Homeಮುಖಪುಟನಡುಗುತ್ತಿರುವ ಧ್ವನಿಯ ನಾಯಕತ್ವ

ನಡುಗುತ್ತಿರುವ ಧ್ವನಿಯ ನಾಯಕತ್ವ

- Advertisement -
- Advertisement -

ಬೆರಳೆಣಿಕೆಯ ಉದ್ಯಮ ಗುಂಪುಗಳನ್ನು ಅವಲಂಬಿಸದ ಒಂದು ಬೇರೆಯೇ ಆರ್ಥಿಕ ಮಾದರಿಯನ್ನು ಮುಂದಿಡಬಲ್ಲ ಯಾವುದಾದರೂ ರಾಜಕೀಯ ಕೂಟ ಇದೆಯೇ?

****

ಸರ್ವಾಧಿಕಾರವನ್ನು ಫ್ಯಾಸಿಸಂ ಜೊತೆಗೆ ಗೊಂದಲಿಸುವುದು ಒಂದು ಸಾಮಾನ್ಯವಾದ ತಪ್ಪು ತಿಳಿವಳಿಕೆ. ಎರಡರಲ್ಲೂ ಸಮಾನ ಅಂಶಗಳು ಇವೆಯಾದರೂ, ಅವೆರಡು ಒಂದೇ ಅಲ್ಲ. ಮಾರ್ಕ್ಸ್‌ವಾದಿ ದರ್ಶನವು ಕಾರ್ಮಿಕ ವರ್ಗದ ಸರ್ವಾಧಿಕಾರ (dictatorship of the proletariat) ಎಂದು ಹೇಳುವಾಗ, ಒಂದು ವರ್ಗದ ಸರ್ವಾಧಿಕಾರದ ಬಗ್ಗೆ ಮಾತನಾಡುತ್ತದೆ. ಅಂದರೆ, ಒಂದು ಪಕ್ಷದ ಸರ್ವಾಧಿಕಾರ ಎಂದು ಅರ್ಥ. ಅದರೆ, ಅದು ಹೆಚ್ಚಾಗಿ ಒಬ್ಬ ಸರ್ವಾಧಿಕಾರಿಯ ಅಧಿಪತ್ಯಕ್ಕೆ ಬದಲಾಗಿ, ಪಕ್ಷ ಅಂತಹ ವ್ಯಕ್ತಿಯ ಅಡಿಯಾಳಾಗುತ್ತದೆ. ಆದರೆ, ಫ್ಯಾಸಿಸಂ ಎಂಬುದು ಪಕ್ಷವನ್ನೇ ರೂಪಿಸಿ, ನಿಯಂತ್ರಿಸುವ ಒಬ್ಬ ಪರಮೋಚ್ಛ ನಾಯಕನನ್ನು ತಪ್ಪದೇ ಹೊಂದಿರುತ್ತದೆ.

ಸರ್ವಾಧಿಕಾರ ಮತ್ತು ಫ್ಯಾಸಿಸಂ ನಡುವಿನ ಸಮಾನ ಅಂಶವು ವ್ಯಕ್ತಿಗತ ಸರ್ವಾಧಿಕಾರ ಅಥವಾ ಏಕಾಧಿಪತ್ಯವಾಗಿದ್ದರೂ, ಫ್ಯಾಸಿಸಂನಲ್ಲಿ – ತಪ್ಪದೇ ಒಂದು ಶತ್ರುವಿನ ಕಲ್ಪನೆಯನ್ನು ಬೆಳೆಸುವುದರ ಮೂಲಕ, ಒಂದು ದೇಶದ ಸರ್ವಾಧಿಕಾರಿ ಪರಿಕಲ್ಪನೆಯನ್ನು ಬಲಪಡಿಸಲಾಗುತ್ತದೆ. ಫ್ಯಾಸಿಸಂ ಬೆಳೆಯಬೇಕಾದರೆ, ಒಂದು ಶತ್ರುವಿನ ಭಯವು ದೊಡ್ಡ ರೀತಿಯಲ್ಲಿ ಯಾವತ್ತೂ ತೂಗಾಡುತ್ತಾ ಇರಬೇಕು. ಅದೊಂದು ಅತ್ಯಗತ್ಯವಾದ ಪರಿಸ್ಥಿತಿ.

