ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಪ್ರಭುತ್ವದ ಕೇಂದ್ರ ಸ್ಥಾನದಲ್ಲಿ ನಡೆದಿರುವ ಹೇಸಿಗೆ ಪ್ರಹಸನದ ಉದ್ಘಾಟಕರೇ ಕುಮಾರಣ್ಣನವರಂತಲ್ಲಾ. ಅಂದು ಧರ್ಮಸಿಂಗ್ ಸರಕಾರ ಗಜಗಾಂಭೀರ್ಯದಿಂದ ಸಾಗುತ್ತಿದ್ದಾಗ, ಕುಮಾರಣ್ಣನವರು ಜಮೀರ್ ಅಹಮದ್‍ನ ಕಾರಾಸ್ಥಾನದಲ್ಲಿ ತಯಾರಿಸಿದ ರೂಪುರೇಷೆಯಂತೆ ಜೆ.ಡಿ.ಎಸ್‍ಗೆ ಅಷ್ಟೂ ಶಾಸಕರನ್ನು ರೆಸಾರ್ಟ್‍ಗೆ ಹೊತ್ತೊಯ್ದರು. ಆ ಸಂದರ್ಭದ ದುಷ್ಟ ಚತುಷ್ಟಯರಲ್ಲಿ ಪ್ರಮುಖರಾದ ಬಾಲಕೃಷ್ಣ, ಚಲುವರಾಯ, ಜಮೀರು ಹೊತ್ತೊಯ್ದವರ ಬೇಕು, ಬೇಡಗಳು, ಜಿಹ್ವಾಚಾಪಲ್ಯ ಮತ್ತು ಗರ್ಮಿ ಪದಾರ್ಥಗಳ ಸೇವನೆಯಿಂದುಂಟಾದ ದೈಹಿಕ ಬಾಧೆಗಳನ್ನು ಪೂರೈಸಿದ್ದರಂತಲ್ಲಾ. ನಂತರ ಅವರನ್ನೆಲ್ಲ ಸುಸೂತ್ರವಾಗಿ ಕರೆದುಕೊಂಡು ಬಂದು, ವಿಧಾನಸೌಧದ ಎದುರು ಸುರಿದು ಕುಮಾರಣ್ಣ ಮುಖ್ಯಮಂತ್ರಿಯಾಗಿ ಮಾನ್ಯ ಎಡೂರಪ್ಪ ಉಪಮುಖ್ಯಮಂತ್ರಿಯಾಗುವಂತಹ ಪ್ರಹಸನವನ್ನು ನಿರೂಪಿಸಿದ್ದರಲ್ಲಾ. ಆದರೆ ಇಂತಹ ಸಾಹಸವೊಂದನ್ನು ಕಣ್ಣಲ್ಲಿ ನೋಡಲಾಗದೆ ಕಡು ದುಃಖದ ಮುಖಭಾವದಲ್ಲಿ ದೇವೇಗೌಡರು ಮನೆಯಲ್ಲೇ ಕುಳಿತಿದ್ದರಂತಲ್ಲಾ, ಥೂತ್ತೇರಿ…!
