ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ತಂದೆ 1966 ರಲ್ಲಿ ಶಿವಸೇನೆ ಸಂಘಟನೆಯನ್ನು ಸ್ಥಾಪಿಸಿದರು. ಆದರೆ ಉದ್ಭವ್ ಠಾಕ್ರೆಗೂ ಶಿವಸೇನೆಗೂ ಸಂಬಂಧವೇ ಇಲ್ಲ ಎನ್ನುವಂತೆ ಚುನಾವಣಾ ಆಯೋಗವು ಫೆಬ್ರವರಿ 17ರಂದು ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಶಿಂಧೆ ನೇತೃತ್ವದ ಬಣಕ್ಕೆ ಹಂಚಿತ್ತು. ಚುನಾವಣಾ ಆಯೋಗದ ಈ ನಿರ್ಧಾರಕ್ಕೆ ತಡೆ ನೀಡಬೇಕು ಎಂದು ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಬುಧವಾರದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ತ್ರಿಸದಸ್ಯ ಪೀಠವು, ಮುಂದಿನ ಆದೇಶದವರೆಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ಶಿವಸೇನೆ ಮತ್ತು ಜ್ವಲಂತ ಜ್ಯೋತಿಯ ಚಿಹ್ನೆಯನ್ನು ಬಳಸುವುದನ್ನು ಮುಂದುವರಿಸಲು ಅನುಮತಿ ನೀಡಿದೆ.
ಇದನ್ನೂ ಓದಿ: ಶಿವಸೇನೆ ಹೆಸರು, ಚಿಹ್ನೆ ಶಿಂಧೆ ಬಣಕ್ಕೆ: ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ
ಫೆಬ್ರವರಿ 26ರಂದು ನಡೆಯಲಿರುವ ಮಹಾರಾಷ್ಟ್ರದ ಕಸ್ಬಾ ಪೇಠ್ ಮತ್ತು ಚಿಂಚ್ವಾಡ್ ಕ್ಷೇತ್ರಗಳ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತ್ರಿಸದಸ್ಯ ಪೀಠವು ಮಧ್ಯಂತರ ಪರಿಹಾರವನ್ನು ಒದಗಿಸಲಾಗಿದೆ.
ಠಾಕ್ರೆ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪಕ್ಷದ ಕಚೇರಿಗಳು, ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಶಿಂಧೆ ಬಣ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಸುಪ್ರೀಂ ಕೋರ್ಟ್ ವಿಚಾರಣೆಯ ಮುಂದಿನ ದಿನಾಂಕದೊಳಗೆ ಶಿಂಧೆ ಬಣವು ತಮ್ಮ ಗುಂಪಿನ ವಿರುದ್ಧ ಬೇರೆ ಕ್ರಮಗಳನ್ನು ತಗೆದುಕೊಳ್ಳಬಹುದು ಹಾಗಾಗಿ ಅದರಿಂದ ತಮಗೆ ರಕ್ಷಣೆ ನೀಡಬೇಕು ಎಂದು ಠಾಕ್ರೆ ಸುಪ್ರೀಂ ಕೋರ್ಟ್‌ಗೆ ಕೋರಿದ್ದಾರೆ.
”ಈ ಮಧ್ಯಂತರ ಆದೇಶವು ಬ್ಯಾಂಕ್ ಖಾತೆಗಳು ಅಥವಾ ಆಸ್ತಿಗಳ ಬಗ್ಗೆ ಏನನ್ನೂ ಒಳಗೊಂಡಿಲ್ಲ. ಭಾರತೀಯ ಚುನಾವಣಾ ಆಯೋಗ ಚಿಹ್ನೆಯನ್ನು ನಿರ್ಧರಿಸುತ್ತದೆ. ಚುನಾವಣಾ ಆಯೋಗದ ಆದೇಶವು ಚಿಹ್ನೆಯ ಹಂಚಿಕೆಗೆ ಮಾತ್ರ ಸೀಮಿತವಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ಶಿಂಧೆ ಬಣವು ಚುನಾವಣಾ ಆಯೋಗದ ಮುಂದೆ ಯಶಸ್ವಿಯಾಗಿದೆ ಮತ್ತು ನ್ಯಾಯಾಲಯವು ಅವರ ಮಾತುಗಳನ್ನು ಆಲಿಸದೇ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಸ್ತುತ ಸಲ್ಲಿಸಿರುವ ಅರ್ಜಿಯು ಚುನಾವಣಾ ಆಯೋಗದ ಆದೇಶಕ್ಕೆ ಮಾತ್ರ ಸಂಬಂಧಿಸಿದೆ. ಹಾಗಾಗಿ ಠಾಕ್ರೆ ಬಣದ ಇತರ ಯಾವುದೇ ವಿಚಾರಗಳನ್ನು ಪ್ರತ್ಯೇಕ ಕಾನೂನು ವಿಧಾನಗಳ ಮೂಲಕ ಪರಿಹರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಂಟರ್-ಅಫಿಡವಿಟ್ ಸಲ್ಲಿಸಲು ಶಿಂಧೆ ಬಣಕ್ಕೆ ನ್ಯಾಯಾಲಯ ಎರಡು ವಾರಗಳ ಕಾಲಾವಕಾಶ ನೀಡಿದೆ.


