Homeಕರ್ನಾಟಕಎನ್‌ಪಿಎಸ್‌ ನೌಕರರ ಮೇಲೆ ಸರ್ಕಾರಿ ನೌಕರರ ಸಂಘದಿಂದ ಹಲ್ಲೆ; ಷಡಕ್ಷರಿ ಮೇಲೆ ಗಂಭೀರ ಆರೋಪ

ಎನ್‌ಪಿಎಸ್‌ ನೌಕರರ ಮೇಲೆ ಸರ್ಕಾರಿ ನೌಕರರ ಸಂಘದಿಂದ ಹಲ್ಲೆ; ಷಡಕ್ಷರಿ ಮೇಲೆ ಗಂಭೀರ ಆರೋಪ

ಎನ್‌ಪಿಎಸ್ ನೌಕರರನ್ನು ಮಾತುಕತೆಗೆ ಕರೆಸಿ, ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಬಂದಿದೆ.

- Advertisement -
- Advertisement -

ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಸಂಬಂಧ ಹಾಗೂ ವೇತನ ಪರಿಷ್ಕರಣೆ ವಿಚಾರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಕರೆದಿದ್ದ ತುರ್ತು ಸಭೆಯಲ್ಲಿ ಯಾವುದೇ ಚರ್ಚೆಗಳನ್ನು ನಡೆಸದೆ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದನ್ನು ವಿರೋಧಿಸಿದ ಎನ್‌ಪಿಎಸ್‌ ನೌಕರರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಬಂದಿದೆ.

ಸಿ.ಎಸ್.ಷಡಕ್ಷರಿಯವರು ಕೈಗೊಂಡ ಏಕಪಕ್ಷೀಯ ನಿರ್ಣಯವನ್ನು ವಿರೋಧಿಸಿದ ‘ಎನ್.ಪಿ.ಎಸ್. (ನೂತನ ಪಿಂಚಣಿ ಯೋಜನೆ) ನೌಕರರ ಸಂಘ’ದ ಸದಸ್ಯರ ಮೇಲೆ ಸರ್ಕಾರಿ ನೌಕರರ ಸಂಘದ ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಎನ್‌ಪಿಎಸ್ ಟಿ-ಶರ್ಟ್ ಧರಿಸಿದ್ದವರನ್ನು ಗುರಿಯಾಗಿಸಿಕೊಂಡು ಹೊಡೆಯಲಾಗಿದೆ, ಮಹಿಳಾ ನೌಕರರನ್ನೂ ನಿಂದಿಸಲಾಗಿದೆ ಎಂಬ ಗುರುತರ ಆರೋಪ ಕೇಳಿಬಂದಿದೆ.

ಎನ್.ಪಿ.ಎಸ್. ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಹಾಗೂ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡರ ನೇತೃತ್ವದಲ್ಲಿ ನೌಕರರ ಸಂಘದ ದ್ವಾರದಲ್ಲಿ ಎನ್.ಪಿ.ಎಸ್. ನೌಕರರು ಕೆಲಕಾಲ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇದೇ ವೇಳೆ ನಿಂಗೇಗೌಡ, ಶಾಂತರಾಮ್ ಅವರು ಷಡಕ್ಷರಿ ಮತ್ತು ಅವರ ತಂಡದಿಂದಾದ ದೌರ್ಜನ್ಯವನ್ನು ಖಂಡಿಸಿದ್ದಾರೆ. ಪೊಲೀಸರು ಮಧ್ಯೆ ಪ್ರವೇಶಿಸಿ ಮನವೊಲಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿರುವ ಘಟನೆಯೂ ನಡೆದಿದೆ.

ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷರಾದ ಶಾಂತರಾಮ್‌ ಅವರು ‘ನಾನುಗೌರಿ.ಕಾಂ’ ಜೊತೆಯಲ್ಲಿ ಮಾತನಾಡಿ ಘಟನೆಯ ವಿವರ ನೀಡಿದರು.

“ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿಯವರು ಮಾರ್ಚ್ 2022ಕ್ಕೆ ಕೇಂದ್ರ ಮಾದರಿ ವೇತನ ಕೊಡಿಸುವುದಾಗಿ ಹೇಳಿದ್ದರು. ಅದಾದ ನಂತರ ಎನ್‌ಪಿಎಸ್ ಹೋರಾಟವನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದರು. 2022ಕ್ಕೆ ಕೇಂದ್ರ ಮಾದರಿ ವೇತನ ಕೊಡಿಸುವುದಾಗಿ ಹೇಳಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನೂ ನೀಡಿದ್ದರು. ಆನಂತರ ಕೇಂದ್ರ ಮಾದರಿ ಕಾಣೆಯಾಗಿ ರಾಜ್ಯ ಮಾದರಿಯಾಯಿತು. ಯೂಟರ್ನ್ ತೆಗೆದುಕೊಂಡರು. ನವೆಂಬರ್‌ನಲ್ಲಿ ಹೇಗೋ ವೇತನ ಆಯೋಗ ರಚನೆಯಾಯಿತು. ಏಳನೇ ವೇತನ ಆಯೋಗವನ್ನು ಈ ಬಜೆಟ್‌ನಲ್ಲಿಯೇ ಜಾರಿ ಮಾಡುವುದಾಗಿ ಭರವಸೆಯನ್ನು ಷಡಕ್ಷರಿ ನೀಡಿದ್ದರು. ಒಂದು ರೂಪಾಯಿಯನ್ನೂ ಸರ್ಕಾರ ಈ ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ. ವೇತನ ಆಯೋಗ ಆದಮೇಲೆ ಬಜೆಟ್‌ನಲ್ಲಿ ಹಣ ಎತ್ತಿಡಬೇಕಿತ್ತಲ್ಲವೇ? ಅದಾಗಲಿಲ್ಲ. ಕೊಟ್ಟ ಮಾತಿಗೆ ತಪ್ಪಿದ್ದರಿಂದ ಅದನ್ನು ಮುಚ್ಚಿಕೊಳ್ಳುವುದಕ್ಕಾಗಿ, ಹೋರಾಟಕ್ಕೆ ಕರೆ ನೀಡುವುದಾಗಿ ನಮ್ಮೆನ್ನೆಲ್ಲ ಷಡಕ್ಷರಿಯವರು ಇಂದು ಸಭೆಗೆ ಕರೆದಿದ್ದರು. ಈ ವೇಳೆ ಹಲ್ಲೆ ನಡೆಸಲಾಗಿದೆ” ಎಂದು ಶಾಂತರಾಮ್ ತಿಳಿಸಿದರು.

