Homeಕರ್ನಾಟಕಅಮುಲ್‌ v/s ನಂದಿನಿಯಲ್ಲ, ಎರಡೂ ಒಂದಾಗಿ ನಡೆಯುತ್ತವೆ: ಅಮುಲ್ ಎಂಡಿ ಪ್ರತಿಕ್ರಿಯೆ

ಅಮುಲ್‌ v/s ನಂದಿನಿಯಲ್ಲ, ಎರಡೂ ಒಂದಾಗಿ ನಡೆಯುತ್ತವೆ: ಅಮುಲ್ ಎಂಡಿ ಪ್ರತಿಕ್ರಿಯೆ

- Advertisement -
- Advertisement -

ಕರ್ನಾಟಕದಲ್ಲಿ ಅಮುಲ್‌ ಉತ್ಪನ್ನಗಳನ್ನು ಬಹಿಷ್ಕರಿಸುವ ಕರೆಗಳ ನಡುವೆ, ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜಯನ್ ಮೆಹ್ತಾ ಅವರು ಪ್ರತಿಕ್ರಿಯಿಸಿದ್ದಾರೆ.

“ಕರ್ನಾಟಕ ರಾಜ್ಯದ ಡೇರಿ ಮಾರುಕಟ್ಟೆಗೆ ಅಮುಲ್‌ ಪ್ರವೇಶಿಸಿರುವುದು ನಂದಿನಿಯೊಂದಿಗೆ ಸ್ಪರ್ಧಿಸಲು ಅಲ್ಲ, ನಂದಿನಿ ಜೊತೆಜೊತೆಯಲ್ಲಿ ನಡೆಯಲು ಅಮುಲ್ ಪ್ರವೇಶಿಸಿದೆ” ಎಂದಿದ್ದಾರೆ.

ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ಕರ್ನಾಟಕದ ಹೈನುಗಾರರನ್ನು ಪ್ರೋತ್ಸಾಹಿಸಲು ‘ರಾಜ್ಯದ ಹೆಮ್ಮೆ’ಯ ನಂದಿನಿ ಬ್ರಾಂಡ್ ಬಳಸುವಂತೆ ಆಗ್ರಹಗಳು ಹೆಚ್ಚಾಗಿವೆ.

ಬಹಿಷ್ಕಾರ ಹೆಚ್ಚಾದಂತೆ ರಾಜಕೀಯ ಗದ್ದಲವೂ ತೀವ್ರಗೊಂಡಿದೆ. ಪ್ರತಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, “ರಾಜ್ಯ ಸರ್ಕಾರವು ನಮ್ಮ ಹೆಮ್ಮೆಯ ನಂದಿನಿ ಬ್ರಾಂಡ್ ಅನ್ನು ನಾಶಪಡಿಸುತ್ತಿದೆ” ಎಂದು ಆರೋಪಿಸಿದ್ದಾರೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ನಡೆಸಿರುವ ವಿಶೇಷ ಸಂವಾದದ ವೇಳೆ ಪ್ರತಿಕ್ರಿಯೆ ನೀಡಿರುವ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ, “ಇದು ಅಮುಲ್ ವರ್ಸಸ್ ನಂದಿನಿ ಎಂಬ ವಿಚಾರ ಅಲ್ಲ. ಅಮುಲ್ ಮತ್ತು ನಂದಿನಿ ಒಟ್ಟಿಗೆ ಇರುವ ವಿಷಯವಾಗಿದೆ. ಇವೆರಡೂ ಒಂದೇ ರೀತಿಯ ಹಿತಾಸಕ್ತಿಗಳ ಮೇಲೆ ಕೆಲಸ ಮಾಡುವ ರೈತ ಒಡೆತನದ ಸಹಕಾರಿ ಸಂಸ್ಥೆಗಳಾಗಿವೆ. ನಾವಿಲ್ಲಿ ನಂದಿನಿಯೊಂದಿಗೆ ಸ್ಪರ್ಧಿಸಲು ಬಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

