Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ:ಅಥಣಿ: ಪ್ರತಿಷ್ಠೆ ಪಣದಲ್ಲಿ ಯಾವ “ಸಾವ್ಕಾರ್”ಗೆ ರುಮಾಲು?

ಅಥಣಿ: ಪ್ರತಿಷ್ಠೆ ಪಣದಲ್ಲಿ ಯಾವ “ಸಾವ್ಕಾರ್”ಗೆ ರುಮಾಲು?

ಈ ರಣರಂಗದಲ್ಲಿ ಸವದಿ, ಜಾರಕಿಹೊಳಿಗಳಿಬ್ಬರದೇ ಅಲ್ಲ, ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್‌ಗಳ ಪ್ರತಿಷ್ಠೆಯೂ ಪಣವಾಗಿದೆ.

- Advertisement -
- Advertisement -

ಕೃಷ್ಣ ನದಿ ದಂಡೆ ಮೇಲಿರುವ ಕಬ್ಬು-ಸಕ್ಕರೆ ಸೀಮೆ ಅಥಣಿ ಅತಿರಥರ ಅಖಾಡ; ಇಡೀ ರಾಜ್ಯದ ಕುತೂಹಲದ ಕಣ್ಣನ್ನು ತನ್ನತ್ತ ಹೊರಳಿಸಿಕೊಂಡಿರುವ ರಣಕಣ. ಊಳಿಗಮಾನ್ಯದ ಪಳಿಯುಳಿಕೆಯಂತಿರುವ “ಸಾಹುಕಾರ್” ಗೌರವದಿಂದ ಗುರುತಿಸಲ್ಪಡುತ್ತಿರುವ ಮಾಜಿ ಮಂತ್ರಿಗಳಿಬ್ಬರ ಈಗೋ ಸಂಘರ್ಷ ಅಥಣಿಯಲ್ಲಿ ತಾರಕ ತಲುಪಿದೆ. ಬಿಜೆಪಿ-ಸಂಘ ಪರಿವಾರದ ನೀಲಿ ಕಣ್ಣಿನ ಆಸಾಮಿ ಎನ್ನಲಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೇಸರಿ ಬದ್ಧತೆಗೆ ತಿಲಾಂಜಲಿಯಿಟ್ಟು ತದ್ವಿರುದ್ಧ ಸಿದ್ಧಾಂತದ ಕಾಂಗ್ರೆಸ್ ಸೇರಿ ಹಿತಶತ್ರುಗೆ ಸೆಡ್ಡು ಹೊಡೆದಿದ್ದಾರೆ. ಅರ್ಥಾತ್ ಬಿಜೆಪಿಯಲ್ಲಿ ತನ್ನ ಕಾಲೆಳೆಯುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ತಿರುಗಿಬಿದ್ದಿದ್ದಾರೆ. ಬೆಳಗಾವಿಯ ಲೋಕಲ್ ರಾಜಕೀಯದಲ್ಲಿ ತನಗೆ ಸೆಡ್ಡುಹೊಡೆದು ಕಾಡುತ್ತಿರುವ ಸವದಿಯನ್ನು ಬಿಜೆಪಿಯಲ್ಲೇ ಮೂಲೆಗುಂಪುಮಾಡುವ ಯೋಜನೆ ಹಾಕಿಕೊಂಡಿದ್ದ ಗೋಕಾಕ್ ಸಾಹುಕಾರ್ ಜಾರಕಿಹೊಳಿ ಬಂಡಾಯದ ಬೊಬ್ಬೆಗೆ ಬೆಚ್ಚಿಬಿದ್ದಿದ್ದಾರೆ. ಅಥಣಿ ಸಾಹುಕರ್‌ನ ಅವರ ಕೋಟೆಯಲ್ಲೇ ಕೆಡವಿ ಪ್ರತಿಷ್ಠೆ ಉಳಿಸಿಕೊಳ್ಳಲು ದಿನಕ್ಕೊಂದು ತಂತ್ರ ಹೆಣೆಯಹತ್ತಿದ್ದಾರೆ.

