Homeಮುಖಪುಟಸುಪ್ರೀಂ ಕೋರ್ಟ್ ವರ್ಸಸ್ ಶಾಸಕಾಂಗ; ಬಹುಸಂಖ್ಯಾತವಾದಿ ಪ್ರಭುತ್ವದ ಸವಾಲು?

ಸುಪ್ರೀಂ ಕೋರ್ಟ್ ವರ್ಸಸ್ ಶಾಸಕಾಂಗ; ಬಹುಸಂಖ್ಯಾತವಾದಿ ಪ್ರಭುತ್ವದ ಸವಾಲು?

- Advertisement -
- Advertisement -

ಮೋದಿ ಸರಕಾರವು ತನ್ನ ಎರಡನೇ ಅವಧಿಯ ಐದು ವರ್ಷಗಳ ಕೊನೆಯ ಹಂತವನ್ನು ಮುಟ್ಟುತ್ತಿರುವಂತೆಯೇ, ಅದರ ಹೊಸ ಆದ್ಯತೆಗಳ ಆರಂಭವನ್ನು ಯಾರೂ ಕೂಡಾ ನೋಡಬಹುದು. ಸಂಪೂರ್ಣವಾಗಿ ಅದರ ಅಧೀನದಲ್ಲಿ ಇರದೇ ಇರುವ ಒಂದು ಸಾಂವಿಧಾನಿಕ ಸಂಸ್ಥೆಯ ವಿರುದ್ಧ ಡೋಲು ನಗಾರಿಗಳ ಸದ್ದು ಜೋರುಜೋರಾಗಿ ಕೇಳಿಸುತ್ತಿದೆ. ಕಾನೂನು ಸಚಿವರಿಂದ ಆರಂಭಿಸಿ ಉಪರಾಷ್ಟ್ರಪತಿಯ ತನಕ ನ್ಯಾಯಾಂಗ ಮತ್ತು ಅದರ ಕಾರ್ಯಾಚರಣೆಯ ವಿರುದ್ಧ ಪ್ರಶ್ನೆಗಳನ್ನು ಎತ್ತಲಾರಂಭಿಸಲಾಗಿದೆ. ಮೊದಲ ಗುಂಡು ಹೊಡೆದದ್ದು ನ್ಯಾಯಾಧೀಶರುಗಳನ್ನು ನೇಮಕಾತಿ ಮಾಡುವ ಕೊಲಿಜಿಯಂ ವ್ಯವಸ್ಥೆಯ ಮೇಲೆ. ನಂತರ ಜಾತಿ ಹಿನ್ನೆಲೆಯ ವಿಷಯದಲ್ಲಿ ನ್ಯಾಯಾಧೀಶರ ನೇಮಕ ಪ್ರಾತಿನಿಧಿಕವಾಗಿಲ್ಲ (ಈ ಆರೋಪ ಸರಿಯಾಗಿಯೇ ಇದೆ) ಎಂದು ನ್ಯಾಯಾಲಯಗಳನ್ನು ತೀವ್ರ ವಿಮರ್ಶೆಗೆ ಗುರಿಪಡಿಸುವ ಕೆಲಸ ನಡೆಯುತ್ತಿದೆ. ಈಗ ವಿವಾದಾಸ್ಪದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ದಾಳಿಯ ಹೊಸ ಮುಂಚೂಣಿಯನ್ನು ಆರಂಭಿಸಿದ್ದಾರೆ. ಅದು ಹೇಗೆಂದರೆ, ’ಕೇಶವಾನಂದ ಭಾರತಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ’ಪ್ರಜಾಪ್ರಭುತ್ವದ ವಿರೋಧಿಯಾಗಿದೆ’ ಎಂದು ಹೇಳುವುದರ ಮೂಲಕ.

