Homeಕರ್ನಾಟಕಕರ್ನಾಟಕದಲ್ಲಿ ಬಿಜೆಪಿಗೆ ಲಿಂಗಾಯತರ ಬೆಂಬಲದ ಪ್ರಶ್ನೆ

ಕರ್ನಾಟಕದಲ್ಲಿ ಬಿಜೆಪಿಗೆ ಲಿಂಗಾಯತರ ಬೆಂಬಲದ ಪ್ರಶ್ನೆ

- Advertisement -
- Advertisement -

ಕರ್ನಾಟಕದಲ್ಲಿ ಬಿಜೆಪಿಗೆ ಲಿಂಗಾಯತ ಸಮುದಾಯದ ಬೆಂಬಲವು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವಂತೆ ಸರಳವಾದ ಕತೆಯೇನಲ್ಲ. ಮೇಲುನೋಟಕ್ಕೆ ಬಿಜೆಪಿಯು ಲಿಂಗಾಯತರ ಬೆಂಬಲ ಹೊಂದಿರುವಂತೆ ಕಾಣುತ್ತದೆ. ಆದರೆ, ಈ ಸಂಬಂಧವು ಸಂಕೀರ್ಣವಾಗಿದ್ದು ಮತ್ತು ಬಿಜೆಪಿಗೆ ಕೆಲವೊಮ್ಮೆ ಅಹಿತಕರವೂ ಆಗಿದ್ದು, ಅದು ಹೆಚ್ಚಾಗಿ ಕಣ್ಣಿಗೆ ಬೀಳುವುದಿಲ್ಲ.

ಬಿಜೆಪಿಗೆ ಬೆಂಬಲ ನೀಡುವಲ್ಲಿ ಲಿಂಗಾಯತರು ದ್ವಂದ್ವದಲ್ಲಿ ಸಿಲುಕಿರುವಂತೆ ಕಾಣುತ್ತದೆ: ತಮ್ಮ ರಾಜಕೀಯ ಹಿತಾಸಕ್ತಿಯನ್ನು ಬೆಳೆಸಿ ಮುಂದುವರಿಸುವುದು ಮತ್ತು ತಮ್ಮ ನಂಬಿಕೆಗೆ ನಿಷ್ಠೆಯನ್ನು ಹೊಂದಿರುವುದರ ನಡುವೆ. ಲಿಂಗಾಯತರು ಬಿಜೆಪಿಯ ರಾಜಕೀಯವು ಪ್ರತಿಪಾದಿಸುವ ಬ್ರಾಹ್ಮಣಶಾಹಿ ಹಿಂದೂಯಿಸಂ ಅಡಿಪಾಯಕ್ಕೇ ಸವಾಲು ಹಾಕಿದ 12ನೇ ಶತಮಾನದ ಸಂತ, ಸಮಾಜ ಸುಧಾರಕ ಬಸವೇಶ್ವರರ ಮೇಲೆ ನಿಷ್ಠೆ ಹೊಂದಿದ್ದಾರೆ.

