Homeಮುಖಪುಟಇಬ್ಬರು ಮುಸ್ಲಿಮರ ಹತ್ಯೆ ವಿವಾದ; ರಾಜಸ್ಥಾನ ಪೊಲೀಸರ ವಿರುದ್ಧ ಹರಿಯಾಣ ಪೊಲೀಸರಿಂದ ಪ್ರಕರಣ ದಾಖಲು

ಇಬ್ಬರು ಮುಸ್ಲಿಮರ ಹತ್ಯೆ ವಿವಾದ; ರಾಜಸ್ಥಾನ ಪೊಲೀಸರ ವಿರುದ್ಧ ಹರಿಯಾಣ ಪೊಲೀಸರಿಂದ ಪ್ರಕರಣ ದಾಖಲು

ರಾಜಸ್ಥಾನ- ಹರಿಯಾಣ ಗಡಿಯಲ್ಲಿ ಗೋರಕ್ಷಣೆಯ ಹೆಸರಲ್ಲಿ ಇಬ್ಬರು ಮುಸ್ಲಿಮರನ್ನು ಕೊಲ್ಲಲಾಗಿದೆ

- Advertisement -
- Advertisement -

ಬಜರಂಗದಳದ ಗೂಂಡಾಗಳು ಇಬ್ಬರು ಮುಸ್ಲಿಮರನ್ನು ಹರಿಯಾಣ- ರಾಜಸ್ಥಾನ ಗಡಿಯಲ್ಲಿ ಹತ್ಯೆ ಮಾಡಿದ್ದಾರೆಂಬ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ರಾಜಸ್ಥಾನದ ಮುಸ್ಲಿಂ ವ್ಯಕ್ತಿಗಳನ್ನು ಹರಿಯಾಣಕ್ಕೆ ಎಳೆದೊಯ್ದು, ಕಾರಿನಲ್ಲಿ ಕೂಡಿಹಾಕಿ ಕೊಲೆ ಮಾಡಲಾಗಿದ್ದು, ಈಗ ಎರಡು ರಾಜ್ಯಗಳ ನಡುವೆ ತಿಕ್ಕಾಟ ಆರಂಭವಾಗಿದೆ.

ಹರಿಯಾಣ ಪೊಲೀಸರು ರಾಜಸ್ಥಾನ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 30 ರಿಂದ 40 ಅನಾಮಧೇಯ ಪೊಲೀಸರ ವಿರುದ್ಧ ಎಫ್‌ಐಆರ್‌ ಆಗಿದೆ.

ಗೋರಕ್ಷಕರು ಕೊಂದಿದ್ದಾರೆ ಎಂದು ಹೇಳಲಾದ ಇಬ್ಬರು ಮುಸ್ಲಿಮರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಸಂದರ್ಭದಲ್ಲಿ ರಾಜಸ್ಥಾನ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅದರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ದೂರು ನೀಡಿದ ಮಹಿಳೆಯ ಮಗನಾಗಿರುವ ಶ್ರೀಕಾಂತ್ ಪಂಡಿತ್, ಈ ಇಬ್ಬರು ಮುಸ್ಲಿಮರ (ನಾಸಿರ್‌ ಮತ್ತು ಜುನೈದ್‌) ಅಪಹರಣ ಮತ್ತು ಹತ್ಯೆಯಲ್ಲಿ ಆರೋಪಿಯಾಗಿದ್ದಾನೆ. ಬಜರಂಗದಳದ ಮುಖಂಡನಾದ ಮೋನು ಮಾನೇಸರ್ ನೇತೃತ್ವದ ಗೋಸಂರಕ್ಷಣಾ ಗುಂಪಿನ ಸದಸ್ಯನಾಗಿ ಶ್ರೀಕಾಂತ್ ಗುರುತಿಸಿಕೊಂಡಿದ್ದಾನೆ. ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವ ಐವರು ಆರೋಪಿಗಳಲ್ಲಿ ಈತನೂ ಒಬ್ಬನಾಗಿದ್ದಾನೆ.

