ಗಣಪಯ್ಯನವರು ನಡಹಳ್ಳಿ ಗ್ರಾಮದಲ್ಲಿ ದಲಿತರಿಗೆ ಮಾಡಿಕೊಟ್ಟ ಜಮೀನನ್ನು ಅವರದ್ದೇ ಜವಾಬ್ದಾರಿಗೆ ಬಿಟ್ಟುಕೊಡಲಾಗಿತ್ತು. ಎಲ್ಲಾ ಜಮೀನಿನ ಮೇಲೂ ಬ್ಯಾಂಕಿನ ಸಾಲವಿತ್ತು. ಕೆಲವರು ನಿಯಮಿತವಾಗಿ ಕಂತು ಕಟ್ಟಿದರು. ತೋಟವನ್ನೂ ಚೆನ್ನಾಗಿಟ್ಟುಕೊಂಡರು. ಇನ್ನು ಕೆಲವರು ತೋಟವನ್ನು ಹಾಳುಬಿಟ್ಟರು. ಸರ್ಕಾರದಿಂದ ಮಂಜೂರಾದ ಜಮೀನಾದ್ದರಿಂದ ಮಾರಾಟ ಮಾಡಲು ಸಾಧ್ಯವಾಗದೆ ನೆಲ ಹಾಗೇ ಉಳಿಯಿತು. ಈಗ ಅವರ ಮಕ್ಕಳು ಕೆಲವರು ಮತ್ತೆ ತೋಟವನ್ನು ಚೆನ್ನಾಗಿ ಮಾಡಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗಿಗಳೂ ಆಗಿದ್ದಾರೆ.
ಕಂತು ಕಟ್ಟದೆ ಉಳಿದವರ ಸಾಲ ಇತ್ತೀಚಿನ ವರ್ಷಗಳಲ್ಲಿ ಮನ್ನಾ ಆಯಿತು!.
ಈ ರೀತಿ ಸಾಲ ಮನ್ನಾ ಮಾಡುವಾಗ ಸರ್ಕಾರ ಕಂತು ನಿಯಮಿತವಾಗಿ ಕಟ್ಟಿದವರಿಗೆ ಸರ್ಕಾರ ಒಂದಷ್ಟು ಹಣವನ್ನು ಪ್ರೋತ್ಸಾಹ ಧನವಾಗಿ ಕೊಡಬೇಕೆಂದು ನನ್ನ ವೈಯಕ್ತಿಕ ಅನಿಸಿಕೆ. ಹೀಗಿಲ್ಲದಿರುವುದರಿಂದಲೇ ಕೆಲವರು ಮುಂದೆ ಒಂದು ದಿನ ಮನ್ನಾ ಆಗಬಹುದೆಂಬ ಆಸೆಯಿಂದ ಸಾಲವನ್ನು ಹಿಂದಿರುಗಿಸಲು ತಡ ಮಾಡುತ್ತಾರೆ.

ನಡಹಳ್ಳಿಯಲ್ಲಿ ಈ ದಲಿತರ ವ್ಯವಹಾರಗಳಲ್ಲಿ ಮುಂದಾಳುವಾಗಿ ಬರುತ್ತಿದ್ದವರು ಗಿಡ್ಡಯ್ಯ ಎಂಬವರು. ಏನಾದರೂ ಕಛೇರಿಗಳಿಗೆ ವ್ಯವಹಾರಗಳಿಗೆ ಯಾರನ್ನಾದರೂ ಕರೆತರಬೇಕಾದರೆ ಅಥವಾ ಯಾರದ್ದಾದರೂ ರುಜು ಹಾಕಿಸಿಕೊಡಬೇಕಾದರೆ ಇವರೇ ಮಾಡುವರು. ತೋಟದ ಕೆಲಸಕ್ಕೆ ಎಲ್ಲರನ್ನೂ ಒಟ್ಟುಗೂಡಿಸಿ ಕೆಲಸಕ್ಕೆ ಕರೆತರುವುದೂ ಇವರೇ. ತೋಟದ ಉಸ್ತುವಾರಿಗಾಗಿ ಹಾರ್ಲೆಯಿಂದ ಯಾರಾದರೂ ಒಬ್ಬರು ನೌಕರರೂ ಇರುತ್ತಿದ್ದರು.