ಮಾಧ್ಯಮಗಳಲ್ಲಿ ಹೆಚ್ಚಾಗಿ ಕಂಡುಬರುವ ಲಿಂಗಾಯತರ ಬೆಂಬಲ ಬಿಜೆಪಿಗೆ ಎಂಬ ಕಥಾನಕವು ಹೇಳುವಂತೆ- 1990ರಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿಯವರು, ವೀರೇಂದ್ರ ಪಾಟೀಲ್ ಅವರನ್ನು ಅಸಡ್ಡಳವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ, ಲಿಂಗಾಯತರು ಕೇಸರಿ ಪಕ್ಷಕ್ಕೆ ಬೆಂಬಲ ನೀಡಲು ಆರಂಭಿಸಿದರು. ಈ ಕಥಾನಕದ ಪ್ರಕಾರ, ಮುಂದಕ್ಕೆ 1990ರ ದಶಕದಲ್ಲಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಯಲ್ಲಿ ಪ್ರಬಲವಾಗಿ ಬೆಳೆದಾಗ, ಪಕ್ಷಕ್ಕೆ ಲಿಂಗಾಯತರ ಬೆಂಬಲವು ಇನ್ನಷ್ಟು ಬಲಗೊಂಡಿತು. ಇನ್ನಷ್ಟು ಹತ್ತಿರದಿಂದ ರಾಜ್ಯದ ಚುನಾವಣಾ ಇತಿಹಾಸವನ್ನು ನೋಡಿದರೆ, ಬೇರೆಯೇ ಕತೆ ಕಾಣಿಸಿಕೊಳ್ಳುತ್ತದೆ. ವೀರೇಂದ್ರ ಪಾಟೀಲ್ ಅವರ ಪದಚ್ಯುತಿಯ ನಂತರ ಲಿಂಗಾಯತ ಸಮುದಾಯವು ಕ್ರಮೇಣವಾಗಿ ಕಾಂಗ್ರೆಸ್ಸಿನಿಂದ ದೂರಸರಿಯಿತು ಮತ್ತು ಬಿಜೆಪಿಗೆ ಅದರ ಅಚಲ ಬೆಂಬಲ ಇದೆ ಎಂದು ಹೇಳುವುದಾದರೆ, ಅದು ಕರ್ನಾಟಕದ ಸಂಕೀರ್ಣ ರಾಜಕೀಯ ಸಮಾಜಶಾಸ್ತ್ರದ ಕುರಿತು ಆತುರದ ತೀರ್ಮಾನ ತೆಗದುಕೊಂಡಂತೆ.

ವೀರೇಂದ್ರ ಪಾಟೀಲರ ತಥಾಕಥಿತ ಅವಮಾನ ಕಥಾನಕಕ್ಕೆ ಬಹಳ ಮುಂಚೆಯೇ ಸಮುದಾಯದ ಬೆಂಬಲವು ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೆತರ ಪಕ್ಷಗಳ ನಡುವೆ ಓಲಾಡುತ್ತಾಬಂದಿದೆ. 1983-88ರ ನಡುವೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಸರಕಾರದ ರಚನೆಯಲ್ಲಿ ಲಿಂಗಾಯತರು ಮಹತ್ವದ ಪಾತ್ರ ವಹಿಸಿದ್ದರು. ಯಡಿಯೂರಪ್ಪ ಮುನ್ನಲೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಹಳ ಮುಂಚೆ ಲಿಂಗಾಯತರು ಒಬ್ಬ ಬ್ರಾಹ್ಮಣನಾದ ಹೆಗಡೆಯವರ ಸುತ್ತ ನೆರೆದಿದ್ದರು. ಕಾಂಗ್ರೆಸ್ ಮುಖ್ಯಮಂತ್ರಿ ದೇವರಾಜ ಆರಸ್ (1972-1980) ಅವರು ಲಿಂಗಾಯತರ ಸಮುದಾಯದ ಅತ್ಯಂತ ದೊಡ್ಡ ನಾಯಕ ಎಸ್. ನಿಜಲಿಂಗಪ್ಪ ಅವರು ಕರ್ನಾಟಕ ರಾಜಕೀಯದಲ್ಲಿ ತೆರೆಗೆ ಸರಿಯುವಂತೆ ಮಾಡಿದಾಗಿನಿಂದ- ಆ ಸಮಯದಲ್ಲಿ ಲಿಂಗಾಯತರು ಒಬ್ಬ ರಾಜಕೀಯ ನಾಯಕನ ಹುಡುಕಾಟದಲ್ಲಿ ಇದ್ದರು.

