ಜಾತಿ ಪ್ರಾಬಲ್ಯ ಹೆಚ್ಚಿ ಮೇಲ್ವರ್ಗದವರು ತಳಸಮುದಾಯದವರೊಂದಿಗೆ ಮೀಸಲಾತಿಗಾಗಿ ಪೈಪೋಟಿಗಿಳಿದಿರುವಂತಹ ಕಾಲಮಾನದಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು ಶರಣ ಚಳುವಳಿಯ ಜಾತ್ಯತೀತ ಅರಿವಿನ ಮಾರ್ಗವನ್ನು ಬಿತ್ತಲು, “ಮತ್ತೆ ಕಲ್ಯಾಣ” ಆಂದೋಲನವನ್ನು ತಮ್ಮ ಅನುಯಾಯಿಗಳೊಂದಿಗೆ ಹಮ್ಮಿಕೊಂಡಿದ್ದಾರೆ.
ಅದಕ್ಕಾಗಿ ಆಗಸ್ಟ್ 1 ರಿಂದ ತರೀಕೆರೆ ತಾಲ್ಲೂಕಿನಿಂದ ಆರಂಭಿಸಿ ಆಗಸ್ಟ್ 30ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಕ್ತಾಯಗೊಳಿಸಲಿರುವ ಶ್ರೀಗಳ ಕಾರ್ಯಕ್ರಮ ಕುರಿತು ಪತ್ರಿಕೆಗಳಲ್ಲಿ ಓದಿದೆ. ಇದೊಂದು ಸದಾಶಯದ ಪ್ರಯತ್ನವಾದರೂ ಎಷ್ಟರಮಟ್ಟಿಗೆ ಸಾರ್ಥಕತೆ ಪಡೆದೀತೆಂಬ ಎದೆಗುದಿ ಇದ್ದೇ ಇದೆ.

ಬಸವಣ್ಣನವರು ಮಾಡಿದ ಕಲ್ಯಾಣ ಕ್ರಾಂತಿ ಕೂಡ ಸಫಲವಾದದ್ದಿಲ್ಲ. 12ನೇ ಶತಮಾನದಲ್ಲಿ ಅವರು ಸರ್ವ ಸಮುದಾಯದವರನ್ನೂ ಕಾಯಕದ ಮೂಲಕವೇ ಗುರುತಿಸಿ ಒಂದೆಡೆ ಒಗ್ಗೂಡಿಸಿ ಸಾಕ್ಷರಗೊಳಿಸಿ ತಿಳಿಹೇಳಿ ಸರ್ವಸಮಾನತೆಗೆ ನಾಂದಿ ಹಾಡಿದರು. ವೈದಿಕರು ಬಿಜ್ಜಳನನ್ನೇ ಓಲೈಸಿ ಬಸವಣ್ಣನನ್ನು ಗಡಿಪಾರು ಮಾಡಿಸಿ ಕೂಡಲಸಂಗಮದಲ್ಲಿ ಐಕ್ಯಗೊಳಿಸಿ ತಮ್ಮ ಜಾತಿ ಕಾಪಾಡಿಕೊಂಡಿದ್ದು ಇಂದಿಗೆ ಇತಿಹಾಸ.