ಗಿಡ್ಡಯ್ಯ ಅಲ್ಲೇ ಪಕ್ಕದಲ್ಲಿ ರೈತರೊಬ್ಬರ ಒಂದೆಕರೆ ಗದ್ದೆಯನ್ನು ಗೇಣಿಗೆ ಮಾಡಿಕೊಂಡಿದ್ದರು. ಹಲವು ವರ್ಷಗಳಿಂದ ಅವರೇ ಅದನ್ನು ಸಾಗು ಮಾಡುತ್ತಿದ್ದುದು. ಅದರ ಮಾಲಿಕರೂ ಬಡವರೇ. ಆ ಜಮೀನಲ್ಲದೆ ಅವರಿಗೆ ವಾಸಕ್ಕೆ ಮನೆಯೊಂದು ಮಾತ್ರ ಇತ್ತು. ಅವರಿಗೆ ದುಡಿಯುವ ಶಕ್ತಿ ಇರಲಿಲ್ಲ. ಆದ್ದರಿಂದ ಗಿಡ್ಡಯ್ಯ ಕೊಟ್ಟ ಭತ್ತದಲ್ಲೇ ಅವರ ಊಟವಾಗಬೇಕಿತ್ತು.
ಭೂಸುಧಾರಣೆ ಕಾನೂನು ಬಂದಾಗ ಸಹಜವಾಗಿಯೇ ಗಿಡ್ಡಯ್ಯ ಆ ಜಮೀನಿನ ಒಡೆತನಕ್ಕೆ ಅರ್ಜಿ ಹಾಕಿದರು. ಜಮೀನಿನ ಮಾಲಿಕರಿಗೆ ಜಮೀನು ಕಳೆದುಕೊಳ್ಳುವೆನೆಂದು ಗಾಭರಿಯಾಯಿತು, ಅವರು ರವೀಂದ್ರನಾಥರಲ್ಲಿ ದೂರು ಕೊಟ್ಟರು.
ರವೀಂದ್ರನಾಥರು, ಅವರಲ್ಲಿ ಕಾನೂನಿನ ಪ್ರಕಾರ ಗಿಡ್ಡಯ್ಯ ಅರ್ಜಿ ಹಾಕಿದ್ದು ಸರಿಯಾಗಿಯೇ ಇದೆ. ನೋಡೋಣ ನಾನು ಮಾತಾಡುತ್ತೇನೆ ಎಂದರು.
ರವೀಂದ್ರನಾಥರು ಗಿಡ್ಡಯ್ಯನಲ್ಲಿ ಈ ಬಗ್ಗೆ ವಿಚಾರಿಸಿದಾಗ, ಅವರು ಹೌದು ಸ್ವಾಮಿ ಕಾನೂನಿನಂತೆ ಅರ್ಜಿ ಹಾಕಿದ್ದೇನೆ, ಅವರಿಗೆ ಯಾರೂ ಇಲ್ಲ. ಅವರ ನಂತರ ಜಮೀನು ಬೇರೆಯವರಿಗೆ ಹೋಗುತ್ತದೆ. ಅವರು ಒಂದು ದಿನವೂ ಆ ಮಣ್ಣಿನಲ್ಲಿ ದುಡಿದಿಲ್ಲ. ಇಷ್ಟು ವರ್ಷ ನಾನು ದುಡಿದಿದ್ದೇನೆ. ಅದು ನನಗೇ ಇರಲಿ. ಆದರೆ ನಾನು ಅವರಿಗೂ ಅನ್ಯಾಯ ಮಾಡುವುದಿಲ್ಲ. ಗದ್ದೆ ಮಾಡಿದಷ್ಟು ದಿನ ಅವರಿಗೆ ಭತ್ತ ಕೊಡುತ್ತೇನೆ. ಹೇಗೂ ಕಾನೂನಿನಂತೆ ಜಮೀನು ನನಗೆ ಬರುತ್ತದೆ. ಆಗ ಆ ಜಮೀನಿಗೆ ಬೆಲೆ ಕಟ್ಟಿ ಅದರ ಹಣವನ್ನು ಅವರಿಗೆ ಕೊಡುತ್ತೇನೆ ಎಂದರು. ಮುಂದೆ ಅದರಂತೆಯೇ ನಡೆದುಕೊಂಡರು. ಗಿಡ್ಡಯ್ಯ ಕೂಡಾ ಅವರಷ್ಟೇ ಬಡವರು. ಗಿಡ್ಡಯ್ಯ ಕಾನೂನಿನಂತೆ ಜಮೀನಿನ ಮಾಲಿಕರಿಗೆ ಹಣವನ್ನೇನು ಕೊಡಬೇಕಾಗಿರಲಿಲ್ಲ. ಗಿಡ್ಡಯ್ಯನವರಿಗೆ ದುಡಿಯುವ ಶಕ್ತಿಯಿತ್ತು, ಜೊತೆಗೆ ಹೃದಯ ವೈಶಾಲ್ಯವೂ ಇತ್ತು.