ಹೀಗಿದ್ದರೂ, “ಇತರ/ಬೇರೆ/ಅನ್ಯ” ಎಂಬ ಶತ್ರುವಿನ ಪರಿಕಲ್ಪನೆಯು ಕೇವಲ ಒಂದು ಸಾಂಸ್ಕೃತಿಕ ಸಂರಚನೆಯಾಗಿ ಉಳಿದುಕೊಂಡಿರಲು ಸಾಧ್ಯವಿಲ್ಲ. ಅದಕ್ಕಾಗಿ ಈ “ಇತರ/ಬೇರೆ/ಅನ್ಯ” ಎಂಬ ಈ ಕಾಲ್ಪನಿಕ ಶತ್ರುವನ್ನು “ನಮಗೆ” ಮತ್ತು ನಮ್ಮ ಅಸ್ತಿತ್ವಕ್ಕೇ ಭಾರೀ ಅಪಾಯ ಎಂದು ಬಿಂಬಿಸುವುದರಿಂದ ಅದರ ಆಕ್ರಮಣಶೀಲತೆ ಹುಟ್ಟುತ್ತದೆ. ವಿ.ಡಿ.ಸಾವರ್ಕರ್ ಮತ್ತು ಎಂ.ಎಸ್. ಗೋಳ್ವಾಲ್ಕರ್ ಇಬ್ಬರೂ ಬ್ರಿಟಿಷ್ ವಸಾಹತುಶಾಹಿಗಳನ್ನು ಹಿಂದೂಗಳಿಗೆ ಬಾಹ್ಯ ಬೆದರಿಕೆಯೆಂದು ಬಿಂಬಿಸುವ ಬದಲು, ಮುಸ್ಲಿಮರನ್ನು ಪ್ರತ್ಯೇಕಿಸಿ ಆ ರೀತಿಯಲ್ಲಿ ಬಿಂಬಿಸಿದರು.

ಈ “ಅಸ್ತಿತ್ವಕ್ಕೇ ಅಪಾಯ” ಎಂಬ ಕಲ್ಪನೆಯನ್ನು ಗುರಿಪಡಿಸಲಾದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರು ಅದನ್ನು ನಂಬಿದಾಗ ಮಾತ್ರವೇ ಫ್ಯಾಸಿಸಂ ಬೇರೂರಲು ಸಾಧ್ಯ. ಇದರ ಅರ್ಥ ಏನೆಂದರೆ, “ನಮ್ಮ ವಿರುದ್ಧ ಅವರು” ಎಂಬ ಪರಿಕಲ್ಪನೆಯನ್ನು ಕೇವಲ ಸಾಂಸ್ಕೃತಿಕ ಅರ್ಥಕ್ಕೆ ಸೀಮಿತಗೊಳಿಸುವಂತಿಲ್ಲ. ಇದು ಕೇವಲ ಧರ್ಮ, ಜನಾಂಗೀಯತೆ ಅಥವಾ ಅಸ್ಮಿತೆಯ ವ್ಯತ್ಯಾಸಕ್ಕೆ ಸಂಬಂಧಿಸಿದ ವಿಷಯವಲ್ಲ. “ಅವರು”, “ನಮಗೆ” ಅಸ್ತಿತ್ವದ ಬೆದರಿಕೆ ಒಡ್ಡುವುದು ಬಹಳ ಮುಖ್ಯ.

ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರ “ಅಸ್ತಿತ್ವಕ್ಕೇ ಬೆದರಿಕೆ”ಯನ್ನು ನಿವಾರಿಸಲು ಆಗ ಸರಕಾರಿ ದಮನ ಮತ್ತು ಹಿಂಸಾಚಾರ ಅಗತ್ಯ ಎಂಬಂತೆ ಕಾಣುತ್ತದೆ. ಅಂದಹಾಗೆ ಈ ಕಾಲ್ಪನಿಕ ಶತ್ರು ಹೊರಗಿನವರಾಗಿರಬಹುದು ಅಥವಾ ಒಳಗಿನವರೂ ಆಗಿರಬಹುದು; ಇಬ್ಬರೂ ಒಂದೇ ಎಂದು ಬಿಂಬಿಸಿದಾಗ, ಫ್ಯಾಸಿಸಂನ ನೆಲೆ ಭದ್ರವಾಗುತ್ತಾ ಹೋಗುತ್ತದೆ. ಶತ್ರು ಹೊರದೇಶವಾಗಿದ್ದರೆ, ಆಗ ನಮಗೆ ತೋಳ್ಬಲದ ರಾಷ್ಟ್ರೀಯವಾದ ಬೇಕಾಗುತ್ತದೆ. ಒಳಗಿನ ಶತ್ರುವಾಗಿದ್ದರೆ, ಆಗ ಪತ್ರಕರ್ತರಿಂದ ಹಿಡಿದು, ವಿಚಾರವಾದಿಗಳು ಹಾಗೂ ಮತ್ತಿತರ ನಾಗರಿಕ ಸಮಾಜದ ಜನರ ಭಿನ್ನಮತವನ್ನು ಇಲ್ಲವಾಗಿಸಲು ಆಂತರಿಕ ಕಣ್ಗಾವಲು ಮತ್ತು ದಮನ ಅಗತ್ಯವಾಗುತ್ತದೆ. ತೋಳ್ಬಲದ ರಾಜಕೀಯ ಹಾಗೂ ದ್ವೇಷ ಕಾರುವ ಭಾಷಣಗಳು ಮತ್ತು ಹಾಡುಗಳು ಇತ್ಯಾದಿ “ನಮ್ಮನ್ನು” “ಅವರ” ವಿರುದ್ಧ ಹಿಂಸಾಚಾರ ನಡೆಸಲು ಸಿದ್ಧಪಡಿಸುತ್ತವೆ. ಬಾಹ್ಯ ಮತ್ತು ಆಂತರಿಕ ರಂಗಗಳಲ್ಲಿ ಆಡಲಾಗುವ ಈ ಆಟದ ಹೆಸರು “ಭಯೋತ್ಪಾದನೆಯ ವಿರುದ್ಧ ರಾಷ್ಟ್ರೀಯ ಭದ್ರತೆ” ಎಂದು. ಫ್ಯಾಸಿಸ್ಟ್ ಸರಕಾರವು- ಯಾವುದು ರಾಷ್ಟ್ರೀಯ ಭದ್ರತೆ ಮತ್ತು ಯಾವುದು ಭಯೋತ್ಪಾದನೆ ಎಂದು ವ್ಯಾಖ್ಯಾನಿಸುವ ಹಕ್ಕನ್ನು ತನ್ನ ಸ್ವಂತ ಆಸ್ತಿ ಎಂಬಂತೆ ಕಾದಿರಿಸಿಕೊಂಡಿರುತ್ತದೆ. ಈ “ಅಸ್ತಿತ್ವಕ್ಕೆ ಬೆದರಿಕೆ”ಯನ್ನು ನಿಯಂತ್ರಿಸಲು ಸಂವಿಧಾನ ಮತ್ತು ಕಾನೂನಿನ ದುರ್ಬಳಕೆಯನ್ನು ಅಗತ್ಯ ಕ್ರಮ ಎಂಬಂತೆ ಸಮರ್ಥಿಸಲಾಗುತ್ತದೆ.

ಇದನ್ನೂ ಓದಿ: ಗೋಧ್ರಾ ರೈಲು ದಹಿಸಿದ ಅಪರಾಧಿಗಳ ಬಿಡುಗಡೆ ಅಸಾಧ್ಯ; ಸುಪ್ರೀಂನಲ್ಲಿ ಗುಜರಾತ್ ಸರ್ಕಾರ ಹೇಳಿಕೆ

