Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜನಗರ: ಪುಟ್ಟರಂಗಶೆಟ್ಟಿ-ಸೋಮಣ್ಣ ಸೆಣಸಾಟದಲ್ಲಿ ಬಿಎಸ್‌ಪಿ ಪಾತ್ರ ನಿರ್ಣಾಯಕ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜನಗರ: ಪುಟ್ಟರಂಗಶೆಟ್ಟಿ-ಸೋಮಣ್ಣ ಸೆಣಸಾಟದಲ್ಲಿ ಬಿಎಸ್‌ಪಿ ಪಾತ್ರ ನಿರ್ಣಾಯಕ

- Advertisement -
- Advertisement -

ಹಿಂದುಳಿದ ವರ್ಗಕ್ಕೆ ಸೇರಿದ ಉಪ್ಪಾರ ಸಮುದಾಯದ ಏಕೈಕ ಶಾಸಕ ಎಂದೇ ಗುರುತಿಸಿಕೊಂಡಿರುವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಈ ಬಾರಿ ನಿಜದ ಸವಾಲು ಎದುರಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿಸಿ, ವಿ.ಸೋಮಣ್ಣನವರನ್ನು ಎರಡು (ವರುಣಾ, ಚಾಮರಾಜನಗರ) ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಸಿರುವುದು ಮತ್ತು ಸೋಮಣ್ಣನವರಿಗೆ ಒಂದು ಕಡೆಯಾದರೂ ಗೆಲ್ಲಬೇಕಾದ ಸಂದಿಗ್ಧತೆ ಎದುರಾಗಿರುವುದು ಈ ಸವಾಲಿಗೆ ಕಾರಣ.

1983ರಿಂದ 1987ರ ಅವಧಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾದ ಸೋಮಣ್ಣ ಅವರ ರಾಜಕೀಯ ಜೀವನ ವರ್ಣರಂಜಿತವಾದದ್ದು. ಬಿ.ಎಸ್.ಯಡಿಯೂರಪ್ಪನವರ ನಂತರದಲ್ಲಿ ಎದ್ದುಕಾಣುವ ಪ್ರಭಾವಿ ಲಿಂಗಾಯತ ನಾಯಕರಲ್ಲಿ ಒಬ್ಬರಾಗಿರುವ ಸೋಮಣ್ಣನವರ ಹೆಸರು ಕಳೆದ ಮುಖ್ಯಮಂತ್ರಿ ಬದಲಾವಣೆಯ ಸಮಯದಲ್ಲಿ ಮುನ್ನಲೆಗೆ ಬಂದಿತ್ತು ಕೂಡ.

ಸೋಮಣ್ಣನವರು 1994ರಲ್ಲಿ ಬಿನ್ನಿಪೇಟೆಯಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾದರು. 1996ರಿಂದ 1999ರ ನಡುವೆ ಕಾರಾಗೃಹಗಳ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. 1999ರಲ್ಲಿ ಸ್ವತಂತ್ರವಾಗಿ ಆಯ್ಕೆಯಾಗಿದ್ದ ಅವರು, 2004ರಲ್ಲಿ ಕಾಂಗ್ರೆಸ್ ಸೇರಿ ಬಿನ್ನಿಪೇಟೆಯಿಂದ ಮೂರನೇ ಬಾರಿಗೆ ಆಯ್ಕೆಯಾದರು. ಮರುವಿಂಗಡಣೆಯಲ್ಲಿ 2008ರಲ್ಲಿ ರೂಪುಗೊಂಡ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ (ಬಿನ್ನಿಪೇಟೆ ರದ್ದಾಗಿತ್ತು) ಬಂದು ಮತ್ತೆ ಕಾಂಗ್ರೆಸ್‌ನಿಂದ ಗೆದ್ದರು. ಆದರೆ 2009 ಆಪರೇಷನ್ ಕಮಲಕ್ಕೆ ಒಳಗಾದರು. ಉಪಚುನಾವಣೆಯಲ್ಲಿ 25 ವರ್ಷದ ಪ್ರಿಯಾಕೃಷ್ಣ ಎದುರು ಸೋತರು. ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದರು. 2018ರಲ್ಲಿ ಗೋವಿಂದರಾಜನಗರದಿಂದ ಬಿಜೆಪಿ ಟಿಕೆಟ್ ಪಡೆದು ಮತ್ತೆ ಆಯ್ಕೆಯಾದ ಅವರು, ತೋಟಗಾರಿಕೆ, ರೇಷ್ಮೆ, ವಸತಿ ಇಲಾಖೆಯಂತಹ ಜವಾಬ್ದಾರಿಗಳನ್ನು ನಿರ್ವಹಿಸಿದರು. ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಸೋಮಣ್ಣನವರಿಗೆ ಹನೂರಿನಿಂದ ಸ್ಪರ್ಧಿಸುವ ಆಸೆ ಇತ್ತು. ಆದರೆ ಅಂತಿಮವಾಗಿ ಚಾಮರಾಜನಗರದ ಟಿಕೆಟ್ ದೊರಕಿತು.