ಗಿಡ್ಡಯ್ಯ ತೀರಿಕೊಂಡು ಕೆಲವು ವರ್ಷಗಳಾದವು. ಅವರ ಮಗ ಹೂವಣ್ಣ ಕೃಷಿ ಮುಂದುವರೆಸಿದ್ದಾರೆ, ಹೂವಣ್ಣನವರ ಮಗ ಸರ್ಕಾರಿ ಉದ್ಯೋಗದಲ್ಲಿದ್ದಾರೆ.
ಗಣಪಯ್ಯನವರ ಮಾತು ನಿಜವಾಗುತ್ತಿದೆ. “ಎಲ್ಲರೂ ಈಗಿಂದಲೇ ಪ್ರಯತ್ನ ಪಟ್ಟರೆ ಮೊಮ್ಮಕ್ಕಳ ಕಾಲಕ್ಕೆ ಇವರು ಖಂಡಿತ ಮುಂದುವರೆಯುತ್ತಾರೆ” ಎಂದು ಅವರು ಹಲವು ಸಲ ಹೇಳುತ್ತಿದ್ದರು.
ಗಿಡ್ಡಯ್ಯನವರ ಗದ್ದೆ ಹಕ್ಕಿನ ಸಂಗತಿಗೆ ಹೋಲಿಕೆಯಾಗುವಂತ ಕೆಲವು ಸಂಗತಿಗಳು ಮುಂದೆ ಕೆಲವು ವರ್ಷಗಳ ನಂತರ ನಡೆದವು.
ಹಾರ್ಲೆ ಎಸ್ಟೇಟಿನ ಭಾಗವಾಗಿಯೇ ಹಲವು ಕಡೆಗಳಲ್ಲಿ ಗದ್ದೆಗಳು ಕೂಡಾ ಇದ್ದವು. ಆ ಗದ್ದೆಗಳನ್ನು ಕೆಲವು ಕುಟುಂಬಗಳು ಬೇಸಾಯ ಮಾಡುತ್ತಿದ್ದರು. ಅವರೆಲ್ಲ ಗದ್ದೆ ಕೆಲಸ ಇಲ್ಲದಿದ್ದಾಗ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದರು. ಆ ಗದ್ದೆಗಳಲ್ಲಿ ಕೆಲವು ರಸ್ತೆಯ ಅಂಚಿನಲ್ಲಿದ್ದರೆ ಇನ್ನು ಕೆಲವು ತೋಟಗಳ ಒಳಭಾಗಗಳಲ್ಲಿ ಇದ್ದವು.
ಭೂಸುಧಾರಣೆ ಕಾನೂನು ಬಂದಾಗ ಮಲೆನಾಡಿನ ಕಾಫಿ ವಲಯದಲ್ಲಿ ಗೇಣಿದಾರರು ತಮ್ಮ ಹಕ್ಕಿಗಾಗಿ ಅರ್ಜಿ ಹಾಕಿದ್ದು ಕಡಿಮೆಯೇ. ಕರಾವಳಿ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲವೇ ಇಲ್ಲ ಎನ್ನಬಹುದು. ಇಲ್ಲಿ ಗೇಣಿದಾರರ ಸಂಖ್ಯೆ ಕಡಿಮೆ ನಿಜ ಆದರೆ ಇದ್ದವರಿಗೂ ಬೇರೆ ಕಡೆಗಳಲ್ಲಿ ಇದ್ದಂತಹ ಗೇಣಿ ಚೀಟಿ ಅಥವಾ ಲೆವಿ ಹಾಕಿದ ರಶೀತಿಗಳು ಮುಂತಾದ ಯಾವುದೇ ದಾಖಲೆಗಳೂ ಇರುತ್ತಿರಲಿಲ್ಲ. ಮತ್ತು ಮಲೆನಾಡಿನಲ್ಲಿ ಎಲ್ಲೋ ತೋಟಗಳ ಒಳಗೆ ಇದ್ದ ಗದ್ದೆಗಳನ್ನು ಸ್ವಂತಕ್ಕೆ ಮಾಡಿಕೊಂಡು ನಂತರದ ದಿನಗಳಲ್ಲಿ ಅಲ್ಲಿ ವಾಸಿಸುವ ಧೈರ್ಯವೂ ಆ ಗೇಣಿದಾರರಿಗೆ ಇರಲಿಲ್ಲ. ಹಾಗಾಗಿ ಧಣಿಯೊಬ್ಬ ಕಣ್ಣು ಕೆಂಪು ಮಾಡಿ ನೋಡಿದರೂ ಸಾಕು ಗೇಣಿದಾರ ಜಮೀನಿಗೆ ಅರ್ಜಿ ಹಾಕುವ ಯೋಚನೆಯನ್ನೇ ಬಿಟ್ಟು ಬಿಡುತ್ತಿದ್ದ.
