Homeಕರ್ನಾಟಕಅಸ್ತಂಗತವಾದ ’ಧ್ರುವ’ತಾರೆ; ಮಂಕಾದ ರಾಜಕೀಯ ಚಿತ್ರಣ

ಅಸ್ತಂಗತವಾದ ’ಧ್ರುವ’ತಾರೆ; ಮಂಕಾದ ರಾಜಕೀಯ ಚಿತ್ರಣ

- Advertisement -
- Advertisement -

ರಾಜಕಾರಣದ ಧ್ರುವನಕ್ಷತ್ರವಾಗಿ ಬಹುಕಾಲ ಮಿಂಚಬಹುದಿದ್ದ ಸಜ್ಜನ ಮತ್ತು ಜನಾನುರಾಗಿ ರಾಜಕಾರಣಿ ಧ್ರುವ ನಾರಾಯಣ್ ಅವರು ಹಠಾತ್ ನಿರ್ಗಮಿಸಿರುವುದು ಆಘಾತಕಾರಿ ಸುದ್ದಿಯಾಗಿದೆ. ಧ್ರುವ ನಾರಾಯಣ್ ಅವರು ಇಷ್ಟು ಬೇಗ ನಿರ್ಗಮಿಸುವ ಯಾವ ಸೂಚನೆಗಳೂ ಯಾರಿಗೂ ಇರಲಿಲ್ಲ; ಸ್ವತಃ ಅವರಿಗೂ ಇದ್ದಿರಲಿಕ್ಕಿಲ್ಲ. ಅವರ ಅಪಾರ ಅಭಿಮಾನಿ ಬಳಗಕ್ಕೆ ಈ ಅಗಲಿಕೆಯ ದುಃಖವನ್ನು ಸಹಿಸಲು ಕಷ್ಟ. ಧ್ರುವ ನಾರಾಯಣ್ ನಿಜಕ್ಕೂ ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತ ಗುಣಸ್ವಭಾವವನ್ನು ಬೆಳೆಸಿಕೊಂಡಿದ್ದ ವ್ಯಕ್ತಿಯಾಗಿದ್ದರು. ಅದೇ ಅವರ ಶಕ್ತಿಯಾಗಿತ್ತು. ಅಂತಹ ಧೀಮಂತ ವ್ಯಕ್ತಿ ಇಷ್ಟು ಚಿಕ್ಕ ವಯಸ್ಸಿಗೇ ಹೃದಯಾಘಾತದಿಂದ ವಿಧಿವಶರಾದುದು ದುರಂತವೇ ಸರಿ.

ಇಡೀ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅವರು ಎಲ್ಲಾ ಜಾತಿ ಧರ್ಮದ ಜನರ ವಿಶ್ವಾಸ ಗಳಿಸಿದ್ದರು. ಯಾರೊಂದಿಗೂ ಧ್ವನಿಯೇರಿಸಿ ಮಾತಾಡದ ಸೌಮ್ಯ ಸ್ವಭಾವದ ಮತ್ತು ರಾಜಕೀಯ ದ್ವೇಷ ಸಾಧಿಸದ ಅಪರೂಪದ ರಾಜಕಾರಣಿ ಧ್ರುವ ನಾರಾಯಣ್. ತಮ್ಮ ಈ ಸೌಹಾರ್ದ-ಸಾಮರಸ್ಯದ ಸ್ವಭಾವದಿಂದಲೇ ಹೆಚ್ಚು ಜನಮನ್ನಣೆ ಗಳಿಸಿದ್ದರು.

ಅವರ ಬಳಿಗೆ ಯಾರಾದರೂ ಸಹಾಯ ಕೇಳಿಕೊಂಡು ಬಂದರೆ ಅವರು ಯಾವ ಪಕ್ಷದವರು, ಯಾವ ಕ್ಷೇತ್ರದವರು ಎಂಬ ಯಾವುದೇ ಪೂರ್ವಾಪರಗಳನ್ನು ಕೇಳುತ್ತಿರಲಿಲ್ಲ. ತಮ್ಮಿಂದ ಏನಾಗಬಹುದು ಎಂಬುದನ್ನು ನೋಡಿ ಸ್ಥಳದಲ್ಲೇ ಅವರ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದರು.