ಈಗಂತೂ ಎಲ್ಲಾ ಜಾತಿಗಳಲ್ಲಿಯೂ ಅಂತರ್ಗತವಾಗಿ ವೈದಿಕರಿದ್ದಾರೆ. ತಾವೇ ಹೆಚ್ಚೆಂದು ಪಟ್ಟಪದವಿಗಳಿಗಾಗಿ ಜಾತಿಯ ಗುಂಪು ಕಟ್ಟುತ್ತಿದ್ದಾರೆ. ಅಷ್ಟೇಕೆ ಬಸವಣ್ಣನವರ ಅನುಯಾಯಿಗಳೇ ತಮ್ಮ ಧರ್ಮವನ್ನೀಗ ಜಾತಿಯಾಗಿಸಿ ಕುರೂಪಗೊಳಿಸಿಲ್ಲವೆ? ನಮ್ಮ ದೇಶದಲ್ಲಿ ವೈದಿಕ ಧರ್ಮ ವಿರೋಧಿಸಿಯೇ ಜನ್ಮತಳೆದ ಜೈನ ಬೌದ್ಧ ಚಾರ್ವಾಕ ವೀರಶೈವ ಧರ್ಮಗಳೆಲ್ಲವೂ ಜಾತಿ ಭೂತಗಳಾಗಿಲ್ಲವೆ? ಅಷ್ಟೇ ಅಲ್ಲ ವೈದಿಕರ ನಕಲುಗಳಾಗಿ ಹೋಮಯಜ್ಞಯಾಗ ಮಡಿಮೈಲಿಗೆ ಅಸ್ಪೃಶ್ಯತೆ ಪಾಲಿಸುತ್ತಿಲ್ಲವೆ? ಶಾಂತಿ ಸಮಾನತೆ ಅಹಿಂಸೆ ಸಾರಿದ ಬುದ್ಧನನ್ನು ಭಾರತದಿಂದಲೇ ಒದ್ದು ಓಡಿಸಿಯಾಯಿತು. ಬಸವಣ್ಣನನ್ನು ಕರ್ನಾಟಕದಾಚೆಗೆ ಬೆಳೆಯಲೂ ಬಿಡದೆ ಸಂಗಮದಲ್ಲಿ ಐಕ್ಯಗೊಳಿಸಿದ್ದಾಯಿತು. ಬುದ್ಧ ಬಸವ ವಾಲ್ಮೀಕಿ ಕನಕ ಅಂಬೇಡ್ಕರ್ ಎಲ್ಲಾ ಮಹಾನುಭಾವರನ್ನೂ ಜಾತಿ ಸಂಕೋಲೆಯಲ್ಲಿ ಕಟ್ಟಿ ಕೆಡವಿ ವಿರೂಪಗೊಳಿಸಲಾಯಿತು.

ನಮ್ಮದೇನು ವೀರಶೈವ ಧರ್ಮವೋ ಲಿಂಗಾಯಿತ ಧರ್ಮವೋ ಅಥವಾ ನಾವೇನು ವೀರಶೈವ ಲಿಂಗಾಯಿತರೋ? ತಮ್ಮದೇನು ಜಾತಿಯೋ ಧರ್ಮವೋ ಎಂಬ ಸಂದಿಗ್ಧದಲ್ಲಿರುವ, ಮೀಸಲಾತಿ ಲಾಭಕ್ಕಾಗಿ ಧರ್ಮದ ಅಸ್ಮಿತೆಗಾಗಿ ಪರಿತಪಿಸದೆ ಲಿಂಗಾಯಿತರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಿದ್ದಾರೆ. ತಮ್ಮ ಧರ್ಮೀಯರ ಇಂತಹ ಗೊಂದಲಗಳನ್ನು ಶ್ರೀಗಳು ಮೊದಲು ಬಗೆಹರಿಸಬೇಕಿದೆ.
ವೀರಶೈವ ಲಿಂಗಾಯಿತರಲ್ಲೇ ಇರುವ ಅನೇಕ ಬಣಗಳಲ್ಲಿನ (ಬಣಜಿಗ ನೊಣಬ ಪಂಚಮಸಾಲಿ ಸಾದರ ಗೌಡ ಇತ್ಯಾದಿ) ಗೊಂದಲ ಬಗೆಹರಿಸಿ ಮಹಾಸ್ವಾಮಿಗಳೇ ಮುಂದೆ ನಿಂತು ವಿವಾಹ ಮಾಡಿಸುವ ಅಗತ್ಯವಿದೆ. ನಂತರ ಬಸವಣ್ಣನ ಪರಿಕಲ್ಪನೆಯಂತೆ ಇತರರನ್ನು ಅಂತರ್ಜಾತೀಯ ಕಲ್ಯಾಣಗಳಿಗೆ ಅಣಿಗೊಳಿಸಿದರೆ ಮಾತ್ರ “ಮತ್ತೆ ಕಲ್ಯಾಣ” ಆಂದೋಲನವಾದೀತು.
