Homeಕರ್ನಾಟಕಬಿಜೆಪಿ ಬಹುಮತ ಪಡೆಯುವುದಿಲ್ಲ ಎಂಬುದನ್ನು ಧ್ವನಿಸಿತೇ ಪ್ರೀತಂಗೌಡರ ಭಾಷಣ?

ಬಿಜೆಪಿ ಬಹುಮತ ಪಡೆಯುವುದಿಲ್ಲ ಎಂಬುದನ್ನು ಧ್ವನಿಸಿತೇ ಪ್ರೀತಂಗೌಡರ ಭಾಷಣ?

‘ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆಯುವುದಿಲ್ಲ ಎಂಬ ಸೂಚನೆಯನ್ನು ಹಾಸನ ಶಾಸಕ ಪ್ರೀತಂಗೌಡ ನೀಡಿದ್ದಾರೆಯೇ?’

- Advertisement -
- Advertisement -

“ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾತನಾಡಿದ್ದಾರೆ. ಜೆಡಿಎಸ್‌ಗೆ ವೋಟ್ ಹಾಕಿದ್ರೂ ಬಿಜೆಪಿಗೆ ವೋಟ್ ಹಾಕಿದಂತೆ” ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಹೇಳಿಕೆ ನೀಡಿದ್ದು ರಾಜಕೀಯ ಚರ್ಚೆಗಳಿಗೆ ಅವಕಾಶ ನೀಡಿದೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಪ್ರೀತಂ, “ನಿಮಗೆ ಅರ್ಥವಾಗಲಿ ಎಂದು ಬಿಡಿಸಿ, ಬಿಡಿಸಿ ಹೇಳುತ್ತಿದ್ದೇನೆ. ಜನತಾ ದಳಕ್ಕೆ ವೋಟ್ ಹಾಕಿದ್ರೂ ಬಿಜೆಪಿಗೆ ವೋಟ್ ಹಾಕಿದಂತೆ ಲೆಕ್ಕ. ದೇವೇಗೌಡ್ರು- ಮೋದಿ ಸಾಹೇಬ್ರು ಮಾತನಾಡಿಕೊಂಡಿದ್ದಾರೆ. ಯಾಕೆಂದರೆ ಅವರಿಗೆ ಬರೋದು 20-25 ಸೀಟ್‌. ನೀವು ಬೆಂಗಳೂರಿಗೆ ಹೋಗಬೇಕೆಂದರೆ ಮೈಸೂರು ಮೇಲೆ ಬೆಂಗಳೂರಿಗೆ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮಾರ್ಗದಲ್ಲಿ ಹೋಗಿ ಅಂತ ಮಾತ್ರ ಹೇಳ್ತೀನಿ. ಮೈಸೂರಿಗೆ ಹೋಗಿ, ಬೆಂಗಳೂರಿಗೆ ಹೋಗ್ತೀನಿ ಅಂದ್ರೆ ನಿಮ್ಮಿಷ್ಟ. ಎಲ್ಲ ನದಿ ನೀರು ಹರಿಯೋದು ಸಮುದ್ರಕ್ಕೇನೆ. ನೀವು ಅವರಿಗೆ ವೋಟ್ ಹಾಕಿದ್ರೂ ಮತ್ತೆ ನಮ್ಮ ಹತ್ತಿರಕ್ಕೆ ಬರಬೇಕು. ಯೋಚನೆ ಮಾಡಿ” ಎಂದು ತಿಳಿಸಿದ್ದಾರೆ.

ಪ್ರೀತಂ ಅವರು ಮಾತನಾಡಿರುವ ವಿಡಿಯೊ ತುಣುಕು ವೈರಲ್ ಆಗುತ್ತಿದೆ. “ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆಯೇ? ಬಿಜೆಪಿ ಬಹುಮತ ಪಡೆಯುವುದಿಲ್ಲವೇ?” ಎಂಬ ಚರ್ಚೆಗೆ ಇವರ ಹೇಳಿಕೆ ಅವಕಾಶ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್‌, “ನಾವು ಪದೇ ಪದೇ ಹೇಳುತ್ತಿದ್ದೇವೆ. ಜೆಡಿಎಸ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ. ಅದನ್ನೇ ಈಗ ಸ್ವತಃ ಬಿಜೆಪಿ ಶಾಸಕ ಪ್ರೀತಂ ಗೌಡರೂ ಅನುಮೋದಿಸಿದ್ದಾರೆ. ಮೋದಿ-ದೇವೇಗೌಡರ ಮಧ್ಯೆ ಈಗಾಗಲೇ ಮಾತುಕತೆಯೂ ಆಗಿದೆಯಂತೆ. ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಜೆಡಿಎಸ್ ಬೆಂಬಲಿಸಬೇಡಿ. ಕಾಂಗ್ರೆಸ್‌ಗೆ ಮತ ನೀಡಿ” ಎಂದು ಮನವಿ ಮಾಡಿದೆ.

ಪ್ರೀತಂ ಗೌಡ ಹೇಳಿಕೆಯನ್ನು ಸ್ವಪಕ್ಷೀಯರೇ ಆದ ಸಚಿವ ಅಶ್ವತ್ ನಾರಾಯಣ ವಿರೋಧಿಸಿದ್ದಾರೆ. “ಯಾರೂ ಇಂತಹ ಹೇಳಿಕೆಗಳನ್ನ ನೀಡಬಾರದು. ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಜೆಡಿಎಸ್ ಅಥವಾ ಕಾಂಗ್ರೆಸ್ ಇಬ್ಬರೂ ಸಹ ಬಿಜೆಪಿ ಪ್ರತಿಸ್ಪರ್ಧಿಗಳು. ಮೋದಿ ಹೆಸರು ಹೇಳಿಕೊಂಡು ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ” ಎಂದು ಟೀಕಿಸಿದ್ದಾರೆ.

