ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಬಿಜೆಪಿ ನಾಯಕರು ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಬಿಜೆಪಿ ನಾಯಕರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.
“ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಕುಹಕವಾಡುವ ಬಿಜೆಪಿ ನಾಯಕರಿಗೆ ನನ್ನದೊಂದು ನೇರ ಸವಾಲು. 2013ರ ಕಾಂಗ್ರೆಸ್ ಪ್ರಣಾಳಿಕೆ ಮತ್ತು 2018ರ ಬಿಜೆಪಿ ಪ್ರಣಾಳಿಕೆಗಳಲ್ಲಿ ನೀಡಲಾದ ಭರವಸೆಗಳು ಹಾಗೂ ಈಡೇರಿಸಲಾಗಿರುವ ಭರವಸೆಗಳ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸೋಣ. ದಮ್ –ತಾಕತ್ ಇದ್ದ ಮುಖ್ಯಮಂತ್ರಿಗಳು ಇಲ್ಲವೇ ಐವತ್ತಾರು ಇಂಚಿನ ಎದೆಯ ಪ್ರಧಾನಿಗಳು ಯಾರಾದರೂ ಬರಲಿ, ನಾನು ಚರ್ಚೆಗೆ ಸಿದ್ಧನಿದ್ದೇನೆ” ಎಂದು ತಿಳಿಸಿದ್ದಾರೆ.
“ನುಡಿದಂತೆ ನಡೆದಿರುವ ವಿಶ್ವಾಸ ನನ್ನದು, ಜನತಾ ಜನಾರ್ಧನರೇ ಇದಕ್ಕೆ ಸಾಕ್ಷಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000 ರೂಪಾಯಿ ನಿರುದ್ಯೋಗ ಭತ್ಯೆ (ಯುವನಿಧಿ), ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಓರ್ವ ಮಹಿಳೆಗೆ ಮಾಸಿಕ 2000 ರೂ. (ಗೃಹಲಕ್ಷ್ಮಿ), ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ (ಅನ್ನಭಾಗ್ಯ ಮುಂದುವರಿಕೆ) ಮತ್ತು ಸರ್ಕಾರಿ ಬಸ್‌ಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂಬ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ.
“ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಪೂರೈಸಲು ಸಾಧ್ಯವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಅವರು, “ಬೇರೆ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಭರವಸೆ ನೀಡಿತ್ತು. ಅಲ್ಲಿನ ಚುನಾವಣಾ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ” ಎಂದು ಮೋದಿ ಆರೋಪಿಸಿದ್ದರು.
ಇದನ್ನೂ ಓದಿರಿ: ಮೋದಿ- ದೇವೇಗೌಡ್ರು ಮಾತಾಡಿದ್ದಾರೆ, ಜೆಡಿಎಸ್‌ಗೆ ಹಾಕಿದ್ರೂ ಬಿಜೆಪಿಗೆ ವೋಟ್ ಹಾಕಿದಂತೆ: ಬಿಜೆಪಿ ಶಾಸಕ ಪ್ರೀತಂಗೌಡ
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಹಳೆಯ ಪಿಂಚಣಿ ಯೋಜನೆ, ಇಂದಿರಾಗಾಂಧಿ ನಗರ ಉದ್ಯೋಗ ಯೋಜನೆಯಡಿ 125 ದಿನಗಳ ಕೆಲಸ, ಆರೋಗ್ಯದ ಹಕ್ಕಿನ ಅಡಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತುರ್ತು ಚಿಕಿತ್ಸೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೂ 25 ಲಕ್ಷ ವಿಮೆ ಮತ್ತು ರೂ 10 ಲಕ್ಷ ವಿಮೆಯನ್ನು ಜಾರಿಗೆ ತಂದಿದೆ” ಎಂದು ತಿಳಿಸಿದ್ದಾರೆ.
ಛತ್ತೀಸ್‌ಗಢವನ್ನು ಉಲ್ಲೇಖಿಸಿರುವ ಅವರು, “ಭೂಪೇಶ್ ಬಘೇಲ್ ಸರ್ಕಾರವು 17.87 ಲಕ್ಷ ರೈತರ 9,270 ಕೋಟಿ ಸಾಲ ಮನ್ನಾ ಮಾಡಿದೆ. ಭತ್ತದ ರೈತರಿಗೆ ರೂ 2,500/ಕ್ವಿಂಟಲ್ ಬೆಂಬಲ ಬೆಲೆಯನ್ನು ನೀಡಿದೆ. ರಾಜೀವ್ ಗಾಂಧಿ ಕಿಸಾನ್ ನ್ಯಾಯ ಯೋಜನೆ, ರೈತರಿಗೆ ರೂ. 9,000 ಮತ್ತು ರೈತರಿಗೆ ಇನ್‌ಪುಟ್ ಸಬ್ಸಿಡಿ ಭರವಸೆಗಳನ್ನು ಈಡೇರಿಸಿದೆ. ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.


