Homeಕರ್ನಾಟಕಗೋರಕ್ಷಣೆ ಹೆಸರಿನಲ್ಲಿ ಹಾದಿಬೀದಿಯಲ್ಲಿ ರಕ್ತ ಹರಿಸುವ ದಂಧೆಕೋರರು: ಕೊಲ್ಲುವ ಹಂತಕ್ಕೆ ಬೆಳೆದು ನಿಂತದ್ದು ಹೇಗೆ?

ಗೋರಕ್ಷಣೆ ಹೆಸರಿನಲ್ಲಿ ಹಾದಿಬೀದಿಯಲ್ಲಿ ರಕ್ತ ಹರಿಸುವ ದಂಧೆಕೋರರು: ಕೊಲ್ಲುವ ಹಂತಕ್ಕೆ ಬೆಳೆದು ನಿಂತದ್ದು ಹೇಗೆ?

ಪುನೀತ್ ಕೆರೆಹಳ್ಳಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತ, ನನ್ನತ್ರ 'ಐಟಂ' ಇತ್ತು ಬಿಡು ಎನ್ನುತ್ತಾನೆ. ಈ 'ಐಟಂ' ಎಂದರೆ ’ಗನ್' ಎಂದರ್ಥವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

- Advertisement -
- Advertisement -

ಪುನೀತ್ ಕೆರೆಹಳ್ಳಿ ಎಂಬಾತನೊಬ್ಬ ಪುಂಡರ ಗುಂಪು ಕಟ್ಟಿಕೊಂಡು ಗೋರಕ್ಷಣೆ ಎಂಬ ನಕಲಿ ಭಾವನಾತ್ಮಕ ಕೆಲಸದಲ್ಲಿ ನಿರತನಾಗಿ, ಗೋಸಾಗಣೆ ಮಾಡುವವರನ್ನು ಹೆದರಿಸಿ, ಬೆದರಿಸಿ ಹಣ ಕಿತ್ತುಕೊಳ್ಳುವ ದಂಧೆ ನಡೆಸುತ್ತಿದ್ದ. ಹಣ ಕೊಡದವರಿಗೆ ಹೊಡೆಯುವ, ಕಿರುಕುಳ ನೀಡುವ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದ. ಆದರೆ ಸರ್ಕಾರವಾಗಲೀ, ಪೊಲೀಸ್ ಇಲಾಖೆಯಾಗಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ನಿರ್ಲಕ್ಷ್ಯದಿಂದಾಗಿ ಆ ದುಷ್ಟರ ಗ್ಯಾಂಗ್ ಇದ್ರಿಸ್ ಪಾಶಾ ಎಂಬ ಅಮಾಯಕ ಜೀವವೊಂದರ ಹತ್ಯೆಗೆ ಕಾರಣವಾಗಿದೆ ಎಂದು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಸಾಗಣೆ ಮಾಡುತ್ತಿದ್ದಾಗ, ನಿಲ್ಲಿಸಿ ಬೆದರಿಸಿ, ಹಣಕ್ಕೆ ಬೇಡಿಕೆಯಿಟ್ಟು, ಹಣ ಸಿಗದ ಕಾರಣಕ್ಕೆ, ಅರೋಪಿಸಲಾಗಿರುವಂತೆ ಕೊಲೆಗೈಯ್ಯುವ ಮಟ್ಟಕ್ಕೆ ಈ ಪುಂಡರು ಬೆಳೆದು ನಿಂತಿದ್ದಾರೆ. ಅಲ್ಲದೆ ಅವರಿಗಿರುವ ಸರ್ಕಾರದ ಬೆಂಬಲ ಮತ್ತು ಕೊಳ್ಳೆ ಹೊಡೆದಿರುವ ಅನೈತಿಕ ದುಡ್ಡಿನ ಅಹಂಕಾರದಿಂದ ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಬೆದರಿಕೆಯೊಡ್ಡುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಆ ಮೂಲಕ ಕರ್ನಾಟಕದಲ್ಲಿ ಸರ್ಕಾರ ಸತ್ತು ಬಿದ್ದಿದೆ, ಕಾನೂನು ಸುವ್ಯವಸ್ಥೆ ಎಂಬುದು ಕಾಲ ಕಸವಾಗಿದೆ. ನೆಲದ ಕಾನೂನಿಗೆ ಯಾವುದೇ ಬೆಲೆಯಿಲ್ಲ, ನಾವು ಆಡಿದ್ದೇ ಆಟ ಎಂಬ ಸಂದೇಶ ರವಾನೆಯಾಗಿದೆ. ಈ ಸಂದರ್ಭದಲ್ಲಿ ಯಾವುದೇ ತಪ್ಪು ಮಾಡದೆ ಹತ್ಯೆಯಾದ ಇದ್ರೀಶ್ ಪಾಶಾನ ಕುಟುಂಬವು ಅನಾಥರಾಗಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

