ಮಂಡ್ಯದ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರೆಂದು ಸಂಘಪರಿವಾರ ಆಧಾರ ರಹಿತವಾಗಿ ವಾದಿಸುತ್ತಿದೆ ಎಂಬ ಆರೋಪಗಳು ಬಂದಿರುವ ಬೆನ್ನಲ್ಲೇ ಹೊಸ ಹೊಸ ವಿಷಯಗಳು ಹೊರಬರಲಾರಂಭಿಸಿವೆ.
2006ರಲ್ಲಿ ಪರಿಷ್ಕರಣೆಗೊಂಡಿರುವ ‘ಸುವರ್ಣ ಮಂಡ್ಯ’ (ಸಂಪಾದನೆ: ದೇಜಗೌ) ಎಂಬ ಕೃತಿಯಲ್ಲಿ ಹ.ಕ.ರಾಜೇಗೌಡ ಅವರು ಬರೆದಿರುವ ಲೇಖನದಲ್ಲಿ ‘ಉರಿಗೌಡ, ನಂಜೇಗೌಡ’ ಎಂಬ ಹೆಸರುಗಳ ಉಲ್ಲೇಖವಿದೆ ಎಂಬುದನ್ನು ಮುಂದೆ ಇಟ್ಟುಕೊಂಡು ಚರ್ಚೆ ಬೆಳೆಸಲಾಗುತ್ತಿದೆ. “ದೊಡ್ಡನಂಜೇಗೌಡ, ಉರಿಗೌಡ ಎಂಬವರು ಟಿಪ್ಪು ಮತ್ತು ಹೈದರಾಲಿ ವಿರುದ್ಧ ಸೆಟೆದುನಿಂತವರು” ಎಂದು ಕೃತಿಯಲ್ಲಿ ಉಲ್ಲೇಖಿಸಿರುವುದನ್ನೇ ಇತಿಹಾಸ ಎಂದು ಪ್ರತಿಪಾದಿಸು ಯತ್ನಗಳಾಗುತ್ತಿವೆ.
“ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪುವನ್ನು ಕೊಂದವರು ಉರಿಗೌಡ, ನಂಜೇಗೌಡ ಎಂದು ನಕಲಿ ಇತಿಹಾಸ ಸೃಷ್ಟಿಸಿ, ಒಕ್ಕಲಿಗ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ಆಗುತ್ತಿವೆ” ಎಂಬ ಟೀಕೆಗಳು ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಮತ್ತೊಂದು ‘ಲಾವಣಿ’ ಮುನ್ನಲೆಗೆ ಬಂದಿದೆ. “ಟಿಪ್ಪುವಿನ ನಂತರದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಉರಿಗೌಡ, ನಂಜೇಗೌಡ ಅವರೂ ಸೇರಿದ್ದಾರೆ” ಎಂಬ ವಾದವನ್ನು ಈ ಲಾವಣಿ ಮೂಲಕ ಮಂಡಿಸಲಾಗುತ್ತಿದೆ.
2005ರಲ್ಲಿ ಪ್ರಕಟವಾಗಿರುವ ‘ಅಮರ ಸುಳ್ಯದ ಸ್ವಾತಂತ್ರ್ಯ’ದ ಸಮರ ಕೃತಿಯಲ್ಲಿ ಉರಿಗೌಡ ಮತ್ತು ನಂಜೇಗೌಡರ ಉಲ್ಲೇಖಗಳನ್ನು ಮಾಡಲಾಗಿದೆ ಎಂದು ಯುವ ಬರಹಗಾರ ಸುನಿಲ್ ಜೆ. ಅವರು ಲಾವಣಿಯೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
“ಉರಿಗೌಡ, ನಂಜೇಗೌಡರು ಯಾರೆಂಬ ನಿಜಮಾಹಿತಿ ಎನ್.ಎಸ್ ದೇವಿಪ್ರಸಾದ್ ಸಂಪಾಜೆಯವರು ಸಂಪಾದಿಸಿಕೊಟ್ಟ ‘ಅಮರ ಸುಳ್ಯದ ಸ್ವಾತಂತ್ರ್ಯ ಸಮರ’ ಪುಸ್ತಕದಲ್ಲಿದೆ. ಈ ಪುಸ್ತಕವನ್ನು ಸುವರ್ಣ ಮಂಡ್ಯ ಪುಸ್ತಕ ಬಿಡುಗಡೆಯಾಗುವ ಒಂದು ವರ್ಷಕ್ಕೂ ಮೊದಲೇ ಎಂದರೆ 2005ರಲ್ಲಿಯೇ ಪ್ರಕಟಿಸಲಾಗಿದೆ. ಇದರ ನಾಲ್ಕನೇ ಅನುಬಂಧ ಸ್ವಾತಂತ್ರ್ಯ ಹೋರಾಟಗಾರ ಐಗೂರು ವೆಂಕಟಾದ್ರಿ ನಾಯಕನ ಲಾವಣಿಗೆ ಮೀಸಲಾಗಿದೆ” ಎಂದು ಸುನಿಲ್ ವಿವರಿಸಿದ್ದಾರೆ.