ಇವುಗಳಲ್ಲಿ ಕೆಲವು ಪ್ರಶ್ನೆಗಳು ಸತ್ಯದ ಕೆಲವು ಅಂಶಗಳನ್ನು ಒಳಗೊಂಡಿವೆ: ಅದು ನ್ಯಾಯಾಂಗದ ಪ್ರಾತಿನಿಧಿಕತೆಯ ಕೊರತೆಯ ಸ್ವರೂಪದ ಕುರಿತಾಗಿರಲಿ, ಅಥವಾ ನ್ಯಾಯಾಧೀಶರುಗಳ ನೇಮಕಾತಿ ವಿಷಯದಲ್ಲಿ ಕೊಲಿಜಿಯಂ ವ್ಯವಸ್ಥೆಯ ಅಪಾರದರ್ಶಕತೆಯ ವಿಷಯವೇ ಆಗಿರಲಿ. ಅದು ಏನಿದ್ದರೂ, ಇಲ್ಲಿ ದೂರುವವರ ಮುಖ್ಯ ಉದ್ದೇಶ ಮಾತ್ರ ನ್ಯಾಯಾಂಗವನ್ನು ಪಳಗಿಸಿ ತಮಗೆ ವಿಧೇಯರನ್ನಾಗಿ ಮಾಡಿಕೊಳ್ಳುವುದಾಗಿದೆ.

ಈ ದಾಳಿಗಳಲ್ಲಿ ಇತ್ತೀಚಿನದ್ದೆಂದರೆ, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಹಾರಿಸಿದ ಗುಂಡು: ಅವರು ’ಮೂಲಭೂತ ಸಂರಚನಾ ಸಿದ್ಧಾಂತ’ಕ್ಕೇ (basic structure doctrine) ಅಡಿಪಾಯ ಹಾಕಿದ್ದ ಐತಿಹಾಸಿಕ ಮೈಲಿಗಲ್ಲೆನಿಸಿದ 1973ರ ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನೇ ಪ್ರಶ್ನಿಸಿದ್ದು.

ಕೇಶವಾನಂದ ಭಾರತಿ ಪ್ರಕರಣದಲ್ಲಿ ವ್ಯಾಖ್ಯಾನಿಸಲಾದ ಮೂಲಭೂತ ಸಂರಚನಾ ಸಿದ್ಧಾಂತ ಎಂದರೆ, ಸಂಸತ್ತು ಸಂವಿಧಾನದ ಮೂಲಭೂತ ಸಂರಚನೆಯ ಭಾಗವಾಗಿರುವುದನ್ನು ಹೊರತುಪಡಿಸಿ, ಅದರ ಎಲ್ಲಾ ಭಾಗಗಳನ್ನು ತಿದ್ದುಪಡಿ ಮಾಡಬಹುದು ಎಂಬುದು. ಈ ಸಿದ್ಧಾಂತವು ಬಲವಾಗಿ ಪ್ರತಿಪಾದಿಸಿರುವುದು ಏನೆಂದರೆ, ಸಂಸತ್ತು ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡಬಹುದಾದರೂ ಸಂವಿಧಾನವನ್ನೇ ಬದಲಿಸುವಂತಿಲ್ಲ ಎಂಬುದನ್ನು. ಈ ಅಂಶದ ಆಧಾರದಲ್ಲಿಯೇ ಸಂಸತ್ತು ಸಂವಿಧಾನದ ಅಸ್ಮಿತೆಗೇ ಹಾನಿಮಾಡುವ ರೀತಿಯಲ್ಲಿ ತನ್ನ ಬದಲಾವಣೆಯ ಅಧಿಕಾರವನ್ನು ಚಲಾಯಿಸಲು ಯತ್ನಿಸಿದಾಗಲೆಲ್ಲಾ ನ್ಯಾಯಾಧೀಶರುಗಳು ಮಧ್ಯೆ ಧುಮುಕಿ ಅಂತಹ ಪ್ರಯತ್ನಗಳಿಗೆ ತಡೆಯೊಡ್ಡಿದ್ದಾರೆ.

ಕೇಶವಾನಂದ ಭಾರತಿ ಪ್ರಕರಣವನ್ನು ವಿರೋಧಿಸುತ್ತಾ, ನ್ಯಾಯಾಂಗದ ವಿರುದ್ಧದ ಯುದ್ಧದಲ್ಲಿ ಇನ್ನೊಂದು ಹೊಸ್ತಿಲನ್ನು ದಾಟಲಾಗಿದೆ. ಮೂಲಭೂತ ಸಂರಚನಾ ಸಿದ್ಧಾಂತವು ಒಂದು ಕೆಟ್ಟ ಪರಂಪರೆಯನ್ನು ಹಾಕಿಕೊಟ್ಟಿದೆ ಎಂದೂ, ಸಂವಿಧಾನವನ್ನು ಬದಲಿಸುವ ಸಂಸತ್ತಿನ ಅಧಿಕಾರವನ್ನು ಯಾವುದೇ ಸಂಸ್ಥೆಯು (ಇಲ್ಲಿ ನ್ಯಾಯಾಂಗ) ಪ್ರಶ್ನಿಸಿದಲ್ಲಿ ’ನಾವು ಒಂದು ಪ್ರಜಾಸತ್ತಾತ್ಮಕ ದೇಶ’ ಎಂದು ಹೇಳಿಕೊಳ್ಳಲು ಕಷ್ಟವಾಗುತ್ತದೆ ಎಂದು ಒತ್ತಿಹೇಳುವಾಗ ಉಪರಾಷ್ಟ್ರಪತಿಯವರು, ಉದ್ದೇಶ ಪೂರ್ವಕವಾಗಿ ಈ ಸಿದ್ಧಾಂತವನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂಬಂತೆ ಕಾಣುತ್ತದೆ.