ಶ್ರೀನಿವಾಸ ಪ್ರಸಾದ್

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಸಂಸದರಾಗಿ ಸ್ವಂತ ಆಸಕ್ತಿಯಿಂದ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ತಂದರು. ಒಂದೇ ಜಿಲ್ಲೆಗೆ ನವೋದಯ ಮತ್ತು ಕೇಂದ್ರೀಯ ವಿದ್ಯಾಲಯಗಳನ್ನು ಕೊಡುವುದು ಅಪರೂಪ. ಆದರೆ ಧ್ರುವ ನಾರಾಯಣ್ ಅವರು ತಮ್ಮ ಛಲದಿಂದ ಇದನ್ನು ಸಾಧ್ಯವಾಗಿಸಿದರು. ಇವರ ಅಧಿಕಾರಾವಧಿಯಲ್ಲೇ ಜಿಲ್ಲೆಗೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ನಳಂದ ವಿಶ್ವವಿದ್ಯಾನಿಲಯ ಮುಂತಾದವುಗಳು ಆರಂಭವಾದವು. ಆದರ್ಶ ಶಾಲೆಗಳನ್ನು ಆರಂಭಿಸಲು ಧ್ರುವ ಅವರ ಕೊಡುಗೆ ದೊಡ್ಡದಿದೆ. ಇವೆಲ್ಲಾ ಕಾರಣಗಳಿಂದಲೇ ದೇಶದ ನಂಬರ್ ಒನ್ ಸಂಸದ ಎಂಬ ಖ್ಯಾತಿ ಇವರಿಗೆ ಸಂದಿತು. ಇವರ ಕಾರ್ಯವೈಖರಿಯನ್ನು ಪ್ರಧಾನಿ ಮೋದಿಯವರೂ ಕೂಡ ಶ್ಲಾಘಿಸಿದ್ದರು.

ಎಚ್.ಡಿ. ಕೋಟೆಯಲ್ಲಿ ಕಳೆದ ಬಾರಿ ಶಾಸಕ ಚಿಕ್ಕಮಾದು ಮರಣ ಹೊಂದಿದಾಗ ಅವರ ಪುತ್ರ ಅನಿಲ್ ಚಿಕ್ಕಮಾದುವಿಗೆ ಟಿಕೆಟ್ ಕೊಡಿಸಿ ತಮಗಿದ್ದ ವರ್ಚಸ್ಸಿನಿಂದ ಬಹಳ ಪೈಪೋಟಿಯ ನಡುವೆ ಗೆಲ್ಲಿಸಿಕೊಂಡು ಬಂದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಭದ್ರಕೋಟೆಯಾಗಿ ಸೃಷ್ಟಿಸಿದ್ದರು.

ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿದ್ದ ಶ್ರೀನಿವಾಸ ಪ್ರಸಾದ್‌ರವರನ್ನು ಏಕಾಏಕಿ ಸಂಪುಟದಿಂದ ತೆಗೆದಾಗ ಪ್ರಸಾದ್ ಅವರು ಸಿಟ್ಟಿನಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಆಗ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬಿತ್ತು. ಹೀಗಾಗಿ ಶ್ರೀನಿವಾಸ್ ಪ್ರಸಾದ್ ಅವರಿಗಿದ್ದ ಸಿದ್ದರಾಮಯ್ಯನವರ ಮೇಲಿನ ಸೇಡಿನ ರಾಜಕಾರಣಕ್ಕೆ ಮರುಳಾದ ದಲಿತ ಸಮುದಾಯದ ಮತದಾರರು ಪ್ರಸಾದ್ ಅವರನ್ನು ಗೆಲ್ಲಿಸುವ ಪಣತೊಟ್ಟರು. ಇದರ ಪರಿಣಾಮವಾಗಿ ಕಳೆದ ಸಂಸತ್ ಚುನಾವಣೆಯಲ್ಲಿ ಧ್ರುವ ನಾರಾಯಣ್ ಕೇವಲ ಒಂದೆರಡು ಸಾವಿರ ಮತಗಳ ಅಂತರದಲ್ಲಿ ಶ್ರೀನಿವಾಸ ಪ್ರಸಾದ್ ಎದುರು ಪರಾಭವಗೊಳ್ಳಬೇಕಾಯ್ತು.