ಹತ್ಯೆಯಾದ 39 ವರ್ಷದ ಇದ್ರಿಶ್ ಪಾಶಾ ಮಂಡ್ಯ ನಗರದ ಗುತ್ತಲು ಕಾಲೋನಿಯ ನಿವಾಸಿ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅವರಿಗೆ ಇಬ್ಬರು ಪತ್ನಿಯರಿದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಮಕ್ಕಳಲ್ಲಿ 4 ತಿಂಗಳ ಹಸುಗೂಸು ಸಹ ಸೇರಿದೆ. ತಂದೆತಾಯಿಯಿಲ್ಲದ ಬಡ ಕುಟುಂಬದ ಇದ್ರಿಸ್ ಪಾಶಾ ಜೀವನೋಪಾಯಕ್ಕಾಗಿ ಇರ್ಫಾನ್ ಎಂಬುವವರ ಬಳಿ ಡ್ರೈವರ್ ಕೆಲಸ ಮಾಡಿಕೊಂಡಿದ್ದರು.

ಮಾರ್ಚ್ 27ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನ ತೆಂಡೇಕೆರೆ ದನದ ಸಂತೆಯಲ್ಲಿ ಖರೀದಿಸಿದ ರಾಸುಗಳನ್ನು ಮಾರ್ಚ್ 31ರ ರಾತ್ರಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಂತೆಗಳಿಗೆ ಕೊಂಡೊಯ್ಯುತ್ತಿರುವಾಗ ಅವರನ್ನು ರಾಮನಗರ ಜಿಲ್ಲೆಯ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಗ್ಯಾಂಗ್ ತಡೆದಿದೆ. 2 ಲಕ್ಷ ಹಣ ಕೊಟ್ಟರೆ ಗಾಡಿ ಬಿಡುತ್ತೇನೆ, ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಇದ್ರಿಶ್ ಪಾಶಾ ಸೇರಿ ಅವರ ಜೊತೆಗಿದ್ದ ಇರ್ಫಾನ್ ಮತ್ತು ಸೈಯ್ಯದ್ ಜಹೀರ್ ಎಂಬುವವರಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಬದುಕುಳಿದವರಿಬ್ಬರು ಆರೋಪಿಸಿದ್ದಾರೆ. ಆದರೆ ಇದ್ರಿಶ್ ಪಾಶಾ ರಾಸುಗಳನ್ನು ಖರೀದಿಸಿದ ರಶೀದಿಗಳನ್ನು ತೋರಿಸಿ ನಾವು ಕಾನೂನುಬದ್ಧವಾಗಿ ಖರೀದಿಸಿದ ಗೋವುಗಳನ್ನು ಸಾಗಾಟ ಮಾಡುತ್ತಿದ್ದೇವೆ, ನಿಮಗೇಕೆ ಹಣ ಕೊಡಬೇಕೆಂದು ವಾದಿಸಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಪುನೀತ್ ಕೆರೆಹಳ್ಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಇದ್ರಿಶ್ ಪಾಶಾ, ಇರ್ಫಾನ್ ಮತ್ತು ಸಯ್ಯದ್ ಜಹೀರ್ ಮೇಲೆ ತೀವ್ರ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಈ ಗಲಾಟೆಯಲ್ಲಿ ಇರ್ಫಾನ್ ತಪ್ಪಿಸಿಕೊಂಡು ಓಡಿದರೆ, ಸಯ್ಯದ್ ಅಂಗಡಿಯ ಬಳಿ ಅವಿತುಕೊಂಡಾಗ ಸಿಕ್ಕಿಬಿದ್ದಿದ್ದಾರೆ. ಆದರೆ ಇದ್ರೀಶ್ ತಪ್ಪಿಸಿಕೊಳ್ಳಲು ಯತ್ನಿಸುವಾಗ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ. ಎಲೆಕ್ಟ್ರಿಕ್ ಗನ್ ರೀತಿಯ ಸಾಧನದಿಂದ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಅದು ಮಿತಿಮೀರಿದ್ದರಿಂದ ಇದ್ರಿಶ್ ಪಾಶಾ ಜೀವ ಬಿಟ್ಟಿದ್ದಾರೆ. ಅವರಿಗೆ ನೀಡಿದ ಕಿರುಕುಳದ ಮಾರ್ಕ್‌ಗಳು ಇದ್ರಿಶ್ ದೇಹದ ಮೇಲಿರುವುದನ್ನು ಫೋಟೊಗಳು ದೃಢೀಕರಿಸುತ್ತವೆ. (ಇದ್ರಿಶ್ ಶವದ ಮರಣೋತ್ತರ ಪರೀಕ್ಷೆ ಇನ್ನೂ ಹೊರಬೀಳಬೇಕಿದ್ದು, ಬದುಕುಳಿದವರು ಕಟ್ಟಿಕೊಡುವ ಚಿತ್ರಹಿಂಸೆಯ ವಿವರಗಳನ್ನು ಇಲ್ಲಿ ದಾಖಲಿಸಲೂ ಸಾಧ್ಯವಾಗದಷ್ಟು ಬರ್ಬರವಾಗಿವೆ). ಈ ಕೊಲೆಯ ನಂತರ ಪುನೀತ್ ಕೆರೆಹಳ್ಳಿ ಜೊತೆಗಿದ್ದ ಯುವಕರು ತುಸು ವಿಚಲಿತರಾಗಿದ್ದಾರೆ.