ಮುಂದುವರಿದು, “ಟಿಪ್ಪು ಸುಲ್ತಾನ್ ಹಾಗೂ ಧೋಂಡಿಯ ವಾಘರ ಸಾವಿನ ನಂತರ ಕರ್ನಾಟಕದ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿದ್ದು ಐಗೂರಿನ ಪಾಳೇಗಾರ ವೆಂಕಟಾದ್ರಿ ನಾಯಕ. ಆತನಿಗೆ ಜೊತೆಯಾಗಿ ನಿಂತು ಬ್ರಿಟೀಷರ ವಿರುದ್ಧ ಹೋರಾಡಿದವರೇ ಹಾಸನ ಜಿಲ್ಲೆಯ ಹೆನ್ನಲಿ ಗ್ರಾಮದ ಉರಿಗೌಡ ಮತ್ತು ಕುಮತಳ್ಳಿಯ ನಂಜೇಗೌಡರು. ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಡಿದ ಕನ್ನಡ ನಾಡಿನ ಹೆಮ್ಮೆಯ ಸ್ವಾತಂತ್ಯ್ರ ಹೋರಾಟಗಾರರನ್ನು ದೇಶದ್ರೋಹಿಗಳಂತೆ ಬಿಂಬಿಸಲು ಹೊರಟಿರುವ ಸಂಘಿಗಳಿಗೆ ನಾಚಿಕೆ ಆಗಬೇಕು” ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಪುಸ್ತಕದ ಪುಟಗಳನ್ನು ಲಗತ್ತಿಸಿದ್ದಾರೆ. ಅನೇಕರು ಈ ಬರಹವನ್ನು ಹಂಚಿಕೊಂಡಿದ್ದಾರೆ. (‘ಅಮರ ಸುಳ್ಯದ ಸ್ವಾತಂತ್ರ್ಯ ಸಮರ’ ಕೃತಿಯ ಪಿಡಿಎಫ್ ‘ಇಲ್ಲಿ’ ಲಭ್ಯವಿದೆ.)
“ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರು ಸ್ಥಳೀಯ ರಾಜರುಗಳ ಅನೈಕ್ಯ, ವೈಷಮ್ಯಗಳ ಪ್ರಯೋಜನ ಪಡೆದು ನಿಧಾನವಾಗಿ ಇಡೀ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ನಮ್ಮನ್ನು ಎರಡು ಶತಮಾನಗಳಿಗೂ ಅಧಿಕ ಕಾಲ ಆಳಿದ್ದು ಈಗ ಇತಿಹಾಸ. ದಕ್ಷಿಣ ಭಾರತದಲ್ಲಿ ಅವರಿಗೆ ಪ್ರಬಲ ಎದುರಾಳಿಗಳಾಗಿದ್ದ ಟಿಪ್ಪು ಸುಲ್ತಾನ ಮತ್ತು ಐಗೂರಿನ ವೆಂಕಟಾದ್ರಿ ನಾಯಕರನ್ನು ಕೊಂದ ಬಳಿಕ ಬ್ರಿಟಿಷರು ಕರ್ನಾಟಕದಿಂದ ನಮಗೇನೂ ಪ್ರತಿರೋಧ ಬಾರದು ಎಂದೇ ತಿಳಿದುಕೊಂಡಿದ್ದರು. ಅವರ ತಿಳಿವಳಿಕೆ ತಪ್ಪು ಎಂದು ಅವರ ಸುಳ್ಯದ ಸ್ವಾತಂತ್ರ್ಯ ಸಮರ ತೋರಿಸಿಕೊಟ್ಟಿದೆ” ಎಂಬ ಸಾಲುಗಳನ್ನು ಪುಸ್ತಕದ ನಾಲ್ಕನೇ ಅನುಬಂಧದಲ್ಲಿ ಉಲ್ಲೇಖಿಸಲಾಗಿದೆ.

ಲಾವಣಿಗಳನ್ನೇ ಇತಿಹಾಸ ಎಂದು ಪ್ರತಿಪಾದಿಸಲು ಹೊರಟಿರುವ ಸಂಘಪರಿವಾರವನ್ನು ಟೀಕಿಸಿರುವ ಲೇಖಕ ನಾಗೇಗೌಡ ಕೀಲಾರ ಅವರು, “ಇತಿಹಾಸ ರೂಪಿಸಲು ಒಂದು ಮೆಥೆಡ್ ಇರುತ್ತದೆ. ಆ ಮೆಥೆಡ್‌ಗೆ ಸಂಘಪರಿವಾರದವರು ತಿಲಾಂಜಲಿ ಹಾಡಿರುತ್ತಾರೆ. ಇತಿಹಾಸದ ಮೆತೆಡ್‌ಗೆ ಪೂರಕವಾಗಿರದ ಒಂದಷ್ಟು ಲಾವಣಿ, ಪುರಾಣಗಳನ್ನು ಜನಮಾನಸದಲ್ಲಿ ಹರಿಯಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು, “ಟಿಪ್ಪು ಸತ್ತ ಹಲವಾರು ವರ್ಷಗಳ ನಂತರ ಉರಿಗೌಡ ಮತ್ತು ನಂಜೇಗೌಡ ಅನ್ನುವವರು ಬ್ರಿಟೀಷರ ವಿರುದ್ದ ಹೋರಾಟ ಮಾಡಿದವರು ಅನ್ನುವ ಲಾವಣಿಯನ್ನು ಸುನಿಲ್ ಜೆರವರು ತಮ್ಮ ಪೋಸ್ಟ್‌ನಲ್ಲಿ ಹಾಕಿದ್ದಾರೆ. ಇದಕ್ಕೆ ಸಂಘಪರಿವಾರದವರ ಉತ್ತರ ಏನು? ಇಂತಹ ಲಾವಣಿ, ಕಾಗಕ್ಕ ಗುಬಕ್ಕನ ಕತೆಯನ್ನೇ ಇತಿಹಾಸ ಎಂದು ಸಂಘಪರಿವಾರದವರು ಸುಳ್ಳು ಹೇಳುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.