*****
ಕುಮಾರಣ್ಣನವರು ಮುಖ್ಯಮಂತ್ರಿಯಾಗಲು ಕ್ಷಣಗಣನೆ ನಡೆಯುತ್ತಿರುವಾಗ ಇತ್ತ ಪದ್ಮನಾಭನಗರದಲ್ಲಿ ದೇವೇಗೌಡರು ಬದುಕುಳಿಯುವುದೇ ಕಷ್ಟವೆಂಬ ಸ್ಥಿತಿಯಲ್ಲಿ ಕುಳಿತಿರಬೇಕಾದರೆ, ಕರ್ನಾಟಕದ ರಾಜಕಾರಣದ ಇನ್‍ಚಾರ್ಜ್ ಹೊತ್ತಿದ್ದ ಆಂಟೋನಿ ಜೊತೆಗೆ ಪಿ.ಜಿ.ಆರ್. ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ್ ಕೂಡ ದುರಂತವಾರ್ತೆ ವಿಧಾನಸೌಧದ ಕಡೆಯಿಂದ ಬರುತ್ತದೋ ಅಥವಾ ಪದ್ಮನಾಭನಗರ ಕಡೆಯಿಂದ ಹೊರಡುತ್ತದೋ ಎಂಬ ಆತಂಕದಲ್ಲೇ ಆಸೀನರಾಗಿದ್ದರಂತಲ್ಲಾ. ಆ ಯಾರೊಬ್ಬರಿಗೂ ಗೌಡರ ಮಹಾನಾಟಕ ಅರಿವಿಗೇ ಬರಲಿಲ್ಲವಂತಲ್ಲಾ. ಆ ನಾಟಕ ಯಾವುದೆಂದರೆ, ಮಗನ ಸಿಂಹಾಸನಕ್ಕೆ ತೊಂದರೆ ಕೊಡಬಹುದಾದ ಸಿದ್ದರಾಮಯ್ಯನನ್ನ ತೆಗೆದು ಬಿಸಾಡಿ, ಆ ಜಾಗಕ್ಕೆ ತಿಪ್ಪೇಮೇಗಲ ಒಣ ಸಗಣಿಯಂತ ತಿಪ್ಪಣ್ಣನನ್ನ ತಂದು ಕೂರಿಸಲಾಗಿತ್ತು. ಆತ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ಮೌಖಿಕ ಆದೇಶದಂತೆ, ಕುಮಾರಣ್ಣನೇ ನಮ್ಮ ನಾಯಕ ಅನ್ನುವ ಲೆಟರನ್ನು ರಾಜ್ಯಪಾಲರಿಗೆ ಕೊಡುತ್ತಾರೆ. ರಾಜ್ಯಪಾಲ ಅದನ್ನು ಊರ್ಜಿತ ಮಾಡುತ್ತಾರೆ. ದೇವೇಗೌಡರೇ ನೇಮಿಸಿದ ಕೆ.ಆರ್.ಪೇಟೆ ಕೃಷ್ಣ ಸದನದ ಸ್ಪೀಕರ್ ಆಗಿದ್ದು ಗೌಡರ ಋಣವನ್ನು ತೀರಿಸಿದ್ದರಂತಲ್ಲ ಥೂತ್ತೇರಿ…!!
*****
ಅಂತೂ ಕುಮಾರಣ್ಣನ ಸಭಾ ಪರ್ವ ಆರಂಭವಾಗಿ ಸಿಂಧ್ಯ ಎದ್ದು ನಿಂತು ನಮ್ಮ ಸಭಾ ನಾಯಕರು ಎಂ.ಪಿ.ಪ್ರಕಾಶ್ ಎಂದಾಗ ಆ ಗುಂಡಿಗೆಯನ್ನು ಹಲವರು ಮೆಚ್ಚಿದರು. ಆದರೇ ಅಂದೇ ಅಪ್ಪಮಕ್ಕಳು ಸಿಂಧ್ಯನ ಕತೆ ಮುಗಿಸಲು ಪಣತೊಟ್ಟರು. ಸಿಂಧ್ಯನ ಗಂಡು ಮಾತಿಗೆ ತಕ್ಕ ಉತ್ತರ ಕೊಡುವ ಅವಕಾಶ ಒದಗಿ ಬಂದಾಗ ಎಂ.ಪಿ.ಪ್ರಕಾಶರು, ಕುಮಾರ ಅಲ್ಲ ನಾನೇ ಸಭಾ ನಾಯಕ ಅಂದಿದ್ದರೆ ಆ ಕತೆಯೇ ಬೇರೆಯಾಗಿ ಕರ್ನಾಟಕದ ಇಂದಿನ ಪ್ರಹಸನಕ್ಕೂ ಅವಕಾಶವಿರಲಿಲ್ಲ. ಆದರೆ ಪ್ರಕಾಶ್ ಹಿಂಜರಿದರು. ಆದರೂ ಕುಮಾರಣ್ಣನ ಸರಕಾರ ಅವರಿಗೆ ಗೃಹಸಚಿವರ ಸ್ಥಾನ ನೀಡಿದ್ದಲ್ಲದೆ ಸದನದಲ್ಲಿ ಸರಕಾರದ ಎಲ್ಲಾ ಸಮಸ್ಯೆಗಳಿಗೆ ಸಮಂಜಸ ಉತ್ತರ ನೀಡುವ ಜವಾಬ್ದಾರಿ ವಹಿಸಿತ್ತು. ಆದರೇನು, ಪ್ರಕಾಶ್ ಅವರು ಅಪ್ಪಮಗನ ಗಾಣದಲ್ಲಿ ಸಿಕ್ಕು ನಜ್ಜುಗುಜ್ಜಾಗಿ ಹೋಗಿದ್ದರು. ಕಡೆಗೆ ಇವರ ಸಹವಾಸವೇ ಸಾಕು ಎಂದು ತಮ್ಮ ಜೀವಿತಾವಧಿಯಲ್ಲಿ ಟೀಕೆ ಮಾಡಿಕೊಂಡು ಬಂದ ಕಾಂಗ್ರೆಸ್‍ಗೆ ಹೋದರು, ಅಲ್ಲಿ ಸೋತರು. ಏಕೆಂದರೆ ಗೌಡರು ಅವರ ವಿರುದ್ಧವೂ ಅಭ್ಯರ್ಥಿ ಹಾಕಿದ್ದರು. ಅಂತೂ ಪ್ರಕಾಶರ ಅವನತಿಗೆ ಗೌಡರು ಕಾರಣರಾಗಿ ಹೋದರಲ್ಲಾ ಥೂತ್ತೇರಿ…!!!
