ಆಧಾರ್-ಪಾನ್ ಕಾರ್ಡ್ ಜೋಡಣೆ ಶುಲ್ಕವೆಂದು ಪ್ರತಿಯೊಬ್ಬರಿಂದ 1000 ರೂ ದಂಡ ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರದ ಈ ಬಾಬತ್ತಿನಲ್ಲಿ ಬರೋಬ್ಬರಿ 4,000 ಕೋಟಿ ರೂಗಳಿಗೆ ಅಧಿಕ ಹಣ ಸಂಗ್ರಹಿಸಿರುವುದಾಗಿ ವರದಿಯಾಗಿದೆ.
ಒಬ್ಬರ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಮಾಡಿಸುವುದನ್ನು ತಡೆಯಲು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಆಧಾರ್ ಜೊತೆಗೆ ಪಾನ್ ನಂಬರ್ ಜೋಡಿಸುವ ವ್ಯವಸ್ಥೆ ಜಾರಿಗೆ ತಂದಿತು. ಅಲ್ಲಿಂದ 2022ರ ಮಾರ್ಚ್‌ವರೆಗೂ ಜೋಡಣೆಗೆ ಯಾವುದೇ ಶುಲ್ಕವಿರಲಿಲ್ಲ. ಆ ವೇಳೆಗೆ ಅಂದಾಜು 44 ಕೋಟಿ ಜನರು ತಮ್ಮ ಪಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿಸಿದ್ದರು. ಆ ನಂತರ ಕೊನೆಯದು ಎಂದು 1000 ರೂ ಶುಲ್ಕದೊಂದಿಗೆ 2023ರ ಮಾರ್ಚ್ ಅಂತ್ಯದೊಳಗೆ ಲಿಂಕ್ ಮಾಡಿಸಲು ಗಡುವು ನೀಡಿದೆ. ಸದ್ಯ 48 ಕೋಟಿ ಜನರು ಲಿಂಕ್ ಮಾಡಿಸಿದ್ದು, ಇನ್ನೂ 13 ಕೋಟಿ ಜನರು ಲಿಂಕ್ ಮಾಡಿಸಿಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ನಿತಿನ್ ಗುಪ್ತಾ ತಿಳಿಸಿದ್ದಾರೆ.
ಅಂದರೆ ಒಂದು ವರ್ಷದ ಅವಧಿಯಲ್ಲಿ ಸುಮಾರು 4 ಕೋಟಿ ಜನರು ಪಾನ್ ಆಧಾರ್ ಲಿಂಕ್ ಮಾಡಿಸಿದ್ದಾರೆ ಮತ್ತು ತಲಾ 1000 ರೂ ಪಾವತಿಸಿದ್ದಾರೆ. ಅಲ್ಲಿಗೆ ಈ ಒಂದು ವರ್ಷದಲ್ಲ ಸರ್ಕಾರ ಸಂಗ್ರಹಿಸಿದ ಹಣ 4,000 ಕೋಟಿ ರೂಗಳಾಗಿದೆ. ಇನ್ನು 13 ಕೋಟಿ ಜನರು ಲಿಂಕ್ ಮಾಡಿಸಿದ್ದಲ್ಲಿ ಈಗಿನಂತೆಯೇ 1000 ಶುಲ್ಕವಿದ್ದಲ್ಲಿ 13,000 ಕೋಟಿ ಸಂಗ್ರಹವಾಗುತ್ತದೆ. ಆದರೆ ಮಾರ್ಚ್ 31ರ ನಂತರ ದಂಡದ ಮೊತ್ತ ಹೆಚ್ಚು ಮಾಡಲಾಗುತ್ತದೆ ಎಂಬ ಆತಂಕಗಳಿದ್ದು ಈ ಹಣದಲ್ಲಿ ಮತ್ತಷ್ಟು ಹೆಚ್ಚಾಗುವ ಸಂಭವವಿದೆ.
ಶುಲ್ಕ ಸಂಗ್ರಹಕ್ಕೆ ಆಕ್ರೋಶ
ಲಿಂಕ್ ಮಾಡಲು ಶುಲ್ಕ ವಿಧಿಸಲು ಮೂಲ ಕಾಯ್ದೆ ಅಥವಾ ನಿಯಮಗಳಲ್ಲಿ ಅವಕಾಶವಿಲ್ಲ. ಆದರೂ 2021ರ ಹಣಕಾಸು ಕಾಯ್ದೆಯಲ್ಲಿ ತಿದ್ದುಪಡಿಯನ್ನು ತಂದು, 1961ರ ಆದಾಯ ತೆರಿಗೆ ಕಾಯ್ದೆಗೆ ಹೊಸದಾಗಿ 234ಎಚ್ ಎಂಬ ಸೆಕ್ಷನ್ ಸೇರಿಸಲಾಗಿದೆ. ಅದರಲ್ಲಿ ‘ಸರ್ಕಾರವು ನಿಗದಿ ಮಾಡಿದ ಗಡುವಿನ ಒಳಗೆ ಪ್ಯಾನ್–ಆಧಾರ್ ಜೋಡಣೆ ಮಾಡದೇ ಇದ್ದವರು, ನಂತರದ ಅವಧಿಯಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ’ ಎಂದು ಸೇರಿಸಲಾಗಿದೆ.

