Homeಮುಖಪುಟದೆಹಲಿ ಹೈಕೋರ್ಟ್‌ ಜಡ್ಜ್‌‌ ಆಗುವರೇ ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ ಸೌರಭ್‌ ಕಿರ್ಪಾಲ್?

ದೆಹಲಿ ಹೈಕೋರ್ಟ್‌ ಜಡ್ಜ್‌‌ ಆಗುವರೇ ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ ಸೌರಭ್‌ ಕಿರ್ಪಾಲ್?

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸುವಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಶಿಫಾರಸ್ಸು ಮಾಡಿರುವ ಸೌರಭ್ ಕಿರ್ಪಾಲ್‌ ಸ್ವತಃ ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಖ್ಯಾತ ವಕೀಲರು

- Advertisement -
- Advertisement -

ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ, ಹಿರಿಯ ವಕೀಲ ಸೌರಭ್‌ ಕಿರ್ಪಾಲ್‌ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರರಿಗೆ ಇದು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಸುಪ್ರೀಂ ಕೋರ್ಟ್‌ನಿಂದ ಅಪರಾಧಿಕರಣಗೊಂಡ ಸಲಿಂಗಕಾಮದ ಪರವಾಗಿ ಸ್ವತಃ ಲೈಂಗಿಕ ಅಲ್ಪಸಂಖ್ಯಾತರಾದ ಕಿರ್ಪಾಲ್ ವಾದಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ನ್ಯಾಯಮೂರ್ತಿಯಾಗಿ ನೇಮಿಸಲು ವಿಳಂಬವಾಗುತ್ತಿದೆ ಎಂಬ ಆರೋಪಗಳು ಬಂದಿದ್ದವು.

2018ರಿಂದ ಕನಿಷ್ಠ ನಾಲ್ಕು ಬಾರಿ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರ ಉಮೇದುವಾರಿಕೆಯ ನಿರ್ಧಾರವನ್ನು ಮುಂದೂಡಿದ ನಂತರ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಂತಿಮವಾಗಿ ಅವರ ಹೆಸರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸು ಮಾಡಿದೆ.

ಕಳೆದ ಮಾರ್ಚ್‌ನಲ್ಲಿ ಆಗಿನ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರು ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ಮಾಡುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದರು.

ಅಕ್ಟೋಬರ್ 2017ರಲ್ಲಿ ಮೊದಲ ಬಾರಿಗೆ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ದೆಹಲಿ ಹೈಕೋರ್ಟ್ ಕೊಲಿಜಿಯಂ ಕಿರ್ಪಾಲ್ ಅವರನ್ನು ಶಿಫಾರಸು ಮಾಡಿತು. ಸೆಪ್ಟೆಂಬರ್ 2018ರಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಇದನ್ನು “ಕೆಲವು ಸಮಯದ ನಂತರ” ಪರಿಗಣನೆಗೆ ತೆಗೆದುಕೊಳ್ಳಲು ನಿರ್ಧರಿಸಿತು. ಜನವರಿ 2019ರಲ್ಲಿ ಮತ್ತು ನಂತರ ಏಪ್ರಿಲ್ 2019ರಲ್ಲಿ ಮತ್ತೆ ಹೆಸರು ಮುನ್ನೆಲೆಗೆ ಬಂದಾಗ ಕೊಲಿಜಿಯಂ ತನ್ನ ನಿರ್ಧಾರವನ್ನು ಮುಂದೂಡಿತು.

ಕಿರ್ಪಾಲ್‌ ಅವರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಯಾಕೆಂದರೆ ಅವರು ಎಲ್‌ಜಿಬಿಟಿ ಸಮುದಾಯದ ಹೋರಾಟದ ಭಾಗವಾಗಿದ್ದರು. ಕಿರ್ಪಾಲ್ ಅವರ ಹೆಸರನ್ನು ಶಿಫಾರಸು ಮಾಡುವಲ್ಲಿನ ವಿಳಂಬವು ಅವರ ಲೈಂಗಿಕ ದೃಷ್ಟಿಕೋನದ ಕಾರಣಕ್ಕೂ ಆಗಿದೆ ಎನ್ನಲಾಗುತ್ತಿತ್ತು. ಕಿರ್ಪಾಲ್ ಅವರು ನೇಮಕವಾದಲ್ಲಿ ಭಾರತದ ಮೊದಲ ಬಹಿರಂಗ ಸಲಿಂಗಾಸಕ್ತ ನ್ಯಾಯಾಧೀಶರಾಗುತ್ತಾರೆ.

ನ್ಯಾಯಾಧೀಶ ಸೌರಭ್ ಕಿರ್ಪಾಲ್ ಅವರ ತಂದೆ, ನ್ಯಾಯಮೂರ್ತಿ ಬಿ.ಎನ್.ಕಿರ್ಪಾಲ್ ಅವರು ಮೇ 2002ರಿಂದ ನವೆಂಬರ್ 2002ರವರೆಗೆ ಸುಪ್ರೀಂಕೋರ್ಟ್‌ನ 31ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ದೆಹಲಿಯ ಸೇಂಟ್ ಸ್ಟೀಫನ್ಸ್‌ನಿಂದ ಭೌತಶಾಸ್ತ್ರದಲ್ಲಿ ಪದವೀಧರರಾಗಿರುವ ನ್ಯಾಯವಾದಿ ಕಿರ್ಪಾಲ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಭಾರತಕ್ಕೆ ಹಿಂದಿರುಗುವ ಮೊದಲು, ಸೌರಭ್ ಕಿರ್ಪಾಲ್ ಜಿನೀವಾದಲ್ಲಿ ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡಿದ್ದರು. ಅವರು ಎರಡು ದಶಕಗಳಿಂದ ಭಾರತದಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ.

‘ಸೆಕ್ಸ್ ಮತ್ತು ಸುಪ್ರೀಂ ಕೋರ್ಟ್’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯು ಕಾನೂನು, ಲಿಂಗ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತದೆ.


ಇದನ್ನೂ ಓದಿರಿ: ದೇಶದಲ್ಲಿ 20 ವರ್ಷಗಳಲ್ಲಿ 1,888 ಲಾಕಪ್ ಡೆತ್: ಕೇವಲ 26 ಮಂದಿ ಪೊಲೀಸರಿಗೆ ಶಿಕ್ಷೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...