ಭೋಪಾಲ್: ದಲಿತ ಕುಟುಂಬಕ್ಕೆ ಕಿರುಕುಳ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಪೊಲೀಸರು, ಸ್ವಯಂಘೋಷಿತ ದೇವಮಾನವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಸಹೋದರನ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಗಡ ಗ್ರಾಮದ ನಿವಾಸಿಯಾದ ವಧುವಿನ ತಂದೆ ಕಲ್ಲು ಅಹಿರ್ವಾರ್ ಅವರು ಆಯೋಜಿಸಿದ್ದ ಯುವ ದಲಿತ ದಂಪತಿಯ ವಿವಾಹಕ್ಕೆ ಬಂದಿದ್ದ ಸೌರವ್ ಗರ್ಗ್ ಅಲಿಯಾಸ್ ಶಾಲಿಗ್ರಾಮ್ ಗರ್ಗ್, ಗನ್ ಹಿಡಿದು ಜನರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೊ ವೈರಲ್ ಆದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಬಾಗೇಶ್ವರ ಧಾಮ್‌ನಲ್ಲಿ ತನ್ನ ಸಹೋದರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯನ್ನು ಆಗಲಿಲ್ಲ ಎಂಬ ಕಾರಣಕ್ಕೆ ಗಾರ್ಗ್ ಬಂದೂಕು ಹಿಡಿದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಮಾತನಾಡಿ, “ಬಾಗೇಶ್ವರ್ ಧಾಮ್‌ನ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಗಳ ಮದುವೆ ಮಾಡುವುದಾಗಿ ಕಲ್ಲು ಅಹಿರ್ವಾರ್ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ನಂತರ ಮನೆಯಲ್ಲಿ ಪ್ರತ್ಯೇಕವಾಗಿ ವಿವಾಹವನ್ನು ಮಾಡಲು ನಿರ್ಧರಿಸಿದರು” ಎಂದಿದ್ದಾರೆ.
“ಫೆಬ್ರವರಿ 11 ರಂದು, ಸೌರವ್ ಗಾರ್ಗ್ ಕೆಲವು ಜನರೊಂದಿಗೆ ಅಹಿರ್ವಾರ್ ಅವರ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಮಧ್ಯಪ್ರದೇಶ: ದಲಿತರು ದೇವಾಲಯ ಪ್ರವೇಶಿಸಿದರೆಂದು ಹಿಂಸಾಚಾರ; 14 ಜನರಿಗೆ ಗಾಯ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಭಾಷೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 506 (ಅಪರಾಧ ಬೆದರಿಕೆ), 427 (₹50 ಕ್ಕಿಂತ ಹೆಚ್ಚು ಹಾನಿ) ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಧೀರೇಂದ್ರ ಕೃಷ್ಣ ಶಾಸ್ತ್ರಿಯ ಸಹೋದರನ ಕೈಯಲ್ಲಿ ಪಿಸ್ತೂಲ್, ಬಾಯಿಯಲ್ಲಿ ಸಿಗರೇಟ್ ಇರುವುದು ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ. ಆತ ಮದ್ಯಪಾನ ಮಾಡಿದ್ದ ಎನ್ನಲಾಗುತ್ತಿದೆ. ಈ ಸ್ಥಿತಿಯಲ್ಲಿ ದಲಿತ ಸಮುದಾಯದವರ ಮದುವೆಗೆ ಆಗಮಿಸಿ ಅವಾಂತರ ಸೃಷ್ಟಿಸಿದ್ದಾನೆ.
ವೀಡಿಯೋ ಹೊರಬಿದ್ದ ನಂತರ ಧೀರೇಂದ್ರ ಕೃಷ್ಣ ಶಾಸ್ತ್ರಿ ಟೀಕೆಗೆ ಗುರಿಯಾಗಿದ್ದಾರೆ. ಅದೇ ಸಮಯದಲ್ಲಿ, ಛತ್ತರ್‌ಪುರ ಎಸ್‌ಪಿ ಸಚಿನ್ ಶರ್ಮಾ ಪ್ರಕರಣದ ತನಿಖೆಗಾಗಿ ತನಿಖಾ ತಂಡವನ್ನು ರಚಿಸಿದ್ದಾರೆ.