ವೀರೇಂದ್ರ ಪಾಟೀಲ್ ಅವರಿಗೆ ಮಾಡಿದ ಅವಮಾನವು 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುವುದಕ್ಕೆ ಕಾರಣಗಳಲ್ಲಿ ಒಂದಾಗಿರಬಹುದು. ಆದರೆ ಲಿಂಗಾಯತರು ಒಮ್ಮೆಗೇ ಬಿಜೆಪಿಯೆಡೆಗೆ ತಮ್ಮ ನಿಷ್ಠೆಯನ್ನು ಬದಲಿಸಲಿಲ್ಲ. ಸ್ವತಃ ವೀರೇಂದ್ರ ಪಾಟೀಲ್ ಅವರೇ ತಮ್ಮ ಕೊನೆಯುಸಿರ ತನಕ ಕಾಂಗ್ರೆಸಿನಲ್ಲೇ ಉಳಿದರು. ವೀರೇಂದ್ರ ಪಾಟೀಲ್ ಅವರ ನಿರ್ಗಮನದ ಒಂದು ದಶಕದ ನಂತರವೂ ಲಿಂಗಾಯತರು ಜನತಾದಳ ಮತ್ತು ಕಾಂಗ್ರೆಸನ್ನು ಒಂದರ ನಂತರ ಇನ್ನೊಂದರಂತೆ ಬೆಂಬಲಿಸಿದರು. ಆಗ ಬಿಜೆಪಿ ಅವರ ಆಯ್ಕೆ ಆಗಿರಲಿಲ್ಲ. ಆ ಸಮಯದಲ್ಲಿ ಬಿಜೆಪಿ ಗಳಿಸಿದ್ದ ಶಾಸಕರ ಗರಿಷ್ಟ ಸಂಖ್ಯೆ ಎಂದರೆ, 1994ರಲ್ಲಿ 40 ಮತ್ತು 1999ರಲ್ಲಿ 44. ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳು ರಾಜ್ಯದ ಲಿಂಗಾಯತರ ಪ್ರಾಬಲ್ಯ ಇಲ್ಲದ ಪ್ರದೇಶದಿಂದ ಬಂದಿದ್ದವು.

2008ರಲ್ಲಿ ಬಿಜೆಪಿಯ ಜಯವು ಹೆಚ್ಚಾಗಿ ಲಿಂಗಾಯತರ ಬೆಂಬಲದ ಕಾರಣದಿಂದ ಬಂತು ಎಂಬುದು ನಿಜ. ಆದರೆ, ಈ ಬೆಂಬಲವು ಸ್ಪಷ್ಟವಾದ ರಾಜಕೀಯ ಆಂದೋಲನದ ಪರಿಣಾಮವಾಗಿರಲಿಲ್ಲ ಮತ್ತದು ಸ್ಥಿರವೂ ಆಗಿರಲಿಲ್ಲ. ಲಿಂಗಾಯತರ ಬೆಂಬಲದ ಮೊದಲ ಪಲ್ಲಟವು 2004ರಲ್ಲಿ ಜನತಾದಳವು ನುಚ್ಚನೂರಾದ ಸಂದರ್ಭದಲ್ಲಿ ಅದರ ಹಲವಾರು ಪ್ರಮುಖ ಲಿಂಗಾಯತ ನಾಯಕರು ಬಿಜೆಪಿ ಸೇರಿದಾಗ ಉಂಟಾಯಿತು.