ಕೇಶವಾನಂದ ಭಾರತಿ ಪ್ರಕರಣದ ತೀರ್ಪು- ಭಾರತವು ಕಾನೂನಿನ ಆಡಳಿತಕ್ಕೆ ಒಳಪಟ್ಟ ಒಂದು ಪ್ರಜಾಪ್ರಭುತ್ವ ಎಂದು ಎತ್ತಿಹಿಡಿಯುವ ಮೂಲಕ, ಅದು ಭಾರತೀಯ ಪ್ರಜಾಪ್ರಭುತ್ವದ ಒಂದು ಹೆಮ್ಮೆಯ ತೀರ್ಪು ಎಂದು ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ. ಪ್ರಜಾಪ್ರಭುತ್ವವನ್ನು ಒಂದು ಬಹುಸಂಖ್ಯಾತವಾದಿ ಪ್ರಜಾಪ್ರಭುತ್ವ ಎಂದು ಉಪರಾಷ್ಟ್ರಪತಿಯವರು ತಪ್ಪು ತಿಳಿದುಕೊಂಡಂತಿದೆ. ಭಾರತೀಯ ಸಂವಿಧಾನದ ಯೋಜನಾ ವಿನ್ಯಾಸದಲ್ಲಿ ಪರಮೋಚ್ಛವಾದುದು ಸಂಸತ್ತಲ್ಲ; ಬದಲಾಗಿ ಸ್ವತಃ ಸಂವಿಧಾನವಾಗಿದೆ. ಸಂಸತ್ತು ಕೇವಲ ಬಹುಸಂಖ್ಯಾತರು ನೀಡಿದ ಜನಾದೇಶದ ಆಧಾರದಲ್ಲಿ ಮಾತ್ರವೇ ಕಾರ್ಯಾಚರಿಸಲು ಸಾಧ್ಯವಿಲ್ಲ ಮತ್ತು ಅದು ಯಾವಾಗಲೂ ಸಂವಿಧಾನದ ’ಲಕ್ಷ್ಮಣ ರೇಖೆ’ಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು.

ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ವಿರೋಧಿಸುವ ಮೂಲಕ – ಭಾರತೀಯ ಸಂಸದೀಯ ಪ್ರಜಾಪ್ರಭುತ್ವವು ತನ್ನ ಅಧಿಕಾರದ ಮೇಲೆ ಯಾವುದೇ ಸಾಂವಿಧಾನಿಕ ನಿಯಂತ್ರಣ ಇಲ್ಲದೇ ಇರುವ ಒಂದು ಬಹುಸಂಖ್ಯಾತವಾದಿ ಪ್ರಜಾಪ್ರಭುತ್ವ ಆಗುವುದಕ್ಕೆ ತನ್ನ ಯಾವುದೇ ಆಕ್ಷೇಪ ಇಲ್ಲವೆಂದು ಉಪರಾಷ್ಟ್ರಪತಿಯವರು ತೋರಿಸಿಕೊಟ್ಟಿದ್ದಾರೆ.

ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ಲಗಾಮಿಲ್ಲದೆ ಹೋದಾಗ ಸಂಸತ್ತಿನ ಬಹುಮತವು ಏನು ಮಾಡಬಹುದು? ಕೇಶವಾನಂದ ಭಾರತಿ ಪ್ರಕರಣದ ಕುರಿತಂತೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನ್ಯಾಯಮೂರ್ತಿ ಖನ್ನಾ ಅವರು ಹೇಳಿದಂತೆ- ತನ್ನನ್ನು ಬದಲಿಸಲು ಸಂಸತ್ತಿಗೆ ಯಾವುದೇ ನಿಯಂತ್ರಣ ಇಲ್ಲದ ಅಧಿಕಾರವನ್ನು ಸಂವಿಧಾನ ನೀಡುತ್ತದೆ ಎಂದು ಭಾರತೀಯ ಸಂವಿಧಾನವನ್ನು ವ್ಯಾಖ್ಯಾನಿಸುವುದೆಂದರೆ, “ಸಂವಿಧಾನವು ತನ್ನ ಮರಣವನ್ನು ತಾನೇ ಬಯಸುವುದಕ್ಕೆ ಅಥವಾ ಬಹುಶಃ ಸ್ವಯಂ ಇಚ್ಛೆಯ ಕಾನೂನುಬದ್ಧ ಆತ್ಮಹತ್ಯೆ ಎಂದು ಕರೆಯಬಹುದಾದುದಕ್ಕೆ ಸಮ” ಎನ್ನುತ್ತಾರೆ.

ಚುಟುಕಾಗಿ ಹೇಳುವುದಾದರೆ, ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಇಲ್ಲದಿದ್ದರೆ, ಅದು ಸಂಸತ್ತಿಗೆ ಸಂವಿಧಾನದ ಎಲ್ಲಾ ಭಾಗಗಳನ್ನು ಬದಲಿಸುವ ಅಧಿಕಾರವನ್ನು ನೀಡಬಹುದು ಅಥವಾ ಈ ಪ್ರಕರಣದ ಅಲ್ಪಸಂಖ್ಯಾತ ತೀರ್ಪಿನಲ್ಲಿ ನ್ಯಾಯಮೂರ್ತಿ ದ್ವಿವೇದಿಯವರು ಹೇಳಿದಂತೆ, “ಸಂವಿಧಾನದ ಇತರ ಭಾಗಗಳ ಉಳಿವು ಮತ್ತು ಅದರ ಆರೋಗ್ಯ ರಕ್ಷಣೆ ಅಗತ್ಯವೆಂದು ಸಂಸತ್ತು ಭಾವಿಸಿದಾಗ, ಸಂವಿಧಾನದ ಯಾವುದೇ ಇತರ ಭಾಗಗಳನ್ನು ಕತ್ತರಿಸಿ ಹಾಕುವ ಅಧಿಕಾರ ಸಂಸತ್ತಿಗಿದೆ.”

ಯಾವುದೇ ನಿಯಂತ್ರಣ ಇಲ್ಲದ ಸಂಸತ್ತಿನ ಪರಮಾಧಿಕಾರದ ಪರಿಕಲ್ಪನೆಯು ಭಾರತೀಯ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಅದು ಯಾಕೆಂದರೆ, ತಮ್ಮ ಧ್ವನಿ ಸಂಸತ್ತಿನಲ್ಲಿ ಕೇಳಿಬರುವುದನ್ನು ಖಾತರಿಪಡಿಸಿಕೊಳ್ಳುವಷ್ಟೂ ಸಂಖ್ಯಾಬಲವಿಲ್ಲದ ’ವಿಭಿನ್ನ ಮತ್ತು ದ್ವೀಪಗಳಂತಿರುವ’ ಅಲ್ಪಸಂಖ್ಯಾತ ಗುಂಪುಗಳನ್ನು ಭಾರತೀಯ ಸಂವಿಧಾನವು ಗುರುತಿಸುತ್ತದೆ ಮತ್ತು ಇದರ ಹೊರತಾಗಿಯೂ ಅವುಗಳಿಗೆ ಮೂಲಭೂತವಾದ ಹಕ್ಕುಗಳನ್ನು ನೀಡಿದೆ. ಮೂಲಭೂತ ಹಕ್ಕುಗಳು ಎಂಬುದು ಬಹುಸಂಖ್ಯಾತವಾದಿ ಅಭಿಪ್ರಾಯದ ಆಟದ ಸೊತ್ತುಗಳಾಗಲು ಸಾಧ್ಯವಿಲ್ಲ.

ಬಹುಸಂಖ್ಯಾತ ಅಭಿಪ್ರಾಯವು ಮೂಲಭೂತ ಹಕ್ಕುಗಳನ್ನು ಕಿತ್ತೆಸೆಯಲು ಸಾಧ್ಯವಿಲ್ಲ ಎಂದು “ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ” ಪ್ರಕರಣದಲ್ಲಿ ಬಹುತ್ವದ ತೀರ್ಪು ಕೂಡಾ ವಿವರಿಸಿದೆ.