ಯು.ಎಂ.ಮಾದಪ್ಪ

ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯಗಳು ಏರ್ಪಟ್ಟು, ಸದರಿ ಚುನಾವಣೆಗೂ ಮುನ್ನ ಸೋಮಣ್ಣ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ಚರ್ಚೆಗಳು ಮುನ್ನಲೆಗೆ ಬಂದಿದ್ದವು. ಆದರೆ ಅವರನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಬಿಜೆಪಿ ಇರಲಿಲ್ಲ. ಅಂತಿಮವಾಗಿ ಪಕ್ಷದಲ್ಲೇ ಉಳಿದ ಸೋಮಣ್ಣನವರಿಗೆ ಎರಡು ಕ್ಷೇತ್ರದ ಹೊರೆಯನ್ನು ಹೈಕಮಾಂಡ್ ಹೊರಿಸಿತು. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಅವರಿಗೆ ಸೂಚಿಸಿದೆ. ಸಿದ್ದರಾಮಯ್ಯನವರನ್ನು ಸೋಲಿಸಬೇಕಾದರೆ ವರುಣಾ ಕ್ಷೇತ್ರದಲ್ಲೇ ಬೀಡುಬಿಡಬೇಕಾಗುತ್ತದೆ. ಅಲ್ಲದೆ ಯಾವುದೇ ಹಿಡಿತವಿಲ್ಲದ ಕ್ಷೇತ್ರಗಳನ್ನು ನಿಭಾಯಿಸುವುದು ಸೋಮಣ್ಣನವರಿಗೆ ಸವಾಲಿನ ಸಂಗತಿಯಾಗಿದೆ. ಹೀಗಾಗಿ ಸೋಮಣ್ಣನವರು ಚಾಮರಾಜನಗರದತ್ತ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ.

ಚಾಮರಾಜನಗರ ಒಂದು ಕಾಲಕ್ಕೆ ಲಿಂಗಾಯತ ಸಮುದಾಯದ ಅಭ್ಯರ್ಥಿಗಳ ಹಿಡಿತದಲ್ಲಿತ್ತು. ಆದರೆ ಪುಟ್ಟರಂಗಶೆಟ್ಟರು ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ, ಇಲ್ಲಿ ಗಣನೀಯವಾಗಿರುವ ಉಪ್ಪಾರ ಸಮುದಾಯದ ಮತಗಳು ಸಂಘಟಿತವಾದವು. ಹೀಗಾಗಿ ಶೆಟ್ಟರು ಕಾಂಗ್ರೆಸ್‌ನ ವಿಜಯಪತಾಕೆಯನ್ನು ಹಾರಿಸುತ್ತ ಬಂದಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಯಳಂದೂರು ಭಾಗದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸೀಮಿತವಾಗಿದ್ದ ಶೆಟ್ಟರನ್ನು ಚಾ.ನಗರ ವಿಧಾನಸಭೆಯತ್ತ ಕರೆದೊಯ್ದ ಕೀರ್ತಿ ಆರ್. ಧ್ರುವ ನಾರಾಯಣ ಮತ್ತು ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಸಲ್ಲುತ್ತದೆ.

ಇಲ್ಲಿಯವರೆಗೆ ಇಲ್ಲಿ ನಡೆದಿರುವ ಹದಿನಾರು ವಿಧಾನಸಭಾ ಚುನಾವಣೆಗಳ ಪೈಕಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪುನರಾಯ್ಕೆಯಾಗಿರುವುದನ್ನು ಕಾಣಬಹುದು. 1952ರಲ್ಲಿ ಯು.ಎಂ.ಮಾದಪ್ಪ (ಕೆಎಂಪಿಪಿ), 1957ರಲ್ಲಿ ಬಿ.ರಾಚಯ್ಯ (ಕಾಂಗ್ರೆಸ್), 1962ರಲ್ಲಿ ಎಂ.ಸಿ.ಬಸವಪ್ಪ (ಕಾಂಗ್ರೆಸ್), 1967ರಲ್ಲಿ ಪಕ್ಷೇತರವಾಗಿ ಮತ್ತು 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪುಟ್ಟಸ್ವಾಮಿ, 1978ರಲ್ಲಿ ಜನತಾ ಪಾರ್ಟಿಯ ಎಂ.ಸಿ.ಬಸಪ್ಪ ಆಯ್ಕೆಯಾಗಿದ್ದರು. 1983, 1985ರಲ್ಲಿ ಮತ್ತೆ ಪುಟ್ಟಸ್ವಾಮಿಯವರು ಗೆದ್ದರು. 1989ರಲ್ಲಿ ಕ್ಷೇತ್ರಕ್ಕೆ ವಾಟಾಳ್ ನಾಗರಾಜ್ ಅವರ ಪ್ರವೇಶವಾಯಿತು. ಕನ್ನಡಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಪುಟ್ಟಸ್ವಾಮಿಯವರಿಗೆ ಸೋಲುಣಿಸಿದರು. ನಂತರ ಕನ್ನಡ ಚಳವಳಿಯ ವಾಟಾಳ್ ಪಕ್ಷ (ಕೆಸಿವಿಪಿ) ಕಟ್ಟಿದ ಅವರು 1994ರಲ್ಲಿ ಮರು ಆಯ್ಕೆಯಾದರು. 1999ರಲ್ಲಿ ವಾಟಾಳ್ ಸೋತರು. ಬಿಜೆಪಿಯ ಪಿ.ಗುರುಸ್ವಾಮಿ ಗೆದ್ದಿದ್ದರು. 2004ರಲ್ಲಿ ಕೆಸಿವಿಪಿಯಿಂದ ವಾಟಾಳ್ ಮತ್ತೆ ಜಯಭೇರಿ ಭಾರಿಸಿದರು. ನಂತರದ ಚುನಾವಣೆಗಳಲ್ಲಿ ವಾಟಾಳ್ ಸೋಲುಗಳನ್ನು ಕಂಡರು. 2008ರ ಬಳಿಕ ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟರು ಚಾಮರಾಜನಗರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು.