ಸಾವ್ಕಾರ್ ವರ್ಸಸ್ ಸಾವ್ಕಾರ್

ಕಬ್ಬು, ಜೋಳ, ಗೋಧಿ, ದ್ರಾಕ್ಷಿ, ಹತ್ತಿ ಮತ್ತಿತರ ಕೃಷಿ ಹಾಗು ಸಕ್ಕರೆ ಉದ್ಯಮ ಆಧಾರಿತ ಆರ್ಥಿಕತೆಯ ಅಥಣಿಯಲ್ಲಿ ಕಳೆದೆರಡು ದಶಕಗಳಿಂದ ವ್ಯಕ್ತಿ ಅಹಮಿಕೆಯ ಮೇಲಾಟ ಬಿರುಸುಗೊಂಡಿದೆ; ಮಹಾರಾಷ್ಟ್ರ ಗಡಿಯಲ್ಲಿರುವುದರಿಂದ ಮರಾಠಿ ಭಾಷಾ ರಾಜಕೀಯದ ಆಟ-ಹೂಟವೂ ಇದೆ. ಐದು ಸಕ್ಕರೆ ಕಾರ್ಖಾನೆಗಳಿರುವ ಅಥಣಿ ತಾಲೂಕಿನ ‘ನಾನಾ-ನೀನಾ’ ಜಿದ್ದಾಜಿದ್ದಿಯ ರುದ್ರ ರಾಜಕಾರಣ ಜನರ ಪಾಲಿಗೆ ದಿನ ಕಳೆದಂತೆ ಕಹಿಯಾಗುತ್ತಿದೆ. ಮತ್ತೆ ವಿಧಾನಸಭೆಯಲ್ಲಿ ಮೆರೆವ ಕನಸು ಕಾಣುತ್ತಿರುವ ಕಾಂಗ್ರೆಸ್‌ನ ಲಕ್ಷ್ಮಣ ಸವದಿ ಮತ್ತು ಬಿಜೆಪಿಯ ಮಹೇಶ್ ಕುಮಟಳ್ಳಿ ತಾವು ಶಾಸಕರಗಿದ್ದಾಗ ಸಾವಿರರು ಕೋಟಿ ಅನುದಾನ ತಂದು ಕಲ್ಯಾಣ ಕೆಲಸ ಮಾಡಿರುವುದಾಗಿ ಹೇಳುತ್ತಿದ್ದಾರೆ. ಅಧಿಕಾರಸ್ಥರ ಮತ ಗಳಿಕೆಯ ಲಾಭದ ಲೆಕ್ಕಚಾರಕ್ಕೆ ತಕ್ಕಂತೆ ಕಾಮಗಾರಿಗಳಾಗಿರುವ ಅಥಣಿ ನೆಲದಲ್ಲಿ ಮೂಲ ಸೌಕರ್ಯಗಳೇ ಇಲ್ಲದೆ ಜನರು ಪರದಾಡುತ್ತಿರುವುದು ಎದ್ದು ಕಾಣುತ್ತದೆ!

ಕೃಷಿ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ. ಅಥಣಿ ತಾಲೂಕಿನ ದಕ್ಷಿಣ ಭಾಗದಲ್ಲಿ ಪ್ರತಿ ಹಂಗಾಮಿನಲ್ಲಿ ಪ್ರವಾಹವಾದರೆ, ಪೂರ್ವದಲ್ಲಿ ಸದಾ ಬರಗಾಲ! ಪ್ರವಾಹದಿಂದ ಜನರನ್ನು ಸಂರಕ್ಷಿಸುವ ತಡೆಗೋಡೆ ನಿರ್ಮಾಣದ ಪ್ರಯತ್ನ ಆಳುವ ಮಂದಿ ಮಾಡುತ್ತಿಲ್ಲ. 2019 ಮತ್ತು 2021ರ ನರೆ ಹಾವಳಿಯಲ್ಲಿ ನೆಲೆ ಕಳೆದುಕೊಂಡವರಿಗಿನ್ನೂ ಪುನರ್ ವಸತಿ ಕಲ್ಪಿಸಲಾಗಿಲ್ಲ. ಬರದ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದರೂ ಶಾಸಕ-ಸಂಸದರ ಕಿವಿಗೆ ಕೇಳಿಸುತ್ತಿಲ್ಲ; ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಯುವ ಸಮೂಹ ಬೆಳಗಾವಿ ಇಲ್ಲವೆ ಗಡಿಯಲ್ಲಿರುವ ಮಹಾರಾಷ್ಟ್ರದ ನಗರಗಳಿಗೆ ವಲಸೆ ಹೋಗುವಂತಾಗಿದೆ ಎಂದು ಅಥಣಿಯ ಜನರು ನೋವಿನಿಂದ ಹೇಳುತ್ತಾರೆ.