ಇದೇ ಸಂದರ್ಭದಲ್ಲಿ ಪುನೀತ್ ಕೆರೆಹಳ್ಳಿ ಇದ್ರಿಶ್ ಪಾಶಾ ಕೊಲೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತೊಂದು ನಾಟಕ ಆಡಿದ್ದಾನೆ. ಶುಕ್ರವಾರ ರಾತ್ರಿ ಸಾತನೂರು ಪೊಲೀಸ್ ಸ್ಟೇಷನ್ ಮುಂಭಾಗದ ರಸ್ತೆಯ ಬಳಿ ಗೋವುಗಳುಳ್ಳ ವಾಹನವನ್ನು ನಿಲ್ಲಿಸಿಕೊಂಡು ಫೇಸ್‌ಬುಕ್ ಲೈವ್ ಶುರು ಮಾಡಿದ್ದಾನೆ. ಗೋವಿನ ಗಾಡಿ ಹಿಡಿದಿದ್ದೀವಿ, ಅದರಲ್ಲಿದ್ದವರು ತಪ್ಪಿಸಿಕೊಂಡಿದ್ದಾರೆ; ನಮ್ಮ ಹುಡುಗರು ಅಟ್ಟಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸ್‌ಗೆ ಹೇಳುತ್ತಾನೆ. ಆನಂತರ ರಸ್ತೆಯಲ್ಲಿ ಸಿಕ್ಕ ವೆಂಕಟರಾವ್ ಮತ್ತು ಆತನ ಸ್ನೇಹಿತನಿಗೆ ಗೋರಕ್ಷಣೆಯ ಬಗ್ಗೆ ಪುಂಗಿ ಬಿಡುತ್ತಾನೆ. ತನ್ನ ಹುಡುಗರಿಗೆ ಫೋನ್ ಮಾಡಿ ಬೇಗ ಬನ್ನಿ ಎಂದು ಕರೆಯುತ್ತಾನೆ. ಆದರೆ ಬಹಳ ಹೊತ್ತಾದರೂ ಅವನ ಗ್ಯಾಂಗ್ ಬರುವುದಿಲ್ಲ.

ಈ ವೇಳೆ ಪುನೀತ್ ಕೆರೆಹಳ್ಳಿ ಪದೇಪದೇ, ಎಲೆಕ್ಷನ್ ಟೈಮ್ ಇದು, ಎಷ್ಟೊಂದು ಚೆಕ್ ಪೋಸ್ಟ್‌ಗಳಿವೆ, ಯಾರು ಚೆಕ್ ಮಾಡಲಿಲ್ಲವೇ? ಅದು ಹೇಗೆ ಬಂದರು ಇವರು ಎಂದು ಹೇಳುವುದನ್ನು ನೋಡಬಹುದು. ಆಮೇಲೆ ಒಬ್ಬ ಯುವಕ ಬರುತ್ತಾನೆ. ಅವನಿಗೆ, “ಅಲ್ಲ ಕಣ್ರೋ ನೀವೆಲ್ಲ ನನ್ನ ಒಬ್ಬನನ್ನೇ ಬಿಟ್ಟು ಓಡಿಹೋದರೆ, ಅವರು ತಪ್ಪಿಸಿಕೊಂಡು ಈ ಕಡೆಯಿಂದ ಬಂದ್ರೆ ನಾನು ಏನು ಮಾಡುವುದು” ಎಂದು ಪುನೀತ್ ಪ್ರಶ್ನಿಸುತ್ತಾನೆ. “ಆನಂತರ ಏನ್ ತೊಂದ್ರೆ ಇಲ್ಲ ನನ್ನತ್ರ ‘ಐಟಂ’ ಇತ್ತು ಬಿಡು” ಎನ್ನುತ್ತಾನೆ. ಈ ‘ಐಟಂ’ ಎಂದರೆ ’ಗನ್’ ಎಂದರ್ಥವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಫೇಸ್‌ಬುಕ್ ಖಾತೆಯನ್ನು ತಾನೇ ಡಿಆಕ್ಟಿವೇಟ್ ಮಾಡಿಕೊಂಡಿದ್ದಾನೆ: ರಾಮನಗರ ಎಸ್.ಪಿ