ಎಸ್.ಪುಟ್ಟಸ್ವಾಮಿ

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ನಂಜನಗೂಡು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ನಂಜನಗೂಡಿನಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದ ಎಂ.ಮಹದೇವ್ (ಬೆಂಕಿ ಮಹದೇವಪ್ಪ) ಚಾ.ನಗರದತ್ತ ವಲಸೆ ಬಂದರು. ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿದರು. ಆದರೆ ಪುಟ್ಟರಂಗಶೆಟ್ಟರ ಎದುರು 2612 ಮತಗಳ ಅಂತರದಲ್ಲಿ ಸೋಲುಂಡರು. 2013ರಲ್ಲಿ ಬಿಜೆಪಿ ಒಡೆದ ಮನೆಯಾಗಿತ್ತು. ಕೆಜಿಪಿಯಿಂದ ಸ್ಪರ್ಧಿಸಿದ್ದ ಕೆ.ಆರ್.ಮಲ್ಲಿಕಾರ್ಜುನಪ್ಪನವರಿಗೆ ಶೆಟ್ಟರು 11,196 ಮತಗಳ ಅಂತರದಲ್ಲಿ ಸೋಲುಣಿಸಿದರು. 2018ರಲ್ಲಿ ಮಲ್ಲಿಕಾರ್ಜುನಪ್ಪನವರು ಬಿಜೆಪಿಯಿಂದ ಸ್ಪರ್ಧಿಸಿದರು. ಆದರೆ 4,913 ಮತಗಳ ಅಂತರದಲ್ಲಿ ಶೆಟ್ಟರು ಮತ್ತೆ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಬಿಎಸ್‌ಪಿ (ಬಹುಜನ ಸಮಾಜ ಪಾರ್ಟಿ) ಒಂದು ಮಟ್ಟಿಗಿನ ಪ್ರಭಾವ ಹೊಂದಿದೆ. ಎನ್.ಮಹೇಶ್ ಅವರು ಬಿಎಸ್‌ಪಿಯಲ್ಲಿದ್ದಾಗ ಪಕ್ಷ ಇಲ್ಲಿ ಒಂದಿಷ್ಟು ನೆಲೆ ಕಂಡುಕೊಂಡಿತ್ತು. ಆದರೆ ಅವರು ಬಿಜೆಪಿಗೆ ಹೋದ ಮೇಲೂ ಬಿಎಸ್‌ಪಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ, ನಿಷ್ಠಾವಂತ ಕಾರ್ಯಕರ್ತರು ಚಾಮರಾಜನಗರ ಜಿಲ್ಲೆಯಲ್ಲಿ ಹಾಗೂ ಸದರಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ನಂತರದಲ್ಲಿ ಹೆಚ್ಚಿನ ಮತಗಳನ್ನು ಪಡೆಯುತ್ತಾ ಬಿಎಸ್‌ಪಿ ಗಮನ ಸೆಳೆದಿದೆ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಲಿಂಗಾಯತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಆಲೂರ ಮಲ್ಲು 7,134 ಮತ ಗಳಿಸಿ ಮೂರನೇ ಸ್ಥಾನದಲ್ಲಿದ್ದರು. ಈ ಬಾರಿಯೂ ಕ್ಷೇತ್ರದಲ್ಲಿ ಬಿಎಸ್‌ಪಿ ಕಣಕ್ಕಿಳಿದಿದೆ. ಜನ ಚಳವಳಿಗಳ ಮೂಲಕ ಗುರುತಿಸಿಕೊಂಡಿರುವ ಹ.ರ.ಮಹೇಶ್ ಸ್ಪರ್ಧಿಸಿದ್ದಾರೆ. ಹೀಗಾಗಿ ಬಿಎಸ್‌ಪಿ ದಲಿತರ ಮತಗಳನ್ನು ಹೆಚ್ಚಿನದಾಗಿ ತನ್ನ ತೆಕ್ಕೆಗೆ ತೆಗೆದುಕೊಂಡರೆ ಕಾಂಗ್ರೆಸ್‌ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಜಾತಿ ಲೆಕ್ಕಾಚಾರದಲ್ಲಿ ಸೋಮಣ್ಣನವರಿಗೆ ಅದು ವರದಾನವೂ ಆಗಬಹುದು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಟಿ.ನರಸೀಪುರ: ಹಳೆ ಹುಲಿ ಮಹದೇವಪ್ಪ ಮತ್ತೆ ಪುಟಿದೇಳುವರೇ?