ಇದನ್ನೂ ಓದಿ: ಬಿಜೆಪಿಯಲ್ಲಿಯೇ ಗುಲಾಮರಾಗಿ ಇರಬೇಕಿತ್ತಾ?: ಶೆಟ್ಟರ್‌ ವಾಗ್ದಾಳಿ

ಮುಂದಿನ ಸುತ್ತು, 2007ರಲ್ಲಿ ಜಾತ್ಯತೀತ ಜನತಾದಳದ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಅನ್ಯಾಯವಾಗಿ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ನಿರಾಕರಿಸಲಾದಾಗ ಹುಟ್ಟಿದ ಅನುಕಂಪದ ಪರಿಣಾಮವಾಗಿತ್ತು. ಎರಡೂ ಸಂದರ್ಭಗಳಲ್ಲಿ ಬಿಜೆಪಿ ಪರವಾಗಿ ಲಿಂಗಾಯತ ಮತಗಳ ಕ್ರೋಢೀಕರಣವು ಯಾವುದೇ ವಾಸ್ತವಿಕ ರಾಜಕೀಯ ಆಂದೋಲನದ ಪರಿಣಾಮವಾಗಿರಲಿಲ್ಲ. ನಿರೀಕ್ಷಿತವಾಗಿ ಅದು ಅಸ್ಥಿರ ಕ್ರೋಢೀಕರಣವಾಗಿತ್ತು ಮತ್ತು 2013ರಲ್ಲಿ ಯಡಿಯೂರಪ್ಪ ಸ್ವಂತ ಪ್ರಾದೇಶಿಕ ಪಕ್ಷ ಕೆಜೆಪಿ ಕಟ್ಟಿದಾಗ, ಬಿಜೆಪಿ ಲಿಂಗಾಯತರ ಬೆಂಬಲ ಕಳೆದುಕೊಂಡಿತು. ಒಂದು ವರ್ಷದ ನಂತರ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳಿದಾಗ- 2018ರ ಚುನಾವಣಾ ಫಲಿತಾಂಶದಲ್ಲಿ ನೋಡಬಹುದಾದಂತೆ- ಲಿಂಗಾಯತರ ಬೆಂಬಲವು ಭಾಗಶಃ ಮಾತ್ರವೇ ಪಕ್ಷಕ್ಕೆ ಮರಳಿತು. ಆಗ ಕಾಂಗ್ರೆಸ್ ಲಿಂಗಾಯತ ಪ್ರಾಬಲ್ಯದ ಪ್ರದೇಶಗಳಲ್ಲಿ ಸಾಕಷ್ಟು ಉತ್ತಮ ಸಂಖ್ಯೆಯಲ್ಲಿ ಪಾಲು ಪಡೆಯಿತು. ಬಿಜೆಪಿಯು ಒಬಿಸಿ ಮತಗಳು ನಿರ್ಣಾಯಕವಾದ ಕರಾವಳಿ ಕರ್ನಾಟಕ, ಪರಿಶಿಷ್ಟ ಪಂಗಡಗಳ ಪ್ರಾಬಲ್ಯವಿರುವ ಮಧ್ಯ ಮತ್ತು ಈಶಾನ್ಯ ಕರ್ನಾಟಕ ಪ್ರದೇಶಗಳಲ್ಲಿ ಸಾಕಷ್ಟು ಒಳ್ಳೆಯ ಸಾಧನೆ ತೋರಿತು.

ಲಿಂಗಾಯತರ ಒಂದು ವಿಭಾಗವು ಬಿಜೆಪಿಯ ಹಿಂದುತ್ವದ ಸಿದ್ಧಾಂತ ಬಸವೇಶ್ವರರ ತತ್ವಗಳನ್ನು ದುರ್ಬಲಗೊಳಿಸುವ ಅಗಾಧ ಸಾಧ್ಯತೆಯ ಬಗ್ಗೆ ಗಂಭೀರವಾಗಿ ಆತಂಕಗೊಂಡಿದೆ. ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಅಂಗೀಕಾರಕ್ಕಾಗಿ ಆರಂಭವಾದ ಚಳವಳಿಯನ್ನು ಜೀವಂತ ಇರಿಸಿದ್ದಾರೆ. ಈ ಸಮುದಾಯವನ್ನು ಹಿಂದೂ ಧರ್ಮದ ಒಂದು ಪಂಥವಾಗಿಯೇ ಇರಿಸಿಕೊಳ್ಳಲು ಬಯಸುವ ಬಿಜೆಪಿಗೆ ಈ ಚಳವಳಿಯು ಒಂದು ಸವಾಲಾಗಿದೆ. ದಲಿತ (ಜ್ಞಾನಪ್ರಕಾಶ ಸ್ವಾಮೀಜಿಯವರಂತಹ ಕೆಲವರು ಅಪವಾದಗಳಾಗಿದ್ದಾರೆ) ಮತ್ತು ಒಬಿಸಿ ಮಠಾಧೀಶರುಗಳಿಗೆ ವ್ಯತಿರಿಕ್ತವಾಗಿ ಕೆಲವು ಪ್ರಬಲ ಲಿಂಗಾಯತ ಮಠಗಳ ಮುಖ್ಯಸ್ಥರು ಬಹಿರಂಗವಾಗಿಯೇ ಹಿಂದುತ್ವದ ಸಿದ್ಧಾಂತದ ಟೀಕಾಕಾರರಾಗಿದ್ದಾರೆ. ಅವರಲ್ಲಿ ಅತ್ಯಂತ ಪ್ರಮುಖರಾದ ನಿಜಗುಣಾನಂದ ಸ್ವಾಮೀಜಿಯವರ ಸಭೆಗಳು ಭಾರೀ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತವೆ ಮತ್ತು ಅವರ ಯೂಟ್ಯೂಬ್ ಪ್ರವಚನಗಳನ್ನು ಲಕ್ಷಾಂತರ ಜನರು ನೋಡುತ್ತಿದ್ದು, ಇಂಥವರ ಸಂಖ್ಯೆ ಅತ್ಯಂತ ದೊಡ್ಡ ಹಿಂದುತ್ವ ಪರ ದನಿಯುಳ್ಳ (ಮೋದಿ ಪರ ಎಂದು ಓದಿಕೊಳ್ಳಿ) ಭಾಷಣಕಾರರು ಆಕರ್ಷಿಸುವ ಜನರ ಸಂಖ್ಯೆಯನ್ನು ಮೀರಿಸುತ್ತದೆ.