ಜೊತೆಗಿದ್ದ ಹುಡುಗ ನನ್ನ ಫೋನ್ ಕಳೆದುಹೋಗಿದೆ ಎನ್ನುತ್ತಾನೆ ಮತ್ತು ಓ ಅಲ್ಲಿದೆ ಎಂದು ಓಡಿ ಹೋಗಿ ಎತ್ತಿಕೊಳ್ಳುತ್ತಾನೆ. ಅಂದರೆ ಆತ ಅದೇ ಜಾಗದಿಂದ ಓಡಿ ಹೋಗಿರುವುದು ಸ್ಪಷ್ಟವಾಗುತ್ತದೆ. ಆನಂತರ ಆತ ವಾಹನವನ್ನು ಚಲಾಯಿಸಿ ಪೊಲೀಸ್ ಸ್ಟೇಷನ್ ಒಳಗೆ ತಂದು ನಿಲ್ಲಿಸುತ್ತಾನೆ. ಆ ಸಂದರ್ಭದಲ್ಲಿ ಸೈಯ್ಯದ್ ಸಿಕ್ಕಿದ, ಹೊಡೆದು ಕರೆತಂದಿದ್ದೇವೆ ಎಂದ ಅವನ ಸಹಚರರು ಹೇಳುವುದು ಕೇಳಿಸುತ್ತದೆ; ಆದರೆ ಸೈಯ್ಯದ್‌ನನ್ನು ಲೈವ್‌ನಲ್ಲಿ ತೋರಿಸುವುದಿಲ್ಲ. ಕೊನೆಗೆ ’ದುಷ್ಟರ ಗ್ಯಾಂಗ್’ನ ಉಳಿದ ಮೂವರು ಹುಡುಗರು ಬರುತ್ತಾರೆ. ಅವರನ್ನು ಪವನ್, ಗೋಪಿ ಎಂದು ಪರಿಚಯಿಸಲಾಗುತ್ತದೆ.

ಗೋಸಾಗಣೆದಾರರನ್ನು ಥಳಿಸಲು ಹಕ್ಕು ಕೊಟ್ಟವರ್ಯಾರು?

ಇಡೀ ಪ್ರಕರಣದಲ್ಲಿ ಮೊದಲು ಏಳುವ ಮುಖ್ಯ ಪ್ರಶ್ನೆ ಎಂದರೆ ಅಕ್ರಮ ಗೋಸಾಗಾಣಿಕ ನಡೆದರೆ ಅದನ್ನು ತಡೆಯಲು ಪೊಲೀಸರಿದ್ದಾರೆ, ಸರ್ಕಾರವಿದೆ; ಕಾನೂನು ಕಟ್ಟಲೆಗಳಿವೆ. ಆದರೆ ವಾಹನಗಳನ್ನು ಅಡ್ಡಗಟ್ಟಿ ಹೊಡೆದು, ಬೆದರಿಸಿ ಹಣ ವಸೂಲಿ ಮಾಡಲು ಪುನೀತ್ ಕೆರೆಹಳ್ಳಿ ತರಹದ ಪುಂಡರಿಗೆ ಅವಕಾಶ ಕೊಟ್ಟವರು ಯಾರು? ಆತನ ಫೇಸ್‌ಬುಕ್ ತುಂಬ ಇಂಥದ್ದೆ ನೂರಾರು ವಿಡಿಯೋಗಳು ಹರಿದಾಡುತ್ತಿವೆ. ಮಾರ್ಚ್ 20ರಂದು ಮಾಡಿರುವ ವಿಡಿಯೋದಲ್ಲಿ ಎಲೆಕ್ಟ್ರಿಕ್ ಗನ್‌ನಿಂದ ವ್ಯಕ್ತಿಯೊಬ್ಬನಿಗೆ ಕಿರುಕುಳ ಕೊಡುವುದು ದಾಖಲಾಗಿದೆ. (ಆ ಕುರಿತು ಏಪ್ರಿಲ್ 9 ರಂದು ಮತ್ತೊಂದು ಪ್ರಕರಣ ದಾಖಲಾಗಿದೆ) ಅದಕ್ಕೂ ಹಿಂದಿನ ವಿಡಿಯೋದಲ್ಲಿ ಮಚ್ಚಿನಿಂದ ವಾಹನ ಚಾಲಕನ ಕೈಗೆ ಹಲ್ಲೆ ಮಾಡಿರುವುದು ದಾಖಲಾಗಿದೆ. ಪುಡಿ ರೌಡಿಯೊಬ್ಬ ಹೀಗೆ ಅಟ್ಟಹಾಸಗೈಯ್ಯುತ್ತಿದ್ದರೂ ಸರ್ಕಾರ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ? ಅಥವಾ ಇಂಥದ್ದೆ ಕೆಲಸ ಮಾಡಿ, ಯಾರದಾದರೂ ತಲೆ ತೆಗೆಯಿರಿ, ಕೋಮು ಗಲಭೆ ಹಚ್ಚಿರಿ, ಇದರಿಂದ ಚುನಾವಣೆಯಲ್ಲಿ ನಮಗೆ ಲಾಭ ಎಂದು ಸಂಘ ಪರಿವಾರ ಮತ್ತು ಬೆಂಬಲಿತ ಪಕ್ಷವೇ ಇವರಿಗೆ ಸುಪಾರಿ ಕೊಟ್ಟಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ಘಟನೆ ನಡೆದ ನಂತರ ತಡವಾಗಿ ಆರೋಪಿಗಳ ಬಂಧನ!

ಇನ್ನು ಇದ್ರೀಶ್ ಪಾಶಾ ಪ್ರಕರಣದಲ್ಲಿ ಅವರು ತೆಂಡೇಕೆರೆ ಸಂತೆಯಲ್ಲಿ ರಾಸುಗಳನ್ನು ಖರೀದಿಸಿರುವುದಕ್ಕೆ ರಶೀದಿಗಳಿವೆ. ಹಾಗಾಗಿ ಪುನೀತ್ ಕೆರೆಹಳ್ಳಿಗೆ ಹಣ ನೀಡದಿರುವುದಕ್ಕೆ ಇದ್ರೀಶ್ ಪಾಶಾನ ಕೊಲೆಯಾಗಿದೆ ಎಂಬ ಆರೋಪಗಳು ಗಟ್ಟಿಯಾಗಿವೆ. ಶನಿವಾರವೇ ಪುನೀತ್ ಕೆರೆಹಳ್ಳಿ ವಿರುದ್ಧ ಕೊಲೆ ಪ್ರಕರಣದ ದೂರು ದಾಖಲಾಗಿದೆ. ಕೊಲೆ ನಡೆದು ನಾಲ್ಕು ದಿನವಾದರೂ ಯಾರೊಬ್ಬರನ್ನು ಪೊಲೀಸರು ಬಂಧಿಸಿರಲ್ಲ! ಕನಿಷ್ಟ ವಿಚಾರಣೆ ಸಹ ನಡೆಸಿಲ್ಲ. ಘಟನೆ ನಡೆಯುತ್ತಲೇ ಪುನೀತ್ ಕೆರೆಹಳ್ಳಿ ತನ್ನ ಫೇಸ್‌ಬುಕ್‌ನಲ್ಲಿದ್ದ ವಿಡಿಯೋಗಳನ್ನೆಲ್ಲ ಡಿಲೀಟ್ ಮಾಡಿ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಸೋಮವಾರ ರಾತ್ರಿ ಮತ್ತೆ ಫೇಸ್‌ಬುಕ್ ಲೈವ್ ಬಂದು ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಕೊಲೆ ಮಾಡಿಸಿರಬೇಕು ಎಂದು ಧಮಕಿ ಹಾಕುತ್ತಿದ್ದಾನೆ. ತಾನು ತಪ್ಪಿಸಿಕೊಳ್ಳಲು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾನೆ. ಅಲ್ಲದೆ ಇಲ್ಲಿಯವರೆಗೆ ಎಷ್ಟು ಸಾಕ್ಷಿ ನಾಶ ಮಾಡಿದ್ದಾನೆ ಎಂಬುದರ ಅಂದಾಜಿಲ್ಲ. ಈ ಪುಂಡನೊಬ್ಬನನ್ನು ನಿಗ್ರಹಿಸಿದ ಈ ಸರ್ಕಾರ ಇನ್ನು 7 ಕೋಟಿ ಜನರ ರಕ್ಷಣೆ ಮಾಡುತ್ತದೆ ಎಂದು ನಂಬಬೇಕೆ ಎಂದು ಜನ ಕೇಳುತ್ತಿದ್ದರು. ತದನಂತರ 5ನೇ ದಿನ ರಾಜಸ್ಥಾನದಲ್ಲಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮುಸ್ಲಿಮರ ಜೀವಕ್ಕೆ ಬೆಲೆ ಇಲ್ಲವೇ?

ಯಾವ ತಪ್ಪನ್ನೂ ಮಾಡದ ಇದ್ರಿಶ್ ಪಾಶಾ ಹತ್ಯೆಯಾಗಿದ್ದಾನೆ. ಆತನ ಕುಟುಂಬ ಅಪಾರ ನೋವಿನಲ್ಲಿ ಮುಳುಗಿದೆ. ಏಕೆಂದರೆ ಈ ರಾಜ್ಯದಲ್ಲಿ ಮುಸ್ಲಿಂ ವ್ಯಕ್ತಿಗಳ ಜೀವಕ್ಕೆ ಬೆಲೆ ಇಲ್ಲ ಎಂಬಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿದೆ. ಶಿವಮೊಗ್ಗದ ಹರ್ಷ, ಪ್ರವೀಣ್ ನೆಟ್ಟಾರು ಕೊಲೆಯಾದಾಗ ಅವರ ಮನೆಗೆ ಭೇಟಿ ನೀಡಿ 25 ಲಕ್ಷ ರೂಗಳ ಪರಿಹಾರ ನೀಡಿದ ಸಿಎಂ ಬೊಮ್ಮಾಯಿಯವರು ಅದೇ ಫಾಜಿಲ್ ಹತ್ಯೆಯಾದಾಗ ಅವರ ಮನೆಗೂ ಹೋಗಲಿಲ್ಲ, ಪರಿಹಾರ ದೂರದ ಮಾತಾಯಿತು. ಅದೇ ರೀತಿ ಇದ್ರಿಶ್ ಪಾಶಾ ಮನೆಗೂ ಸಹ ಯಾವುದೇ ಅಧಿಕಾರಿಗಳು ಅಥವಾ ಸರ್ಕಾರದ ಉಸ್ತುವಾರಿ ಪ್ರತಿನಿಧಿಗಳು ಭೇಟಿ ನೀಡಲಿಲ್ಲ. ಚುನಾವಣೆ ನೀತಿ ಸಂಹಿತೆ ಅವರಿಗೊಂದು ನೆಪ. ಆದರೆ ಆ ಸಾವಿಗೆ ನ್ಯಾಯವೂ ಸಹ ಸಿಗುವ ಸೂಚನೆಗಳು ಕಾಣುತ್ತಿಲ್ಲ. ಕೋಮು ಗಲಭೆಗಳನ್ನು ಪ್ರಚೋದಿಸುವ ಮೂಲಕ ಅಧಿಕಾರ ಹಿಡಿಯಲು ಹವಣಿಸುವ ಬಿಜೆಪಿ ಪಕ್ಷ ಎಂತಹ ಪ್ರಕರಣದಲ್ಲಿಯೂ ಮತ ಧ್ರುವೀಕರಣಕ್ಕೆ ಸಜ್ಜಾಗಿ ನಿಂತಿರುತ್ತದೆ. ನಾಲ್ಕು ವರ್ಷಗಳಲ್ಲಿ ಏನೂ ಅಭಿವೃದ್ದಿ ಮಾಡದೆ ಕೇವಲ ಭ್ರಷ್ಟಾಚಾರಗಳಲ್ಲಿಯೇ ಮುಳುಗಿರುವ ಈ ಸರ್ಕಾರ ಇಂತಹ ಪ್ರಕರಣಗಳನ್ನು ತನ್ನ ಮತಗಳಿಕೆಯ ಅವಕಾಶಕ್ಕೆ ಬಳಸಿಕೊಳ್ಳಲು ಹವಣಿಸುತ್ತಿರುತ್ತದೆ.

ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಮಾತ್ರ ಗಟ್ಟಿ ದನಿಯಲ್ಲಿ ಈ ಕೊಲೆಯನ್ನು ಖಂಡಿಸಿ ಮಾತನಾಡಿದ್ದಾರೆ. ಆರೋಪಿ ಬಂಧನಕ್ಕೆ ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ರವರು ಒಂದೊಂದು ಟ್ವೀಟ್ ಮಾಡಿ ಸುಮ್ಮನಾಗಿದ್ದಾರೆ. ಅವರಿಗೆ ಎಲ್ಲಿ ನಾವು ಮುಸ್ಲಿಂ ಪರ ಎಂದು ಹಿಂದೂಗಳು ಓಟು ಹಾಕುವುದಿಲ್ಲವೋ ಎಂಬ ಭಯ ಕಾಡುತ್ತಿರಬೇಕು! ಆದರೆ ನಾಡಿನ ಪ್ರಜ್ಞಾವಂತರು ಮಾತ್ರ ಈ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಹೆಡೆಮುರಿ ಕಟ್ಟಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಗೃಹಸಚಿವ ಅರಗ ಜ್ಞಾನೇಂದ್ರ ಅವರು ಜಾಣ ಕಿವುಡರಾಗಿದ್ದಾರೆ.

ಹಲಾಲ್-ಹಿಜಾಬ್‌ನಿಂದ ನಕಲಿ ಗೋರಕ್ಷಣೆವರೆಗೆ ಪುನೀತ್ ಕೆರೆಹಳ್ಳಿಯ ದಂಧೆ

ಇದ್ರಿಶ್ ಪಾಶಾ ಹತ್ಯೆ ಪ್ರಕರಣದಲ್ಲಿ ಎದ್ದು ಕಾಣುವ ಅಂಶವೆಂದರೆ ನಕಲಿ ಗೋರಕ್ಷಕರು ತಮ್ಮ ಹಣದಾಹಕ್ಕೆ ಕೊಲೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎನ್ನುವುದು. ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರ ಹಿಂದೂಗಳ ಮತ ಧ್ರುವೀಕರಣಕ್ಕಾಗಿ, ರೈತರ ವಿರೋಧದ ನಡುವೆಯೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ಗೋವಾ ರಾಜ್ಯಕ್ಕೆ ತಾನೇ ಮುಂದೆ ನಿಂತು ಗೋಮಾಂಸ ರಫ್ತು ಮಾಡುತ್ತಿದೆ. ಇಲ್ಲದಿದ್ದಲ್ಲಿ ಗೋವಾ ಸರ್ಕಾರ ಕರ್ನಾಟಕದೊಂದಿಗೆ ಜಗಳ ಮಾಡುತ್ತದೆ ಎಂಬ ಭಯ ಕರ್ನಾಟಕದ್ದು. ಇನ್ನು ’ಗೋಮಾಂಸ ತಿನ್ನುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ ಅರ್ನೆಸ್ಟ್ ಮಾವ್ರಿ ಘೋಷಿಸಿದ್ದಾರೆ. ಆದರೂ ಕರ್ನಾಟಕ ಸರ್ಕಾರ ಈ ಕರಾಳ ಕಾಯ್ದೆಯನ್ನು ಅಂಗೀಕರಿಸಿದೆ.

ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಿಲ್ಲ. ಆ ರಾಜ್ಯಗಳು ಕರ್ನಾಟಕದಿಂದ ಹೆಚ್ಚಿನ ಗೋವುಗಳನ್ನು ಆಮದು ಮಾಡಿಕೊಳ್ಳುತ್ತವೆ. ಮಂಡ್ಯ, ಮೈಸೂರು ಭಾಗದಿಂದ ಪ್ರತಿದಿನ ಹಲವಾರು ವಾಹನಗಳು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಗುತ್ತವೆ. ಈ ದಾರಿಯಲ್ಲೆಲ್ಲ ಪೊಲೀಸರು ಮತ್ತು ವಾಹನ ಚಾಲಕರಿಗೆ ಅಡ್ಜಸ್ಟ್‌ಮೆಂಟ್ ಇರುವುದು, ಅವರಿಗೆ ಮಾಮೂಲಿ ಕೊಡುವುದು ರಹಸ್ಯವೇನಲ್ಲ. ಆದರೆ ಅವರಿಗೆ ತೊಂದರೆಯಿರುವುದೇ ಪುನೀತ್ ಕೆರೆಹಳ್ಳಿ ತರಹದ ಬ್ರೋಕರ್‌ಗಳಿಂದ. ಈ ಹಿಂದೆ ಹಲಾಲ್ ವಿರೋಧಿಸಿ ಜಟ್ಕಾ ಕಟ್ ಪ್ರಚಾರ ಮಾಡಿದ ಈತ ತನ್ನ ಗೂಗಲ್ ಪೇ/ಫೋನ್ ಪೇ ನಂಬರ್ ಕೊಟ್ಟು ಹಣ ಕೇಳುತ್ತಿದ್ದ. ಆ ಹಣದಿಂದಲೇ ಕಾರು ಖರೀದಿಸಿದ್ದಾನೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ತದನಂತರ ಇಳಿದಿದ್ದು ಈ ರೀತಿಯ ಹಣ ಮಾಡುವ ದಂಧೆಗೆ. ದನಗಳನ್ನು ತುಂಬಿದ ವಾಹನಗಳನ್ನು ಅಡ್ಡಗಟ್ಟುವ ಇವರು ಒಂದಷ್ಟು ಹಣಕ್ಕೆ ಬೇಡಿಕೆ ಇಡುತ್ತಾರೆ. ಡ್ರೈವರ್‌ಗಳು ಅಥವಾ ಕೆಲವೊಮ್ಮೆ ದನಗಳ ಮಾಲೀಕರು ಬಂದು 10-20 ಸಾವಿರದಷ್ಟು ದುಡ್ಡು ಕೊಟ್ಟು ತಮ್ಮ ವಾಹನಗಳನ್ನು ಬಿಡಿಸಿಕೊಂಡು ಹೋಗುವುದು ಮಾಮೂಲಿಯಾಗಿದೆ.