ಬೆಳಗಾವಿ ರಾಜಕೀಯ ರಂಗದಲ್ಲಿ ಪ್ರಭಾವಿಯಾಗಿರುವ ಲಕ್ಷ್ಮಣ ಸವದಿ ಮತ್ತು ಜಿಲ್ಲಾ ಬಿಜೆಪಿ ಮೇಲೆ ಹಿಡಿತ ಸಾಧಿಸಿರುವ ಗೋಕಾಕ್ ಎಮ್ಮೆಲ್ಲೆ ರಮೇಶ್ ಜಾರಕಿಹೊಳಿಯ ಒಣ ಪ್ರತಿಷ್ಠೆಯ ತುರುಸಿನ ಅಡ್ಡ-ನೇರ ಪರಿಣಾಮಗಳು ಅಥಣಿ ಕ್ಷೇತ್ರದ ಮೇಲಾಗುತ್ತಿದೆ. ಮೂರು ಬಾರಿ ಎಮ್ಮೆಲ್ಲೆಯಾಗಿದ್ದ ಬಿಜೆಪಿ ಕಟ್ಟಾಳು ಲಕ್ಷ್ಮಣ ಸವದಿ ಹೆಚ್ಚುಕಮ್ಮಿ ಹತ್ತು ದಿನಗಳ ಹಿಂದಾದ ಪೊಲಿಟಿಕಲ್ ಪಲ್ಲಟದಿಂದ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದಾರೆ; 2018ರಲ್ಲಿ ಸವದಿಯನ್ನು ಸೋಲಿಸಿ ಆ ನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿ ಪಾಲಾಗಿದ್ದ ರಮೇಶ್ ಜಾರಕಿಹೊಳಿ ನಿಷ್ಠಾವಂತ ಹಿಂಬಾಲಕ ಮಹೇಶ್ ಕುಮಟಳ್ಳಿ ಮತ್ತೆ ಸಮರಾಂಗಣಕ್ಕೆ ಧುಮುಕಿದ್ದಾರೆ. ಸ್ಥಳೀಯ ಲಿಂಗಾಯತ ಮಠದ ಸ್ವಾಮಿ ಶಶಿಕಾಂತ ಪಡಸಲಗಿ ಕಾಂಗ್ರೆಸ್ ಟಿಕೇಟು ಸಿಗದೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಜೆಡಿಎಸ್ ಆಟಕ್ಕಷ್ಟೆ; ಲೆಕ್ಕಕ್ಕೆ ಇಲ್ಲ. ಬಿಜೆಪಿ ಹುರಿಯಾಳು ಕೂಡ “ಡಮ್ಮಿ”; ಹೋರಾಟವೇನಿದ್ದರೂ ಕಾಂಗ್ರೆಸ್ ಲಕ್ಷ್ಮಣ ಸವದಿ ಮತ್ತು ಕುಮಟಳ್ಳಿಯ “ಸಾವ್ಕಾರ್” ರಮೇಶ್ ಜಾರಕಿಹೊಳಿ ನಡುವೆ! ಇದೊಂದು ದ್ವೇಷ-ಸೇಡಿನ ಸೆಣಸಾಟವೇ ಹೊರತು ಕ್ಷೇತ್ರದ ಒಳಿತಿನ-ಕಳಕಳಿಯ ಹೋರಾಟವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ರಣಕಣದ ರಹಸ್ಯ!

ಅಖಾಡದ ಆಯ-ಆಕಾರ

ಅಥಣಿಯ ಸಾಮಾಜಿಕ, ರಾಜಕೀಯ, ಆರ್ಥಿಕತೆ ಮುಂತಾದ ಸಕಲ ವಲಯಗಳು ಬಲಾಢ್ಯ ಲಿಂಗಾಯತರ ಏಕಸ್ವಾಮ್ಯಕ್ಕೆ ಒಳಪಟ್ಟಿದೆ. ಪಂಚಮಸಾಲಿ ಒಳ ಪಂಗಡದ ಪ್ರಭಾವ ಚುನಾವಣೆಯ ಜಾತಿ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಒಟ್ಟು 2,23,494 ಮತದಾರರಿರುವ ಅಥಣಿಯಲ್ಲಿ ಲಿಂಗಾಯತ-60,000, ಎಸ್‌ಸಿ-ಎಸ್‌ಟಿ-35,000, ಕುರುಬ-25,000, ಮುಸಲ್ಮಾನ-25,000, ಜೈನ-22,000, ಮರಾಠ-24,000, ಬ್ರಾಹ್ಮಣ-6,000, ರೆಡ್ಡಿ-5,000 ಮತ್ತು ಇತರೆ ಸಣ್ಣ ಸಂಖ್ಯೆಯ ಒಬಿಸಿ ಸಮುದಾಯಗಳ ಮತದಾರರು-18,000 ಇರಬಹುದೆಂದು ಅಂದಾಜಿಸಲಾಗುತ್ತಿದೆ. ಅಥಣಿಯಲ್ಲಿ 1952ರಿಂದ ಈತನಕ ನಡೆದಿರುವ ಒಟ್ಟು 14 ಜನರಲ್ ಇಲೆಕನ್ಷ್ ಮತ್ತು ಒಂದು ಆಪರೇಷನ್ ಕಮಲದಿಂದಾಗಿ ಬಂದೆರಗಿದ ಉಪಚುನವಣೆ ಜರುಗಿವೆ. ಕಾಂಗ್ರೆಸ್ 8 ಬಾರಿ, ಜನತಾ ಪರಿವಾರ 2 ಸಲ, ಬಿಜೆಪಿ 4 ಬಾರಿ ಮತ್ತು ಪಕ್ಷೇತರ ಉಮೇದುವಾರ ಒಮ್ಮೆ ಶಾಸಕನಾಗಿದ್ದಾರೆ. ಕಾಂಗ್ರೆಸ್-ಜನತಾ ಪರಿವಾರದ ಸಾಂಪ್ರದಯಿಕ ಹೋರಾಟದ ಕಣವಾಗಿದ್ದ ಅಥಣಿಗೆ ಕೇಸರಿ ಖದರು ಬಂದಿದ್ದು ಲಕ್ಷ್ಮಣ ಸವದಿ ಆಕ್ರಮಣಕಾರಿ ಹಿಂದುತ್ವ ಮುಖಂಡರಾಗಿ ಅವತರಿಸಿದ ನಂತರವೆಂದು ಕ್ಷೇತ್ರದ ಇತಿಹಾಸ ಹೇಳುತ್ತದೆ.

