ಕೊನೆಗೂ ಭಾರತೀಯ ಜನತಾ ಪಕ್ಷ ಎರಡನೆಯ ಬಾರಿಗೆ ಕರ್ನಾಟಕದಲ್ಲಿ ತನ್ನ ಸರಕಾರ ರಚಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಇಷ್ಟರಮಟ್ಟಿಗಿನ ಅಧಿಪತ್ಯ ಸ್ಥಾಪಿಸಿದ ಏಕೈಕ ರಾಜ್ಯ ಎಂದರೆ ಅದು ಕರ್ನಾಟಕ ಮಾತ್ರ ಎನ್ನುವ ನೆಲೆಯಲ್ಲಿ ಬಿಜೆಪಿಯ ಸಾಧನೆ ಚಾರಿತ್ರಿಕ. ಅಷ್ಟೇ ಚಾರಿತ್ರಿಕವಾಗಿ ಉಳಿಯುವ ಇನ್ನೊಂದು ಅಂಶ ಎನು ಎಂದರೆ ಎರಡು ಬಾರಿಯೂ ಬಿಜೆಪಿ ಅಡ್ಡ ದಾರಿ ಹಿಡಿದೇ ಈ ರಾಜ್ಯದಲ್ಲಿ ಸರಕಾರ ರಚನೆ ಮಾಡಬೇಕಾಯಿತು ಎನ್ನುವುದು.
ಕರ್ನಾಟಕದ ಜನ ಸಂಪೂರ್ಣವಾಗಿ ಬಿಜೆಪಿಯನ್ನು ಇನ್ನೂ ಒಪ್ಪಿಲ್ಲ, ಸಂಪೂರ್ಣವಾಗಿ ತಿರಸ್ಕರಿಸಲೂ ಇಲ್ಲ ಎನ್ನುವುದು ಈವರೆಗಿನ ಸತ್ಯ. ಈ ಸತ್ಯವನ್ನು ಸ್ವೀಕರಿಸಲಾಗದೆ ಬಿಜೆಪಿ ಆಪರೇಷನ್ ಕಮಲ ಎನ್ನುವ ರಾಜಕೀಯ ಕುತಂತ್ರದ ವ್ಯೂಹ ರಚಿಸಿ ಅಧಿಕಾರಕ್ಕೇರಿದೆ. 2018ರಲ್ಲಿ ಚುನಾವಣೆ ನಡೆದಾಗ ಬಿಜೆಪಿಗೆ ಅನುಕಂಪದ ಅಲೆಯ ಬೆಂಬಲವಿತ್ತು. ಆ ಹಿಂದೆ ಜೆಡಿಎಸ್ನ ಜತೆ ಸೇರಿ ರಚಿಸಿದ ಸಮ್ಮಿಶ್ರ ಸರಕಾರ ಒಡಂಬಡಿಕೆಯನ್ವಯ ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲ ಎನ್ನುವ ಕಾರಣಕ್ಕೆ ಹುಟ್ಟಿದ ಅನುಕಂಪದ ಅಲೆ ಬಿಜೆಪಿಯನ್ನು ಅಧಿಕಾರದ ಅಂಚಿಗೆ ತಂದು ನಿಲ್ಲಿಸಿತ್ತೆ ಹೊರತು ಸರಳ ಬಹುಮತ ನೀಡಲಿಲ್ಲ. 110 ಸ್ಥಾನಗಳನ್ನು ಪಡೆದ ಬಿಜೆಪಿಗೆ ಹಲವು ಪಕ್ಷೇತರ ಸದಸ್ಯರ ಬೆಂಬಲ ನಿರೀಕ್ಷಿತ ರೀತಿಯಲ್ಲೇ ಸಿಕ್ಕಿದ ಕಾರಣ ಹಾಗೂ ಹೀಗೂ ಅಧಿಕಾರ ಹಿಡಿಯಿತು. ಆ ನಂತರ ಹಿಡಿದ ಅಧಿಕಾರ ಭದ್ರಪಡಿಸಿಕೊಳ್ಳಲು ಆಪರೇಷನ್ ಕಮಲ ನಡೆಸಿತು. ಆ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು.