ಇದನ್ನೂ ಓದಿ: ಗೋಧ್ರಾ ಹತ್ಯಾಕಾಂಡ: ನಿರ್ಭಯ ವಾತಾವರಣಕ್ಕೆ ನರೇಂದ್ರ ಮೋದಿ ಕಾರಣ ಎಂದ ಬಿಬಿಸಿ ಸಾಕ್ಷ್ಯಚಿತ್ರ

“ಕೆಲವು ನಿರ್ದಿಷ್ಟ ಹಕ್ಕುಗಳನ್ನು ಖಾತರಿ ಇರುವ ಮೂಲಭೂತ ಹಕ್ಕುಗಳು ಎಂದು ಮೇಲ್ದರ್ಜೆಗೆ ಏರಿಸಿರುವುದರ ಉದ್ದೇಶ ಎಂದರೆ, ಅವುಗಳ ಅನುಷ್ಠಾನವನ್ನು ಸಂಸದೀಯ ಅಥವಾ ಜನಪ್ರಿಯ ಬಹುಸಂಖ್ಯಾತ ಅಭಿಪ್ರಾಯದ ಅಸಡ್ಡೆಯಿಂದ ರಕ್ಷಿಸುವುದು. ಸಾಂವಿಧಾನಿಕ ಹಕ್ಕುಗಳ ಖಾತರಿಯು- ಬಹುಸಂಖ್ಯಾತ ಅಭಿಪ್ರಾಯವು ಅದರ ಪರವಾಗಿರುವುದರ ಅಥವಾ ವಿರೋಧವಾಗಿರುವುದರ ಮೇಲೆ ನಿಂತಿಲ್ಲ. ಸಾಂವಿಧಾನಿಕ ರಕ್ಷಣೆಯ ಖಾತರಿಯ ಮೇಲೆ ಕೊಡಮಾಡಲಾಗಿರುವ ಹಕ್ಕುಗಳನ್ನು ಅವಗಣಿಸಲು ’ಜನಪ್ರಿಯ ಸ್ವೀಕಾರ’ದ ಪರೀಕ್ಷೆಯು ಯಾವುದೇ ಸಿಂಧುವಾದ ಆಧಾರವನ್ನು ಒದಗಿಸುವುದಿಲ್ಲ. ವಿಭಿನ್ನ ಮತ್ತು ದ್ವೀಪಗಳಂತಿರುವ ಅಲ್ಪಸಂಖ್ಯಾತ ಗುಂಪುಗಳು ತಾರತಮ್ಯದ ಗಂಭೀರ ಅಪಾಯಗಳನ್ನು ಎದುರಿಸುತ್ತವೆ. ಇದಕ್ಕೆ ಸರಳವಾದ ಕಾರಣವೆಂದರೆ, ಅವರ ಅಭಿಪ್ರಾಯಗಳು, ನಂಬಿಕೆಗಳು ಅಥವಾ ಜೀವನ ಮಾರ್ಗವು ’ಮುಖ್ಯವಾಹಿನಿ’ಗೆ ಸರಿ ಹೊಂದದಿರಬಹುದು. ಆದರೂ ಕಾನೂನಿನ ಆಡಳಿತದ ಆಧಾರದಲ್ಲಿ ರೂಪುಗೊಂಡ ಒಂದು ಸಂವಿಧಾನದಲ್ಲಿ ತಮ್ಮ ಸ್ವಾತಂತ್ರ್ಯ ಮತ್ತು ಮುಕ್ತತೆಯ ರಕ್ಷಣೆಗಾಗಿ ಇತರ ನಾಗರಿಕರ ಹಕ್ಕುಗಳಿಗೆ ನೀಡಲಾದಷ್ಟೇ ಪಾವಿತ್ರ್ಯವನ್ನು ಅಲ್ಪಸಂಖ್ಯಾತರ ಹಕ್ಕುಗಳಿಗೂ ನೀಡುತ್ತದೆ.”