ಪಾನ್-ಆಧಾರ್ ಲಿಂಕ್ ಮಾಡಿಸುವುದಕ್ಕೆ 1000 ರೂ ಶುಲ್ಕ ಸಂಗ್ರಹಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. “ಪಾನ್ ಮತ್ತು ಆಧಾರ್ ಜೋಡಣೆ ಅದೊಂದು ಸರಿಯಾದ ನಿರ್ಧಾರವೇ ಆಗಿದೆ, ಆದರೆ ಅದಕ್ಕೆ ಇಷ್ಟೊಂದು ಮೊತ್ತದ ದಂಡ ಕಟ್ಟಿ ಮಧ್ಯಮ ವರ್ಗದ ಜನರ ಕಿಸೆಗೆ ಕತ್ತರಿ ಹಾಕಲು ಹೊರಟ ಕೇಂದ್ರ ಸರಕಾರದ ನಿಯಮ ಮಾತ್ರ ತಪ್ಪು. ವರ್ಷ ವರ್ಷ ರಿಟರ್ನ್ ಸಲ್ಲಿಕೆಯಾಗುತ್ತಿರುವ ಪಾನ್ ನಂಬರಕ್ಕೆ ಆಧಾರ್ ಜೋಡಣೆಯ ಯಾವುದೇ ಸಮಸ್ಯೆ ಇರುವುದಿಲ್ಲ. ಹೊಸ ಪಾನ್ ಕಾರ್ಡ್ ಗೆ ತಗಲುವ ವೆಚ್ಚ 118 ರೂ.ಮಾತ್ರ, ಆದರೆ ಅದೇ ಪಾನ್ ನಂಬ್ರಗೆ ಆಧಾರ್ ಲಿಂಕ್ ಮಾಡಲು ಸರ್ಕಾರ ವಿಧಿಸಿದ ದಂಡದ ಮೊತ್ತ ಬರೋಬ್ಬರಿ ಹತ್ತು ಪಟ್ಟು ಹೆಚ್ಚು ಮಾಡಿರೋದು ನಂಬಲು ಅಸಾಧ್ಯ!! ಅದರ ಬದಲಿಗೆ ಆಧಾರ್ ಲಿಂಕ್ ಆಗದ ಪಾನ್ ನಂಬ್ರಗಳನ್ನು ಏಪ್ರಿಲ್ 1, 2023 ರಿಂದ ಖಡ್ಡಾಯವಾಗಿ ಡಿಆಕ್ಟಿವ್ ಮಾಡಿಸಿ, ಹೊಸದಾಗಿ ಪಾನ್ ಕಾರ್ಡ್ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿತ್ತು. ಅದು ಬಿಟ್ಟು ಅನಾವಶ್ಯಕವಾಗಿ ಇಂತ ಪರಿಸ್ಥಿತಿಯಲ್ಲಿ ಈ ರೀತಿಯ ದಂಡ ಹೇರಿಕೆ ಖಂಡನೀಯ” ಎಂದು ಮೋಹನ್ ಮೂಡಬಿದರೆ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಪಾನ್-ಆಧಾರ್ ಲಿಂಕ್ ಹೆಸರಿನಲ್ಲಿ ಜನಸಾಮಾನ್ಯರಿಂದ ಲೂಟಿ ಮಾಡುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಕೆಲವರು ಲಿಂಕ್ ಮಾಡಿಸಲು ಮುಂದಿನ ವರ್ಷ ಅಂದರೆ 2024ರ ಮಾರ್ಚ್‌ವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಹಾಗಾಗಿ ಪಾನ್ ಅಗತ್ಯವಿರುವವರು ಲಿಂಕ್ ಮಾಡಿಸಿಕೊಳ್ಳಬೇಕು. ಲಿಂಕ್ ಆಗಿದೆಯೇ ಇಲ್ಲವೇ ಎಂದು ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: ಆಧಾರ್-ಪಾನ್ ಕಾರ್ಡ್ ಜೋಡಣೆಗೆ 1000 ರೂ ದಂಡ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ



Gross injustice.Lnking two types of government cards and people have to pay it.
Pan link