ಶ್ರೀಕಾಂತ್‌ನ ತಾಯಿ ದುಲಾರಿ ದೇವಿ ಅವರು ತಮ್ಮ ದೂರಿನಲ್ಲಿ, “ರಾಜಸ್ಥಾನ ಪೊಲೀಸರು ನನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದರು. ನನ್ನ ಗರ್ಭಿಣಿ ಸೊಸೆಯ ಹೊಟ್ಟೆಗೆ ಒದ್ದು ಗರ್ಭಪಾತಕ್ಕೆ ಕಾರಣವಾಗಿದ್ದಾರೆ” ಎಂದು ಆರೋಪಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 148 (ಗಲಭೆ, ಮಾರಣಾಂತಿಕ ಆಯುಧಗಳೊಂದಿಗೆ ಶಸ್ತ್ರಸಜ್ಜಿತ), 149 (ಕಾನೂನುಬಾಹಿರ ಸಭೆ), 354 (ಹೆಣ್ಣಿನ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಹಲ್ಲೆ), 452 (ಮನೆ-ಅತಿಕ್ರಮಣ) ಮತ್ತು 312 (ಗರ್ಭಪಾತಕ್ಕೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೇವಿಯವರು ಮಾಡಿರುವ ಆರೋಪಗಳನ್ನು ರಾಜಸ್ಥಾನ ಪೊಲೀಸರು ನಿರಾಕರಿಸಿದ್ದಾರೆ. “ಮಗುವಿನ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

“ರಾಜಸ್ಥಾನ ಪೊಲೀಸ್‌ ತಂಡದ ಸುಮಾರು 40 ಸಿಬ್ಬಂದಿ ನನ್ನ ಮನೆಗೆ ಬಲವಂತವಾಗಿ ಪ್ರವೇಶಿಸಿ, ನಮ್ಮನ್ನು ನಿಂದಿಸಿದ್ದಾರೆ. ನನ್ನ ಇತರ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ” ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.

ಕಳೆದ ವಾರ ಹರಿಯಾಣದಲ್ಲಿ ರಾಜಸ್ಥಾನದ ಇಬ್ಬರು ವ್ಯಕ್ತಿಗಳು ಎಸ್‌ಯುವಿಯೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹರಿಯಾಣದ ನುಹ್‌ನಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರೆಂಬ ಶಂಕೆಯ ಮೇರೆಗೆ ಗೋರಕ್ಷಣೆಯ ಹೆಸರಿನ ಗೂಂಡಾಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಈ ಪ್ರಕರಣದಲ್ಲಿ ಬಜರಂಗದಳದ ಸದಸ್ಯ ಮೋನು ಮಾನೇಸರ್ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಭಿವಾನಿ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಮರ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಸಂಸ್ಥೆ ನಿರ್ಲಕ್ಷ್ಯ ತಾಳಿದೆ ಎಂಬ ಆರೋಪಗಳನ್ನು ಪರಿಶೀಲಿಸಲು ಹರಿಯಾಣ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.

ಇದನ್ನೂ ಓದಿರಿ: ಹರಿರ್ಯಾಣ- ರಾಜಸ್ಥಾನ ಗಡಿ: ಇಬ್ಬರು ಮುಸ್ಲಿಮರನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು; ಸ್ಥಳೀಯರಲ್ಲಿ ಭೀತಿ

ನಾಸಿರ್ ಮತ್ತು ಜುನೈದ್ ಅವರನ್ನು ಅಪಹರಿಸಿದ ನಂತರ ಆರೋಪಿಗಳು ಪೊಲೀಸರನ್ನು ಭೇಟಿ ನೀಡಿದ್ದಾರೆ ಎಂಬ ಅಂಶವನ್ನು ಗಂಭೀರವಾಗಿ ರಾಜಸ್ಥಾನ ಪೊಲೀಸರು ಪರಿಗಣಿಸಿದ್ದಾರೆ. ‘ಅಪರಾಧ ತನಿಖಾ ಸಂಸ್ಥೆ ಪೊಲೀಸ್ ಠಾಣೆ’ಯ ಸಮೀಪವಿರುವ ಎಲ್ಲಾ ಸಂಸ್ಥೆಗಳ ಸಿಸಿಟಿವಿ ದೃಶ್ಯಗಳನ್ನು ರಾಜಸ್ಥಾನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆದರೆ, ಈ ಆರೋಪ ನಿರಾಧಾರ ಎಂದು ನುಹ್ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ತಿಳಿಸಿದ್ದಾರೆ. ಆರೋಪಗಳನ್ನು ಪರಿಶೀಲಿಸಲು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಉಷಾ ಕುಂದು ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

“ಅಪರಾಧ ತನಿಖಾ ಸಂಸ್ಥೆಯ ಪಾತ್ರದ ಕುರಿತು ರಾಜಸ್ಥಾನ ಪೊಲೀಸರ ವರದಿ ಏನು ತಿಳಿಸುತ್ತಿದೆ ಎಂದು ತಿಳಿಯಲು ನಾನು ಕಾಯುತ್ತಿದ್ದೇನೆ. ನಮ್ಮ ಪೊಲೀಸರು ಭಾಗಿಯಾಗಿರುವುದು ಕಂಡುಬಂದರೆ, ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...