“ಎನ್‌ಪಿಎಸ್ ನೌಕರರ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದೆವು. ಸರ್ಕಾರಿ ನೌಕರರ ಸಂಘವು ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ ಕೊಡಬೇಕು. ಆದೇಶ ಆಗುವವರೆಗೂ ಹೋರಾಟವನ್ನು ವಾಪಸ್‌ ತೆಗೆದುಕೊಳ್ಳಬಾರದು ಎಂದು ಬೇಡಿಕೆಯನ್ನು ನಾವು ಇಟ್ಟೆವು. ಆದರೆ ಅವರು ಹಾರಿಕೆಯ ಉತ್ತರ ಕೊಟ್ಟರು. ಚರ್ಚೆ ಮಾಡಲು ಅವಕಾಶ ನೀಡದೆ ತಮ್ಮ ಬೆಂಬಲಿಗರಿಂದ ತಳ್ಳಾಡಿಸಿ, ಹಲ್ಲೆ ಮಾಡಿಸಿ ಹೊರಗೆ ದೂಡಿದರು” ಎಂದು ಬೇಸರ ವ್ಯಕ್ತಪಡಿಸಿದರು.

“ಸರ್ಕಾರಿ ನೌಕರರ ಸಂಘದ ಮುಂದಿನ ನಡೆಯೇನು ಎಂಬುದನ್ನು ಗಮನಿಸಿ ಎನ್‌ಪಿಎಸ್ ನೌಕರರ ಸಂಘ ನಿರ್ಧಾರ ಕೈಗೊಳ್ಳಲಿದೆ. ಈ ಕುರಿತು ಸಭೆ ನಡೆಸಲಾಗುವುದು. ಅಧ್ಯಕ್ಷರ ಮುಂದೆಯೇ ಗೂಂಡಾಗಳು ಹಲ್ಲೆ ನಡೆಸುತ್ತಿರುವಾಗಲೂ ಅವರು ಮಧ್ಯ ಪ್ರವೇಶಿಸಲಿಲ್ಲ. ಎಲ್ಲರಿಗೂ ಮಾತನಾಡಲು ಅವಕಾಶ ಕೊಡಿಸುತ್ತೇನೆ ಎಂಬ ಮಾತನ್ನೂ ಹೇಳದೆ ಹೊರಗೆ ದಬ್ಬಲಾಯಿತು” ಎಂದು ವಿಷಾದಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿರುವ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಅವರು, “ಷಡಕ್ಷರಿಯವರು ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಾವು ಈಗಾಗಲೇ ಈ ನಿರ್ಣಯಗಳನ್ನು ಮಂಡಿಸಿದ್ದೇವೆ. ಎಲ್ಲರಿಗೂ ಒಪ್ಪಿಗೆಯೇ ಎಂದು ಕೇಳಿದರು. ಚರ್ಚೆ ಮಾಡಲು ಅವಕಾಶ ನೀಡಿ ಎಂದು ಒತ್ತಾಯಿಸಿದೆವು. ನೀವು ಕೊಟ್ಟ ಭರವಸೆ ಈಡೇರಿಲ್ಲ ಎಂದೆವು. ಆದೇಶ ಆಗುವವರೆಗೂ ಈ ಹೋರಾಟ ಮುಂದುವರಿಯುತ್ತದೆ ಎಂದು ನಾವು ಹೇಳಲು ಪ್ರಯತ್ನಪಟ್ಟೆವು. ಎಲ್ಲ ಎನ್‌ಪಿಎಸ್‌ ನೌಕರರ ಮೇಲೆ ಹಲ್ಲೆ ನಡೆಯಿತು. ಇದೊಂದು ಪೂರ್ವ ನಿಯೋಜಿತ ಕೃತ್ಯ. ಇದನ್ನು ಸಮಸ್ತ ಸರ್ಕಾರಿ ನೌಕರರು ಖಂಡಿಸುತ್ತೇವೆ. ಎನ್‌ಪಿಎಸ್‌ ನೌಕರರ ಹೋರಾಟದ ವಿರುದ್ಧ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರೂಪಿಸಿರುವ ಸಂಚಿದು. ಇದಕ್ಕೆ ನಾವು ಧಿಕ್ಕಾರ ಕೂಗುತ್ತೇವೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...