2018ರಲ್ಲಿ ಚುನಾವಣೆ ನಡೆದಾಗ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬಹಳಷ್ಟು ಬದಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯ ವರ್ಚಸ್ಸು ಉತ್ತುಂಗದಲ್ಲಿತ್ತು. ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆ ಒಂದು ರಾಷ್ಟ್ರೀಯ ಐತಿಹ್ಯ ಎನ್ನುವಷ್ಟರಮಟ್ಟಿಗೆ ಮನೆಮಾತಾಗಿತ್ತು. ಮೋದಿಯ ವರ್ಚಸ್ಸು, ಅಮಿತ್ ಶಾ ತಂತ್ರಗಾರಿಕೆ, ಅರ.ಎಸ್.ಎಸ್ನ ತ್ರಿಕರಣ ಬೆಂಬಲ, ಸಾಮಾಜಿಕ ಜಾಲತಾಣಗಳ ಮೂಲಕ ಲಂಗುಲಗಾಮಿಲ್ಲದೆ ನಡೆಸಿದ ಪ್ರಚಾರ ಇತ್ಯಾದಿ ಎಲ್ಲವೂ ಸೇರಿಯೂ ಆ ಚುನಾವಣೆಯಲ್ಲಿ ಬಿಜೆಪಿಗೆ 2008ರಲ್ಲಿ ಗೆದ್ದಷ್ಟು ಸ್ಥಾನಗಳನ್ನೂ ಗೆಲ್ಲಲಾಗಲಿಲ್ಲ. ಏದುಸಿರು ಬಿಟ್ಟು ಗೆದ್ದದ್ದು 104 ಸ್ಥಾನ. ಆಗ ಕೈತಪ್ಪಿಹೋದ ಅಧಿಕಾರ ಈಗ 14 ತಿಂಗಳುಗಳ ನಂತರ ಮತ್ತೊಂದು ಸುತ್ತು ಆಪರೇಶನ್ ಕಮಲ ನಡೆಸಿದ ಕಾರಣಕ್ಕೆ ಬಂದಿದೆ.
2008 ರಲ್ಲಿ ಮೊದಲು ಸರಕಾರ ರಚಿಸಿ ಅದನ್ನು ಉಳಿಸಿಕೊಳ್ಳಲು ಆಪರೇಶನ್ ಕಮಲ ನಡೆಸಿದರೆ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕೈಯ್ಯಲ್ಲಿದ್ದ ಸರಕಾರವನ್ನು ಕಸಿದುಕೊಳ್ಳಲು ಆಪರೇಷನ್ ಕಮಲ ಬಳಸಲಾಗಿದೆ. ಮೊದಲನೇ ಬಾರಿಗೆ ಆಪರೇಷನ್ ಕಮಲವನ್ನು ಒಂದಷ್ಟು ಅಂಜಿಕೆ, ಅಳುಕು ಇಲ್ಲದೆ ಬಹಿರಂಗವಾಗಿ ರಾಜಾರೋಷವಾಗಿ ಮಾಡಿದರೆ ಈ ಬಾರಿ ಅದನ್ನು ಕದ್ದುಮುಚ್ಚಿ, ಬಹಿರಂಗವಾಗಿ ಎಲ್ಲೂ ಒಪ್ಪಿಕೊಳ್ಳದೆ ನಡೆಸಲಾಗಿದೆ. ಇದರರ್ಥ ಈ ಬಾರಿ ಬಿಜೆಪಿಗೆ ಸ್ವಲ್ಪ ಮರ್ಯಾದೆಗೆ ಅಂಜುವ ಗುಣ ಬಂದಿದೆ ಅಂತ ಯಾರಾದರೂ ತಿಳಿದುಕೊಂಡರೆ ಅದು ತಪ್ಪು. ಈ ಬಾರಿ ಕದ್ದುಮುಚ್ಚಿ ಆಪರೇಷನ್ ಕಮಲ ನಡೆದದ್ದು ಬಹಿರಂಗವಾಗಿ ಮಾಡಿದರೆ ಅದು ಸೋಲುವ ಅಪಾಯವಿತ್ತು ಎನ್ನುವ ಕಾರಣಕ್ಕೆ. ಅಂತೂ ಕರ್ನಾಟಕದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರ ಪಡೆದು ಚರಿತ್ರೆ ನಿರ್ಮಿಸುವುದರ ಜತೆಗೆ ರಾಜಕೀಯ ವ್ಯಭಿಚಾರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿಯೂ ಎರಡು ಬಾರಿ ಚರಿತ್ರೆಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿತು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
ಭಾರತದಲ್ಲಿ ಅಧಿಕಾರ ಎನ್ನುವುದು ಒಂದು ವಿಚಿತ್ರವಾದ ಗಂಗಾಜಲ. ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದವರ ವಿಚಾರದಲ್ಲಿ ಅವರು ಅಧಿಕಾರ ಹಿಡಿಯಲು ಬಳಸಿದ ಪಾಪಕಾರ್ಯಗಳು ಎಂತಹದ್ದೇ ಇರಲಿ, ಅವುಗಳನ್ನು ಜನ ಅದನ್ನು ಮರೆತು ಬಿಡುತ್ತಾರೆ. ಈ ಅಂಶವನ್ನು ಬಿಜೆಪಿ ಚೆನ್ನಾಗಿ ಅರಿತುಕೊಂಡಿದೆ. ಹಾಗಂತ ಈ ವಿಷಯದಲ್ಲಿ ಕೇವಲ ಬಿಜೆಪಿಯೊಂದನ್ನೇ ದೂರಿದರೆ ಸಾಕೇ?