ಜನತಾ ಪರಿವಾರದ ಮಹಿಳಾ ಮುಂದಾಳಾಗಿದ್ದ ಲೀಲಾದೇವಿ ಆರ್.ಪ್ರಸಾದ್ ಎರಡು ಬಾರಿ ಅಥಣಿಯಿಂದ ಗೆದ್ದು ಒಮ್ಮೆ ಮಂತ್ರಿಯೂ ಆಗಿದ್ದರು. 2004ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಶಾಸಕ ಶಹಜಾನ್ ಡೊಂಗರಗಾಂವ್‌ರನ್ನು ಮಣಿಸಿ ಎಮ್ಮೆಲ್ಲೆಯಾದ ಸವದಿ ಆ ಬಳಿಕ ಹ್ಯಾಟ್ರಿಕ್ ಸಾಧಿಸಿ 14 ವರ್ಷ ಆಳ್ವಿಕೆ ನಡೆಸಿದರು. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮುಂಚೂಣಿಯಲ್ಲಿದ್ದ ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿ ಮೇಲೆ ಹಿಡಿತ ಸ್ಥಾಪಿಸಿದ್ದ ಲಕ್ಷ್ಮಣ ಸವದಿ ಮಧ್ಯೆ 2018ರ ಅಸೆಂಬ್ಲಿ ಚುನವಣೆಗೂ ಮೊದಲೇ ಮೇಲಾಟ ಆರಂಭವಾಗಿತ್ತು. ಡಿಸಿಸಿ ಬ್ಯಾಂಕ್, ಸಕ್ಕರೆ ಕಾರ್ಖಾನೆ ಚುನಾವಣೆಯ ಜವಾರಿ ಜಗಳ ದ್ವೇಷಾಸೂಯೆಯ ಕಾಳಗವಾಗಿ ಮಾರ್ಪಟ್ಟಿತ್ತು. ಅಥಣಿಯಲ್ಲಿ ಸವದಿಗೆ ಸೋಲುಣಿಸುವ ಹಠಕ್ಕೆ ಬಿದ್ದಿದ್ದ ಜಾರಕಿಹೊಳಿ ತನ್ನ ನಿಷ್ಠಾವಂತ ಮಹೇಶ್ ಕುಮಟಳ್ಳಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ಚಕ್ರವೂಹ ರಚಿಸಿದ್ದರು. ಮತ್ತೆ ಗೆಲ್ಲುವ ಅತಿಯಾದ ವಿಶ್ವಾಸದಲ್ಲಿದ್ದ ಸವದಿ 2,331 ಅಲ್ಪ ಮತದಂತರದಿಣದ ಹಿಮ್ಮೆಟ್ಟಬೇಕಾಗಿ ಬಂತು ಎಂದು ಜಿಲ್ಲಾ ರಾಜಕಾರಣದ ಸೂಕ್ಷ್ಮ ಗೊತ್ತಿರುವವರು ಹೇಳುತ್ತಾರೆ.

ಯಡಿಯೂರಪ್ಪರ ಆಪರೇಷನ್ ಕಮಲ ಸರಕಾರ-2ದಲ್ಲಿ ರಮೇಶ್ ಜಾರಕಿಹೊಳಿ ಪ್ರಭಾವಿ ಆಗುವುದನ್ನು ಸಂಘ ಪರಿವಾರ ಗ್ರಹಿಸಿತ್ತು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮ ಶಿಷ್ಯ ಸವದಿ ಯಡಿಯೂರಪ್ಪ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಆಗುವಂತೆ ನೋಡಿಕೊಂಡರು. ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿಗೆ ಎದುರಾಳಿಯಾಗಿದ್ದ ಸವದಿಗೆ ದೊಡ್ಡ ಅಧಿಕಾರ ಕೊಡುವ ಮೂಲಕ ಸಂತೋಷ್ ಚೆಕ್‌ಮೇಟ್ ಇಟ್ಟಿದ್ದರೆಂದು ಸ್ಥಳೀಯ ರಾಜಕಾರಣದ ನಾಡಿ ಬಲ್ಲವರು ಹೇಳುತ್ತಾರೆ. ಈ ಅನಿರೀಕ್ಷಿತ ಆಘಾತದಿಂದ ಜಾರಕಿಹೊಳಿ ಸಹಜವಾಗೆ ಕೆರಳಿದರು; ಸಿಎಂ ಯಡಿಯೂರಪ್ಪರ ಮೇಲೆ ಒತ್ತಡಹಾಕಿ ಡಿಸಿಎಂ ಸವದಿ ಮಾತು ಇಲ್ಲಿಯೂ ನಡೆಯದಂತೆ ಮಾಡತೊಡಗಿದರು. ಸೆಕ್ಸ್ ಸಿ.ಡಿ ಪ್ರಕರಣದ ನಂತರ ಜಾರಕಿಹೊಳಿ ಮಂತ್ರಿಗಿರಿ ಕಳೆದುಕೊಂಡರು. ಆಗ ಬೆಳಗಾವಿ ಆಡಳಿತದಲ್ಲಿ ಸವದಿ ಕೈ ಮೇಲಾಯಿತು.