ಇನ್ನೊಂದು ಮಾತು, ಜಾತಿಗೊಬ್ಬ ಸ್ವಾಮಿಗಳು ಹುಟ್ಟಿಕೊಂಡಿರುವ 21ನೇ ಶತಮಾನದಲ್ಲಿ ಮೊದಲಿಗೆ ಎಲ್ಲಾ ಮಠದಯ್ಯಗಳೂ ತಮ್ಮ ತಮ್ಮ ಜಾತಿ (ಧರ್ಮ) ಅಹಂಕಾರ, ಮುನಿಸು, ಮಠದ ಪರಂಪರೆ, ಸಿರಿವಂತಿಕೆಯನ್ನು ಬದಿಗೊತ್ತಿ ಒಂದಾಗುವ ಮೂಲಕ “ಮತ್ತೆ ಕಲ್ಯಾಣ” ಆರಂಭ ಪಡೆದರಂತೂ ಮಹತ್ವಪೂರ್ಣ ಆಂದೋಲನವಾದಿತಷ್ಟೇ ಅಲ್ಲ, ಮುಂದಿನ ಹಾದಿ ಕೂಡ ಸುಗಮ ಸ್ಪಷ್ಟ.
ಹೆಚ್ಚು ವಿದ್ಯಾವಂತರೇ ಜಾತಿ ಮೌಢ್ಯದಿಂದ ನರಳುತ್ತಿದ್ದು, ಯುವ ಪೀಳಿಗೆಯಂತೂ ಧರ್ಮಾಂಧರಂತೆ ವರ್ತಿಸುತ್ತಿರುವುದು ಇತ್ತೀಚಿನ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ರಾಜತ್ವವಿದ್ದ ಕಾಲದಲ್ಲಿಯೇ ಬಸವಣ್ಣ ಮಾಡಿದ ಕ್ರಾಂತಿಯನ್ನು ಪ್ರಜಾಪ್ರಭುತ್ವವಿರುವ ದೇಶದಲ್ಲಿಂದು ಮಾಡುವುದು ಸಹ ಸವಾಲಿನ ಕೆಲಸವೆ. ಸರ್ವ ಮಠಾಧಿಪತಿಗಳೂ ತಮ್ಮ ಕ್ಷೇತ್ರದಲ್ಲಿರುವ ತಮ್ಮ ಅನುಯಾಯಿಗಳನ್ನು ‘ಮೊದಲ ಹೆಜ್ಜೆ’ ಎಂಬಂತೆ ಜಾತಿವ್ಯವಸ್ಥೆಯ ಬಿಕ್ಕಟ್ಟಿನಿಂದ ಈಚೆ ತಂದು ಸರ್ವರೊಳಗೊಂದಾಗಿ ಬಾಳಲು ಪ್ರಯತ್ನಗಳಾಗಬೇಕಿದೆ. ಮನೆಗೆದ್ದು ಮಾರುಗೆಲ್ಲದೆ ವೃಥಾ ನೂರಾರು ಕಿ.ಮೀ. ಆಂದೋಲನ ಯಾತ್ರೆ ಪ್ರಯಾಸವಾದೀತಷ್ಟೆ.