ಭಾರತದಲ್ಲಿ ಈ ಆಟ ಹೇಗೆ ನಡೆಯುತ್ತಿದೆ? ಮೂಲ ಕಾರಣವು ಇನ್ನೂ ನಿಗೂಢವಾಗಿಯೇ ಉಳಿದಿರುವ ಗೋಧ್ರಾ ಘಟನೆಯನ್ನು- ಹೇಗೆ ಮುಸ್ಲಿಮರು ಹಿಂದೂ ಭಕ್ತ ಜನರಿಗೆ ಬೆದರಿಕೆಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಬಿಂಬಿಸಲಾಯಿತು. ಬಾಲಾಕೋಟ್‌ನಲ್ಲಿ ನಡೆದ “ಸರ್ಜಿಕಲ್ ಸ್ಟ್ರೈಕ್” ಪಾಕಿಸ್ತಾನದ ವಿರುದ್ಧ ನಮ್ಮ ಜಾಗೃತವಾದ ತೋಳ್ಬಲದ ರಾಷ್ಟ್ರೀಯತೆಯ ಅಭಿವ್ಯಕ್ತಿ ಎಂಬಂತೆ ಬಿಂಬಿಸಲಾಯಿತು. ಆಂತರಿಕ ಮತ್ತು ಬಾಹ್ಯ ಬೆದರಿಕೆಗಳನ್ನು ಒಟ್ಟಿಗೇ ಬೆರಸಿ, ಸರಕಾರವು “ನಾವು” ಹಿಂದೂಗಳನ್ನು “ಮುಸ್ಲಿಂ ಭಯೋತ್ಪಾದನೆ”ಯಿಂದ ಹೇಗೆ ಕಾಪಾಡುತ್ತಿದ್ದೇವೆ ಎಂಬುದರ ಬೇರೆಬೇರೆ ಮುಖಗಳು ಎಂಬಂತೆ ತೋರಿಸಲಾಯಿತು. ಹಲವು ಅತ್ಯುತ್ಸಾಹಿಗಳು ಭಾರತದಲ್ಲಿನ ಮುಸ್ಲಿಮರು ಬಹುಸಂಖ್ಯಾತ ಹಿಂದೂ ಪ್ರಜಾಪ್ರಭುತ್ವವನ್ನು ಬೇಕೆಂದೇ ಅಸ್ಥಿರಗೊಳಿಸುತ್ತಿದ್ದಾರೆ ಎಂದು ನಂಬಿದ್ದಾರೆ. ಈ ನಂಬಿಕೆಗಳು ಹುಚ್ಚುತನ ಎಂಬಂತೆ ಕಾಣಬಹುದಾದರೂ, ಅವುಗಳ ಪರಿಣಾಮ ಮುಸ್ಲಿಮರನ್ನು ಗುಂಪು ಸೇರಿಸಿ ಥಳಿಸಿ ಕೊಲ್ಲುವುದು, ಮತಾಂತರ ಮಾಡುತ್ತಾರೆಂದು ಆರೋಪಿಸಿ ಚರ್ಚುಗಳ ಮೇಲೆ ದಾಳಿ ಮಾಡುವುದು, ಕಪೋಲಕಲ್ಪಿತ “ಲವ್ ಜಿಹಾದ್” ಎಂದು ಬೊಬ್ಬೆ ಹೊಡೆಯುವುದು ಮುಂತಾದ ದುರಂತಕಾರಿ ಹಿಂಸಾಚಾರಗಳಿಗೆ ಕಾರಣವಾಗುತ್ತವೆ.