ಅಂದಾಜಿನ ಪ್ರಕಾರ ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ಉಪ್ಪಾರರು ಸಮಬಲ ಹೊಂದಿದ್ದಾರೆ. 50 ಸಾವಿರಕ್ಕೂ ಪರಿಶಿಷ್ಟ ಜಾತಿ (ಹೊಲೆಯರು, ಮಾದಿಗರು, ಭೋವಿ, ಲಂಬಾಣಿ ಇತ್ಯಾದಿ) ಮತದಾರರು ಇದ್ದು ನಿರ್ಣಾಯಕವಾಗಿದ್ದಾರೆ. ಮತ್ತೊಂದು ಅಂದಾಜಿನ ಪ್ರಕಾರ ಲಿಂಗಾಯತರು ಸುಮಾರು 50 ಸಾವಿರ, ಉಪ್ಪಾರರು ಸುಮಾರು 30 ಸಾವಿರ, ಪರಿಶಿಷ್ಟ ಪಂಗಡ (ನಾಯಕರು) ಮುತ್ತು ಮುಸ್ಲಿಮರು ತಲಾ 20,000, ಕುರುಬರು 8,000 ಮತದಾರರು ಇದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ದಲಿತರು ಹೇಗೆ ಮತ ಚಲಾಯಿಸುತ್ತಾರೆ ಎನ್ನುವುದರ ಮೇಲೆ ಸೋಮಣ್ಣ ಮತ್ತು ಪುಟ್ಟರಂಗಶೆಟ್ಟರ ಫಲಿತಾಂಶ ನಿರ್ಧಾರವಾಗಲಿದೆ. ಪ್ರಬಲ ಪೈಪೋಟಿಯನ್ನು ನೀಡಬಲ್ಲ ಸಾಮರ್ಥ್ಯವನ್ನು ಬಿಎಸ್‌ಪಿ ಹೊಂದಿರುವುದರಿಂದ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಪುಟ್ಟರಂಗಶೆಟ್ಟರು ಸತತವಾಗಿ ಗೆಲ್ಲಲು ಜಾತಿಯ ಬಲವಷ್ಟೇ ಅಲ್ಲದೆ ಅವರು ಜನರೊಂದಿಗೆ ಬೆರೆಯುವ ಗುಣವೂ ಕಾರಣವಾಗುತ್ತಾ ಬಂದಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಸೋಮಣ್ಣನವರನ್ನು ಚಾಮರಾಜನಗರಕ್ಕೆ ದೂಡಲಾಗಿರುವುದರಿಂದ, ಈ ಬಾರಿ ಲಿಂಗಾಯತರು ಬಿಜೆಪಿಯೊಂದಿಗೆ, ಉಪ್ಪಾರರು ಕಾಂಗ್ರೆಸ್‌ನೊಂದಿಗೆ ಗಟ್ಟಿಯಾಗಿ ನಿಲ್ಲುವ ಸಾಧ್ಯತೆಗಳಿವೆ. ಇದರ ನಡುವೆ ನಿರ್ಣಾಯಕ ದಲಿತರ ಮತಗಳು ಬಿಎಸ್‌ಪಿಗೆ ಹೆಚ್ಚಾಗಿ ಹರಿಯುತ್ತವೋ ಅಥವಾ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ತೆಕ್ಕೆಗೆ ಬೀಳುತ್ತವೆಯೋ ಎಂಬುದರ ಮೇಲೆ ಸೋಮಣ್ಣನವರ ಗೆಲುವು, ಸೋಲು ನಿರ್ಧಾರವಾಗುತ್ತದೆ.