ಬಿಜೆಪಿ ಅಧಿಕಾರ ಹಿಡಿಯಲು ನಡೆಸಿದ ರಾಜಕೀಯ ಮಾಂಸದಂಧೆಯಲ್ಲಿ ಇತರ ಪಕ್ಷದ ಚುನಾಯಿತ ಪ್ರತಿನಿಧಿಗಳು ಮಾರಿಕೊಳ್ಳಲು ತಯಾರಿದ್ದ ಕಾರಣಕ್ಕಾಗಿಯಲ್ಲವೇ ಬಿಜೆಪಿಗೆ ಅವರನ್ನು ಕ್ರಯಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿದ್ದು. ಅದು ಬಿಡಿ. ಖರೀದಿಸುವವರು ಎಲ್ಲಿರುತ್ತಾರೋ ಅಲ್ಲಿ ಮಾರಿಕೊಳ್ಳಲು ತಯಾರಿರುವವರು ಇದ್ದೇ ಇರುತ್ತಾರೆ. ಇದಕ್ಕಿಂತ ಮುಖ್ಯವಾದ ವಿಚಾರ ಅಂದರೆ ಮತದಾರರದ್ದು ಅಥವಾ ಜನರದ್ದು.
ಕರ್ನಾಟಕದಲ್ಲಾಗಲೀ ಇತರೆಡೆಯಾಗಲೀ ಬಿಜೆಪಿ ನಡೆಸಿದ ಮತ್ತು ನಡೆಸುತ್ತಿರುವ ಈ ದಂಧೆಗೆ ಖಡಾಖಂಡಿತವಾದ ಸಾರ್ವಜನಿಕ ತಿರಸ್ಕಾರ ಎನ್ನುವುದು ಎಲ್ಲೂ ಈತನಕ ಕಾಣಿಸಿಲ್ಲ. ಮೊದಲನೆಯ ಬಾರಿಗೆ ಬಿಜೆಪಿ ಆಪರೇಷನ್ ಕಮಲ ನಡೆಸಿ ರಾಜೀನಾಮೆ ನೀಡಿಸಿದ್ದ ಕಾಂಗ್ರೆಸ್ ಮತ್ತು ಜನತಾ ದಳ ಪಕ್ಷಗಳ ಶಾಸಕರ ಪೈಕಿ ಹಲವು ಮಂದಿ ಉಪಚುನಾವಣೆಯಲ್ಲಿ ಮರು ಆಯ್ಕೆ ಆಗಿದ್ದಾರೆ. ಇಂತವರನ್ನು ಮರು ಆಯ್ಕೆ ಮಾಡಿದ ಮತದಾರರನ್ನು ಏನು ಅಂತ ಕರೆಯುವುದು.
ಹಿಂದಿನ ಕತೆ ಬಿಡಿ. ಮೊನ್ನೆ ಮೊನ್ನೆ 2019ರ ಲೋಕಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಪರೇಷನ್ ಕಮಲಕ್ಕೆ ತನ್ನನ್ನು ಅರ್ಪಿಸಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಗುಲ್ಬರ್ಗದ ಮತದಾರರು ಆ ವ್ಯಕ್ತಿಯನ್ನು ಬಹುಮತದಿಂದ ಆಯ್ಕೆ ಮಾಡಿಲ್ಲವೇ? ಈ ವಿಚಾರವನ್ನೂ ಬೇಕಾದರೆ ಬದಿಗಿರಿಸೋಣ.. ಯಾಕೆಂದರೆ ಅವರ ಕಾಂಗ್ರೆಸ್ ಎದುರಾಳಿ ಹಲವು ಬಾರಿ ಗೆದ್ದಿದ್ದ ಕಾರಣಕ್ಕೆ ಅಲ್ಲೊಂದು ದೊಡ್ಡ ಮಟ್ಟದ ಅಧಿಕಾರ ವಿರೋಧಿ ಅಲೆ ಇತ್ತು ಎಂದುಕೊಳ್ಳೋಣ. ಅಥವಾ ಮೋದಿ ಅಲೆಯಲ್ಲಿ ಇತರ ಎಲ್ಲಾ ಅಂಶಗಳೂ ಕೊಚ್ಚಿ ಹೋದವು ಎಂದುಕೊಳ್ಳೋಣ. ಆದರೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಜನತೆ ರಾಜೀನಾಮೆ ನೀಡಿದ ಶಾಸಕನ ಮಗನನ್ನೇ ಪುನರಾಯ್ಕೆ ಮಾಡಿದರಲ್ಲಾ, ಅವರ ಪ್ರಜ್ಞಾವಂತಿಕೆಯನ್ನು ಯಾವ ಶಬ್ದಗಳಿಂದ ಹೊಗಳುವುದು?