ಸರಕಾರಿ ದಮನವಾಗಲೀ, ಅತಿರಾಷ್ಟ್ರೀಯವಾದವಾಗಲೀ ಒಂದು ಆರ್ಥಿಕ ಬೆಂಬಲದ ನೆಲೆಯಿಲ್ಲದೇ ಉಳಿದು, ಬೆಳೆಯಲು ಸಾಧ್ಯವಿಲ್ಲ. ದೊಡ್ಡ ಉದ್ಯಮ ಸಂಸ್ಥೆಗಳು ಸಾಮೂಹಿಕ ಅಪಪ್ರಚಾರ ಯಂತ್ರದ ಭಾಗವಾಗುವಂತೆ ಮಾಡಲು ಮಾಧ್ಯಮಗಳು ಸುಳ್ಳು ಮತ್ತು ತಿರುಚಿದ ಸುದ್ದಿಗಳನ್ನು ಬಿಕರಿ ಮಾಡುವಂತೆ ಮಾಡಬೇಕು. ನೀವು ಒಂದು ಚೌಕವನ್ನು ವೃತ್ತ ಎಂದು ಮತ್ತೆಮತ್ತೆ ಹೇಳುತ್ತಿದ್ದರೆ, ಜನರು ಅದನ್ನು ವೃತ್ತವೆಂದೇ ನಂಬುತ್ತಾರೆ ಎಂದು ಹಿಟ್ಲರನ ಮಾಹಿತಿ ಮತ್ತು ಪ್ರಚಾರ ಮಂತ್ರಿ ಹೇಳಿದ್ದ. ಈ ರೀತಿಯಲ್ಲಿ ನೋಡಿದಾಗ ಮೋದಿ ಮಾಡಿದ ಮಹಾನ್ ’ಸಾಧನೆ’ಗಳನ್ನು ಜನರು ನಂಬುವಂತೆ ಮಾಡುವುದು ಅಸಾಧ್ಯವೇನಲ್ಲ; ಅದು ಕಪ್ಪುಹಣದ ವಿರುದ್ಧ ಹೋರಾಡಲು ರಾತ್ರೋರಾತ್ರಿ ಅನಾಣ್ಯೀಕರಣ ಮಾಡುವ ಅವರ ’ವಿವೇಕ’ ಇರಲಿ (ಅದರಿಂದ ಅನೌಪಚಾರಿಕ ಕ್ಷೇತ್ರಗಳಲ್ಲಿ ಜೀವನ ನಿರ್ವಹಣೆಯ ದಾರಿಯೇ ನಾಶವಾದ ಲೆಕ್ಕವಿಲ್ಲದಷ್ಟು ಕುಟುಂಬಗಳು ಲೆಕ್ಕಕ್ಕೇ ಇಲ್ಲ!), ಕೋವಿಡ್ ಪಿಡುಗಿನ ವೇಳೆ ಏಕಾಏಕಿ ಮಾಡಿದ ಲಾಕ್‌ಡೌನ್, ದೀಪ ಉರಿಸಲು, ತಟ್ಟೆ ಬಡಿಯಲು ಹೇಳಿದ್ದು ಇವೆಲ್ಲವನ್ನೂ. ಅಭಿವೃದ್ಧಿ ಎಂಬುದು ಕೇವಲ ಜಿಡಿಪಿಯ ಬೆಳವಣಿಗೆಯ ಸಂಖ್ಯೆ ಮಾತ್ರವಲ್ಲ, ಜನಸಾಮಾನ್ಯರ ಆರ್ಥಿಕ ನೆಮ್ಮದಿ ಕೂಡ ಎಂಬುದನ್ನು ಪರಿಗಣಿಸಿದರೆ, ಭಾರತದ ಆರ್ಥಿಕ ಬೆಳವಣಿಗೆಯ ಕತೆಯೂ ಕೂಡ ಇದೇ ಆಗಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಭಾರೀ ರಿಯಾಯಿತಿ ದರದಲ್ಲಿ ಕೆಲವೇ ಆಯ್ದ ಉದ್ಯಮ ಸಂಸ್ಥೆಗಳಿಗೆ ಕೊಡಲಾಯಿತು. ಅದೇ ಹೊತ್ತಿಗೆ ಪರಿಸರಕ್ಕೆ ಹಾನಿಯಾಯಿತು; ಬಡಜನರು ಮನೆಮಠ, ಜೀವನೋಪಾಯ ಕಳೆದುಕೊಂಡರು. ಬದಲಿ ಜೀವನೋಪಾಯ ಅಥವಾ ಉದ್ಯೋಗ ಸೃಷ್ಟಿಯಲ್ಲಿ ಯಶಸ್ಸು ಸಿಗಲಿಲ್ಲ. ಮಹಾನ್ ನಾಯಕನ ವರ್ಣರಂಜಿತ ಔದಾರ್ಯದ ಹೊರತಾಗಿ ಆರೋಗ್ಯ, ಶಿಕ್ಷಣ, ಪೌಷ್ಠಿಕತೆ ಇತ್ಯಾದಿ ಸಂಗತಿಗಳು ಸುಧಾರಿಸಲಿಲ್ಲ. ಒಬ್ಬನೇ ಒಬ್ಬ ನಾಯಕ, ಜನರ ಏಕೈಕ ಉದ್ಧಾರಕ ಎಂದು ಬಿಂಬಿಸುವ ಈ ಪರಿ, ಹಿಟ್ಲರನ ಕುರಿತು ಕಟ್ಟಲಾಗುತ್ತಿದ್ದ ಕತೆಗಳನ್ನು ನೆನಪಿಸುತ್ತದೆ. ಪಕ್ಷದ ಒಂದು ಸಭೆಯಲ್ಲಿ ಆತ ಒಂದು ಕೋಳಿಯನ್ನು ಎತ್ತಿಕೊಂಡು ಅದರ ಪುಕ್ಕಗಳನ್ನು ಒಂದೊಂದಾಗಿ ಕಿತ್ತುಹಾಕಿದ. ಬತ್ತಲಾದ ಕೋಳಿಯನ್ನು ನೆಲದ ಮೇಲೆ ಬಿಟ್ಟ. ನಂತರ ಒಂದೊಂದೇ ಕಾಳನ್ನು ಹಾಕುತ್ತಾ ನಡೆದ. ಅಸಹಾಯಕ ಕೋಳಿ ಅವನ ಕೈಯಿಂದ ಉದುರಿದ ಕಾಳನ್ನು ಹೆಕ್ಕುತ್ತಾ ಅವನನ್ನು ಹಿಂಬಾಲಿಸಿತು. ಈ ಕೋಳಿಯತ್ತ ಬೆಟ್ಟುಮಾಡಿ ತನ್ನ ಹಿಂಬಾಲಕರಿಗೆ ತೋರಿಸಿದ ಹಿಟ್ಲರ್ ಹೇಳಿದನಂತೆ: ’ಇದು ನಮ್ಮ ಸಾರ್ವಜನಿಕರು’ ಎಂದು. ಹಿಂಡೆನ್‌ಬರ್ಗ್ ಹಣಕಾಸು ಸಂಸ್ಥೆಯು ಮಾಡಿದ ವಿನಾಶಕಾರಿ ವರದಿಯು ತನ್ನ ಮೇಲೆ ಮಾಡಿದ ದಾಳಿಯಲ್ಲ; ಬದಲಾಗಿ, ಭಾರತದ ಮೇಲೆ ಮಾಡಿದ ದಾಳಿ ಎಂದು ಉದ್ಯಮಿ ಗೌತಮ್ ಅದಾನಿ ಹೇಳಿದಾಗ ಒಂದು ರೀತಿಯಲ್ಲಿ ನಿಜವನ್ನೇ ಹೇಳಿದ್ದಾರೆ. ಆದರೆ, ಅದು ಮೋದಿಯನ್ನು ಬೆಂಬಲಿಸುವ ಕೆಲವೇ ಬಿಲಿಯಾಧಿಪತಿಗಳ ಭಾರತ ಎಂಬುದನ್ನು ಹೇಳಲು ಮರೆತಿದ್ದಾರೆ.