ಸವದಿ ಹಣಿಯಲು ಜಾರಕಿಹೊಳಿ ಸಮಯ ಸಾಧಿಸುತ್ತಲೇ ಇದ್ದರು; ಯಡಿಯೂರಪ್ಪ ನಿರ್ಗಮಿಸಿ ಬೊಮ್ಮಾಯಿ ಸಿಎಂ ಆದಾಗ ಸವದಿಗೆ ಸಂಪುಟದಲ್ಲಿ ಸ್ಥಾನ ಮತ್ತು ಬೆಳಗಾವಿ ಆಡಳಿತದಲ್ಲಿ ಮಾನ ಸಿಗದಂತೆ ನೋಡಿಕೊಂಡರು. ಸವದಿ ಸುಮ್ಮನೆ ಕೂರಲಿಲ್ಲ; ಅತ್ತಿಂದ ಜಾರಕಿಹೊಳಿ ಮೇಲೆ ದಾಳಿಗಿಳಿದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಜತೆ ಕೈಮಿಲಾಯಿಸಿದರು. 2023ರ ಚುನವಣೆಯಲ್ಲಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿ ಮತ್ತೆ ಜಿಲ್ಲಾ ರಾಜಕಾರಣದಲ್ಲಿ ಪುಟಿದೇಳುವ ಸಿದ್ಧತೆಯಲ್ಲಿ ತೊಡಗಿದರು. ಆಪರೇಷನ್ ಕಮಲ ಸಂದರ್ಭದಲ್ಲಿ ಯಡಿಯೂರಪ್ಪ 2023ರಲ್ಲಿ ತನಗೇ ಟಿಕೆಟ್ ಎಂದು ಭರವಸೆ ಕೊಟ್ಟಿದ್ದನ್ನು ಹೈಕಮಾಂಡ್ ಮುಂದೆ ನಿವೇದಿಸಿದರು; ಸವದಿ ಪಕ್ಕದ ಕಾಗವಾಡದಿಂದ ಸ್ಪರ್ಧಿಸುವುದಾಗಿ ಹೇಳಿದ್ದರು ಎಂದು ಜಾರಕಿಹೊಳಿ ವಾದಿಸಿದರು. ಟಿಕೇಟಿಗೆ ಸವದಿ ಹಠ ಹಿಡಿದಂತೆ ಜಾರಕಿಹೊಳಿ ತನ್ನ ನಿಷ್ಠಾನುಯಾಯಿ ಶಾಸಕ ಕುಮಟಳ್ಳಿಗೆ ಅವಕಾಶ ಕೊಡುವಂತೆ ಪಟ್ಟುಹಿಡಿದರು; ಕುಮಟಳ್ಳಿಗೆ ಟಿಕೆಟ್ ಕೊಡದಿದ್ದರೆ ತನಗೂ ಗೋಕಾಕ್ ಬಿಜೆಪಿ ಟಿಕೆಟ್ ಬೇಡವೆಂದು ಹೈಕಮಾಂಡ್‌ಅನ್ನು ಹೆದರಿಸಿದರು. ಪವರ್ ಫುಲ್ ಬಿ.ಎಲ್.ಸಂತೋಷ್, ಸಂಸದ ಈರಣ್ಣ ಕಡಾಡಿ ವಗೈರೆ ಸಂಘಿಗಳು ಅಸಾಯಕರಾದರು.

ಟಿಕೆಟ್ ತಂದಷ್ಟು ಸಲಭವಲ್ಲ ಗೆಲುವು!