ಇದನ್ನೂ ಓದಿ: ಎಲ್ಲಿಯಾದರೂ ಕಂಡರೆ ‘ಕಿತ್ತೋದ ಸಿ.ಟಿ. ರವಿ’ ಎಂದು ಘೋಷಣೆ ಕೂಗಿ: ವೀರಶೈವ ಲಿಂಗಾಯತ ಸಂಘಟನಾ…

ಹೀಗಿದ್ದರೂ, ಧೃತಿಗೆಡದೆ ತಮ್ಮ ಪಕ್ಷದ ಸಂಘಟನೆಗೆ ಟೊಂಕಕಟ್ಟಿ ನಿಂತರು. ಸೋತರೂ ಜನಸೇವೆಯನ್ನು ನಿಲ್ಲಿಸದೆ ಕ್ಷೇತ್ರದಲ್ಲಿ ಚಕ್ರ ಕಟ್ಟಿಕೊಂಡು ಓಡಾಡಿದರು. ಕೊರೊನಾ ಲಾಕ್‌ಡೌನ್‌ನಲ್ಲಂತ ಕೊರೊನಾ ವಾರಿಯರ್ಸ್ ರೀತಿ ಕೆಲಸ ಮಾಡಿ ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು. ಆಸ್ಪತ್ರೆಯ ವ್ಯವಸ್ಥೆಗಾಗಿ ಶ್ರಮಿಸಿದರು.

ಅವರ ಈ ಶ್ರದ್ದೆ, ಸಂಘಟನಾ ಕೌಶಲ್ಯ ಗಮನಿಸಿಯೇ ಅವರನ್ನು ರಾಜ್ಯ ರಾಜಕಾರಣಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿತು. ಕಾರ್ಯಾಧ್ಯಕ್ಷರಾದ ಮೇಲೆ ರಾಜ್ಯದಾದ್ಯಂತ ಪಕ್ಷವನ್ನು ಸಂಘಟಿಸಲು ಹಗಲಿರುಳೆನ್ನದೆ, ಸುತ್ತಿದರು. ಕೇಡರ್ ಕ್ಯಾಂಪ್‌ಗಳನ್ನು ಸಂಘಟಿಸಿದ್ದರು. ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ರಾಜ್ಯದಲ್ಲಿ ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಕಾರಣದಿಂದ ಕಾಂಗ್ರೆಸ್‌ಅನ್ನು ಗಟ್ಟಿಗೊಳಿಸಲು ತಮ್ಮನ್ನು ಮುಡುಪಾಗಿರಿಸಿಕೊಂಡಿದ್ದರು. ಸೋತ ಅನೇಕ ಮಂತ್ರಿ ಮಹೋದಯರು ಮುಂದಿನ ಚುನಾವಣೆಯತನಕ ಚಲಾವಣೆಗೆ ಬರುವುದಿಲ್ಲ. ಆದರೆ, ಧ್ರುವ ನಾರಾಯಣ್ ಅವರು ಸೋತರೂ ಜನಸೇವೆಯಿಂದ ವಿಮುಖರಾಗಲಿಲ್ಲ ಎಂಬುದೇ ಅವರಿಗಿದ್ದ ಹೆಚ್ಚುಗಾರಿಕೆ.