ವಾಟಾಳ್ ನಾಗರಾಜ್

ಈ ಕ್ಷೇತ್ರದಲ್ಲಿ ಗೆದ್ದುಬಂದ ಬಹುತೇಕ ಅಭ್ಯರ್ಥಿಗಳು ಲಿಂಗಾಯತರು ಎಂಬುದು ಗಮನಾರ್ಹ. 3 ಬಾರಿ ಆಯ್ಕೆಯಾದ ಯು.ಎಂ.ಮಾದಪ್ಪ, 4 ಬಾರಿ ಗೆದ್ದಿರುವ ಪುಟ್ಟಸ್ವಾಮಿ ಹಾಗೂ 3 ಬಾರಿ ಆಯ್ಕೆಯಾದ ವಾಟಾಳ್ ನಾಗರಾಜ್ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಇಂತಹ ಕ್ಷೇತ್ರದಲ್ಲಿ ಶೆಟ್ಟರು ಹ್ಯಾಟ್ರಿಕ್ ಜಯ ಪಡೆದಿರುವುದು ಅವರ ವರ್ಚಸ್ಸನ್ನು ಮತ್ತು ಗಟ್ಟಿಯಾದ ಜಾತಿ ಸಮೀಕರಣವನ್ನು ಸೂಚಿಸುತ್ತದೆ. ಹದಿನೈದು ವರ್ಷಗಳಿಂದ ಸಮುದಾಯದ ಕೈತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯಬೇಕೆಂಬ ಹಠದಲ್ಲಿ ಲಿಂಗಾಯತ ಸಮುದಾಯವೂ ಇದೆ. ಆದರೆ ಲಿಂಗಾಯತ ಮುಖಂಡರೊಳಗೆ ಭಿನ್ನಮತಿಯರೂ ಇದ್ದಾರೆಂಬುದು ಚರ್ಚೆಯ ಸಂಗತಿ.

ಬಿಜೆಪಿಯೊಳಗೆ ನಾಲ್ಕು ಗುಂಪುಗಳಿವೆ. ಈ ಗುಂಪುಗಳು ಹೊರಗಿನಿಂದ ಬಂದು ಸ್ಪರ್ಧಿಸುವವರ ಕುರಿತು ಆಂತರಿಕವಾಗಿ ಬೇಸರಗೊಂಡಿವೆ ಎಂದು ಹೇಳಲಾಗುತ್ತಿದೆ. ತಮ್ಮ ಪ್ರಾಬಲ್ಯ ಕುಗ್ಗುತ್ತದೆ ಎಂಬ ಆತಂಕ ಸ್ಥಳೀಯ ನಾಯಕತ್ವದಲ್ಲಿ ಇದೆ. ವಿಜಯೇಂದ್ರ ಬಂದು ನಿಂತಿದ್ದರೂ ಅವರನ್ನು ವಿರೋಧಿಸುತ್ತಿದ್ದರು; ಆದರೆ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಅಮ್ಮನಪುರ ಮಲ್ಲೇಶ್, ಕಾಡಾ ನಿಜಗುಣರಾಜು, ನಾಗಶ್ರೀ ಪ್ರತಾಪ್, ನಾಯಕ ಸಮುದಾಯದ ರಾಮಚಂದ್ರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ನಾಲ್ವರು ಬಿಜೆಪಿ ಮುಖಂಡರಲ್ಲಿ ಸಮನ್ವಯತೆಯ ಕೊರತೆ ಇದ್ದಿದ್ದುರಿಂದ ಸೋಮಣ್ಣನವರ ಹೆಸರು ಉಲ್ಲೇಖವಾಗುವ ಮೊದಲೇ ಪಕ್ಷದಲ್ಲಿ ಒಡಕು ಇತ್ತು. ಈ ಟೀಮ್ ಒಟ್ಟಿಗೆ ಸೇರಿದರೆ ಪುಟ್ಟರಂಗಶೆಟ್ಟರಿಗೆ ಕಷ್ಟವಾಗಬಹುದು. ಒಡಕುಗಳನ್ನು ತೋರಿಸದೆ ಸದ್ಯಕ್ಕೆ ಸೋಮಣ್ಣನವರೊಂದಿಗೆ ಕ್ಯಾನ್ವಾಸ್‌ನಲ್ಲಿ ಈ ಮುಖಂಡರೆಲ್ಲ ತಿರುಗಾಡುತ್ತಿದ್ದಾರೆ. ಆದರೆ ಒಳೇಟು ನೀಡುತ್ತಾರೆಂಬ ಗುಮಾನಿಯೂ ಶಮನವಾಗಿಲ್ಲ