ಬಹುಶಃ ಹಿಂದುತ್ವದ ಈ ಉನ್ಮತ್ತ ಬ್ರಾಂಡಿನ ಕುರಿತು ಲಿಂಗಾಯತರ ನಡುವೆ ಇರುವ ಅಸಮಾಧಾನದ ಒಳಹರಿವಿನ ಸುಳಿವನ್ನು ಪಡೆದೇ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವಾರು ಹಿರಿಯ ನಾಯಕರಲ್ಲಿ ಯಾರೂ ಬೆಂಕಿಯುಗುಳುವ, ಮುಸ್ಲಿಮರ ವಿರುದ್ಧ ದ್ವೇಷಕಾರುವ ತಮ್ಮ ಪಕ್ಷದ ಸಹೋದ್ಯೋಗಿಗಳ ಜೊತೆಗೆ ಸೇರುವುದಿಲ್ಲ. ಬಹುಶಃ ಇದಕ್ಕೆ ಒಂದು ಅಪವಾದ ಎಂದರೆ, 2007ರಲ್ಲಿ ಜನತಾದಳದಿಂದ ಬಿಜೆಪಿ ಸೇರಿದ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಹೀಗಿದ್ದರೂ, ರಾಜನಿಗಿಂತಲೂ ಹೆಚ್ಚು ನಿಷ್ಠಾವಂತ ಎಂಬಂತ ಅವರ ವರಸೆಯು, ಬಿಜೆಪಿಯ ಸಿದ್ಧಾಂತ ಕುರಿತು ಯಾವುದೇ ಅಪ್ಪಟ ನಂಬಿಕೆಗಿಂತ ಹೆಚ್ಚಾಗಿ, ಅಧಿಕಾರದಲ್ಲಿ ಉಳಿಯುವ ಅವರ ಎಚ್ಚರಿಕೆಯಿಂದ ಹುಟ್ಟಿದ್ದಾಗಿದೆ. ಇತ್ತೀಚೆಗೆ ಟಿವಿ ಕಾರ್ಯಕ್ರಮ ನಿರ್ವಾಹಕರೊಬ್ಬರು ಸರಿಯಾಗಿಯೇ ಹೇಳಿದಂತೆ, ಬೊಮ್ಮಾಯಿ ಹಿಂದುತ್ವದ ಪರವಾಗಿ ಮಾತನಾಡಿದಾಗಲೆಲ್ಲಾ ತಾನು ವಹಿಸಲು ಅಸಮರ್ಥನಾದ ಪಾತ್ರವನ್ನು ವಹಿಸುತ್ತಿರುವ ಹವ್ಯಾಸಿ ನಾಟಕ ಕಲಾವಿದನಂತೆ ಕಾಣುತ್ತಾರೆ.