ಎಚ್.ಸಿ. ಮಹದೇವಪ್ಪ

ಅವರು ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರು. ಅವರು ಬದುಕಿ, ಗೆದ್ದು ಒಂದೊಮ್ಮೆ ಕಾಂಗ್ರೆಸ್ ಅಧಕಾರಕ್ಕೆ ಬಂದಿದ್ದರೆ ಅವರು ಮಂತ್ರಿಯಾಗಲಿದ್ದರು, ಅಷ್ಟೇ ಅಲ್ಲ ಮುಂದೊಮ್ಮೆ ಮುಖ್ಯಮಂತ್ರಿಯೂ ಆಗಲಿದ್ದರು. ಆದರೆ ನಿಸರ್ಗದ ತೀರ್ಮಾನ ಬೇರೆಯೇ ಇತ್ತು.

ಈಗ ಇಡೀ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ನಿರ್ವಾತ ಸೃಷ್ಟಿಯಾಗಿದೆ. ಅದರಲ್ಲೂ ಅಲ್ಲಿ ಸೂಕ್ಷ್ಮ ದಲಿತ ರಾಜಕಾರಣ ಇಲ್ಲವಾಗಿದೆ. ಈ ಭಾಗದ ಹಳೆಯ ದಲಿತ ಹುಲಿ ಶ್ರೀನಿವಾಸ ಪ್ರಸಾದ್ ಸಹ ಧ್ರುವ ನಾರಾಯಣ್ ಅವರನ್ನು ಅತ್ಯುತ್ತಮ ಸಂಘಟನಾ ಚತುರ ಎಂದೇ ಕರೆಯುತ್ತಿದ್ದರು. ಸ್ವತಃ ಶ್ರೀನಿವಾಸ ಪ್ರಸಾದ್ ಅವರೇ ಹಾಗೆಂದ ಮೇಲೆ ಧ್ರುವ ಅವರ ಸಂಘಟನಾ ಚಾತುರ್ಯವನ್ನು ಅಲ್ಲಗಳೆಯಲಾದೀತೆ? ಹಿಂದೊಮ್ಮೆ ಶ್ರೀನಿವಾಸ ಪ್ರಸಾದ್ ಅವರು ರಾಜ್ಯರಾಜಕಾರಣಕ್ಕೆ ಮರಳಿದಾಗ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಧ್ರುವ ನಾರಾಯಣ್ ಮಾತ್ರವೇ ಸೂಕ್ತ ಅಭ್ಯರ್ಥಿ ಎಂದು ತೀರ್ಮಾನಿಸಿ, ಅವರು ಗೆದ್ದಿದ್ದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ಕೊಡಿಸಿ ಚಾಮರಾಜನಗರ ಲೋಕಸಭೆಗೆ ನಿಲ್ಲಿಸಿ ಗೆಲ್ಲಿಸಿದ್ದರು.

ಹೀಗೆ ಗೆದ್ದ ಧ್ರುವ ನಾರಾಯಣ್ ಅವರು ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹಳ ಪ್ರಬಲವಾಗಿ ಸಂಘಟಿಸಿದ್ದರು. ಬದಲಾದ ರಾಜಕಾರಣದಲ್ಲಿ ಶ್ರೀನಿವಾಸ ಪ್ರಸಾದ್ ಅವರು ನಂಜನಗೂಡಿನಲ್ಲಿ ತಮ್ಮ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಅವರ ಎದುರೇ ಕಳಲೆ ಕೇಶವಮೂರ್ತಿಯವರನ್ನು ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು!

ಇದನ್ನೂ ಓದಿ: ಡಬ್ಬಲ್ ಇಂಜಿನ್ ಸರಕಾರದ ಲಾಭ ನಷ್ಟ: ರಾಜ್ಯಗಳು ಕೊಡೋದೆಷ್ಟು? ವಾಪಸ್ ಪಡೆಯೋದೆಷ್ಟು?