ಮೋದಿಯವರ ಮಹತ್ವಾಕಾಂಕ್ಷೆಯ ಹಿಂದೂ ರಾಷ್ಟ್ರ ಯೋಜನೆಯು 2002ರ ಗಲಭೆಗಳ ನಂತರದ “ಪುನರುತ್ಥಾನಗೊಂಡ ಗುಜರಾತ್” ಎಂಬ ಪ್ರಚಾರದೊಂದಿಗೆ ಆರಂಭವಾಯಿತು. ಮುಸ್ಲಿಮರ ಮೇಲಿನ ದ್ವೇಷವನ್ನು ತಳಹದಿ ಮಾಡಿಕೊಂಡ ಆಡಳಿತವು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸುವ ಹಲವರಿಗೆ ಇದು ಅಚ್ಚರಿಯನ್ನು ಉಂಟುಮಾಡಿತು. ಆಗ ಹೆಚ್ಚಾಗಿ ಯಾರಿಗೂ ಗೊತ್ತಿರದ ಅದಾನಿ- ಆಗಿನ ಮುಖ್ಯಮಂತ್ರಿಯ ಬೆಂಬಲಕ್ಕೆ ನಿಂತು ಕೋಮುವಾದಿ ರಾಜಕೀಯದ ಜೊತೆ ಹಾಲು-ನೀರಿನಂತೆ ಬೆರೆತು, ಸರಕಾರದ ಭಾರೀ ಕೃಪೆಗೆ ಪಾತ್ರವಾದ ವ್ಯಾಪಾರದ ಒಂದು ಮಾದರಿಯನ್ನೇ ಸೃಷ್ಟಿಸಿದರು. ಈ “ಗುಜರಾತ್ ಮಾದರಿ” ಬೆಳವಣಿಗೆಯ ಅದಾನಿಯ ಕೈಯಲ್ಲಿ ಹೆಚ್ಚುಹೆಚ್ಚು ಓತಪ್ರೇತವಾಗಿ ಬೆಳೆಯಿತು ಮಾತ್ರವಲ್ಲದೆ, ಆತನ ಸಂಪತ್ತು ಹಲವು ಪಟ್ಟು ಹೆಚ್ಚಾಯಿತು. ಬಂದರುಗಳಿಂದ ಹಿಡಿದು ವಿಮಾನ ನಿಲ್ದಾಣಗಳವರೆಗೆ, ವಿದ್ಯುಚ್ಛಕ್ತಿಯಿಂದ ಹಿಡಿದು ಇನ್ನಿತರ ಕ್ಷೇತ್ರಗಳವರೆಗೆ ಆತನ ಸಾಮ್ರಾಜ್ಯ ವ್ಯಾಪಿಸಿ, ಆತ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿಯಾದರು.