ಬಿಜೆಪಿ ವರ್ಷಗಳಿಂದ ಬೆಳೆಸಿಕೊಂಡು ಬರುತ್ತಿರುವ ಕರ್ನಾಟಕದ ನಾಯಕರಲ್ಲಿ- ಲಿಂಗಾಯತ ನಾಯಕರೇ ಅದರ ಕೇಂದ್ರ ಸಿದ್ಧಾಂತದ ಜೊತೆಗೆ ಅತ್ಯಲ್ಪ ಸಂಬಂಧ ಹೊಂದಿದವರು. ಜಗದೀಶ ಶೆಟ್ಟರ್ ಅವರಂತ ಆರೆಸ್ಸೆಸ್ ಹಿನ್ನೆಲೆ ಹೊಂದಿರುವ ಬಿಜೆಪಿ ನಾಯಕರೇ ಈ ಬಾರಿ ಸ್ಪರ್ಧಿಸಲು ಬಜೆಪಿಯಿಂದ ಟಿಕೆಟ್ ನಿರಾಕರಿಸಲಾದಾಗ, ಎಷ್ಟೊಂದು ಸುಲಭವಾಗಿ ಪಕ್ಷದಿಂದ ಹೊರನಡೆದು ಕಾಂಗ್ರೆಸ್ ಸೇರಲು ಸಾಧ್ಯವಾಯಿತು ಎಂಬುದನ್ನು ಒಂದು ರೀತಿಯಲ್ಲಿ ಇದು ತೋರಿಸುತ್ತದೆ. ಅತ್ಯಂತ ತೀವ್ರಗಾಮಿ ಹಿಂದುತ್ವದ ಮೂಲಕ ಅಭೇದ್ಯವಾದ ಕರ್ನಾಟಕವನ್ನು ವಶಪಡಿಸಿಕೊಳ್ಳಲು ಬಿಜೆಪಿ ಮಾಡುತ್ತಿರುವ ಪ್ರಯತ್ನಗಳಿಗೆ ಅದರ ಲಿಂಗಾಯತ ಬೆಂಬಲದ ನೆಲೆಯಿಂದಲೇ ಹೆಚ್ಚಿನ ಪ್ರತಿರೋಧ ಎದುರಾಗುವ ಸಾಧ್ಯತೆ ಇದೆ.

ಲಿಂಗಾಯತರು ಬಿಜೆಪಿಯ ಸಹಯೋಗಿಗಳಾಗಿರುವಂತೆಯೇ ಅದರ ಮಗ್ಗುಲ ಮುಳ್ಳು ಕೂಡಾ ಆಗಿದ್ದಾರೆ. ಆದುದರಿಂದ, ಈ ಬಾರಿ ಬಿಜೆಪಿಯ ಕಾರ್ಯತಂತ್ರವೆಂದರೆ, ಲಿಂಗಾಯತರನ್ನು ಸಮಾಧಾನದಲ್ಲಿಡುವುದರ ಹೊರತು ಬೇರೆ ದಾರಿಯೇ ಇಲ್ಲವಾದರೂ, ಅವರ ಮೇಲೆ ಅತಿಯಾದ ಅವಲಂಬನೆಯನ್ನು ತಪ್ಪಿಸಲು ಲಿಂಗಾಯತೇತರ ಜಾತಿಗಳನ್ನು ಓಲೈಸುವುದು ಎಂಬಂತೆ ಕಾಣುತ್ತಿದೆ.