*****
ಇತಿಹಾಸ ಒಂದು ದಶಕದಲ್ಲೇ ಮರುಕಳಿಸಿ ಹೋಯ್ತಲ್ಲ! ದುಷ್ಟ ಚತುಷ್ಟರ ಪೈಕಿ, ಕುಮಾರಣ್ಣನ ಬಳಿ ಯಾರೂ ಇಲ್ಲ. ಇದ್ದರೂ ಜಮೀರನನ್ನ ಪೂರಾ ನಂಬುವಂತಿಲ್ಲ. ಇತ್ತ ಎಡೂರಪ್ಪನ ಮುಖದಲ್ಲಿ ಅಂತಹ ಗೆಲುವಿಲ್ಲ. ಇಡೀ ಬಿ.ಜೆ.ಪಿ.ಯಲ್ಲೇ ಎಡೂರಪ್ಪ ಮತ್ತೆ ವಕ್ಕರಿಸುವ ಬಗ್ಗೆ, ಹೇಳಿಕೊಳ್ಳುವ ಹುಮ್ಮಸ್ಸಿಲ್ಲ. ಅದರಲ್ಲೂ ಈಶ್ವರಪ್ಪ ದಿಕ್ಕೇ ತೋಚದಂತಾಗಿದ್ದಾರೆ. ಏಕೆಂದರೆ ಎಡೂರಪ್ಪ ಮತ್ತು ಈಶ್ವರಪ್ಪನ ದಾಯಾದಿ ಕಲಹಕ್ಕೆ ಇತಿಹಾಸವೇ ಇದೆ. ಆದ್ದರಿಂದ ಎಡೂರಪ್ಪ ಮುಖ್ಯಮಂತ್ರಿಯಾದ ಕೂಡಲೇ ಅವರ ತಲೆನೋವಾಗಿ ಪರಿಣಮಿಸಲಿದ್ದಾರೆ. ಎಡೂರಪ್ಪ ಯಾವುದಕ್ಕೂ ಬಗ್ಗದಿದ್ದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬದಲು, ಕನಕದಾಸ ಸಮರಸೇನೆ ಹುಟ್ಟು ಹಾಕಿದರೂ ಅಚ್ಚರಿಯಿಲ್ಲವಂತಲ್ಲಾ. ಏಕೆಂದರೆ ಕನಕದಾಸರು ಬರೀ ದಾಸರಷ್ಟೇ ಅಲ್ಲ. ಅದಕ್ಕೂ ಮೊದಲು ಬಾಡದ ನಾಯಕರಾಗಿ ಕಾದಾಡಿ, ವಿಜಯನಗರದ ಅರಸರ ಜೀತಕ್ಕಿಂತ ತಂಬೂರಿಯೇ ಲೇಸೆಂದು ಹೊರಟವರು. ಇದನ್ನೆಲ್ಲಾ ಬಿ.ಜೆ.ಪಿ ವಿದ್ವಾಂಸರಿಂದ ಸಂಗ್ರಹಿಸಿಕೊಂಡು ಮತ್ತೆ ಎಡೂರಪ್ಪನ ಎದುರು ಹೋರಾಟ ಆರಂಭಿಸುವುದಿಲ್ಲ ಎಂಬುದು ಯಾವ ಗ್ಯಾರಂಟಿ… ಥೂತ್ತೇರಿ!!!


