Homeಮುಖಪುಟಗೋಧ್ರಾ ರೈಲು ದಹಿಸಿದ ಅಪರಾಧಿಗಳ ಬಿಡುಗಡೆ ಅಸಾಧ್ಯ; ಸುಪ್ರೀಂನಲ್ಲಿ ಗುಜರಾತ್ ಸರ್ಕಾರ ಹೇಳಿಕೆ

ಗೋಧ್ರಾ ರೈಲು ದಹಿಸಿದ ಅಪರಾಧಿಗಳ ಬಿಡುಗಡೆ ಅಸಾಧ್ಯ; ಸುಪ್ರೀಂನಲ್ಲಿ ಗುಜರಾತ್ ಸರ್ಕಾರ ಹೇಳಿಕೆ

- Advertisement -
- Advertisement -

2002ರ ಗೋಧ್ರಾ ರೈಲು ದಹನ ಪ್ರಕರಣದ ಅಪರಾಧಿಗಳನ್ನು ಸರ್ಕಾರದ ಸನ್ನಡತೆ ನೀತಿಯಡಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಗುಜರಾತ್‌ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

‘ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ (ತಡೆ) ಕಾಯ್ದೆ’ಯ ಅಡಿಯಲ್ಲಿ ಈ ಅಪರಾಧಿಗಳ ವಿರುದ್ಧ ಕ್ರಮಗಳನ್ನು ಜರುಗಿಸಲಾಗಿದ್ದು, ಸರ್ಕಾರದ ನೀತಿಯ ಅಡಿಯಲ್ಲಿ ಅವಧಿಪೂರ್ವವೇ ಬಿಡುಗಡೆ ಮಾಡಲಾಗದು ಎಂದು ಕೋರ್ಟ್‌ನಲ್ಲಿ ವಾದಿಸಿದೆ.

ಫೆಬ್ರವರಿ 27, 2002ರಂದು, ಗೋಧ್ರಾ ನಿಲ್ದಾಣದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಕೋಚ್ S6ಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದಾಗಿ 59 ಜನರು ಸಾವನ್ನಪ್ಪಿದರು. ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಕರಸೇವಕರು ಈ ಕೋಚ್‌ನಲ್ಲಿದ್ದರು.

11 ಅಪರಾಧಿಗಳಿಗೆ ಟ್ರಯಲ್ ಕೋರ್ಟ್ ನೀಡಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ 2017ರಲ್ಲಿ ಗುಜರಾತ್ ಹೈಕೋರ್ಟ್ ಬದಲಾಯಿಸಿತು. ಇತರ 20 ಜನಕ್ಕೂ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ರೈಲು ಸುಟ್ಟ ಬಳಿಕ ಗುಜರಾತ್ ಹೊತ್ತಿ ಉರಿಯಿತು. ಗುಜರಾತ್‌ನಲ್ಲಿ ವ್ಯಾಪಕವಾದ ಕೋಮು ಗಲಭೆಗಳು ನಡೆದವು. ಇದರ ಪರಿಣಾಮವಾಗಿ 1,044 ಜನರು ಸಾವನ್ನಪ್ಪಿದರು ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಕೆಲವು ತಿಂಗಳ ಹಿಂದೆ ವಿಚಿದ್ರಕಾರಿ ನಿಲುವನ್ನು ತೆಗೆದುಕೊಂಡಿದ್ದ ಗುಜರಾತ್‌ ಸರ್ಕಾರ, ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅಪರಾಧಿಗಳನ್ನು ತುರ್ತಾಗಿ ಬಿಡುಗಡೆ ಮಾಡಲು ಅನುಮೋದನೆ ನೀಡಿತ್ತು. ಅತ್ಯಾಚಾರಿಗಳ ಬಿಡುಗಡೆಗೆ ಕಳೆದ ಆಗಸ್ಟ್ 15ರಂದು ಕ್ರಮ ಜರುಗಿಸಲಾಗಿತ್ತು.

ಮಾರ್ಚ್ 3, 2002 ರಂದು ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ಅಹಮದಾಬಾದ್ ಬಳಿಯ ಹಳ್ಳಿಯೊಂದರಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ 11 ಜನರಿಗೆ ಶಿಕ್ಷೆಯಾಗಿತ್ತು.

ಆ ಸಮಯದಲ್ಲಿ ಬಿಲ್ಕಿಸ್‌ 19 ವರ್ಷದ ವಯಸ್ಸಿನ ಗರ್ಭಿಣಿಯಾಗಿದ್ದರು. ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದ ಹದಿನಾಲ್ಕು ಜನರನ್ನು ಹಿಂಸಾಚಾರದಲ್ಲಿ ಕೊಲ್ಲಲಾಯಿತು. ಬಿಲ್ಕಿಸ್ ಅವರ ತಲೆಯನ್ನು ನೆಲಕ್ಕೆ ಹೊಡೆಸಿ ಹಿಂಸೆ ನೀಡಲಾಗಿತ್ತು.

ಗೋದ್ರಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ಗುಜರಾತ್ ಹೈಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ. ಆದರೆ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಸರ್ಕಾರ ಒತ್ತಾಯಿಸುತ್ತದೆ” ಎಂದಿದ್ದಾರೆ.

ಇದನ್ನೂ ಓದಿರಿ: ಒಂದು ಹಿಂದೂ ಹುಡುಗಿ ಹೋದರೆ ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ: ಮುತಾಲಿಕ್ ವಿವಾದಾತ್ಮಕ ಹೇಳಿಕೆ

“ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ. ಇದು ಅಪರೂಪದ ಪ್ರಕರಣಗಳಲ್ಲಿ ಅಪರೂಪವಾಗಿದೆ” ಎಂದು ಮೆಹ್ತಾ ಹೇಳಿದ್ದಾರೆ.

ಅಪರಾಧಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕೆಟಿಎಸ್ ತುಳಸಿ, “ಅವರಲ್ಲಿ ಒಬ್ಬರು ತನಗೆ ಗುಜರಾತಿ ಭಾಷೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆತ ತಾನು ಓದಿಲ್ಲದೆ ಇರುವ ಹೇಳಿಕೆಗೆ ಹೆಬ್ಬೆರಳಿನ ಗುರುತನ್ನು ನೀಡಿದ್ದಾನೆ. ಜಾಮೀನು ಅರ್ಜಿಗಳನ್ನು ಪರಿಗಣಿಸಲು ಎಲ್ಲಾ ಸಂಬಂಧಿತ ವಿವರಗಳೊಂದಿಗೆ ಸಂಕಲಿಸಿದ ಚಾರ್ಟ್ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ” ಎಂದು ಮಾಹಿತಿ ನೀಡಿದ್ದಾರೆ.

ಹಲವು ಅಪರಾಧಿಗಳ ಜಾಮೀನು ಅರ್ಜಿಯನ್ನು ಮೂರು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. ಅಪರಾಧಿಗಳಿಗೆ ನೀಡಲಾದ ನಿಜವಾದ ಶಿಕ್ಷೆಗಳು ಮತ್ತು ಇದುವರೆಗೆ ಜೈಲಿನಲ್ಲಿ ಕಳೆದ ಅವಧಿಯಂತಹ ವಿವರಗಳನ್ನು ನೀಡುವ ಕ್ರೋಢೀಕೃತ ಚಾರ್ಟ್ ಅನ್ನು ಸಲ್ಲಿಸುವಂತೆ ಎರಡೂ ಕಡೆಯವರಿಗೂ ಕೋರ್ಟ್ ಸೂಚಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read