ಕಾರಣಕ್ಕೆ ಅವರು, “ನಾನು ‘ಗೆ’ (ಸಲಿಂಗಾಸಕ್ತ) ಎಂಬ ಕಾರಣಕ್ಕೆ ಶಿಫಾರಸ್ಸು ಮಾಡಿದರೂ ಕೂಡ ನನ್ನನ್ನು ನ್ಯಾಯಾಧೀಶರಾಗಿ ನೇಮಿಸುತ್ತಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದರು.
2017 ರ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ನ್ಯಾಯಾಲಯದ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವಂತೆ ದೆಹಲಿ ಹೈಕೋರ್ಟ್‌ನ 33 ನ್ಯಾಯಾಧೀಶರು ಶಿಫಾರಸ್ಸು ಮಾಡಿದ್ದರು. ಅಲ್ಲದೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಕೊಲಿಜಿಯಂ ಸಹ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ನೀಡದೆ ವಿಳಂಬ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕಿರ್ಪಾಲ್ ಅವರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಯಾಕೆಂದರೆ ಅವರು ಎಲ್‌ಜಿಬಿಟಿ ಸಮುದಾಯದ ಹೋರಾಟದ ಭಾಗವಾಗಿದ್ದರು. ಕಿರ್ಪಾಲ್ ಅವರನ್ನು ನ್ಯಾಯಾಧೀಶರನ್ನಾಗಿ ನೇಮಿಸಲು ವಿಳಂಬ ಮಾಡುತ್ತಿದೆ ಎಂದು ಹೇಳಲಾಗುತ್ತಿತ್ತು.
ಸೌರಭ್ ಕಿರ್ಪಾಲ್ ಅವರ ತಂದೆ, ನ್ಯಾಯಮೂರ್ತಿ ಬಿ.ಎನ್.ಕಿರ್ಪಾಲ್ ಅವರು ಮೇ 2002ರಿಂದ ನವೆಂಬರ್ 2002ರವರೆಗೆ ಸುಪ್ರೀಂಕೋರ್ಟ್‌ನ 31ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ದೆಹಲಿಯ ಸೇಂಟ್ ಸ್ಟೀಫನ್ಸ್‌ನಿಂದ ಭೌತಶಾಸ್ತ್ರದಲ್ಲಿ ಪದವೀಧರರಾಗಿರುವ ನ್ಯಾಯವಾದಿ ಕಿರ್ಪಾಲ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾರತಕ್ಕೆ ಹಿಂದಿರುಗುವ ಮೊದಲು, ಸೌರಭ್ ಕಿರ್ಪಾಲ್ ಜಿನೀವಾದಲ್ಲಿ ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡಿದ್ದರು. ಅವರು ಎರಡು ದಶಕಗಳಿಂದ ಭಾರತದಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ.
‘ಸೆಕ್ಸ್ ಮತ್ತು ಸುಪ್ರೀಂ ಕೋರ್ಟ್’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯು ಕಾನೂನು, ಲಿಂಗ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತದೆ.


