ಗೋವಾದ ಕ್ಯಾಲಂಗುಟ್‌ನಲ್ಲಿನ ಅಂಗಡಿ ಮಾಲೀಕರೊಬ್ಬರು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುವಂತೆ ಬಲವಂತಪಡಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಟ್ರಾವೆಲ್ ವ್ಲೋಗರ್ ದಿನಾಂಕವಿಲ್ಲದ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಈ ಘಟನೆ ನಡೆದಿದೆ. ಉತ್ತರ ಗೋವಾದ ಕ್ಯಾಲಂಗುಟ್‌ನಲ್ಲಿರುವ ಅಂಗಡಿ ಮಾಲೀಕರು, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
ವಿಡಿಯೋದಲ್ಲಿ ವ್ಲಾಗರ್, ಆ ವ್ಯಕ್ತಿಯೊಂದಿಗೆ ಸಂಕ್ಷಿಪ್ತ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ”ಯಾರು ಆಡುತ್ತಿದ್ದಾರೆ? ನೀವು ನ್ಯೂಜಿಲೆಂಡ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೀರಾ?” ಎಂದು ಅಂಗಡಿ ಮಾಲೀಕರನ್ನು ವ್ಲಾಗರ್ ಕೇಳುತ್ತಾನೆ. ಆಗ ಆ ವ್ಯಕ್ತಿ “ಪಾಕಿಸ್ತಾನಕ್ಕೆ” ಎಂದು ಉತ್ತರಿಸುತ್ತಾನೆ. ನಂತರ ವ್ಲಾಗರ್ ಅವನನ್ನು ಏಕೆ ಎಂದು ಕೇಳುತ್ತಾನೆ, ಅದಕ್ಕೆ ಆ ವ್ಯಕ್ತಿ ಇದು ಮುಸ್ಲಿಂ ಪ್ರದೇಶ ಎಂದು ಉತ್ತರಿಸುತ್ತಾನೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು: ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದೇನು?
ಈ ವಿಡಿಯೋ ವೈರಲ್ ಆದ ಬಳಿಕ ಗುರುವಾರದಂದು ಜನರ ಗುಂಪೊಂದು ಅಂಗಡಿ ಮಾಲೀಕರನ್ನು ಸಂಪರ್ಕಿಸಿ ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ಪ್ರಶ್ನಿಸಿದ್ದಾರೆ. ಈ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೃಶ್ಯಾವಳಿಯಲ್ಲಿ, ಗುಂಪಿನ ಸದಸ್ಯರೊಬ್ಬರು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡುತ್ತಿರುವುದನ್ನು ಕಾಣಬಹುದು, ”ಇಡೀ ಗ್ರಾಮವು ಕಲಾಂಗುಟೆಗೆ ಸೇರಿದೆ ಮತ್ತು ಇದು ಯಾವುದೇ ನಿರ್ದಿಷ್ಟ ಧಾರ್ಮಿಕ ಗುಂಪಿಗೆ ಸೇರಿದ್ದಲ್ಲ” ಎಂದು ಹೇಳಿದ್ದಾನೆ.
The man who was supporting Pakistan in Goa pic.twitter.com/jE8IidAf9K
— Madhur Singh (@ThePlacardGuy) February 24, 2023
ಆ ಬಳಿಕ ಅಂಗಡಿಯ ಮಾಲೀಕನಿಗೆ ಮಂಡಿಯೂರಿ ದೇಶವಾಸಿಗಳ ಕ್ಷಮೆಯಾಚಿಸುವಂತೆ ಕೇಳಲಾಗುತ್ತದೆ. ಆರಂಭದಲ್ಲಿ ಹಿಂಜರಿದ ಅಂಗಡಿ ಮಾಲೀಕರು ಕೊನೆಗೆ ಮಂಡಿಯೂರಿ ಕಿವಿಗಳನ್ನು ಹಿಡಿದುಕೊಂಡು ಕ್ಷಮೆಯಾಚಿಸಿದರು. ”ಭಾರತ್ ಮಾತಾ ಕಿ ಜೈ” ಘೋಷಣೆಗೆ ಒತ್ತಾಯಿಸಿ, ಅವರಿಂದ ಹೇಳಿರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರಿಗೆ ಈವರೆಗೂ ಯಾವುದೇ ದೂರುಗಳು ಬಂದಿಲ್ಲ.