ಬಿಜೆಪಿಯ ಮುಂಚೂಣಿಯ ಲಿಂಗಾಯತ ನಾಯಕ ಸವದಿ ಟಿಕೆಟ್ ದಕ್ಕದ ಸಿಟ್ಟಿನಲ್ಲಿ ಪಕ್ಷ ಬಿಟ್ಟಿದ್ದಷ್ಟೇ ಅಲ್ಲ, ಜಾರಕಿಹೊಳಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಸೇರಿ ಕ್ಯಾಂಡಿಡೇಟ್ ಆದರು. ಈ “ಕ್ಷಿಪ್ರ ಕ್ರಾಂತಿ”ಯ ಕಾರಣಕ್ಕೆ ಅಥಣಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಈ ರಣರಂಗದಲ್ಲಿ ಸವದಿ, ಜಾರಕಿಹೊಳಿಗಳಿಬ್ಬರದೇ ಅಲ್ಲ, ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್‌ಗಳ ಪ್ರತಿಷ್ಠೆಯೂ ಪಣವಾಗಿದೆ. ಬಿಜೆಪಿ ಟಿಕೆಟ್ ಒಂದು ಸಿಕ್ಕರೆ ಸಾಕು, ಗೆದ್ದಂತೆಯೆ ಎಂದುಕೊಂಡಿದ್ದ ಜಾರಕಿಹೊಳಿ ಲೆಕ್ಕಾಚಾರಗಳೆಲ್ಲ ಸವದಿ ಕಾಂಗ್ರೆಸ್ ಹುರಿಯಾಳು ಆಗುತ್ತಿದ್ದಂತೆಯೆ ಉಲ್ಟಪಲ್ಟಾ ಆಗಿದೆ. ಜಾರಕಿಹೊಳಿಗೀಗ ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸುವುದಕ್ಕಿಂತ ದೊಡ್ಡ ಶತ್ರುವಾಗಿರುವ ಸವದಿಯನ್ನು ಮುಣ್ಣು ಮುಕ್ಕಿಸಬೇಕಾಗಿರುವುದು ಇಜ್ಜತ್ ಪ್ರಶ್ನೆಯಾಗಿದೆ ಎಂಬ ಚರ್ಚೆಗಳು ಜಿಲ್ಲೆಯಲ್ಲಿ ನಡೆಯುತ್ತಿದೆ.

ಸ್ವಕ್ಷೇತ್ರ ಗೋಕಾಕ್‌ಗಿಂತ ಅಥಣಿಯಲ್ಲೇ ಜಾರಕಿಹೊಳಿ ಹೆಚ್ಚು ಓಡಾಡುತ್ತ ರಾತ್ರಿಯಾಗುತ್ತಲೇ ಕಾಂಗ್ರೆಸ್‌ನ ಹೋಬಳಿ ಮಟ್ಟದ ಲೀಡರ್‌ಗಳಿಗೆ ಗಾಳಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಸವದಿ ಕಾಂಗ್ರೆಸ್ ಸೇರಿದ 3-4 ದಿನಕ್ಕೆ ಅಥಣಿಗೆ ದಂಡೆತ್ತಿ ಹೋಗಿರುವ ಜಾರಕಿಹೊಳಿ ಮೊದಲ ಸುತ್ತಿನಲ್ಲಿ 5-6 ದಿನ ಅಲ್ಲೇ ಕಳೆದಿದ್ದಾರೆ. ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಸವದಿಯನ್ನು ಸೋಲಿಸಲೇಬೇಕಾಗಿದೆ. ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆಹೊತ್ತು ಟಿಕೆಟ್ ತಂದಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಾರಕಿಹೊಳಿ ತನ್ನ ತಮ್ಮ ಲಖನ್‌ರನ್ನು ಗೆಲ್ಲಿಸಿಕೊಂಡು ಅಧಿಕೃತ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದ ಆರೋಪ ಮಾಡುವುದನ್ನು ಇವತ್ತಿಗೂ ಸ್ವಪಕ್ಷದ ಟೀಕಾಕಾರರು ಬಿಟ್ಟಿಲ್ಲ. ಈಗ ಸವದಿಯನ್ನು ಮಣಿಸಲಾಗದಿದ್ದರೆ ಬಿಜೆಪಿಯಲ್ಲಿ ಜಾರಕಿಹೊಳಿ ಮೂಲೆಗುಂಪಾಗುವ ಪರಿಸ್ಥಿತಿ ಬರಬಹುದು; ಜಿಲ್ಲಾ ರಾಜಕಾರಣದಲ್ಲೂ ಹಿನ್ನಡೆ ಆಗುವುದರಿಂದ ಜಾರಕಿಹೊಳಿಗೆ ಅಥಣಿ ಚುನಾವಣೆ ತಲೆನೋವಗಿದೆ ಎಂಬ ಮಾತು ಕೇಳಿಬರುತ್ತಿದೆ.