ಚಾಮರಾಜನಗರ ನಗರಸಭೆ ಚುನಾವಣೆಯಲ್ಲಿ ಸೋಷಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆರು ವಾರ್ಡ್‌ಗಳಲ್ಲಿ ಗೆದ್ದಿದೆ. ಚಾಮರಾಜನಗರ ಆಕ್ಸಿಜನ್ ದುರಂತದ ಸಂದರ್ಭದಲ್ಲಿ ಸಕ್ರಿಯವಾಗಿ ಹೋರಾಡಿದ ಕೀರ್ತಿ ಎಸ್‌ಡಿಪಿಐಗೆ ಸಲ್ಲುತ್ತದೆ. ಈಗ ಎಸ್‌ಡಿಪಿಐ ಕೂಡ ಬಿಎಸ್‌ಪಿಗೆ ಬೆಂಬಲ ಘೋಷಿಸಿದೆ. ಮುಸ್ಲಿಂ ಮುಖಂಡರ ಮೂಲಕ ಬಿಎಸ್‌ಪಿಗೆ ಮತಗಳು ದೊರಕುವ ಸಾಧ್ಯತೆಗಳಿವೆ. ಆದರೆ ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭೆಯಲ್ಲಿ ಬಿಎಸ್‌ಪಿ ಕ್ಯಾಂಡಿಡೇಟ್ ಹಾಕಿದೆ. ಎಸ್‌ಡಿಪಿಐನಿಂದ ಸ್ಪರ್ಧಿಸಿರುವ ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಅವರು ಬಿಎಸ್‌ಪಿಯ ಈ ನಡೆಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಬಿಎಸ್‌ಪಿ ತನಗೆ ಬೆಂಬಲ ನೀಡದೆ, ಕಾಂಗ್ರೆಸ್‌ನಿಂದ ಟಿಕೆಟ್ ಕಳೆದುಕೊಂಡ ಅಖಂಡ ಶ್ರೀನಿವಾಸಮೂರ್ತಿಯವರನ್ನು ಬಿಎಸ್‌ಪಿಯಿಂದ ಕಣಕ್ಕಿಳಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಸ್‌ಡಿಪಿಐ ಬಲವಾಗಿ ಬಿಎಸ್‌ಪಿ ಜೊತೆಯಲ್ಲಿ ನಿಂತಲ್ಲಿ ಪುಟ್ಟರಂಗಶೆಟ್ಟರ ಗೆಲುವು ಕಷ್ಟವಾಗಬಹುದು. ಆದರೆ ದಲಿತ ಸಮುದಾಯದಲ್ಲಿ ಪುಟ್ಟರಂಗಶೆಟ್ಟರನ್ನು ಇಷ್ಟಪಡುವರು ಗಣನೀಯವಾಗಿರುವುದನ್ನೂ ಕಡೆಗಣಿಸಲಾಗದು.

ಮೊದಲಿನ ವರ್ಚಸ್ಸು ವಾಟಾಳ್ ಅವರಿಗೆ ಈಗ ಇಲ್ಲವಾದರೂ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾ ಸುಮಾರು 5000ದಿಂದ 10,000ದವರೆಗೂ ಮತಗಳನ್ನು ಪಡೆಯುವಷ್ಟು ಶಕ್ತರಾಗಿದ್ದಾರೆ. ಈ ಬಾರಿಯೂ ವಾಟಾಳ್ ಕಣದಲ್ಲಿದ್ದಾರೆ. ಹೀಗಾಗಿ ವಾಟಾಳ್ ಯಾರ ಮತಗಳನ್ನು ಚದುರಿಸುತ್ತಾರೆಂಬುದು ನಿಗೂಢ.

ಶೆಟ್ಟರಿಗೆ ಬಂಡಾಯದ ಬಿಸಿ ಅಷ್ಟಾಗಿ ಇಲ್ಲ. ಕಾಂಗ್ರೆಸ್‌ನಲ್ಲಿ ಬೇರೆ ಆಕಾಂಕ್ಷಿಗಳು ಇಲ್ಲವಾಗಿರುವುದು ಶೆಟ್ಟರಿಗೆ ವರದಾನ. ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದರೂ ಚುನಾವಣೆಯಲ್ಲಿ ಅದು ಅವರ ವಿರುದ್ಧ ಬೃಹತ್ತಾಗಿ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ಮತದಾರರು. ಸಾಮಾನ್ಯರಲ್ಲಿ ಸಾಮಾನ್ಯರ ಅಂತ್ಯ ಸಂಸ್ಕಾರಗಳಲ್ಲಿ ಕೂಡ ಭಾಗಿಯಾಗುವ ಶೆಟ್ಟರು ಜನಬಳಕೆಯ ರಾಜಕಾರಣಿ. ಸ್ಥಳೀಯವಾಗಿಯೇ ಇದ್ದು ತಕ್ಷಣವೇ ಸ್ಪಂದಿಸುತ್ತಾರೆ. ಇದೆಲ್ಲವೂ ಶೆಟ್ಟರ ಕುರಿತು ಇರುವ ಸಕಾರಾತ್ಮಕ ಅಂಶಗಳು.