ಈಗ ಅದೇ ನಂಜನಗೂಡು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಹಳ ತಯಾರಿ ಮಾಡಿಕೊಂಡಿದ್ದರು. ಆದರೆ, ಇದೇ ಕ್ಷೇತ್ರಕ್ಕೆ ತನಗೆ ಟಿಕೆಟ್ ಬೇಕೆಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸಹ ವರಿಷ್ಠರಲ್ಲಿ ಪಟ್ಟುಹಿಡಿದಿದ್ದರು. ಈ ವಿಚಾರದಲ್ಲಿ ಧ್ರುವ ನಾರಾಯಣ್ ಅವರು ಬಹಳ ಬೇಸರ ಮತ್ತು ಒತ್ತಡಕ್ಕೊಳಗಾಗಿದ್ದರು ಎಂಬುದು ಹಲವರ ಅಂಬೋಣ. ಇರಬಹುದು. ಪಕ್ಷದ ಕಾರ್ಯಾಧ್ಯಕ್ಷನಾಗಿ ತಾನೂ ಸಹ ಒಂದು ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಲು ಇಷ್ಟು ಬಡಿದಾಡಬೇಕೇ ಎಂಬ ನೋವು ಅವರಿಗಿತ್ತು.

ಈಗ ಅವರು ಅಸ್ತಂಗತರಾಗಿದ್ದಾರೆ. ಅವರ ಪುತ್ರ ದರ್ಶನ್‌ಗೆ ಟಿಕೆಟ್ ಕೊಡಬೇಕೆಂದು ಸಾವಿನ ಮನೆಯಲ್ಲೇ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ವರಿಷ್ಠರ ಮೇಲೆ ತೀವ್ರವಾದ ಒತ್ತಡ ಹಾಕಿದ್ದರು. ಧ್ರುವ ನಾರಾಯಣ್ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಇದು ಅನಿವಾರ್ಯವೂ ಹೌದು. ಧ್ರುವ ನಾರಾಯಣ್ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ತಮ್ಮಿಡೀ ಬದುಕನ್ನು ಸವೆಸಿದ್ದಾರೆ. ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಲೇಬೇಕೆಂಬ ಕನಸಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿದ್ದಾರೆ. ಅವರ ಪತ್ನಿಯ ಅನಾರೋಗ್ಯವನ್ನೂ ಲೆಕ್ಕಿಸದೆ, ಸ್ವತಃ ತಮ್ಮ ಆರೋಗ್ಯದ ಕಡೆಗೂ ಸರಿಯಾಗಿ ಗಮನಹರಿಸದೆ ಪಕ್ಷ ನಿಷ್ಠೆಯಿಂದ ದುಡಿದಿದ್ದಾರೆ ಎಂಬುದನ್ನು ಕಾರ್ಯಕರ್ತರು, ಅಭಿಮಾನಿಗಳು, ಜನಸಾಮಾನ್ಯರೆಲ್ಲರೂ ಬಲ್ಲರು.

ದರ್ಶನ್ ಧ್ರುವ

ಪಕ್ಷದ ವರಿಷ್ಟರು ಈಗ ಧ್ರುವ ನಾರಾಯಣ್ ಅವರ ಮಗ ದರ್ಶನ್‌ಗೆ ಟಿಕೆಟ್ ಕೊಡಲೇಬೇಕೆಂಬುದು ಅವರ ಲಕ್ಷಾಂತರ ಅಭಿಮಾನಿಗಳ ಆಗ್ರಹ. ಈ ಬಾರಿ ಎದ್ದಿರುವ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಪ್ರಾಮಾಣಿಕ ನಡೆಯಿಟ್ಟರೆ ಚಾಮರಾಜನಗರ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಿಕೊಳ್ಳಬಹುದು. ಧ್ರುವ ನಾರಾಯಣ್ ಅವರ ಅಕಾಲಿಕ ಸಾವಿನ ಅನುಕಂಪ ಇಡೀ ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಾದ ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಚಾಮರಾಜನಗರ, ಎಚ್.ಡಿ.ಕೋಟೆ, ನಂಜನಗೂಡು, ವರುಣ ಮತ್ತು ಟಿ.ನರಸೀಪುರದೆಲ್ಲೆಡೆ ಪ್ರಭಾವಿಸಿರುವುದು ಸುಳ್ಳಲ್ಲ.