ಸವದಿ ಕಾಂಗ್ರೆಸ್ ಸೇರಿ ದೊಡ್ಡ ಸವಾಲು ಎಸೆಯಬಹುದೆಂದು ಜಾರಕಿಹೊಳಿ ಭಾವಿಸಿರಲಿಲ್ಲ; ಬಿಜೆಪಿಯಲ್ಲಿ ಪ್ರಭಾವಿಯಾಗಿರುವ ಸಂತೋಷ್ ಶಿಷ್ಯನಾಗಿರುವುದರಿಂದ ಬಿಜೆಪಿ ಬಿಡಲಾರರು; ಹೆಚ್ಚೆಂದರೆ ಬಂಡೆದ್ದು ಪಕ್ಷೇತರನಾಗಿ ಆಖಾಡಕ್ಕೆ ಇಳಿಯಬಹುದು ಎಂದುಕೊಂಡಿದ್ದರು. ಸವದಿ ಪಕ್ಷೇತರನಾದರೆ ತನ್ನ ಕ್ಯಾಂಡಿಡೇಟ್ ಸುಲಭವಾಗಿ ಆಯ್ಕೆಯಾಗುತ್ತಾನೆ ಎಂಬ ಆಲೋಚನೆ ಜಾರಕಿಹೊಳಿಯದಾಗಿತ್ತು. ಈಗ ಅದ್ಯಾವುದೂ ಘಟಿಸದೆ ಅಥಣಿ ಆತಂಕಕ್ಕೆ ಒಳಗಾಗಿರುವ ಜಾರಕಿಹೊಳಿ ತನ್ನ ಕಪ್ಪು ಕುದುರೆ ಕುಮಟಳ್ಳಿಯ ಪಂಚಮಸಾಲಿ ಪಂಗಡದ ಮತ ಕ್ರೋಢೀಕರಿಸುವ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಜಾರಕಿಹೊಳಿ ಶತಾಯ-ಗತಾಯ ಪ್ರಯತ್ನ ಮಾಡಿದರೂ ಏಕಗಂಟಲ್ಲಿ ಪಂಚಮಸಾಲಿ ಮತಪಡೆಯಲು ಸಾಧ್ಯವಾಗದು; ಲಿಂಗಾಯತರ ಗಾಣಿಗ ಒಳಪಂಗಡಕ್ಕೆ ಸೇರಿದ್ದರೂ ಸವದಿ ಜತೆ ಸ್ಥಳೀಯ ಪ್ರಭಾವಿ ಪಂಚಮಸಾಲಿ ಮುಂದಾಳುಗಳು ಕಾಣಿಸಿಕೊಳ್ಳುತ್ತಿದ್ದಾರೆ; ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಪಂಚಮಸಾಲಿ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಜ್ಜೆಹೆಜ್ಜೆಗೆ ಸಾಥ್ ಕೊಟ್ಟಿದ್ದರು; ಪಂಚಮಸಾಲಿ ಮಠದ ಸ್ವಾಮಿಯೊಬ್ಬರು ಸವದಿ ಪರ ಮಾತಾಡಿದ್ದಾರೆ. ಹಾಗಾಗಿ ಪಂಚಮಸಾಲಿ ಮತಗಳು ವಿಭಜನೆಯಾಗಿ ಅರ್ಧಕ್ಕಿಂತ ಜಾಸ್ತಿ ಸವದಿಗೆ ಸಿಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಹುರಿಯಾಳು ಕುಮಟಳ್ಳಿ ಮೃದು, ಜನರ ಕೈಗೆಟುಕುತ್ತಾರೆ; ಆದರೆ ಸವದಿಯಂತೆ ಕೆಲಸಗಾರನಲ್ಲ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಮೂರು ಬಾರಿ ಎಮ್ಮೆಲ್ಲೆಯಾಗಿ, ಡಿಸಿಎಂ ಆಗಿ ಮತ್ತು ಡಿಸಿಸಿ ಬ್ಯಾಂಕ್ ಮುಂತಾದ ಸಹಕಾರಿ ವಲಯದಲ್ಲಿ ಗುರುತಿಸಿಕೊಂಡು ವರ್ಚಸ್ಸು ಬೆಳೆಸಿಕೊಂಡಿರುವ ಸವದಿಯನ್ನು ಕೌಂಟರ್ ಮಾಡುವ ತಾಕತ್ತು ಕುಮಟಳ್ಳಿಗಿಲ್ಲ; ಸವದಿಗೆ 25-30 ಸಾವಿರ ಮತದ ವೈಯಕ್ತಿಕ ಠೇವಣಿಯಿದೆ. ಜತೆಗೆ ಬಿಜೆಪಿ ಹೈಕಮಾಂಡ್, ವಲಸಿಗನ ಬ್ಲಾಕ್‌ಮೇಲ್‌ಗೆ ಕಂಗಾಲಾಗಿ ಧೀರ್ಘ ಕಾಲದ ನಿಷ್ಠಾವಂತನಿಗೆ ಮೋಸ-ವಂಚನೆ ಮಾಡಿತೆಂಬ ಅನುಕಂಪ ಸೃಷ್ಟಿಯಾಗಿದೆ. ಕಾಂಗ್ರೆಸ್‌ಗೆ ಎಂಥ ಕೆಟ್ಟ ಪರಿಸ್ಥಿತಿಯಲ್ಲೂ 50 ಸಾವಿರ ಮತ ಪಡೆವ ತಳಪಾಯವಿದೆ. 2019ರಲ್ಲಿ ನಡೆದ ಒನ್ ಸೈಡೆಡ್ ಬೈ ಇಲೆಕ್ಷನ್‌ನಲ್ಲಿಯೇ ಯಾವ ಚರಿಷ್ಮವೂ ಇಲ್ಲದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿಗೆ 59,214 ಬಂದಿತ್ತು. ಇದೆಲ್ಲ ಸವದಿಗೆ ಯದ್ಧ ಭೂಮಿಯಲ್ಲಿ ಅನುಕೂಲಕರ ಅಂಶಗಳು ಎನ್ನಲಾಗುತ್ತಿದೆ