“ಚುನಾವಣೆ ಕುರಿತು ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಜನರ ಬೇಡಿಕೆ, ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತೆ. ಇದರಲ್ಲಿ ಎಲ್ಲರೂ ಭಾಗಿಯಾಗುತ್ತಾರೆ. ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನತೆಗೆ ತಿಳಿಸುತ್ತೇವೆ” ಎಂದಿದ್ದಾರೆ.

ಬಿಜೆಪಿ ಟಿಕೆಟ್ ಪಡೆದಿರುವ ಪ್ರೀತಂ ಗೌಡ ಮತ್ತು ಜೆಡಿಎಸ್‌ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಅವರ ಪ್ರತಿಕ್ರಿಯೆ ಪಡೆಯಲು ‘ನಾನುಗೌರಿ.ಕಾಂ’ ಸಂಪರ್ಕಿಸಿದೆ. ಆದರೆ ಇಬ್ಬರೂ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಬಹುತಮ ಪಡೆಯಲಿದೆ ಅಥವಾ ದೊಡ್ಡ ಪಕ್ಷವಾಗಿ ಹೊಮ್ಮಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಬಿಜೆಪಿ ಬಹುಮತ ಪಡೆಯುವುದಿಲ್ಲ ಎಂಬ ಸೂಚನೆಯನ್ನು ಸಮೀಕ್ಷೆಗಳು ಹೇಳುತ್ತಿರುವಾಗ ಪ್ರೀತಂ ಹೇಳಿಕೆ ಸಂಚಲನ ಮೂಡಿಸಿದೆ.

‘ಈದಿನ’ ಮಾಧ್ಯಮ ಮಾಡಿರುವ ಮೆಗಾ ಸರ್ವೇ ಗುರುವಾರ ಪ್ರಕಟವಾಗಿದ್ದು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದಿದೆ. 132ರಿಂದ 140 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ. ಬಿಜೆಪಿಗೆ 57- 65 ಸ್ಥಾನ, ಜೆಡಿಎಸ್‌ಗೆ 19-25 ಸ್ಥಾನ, ಇತರರು 1-5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದಿದೆ ಸರ್ವೇ.

ಎಬಿಪಿ ಸಿ–ವೋಟರ್ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಪಕ್ಷ 115 – 127 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಲಾಗಿದೆ. ಆಡಳಿತರೂಢ ಬಿಜೆಪಿ 68 – 80 ಸ್ಥಾನಗಳನ್ನು ಗೆಲ್ಲಬಹುದು, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ 23 – 35 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಿ–ವೋಟರ್ ಸಮೀಕ್ಷೆ ಹೇಳುತ್ತಿದೆ.

ಇದನ್ನೂ ಓದಿರಿ: ‘ಸೋನಿಯಾ ಗಾಂಧಿ ವಿಷಕನ್ಯೆ, ರಾಹುಲ್ ಒಬ್ಬ ಹುಚ್ಚ’ ಎಂದು ನಾಲಿಗೆ ಹರಿಬಿಟ್ಟ ಯತ್ನಾಳ್: ಕಾಂಗ್ರೆಸ್ ಖಂಡನೆ

‘ಟಿವಿ9 ಕನ್ನಡ ಸಿವೋಟರ್’ ಸಮೀಕ್ಷೆಯ ವರದಿ ಪ್ರಕಾರ, ಕಾಂಗ್ರೆಸ್ ಪಕ್ಷವು 106 ರಿಂದ 116 ಸ್ಥಾನ ಗಳಿಸುವ ಸಾಧ್ಯತೆ ಇದೆ. ಆಡಳಿತಾರೂಢ ಬಿಜೆಪಿ 79ರಿಂದ 89 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಜೆಡಿಎಸ್​​ಗೆ 24 ರಿಂದ 34 ಸ್ಥಾನ ದೊರೆತರೆ ಇತರರು 0ಯಿಂದ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದೆ.

ಜನ್‌ ಕೀ ಬಾತ್‌ ಸಮೀಕ್ಷೆಯ ಪ್ರಕಾರ ಬಿಜೆಪಿ 98ರಿಂದ 109 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪ್ರತಿಪಕ್ಷ ಕಾಂಗ್ರೆಸ್‌ 89ರಿಂದ 97 ಸ್ಥಾನಗಳೊಂದಿಗೆ 2ನೇ ಅತಿದೊಡ್ಡ ಪಕ್ಷ ಎನಿಸಿಕೊಳ್ಳಲಿದೆ. ಜೆಡಿಎಸ್‌ 25ರಿಂದ 29 ಸ್ಥಾನಗಳನ್ನಷ್ಟೇ ಗಳಿಸಲಿದೆ. ಇತರರು ಕೇವಲ 1 ಸ್ಥಾನ ಪಡೆಯಲಿದ್ದಾರೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯಬೇಕಿದ್ದರೆ ಕನಿಷ್ಠ 113 ಸ್ಥಾನ ಗಳಿಸಬೇಕಿದ್ದು, ಈ ಬಾರಿ ಆ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ಸಮೀಕ್ಷೆ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...