‘ಅಮುಲ್ ಬಹಿಷ್ಕರಿಸಿ’, ‘ಗೋಬ್ಯಾಕ್ ಅಮುಲ್’ನಂತಹ ಘೋಷಣೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮೆಹ್ತಾ, “ನಮ್ಮ ದಾರಿಯಲ್ಲಿ ಬರುವ ಪ್ರತಿಕ್ರಿಯೆಗಳನ್ನು ನಾವು ಟೀಕಿಸಲು ಸಾಧ್ಯವಿಲ್ಲ. ನಮ್ಮನ್ನು ವಿರೋಧಿಸುವವರು ಕೂಡ ನಮ್ಮ ಗ್ರಾಹಕರು. ಅವರು ತಮ್ಮ ಮನಸ್ಸಿನಲ್ಲಿ ಇದ್ದದ್ದನ್ನು ಹೇಳಲು ಸ್ವತಂತ್ರರು. ಆದರೆ ನಂದಿನಿ ಮತ್ತು ಅಮುಲ್ ನಡುವಿನ ಉತ್ತಮ ಸಂಬಂಧ ಬದಲಾಗುವುದಿಲ್ಲ” ಎಂದಿದ್ದಾರೆ.

“ನಾವು ನಂದಿನಿಯೊಂದಿಗೆ ಹಲವಾರು ರೀತಿಯಲ್ಲಿ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಕಳೆದ ಒಂದು ದಶಕದಿಂದ ಬೆಂಗಳೂರಿನ ಮದರ್ ಡೈರಿ ಪ್ಲಾಂಟ್‌ನಲ್ಲಿ ನಂದಿನಿ ಹಾಲನ್ನು ಬಳಸಿ ಅಮುಲ್ ಐಸ್ ಕ್ರೀಂ ಪ್ಯಾಕ್ ತಯಾರಿಸುತ್ತಿದ್ದೇವೆ. ನಮಗೆ ಚೀಸ್‌ನ ಕೊರತೆ ಇದ್ದಾಗಲೂ, ಅವರಲ್ಲಿ ಹೆಚ್ಚುವರಿಯಾಗಿದ್ದಾಗ ನಾವು ನಂದಿನಿಯಿಂದ ಚೆಡ್ಡಾರ್ ಚೀಸ್ ಖರೀದಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿಯೂ ಅಮುಲ್‌ನ ಹಾಲು ಮತ್ತು ಮೊಸರು ಪೂರೈಕೆ ಮಾಡಲಾಗುತ್ತಿದೆ ಎಂಬ ಆತಂಕಗಳನ್ನು ಮೆಹ್ತಾ ತಳ್ಳಿ ಹಾಕಿದ್ದಾರೆ. “ಅಮುಲ್ ಕಂಪನಿಯು ಬೆಂಗಳೂರಿನಲ್ಲಿ ಇ-ಕಾಮರ್ಸ್ ಮತ್ತು ತ್ವರಿತ ವಾಣಿಜ್ಯ ವೇದಿಕೆಗಳ ಮೂಲಕ ಮಾರಾಟ ಮಾಡಲು ಯೋಜಿಸುತ್ತಿದೆ” ಎಂದು ಹೇಳಿದ್ದಾರೆ.

ಅಮುಲ್‌ನ ಪೌಚ್ಡ್ ಹಾಲು ಮತ್ತು ಮೊಸರು ಈ ವಾರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಬರಲಿವೆ ಎಂದು ಮೆಹ್ತಾ ತಿಳಿಸಿದ್ದಾರೆ. “ಅಮುಲ್ ಕಂಪನಿಯು ಈಗಾಗಲೇ ಕರ್ನಾಟಕದ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳನ್ನು ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದೆ. ನಾವು ಈಗಾಗಲೇ ನಮ್ಮ ಪೌಚ್ಡ್ ಹಾಲು ಮತ್ತು ಮೊಸರನ್ನು ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಏಳು-ಎಂಟು ವರ್ಷಗಳಿಂದ ಮಾರುತ್ತಿದ್ದೇವೆ. ಹೊಸದಾಗಿ ಅಮುಲ್‌ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ” ಎಂದು ವಿವರಿಸಿದ್ದಾರೆ.