ಅಧಿಕಾರದಲ್ಲಿ ಹೆಚ್ಚಿನ ಪಾಲು ನೀಡಿ, ಸಮಾಧಾನದಿಂದ ಇರಿಸುವ ಮೂಲಕ ಮಾತ್ರವೇ ಗೆಲ್ಲಬಹುದಾದ ಸಮುದಾಯವಿದು, ತನ್ನ ಸಿದ್ಧಾಂತದಿಂದ ಮಂತ್ರಮುಗ್ಧಗೊಳಿಸುವ ಮೂಲಕ ಅಲ್ಲ ಎಂದು ಬಿಜೆಪಿಗೆ ಬಹಳ ಚೆನ್ನಾಗಿ ಗೊತ್ತಿದೆ.ಯಡಿಯೂರಪ್ಪ ಮತ್ತು ಬೊಮ್ಮಾಯಿ ಅಡಿಯಲ್ಲಿ ಲಿಂಗಾಯತರಿಗೆ ಆಶ್ರಯ ನೀಡಲಾಗಿದೆ ಮತ್ತು ಅದಕ್ಕೆ ಪ್ರತಿಯಾಗಿ ಪ್ರಬಲವಾದ ಲಿಂಗಾಯತ ಮಠಗಳ ಬೆಂಬಲವನ್ನು ಖಾತರಿಪಡಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿದೆ ಎಂಬುದು ನಿಜ. ಮುಖ್ಯಮಂತ್ರಿ ಪದದಿಂದ ಯಡಿಯೂರಪ್ಪ ಅವರನ್ನು ಇಳಿಸಬಾರದು ಎಂದು ಈ ಮಠಗಳ ಕೆಲವು ಮಠಾಧೀಶರು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಕೂಡಾ ಹಾಕಿದ್ದರು. ಹೈಕಮಾಂಡ್ ಬಾಗದೇ ಇದ್ದಾಗ, ಇನ್ನೊಬ್ಬ ಲಿಂಗಾಯತ ಬೊಮ್ಮಾಯಿಗೆ ಆ ಸ್ಥಾನ ಸಿಗುವಂತೆ ಖಾತರಿಪಡಿಸಿದ್ದರು. ಕೆಲವು ವರ್ಷಗಳ ಹಿಂದೆ ಹಲವಾರು ಲಿಂಗಾಯತ ಮಠಾಧೀಶರು ಪ್ರಗತಿಪರ ಸಂಘಟನೆಗಳು ಪ್ರತಿಪಾದಿಸುತ್ತಿರುವ ಜಾತ್ಯತೀತ ವಿಷಯಗಳ ಜೊತೆಗೆ ಬಹಿರಂಗವಾಗಿಯೇ ಗುರುತಿಸಿಕೊಳ್ಳಲು ಸಿದ್ಧರಿದ್ದರು. ಇಂತವರ ಸಂಖ್ಯೆ ಈಗ ತೀವ್ರವಾಗಿ ಕುಸಿದಿದೆ. ಹೀಗಿದ್ದರೂ, ಇವೆಲ್ಲವನ್ನೂ ಪರಿಗಣಿಸಿದ ಮೇಲೂ, ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಒಬಿಸಿ ಮತ್ತು ದಲಿತ ಸಮುದಾಯದ ಒಂದು ಭಾಗಕ್ಕೆ ಯಾವುದೇ ಹಿಂಜರಿಕೆ ಇಲ್ಲದಿರುವ ಈ ಸಮಯದಲ್ಲಿ, ಅದರ ಸಿದ್ಧಾಂತಕ್ಕೆ ಸ್ಪಷ್ಟವಾಗಿ ಸವಾಲು ಹಾಕುವ ಏಕೈಕ ಸಮುದಾಯ ಲಿಂಗಾಯತರು ಎಂಬುದನ್ನು ಒಪ್ಪಿಕೊಳ್ಳಬೇಕು. ತಮ್ಮ ಸುಗ್ಗಿ ಕಾಲದಲ್ಲಿ ಕಾಂಗ್ರೆಸ್ ಮತ್ತು ಜನತಾದಳಕ್ಕೆ- ಪ್ರಮಾಣದಲ್ಲೂ, ನಿರಂತರತೆಯಲ್ಲೂ- ಸಿಕ್ಕಿದ್ದ ಲಿಂಗಾಯತರ ಬೆಂಬಲವನ್ನು ಬಿಜೆಪಿಯು ಇನ್ನಷ್ಟೇ ಪಡೆಯಬೇಕಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇರ ನಡೆ-ನುಡಿಯ, ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು: ಸಿಎಂ ಸಿದ್ದರಾಮಯ್ಯ

0
ನಿಷ್ಠುರ, ನೇರ ನಡೆ ನುಡಿಯ ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ...