ರಾಜ್ಯದಲ್ಲಿ ಅಮುಲ್ ಹಾಲು ಮತ್ತು ಮೊಸರು ಮಾರಾಟವನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ. ಬೆಂಗಳೂರು, ಚಾಮರಾಜನಗರ ಮತ್ತು ಸಿಂಧನೂರಿನಲ್ಲಿ ಪ್ರತಿಭಟನೆ ದಾಖಲಾಗಿದೆ.
ಕರ್ನಾಟಕದಲ್ಲಿ ಅಮೂಲ್ ಹಾಲು-ಮೊಸರು ಮಾರಾಟ ಹಾಗು ನಂದಿನಿಯನ್ನು ಅಮೂಲ್ ಜೊತೆಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಹಾಲು, ಮೊಸರು, ತುಪ್ಪ, ಬೆಣ್ಣೆ, ಚೀಜ್ ಇತ್ಯಾದಿ ಅಮೂಲ್ ಉತ್ಪನ್ನಗಳಾದ ಬೀದಿಗೆಸೆದು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಅಮೂಲ್ ಹಾಲು-ಮೊಸರು ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಅಮೂಲ್ ಭೂತದಹನ ಮಾಡಲು ಕಾರ್ಯಕರ್ತರು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ವಿರೋಧದ ನಡುವೆಯೂ ಭೂತದಹನಕ್ಕೆ ಮುಂದಾದ ಕರವೇ ಕಾರ್ಯಕರ್ತರನ್ನು ಬಂಧಿಸಲಾಯಿತು.
ಕೆಎಂಎಫ್‌ನ ನಂದಿನಿಯೊಂದಿಗೆ ಅಮುಲ್ ವಿಲೀನಗೊಳಿಸಬಾರದು ಎಂದು ಒತ್ತಾಯಿಸಿ ಚಾಮರಾಜನಗರದಲ್ಲಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
“ನಂದಿನಿಯನ್ನು ಗುಜರಾತಿನ ಅಮುಲ್‌ನೊಂದಿಗೆ ವಿಲೀನ ಮಾಡಿದರೆ ಲಕ್ಷಾಂತರ ಜನರು ಬೀದಿಪಾಲಾಗುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ವಿಲೀನ ಮಾಡಬಾರದು. ಒಂದು ವೇಳೆ ಮಾಡಿದರೆ ರಾಜ್ಯದಾದ್ಯಂತ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಂಧನೂರಿನಲ್ಲಿ ಸಿಪಿಐ (ಎಂಎಲ್) ಲಿಬರೇಶನ್ ತಾಲೂಕು ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿ, “ಕೆಎಂಎಫ್ ಅನ್ನು ಅಮೂಲ್‌ನಲ್ಲಿ ವಿಲೀನಗೊಳಿಸಿ ತದನಂತರ ಕಾರ್ಪೊರೇಟ್ ಉದ್ಯಮಪತಿಗಳ ಕೈಗಿಡುವ ಇಂಗಿತವನ್ನು ಈಗಾಗಲೇ ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಅಮಿತ್ ಶಾ ಮುನ್ಸೂಚನೆ ನೀಡಿದ್ದು, ಇದನ್ನು ಸಾರಾಸಗಟಾಗಿ ಪ್ರತಿರೋಧಿಸುತ್ತೇವೆ. ಕೂಡಲೇ ಸರ್ಕಾರ ಕೆಎಂಎಫ್‌ನೊಂದಿಗೆ ಅಮೂಲ್ ವಿಲೀನದ ಪ್ರಸ್ತಾಪವನ್ನು ಕೈಬಿಡಬೇಕು” ಎಂದು ಒತ್ತಾಯಿಸಲಾಯಿತು.

ಕೆಎಂಎಫ್‌ನ್ನು ಗುಜರಾತಿನ ಅಮುಲ್‌ನೊಂದಿಗೆ ವಿಲೀನ ಮಾಡುವುದನ್ನು ವಿರೋಧಿಸಿ, ನಂದಿನಿ ಉತ್ಪನ್ನಗಳನ್ನು ಉಚಿತವಾಗಿ ಹಂಚುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
Karnataka | State Congress President DK Shivakumar visits Nandini Milk parlour in Hassan today, amid controversy over Amul's entry into the state pic.twitter.com/ySoykoBFSV
— ANI (@ANI) April 10, 2023
ಕಾರ್ಯಕ್ರಮ ನಿಮಿತ್ತ ಹಾಸನಕ್ಕೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಹಾಸನದ ಹೇಮಾವತಿ ಪ್ರತಿಮೆ ಬಳಿ ಇದ್ದ ನಂದಿನಿ ಹಾಲಿನ ಕೇಂದ್ರದ ಬಳಿ ‘ಫ್ಲೇವರ್ಡ್ ಮಿಲ್ಕ್’ ಕುಡಿಯುತ್ತಾ ಸಾರ್ವಜನಿಕರೊಂದಿಗೆ ಚರ್ಚಿಸಿದರು. ನಂತರ, ನಂದಿನಿ ಕೇಂದ್ರದಲ್ಲಿದ್ದ ಹಾಲು, ತುಪ್ಪ, ಮಜ್ಜಿಗೆ, ಮೈಸೂರ್ ಪಾಕ್ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಖರೀದಿಸಿ, ಸ್ಥಳದಲ್ಲಿದ್ದ ಸಾರ್ವಜನಿಕರಿಗೆ, ಬೆಂಬಲಿಗರಿಗೆ ಹಾಗೂ ಕಾರ್ಯಕರ್ತರಿಗೆ ಹಂಚಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಅಮುಲ್ v/s ನಂದಿನಿಯಲ್ಲ, ಎರಡೂ ಒಂದಾಗಿ ನಡೆಯುತ್ತವೆ: ಅಮುಲ್ ಎಂಡಿ ಪ್ರತಿಕ್ರಿಯೆ