ಪರಂಜೊಯ್ ಗುಹಾ ಠಾಕೂರ್ತ ಮತ್ತು ರವಿ ನಾಯರ್ ಅವರಂತ ತನಿಖಾ ಪತ್ರಕರ್ತರು ಲೇಖನಗಳನ್ನು ಪ್ರಕಟಿಸಿ, ಇಂತಹ ಬೆಳವಣಿಗೆಯ ಉದ್ದಿಮೆಯು ಎಷ್ಟೊಂದು ವಕ್ರವಾಗಿದೆ ಎಂಬುದನ್ನು ವಿವರಿಸಿದರು. ಅವುಗಳ ಪರಿಣಾಮ ಏನೂ ಆಗಲಿಲ್ಲ. ಮೋದಿ ಪರಮೋಚ್ಚ ನಾಯಕನಾಗಿರುವ ಬಹುಸಂಖ್ಯಾತವಾದಿ ಕೇಸರಿ ಪ್ರಜಾಪ್ರಭುತ್ವದ ಯಶಸ್ಸು- ಟೀಕೆ, ವಿಮರ್ಶೆ ಮತ್ತು ಭಿನ್ನಮತದ ಧ್ವನಿಗಳನ್ನು ಅಡಗಿಸಿತು.

ಇದನ್ನೂ ಓದಿ: ಗುಜರಾತ್ ಗಲಭೆಗೆ ನರೇಂದ್ರ ಮೋದಿಯವರೆ ಹೊಣೆ: ಡಿಲೀಟ್ ಆಗಿದ್ದ ಬಿಬಿಸಿ ಸಾಕ್ಷ್ಯಚಿತ್ರ ನೋಡಿ

ಚೀನಾದಲ್ಲಿ ಬೆಳೆಯುತ್ತಿರುವ ಪ್ರಬಲ ಆರ್ಥಿಕ ಮತ್ತು ವ್ಯಾಪಾರಿ ಶಕ್ತಿಗೆ ಪ್ರತಿಯಾಗಿ ಎಂಬಂತೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ ಹೊಗಳಿಕೆಗೆ ಪಾತ್ರವಾದ ಭಾರತದ ಬೆಳವಣಿಗೆಗಾಗಿ ಸರಕಾರದ ಬಲವಾದ ಬೆಂಬಲ ಇರುವ ಖಾಸಗಿ ಉದ್ಯಮ ಕ್ಷೇತ್ರದ ನವ ಉದಾರವಾದದ ಪ್ರತಿಪಾದನೆಯ ಉತ್ಕೃಷ್ಟ ಕತೆ ಇದಾಗಬಹುದಾಗಿತ್ತು. ಆದರೆ, ಬದಲಾಗಿ ಅದು ಬಿಸಿಗಾಳಿ ತುಂಬಿದ ಬಲೂನಾಗಿ, ಅದಾನಿಯ ವ್ಯವಹಾರಗಳ ಸ್ವರೂಪದ ಬಗ್ಗೆ ಸತ್ಯ ಹೊರಬಂದಾಗ ಏಕಾಏಕಿಯಾಗಿ ಒಡೆದುಹೋಯಿತು. ಈ ವ್ಯಾಪಾರಿ ಮಾದರಿ ಇನ್ನಿಲ್ಲವಾಗುತ್ತಾ, ಅದನ್ನು ಬೆಂಬಲಿಸಿದ ರಾಷ್ಟ್ರೀಯವಾದದ ಧ್ವನಿಯು ನಡುಗಲು ಆರಂಭಿಸಿದೆ. ಈ ಮಾದರಿಯ ಸೇವೆ ಮಾಡುವಂತೆ ಉತ್ತೇಜಿಸಲಾದ ಭಾರತೀಯ ಸಾರ್ವಜನಿಕ ಉದ್ದಿಮೆಗಳಿಗೆ ಲಕ್ವ ಹೊಡೆದಂತಾಗಿದೆ. ಅವರು ತಮ್ಮ ಧಣಿಯ ಮುಖವಾಣಿಯ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ. ಆ ಧ್ವನಿಯೀಗ ನಡುಗುತ್ತಿದ್ದರೂ, ಇನ್ನೂ ಮುಂದುವರಿದಿದೆ.

ಚುನಾವಣೆಗಳು ಹತ್ತಿರ ಬರುತ್ತಿವೆ: ಮೊದಲಿಗೆ ಹಲವು ರಾಜ್ಯಗಳ ಚುನಾವಣೆಗಳು, ನಂತರ ಲೋಕಸಭಾ ಚುನಾವಣೆಗಳು. ವಾಸ್ತವವಾಗಿ ಭವಿಷ್ಯದಲ್ಲಿ ಸುಳ್ಳುಗಳು ಎಷ್ಟರ ಮಟ್ಟಿಗೆ ಬದಲಾಗಬಹುದು? ವಿಷಕಾರಿ ದ್ವೇಷದ ವಾತಾವರಣವು ಸ್ವಲ್ಪ ಮಟ್ಟಿಗಾದರೂ ತಿಳಿಯಾಗುತ್ತಿರುವ ಸಂದರ್ಭದಲ್ಲಿ ಅಧಿಕಾರ ಹಿಡಿಯುವ ಪಕ್ಷವೂ ಬದಲಾಗಬಹುದೆ? ಅಥವಾ ಬೆರಳೆಣಿಕೆಯ ಉದ್ಯಮ ಗುಂಪುಗಳನ್ನು ಅವಲಂಬಿಸದ ಒಂದು ಬೇರೆಯೇ ಆರ್ಥಿಕ ಮಾದರಿಯನ್ನು ಮುಂದಿಡಬಲ್ಲ ಯಾವುದಾದರೂ ರಾಜಕೀಯ ಕೂಟ ಇದೆಯೇ?

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅಮಿತ್ ಬಾಧುರಿ

ಅಮಿತ್ ಬಾಧುರಿ
ಸಂಶೋಧಕರು ಮತ್ತು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಅರ್ಥಶಾಸ್ತ್ರ ಪ್ರಾಧ್ಯಾಪಕ; ಇಟಲಿಯ ಪಾವಿಯಾ ವಿಶ್ವವಿದ್ಯಾಲಯದ ’ಕ್ಲಿಯರ್ ಫೇಮ್’ ಪ್ರಾಧ್ಯಾಪಕ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಿನ್ನಾಭಿಪ್ರಾಯ, ಭಿನ್ನಮತ ಹತ್ತಿಕ್ಕುವ ವಿದ್ಯಮಾನ ಸಂಭವಿಸಿದಾಗ ಅವರು 2020ರಲ್ಲಿ ಜೆಎನ್‌ಯುಗೆ ರಾಜೀನಾಮೆ ನೀಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...