ಈಗಾಗಲೇ ಗುಂಡ್ಲುಪೇಟೆ, ನಂಜನಗೂಡು, ಕೊಳ್ಳೇಗಾಲ, ನರಸೀಪುರ ಕ್ಷೇತ್ರಗಳು ಕಾಂಗ್ರೆಸ್‌ನ ಕೈಬಿಟ್ಟುಹೋಗಿವೆ. ಈ ಬಾರಿ ಧ್ರುವ ನಾರಾಯಣ್ ಅವರ ಅನುಪಸ್ಥಿತಿ ಎಚ್.ಡಿ.ಕೋಟೆ, ವರುಣ ಮತ್ತು ಚಾಮರಾಜನಗರಕ್ಕೂ ವ್ಯಾಪಿಸುವುದು ನಿಚ್ಚಳ. ಇದರಿಂದ ತಪ್ಪಿಸಿಕೊಳ್ಳಬಲ್ಲ ಒಂದೇ ಮಾರ್ಗವೆಂದರೆ ಅದು ಧ್ರುವ ನಾರಾಯಣ್ ಅವರ ಪುತ್ರ ದರ್ಶನ್ ಧ್ರುವ ಅವರನ್ನು ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಸಿ ಮತದಾರರ ವಿಶ್ವಾಸವನ್ನು ಮರುಗಳಿಸುವುದೇ ಆಗಿದೆ.

ಇಲ್ಲಿನ ವಿಶೇಷವೇ ಅದು. ಸಾಮಾನ್ಯವಾಗಿ ಯಾರಾದರು ರಾಜಕಾರಣಿ ಅಕಾಲಿಕ ಮರಣ ಹೊಂದಿದರೆ ಅವರ ಸ್ವಕ್ಷೇತ್ರದಲ್ಲಷ್ಟೇ ಅನುಕಂಪದ ಅಲೆ ಇರುತ್ತದೆ. ಆದರೆ ಧ್ರುವ ನಾರಾಯಣ್ ಅವರ ಸಾವಿನ ಅನುಕಂಪ ಎಂಟು ಕ್ಷೇತ್ರಗಳಲ್ಲೂ ಹರಡಿದೆ. ಇದೇ ಧ್ರುವ ನಾರಾಯಣ್ ಅವರ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಇದ್ದ ಶಕ್ತಿ. ಇಷ್ಟರಿಂದಲೇ ಧ್ರುವ ನಾರಾಯಣ್ ಅವರ ರಾಜಕೀಯ ಬದ್ಧತೆ ಮತ್ತು ಜನಪ್ರಿಯತೆಯನ್ನು ಯಾರಾದರೂ ಅಳೆಯಬಹುದು, ಅನುಕರಿಸಬಹುದು ಮತ್ತು ಅನುಸರಿಸಬಹುದು.

ಡಾ.ಚಮರಂ ಮೈಸೂರು

ಡಾ.ಚಮರಂ ಮೈಸೂರು
ಮೂಲತಃ ಚಾಮರಾಜನಗರ ಜಿಲ್ಲೆಯವರಾದ ಡಾ. ಕೃಷ್ಣಮೂರ್ತಿ ಚಮರಂ ಬಹುಜನ ಚಳವಳಿಯಲ್ಲಿ ಸಕ್ರಿಯವಾಗಿದ್ದವರು. ’ಮನಾಬ್ಧಿ’, ’ಪರಿವರ್ತನ’, ’ಬುದ್ಧನ ಮಾರ್ಗದಲ್ಲಿ’, ’ಅಂಬೇಡ್ಕರ್‌ವಾದ ಎಂದರೇನು?’ ಸೇರಿದಂತೆ 25ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ’ಭಾರತದ ಪ್ರಜೆಗಳಾದ ನಾವು’ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...