ನ್ಯಾಯಮೂರ್ತಿ ಚಂದ್ರಚೂಡ್ ಅವರ ಕಾಳಜಿ ಕೂಡ, ವಿಕಲತೆ ಇರುವ ಜನರು, ಲೈಂಗಿಕ ಅಲ್ಪಸಂಖ್ಯಾತರು (ಎಲ್‌ಜಿಬಿಟಿಕ್ಯೂ) ಮತ್ತು ಧಾರ್ಮಿಕ ಅಲ್ಪಸಂಖ್ಯಾತರರೂ ಸೇರಿದಂತೆ ಪ್ರತ್ಯೇಕಗೊಂಡ ಮತ್ತು ಶಕ್ತಿಹೀನ ಅಲ್ಪಸಂಖ್ಯಾತ ಗುಂಪುಗಳ ಕುರಿತಾಗಿದೆ. ಅವರ ಹಕ್ಕುಗಳು ’ಬಹುಸಂಖ್ಯಾತ’ರ ಅಭಿಪ್ರಾಯದ ಮೇಲೆ ನಿಂತಿಲ್ಲ; ಬದಲಾಗಿ, ’ಖಾತರಿ ಸಹಿತ ಮೂಲಭೂತ ಹಕ್ಕು’ಗಳ ಮೇಲೆ ನಿಂತಿದೆ. ಜನಪ್ರಿಯ ಅಥವಾ ಶಾಸನಾತ್ಮಕ ಬಹುಸಂಖ್ಯಾತ ಸಮುದಾಯವು, ಅಲ್ಪಸಂಖ್ಯಾತರ ಅಭಿಪ್ರಾಯಗಳು, ನಂಬಿಕೆಗಳು ಮತ್ತು ಜೀವನ ಮಾರ್ಗಗಳನ್ನು ಕೀಳಾಗಿ ಕಾಣಬಹುದಾದರೂ, ಸಂವಿಧಾನದ ಮಟ್ಟಿಗೆ ಅವರ ಹಕ್ಕುಗಳು ಉಳಿದ ಎಲ್ಲಾ ನಾಗರಿಕರಿಗೆ ಕೊಡಮಾಡಲಾಗಿರುವ ಹಕ್ಕುಗಳಷ್ಟೇ ಪವಿತ್ರವಾಗಿವೆ. ಸಂವಿಧಾನದ ಹೂರಣವೇ ಇದು.

’ನವತೇಜ್ ಸಿಂಗ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ನ್ಯಾಯಮೂರ್ತಿ ನಾರಿಮನ್ ಅವರು ಕೂಡಾ ಬಹುಸಂಖ್ಯಾತವಾದಕ್ಕೆ ಸಾಂವಿಧಾನಿಕ ಮಿತಿಗಳಿವೆ ಎಂಬುದನ್ನು ವಿಶಾದವಾಗಿ ವಿವರಿಸಿದ್ದಾರೆ.

“ಈ ಮೂಲಭೂತ ಹಕ್ಕುಗಳು ಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿಲ್ಲ. ಸಾಮಾಜಿಕ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸಾಂಪ್ರದಾಯಿಕ ಎಂದು ಸೂಚಿಸುವುದು ಬಹುಸಂಖ್ಯಾತ ಸರಕಾರಗಳಿಗೆ ಬಿಟ್ಟ ವಿಷಯವಲ್ಲ. ಭಾರತೀಯ ಸಾಂವಿಧಾನಿಕ ಬ್ರಹ್ಮಾಂಡದಲ್ಲಿ ಮೂಲಭೂತ ಹಕ್ಕುಗಳ ಅಧ್ಯಾಯವು ಧ್ರುವ ನಕ್ಷತ್ರ ಇದ್ದಂತೆ. ಸಾಂವಿಧಾನಿಕ ನೈತಿಕತೆಯು, ಬದಲಾಗುವ ಮತ್ತು ವಿಭಿನ್ನವಾದ ಬಹುಸಂಖ್ಯಾತ ಆಡಳಿತಗಳ ಯಾವುದೇ ರೀತಿಯ ಸಾಮಾಜಿಕ ನೈತಿಕತೆ ಕುರಿತ ಅಭಿಪ್ರಾಯಗಳ ಹೇರಿಕೆಯನ್ನು ಯಾವತ್ತೂ ಬುಡಮೇಲು ಮಾಡಿ ತನ್ನ ಪಾರಮ್ಯವನ್ನು ಮೆರೆಯುತ್ತದೆ.”