ಇದ್ರಿಶ್ ಪಾಶಾ ಪ್ರಕರಣದಲ್ಲಿಯೂ ಇದೇ ಸಂಭವಿಸಿದೆ ಎಂದು ಅವರ ಸಹಚರರು ಆರೋಪಿಸಿದ್ದಾರೆ. ಆದರೆ ಇಲ್ಲಿ ಇದ್ರಿಶ್ ಪಾಶಾ ಬಳಿ ನ್ಯಾಯಯುತವಾಗಿ ದನಗಳನ್ನು ಕೊಂಡುಕೊಂಡಿರುವುದಕ್ಕೆ ರಸೀದಿಗಳಿವೆ. ಅಲ್ಲದೆ ಆರೋಪ ಮಾಡಿರುವಂತೆ, ಪುನೀತ್ ಕೆರೆಹಳ್ಳಿ 2 ಲಕ್ಷ ರೂಗಳಿಗೆ ಬೇಡಿಕೆಯಿಟ್ಟಿರುವುದು ಅವರನ್ನು ಕೆರಳಿಸಿದೆ. 10-20 ಸಾವಿರ ಆಗಿದ್ದರೆ ಬೇರೆ ಮಾತು. ಆದರೆ ಏಕಾಏಕಿ 2 ಲಕ್ಷ ಹಣ ಕೊಡಿ ಎಂದರೆ ಯಾರು ತಾನೇ ಕೊಡುತ್ತಾರೆ? ವಾಹನದಲ್ಲಿದ್ದ ಒಟ್ಟು ದನಗಳ ಬೆಲೆಯೆ ಅಷ್ಟಾಗುವುದಿಲ್ಲದಿರುವಾಗ ಅವರು ಹಣ ಕೊಡದೆ ವಾದ ಮಾಡಿದ್ದಾರೆ. ಆದರೆ ಈ ಪುಂಡರು ರೊಚ್ಚಿಗೆದ್ದು ಹಲ್ಲೆಗೆ ಮುಂದಾಗಿದ್ದಾರೆ. ಅದು ಕೊನೆಗೆ ಕೊಲೆಯಲ್ಲಿ ಕೊನೆಗೊಂಡಿದ್ದು ಆರೋಪಿಗಳಿಗೆ ಒಂದು ಕ್ಷಣ ವಿಚಲಿತರನ್ನಾಗಿಸಿದೆ. ಅವರಿಗಿರುವ ಧನದಾಹ ಮತ್ತು ತಮ್ಮದೇ ಸರ್ಕಾರವಿದ್ದು ತಮ್ಮನ್ನು ಬಚಾವು ಮಾಡಲಾಗುತ್ತದೆ ಎನ್ನುವ ಅಹಂಕಾರ ಅವರನ್ನು ಮುಂದುವರಿಯುವಂತೆ ಪ್ರಚೋದಿಸಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಪುನೀತ್ ಕೆರೆಹಳ್ಳಿಯಂತಹ ಪುಂಡರು ಇನ್ನಷ್ಟು ಇಂತಹ ಕೆಲಸಗಳಿಗೆ ಮುಂದಾಗುವ ಸಾಧ್ಯತೆಯಿದೆ. ಅಲ್ಲದೆ ದುಡಿಯದೆ, ಮೈ ನೋಯಿಸಿಕೊಳ್ಳದೆ ಹಣ ಮಾಡುವ ಈ ದಂಧೆಗೆ ಇನ್ನಷ್ಟು ಪುಂಡರು ಇಳಿಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಶಾಂತಿಯ ತೋಟವಾಗಬೇಕಿದ್ದ ಕರ್ನಾಟಕದಲ್ಲಿ ದಿನೇ ದಿನೇ ಅಪರಾಧ, ಅನೈತಿಕ, ಹಿಂಸಾಚಾರದ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಇದೊಂದು ಗೂಂಡಾ ರಾಜ್ಯವಾಗಿ ಬದಲಾಗುವ ಅಪಾಯ ಎದ್ದು ಕಾಣುತ್ತಿದೆ. ಇದಕ್ಕೆ ಸದ್ಯ ಆಳ್ವಿಕೆಯಲ್ಲಿರುವ ಬಿಜೆಪಿ ಸರ್ಕಾರವೇ ಬೆಂಬಲ ನೀಡುತ್ತಿರುವುದು ದುರಂತ.

ಇದನ್ನೂ ಓದಿ ; ಪುನೀತ್ ಕೆರೆಹಳ್ಳಿ ಮಾಡಿದ ಅವಾಂತರಗಳಿವು; ಕಡಿವಾಣ ಹಾಕದೆ ಸುಮ್ಮನೆ ಬಿಟ್ಟಿದ್ದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...