ಇದನ್ನೂ ಓದಿರಿ: ಅಮುಲ್ ಉತ್ಪನ್ನಗಳ ನಿಷೇಧಕ್ಕೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕರೆ: ನಂದಿನಿ ಬ್ರಾಂಡ್ ಬಳಸಲು ನಿರ್ಧಾರ

“ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್‌ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮೊದಲ ಸ್ಥಾನದಲ್ಲಿಯೇ ಉಳಿದಿದೆ. ಅಮುಲ್ ಸ್ಥಳೀಯ ಬ್ರ್ಯಾಂಡ್‌ಗೆ ಹೋಲಿಸಿದರೆ ಮೂರನೇ ಮತ್ತು ಕೆಲವೊಮ್ಮೆ ನಾಲ್ಕನೇ ಸ್ಥಾನದಲ್ಲಿದೆ. ಅಮುಲ್ ಈ ಎರಡು ನಗರಗಳಲ್ಲಿ ದಿನಕ್ಕೆ 6000-8000 ಲೀಟರ್ ಹಾಲು ಮಾರಾಟ ಮಾಡುತ್ತಿದೆ, ನಂದಿನಿ ದಿನಕ್ಕೆ 1.25-1.3 ಲಕ್ಷ ಲೀಟರ್ ಮಾರಾಟ ಮಾಡುತ್ತಿದೆ. ಪ್ರತಿ ಲೀಟರ್‌ ನಂದಿನಿ ಹಾಲಿಗೆ 40 ರೂ., ಅಮುಲ್ ಹಾಲಿನ ದರ ಲೀಟರ್‌ಗೆ 54 ರೂ. ಆಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಅಮುಲ್ ಪೌಚ್ ಮೊಸರು ಕೆಜಿಗೆ 66 ರೂ., ನಂದಿನಿ 1 ಕೆಜಿಗೆ 40 ರೂ. ಇದಲ್ಲದೆ, 500 ಎಂಎಲ್‌ಗೆ 32 ರೂ ಬೆಲೆಯಲ್ಲಿ ‘ಅಮುಲ್ ಗೋಲ್ಡ್ ಸ್ಪೆಷಲ್ ಮಿಲ್ಕಿ ಮಿಲ್ಕ್’ ಅನ್ನು ಮಾರಾಟ ಮಾಡಲು ಅಮುಲ್ ಯೋಜಿಸುತ್ತಿದೆ.

“ಇ-ಕಾಮರ್ಸ್‌ನಲ್ಲಿ ಅಮುಲ್ ಹಾಲು ಮತ್ತು ಮೊಸರಿಗೆ ಸಾಕಷ್ಟು ಹುಡುಕಾಟ ನಡೆಯುವುದನ್ನು ಬೆಂಗಳೂರು ಮತ್ತು ದಕ್ಷಿಣ ಭಾರತದ ಇತರ ನಗರಗಳಲ್ಲಿ ನಾವು ನೋಡಿದ್ದೇವೆ. ಬೆಂಗಳೂರಿನಲ್ಲಿ ನಮಗೆ ಪ್ಲಾಂಟ್ ಇಲ್ಲ, ಹಾಗಾಗಿ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿರುವ ನಮ್ಮ ಹತ್ತಿರದ ಪ್ಲಾಂಟ್‌ನಿಂದ ಹಾಲನ್ನು ಕಳುಹಿಸುತ್ತಿದ್ದೇವೆ” ಎಂದು ಮೆಹ್ತಾ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌: ಎಸ್ಒಪಿ ಮಾಹಿತಿ ನೀಡಲು ಮತ್ತೆ ನಿರಾಕರಿಸಿದ ಎಸ್‌ಬಿಐ

0
ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಒಪಿ ಮಾಹಿತಿಯನ್ನು ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತೆ ನಿರಾಕರಿಸಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರ್‌ಟಿಐ...