ಈಗಂತೂ ನಮ್ಮೊಂದಿಗೆ ಸರ್ವಧರ್ಮೀಯರೂ ಸಹಬಾಳ್ವೆ ನಡೆಸುತ್ತಿದ್ದಾರೆ. ನಾವು ಹಿಂದೂಗಳು ಎಂಬ ಭಾವವೇ ಭಾರವಾಗಿ ನಾವೆಲ್ಲಾ ಭಾರತೀಯರೆಂಬ ಸದ್ಭಾವನೆ ಮೂಡದೆ ಹೋದರೆ ಎಂತಹ ಪ್ರಯತ್ನವೂ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆಯೆ. ಎಲ್ಲಾ ಜಾತಿ ಧರ್ಮದವರೂ ಒಟ್ಟಾಗಿ ಸೇರಿ ಸಾಣೇಹಳ್ಳಿ ಶ್ರೀಗಳ ಮುಂದೆ ಜಾತ್ಯತೀತರು ಧರ್ಮಾತೀತರೆಂದು ಪ್ರದರ್ಶಿಸಿಕೊಳ್ಳಬಹುದು. ಆದರೆ ಇವರೆಲ್ಲಾ ಜಾತಿಧರ್ಮ ಬಿಟ್ಟು ಭವಿಷ್ಯದಲ್ಲಿ ಬದುಕಬಲ್ಲಷ್ಟು ಉದಾರಿಗಳು ವಿವೇಕಿಗಳಾಗಿದ್ದಾರೆಯೆ? ಮಾಂಸ ತಿಂದು ಕುಡಿದು ಸ್ವಚ್ಛಂದವಾಗಿ ಬದುಕುವುದೇ ಜಾತ್ಯತೀತ ಲಕ್ಷಣವೆಂದು ಭಾವಿಸಿರುವ ಆಧುನಿಕರಿಗೆ ಇಂತಹ ಜನಪದ ಆಂದೋಲನಗಳ ಆಂತರ್ಯ ಅರ್ಥವಾದೀತೆ!?
ಯಾವುದೇ ಜಾತಿ ವಿರೋಧಿಸದೆ ಕಲ್ಯಾಣದ ಆಶಯಗಳನ್ನು ಜಾರಿಗೆ ತರುವ ಸದುದ್ದೇಶ ತಮ್ಮದೆಂಬ ಹೇಳಿಕೆಯಿಂದೇನೂ ಆಗದು. ಜಾತಿಗಳನ್ನು ಒಗ್ಗೂಡಿಸಬೇಕೆಂದರೆ ಅಂತರ್ಜಾತೀಯ ವಿವಾಹಗಳನ್ನು ನಡೆಸುವ ಪ್ರಯತ್ನವೇ ಆಂದೋಲನದ ಗುರಿಯಾಗಬೇಕು. ಬರೀ ಪಾದಯಾತ್ರೆ ಸರ್ವಧರ್ಮೀಯರ ಸಭೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗಿನ ಸಂವಾದ ಹೆಚ್ಚು ಪ್ರಚಾರ ಗಿಟ್ಟಿಸೀತಷ್ಟೆ. ಕಾರ್ಯಕ್ರಮವು ಬಸವಣ್ಣನವರ ಕಲ್ಯಾಣ ಕ್ರಾಂತಿಯ ಹಾದಿಯಲ್ಲೇ ಸಾಗಬೇಕೆಂದಾದಲ್ಲಿ ಮೇಲ್ವರ್ಗ ಕೆಳವರ್ಗಗಳು ರಕ್ತ ಸಂಬಂಧಿಗಳಾಗುವ ಪ್ರಯತ್ನವೇ ಆಂದೋಲನದ ಮುಖ್ಯಗುರಿಯಾಗಬೇಕು.
‘ಕಲ್ಯಾಣ’ ಎಂದರೆ ಸರ್ವರಿಗೂ ಒಳಿತಾಗುವ ಸೀಮಿತ ಉದ್ದೇಶದ್ದಾದರೆ ಶ್ರೀಗಳು ಯಾತ್ರೆ ಹೋಗುವ ಗ್ರಾಮಗಳಲ್ಲಾದರೂ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆ, ಗೋಶಾಲೆಗಳ ನಿರ್ಮಾಣ, ಬಡವರಿಗೆ ಸೂರು ನೀರು ಕಲ್ಪಿಸುವ ಕುರಿತು ಸರ್ಕಾರದೊಡನೆ ಇಲ್ಲವೆ ತಮ್ಮ ಸಿರಿವಂತ ಭಕ್ತರೊಡನೆ ಚರ್ಚಿಸಿ ಕಾರ್ಯಗತಗೊಳಿಸಬೇಕು. ಇಲ್ಲವಾದರೆ ಯಾತ್ರೆ ಬರಿದೆ ಜಾತ್ರೆ.