ಸೋಮಣ್ಣನವರಿಗೆ ಹನೂರು ಕ್ಷೇತ್ರದ ಮೇಲೆ ಕಣ್ಣಿತ್ತು. ಆದರೆ ಚಾಮರಾಜನಗರ ಒಲ್ಲದ ಮನಸ್ಥಿತಿಯಲ್ಲಿ ಸಿಕ್ಕಿದೆ. ಜಿಲ್ಲಾ ಉಸ್ತುವಾರಿಯೂ ಆಗಿದ್ದ ಸೋಮಣ್ಣನವರಿಗೆ ಹೋಲಿಸಿದರೆ ಪುಟ್ಟರಂಗಶೆಟ್ಟರೇ ಹೆಚ್ಚಿನದಾಗಿ ಸ್ಥಳೀಯರಿಗೆ ಕೆಲಸ ಮಾಡಿಕೊಟ್ಟಿದ್ದಾರೆ. ವಿಜಯೇಂದ್ರ ಅವರ ಜೊತೆಗಿನ ಮುನಿಸು ಕೂಡ ಕೆಲವು ದಿನಗಳ ಹಿಂದೆ ಚರ್ಚೆಯ ವಿಷಯವಾಗತ್ತು. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಹೈಕಮಾಂಡ್ ಪ್ರಭಾವ ಬಳಸಿ ಅವರಿಗೆ ಎರಡು ಕ್ಷೇತ್ರಗಳ ಟಾಸ್ಕ್‌ಅನ್ನು ಶಿಕ್ಷೆಯ ರೀತಿಯಲ್ಲಿ ನೀಡಿದ್ದಾರೆಂಬ ಗಾಳಿಮಾತೂ ಕ್ಷೇತ್ರದಲ್ಲಿದೆ. ವರುಣಾದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಬೇಕಾಗಿರುವುದರಿಂದ ಸೋಮಣ್ಣ ತಮ್ಮ ಹೆಚ್ಚಿನ ಬಲವನ್ನು ಚಾಮರಾಜನಗರ ಮೇಲೆಯೇ ಹಾಕುವ ಸಾಧ್ಯತೆ ಇದೆ. ಗೆಲುವಿಗಾಗಿ ದುಡ್ಡಿನ ಹೊಳೆಯನ್ನು ಹರಿಸಲು ಸೋಮಣ್ಣ ಮತ್ತು ಶೆಟ್ಟರು ಸಿದ್ಧವಿರುವುದು ಕ್ಷೇತ್ರವನ್ನು ಒಂದು ಸುತ್ತುಹಾಕಿದರೆ ಕಂಡುಬರುತ್ತದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಂಜನಗೂಡು: ಅನುಕಂಪದ ಅಲೆಯಲ್ಲಿ ದರ್ಶನ್ ಧ್ರುವ; ಆಂತರಿಕ ಬಿಕ್ಕಟ್ಟಿನಲ್ಲಿ…

ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನವರು ಲಿಂಗಾಯತ, ದಲಿತ, ನಾಯಕ ಹಾಗೂ ಉಪ್ಪಾರ ಸಮುದಾಯದ ಸ್ಥಳೀಯ ನಾಯಕರನ್ನು ಜೊತೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯನ್ನು ನೋಡಿದರೆ ತ್ರಿಕೋನ ಸ್ಪರ್ಧೆ ಏರ್ಪಡುವಂತಿದೆ.

ದಲಿತರ ಮತ ಒಡೆಯುತ್ತಿಲ್ಲ: ಹ.ರ.ಮಹೇಶ್

ಬಿಎಸ್‌ಪಿಯಿಂದ ಕಣಕ್ಕಿಳಿದಿರುವ ಮಹೇಶ್ ಅವರು ಅಂಬೇಡ್ಕರ್‌ವಾದಿಯಾಗಿ ಗುರುತಿಸಿಕೊಂಡವರು, ಸಾಮಾಜಿಕ ಹೋರಾಟದಲ್ಲಿ ಸಕ್ರಿಯರು. ಹಾಡುಗಾರರಾಗಿ, ಸಾಹಿತಿಯಾಗಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಬಹುಜನ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದಲಿತ ಯುವಕರ ಮೇಲೆ ಪ್ರಭಾವ ಬೀರಿದ್ದಾರೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಂಬೇಡ್ಕರ್‌ರವರ ಫೋಟೋವನ್ನು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ತೆರವುಗೊಳಸಿದ ಆರೋಪದ ಬಳಿಕ ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಸಂಘಟಿಸಿದವರಲ್ಲಿ ಹ.ರ.ಮಹೇಶ್ ಪ್ರಮುಖರು. ಬಡ ದಲಿತ ಕುಟುಂಬದಲ್ಲಿ ಬೆಳೆದು ಬಂದು, ಈಗ ಖಾಸಗಿ ಕಾಲೇಜೊಂದರಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿರುವ ಮಹೇಶ್ ಅವರು ಚಳವಳಿಯೊಂದಿಗೆ ಸಕ್ರಿಯವಾಗಿದ್ದಾರೆ. ಪಕ್ಷನಿಷ್ಠೆಗೆ ಪ್ರತೀಕವಾಗಿರುವ ಮಹೇಶ್ ಅವರಲ್ಲಿ, ದಲಿತರ ಮತಗಳನ್ನು ಒಡೆದು ಬಿಜೆಪಿಗೆ ಅನುಕೂಲ ಮಾಡಿಕೊಡಲು ಬಿಎಸ್‌ಪಿ ಹೊರಟಿದೆ ಎಂಬ ಗುಮಾನಿಗಳಿವೆ ಎಂದು ಪ್ರಶ್ನಿಸಿದರೆ ಅದಕ್ಕೆ ಅಸಮ್ಮತಿಯನ್ನು ಸೂಚಿಸಿದರು.