ಮೊನ್ನೆ ಹದಿನೈದು ಶಾಸಕರನ್ನು ಕೆಡವಿದ ಎರಡನೆಯ ಹಂತದ ಬೃಹತ್ ಆಪರೇಷನ್ ಕಮಲಕ್ಕೆ ಪ್ರೇರಣೆಯೇ ಚಿಂಚೋಳಿಯ ಮತದಾರರು ನೀಡಿದ ತೀರ್ಪು ಎನ್ನಬೇಕು. ಯಾಕೆಂದರೆ ಅಲ್ಲಿನ ಮತದಾರರಿಂದ ಆಪರೇಷನ್ ಕಮಲ ವಿರೋಧಿ ಸಂದೇಶವೊಂದು ಹೋಗಿದ್ದರೆ ಹದಿನೈದು ಮಂದಿಯಲ್ಲಿ ಕೆಲವರಾದರೂ ಬಿಜೆಪಿಯ ತಂತ್ರಗಾರಿಕೆಗೆ ಕೈಜೋಡಿಸುವ ವೇಳೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಒಂದಿಷ್ಟು ಯೋಚಿಸುತ್ತಿದ್ದರೋ ಏನೋ.
ಯಾವತ್ತು ಮತದಾರರು ಆಪರೇಷನ್ ಕಮಲದ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವ ಸಂದೇಶ ರವಾನೆಯಾಯಿತೋ ಅಲ್ಲಿಗೆ ಶಾಸಕರನ್ನು ಖರೀದಿಸುವ ಪಕ್ಷದ ಮತ್ತು ಮಾರಿಕೊಳ್ಳಲು ಸಿದ್ಧರಿರುವ ಶಾಸಕರ ಪಾಪಪ್ರಜ್ಞೆಯೂ ಅಷ್ಟರಮಟ್ಟಿಗೆ ಕಡಿಮೆಯಾಯಿತು ಎಂದೇ ಹೇಳಬೇಕು. ಆದುದರಿಂದ ಆಪರೇಷನ್ ಕಮಲ ಎಂಬ ಘೋರಾಪರಾಧ ನಡೆಸಿದವರ ಮತ್ತು ನಡೆಸಲು ಸಹಕರಿಸಿದವರ ವಿರುದ್ಧ ಆರೋಪ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದೇ ಆದರೆ ಅದರಲ್ಲಿ ಮೊದಲ ಆರೋಪಿ ಸ್ಥಾನದಲ್ಲಿರಬೇಕಾದದ್ದು ಬಿಜೆಪಿಯಲ್ಲ, ಮತದಾರರು.
ಸಮ್ಮಿಶ್ರ ಸರಕಾರ ಇದ್ದಷ್ಟು ಕಾಲ ಸ್ಪೀಕರ್ ಒಬ್ಬರು ಆಪರೇಷನ್ ಕಮಲದ ಹಾದಿಯಲ್ಲಿ ತೊಡಕಾಗಿದ್ದರು. ಈಗ ಆ ಸಮಸ್ಯೆಯೂ ಇಲ್ಲ. ಬಿಜೆಪಿಯ “ಸ್ವಂತ” ಸ್ಪೀಕರ್ ಅವರ ಪ್ರತಿಷ್ಠಾಪನೆಯಾಗಿದೆ. ಇನ್ನು ಕೇಳಬೇಕೆ? ನಿರೀಕ್ಷಿಸಿ, ದಂಧೆಯ ಮುಂದಿನ ಅಂಕವನ್ನು.