ಈ ಎಲ್ಲ ಕಾರಣಗಳಿಂದ ಮಲೆನಾಡಿನ ಕಾಫಿ ವಲಯದಲ್ಲಿ ಭೂಸುಧಾರಣಾ ಕಾನೂನಿನಿಂದ ಜಮೀನು ಪಡೆದವರ ಸಂಖ್ಯೆ ತೀರಾ ಕಡಿಮೆಯಾಗಿದೆ.
ಹಾರ್ಲೆಯ ಗದ್ದೆಗಳೇನೋ ಗಣಪಯ್ಯನವರ ಕಾಲದಲ್ಲೇ ಬೇಸಾಯಗಾರರು ಅರ್ಜಿ ಹಾಕಿದ್ದರೆ ಅವರಿಗೇ ಸಿಕ್ಕುತ್ತಿದ್ದವು. ಆದರೆ ಅವುಗಳಲ್ಲಿ ಹೆಚ್ಚಿನವು ಯಾವುವೂ ಒಳ್ಳೆಯ ಬೆಳೆ ಬರುವ ಗದ್ದೆಗಳಾಗಿರದೆ ಕಾಡಿನ ಅಂಚಿನಲ್ಲಿದ್ದು ಕಾಡು ಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಗದ್ದೆ ಬೇಸಾಯ ಮಾಡುತ್ತಿದ್ದವರು, ಅರ್ಜಿ ಹಾಕಬೇಕಾದ ಸಂದರ್ಭದಲ್ಲಿ ಆ ಜಮೀನಿಗೆ ಅರ್ಜಿ ಹಾಕಲೂ ಇಲ್ಲ ಮಾತ್ರವಲ್ಲ ನಂತರದ ದಿನಗಳಲ್ಲಿ ಬೇಸಾಯವನ್ನು ಕಡಿಮೆ ಮಾಡಿ ಹೆಚ್ಚಾಗಿ ತೋಟದಲ್ಲಿ ಕೂಲಿಮಾಡುತ್ತಿದ್ದರು. ಕೆಲವರ ಮಕ್ಕಳು ವಿದ್ಯೆ ಕಲಿತು ಉದ್ಯೋಗ ಮಾಡುತ್ತಿದ್ದರು. ಇನ್ನು ಕೆಲವರು ಹಾರ್ಲೆ ಸಮೂಹದಲ್ಲಿಯೇ ಉದ್ಯೋಗಿಗಳಾಗಿದ್ದರು.
ಮುಂದೆ ಹಾರ್ಲೆ ತೋಟದ ಕೆಲವು ಭಾಗಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಈ ಬೇಸಾಯಗಾರರಿಗೆ ಚಿಂತೆಯಾಯಿತು. ಕೆಲವರು ಅವರಿಗೆ “ನೀವು ಹಿಂದೆಯೇ ಜಮೀನಿಗೆ ಅರ್ಜಿ ಹಾಕಿ ಸ್ವಂತಕ್ಕೆ ಮಾಡಿಕೊಳ್ಳಬೇಕಿತ್ತು ಈಗ ಅನುಭವಿಸಿ” ಎಂದು ಹೇಳತೊಡಗಿದರು. ಆದರೆ ಯಾರೂ ಎದುರಿಗೆ ಬಂದು ಏನನ್ನೂ ಕೇಳಲಿಲ್ಲ. ಜಮೀನೆಲ್ಲವೂ ರವೀಂದ್ರನಾಥರ ಹೆಸರಿನಲ್ಲಿಯೇ ಇತ್ತು.

ಜಮೀನು ಮಾರಾಟ ಮಾಡುವ ಸಮಯ ಬಂದಾಗ ರವೀಂದ್ರನಾಥರು ಎಲ್ಲ ಬೇಸಾಯಗಾರರನ್ನು ಕರೆದು ನಾನು ತೋಟವನ್ನು ಮಾರುತ್ತಿದ್ದೇನೆ. ನಿಮಗೆ ಮುಂದೇನೋ ಎಂದು ಯೋಚನೆ ಆಗಿರಬಹುದು. ನೀವು ಗದ್ದೆಗೆ ಅರ್ಜಿ ಹಾಕಿಲ್ಲ ನಿಜ. ಕಾನೂನಿನಂತೆ ನಿಮಗೆ ಅಧಿಕಾರ ಇಲ್ಲ ಆದರೆ ಈಗಲೂ ನಾನು ನಿಮಗೆ ಎರಡು ಆಯ್ಕೆ ಕೊಡುತ್ತೇನೆ. ನಿಮಗೆ ಬೇಕಾದರೆ ಗದ್ದೆಯನ್ನು ಉಳಿಸಿಕೊಳ್ಳಬಹುದು. ಅಥವಾ ಈಗ ತೋಟದೊಂದಿಗೆ ಗದ್ದೆ ಮಾರಾಟವಾಗುತ್ತಿರುವುದರಿಂದ ಗದ್ದೆಗೂ ಒಳ್ಳೆಯ ಬೆಲೆ ಬಂದಿದೆ. ನೀವು ಬೇಸಾಯ ಮಾಡುತ್ತಿದ್ದ ಗದ್ದೆಯ ಹಣವನ್ನು ನಿಮಗೇ ಕೊಡುತ್ತೇನೆ. ಯಾವುದಕ್ಕು ಯೋಚನೆ ಮಾಡಿ ಹೇಳಿ ಎಂದರು.
ಆಗ ಎಲ್ಲರೂ ಇಲ್ಲ ನೀವು ಏನು ಕೊಡುತ್ತೀರೋ ಅದನ್ನು ಹಣದಲ್ಲೇ ಕೊಡಿ. ಯಾಕೆಂದರೆ ಇನ್ನು ಮುಂದೆ ನಮಗೂ ಗದ್ದೆ ಬೇಸಾಯ ಮಾಡಲು ಸಾಧ್ಯವಿಲ್ಲ. ಕೆಲಸ ಮಾಡಲೂ ಯುವಕರು ಮನೆಯಲ್ಲಿ ಇಲ್ಲ. ನಾವು ಬೇರೆ ಕಡೆ ಸಾಧ್ಯವಾದರೆ ಒಂದಷ್ಟು ನೆಲವನ್ನು ಕೊಂಡು ಮನೆ ಕಟ್ಟಿಕೊಳ್ಳುತ್ತೇವೆ ಎಂದರು.
ಅದರಂತೆಯೇ ರವೀಂದ್ರನಾಥರು ಅವರವರು ಬೇಸಾಯ ಮಾಡುತ್ತಿದ್ದ ಜಮೀನಿನ ವಿಸ್ತೀರ್ಣದ ಹಣವನ್ನು ಆಯಾ ಕುಟುಂಬದವರಿಗೆ ಕೊಟ್ಟರಲ್ಲದೆ, ಅದರೊಂದಿಗೆ ಮನೆ ಕಟ್ಟಿಕೊಳ್ಳಲೆಂದು ಒಂದಷ್ಟು ಹಣವನ್ನು ಸೇರಿಸಿ ಕೊಟ್ಟರು. ಈ ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೆ. ಅವರಲ್ಲಿ ಕೆಲವರು ಹಣವನ್ನು ಪಡೆದು ಮಕ್ಕಳೊಂದಿಗೆ ವಾಸಿಸಲು ನಗರ ಸೇರಿದರು. ಇನ್ನು ಕೆಲವರು ಅಲ್ಲೇ ಅಕ್ಕ ಪಕ್ಕದಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ.
ರವೀಂದ್ರನಾಥರಿಗೆ, ನನ್ನ ಎಡಪಂಥೀಯ ವಿಚಾರಗಳ ಒಲವು ಅವರಿಗೆ ತಿಳಿದಿತ್ತು. ಒಮ್ಮೆ ಯಾರೊಡನೆಯೋ ಮಾತನಾಡುತ್ತ ಅವರು ಎಡಪಂಥೀಯ ವ್ಯವಸ್ಥೆಯಲ್ಲಿ ಹಲವು ತೊಡಕುಗಳಿವೆ ನಿಜ ಆದರೆ ಎಲ್ಲಿಯವರೆಗೆ ಶೋಷಣೆ ದಬ್ಬಾಳಿಕೆಗಳಿರುತ್ತವೆಯೋ ಅಲ್ಲಿಯವರೆಗೆ ಪ್ರತಿಭಟನೆ, ಬಂಡಾಯಗಳು ಸಹಜವೇ ಆಗಿರುತ್ತದೆ ಎಂದಿದ್ದರು.
ವೈಯಕ್ತಿಕವಾಗಿ ಅವರು ಬಲಪಂಥೀಯ ಆರ್ಥಿಕತೆಯ ಸಮರ್ಥಕರೇ ಆಗಿದ್ದಾರೆ. ಆದರೆ ಅವರ ರಾಜಕೀಯ ನಿಲುವುಗಳು ಗಾಂಧೀಜಿಯ ಟ್ರಸ್ಟಿಶಿಪ್ ಸ್ವರಾಜ್ಯದ ಉದಾರವಾದದ ಹಿನ್ನೆಲೆಯದ್ದಾಗಿದೆ. ಜೊತೆಗೆ ಎಲ್ಲ ರೀತಿಯ ಕೋಮುವಾದ ಮತ್ತು ಅಸಹನೆಯ ಸಿದ್ಧಾಂತದ ವಿರೋಧಿ ನಿಲುವೂ ಆಗಿದೆ.
ಇದೇ ರೀತಿ ಒಂದು ಸಂದರ್ಭವನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದು. ಅದು ನಡೆದದ್ದು ಹಲವು ವರ್ಷಗಳ ನಂತರ ಅಂದರೆ ಕೇಂದ್ರದಲ್ಲಿ ಮನಮೋಹನ ಸಿಂಗ್ ಅವರ ಸರ್ಕಾರ ಪ್ರಥಮ ಬಾರಿಗೆ ಬಂದಾಗ. ನರಸಿಂಹರಾಯರ ಸರ್ಕಾರದಲ್ಲಿ ಪ್ರಾರಂಭವಾಗಿದ್ದ ಖಾಸಗೀಕರಣದ ಆರ್ಥಿಕ ನೀತಿಗಳು ಈಗ ಮತ್ತಷ್ಟು ಚುರುಕು ಪಡೆದಿದ್ದವು. ಒಂದು ಹಂತದಲ್ಲಿ ಸರ್ಕಾರ ವಿದೇಶೀ ಹೂಡಿಕೆಗಳ ವಿಚಾರದಲ್ಲಿ ರೂಪಾಯಿಯನ್ನು ಸಂಪೂರ್ಣ ಪರಿವರ್ತನೀಯಗೊಳಿಸಲು ತೀರ್ಮಾನಿಸಿತ್ತು. ಆ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದ ಎಡ ಪಕ್ಷಗಳು ಅದಕ್ಕೆ ತಡೆಯೊಡ್ಡಿದ್ದವು. ಹಾಗಾಗಿ ಸರ್ಕಾರ ಆ ತೀರ್ಮಾನವನ್ನು ಹಿಂದಕ್ಕೆ ಪಡೆಯಿತು. ಆ ದಿನವೇ ಸಂಜೆ ನನ್ನೊಂದಿಗೆ ಮಾತನಾಡುತ್ತ ರವೀಂದ್ರನಾಥರು Leftist saved india ಎಂದಿದ್ದರು! ನಂತರ ಮಾತನಾಡುತ್ತ ಸರ್ಕಾರದ ನಿರ್ಧಾರ ಭಾರತದ ಆರ್ಥಿಕತೆಯನ್ನು ದಿವಾಳಿಯ ಅಂಚಿಗೆ ಕೊಂಡೊಯ್ಯುತ್ತಿತ್ತು. ಈಗ ತಪ್ಪಿತು ಎಂದು ವಿವರಿಸಿದರು. ನಂತರ ಎರಡನೆಯ ಸಲ ಮನ್ ಮೋಹನ್ ಸಿಂಗ್ ಸರ್ಕಾರ ಬಂದಾಗ ಪುನಃ ಅದೇ ತಪ್ಪನ್ನು ಮಾಡಲು ಪ್ರಯತ್ನಿಸಲಿಲ್ಲ.
* ಪ್ರಸಾದ್ ರಕ್ಷಿದಿ
(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)
ಇದನ್ನೂ ಓದಿ: ಸಕಲೇಶಪುರದ ವಿಶೇಷ ಚೇತನ ಮಕ್ಕಳ ಶಾಲೆಯ ಬಗ್ಗೆ ಒಂದಿಷ್ಟು ಮಾತುಗಳು: ಪ್ರಸಾದ್ ರಕ್ಷಿದಿ