ಗಡಿ ಪ್ರದೇಶದ ಮರಾಠ ಬೆಲ್ಟ್ ನಲ್ಲೂ ಸವದಿ ಹಿಡಿತಹೊಂದಿದ್ದಾರೆ. ಸಹಕಾರಿ ರಂಗದ ರಾಜಕಾರಣದಲ್ಲಿರುವ ಸವದಿ ರೈತಾಪಿ ವರ್ಗವನ್ನು ಸೆಳೆಯಬಲ್ಲರು. ಪ್ರವಾಹ ಮತ್ತು ಕೋವಿಡ್ ಸಂಕಷ್ಟದ ಸಂರ್ಭದಲ್ಲಿ ಶಾಸಕ ಕುಮಟಳ್ಳಿಗಿಂತ ಸವದಿಯೇ ಜನರ ನಡುವೆ ಹೆಚ್ಚು ಓಡಾಡಿಕೊಂಡಿದ್ದರು. ಲಿಂಗಾಯತ ವಿರೋಧಿ ಒಬಿಸಿ ಮತ ಒಟ್ಟುಗೂಡಿಸುವ ಯೋಚನೆಯಲ್ಲಿ ಜಾರಕಿಹೊಳಿಯಿದ್ದರೂ ಸಿದ್ದರಾಮಯ್ಯರ “ಮುಖಬೆಲೆ”ಯಿಂದಾಗಿ ಅದು ಕೈಗೂಡುವುದು ಕಷ್ಟ. ಎದುರಾಳಿ ತಂಡಗಳ ಪ್ಲಸ್-ಮೈನೆಸ್ ತಾಳೆಹಾಕಿ ಲೆಕ್ಕ ನೋಡಿದರೆ 85 ಸಾವಿರಕ್ಕಿಂತ ಹೆಚ್ಚು ಮತ ಪಡೆದು ಸವದಿ ಗೆಲ್ಲತ್ತಾರೆಂಬ ತರ್ಕ ಅಥಣಿಯಲ್ಲಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಜಾರಕಿಹೊಳಿ ಸ್ವಪಕ್ಷದಲ್ಲೇ ಸೃಷ್ಟಿಸಿಕೊಂಡಿರುವ ಶತ್ರು ಪಡೆ ಮುಖಭಂಗ ಮಾಡಲು ಕಾದಿದೆ. ಹಿಂದೆ ಕೇಸರಿ ಸಿದ್ಧಾಂತದ ಬದ್ಧತೆಯಿಂದ ದುಡಿಯುತ್ತಿದ್ದ ಕಾರ್ಯಕರ್ತರು, ಬೆಂಬಲಿಗರು ಅಂತರ ಕಾಯ್ದುಕೊಂಡಿದ್ದಾರೆ. ಸಂಘಿ ಸಂಸದ ಕಡಾಡಿಯಂತವರು ಹಲ್ಲುಕಡಿಯುತ್ತಿದ್ದಾರೆ. ಒಳ ಬೇಗುದಿ ಬಿಜೆಪಿಯನ್ನು ಸುಡುತ್ತಿದೆ. ತುಂಬಾ ಮುಂದಿರುವ ಕಾಂಗ್ರೆಸ್‌ನ ಸವದಿಯನ್ನು ಹಿಂದಿಕ್ಕಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಪ್ರತಿಷ್ಠೆ ಉಳಿಸಿಕೊಳ್ಳಲು ಜಾರಕಿಹೊಳಿಗೆ ಸಾಧ್ಯವಾದೀತೆ ಎಂಬುದಷ್ಟೆ ಈಗಿರುವ ಕದನ ಕುತೂಹಲ!

ಇದನ್ನೂ ಓದಿ: ಉಡುಪಿ: ಹಿಂದುತ್ವದ ಹಿತಾನುಭವ ಭ್ರಮನಿರಸನವಾಗುವ ಆತಂಕದಲ್ಲಿ ಕೇಸರಿ ಪಡೆ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...