ಮೂಲಭೂತ ಹಕ್ಕುಗಳ ರಕ್ಷಣೆಯ ವಿಷಯ ಬಂದಾಗ ನ್ಯಾಯಾಲಯಗಳು ವಹಿಸಿಕೊಂಡು ಬಂದಿರುವ ಪಾತ್ರಗಳನ್ನು ಯಾರಾದರೂ ಕಾಣಬಹುದು. ನ್ಯಾಯಾಲಯಗಳ ಅಭಿಪ್ರಾಯದಲ್ಲಿ ಮೂಲಭೂತ ಹಕ್ಕುಗಳ ಪ್ರಶ್ನೆ ಬಂದಾಗ ಮೇಲುಗೈ ಸಾಧಿಸುವುದು ಸಾಂವಿಧಾನಿಕ ನೈತಿಕತೆಯೇ ಹೊರತು ಸಾಮಾಜಿಕ ನೈತಿಕತೆಯಲ್ಲ. ಲೈಂಗಿಕ ಅಲ್ಪಸಂಖ್ಯಾತರಿಗೆ (ಎಲ್‌ಜಿಬಿಟಿ+) ಯಾವುದೇ ಹಕ್ಕುಗಳಿಲ್ಲ ಎಂದು ಹೇಳುವ ಸಾಂಪ್ರದಾಯಿಕ ನೈತಿಕತೆಯು, ಎಲ್ಲಾ ವ್ಯಕ್ತಿಗಳಿಗೆ ಆತ್ಮಗೌರವವಿದೆ ಎಂಬುದನ್ನು ಮಾನ್ಯ ಮಾಡುವ ಸಂವಿಧಾನವು ಸಮರ್ಥಿಸುವ ನೈತಿಕತೆಗೆ ದಾರಿಬಿಡಬೇಕಾಗುತ್ತದೆ.

ಸಂಸತ್ತಿನ ಸಾಂವಿಧಾನಿಕ ತಿದ್ದುಪಡಿಯ ಹಕ್ಕುಗಳಿಗೆ ಮಿತಿಗಳಿವೆ ಎಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ ವಿವರಿಸಲಾಗಿರುವ ಸಂಗತಿಗಳು, ಭಾರತದಲ್ಲಿ ಬಹುಸಂಖ್ಯಾತರ ಸ್ವಭಾವಗಳ ಕುರಿತು ಬಾಬಾಸಾಹೇಬ್ ಅಂಬೇಡ್ಕರ್ ಅವರ ತಿಳಿವಳಿಕೆಯನ್ನು ಪ್ರತಿಫಲಿಸುತ್ತದೆ. “ಭಾರತದಲ್ಲಿ ಬಹುಮತವೆಂದರೆ ರಾಜಕೀಯ ಬಹುಮತವಲ್ಲ. ಭಾರತದಲ್ಲಿ ಬಹುಮತವು ಹುಟ್ಟುವುದಿಲ್ಲ. ಅದನ್ನು ತಯಾರಿಸಲಾಗುವುದಿಲ್ಲ. ಒಂದು ’ಕೋಮು ಬಹುಸಂಖ್ಯಾತತೆ’ ಮತ್ತು ಒಂದು ’ರಾಜಕೀಯ ಬಹುಸಂಖ್ಯಾತತೆ’ಯ ನಡುವಿನ ವ್ಯತ್ಯಾಸ ಇರುವುದು ಇಲ್ಲಿಯೇ. ರಾಜಕೀಯ ಬಹುಸಂಖ್ಯಾತತೆ ಎಂಬುದು ಒಂದು ಸ್ಥಿರವಾದ ಅಥವಾ ಶಾಶ್ವತವಾದ ಬಹುಸಂಖ್ಯಾತತೆಯಲ್ಲ. ಅದನ್ನು ಯಾವತ್ತೂ ರೂಪಿಸಬಹುದು ಅಥವಾ ಬದಲಿಸಬಹುದು. ಆದರೆ ಕೋಮು ಬಹುಸಂಖ್ಯಾತತೆಯು ಶಾಶ್ವತವಾಗಿದ್ದು, ತನ್ನ ನಿಲುವಿನಲ್ಲಿ ಸ್ಥಿರವಾಗಿರುತ್ತದೆ…”

ಬಾಬಾಸಾಹೇಬರನ್ನು ಅನುಸರಿಸುವುದಾದರೆ ಒಂದು ಬಹುಸಂಖ್ಯಾತತೆಯು “ಕೋಮು ಬಹುಸಂಖ್ಯಾತತೆ ಆಗಿದ್ದರೆ, ಅಥವಾ ’ತನ್ನ ನಿಲುವಿನಲ್ಲಿ ಸ್ಥಿರವಾದ’ ಒಂದು ’ಶಾಶ್ವತ ಬಹುಸಂಖ್ಯಾತತೆ’ಯಾಗಿದ್ದರೆ, ಆಗ, ’ಜನಪ್ರಿಯವಲ್ಲದ ಅಲ್ಪಸಂಖ್ಯಾತ’ರ ಸಾಂವಿಧಾನಿಕ ಹಕ್ಕುಗಳು ಬಹುಸಂಖ್ಯಾತ ಅಭಿಪ್ರಾಯದ ಬಲಿಪೀಠದಲ್ಲಿ ಬಲಿಯಾಗದಂತೆ ಖಾತರಿಪಡಿಸುವ ಹೊಣೆಗಾರಿಕೆ ಇರುವ ಬಹುಮುಖ್ಯ ಸಂಸ್ಥೆಯು ನ್ಯಾಯಾಂಗವಾಗಿರಬೇಕು. ಸಂವಿಧಾನದ ನಿಯಂತ್ರಣ ಇಲ್ಲದ ಸಂಸತ್ತಿನ ಪಾರಮ್ಯವು ಎಲ್ಲಾ ಬಣ್ಣ ಮತ್ತು ಛಾಯೆಗಳ ಅಲ್ಪಸಂಖ್ಯಾತರ ಹಕ್ಕುಗಳಿಗೆ ಬೆದರಿಕೆ ಒಡ್ಡುವಂಥ ಬಹುಸಂಖ್ಯಾತ ಆಡಳಿತವನ್ನು ಸ್ಥಾಪಿಸುವುದಕ್ಕೆ ದಾರಿ ಮಾಡಿಕೊಡುತ್ತದೆ. ಭಾರತೀಯ ಸಾಂವಿಧಾನಿಕ ಪ್ರಜಾಪ್ರಭುತ್ವವು ಉಳಿಯಬೇಕಾದಲ್ಲಿ ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ಬುಡಮೇಲು ಮಾಡುವ ಶಾಸಕಾಂಗ ಮತ್ತು ಕಾರ್ಯಾಂಗದ ಎಲ್ಲಾ ಪ್ರಯತ್ನಗಳನ್ನು ಪ್ರಬಲವಾಗಿ ವಿರೋಧಿಸಬೇಕಾಗುತ್ತದೆ.

ಈಗ ಕಾರ್ಯಾಂಗವು ಇನ್ನೊಂದು ಹೊಸ್ತಿಲನ್ನು ದಾಟಿದಂತಿದೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯಿದೆ 2015ನ್ನು ಕಿತ್ತುಹಾಕಿರುವುದನ್ನ ಮತ್ತೊಮ್ಮೆ ಟೀಕಿಸುವ ಮೂಲಕ ಧನಕರ್ ಅವರು, ’ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತರಬಹುದೇ ಹೊರತು, ಅದರ ಮೂಲಭೂತ ಸಂರಚನೆಯನ್ನು ಬದಲಿಸುವಂತಿಲ್ಲ’ ಎಂಬ ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಮೂಲಭೂತ ಸಂರಚನೆಯ ಸಿದ್ಧಾಂತವು ಹಲವಾರು ಸಾಂವಿಧಾನಿಕ ತಿದ್ದುಪಡಿಗಳನ್ನು ಬದಿಗೆ ಸರಿಸುವುದಕ್ಕೆ, ಅವುಗಳನ್ನು ಸಂಪೂರ್ಣವಾಗಿ ಕಿತ್ತೆಸೆಯುವುದಕ್ಕೆ ಮತ್ತು ಉನ್ನತ ಹಂತದ ನ್ಯಾಯಾಧೀಶರುಗಳ ನೇಮಕಾತಿಗೆ ಸಂಬಂಧಿಸಿದ ಎನ್‌ಜೆಎಸಿ ಕಾಯಿದೆಯ ರದ್ದತಿಗೆ ಕೂಡಾ ಮೂಲಾಧಾರವನ್ನು ಒದಗಿಸಿದೆ.

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ರಾಜ್ಯಾಧ್ಯಕ್ಷರು

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...