ಹ.ರ.ಮಹೇಶ್

‘ನ್ಯಾಯಪಥ’ದೊಂದಿಗೆ ಮಾತನಾಡಿದ ಅವರು, ಬಹುಜನರ ಮತಗಳು ಕ್ಷೇತ್ರದಲ್ಲಿ ಹೆಚ್ಚಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಈ ಮತಗಳನ್ನು ದುಡ್ಡು ಕೊಟ್ಟು ಖರೀದಿಸುತ್ತಿವೆ. ಮತಗಳನ್ನು ಮಾರಾಟ ಮಾಡಬಾರದು ಎಂಬುದೇ ಬಹುಜನ ಚಳವಳಿಯ ಸಿದ್ಧಾಂತವಾಗಿದೆ. ಮಾರಾಟವಾಗದಿರುವ ಮತಗಳು ಬಿಎಸ್‌ಪಿಗೆ ಬರುತ್ತವೆ. ಅದು ಕಾಂಗ್ರೆಸ್‌ನ ಮತಗಳೂ ಅಲ್ಲ, ಬಿಜೆಪಿಯ ಮತಗಳೂ ಅಲ್ಲ ಎಂದರು.

ಮುಂದುವರಿದು, ಕನಿಷ್ಠ ಹದಿನೈದು ಸಾವಿರ ಮತಗಳು ಬಿಎಸ್‌ಪಿಗೆ ಇವೆ. ಅದನ್ನು ಡಬ್ಬಲ್ ಮಾಡುತ್ತಿದ್ದೇವೆ. ಕಾಂಗ್ರೆಸ್‌ಗೆ ಅಂಟಿಕೊಂಡಿರುವ ದಲಿತ ಮತದಾರರು ಇದ್ದಾರೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಕುಳಿತಾಗ ಅವರೊಂದಿಗೆ 258 ದಿನವೂ ಬಿಎಸ್‌ಪಿ ಇತ್ತು. ನಾಯಕ ಸಮುದಾಯದ ನಂಬಿಕೆ ಉಳಿಸಿಕೊಂಡಿದ್ದೇವೆ. ಬಿಜೆಪಿ, ಕಾಂಗ್ರೆಸ್ ತಿರಸ್ಕರಿಸಿರುವ ಸಣ್ಣಪುಟ್ಟ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸವನ್ನು ಬಿಎಸ್‌ಪಿ ಮಾಡುತ್ತಿದೆ. ಜೆಡಿಎಸ್ ಮತ್ತು ರೈತ ಸಂಘದ ಬೆಂಬಲವನ್ನೂ ಕೋರುತ್ತಿದ್ದೇವೆ. ಬಿಜೆಪಿ ಸೋಲಿಸುವುದು ನಮ್ಮ ಉದ್ದೇಶ ಕೂಡ; ಹೀಗಾಗಿ ಬಿಎಸ್‌ಪಿ ಮತಗಳನ್ನು ಒಡೆಯುತ್ತದೆ ಎಂದು ವಾದದಲ್ಲಿ ಹುರುಳಿಲ್ಲ. ಬಿಎಸ್‌ಪಿಯಿಂದ ಕಾಂಗ್ರೆಸ್ ಸೋಲುತ್ತದೆ ಎನ್ನದೇ, ಬಿಜೆಪಿಯನ್ನು ಸೋಲಿಸಲು ಬಿಎಸ್‌ಪಿಯನ್ನೇ ಬೆಂಬಲಿಸಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.

ನಾವು ಎಂಟ್ರಿ ಕೊಟ್ಟರೆ ಕಾಂಗ್ರೆಸ್ ಸೋಲುತ್ತದೆ, ಬಿಜೆಪಿ ಗೆಲ್ಲುತ್ತದೆ ಎಂದು ಕಂಠಪಾಠ ಮಾಡಿಕೊಂಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಯಾರನ್ನೋ ಸೋಲಿಸಲು ನಾವು ಪಕ್ಷವನ್ನು ಕಟ್ಟಿಲ್ಲ. ಕಾಂಗ್ರೆಸ್ ಇದೆ ಎಂದು ನಾವು ರಾಜಕಾರಣವನ್ನೇ ಮಾಡಬಾರದಾ? ಇದು ಎಲೆಕ್ಷನ್ ಎಂದು ಮಾರ್ಮಿಕವಾಗಿ ನುಡಿದರು.

ಒಟ್ಟಾರೆಯಾಗಿ ನೋಡುವುದಾದರೆ ಬಿಎಸ್‌ಪಿ ಏನಾದರೂ ತಳಮಟ್ಟದಲ್ಲಿ ಕೆಲಸ ಮಾಡಿದರೆ ತ್ರಿಕೋನ ಸ್ಪರ್ಧೆ ಚಾಮರಾಜನಗರದಲ್ಲಿ ಏರ್ಪಡುವುದು ಪಕ್ಕಾ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...